Poetry : ಅವಿತಕವಿತೆ ; ‘ದೂರದ ಬೆಟ್ಟಗಳು ನನ್ನಿಂದ ನಿನ್ನನು ಮರೆಮಾಚಿಹವು, ಹತ್ತಿರದಲ್ಲಿರುವವು ನನ್ನನು ಆವರಿಸಿಕೊಂಡಿಹವು’

|

Updated on: Oct 24, 2021 | 10:58 AM

African Poems : ‘ಬೇಟೆ-ಬೇಟ, ಆಟ-ನೋಟ-ಊಟ, ಅರ್ಚನೆ-ಆಚರಣೆ, ಹುಟ್ಟು-ಹಸೆ ಇತ್ಯಾದಿಗಳನ್ನು ತೆರೆದಿಡುವ ಪ್ರಾಗೈತಿಹಾಸ ಚಿತ್ರಗಳೇ ಲಿಪಿಯ ಹುಟ್ಟಿಗೆ ಮೂಲ ಎಂಬುದು ಸಂಜ್ಞಾವಿಜ್ಞಾನದ ನಂಬುಗೆ. ಗುಹೆಗಳ ರೇಖಾಚಿತ್ರಗಳಿಂದ ಸಂಜ್ಞೆ, ಶಬ್ದ, ಲಿಪಿ, ಭಾಷೆಗಳು ವಿಕಾಸ ಹೊಂದಿ, ಆಧುನಿಕ ಲೋಕವನು ಬಿಡದೆ ಕಾಡುವ ಮಾಯೆಯಾಗಿ ಕಾಣಿಸುವುದು ಆಫ್ರಿಕಾ ಖಂಡಕ್ಕೇ ಹೇಳಿ ಮಾಡಿಸಿದ್ದು.’ ಕೇಶವ ಮಳಗಿ

Poetry : ಅವಿತಕವಿತೆ ; ‘ದೂರದ ಬೆಟ್ಟಗಳು ನನ್ನಿಂದ ನಿನ್ನನು ಮರೆಮಾಚಿಹವು, ಹತ್ತಿರದಲ್ಲಿರುವವು ನನ್ನನು ಆವರಿಸಿಕೊಂಡಿಹವು’
Follow us on

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಹಿರಿಯ ಕಥೆಗಾರ ಕೇಶವ ಮಳಗಿ ಅವರು ಆಫ್ರಿಕಾ ಖಂಡದ ಕೆಲ ಜಾನಪದ ಪದಗಳನ್ನು ಅನುವಾದಿಸಿದ್ದು ನಿಮ್ಮ ಓದಿಗೆ. 

*

ಕನ್ನಡದ ಅತ್ಯುತ್ತಮ ಗದ್ಯ ಲೇಖಕರಲ್ಲಿ ಒಬ್ಬರಾದ ಕೇಶವ ಮಳಗಿ ಆಫ್ರಿಕನ್ ಸಂಕಥನ ‘ಗುಂಡಿಗೆಯ ಬಿಸಿರಕ್ತ’ ಪ್ರಕಟಿಸಿದ ಬೆನ್ನಲ್ಲೇ ವಿವಿಧ ಆಫ್ರಿಕನ್ (ಮುಖ್ಯವಾಗಿ ಸಹಾರಾ) ಬುಡಕಟ್ಟುಗಳ ಜನಪದ ಪದಗಳ ಅನುವಾದ ನೀಡುತ್ತಿರುವುದು ಕುತೂಹಲಕಾರಿಯಾಗಿದೆ. ಕನ್ನಡದಲ್ಲಿ ಅತ್ಯಂತ ಪ್ರಖರವಾದ ಕಥೆಗಳನ್ನು ಬರೆದಿರುವ, ಬರೆಯುತ್ತಿರುವ ಕೇಶವ, ಜಗತ್ತಿನ ವಿವಿಧ ಸಂಸ್ಕೃತಿಗಳೊಡನೆ ಮುಖಾಮುಖಿಯಾದ ಪರಿಣಾಮವೇ ಭಕ್ತಿಲೀಲೆಯ ವಿಶ್ವರೂಪವಾದ, ಮಧ್ಯಯುಗದ ಭಕ್ತಿ ಕವಿಗಳ ಕಾವ್ಯ ‘ದೈವಿಕ ಹೂವಿನ ಸುಗಂಧ’; ಕಬೀರನ ಪದಗಳ ಗುಚ್ಛ ‘ಹಂಸ ಏಕಾಂಗಿ’. ಈಗ ಇಲ್ಲಿರುವ ಏಳು ಪದಗಳು ಆತ್ಮಪ್ರೇಮಕೇಂದ್ರಿತ. ಅದರಲ್ಲಿಯೂ ಹೆಣ್ಣುಮಕ್ಕಳ ಹಾಡು. ಜಾನಪದವೆಂದರೆ ಅದು ಬಹುಪಾಲು ಹೆಣ್ಣಿನ ಅಂತರಾಳದ ಅಭಿವ್ಯಕ್ತಿಯೇ ಆಗಿದೆ. ಸಹಾರಾ ಮರುಭೂಮಿಯದು ಹಲವು ಬುಡಕಟ್ಟುಗಳ ಜನಪದ ಕಾವ್ಯವು ವಿಶ್ವದ ಎಲ್ಲಾ ಹೆಣ್ಣುಮಕ್ಕಳ ದನಿಯೇ ಆಗಿದೆ. ಸಶಕ್ತ ಕಥೆಗಾರರಾದ ಕೇಶವ ಅಷ್ಟೇ ಸತ್ವಯುತ ಭಾಷೆಯಲ್ಲಿ ಆಫ್ರಿಕನ್ ಜಾನಪದ ಕಾವ್ಯವನ್ನು ಬಸಿದು ಕೊಟ್ಟಿದ್ದಾರೆ.
ಚಂದ್ರಶೇಖರ ಆಲೂರು, ಹಿರಿಯ ಲೇಖಕರು

*

ಮಾನವ ವಿಕಾಸ ತೊಟ್ಟಿಲಿನ ಎದೆಯ ಪದಗಳು
ಈ ಕಪ್ಪು ವಿಶಾಲ ಭೌಗೋಳಿಕ ಪ್ರದೇಶವನ್ನು ಮಾನವನ ವಿಕಾಸದ ತೊಟ್ಟಿಲು ಎನ್ನುತ್ತಾರೆ. ಅಬ್ಜ ವರ್ಷಗಳ ಹಿಂದೆ ಈ ತಾವಿನಿಂದಲೇ ಮನುಷ್ಯ ಅಂಬೆಗಾಲಿಟ್ಟು, ತೊದಲು ನುಡಿ, ಒಂಟಿ ಹೆಜ್ಜೆಯ ನಡೆ ಕಲಿತು, ದಾಂಗುಡಿಯಿಡುತ್ತ ವಿಶ್ವದೆಲ್ಲೆಡೆ ಪಸರಿಸಿ, ವಿವಿಧ ಬಣ್ಣ, ರೂಪಗಳ ಧರಿಸಿ ಬದುಕುವುದನ್ನು ಕಲಿತನೆಂದು ಎಲ್ಲ ಬಗೆಯ ಶಾಸ್ತ್ರಗಳು ಹೇಳುತ್ತವೆ. ತೀರ ಇತ್ತೀಚಿನ ಡಿಎನ್‌ಎ ಅಧ್ಯಯನ ಸಂಶೋಧನಾ ಸತ್ಯಗಳೂ ಅದನ್ನೇ ಅರಹುವವು. ಹಾಗೆಂದೇ, ಮನುಷ್ಯನ ನಾಗರಿಕತೆಗೆ ಆಫ್ರಿಕ ಒಂದು ಬಹುಮೂಲ್ಯ ವಜ್ರ. ಈ ಖಂಡದ ಬದುಕು ಕಲ್ಲುಬಂಡೆ, ಮುಖವಾಡ, ಶಿಲ್ಪ, ಗುಹೆ, ಪಿರಮಿಡ್ಡು, ಹಸ್ತಪ್ರತಿ, ಉಲಿ ಹೀಗೆ ವಿವಿಧ ಪ್ರಕಾರಗಳಲ್ಲಿ, ವಿವಿಧ ಪ್ರತಿಮೆಗಳಲಿ ಒಡಮೂಡಿವೆ. ವಿಶ್ವದ ಪ್ರಾಗೈತಿಹಾಸ, ಇತಿಹಾಸ, ಆಧುನಿಕ ಚರಿತ್ರೆ, ಮಾನವಶಾಸ್ತ್ರ, ಸಮಾಜಶಾಸ್ತ್ರ, ಜಾನಪದಶಾಸ್ತ್ರಗಳ ಅಧ್ಯಯನಗಳು ಈ ಖಂಡಕ್ಕೆ ಮುಖ್ಯ ಪಾಲನ್ನು ನೀಡದೆ ಮುಂದಡಿ ಇಡವು. ವಿಶ್ವದ ಅತಿ ಹೆಚ್ಚು ಕಲ್ಲುಬಂಡೆ ಬಣ್ಣದ ಚಿತ್ರಗಳು ಸಿಗುವುದು ಇಲ್ಲಿಯೇ. ಬೇಟೆ-ಬೇಟ, ಆಟ-ನೋಟ-ಊಟ, ಅರ್ಚನೆ-ಆಚರಣೆ, ಹುಟ್ಟು-ಹಸೆ ಇತ್ಯಾದಿಗಳನು ತೆರೆದಿಡುವ ಪ್ರಾಗೈತಿಹಾಸ ಚಿತ್ರಗಳೇ ಲಿಪಿಯ ಹುಟ್ಟಿಗೆ ಮೂಲ ಎಂಬುದು ಸಂಜ್ಞಾವಿಜ್ಞಾನದ ನಂಬುಗೆ. ಹಳೆಯ ಲಿಪಿಗಳಲ್ಲೊಂದೆಂದು ಗುರುತಿಸಲಾಗುವ ಗೀಸ಼್ (ಕ್ರಿ.ಪೂ. ಐದನೆಯ ಶತಮಾನ) ಮೈದಳೆದದ್ದು ಈ ಖಂಡದಲ್ಲಿಯೇ. ಗುಹೆಗಳ ರೇಖಾಚಿತ್ರಗಳಿಂದ ಸಂಜ್ಞೆ, ಶಬ್ದ, ಲಿಪಿ, ಭಾಷೆಗಳು ವಿಕಾಸ ಹೊಂದಿ, ಆಧುನಿಕ ಲೋಕವನ್ನು ಬಿಡದೆ ಕಾಡುವ ಮಾಯೆಯಾಗಿ ಕಾಣಿಸುವುದು ಈ ಖಂಡಕ್ಕೇ ಹೇಳಿ ಮಾಡಿಸಿದ್ದು.
ಕೇಶವ ಮಳಗಿ

1.

ಪ್ರೇಮ ಹಕ್ಕಿ ರೆಕ್ಕೆಯ ಹಾಗೆ ವಿಶಾಲ
ಮೀರಿ ಎಲ್ಲ ಸರಹದ್ದು, ಸೇರುವುದು ನೀಲ

2.

ಆತನೊಂದಿಗಿನ ಸರಸ ಸಂಯೋಗ
ನನ್ನದೇ ಹಸಿವನು ಹಿಂಗಿಸಲು
ಸಿಹಿತೆನೆಯ ಕಾಳು ಕೂಡಿಸಿದಂತೆ.
ಇಡೀ ಹೊಲವ ತಿರುಗಾಡಿ
ಹೆಕ್ಕಿ ಹೆಕ್ಕಿ ಸವಿದೇ ಸವಿದರೂ
ನನ್ನ ಮನಸಿಗೆ ತಣಿವೆಂಬುದಿಲ್ಲ.

3.

ಓ ಅಳಿದು ಹೋದ ಗೆಣೆಕಾರ
ಮಕ್ಕಳು ಕಂದೀಲಿನ ದೀಪ ಹಚ್ಚುತ್ತಿದ್ದಂತೆ
ನಿನ್ನ ಗೋರಿಯ ಕಲ್ಲುಗಳಿಂದ
ಬೆಳಕು ಚಿಮ್ಮತೊಡಗುವುದು!
(ಸಹಾರಾ ಮರುಭೂಮಿಯ ‘ಬರ್ಬರ್‌’ ಜನಾಂಗದ ಜಾನಪದ ಸೊಲ್ಲು)

ಮಳಗಿಯವರ ಕೈಬರಹ

4.

ಬಾಲೆಯರ ಗುಟ್ಟಾದ ಪ್ರೇಮದ ಹಾಡು

ನೀನು ಸೊಂಟವ ಕುಣಿಸುವೆ
ನಾನೂ ನಡುವ ಕುಣಿಸುವೆ

ಎಲ್ಲರೂ ಸೊಂಟವನು ಕುಣಿಸೋಣ ಬನ್ನಿ

ನಾನು ಗೆಳೆಯನನು ಕೂಡಲು ಹೋಗುವೆ
ಜೋರು ಮಳೆಯೇ ಇರಲಿ ಹೋಗಿಯೇ ತೀರುವೆ
ಅವನು ಇರುವುದು ದೂರದಾ ಪಟ್ಟಣದಲಿ
ನಟ್ಟಿರುಳಾದರೂ ಸರಿಯೇ ಹೋಗಿಯೇ ತೀರುವೆ

ಎಲ್ಲರೂ ಸೊಂಟವನು ಕುಣಿಸೋಣ ಬನ್ನಿ

ದಾರಿಯಲಿ ಕಾಡುಪ್ರಾಣಿಗಳು ಬೆನ್ನಟ್ಟಿದರೂ ಸರಿಯೇ
ಇಷ್ಟು ರಾತ್ರಿಯಲೇಕೆ ಬಂದೆಯೇ ಖೋಡಿಯೆಂದು
ಅವನು ತಪರಾಕಿ ಹಾಕಿದರೂ ಸರಿಯೇ
ಗೆಳೆಯನನು ಕೂಡಲು ಹೋಗಿಯೇ ತೀರುವೆ

ಎಲ್ಲರೂ ಸೊಂಟವನು ಕುಣಿಸೋಣ ಬನ್ನಿ

ಒಡನಾಡಿಯ ಮನಸನು ಅರಿಯದವನು
ಲೋಕದ ಆಳವನು ತಿಳಿಯದ ಮೂಳನು

ಎಲ್ಲರೂ ಸೊಂಟವನು ಕುಣಿಸೋಣ ಬನ್ನಿ

(ತಾಂಜೇ಼ನಿಯದ ‘ಕಿಪಸಿಗೀ’ ಜನಾಂಗದ ಹಾಡು)

ಮಳಗಿಯವರ ಕೃತಿಗಳು

5.

ಪ್ರೇಮಕೆ ಗುಟ್ಟೆಂಬುದಿಲ್ಲ

ಪ್ರೀತಿಗೆ ಗುಟ್ಟು ಎಂದರೇನೆಂಬುದೇ ಗೊತ್ತಿಲ್ಲ
ಬಚ್ಚಿಟ್ಟರೆ ಬಿಚ್ಚಿಕೊಳ್ಳುವುದು ತಾನೇ ಎಲ್ಲ

ಪ್ರೇಮದಲಿ ಆಯ್ಕೆ ಎಂಬುದೇ ಇಲ್ಲ
ಪ್ರೇಮ ಮೈಯನು ಹೊಕ್ಕಾಗ
ತಾನಿನ್ನೂ ಮಾಡೇ ಇರದ ಸಂಗತಿಗಳನು
ತಾವಾಗಿಯೇ ಪ್ರೇಮಿಗಳು ತೆರೆದಿಡುವರು ಎಲ್ಲ

ಪ್ರೀತಿಗೆ ಕರುಣೆಯೆಂಬುದೇ ಇಲ್ಲ
ಮುದುಕರನೂ ಅವಮಾನಕೆ ದೂಡುವುದಲ್ಲ!
ತಾನು ಬಯಸಿದೆಡೆ ಪ್ರೀತಿ ಎಂದೂ ಮರಳುವುದಿಲ್ಲ
ಪ್ರೇಮ ಮೈದುಂಬಿದವನು
ಮೆತ್ತಗಾಗಿ ಕರಗಿಹೋಗುವನಲ್ಲ
ಪ್ರೀತಿ ತನ್ನನೊಂದನು ಬಿಟ್ಟು
ಬೇರೆಲ್ಲ ವಿಷಯಗಳ ನಿವಾಳಿಸಿ ಒಗೆವುದಲ್ಲ.

ನೀನು ಪ್ರೀತಿಗೆ ಕಿರಿಕಿರಿಯ ಮಾಡುವೆಯೋ
ಒಂದೊಮ್ಮೆ ಆವಿಯಾಗಿ ಹೋಗುವೆಯಲ್ಲ
ಪ್ರೇಮವೊಂದು ಕಾಯಿಲೆ
ವಾಸಿಯಾಗದ ಮಾರಕ ರೋಗ!

(‘ಸ್ವಾಹಿಲಿ’ ಜನಪದ ಹಾಡು)

ಮಳಗಿಯವರ ಕೃತಿಗಳು

6.

ನನ್ನೊಡತಿ ಫಾತಿಮ

ಆಕೆ ಕೊಂಕಿಸಿ ನೋಡದಿರುವಾಗಲೂ
ಆಕೆಯ ಕತ್ತು ಮನಮೋಹಕ
ಆಕೆ ಅಗಲಿಸಿ ಕುಳಿತಿರದಾಗಲೂ
ಸೊಂಟದ ನೋಟ ಬಲು ಸೊಗಸು.
ಅವಳ ಕೂದಲು ದಟ್ಟ
ಕಣ್ರೆಪ್ಪೆ ಕಪ್ಪು, ಕಂಗಳು ಬಿಳಿ
ದವಡೆ ಹಸಿರು, ಹೊಳೆವ ಹಲ್ಲು
ನಡು ಸಪೂರ, ಕೈಗಳು ಹಗೂರ

ಫಾತಿಮ ನನ್ನ ಶಾಣೆ ಪೋರಿ
ನಾನಾಕೆಯನು ಕಾಣದಿರಕ
ಕಂಗಳಲಿ ವಿಷಾದ ತುಂಬುವುದು
ಆಕೆ ಮಾತನಾಡದಿರಕ
ಕಿವಿಯಲಿ ವಿಷದ ಗಾಳಿಯಾಡುವುದು

ಫಾತಿಮ ನನ ಶಾಣೆ ಪೋರಿ!
ಬೆಳಗಿನಲಿ ಬಿಸಿಲು ಬಾಡಿಸುವುದು
ಬೈಗಿನಲಿ ಚಳಿಯು ಕೊಲ್ಲುವುದು
ನನ್ನೆದೆಯ ತುಂಬ ಮಾತುಗಳೇ ಮುತ್ತಿವೆ
ಕಣ್ಣಿಂದ ತೊಟ್ಟಿಕ್ಕುವ ಹನಿಗಳು ತುಂಬಲಿ
ಎಂದು ಮರಳಿನಲಿ ಗುಂಡಿಯನು ತೋಡಿರುವೆ.

ನೀನೇ ಆವರಿಸಿರುವೆ, ಆರೈಕೆಯನು ನಿರಾಕರಿಸುವೆ
ನಾನು ಅಸ್ವಸ್ಥ, ಚೇತರಿಸಿಕೊಳ್ಳಲು ಬಿಡದಿರುವೆ.
ಫಾತಿಮ ಎನ್ನ ಶಾಣೆ ಬಾಲೆ, ‘ಬಾ’ ಎಂದು ಒಮ್ಮೆ ಹೇಳು
ಓಡೋಡಿ ಬರುವೆನು.
‘ಬರಬೇಡ’ ಎನ್ನುವೆಯೋ
ನಾ ಹೇಗೂ ಬಂದೇ ಬರುವೆನು!

(ಸಹಾರಾ ಮರುಭೂಮಿಯ ‘ತೇಡ’ ಜನಾಂಗದ ಹಾಡು)

ಮಳಗಿಯವರ ಕೃತಿಗಳು

7.

ಬಾಲೆಯ ಬಾಳು!

ಓ ನನ್ನ ಮಾಂವ, ನನ್ನ ಜೀವದ ಒಡನಾಡಿ
ಒಂದೊಮ್ಮೆ, ನಿನ ಮ್ಯಾಗ ಮನಸಿಲ್ಲ ಅಂದಿದ್ದೆನಲ್ಲೋ!

ನೀನು ನೀಗಿಕೊಂಡಿರುವೆ ಎಂದು ಊರವರು ಹೇಳಿದರು
ಸತ್ತಾಗ ಹೂಳಲು ನನ್ನ ಗೋರಿಯಿರುವ ಗುಡ್ಡಕೆ ಓಡಿದೆ
ಕಲ್ಲುಗಳ ಪೇರಿಸಿದೆ, ನನ್ನ ಹೃದಯವನು ಹೂತಿಟ್ಟೆ.
ನನ್ನ ಮೊಲೆಗಳ ನಡುವೆ ಹುದುಗಿದ ನಿನ್ನ ಸುವಾಸನೆ
ಇಲ್ಲೀಗ ನನ್ನ ಮೂಳೆಗಳ ಹೊಕ್ಕು ಬೆಂಕಿಯಂತೆ ಉರಿಸುತಿಹುದು.

(ಸಹಾರಾ ಮರುಭೂಮಿಯ ‘ತೌರೆಕ್‌’ ಬುಡಕಟ್ಟಿನ ಪದ)

8.

ಬಾಲೆಯ ಅಳಲು!

ದೂರದ ಬೆಟ್ಟಗಳು ನನ್ನಿಂದ ನಿನ್ನನು ಮರೆಮಾಚಿಹವು
ಹತ್ತಿರದಲ್ಲಿರುವವು ನನ್ನನು ಆವರಿಸಿಕೊಂಡಿಹವು.
ನನ್ನ ಭಾರದೆದೆಯಿಂದ ಸಮೀಪದ ಬೆಟ್ಟಗಳ
ಕುಟ್ಟಿ ಮಾಡಲಿ ಎಂದೇ? ಇಲ್ಲ, ದೂರದೂರಿಗೆ
ಹಾರಿ ಹೋಗಲು ಸಿದ್ಧವಾಗಿರುವ ರೆಕ್ಕೆಯಿರುವ ಹಕ್ಕಿ ನಾನೆಂದೇ?

(‘ಷೋಹಾ’ ಜನಪದ ಸೊಲ್ಲು)

ಮಳಗಿಯವರ ಕೃತಿಗಳು

ಪರಿಚಯ : ಬೆಂಗಳೂರಿನಲ್ಲಿ ವಾಸವಾಗಿರುವ ಕೇಶವ ಮಳಗಿಯವರು ಬಳ್ಳಾರಿ ಮೂಲದವರು.  ಎಂಬತ್ತರ ದಶಕದಲ್ಲಿ ಬರೆಯಲಾರಂಭಿಸಿದ ಇವರು ಕನ್ನಡದ ಪ್ರಮುಖ ಕಥೆಗಾರರು ಮತ್ತು ಅನುವಾದಕರು. ವಿಜಯಪುರ, ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಗಳ ಭಾಷೆ, ಸಂಸ್ಕೃತಿಗಳ ಬನಿ ಅವರ ಕಥನದಲ್ಲಿ ಎದ್ದು ಕಾಣುವ ಪ್ರಮುಖ ಅಂಶವಾಗಿದೆ. ಹೊಸ ಬಗೆಯ ಅಭಿವ್ಯಕ್ತಿ ಶೈಲಿ, ವಸ್ತು ಮತ್ತು ನಿರೂಪಣೆಗಳು ಅವರ ಕಥಾನಕದ ವಿಶಿಷ್ಟಗುಣವಾಗಿದೆ. ಗುಣಾತ್ಮಕತೆ ಮತ್ತು ಸಾತತ್ಯಗಳ ದೃಷ್ಟಿಯಿಂದಲೂ ಸಮಕಾಲೀನ ಕಥೆಗಳಲ್ಲಿ ಮಳಗಿ ಅವರ ಕಥೆಗಳು ಪ್ರತ್ಯೇಕವಾಗಿ ನಿಲ್ಲುತ್ತವೆ. ಇವರು ಎರಡು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ; ಕೇಂದ್ರ ಸಂಸ್ಕೃತಿ ಇಲಾಖೆಯ ಸಿನಿಯರ್ ಫೆಲೋಶಿಪ್ ಪಡೆದಿದ್ದಾರೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಇವರ ಕೃತಿಗಳು ರಚನೆಯಾಗಿವೆ.

ಇದನ್ನೂ ಓದಿ : Poetry : ಅವಿತಕವಿತೆ ; ‘ಚಹ ಮಾಡುವುದನ್ನು ಕಲಿತರೆ ಕೈ ಸುಡುವುದಿಲ್ಲ, ಖಂಡಿತವಾಗಿಯೂ ಯಶಸ್ಸು ಕಾಣುವಿರಿ’

Published On - 10:44 am, Sun, 24 October 21