Kunnakkudi Vaidyanathan Birth Anniversary: ‘ಸರಿಯಾಗಿ ವಿಭೂತಿ ಕುಂಕುಮ ಹಚ್ಚಿಕೊಳ್ಳಲು ಕಲಿ’

|

Updated on: Mar 02, 2022 | 12:44 PM

Music : ವಯೋಲಿನ್​ ಅನ್ನು ಮುನ್ನೆಲೆಗೆ ತರಬೇಕೆಂದು ವಿದ್ವಾನರಲ್ಲಿ ಕೇಳಿಕೊಂಡಾಗ ಅವರೆಲ್ಲ ಕುಹಕವಾಡಿದರು. ಆಗಲೇ ಕುನ್ನಕ್ಕುಡಿ, ಶಾಸ್ತ್ರೀಯ ಸಂಗೀತದ ಬಗ್ಗೆ ಏನೂ ಅರಿವಿಲ್ಲದ ಜನಸಾಮಾನ್ಯರಿಗೆ ತಾನು ಹತ್ತಿರವಾಗಬೇಕೆಂದು ನಿರ್ಧರಿಸಿದರು.

Kunnakkudi Vaidyanathan Birth Anniversary: ‘ಸರಿಯಾಗಿ ವಿಭೂತಿ ಕುಂಕುಮ ಹಚ್ಚಿಕೊಳ್ಳಲು ಕಲಿ’
ವಿದ್ವಾನ್ ಕುನ್ನಕ್ಕುಡಿ ವೈದ್ಯನಾಥನ್
Follow us on

Kunnakkudi Vaidyanathan (1935-2008) : ಹದಿಮೂರು ವರ್ಷದ ಬಾಲಕ ಕುನ್ನಕ್ಕುಡಿ ವೈದ್ಯನಾಥನ್ ಒಮ್ಮೆ ಸಭಾ ಕಾರ್ಯಕ್ರಮ ಮುಗಿಸಿ ವಾಸ್ತವ್ಯದತ್ತ ತೆರಳುತ್ತಿದ್ದಾಗ ಸಾಧುವೊಬ್ಬರು ಎದುರಾದರು. ‘ಅಲ್ಲಿ ವಯೋಲಿನ್ ನುಡಿಸಿದ್ದು ನೀನೇ ತಾನೆ?’ ಎಂದರು. ಬಾಲಕ ವೈದ್ಯನಾಥನ್ ಹೌದು ಎಂದುತ್ತರಿಸಿದರು. ನಿನ್ನ ಹೆಸರೇನು ಎನ್ನುತ್ತ ಅವನ ಹಣೆಯ ಮೇಲಿನ ವಿಭೂತಿ, ಕುಂಕುವನ್ನು ಗಮನಿಸಿದರು. ತನ್ನ ಹೆಸರು ಹೇಳುತ್ತಿರುವಾಗಲೇ ಮೆಲ್ಲಗೆ ಕಪಾಳಿಗೆ ತಟ್ಟಿ, ‘ಮೊದಲು ಸರಿಯಾಗಿ ವಿಭೂತಿ ಪಟ್ಟೆ ಮತ್ತು ಕುಂಕುಮವನ್ನು ಹಚ್ಚಿಕೊಳ್ಳುವುದನ್ನು ಕಲಿ’ ಎನ್ನುತ್ತ, ಹೇಗೆನ್ನುವುದನ್ನೂ ವಿವರಿಸಿದರು. ಯಾರೊಂದಿಗೋ ಮಾತನಾಡುತ್ತ ನಿಂತ ಅಪ್ಪನ ಬಳಿ ಓಡಿ ಬಂದ ಬಾಲಕ, ನಡೆದದ್ದನ್ನೆಲ್ಲ ತಿಳಿಸಿದ. ಚಕಿತರಾದ ಅಪ್ಪ, ಅವರನ್ನು ಕಾಣಲೇಬೇಕೆಂದರು. ಅಪ್ಪ ಮಗ ಸುತ್ತೂಕಡೆ ಹುಡುಕಿದರೂ ಅವರು ಸಿಗಲೇ ಇಲ್ಲ. ಅವರ ಮುಖದ ತೇಜಸ್ಸು ಇನ್ನಿಲ್ಲದಂತೆ ಆ ಬಾಲಕನನ್ನು ಪ್ರಭಾವಿಸಿತು. ಈಗಷ್ಟೇ ಕಂಡವರು ಕಾಣುತ್ತಿಲ್ಲವೆಂದರೆ ಬಂದವರು ದೇವರು ಮುರುಗನೇ ಆಗಿರಬೇಕು ಎಂದು ಬಾಲಕ ಭಾವಿಸಿದ.

ಭಾರತೀಯ ಶಾಸ್ತ್ರೀಯ ಸಂಗೀತ ಕಲಾವಿದ, ಸಂಗೀತ ನಿರ್ದೇಶಕ ಕುನ್ನಕ್ಕುಡಿ ವೈದ್ಯನಾಥನ್ ಎಂದಾಗ ಅವರ ವಯೋಲಿನ್​ನಲ್ಲಿ ಹೊಮ್ಮುತ್ತಿದ್ದ ಚಿತ್ರಗೀತೆಗಳೊಂದಿಗೆ ಅವರ ಟ್ರೇಡ್​ ಮಾರ್ಕ್​ ವಿಭೂತಿ ಮತ್ತು ಕುಂಕುಮ ಥಟ್ ಎಂದು ಕಣ್ಮುಂದೆ ಬಂದು ನಿಲ್ಲುತ್ತದೆ. ತಂದೆ ಆರ್. ರಾಮಸ್ವಾಮಿ ಶಾಸ್ತ್ರೀಯ ಗಾಯಕರಾಗಿದ್ದರು, ಹರಿಕಥಾ ಪ್ರವೀಣರಾಗಿದ್ದರು ಮತ್ತು ಕೊಳಲು, ಜಲತರಂಗ, ವೀಣೆ ನುಡಿಸುವುದರಲ್ಲೂ ಪರಿಣತಿ ಪಡೆದವರಾಗಿದ್ದರು. ಬಹಳಷ್ಟು ಕೀರ್ತನೆಗಳನ್ನೂ ರಚಿಸಿದ್ದರು. ಹೀಗೆ ಅಪ್ಪಟ ಶಾಸ್ತ್ರೀಯ ಸಂಗೀತ ವಾತಾವರಣದಲ್ಲಿಯೇ ಬೆಳೆಯುತ್ತಿದ್ದ ಬಾಲಕ ಕುನ್ನಕ್ಕುಡಿ ವಯೋಲಿನ್​ ಅನ್ನೇ ನೆಚ್ಚಿಕೊಂಡರು.

ಎಳವೆಯಲ್ಲಿಯೇ ತಂದೆಯೊಂದಿಗೆ ಪಕ್ಕವಾದ್ಯಕ್ಕೆ ಸಹಕರಿಸತೊಡಗಿದರು. ಮುಂದೆ ವಿವಿಧ ಕಲಾವಿದರು ಸಾಥಿಗೆ ಆಹ್ವಾನಿಸಲಾರಂಭಿಸಿದರು. ಆದರೆ, ಯುವಕ ವೈದ್ಯನಾಥನ್​ಗೆ ಯಾಕೆ  ವಯೋಲಿನ್ ಪಕ್ಕವಾದ್ಯವಾಗಿಯೇ ಇರಬೇಕು? ಎನ್ನಿಸಿತು. ಇದನ್ನು ಹೇಗಾದರೂ ಮುನ್ನೆಲೆಗೆ ತರಬೇಕು ಎನ್ನುವ ವಿಚಾರ ಮೊಳೆತು ಅವಕಾಶ ಸಿಕ್ಕಾಗೆಲ್ಲ ವಿದ್ವಾನರೊಂದಿಗೆ ಈ ವಿಷಯವನ್ನು ಚರ್ಚಿಸಲಾರಂಭಿಸಿದರು. ಆದರೆ, ಯಾರೊಬ್ಬರೂ ಅವರನ್ನು ಈ ವಿಷಯದಲ್ಲಿ ಪ್ರೋತ್ಸಾಹಿಸದೆ ಕುಹಕವಾಡುತ್ತಲೇ ಬಂದರು. ಆಗಲೇ ಕುನ್ನಕ್ಕುಡಿಯವರಿಗೆ ಇದನ್ನು ಸವಾಲಾಗಿ ಸ್ವೀಕರಿಸಲೇಬೇಕು ಎಂಬ ಛಲ ಹುಟ್ಟಿದ್ದು.

ಇದನ್ನೂ ಓದಿ : Music : ನಾಕುತಂತಿಯ ಮಿಡಿತ ; ‘ರಿಯಾಝಿನಲ್ಲಿ ನಮಗೇನು ಗೊತ್ತಿಲ್ಲವೋ ಅದನ್ನು ನುಡಿಸುತ್ತೇವೆ’ ರಾಜೀವ ತಾರಾನಾಥ

ವಿದ್ವತ್ತಿನ ಕೋಟೆಯೊಳಗೆ ಬಂದಿಯಾಗುವುದಕ್ಕಿಂತ ಸಾಮಾನ್ಯರ ಮನಸ್ಸಿನಲ್ಲಿ ನೆಲೆಸುವುದೇ ಶ್ರೇಷ್ಠ ಎಂದೆನ್ನಿಸಿ ಆ ಬಗ್ಗೆ ತೀವ್ರವಾಗಿ ಯೋಚಿಸಲಾರಂಭಿಸಿದರು; ಕಲಾವಿದರು ಬದುಕುವುದೇ ಕೇಳುಗರ ಸೌಜನ್ಯದಿಂದ. ಹಾಗಿದ್ದರೆ, ಕೇಳುಗರಿಗೆ ಏನು ಬೇಕೋ ಅದನ್ನು ಕೊಡುವಂಥ ಸೃಜನಶೀಲ ಸಾಮರ್ಥ್ಯವನ್ನು ಕಲಾವಿದರು ಬೆಳೆಸಿಕೊಳ್ಳಬೇಕು ಎಂಬ ನಿಲುವನ್ನು ಗಟ್ಟಿಗೊಳಿಸಿಕೊಂಡರು. ಶಾಸ್ತ್ರೀಯ ಸಂಗೀತದ ಬಗ್ಗೆ ಏನೂ ಅರಿಯದ ಜನಸಾಮಾನ್ಯರಿಗೆ ತಾನು ಸಂಗೀತದ ಸುಖ ನೀಡಬೇಕು ಎಂದು ನಿರ್ಧರಿಸಿದರು. ಹೀಗಾಗಿ ಶಾಸ್ತ್ರೀಯ ಸಂಗೀತದೊಂದಿಗೆ ಜನಸಾಮಾನ್ಯರ ಮನಸ್ಸನ್ನು ಸೂರೆಗೊಳ್ಳುವ ಸಿನೆಮಾ ಗೀತೆಗಳನ್ನೇ ವಯೋಲಿನ್​ನಲ್ಲಿ ಆವಾಹಿಸಿಕೊಂಡು ನುಡಿಸಲಾರಂಭಿಸಿದರು. ವಯೋಲಿನ್​ಗೆ ತವಿಲ್​ನ ಲಯ, ನಾದ ಪಕ್ಕಾಗಿ ಹೊಂದುತ್ತದೆ ಎಂಬುದನ್ನು ಅವರು ಸಾಬೀತು ಪಡಸಿದ್ದಕ್ಕೆ ಸಾಕ್ಷಿ 1974ರಿಂದ 1985ರ ತನಕ ನಡೆಸಿದ 3,463 ಕಛೇರಿಗಳು.

ಇದನ್ನೂ ಓದಿ : Music : ನಾಕುತಂತಿಯ ಮಿಡಿತ ; ‘ಕೇಳುವುದನ್ನು ನಿಲ್ಲಿಸಿ ಹಾಡುವುದನ್ನು ಶುರುಮಾಡಿ’

 

Published On - 12:38 pm, Wed, 2 March 22