ಕ್ಯಾನ್ವಾಸ್ | Canvas : ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅರಕೇರಿ ನಾನು ಹುಟ್ಟಿದ ಊರು. ನಮ್ಮ ಕುಲಕಸಬು ಹೂಗಾರಿಕೆ. ಮನೆಯಲ್ಲಿ ತಂದೆ ತಾಯಿ ಮತ್ತು ನನ್ನ ತಮ್ಮ ಇಷ್ಟೇ ನಮ್ಮ ಕುಟುಂಬ. ನನ್ನ ಹೆತ್ತವರು ಊರಿಗೆಲ್ಲ ಬಿಲ್ವಪತ್ರಿ ಕೊಡುವುದರ ಜೊತೆಗೆ ವ್ಯವಸಾಯ ಮಾಡುತ್ತಿದ್ದರು. ಶುಭಕಾರ್ಯ, ಜಾತ್ರೆ, ಮದುವೆಯಿಂದ ಹಿಡಿದು ಮನುಷ್ಯನ ಅಂತಿಮಯಾತ್ರೆಗೂ ಮಾಲೆ, (ನೈಜಹೂ ಸಾಲದಾದಾಗ ಕೃತಕ ಹೂ ತಯಾರಿಕೆ) ದಂಡಿ, ಬಾಸಿಂಗದಂತಹ ಅಲಂಕಾರಿಕ ಕುಸರಿ ಕೆಲಸಗಳನ್ನು ಮಾಡುತ್ತಿದ್ದರು. ಅವರ ಈ ಕೆಲಸವನ್ನೆಲ್ಲ ನೋಡಿ ಬೆಳೆದಿದ್ದರಿಂದ ನಾನು ಈಗಲೂ ಕಲಾವಿದನಾಗುವ ಪ್ರಯತ್ನದಲ್ಲೇ ಸಾಗುತ್ತಿದ್ದೇನೆ. ಇನ್ನು ದನಕರುಗಳಿದ್ದ ಮನೆ ನಮ್ಮದು. ಚಿಕ್ಕಕರುಗಳನ್ನು ನಾವು ಓಡಾಡುವ ದಾರಿಯಲ್ಲೇ ಕಟ್ಟುತ್ತಿದ್ದರಾದ್ದರಿಂದ ಅವುಗಳ ಮೇಲೆ, ಕೆಳಗೆ ದಾಟಾಡುತ್ತಿದ್ದೆವು. ಅವುಗಳ ಹೆಂಡಿ ಬಳಿಯುವುದರಿಂದ ಹಿಡಿದು ಹಳ್ಳಕ್ಕೆ ಹೋಗಿ ಮೈತೊಳೆದು ಮೇವು ಹಾಕುವುದೆಲ್ಲ ನಮ್ಮದೇ ಕೆಲಸ. ನಮ್ಮವ್ವನ ಕಡೆಯಿಂದ ಬಿಸಿರೊಟ್ಟಿಗೆ ಉಪ್ಪು ಎಣ್ಣಿ ಸವರಿ ರೊಟ್ಟಿಮುಟ್ಟಿಗಿ ಮಾಡಿ ಕರುವಿನ ಬಾಯಿ ತೆರೆದಿಡುವುದು ಅದು ಚೆಲ್ಲಾಟವಾಡುತ್ತ ತಿನ್ನಲು ಪ್ರಯತ್ನಿಸಿದಾಗ ನಾವು ಪಡುವ ಖುಷಿ ಅಷ್ಟಿಷ್ಟಲ್ಲ.
ಶಿವು ಹೂಗಾರ, ಚಿತ್ರಕಲಾವಿದ (Shivu Hugar)
ಜೂನ್ 14, 15 ರಂದು ಸಂಜೆ 4ಗಂಟೆಗೆ ಧಾರವಾಡದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ‘ಮೂರು ತಲೆಮಾರು’ ವೈವಿಧ್ಯಮಯ ಅಭಿವ್ಯಕ್ತಿಗಳ ದೃಶ್ಯಲೋಕ ಆಯೋಜನೆಗೊಂಡಿದೆ. ಈ ಸಂದರ್ಭದಲ್ಲಿ ಕಲಾವಿದ ಶಿವು ವಿ. ಹೂಗಾರ ಬಾಲ್ಯದಲ್ಲಿ ಆವರಿಸಿಕೊಂಡ ಕಲೆಯ ‘ಸಹವಾಸ’ವನ್ನಿಲ್ಲಿ ನೆನಪಿಸಿಕೊಂಡಿದ್ದಾರೆ.
ನಮ್ಮೂರಲ್ಲಿ ಕಲ್ಮೇಶ್ವರ ದೇವಸ್ಥಾನದ ಪೂಜೆಯನ್ನು ಹೂಗಾರ ಕುಟುಂಬಗಳು ಸರದಿಯಲ್ಲಿ ಮಾಡುವ ಪದ್ಧತಿ. ನಮ್ಮ ಸರದಿ ಬಂದಾಗ ಅಪ್ಪನೊಂದಿಗೆ ನಾನೂ ಪೂಜೆಗೆ ಹೋಗುತ್ತಿದ್ದೆ. ನಾನೊಬ್ಬನೇ ಗುಡಿಗೆ ಪೂಜೆಗೆ ಹೋದಾಗ ಗರ್ಭಗುಡಿಯಲ್ಲಿ ದೀಪದಿಂದಾಗಿ ಕಪ್ಪುಹೊಗೆ ಆವರಿಸಿದ ಗೋಡೆಯ ಮೇಲೆ ದೀಪದ ಕಡ್ಡಿಯಿಂದ ಈಶ್ವರಲಿಂಗ ಹಾಗೂ ಎದುರಿರುವ ಮಲಗಿದ ನಂದಿಮೂರ್ತಿಗಳನ್ನು ಚಿತ್ರಿಸುತ್ತಿದ್ದೆ. ಅದನ್ನೇ ಶಾಲೆಗೆ ಬಂದಾದ ಮೇಲೆ ಮಾಸ್ತರ ಇಲ್ಲದಿರುವಾಗ ನಮ್ಮನಮ್ಮಲ್ಲೆ ಗುಂಪುಗಳನ್ನು ಕಟ್ಟಿಕೊಂಡು ಮತ್ತದೇ ಬಸವನ ಚಿತ್ರವನ್ನು ಪಾಟಿಯಲ್ಲಿ ರಚಿಸಿ ವಿರೋಧಿ ಗುಂಪಿನ ಮುಂದೆ ಭುಜ ಕುಣಿಸುತ್ತ ಮಜ ಪಡೆಯುತ್ತಿದ್ದೆ. ಅಭ್ಯಾಸದಲ್ಲಿ ಹಿಂದುಳಿದವರೆಲ್ಲ ನಮ್ಮ ಸಂಘದ ಸದಸ್ಯರು. ಒಬ್ಬೊಬ್ಬರಿಗೆ ಒಂದೊಂದು ಆಸಕ್ತಿ. ನನ್ನದು ಚಿತ್ರ ಮತ್ತು ಮೂರ್ತಿ ರಚಿಸುವುದು.
ಇದನ್ನೂ ಓದಿ : Art Exhibition : ‘ದಿ ಅನ್ರೂಲಿ ಸಿಂಟ್ಯಾಕ್ಸ್’ ರವಿಕುಮಾರ ಕಾಶಿಯವರ ನಗರಾನುಭವದ ಕಲಾತ್ಮಕ ಅನುಸಂಧಾನ ಇಂದಿನಿಂದ ನಿಮಗಾಗಿ
ಬಾಲ್ಯದಲ್ಲಿ ನೆಲ, ಗೋಡೆ, ಪಾಟಿ, ಪೇಪರ್ ಮೇಲೆ ಕಡ್ಡಿ, ಕಟಕ, ಇದ್ದಲಿ ಪೇಣೆ, ಪೆನ್ಸಿಲ್ ಹೀಗೆ ಏನೂ ಸಿಕ್ಕರೂ ಗೀಚುತ್ತ ಖುಷಿಪಡುತ್ತಿದ್ದೆ. ಒಂದು ದಿನ ಅಪ್ಪನೊಂದಿಗೆ ಹಠ ಮಾಡಿ ಬಡಿಗೇರ ಲಕ್ಷ್ಮಪ್ಪ ಕಾಕಾನ ಹತ್ತಿರ ಮರದ ನಂದಿ ಮಾಡಿಸಿ ಅದಕ್ಕೆ ಗಾಲಿಗಳೂ ಬೇಕು ಮತ್ತದಕ್ಕೆ ದಾರ ಕಟ್ಟಿ ಎಳೆಯಲು ಆಟವಾಡಲು ಬರುವಂತಿರಬೇಕೆಂದು ಕಾಡುತ್ತ ಕುಳಿತಿದ್ದೆ. ಅವರ ಮನೆಗೆ ಕರೆದುಕೊಂಡು ಹೋದರಾದರೂ ರೈತರ ಕೃಷಿ ಸಲಕರಣೆಗಳ ಕೆಲಸ ಮುಗಿದ ಮೇಲೆ ನನ್ನ ಪಾಳಿ. ಹೀಗಾಗಿ ಆ ಮರದ ಗೂಳಿಗಾಗಿ ಆಗಾಗ ಅಪ್ಪನಿಂದ ಏಟೂ ತಿಂದಿರುವೆ. ನನ್ನಿಂದ ಬಡಿಗೇರ ಕಾಕಾನ ಕೆಲಸಕ್ಕೆ ತೊಂದರೆ ಆಯಿತೆಂದು.
ಇದನ್ನೂ ಓದಿ : ಕ್ಯಾನ್ವಾಸ್ : ‘ಇಂದು ನಿನ್ನೆಗಿಂತ ವಾಸಿ’ ಸುರೇಖಾ ದೃಶ್ಯಕಲಾ ಪ್ರದರ್ಶನ
ನನ್ನನ್ನು ಕಲೆಯ ದಾರಿಗೆ ಎಳೆದು ತಂದವುಗಳ ಪೈಕಿ ಕ್ಯಾಲೆಂಡರ್, ಬಿಸ್ಕತ್ತು ಡಬ್ಬಿಮೇಲಿನ ರಾಮಾಂಜನೇಯಸೀತಾಲಕ್ಷ್ಮಣ, ಹಿಮಾಲಯದ ಎದೆಯಲ್ಲಿ ನಂದಿಯೊಂದಿಗೆ ನಿಂತ ಈಶ್ವರ, ಕಮಲದಲಿ ಆನೆಗಳ ರಕ್ಷಣೆಯಲ್ಲಿ ಕುಳಿತ ಲಕ್ಷ್ಮೀ, ಶಾಂತ ಹಸಿರು ಹೊದ್ದ ನಿಸರ್ಗದ ಮಧ್ಯೆ ನೀರಝರಿ, ಶ್ವೇತಕಮಲದಲ್ಲಿ ಮಯೂರದೊಂದಿಗಿರುವ ಶಾರದೆ, ಪಠ್ಯಪುಸ್ತಕಗಳಲ್ಲಿನ ಜಗಜ್ಯೋತಿ ಬಸವೇಶ್ವರ, ಗಾಂಧೀ, ಸುಭಾಷ, ಭಗತ್, ನೆಹರು, ಅಂಬೇಡ್ಕರ್, ಶಿವಾಜಿ… ಮುಂದೆ ‘ಸುಧಾ’ ‘ಮಯೂರ’ ಮತ್ತು ಇತರ ಪತ್ರಿಕೆಗಳಲ್ಲಿ ಬರುತ್ತಿದ್ದ ಚಂದ್ರನಾಥ ಆಚಾರ್ಯ, ಪ.ಸ. ಕುಮಾರ್, ಎಂ.ಎಸ್. ಮೂರ್ತಿಯಂಥ ಹಿರಿಯರು ರಚಿಸಿದ ಚಿತ್ರಗಳು. ಅಲ್ಲದೆ, ಪ್ರಾಥಮಿಕ ಶಾಲೆಯಲ್ಲಿ ನನ್ನೊಳಗಿನ ಕಲೆಯನ್ನು ಗುರುತಿಸಿದ ಎಚ್.ಬಿ. ಯಂಡಿಗೇರಿ ಸರ್. ಹೀಗೆ ಇನ್ನೂ ಅನೇಕ ಹಿರಿಕಿರಿಯ ಕಲಾವಿದರಿಂದ ದೊರೆತ ಸಾಮಿಪ್ಯ, ಮಾರ್ಗದರ್ಶನ, ಪ್ರೋತ್ಸಾಹ ಮತ್ತು ನನ್ನ ಕುಟುಂಬದ ಸಹನೆಯಿಂದಲೇ ನಾನಿಲ್ಲಿರುವೆ.
ಅಪ್ಪ ವಿ.ಎಸ್. ಹೂಗಾರ 80ರ ನಂತರ ಗೆರೆಗಳ ಒಡನಾಟವನ್ನು ಚುರುಕುಗೊಳಿಸಿಕೊಂಡ. ಅವನೆಳೆದ ಗೆರೆಗಳು ಈಗಲೂ ದೃಢವಾಗಿವೆ. ನನಗೆ ಗೂಳಿಗಳೆಂದರೆ ಬಹಳ ಇಷ್ಟ. ನನ್ನ ರೇಖೆಗಳು ಅವುಗಳೊಳಗೆ ಹೊಕ್ಕಾಡಿವೆ. ಮಗ ಕೃಷ್ಣ ನಮ್ಮಿಬ್ಬರ ಸಹವಾಸದಿಂದ ಅವನೇ ದೃಷ್ಟಿಯಲ್ಲಿ ಚಿತ್ರಿಸಿದ್ದಾನೆ.
ಪ್ರತಿಕ್ರಿಯೆಗಾಗಿ : tv9kannadadigital@gmail.com
ಗಮನಿಸಿ : ದೃಶ್ಯಕಲೆ, ಚಿತ್ರಕಲಾ ಪ್ರದರ್ಶನಕ್ಕೆ ಸಂಬಂಧಿಸಿದ ಬರಹ, ಲೇಖನ, ಸಂದರ್ಶನಗಳನ್ನು ಇಲ್ಲಿ ಪ್ರಕಟಿಸಲಾಗುವುದು. ಪ್ರದರ್ಶನ ಒಂದು ವಾರವಿರುವಾಗ ಸಂಬಂಧಿಸಿದ ವಿವರಗಳನ್ನು ಕಳುಹಿಸಿ. tv9kannadadigital@gmail.com