Theatre and Life : ಏನು ಆಟಾ ಹಚ್ಚಿಯೇನು.. ? ನಿಂದೂ ನಾಟಕ್ ಬಾಳಾ ಆಯ್ತು.. ಎನುವ ಅಣಕದ ಮಾತುಗಳನ್ನು ಎಲ್ಲರೂ ಕೇಳಿರುತ್ತೇವೆ. ನಾವೆಲ್ಲರೂ ಒಂದಿಲ್ಲ ಒಂದು ರೀತಿಯ ಆಟ ಹಚ್ಚಿ ಆಡುತ್ತಿರುತ್ತೇವೆ. ನಮಗದು ಆಟ ಅನ್ನಿಸದೆ ಇದ್ದರೂ ಇತರರ ಕಣ್ಣಿಗೆ ಹಾಗನಿಸುವದು ಆಟದ ಮಜಕೂರ. ಜಗವೇ ಆ ದೇವನಾಡಿಸುವ ನಾಟಕ ರಂಗ ಅಂದ ಮೇಲೆ ನಾವೆಲ್ಲ ನಟ ಭಯಂಕರರೆ. ಆಗದವರಿಗೆ ಸರೀಕರಿಗೆ ನೆರೆಹೊರೆಯವರಿಗೆ ನಾವು ನೀವು ನೌಟಂಕಿಗಳಾಗಿ ಕಂಡಿರುತ್ತೇವೆ. ಇನ್ನೊಬ್ಬರ ವಯ್ಯಾರ ಸೋಗಲಾಡಿತನ ಬೂಟಾಟಿಕೆ ಡಂಬಾಚಾರ ಸಂಕಟ. ಬಡಿವಾರ ನಮಗೆ ನಾಟಕದಂತೆ ಕಂಡು ಅದು ಒಂದು ರೀತಿಯ ಹೊಟ್ಟೆಯುರಿಯನ್ನೂ ಇನ್ನೊಂದು ರೀತಿಯಲ್ಲಿ ರಂಜನೆಯನ್ನೂ ನೀಡಿರುತ್ತದೆ. ಹೀಗಾಗಿ ಇನ್ನೊಬ್ಬರ ನಾಟಕ ನಮಗೆ ಇಷ್ಟವಾಗದೇ ಇದ್ದೀತೆ ? ಹೀಗಾಗಿ ನಾವುಗಳು ಅನೇಕಾನೇಕ ರೀತಿಯಿಂದ ನಾಟಕ ಪ್ರಿಯರು. ಮತ್ತು ಅಂತಹ ನಾಟಕಗಳನ್ನು ಪೋಷಿಸಿಕೊಂಡು ಬರುತ್ತಿರುವ ಕೃಪಾಪೋಷಿತ ಮಂಡಳಿಯ ಅಜೀವ ಸದಸ್ಯರುಗಳು ಆಗಿರುತ್ತೇವೆ.
ಲಿಂಗರಾಜ ಸೊಟ್ಟಪ್ಪನವರ (Lingaraj Sottappanavar)
ಇಂತಹ ಬದುಕಿನ ಪ್ರಾಸಂಗಿಕಗಳು ನಮ್ಮೊಳಗಿನ ಪಾತ್ರಧಾರಿಯನ್ನು ಪ್ರಕಟಿಸುತ್ತಲೆ ಇರುತ್ತವೆ. ಹೀಗಾಗಿ ನಾವೂ ಒಂದು ಪಾರ್ಟು ಮಾಡಬೇಕು ಎಂದು ಬಯಸುತ್ತೇವೆ. ನಾಟಕ ನೋಡಿದ ಜನರು ಮೆಚ್ಚದಿದ್ದರೂ ಸರಿ ಮಡದಿಯಾದರೂ ಮೆಚ್ಚಲಿ ಎಂಬುದು ಅಂತರಂಗದ ಹಪಾಹಪಿ. ಅದರಲ್ಲೂ ಹೀರೋ ಪಾರ್ಟು.. ಬಿಟ್ಟರೆ ಕೇಡಿ ರೋಲ್. ರಂಗದಲ್ಲಿ ಬೊಬ್ಬಿರುವಂತೆ ಹೂಂಕರಿಸುವ ಹುಲಿ ಕೇಡಿ ಪಾತ್ರಧಾರಿ ಮಾತ್ರ. ಸಾಕ್ಷಾತ್ ದುರ್ಯೋಧನ ಆಗುವ ಅಭೀಪ್ಸೆ. ಕೇಡಿ ಪಾತ್ರಧಾರಿಗೆ ರೇಪ್ ಮಾಡುವ ಅವಕಾಶವನ್ನೂ ನಾಟಕ ಒದಗಿಸಿಕೊಡುತ್ತದೆ. ಮತ್ತೆ ಅದು ಹೆಚ್ಚು ಬೈಗುಳಗಳನ್ನು ಹಾಗೆ ಚಪ್ಪಾಳೆ ಶಿಳ್ಳೆಗಳನ್ನು ಕೊಡಮಾಡುತ್ತದೆ. ರಂಗದಲ್ಲಿ ನಾವೂ ವಜ್ರಮುನಿ ಅಮರೀಷ್ ಪುರಿ ಶಕ್ತಿಕಪೂರ್ ಆಗಿ ತೋರಿಸುವ ಅವಕಾಶ. ಈ ಆಸೆಗೆ ಎಷ್ಟೋ ಜನರು ತಮ್ಮ ಕಡ್ಡಿ ಕಾಲುಗಳನ್ನು ದೊಗಳೆ ಪ್ಯಾಂಟಿನಲ್ಲಿ ಸಿಕ್ಕಿಸಿಕೊಂಡು ಕೈಯಲ್ಲಿ ಸಿಗರೇಟು ಹಿಡಿದು ಧಂ ಎಳೆದು.. ಇನ್ನೆನು ಮೈಕ್ ನಲ್ಲಿ ಬಾಯಿ ಇಟ್ಟು ಹೂ.. ಹಃಹ್ಹ.. ಎನ್ನುತ್ತ ಹೂಂಕರಿಸಬೇಕು ಅನ್ನುವಷ್ಟರಲ್ಲಿ ಹೊಗೆ ಗಂಟಲಡರಿ ಗೊರಗೊರ ಎಂದು ಗೊರವಂಕ ಆದ ಪ್ರಹಸನಗಳೂ ಜರುಗಿವೆ. ಕೇಡಿ ಪಾರ್ಟು ಎಲ್ಲರ ಮನದಿಂಗಿತವಾದರೂ ಅದೇನು ಕೆರಸಿಯೊಳಗಿನ ರೊಟ್ಟಿಯೆ..? ಆ ಪಾರ್ಟು ಕೊನೆಗೆ ಊರಿನ ಗಣ್ಯರ ಮಕ್ಕಳ ಪಾಲಾಗುವದು ಅಡುವ ಮುಂಚೆಯೆ ಆಡಲ್ಪಡುವ ನಾಟಕ. ಉಳಿದಂತೆ ಬೇಡಿಕೆ ಇರುತ್ತಿದ್ದುದು ಕುತಂತ್ರಿ ಶೆಟ್ಟಿಯ ಪಾತ್ರಕ್ಕೆ. ಮಹಾಭಾರತದ ಶಕುನಿಯನ್ನು ನಮ್ಮ ಹಳ್ಳಿಯ ನಾಟಕಗಳು ಈ ಪಾತ್ರದ ಮೂಲಕ ನೋಡುತ್ತವೆ. ಹಳ್ಳಿಯ ಹೆಂಗಸರು ಮರು ವರ್ಷ ನಾಟಕ ಹಚ್ಚುವವರೆಗೂ ಈ ಪಾತ್ರಧಾರಿ ಶಕುನಿಯನ್ನು ಉಗಿಯುತ್ತಲೆ ಇರುತ್ತಾರೆ. ಪಾಪ!
ಜನರಿಗೆ ಪ್ರಿಯವಾಗುವ ಇನ್ನೊಂದು ಪಾತ್ರವೆಂದರೆ ಅದು ಹಾಸ್ಯ.. ಕಾಮಿಡಿಯನ್ ಆಗುವದು ಸಾಮಾನ್ಯವೆ.. ಕೊಂಕು ಮಾತು ಡೊಂಕು ನಡಿಗೆ ಉಳುಕು ನಡತೆ ಕೊಳಕು ಬುದ್ಧಿ ಹುಳುಕು ಮನಸು ಈ ಎಲ್ಲದರ ಕಲಸುಮೇಲೋಗರವಾದಂತೆ ಓರೆಕೋರೆ ಚಹರೆಪಟ್ಟೆ.. ಇದು ಎಲ್ಲರ ಕಪ್ ಆಫ್ ಟೀ ಅಲ್ಲ. ಇಂತವ ಊರಿಗೊಬ್ಬ ಮಾತ್ರ ಸಿಗುತ್ತಾನೆ. ಇದಕ್ಕೆ ಪೈಪೋಟಿ ಇಲ್ಲ. ಇನ್ನುಳಿದಂತೆ ಅಪ್ಪನ ಪಾರ್ಟು. ಪ್ರತಿ ಊರಲ್ಲೂ ಖಾಯಂ ಒಬ್ಬ ಅಪ್ಪನ ಪಾತ್ರಕ್ಕೆ ಅಚ್ಚು ಹಾಕಿಸಿದಂತಹ, ಅವನಲ್ಲದೆ ಮತ್ಯಾರು ಅನ್ನುವಂತವನೊಬ್ಬ ಇದ್ದೆ ಇರುತ್ತಾನೆ. ಬಿಳಿ ಗಡ್ಡ ಬಿಟ್ಟುಕೊಂಡು ಮಾಸಲು ಬಟ್ಟೆ ತೊಟ್ಟು, ಕೋಲು ಹಿಡಿದು ನಡುಗುವ ದನಿಯ ಸದಾ ಅಳುತ್ತ ಇರುವ ಪಾತ್ರ ಯಾರಿಗೆ ಬೇಕು. ಅಳುವದು ಅಳಿಸುವದೇನು ಸಾಮಾನ್ಯ ಸಂಗತಿಯೇ ? ಹಾಗೆಯೆ ತಾಯಿಯ ಪಾತ್ರ. ಈ ಹಿಂದೆ ಸಂಗ್ಯಾ ಬಾಳ್ಯಾ ನಾಟಕದಲ್ಲಿ ಪೋರಮ್ಮ (ಪಾರಮ್ಮ)ನ ಪಾತ್ರ ಮಾಡಿದ್ದ ಹಳೆಯ ಗಂಡಸೊಬ್ಬ ಊರಲ್ಲಿಯೆ ಸಿಗುತ್ತಾನೆ.ಇಲ್ಲದಿದ್ದರೆ ಒಬ್ಬ ಹೆಣ್ಣುಗರುಳಿನ ಹೆಣ್ಣು ಚಹರೆಯ ಹೆಂಗಸಿನಂತಹ ಗಂಡನ್ನು ಹುಡುಕಬೇಕು. ಇಲ್ಲಿ ಒಂದು ಹೆಣ್ಣು ನಟಿಮಣಿ ಕರೆತರುವ ಖರ್ಚು ಉಳಿಯುತ್ತದೆ ಎಂಬ ಲೆಕ್ಕಾಚಾರವೂ ಇರುತ್ತದೆ. ನಾಟಕಕ್ಕೆ ಮೂರು ದಿನ ಮುನ್ನವೆ ರಿಹರ್ಸಲ್ ಗೆಂದು ಬರುವ ಮತ್ತೆ ನಾಟಕದ ನಂತರವೂ ಮೂರು ದಿನ ಮುಕ್ಕಾಂ ಹೂಡುವ ಈ ಹೆಣ್ಣು ಪಾತ್ರಧಾರಿಗಳೆಂಬ ಅಭಿನವ ಹೀರೋಯಿನ್ ಗಳನ್ನು ಸಲಹುವ ಸಂಭಾಳಿಸುವದೇನು ಸಾಮಾನ್ಯ ಸಂಗತಿಯಲ್ಲ. ಇಂತಹ ಕಾರ್ಯ ಕೈಂಕರ್ಯಕ ತಲೆ ಪ್ರತಿ ಊರಲ್ಲೂ ದೊಡ್ಡಸ್ತನದ ಪಡ್ಡಲಿಗೆ ಹೊರುವ ಒಂದಿಬ್ಬರೂ ಇದ್ದೆ ಇರುತ್ತಾರೆಂಬುದು ಬೇರೆ ಮಾತು.
ಇದನ್ನೂ ಓದಿ : Love : ಹಾಡಿಕೊಳ್ಳಲು ನನಗೆ ಎಂತಹ ಅದ್ಭುತ ರಾಗ ದಕ್ಕಿತ್ತು, ಈ ಲಹರಿಗೆ ಈಡಾದ ನಾನು ಯಾವ ಸೆಳವಿಗೂ ತಯಾರಾಗಿದ್ದೆ
ಈ ನಡುವೆ ಇನ್ನೊಂದು ಪಾತ್ರವಿದೆ. ಅದು ಪ್ರಮುಖವೊ ಅಪ್ರಮುಖವೋ ಆ ಜಿಜ್ಞಾಸೆ ಒತ್ತಟ್ಟಿಗಿರಲಿ. ಆ ಪಾತ್ರ ಹಳ್ಳಿಯ ನಾಟಕಗಳಲ್ಲಿ ಇರಲೇಬೇಕು. ಅದು ನಾಯಕನ ಇಲ್ಲವೆ ಕೇಡಿಯ ತಮ್ಮನ ಪಾತ್ರ. ಅವನು ಸೋಷಿಯಲಿಸಂ ಉದಯ ಕಾಲದ ಚಹರೆ. ನಾಯಕನ ಹೋರಾಟಕ್ಕೆ ಸಪೋರ್ಟಿವ್ ಆಗಿಯೋ ಕೇಡಿಯ ಕಾರ್ಯದ ವಿರುದ್ಧ ತಿರುಗಿ ನಿಲ್ಲವವನಾಗಿಯೋ ಕಾಣಸಿಗುತ್ತಾನೆ. ಅವನ ರಂಗಪ್ರವೇಶ ಅದ್ಭುತವಾಗಿರುತ್ತದೆ. ಅದೊಂದು ರೀತಿ ಮಾರ್ಕ್ಸಿಸಂ ಭಾರತವನ್ನು ಪ್ರವೇಶಿಸಿದ ಹಾಗೇ ತೋರುತ್ತದೆ.
ಠುಣು.. ಠುಣು.. ಠುಣಕ್ ಠುಣು ತಬಲಾ ನುಡಿದಂತೆ ಲಲ್ಲಲಾ ಲಾಲ.. ಲಲ್ಲಲ ಲಾಲಾ… ಎನುವ ಹರ‍್ಮೋನಿಯಂ ಅಷ್ಟು ಚಂದ ಆ ಪಾತವನ್ನು ಬೆಂಗಳೂರಿನಿದ ನಾಟಕದ ಸ್ಟೇಜ್ ಗೆ ತಂದು ನಿಲ್ಲಿಸುತ್ತದೆ. ನೀಟಾಗಿ ಇನ್ಶರ್ಟ್ ಮಾಡಿಕೊಂಡು ಎಡಗೈಯಲ್ಲಿ ಇಷ್ಟು ದಪ್ಪ ಖಾಲಿ ಸೂಟ್ ಕೇಸ್ (ಬ್ರೀಫ್ಕೇಸ್ ಅಲ್ಲ) ಬಲಗೈಯಲ್ಲಿ ಸುರುಳಿ ಸುತ್ತಿದ ರದ್ದಿ ಪೇಪರ್ (ಹಾಗೆ ಅನ್ನುವ ಹಾಗಿಲ್ಲ. ಅದು ಕಾನ್ವೋಕೇಷನ್ ಪ್ರಮಾಣಪತ್ರ!) ಹಿಡಿದು ಅವನು ಪ್ರವೇಶಿಸುತ್ತಾನೆ. ಆ ಹೊತ್ತಿಗೆ ರಂಗದಲ್ಲಿ ಊರ ದಣಿಯ ದಬ್ಬಾಳಿಕೆಯಿಂದ ಚಿಂತಾಕ್ರಾಂತರಾದ ಅಪ್ಪ ಮತ್ತು ಅಣ್ಣ. ಅವನು ಪ್ರವೇಶಿಸುತ್ತಲೆ ಸೂಟ್ಕೇಸ್ ಕೆಳಗಿಟ್ಟು ಅಪ್ಪ ಅಣ್ಣರ ಪಾದಕ್ಕೆ ನಮಸ್ಕರಿಸಬೇಕು.ಆಗ ಅಪ್ಪ ‘ಯಾವಾಗ ಬಂದೆಯಾ ಮಗನೇ’ ಎಂದು ಕೇಳುತ್ತಾನೆ. ಆಗ ಆ ಯುವಕ ಗಂಭೀರವಾಗಿ ನಾಲ್ಕು ಹೆಜ್ಜೆ ಮುಂದೆ ಬಂದು ಮುಖ ಮೇಲೆತ್ತರಸಿ ಯಾವದೋ ಒಂದು ಮೂಲೆಯತ್ತ ನೋಡುತ್ತ ರದ್ದಿಯ ಸುರುಳಿ ತೋರಿಸಿ .. ‘ಅಪ್ಪಾ ಡಿಗ್ರೀ ಮುಗಿಸಿಕೊಂಡು ಈಗ ತಾನೇ ಬೆಂಗಳೂರಿನಿಂದ ಬಂದೆ’ ಎನ್ನಬೇಕು.
ಅಷ್ಟರಲ್ಲಿ ಒಳಗಿನಿಂದ ಅವ್ವ ಖಾಲಿ ಚೊಂಬು ಹಿಡಿದು ನೀರು ತರುತ್ತಾಳೆ. ಮಗನನ್ನು ನೋಡಿ ಅವಳದೂ ಅದೇ ಪ್ರಶ್ನೇ.. ಯಾವಾಗ ಬಂದೇಯ ಮಗನೇ? ಮತ್ತೇ ಅವನು ನಾಲ್ಕು ಹೆಜ್ಜೆ ಮುಂದೆ ಹೋಗಿ ಮುಖವೆತ್ತಿ ಮೂಡಣಕ್ಕೆ ರದ್ದಿ ತೋರಿಸಿ ಗಂಟಲು ದಪ್ಪ ಮಾಡಿಕೊಂಡು ಗದ್ಗದಿತನಾಗಿ (ಅದೇತಕೋ..?) ಅವ್ವಾ.. ಬೆಂಗಳೂರಿನಿಂದ ಈಗ ತಾನೇ ಡಿಂಗ್ರೀ ಮುಗಿಸಿಕೊಂಡು ಬಂದೆ- ಮತ್ತೊಮ್ಮೆ ಹೇಳುವಷ್ಟರಲ್ಲಿ ಎಂಥಹ ಪದಪಲ್ಲಟ. ಎಷ್ಟೇ ಆದರೂ ಡಿಂಗ್ರೀ ಮುಗಿಸಿಕೊಂಡು ಬಂದವನಲ್ಲವೆ. ಈಗ ತಾನೆ ತಯಾರಿಸಿದ ಬಿಸಿಬಿಸಿ ಡಿಗ್ರೀ ಅದು. ಮತ್ತೊಮ್ಮೆ ಕೇಳಿದರೆ ಏನಾದೀತು.. ಏನಾಗಬಹುದು?! ಪರದೆ ಹಿಂದೆ ನಿಂತು ಮಾತು ತಿದ್ದುವವ.. ಶ್ಯಾಣ್ಯಾರಿದಿರಿ ಸಾಕು ಒಳಗ ನಡೀರೀ.. ಎಂದು ಉಸುರುತ್ತಾನೆ. ಚೊಂಬು ಸಮೇತ ಅವ್ವ ಮಗ ಒಳಗೆ ಹೋಗುತ್ತಾರೆ. ಆದರೇ ಆ ಡೈಲಾಗ್ ಮಾತ್ರ ಇಂದಿಗೂ ಜನಪ್ರಿಯ. ಧಾರವಾಡ ಶಿವಮೊಗ್ಗಾ ವಿವಿಗಳಲ್ಲಿ ಡಿಗ್ರೀ ದೊರೆಯುವಾಗಲೂ ನಮ್ಮ ನಾಟಕಗಳು ಇಂದಿಗೂ ಡಿಗ್ರಿಯನ್ನು ಬೆಂಗಳೂರಿನಿಂದಲೆ ತರಿಸಿಕೊಳ್ಳುತ್ತಿವೆ. ಬೆಂಗಳೂರಿನ ಡಿಂಗ್ರಿಯೇ ಡಿಗ್ರೀ. ಗೌಡಾ ಕೊಡುವ ಯುನಿವರ್ಸಿಟಿಗಳಂತೆ ನಮ್ಮ ನಾಟಕಗಳು ಎಂದೂ ಶಾಲೆ ಕಟ್ಟೆ ಹತ್ತದವರನ್ನೂ ಡಿಂಗ್ರೀ ಹೋಲ್ಡರ್ ಮಾಡಿಬಿಡುತ್ತವೆ.
ಇದನ್ನೂ ಓದಿ : Vaidehi’s Birthday: ‘ಪೂರ್ವಗ್ರಹಗಳಿಲ್ಲದೆ ನಾವು ಕಂಡ ಸತ್ಯವನ್ನು ನಿರ್ಭಯವಾಗಿ ಹೇಳಬೇಕು’ ನುಡಿಗೂ ಬೆಳಕಿದೆ
ನಾಟಕ ಆಡಿಸುವಾಗ ನಾಟಕದ ಮೇಷ್ಟ್ರ ಜಾಣ್ಮೆ ಮೆಚ್ಚುವಂಥದ್ದು. ಯಾರಾದರೂ ತಪ್ಪು ಡೈಲಾಗು ಹೇಳಿದರೋ.. ಇಲ್ಲವೆ ಮಾತು ಮರೆತರೋ.. ತನ್ನ ಹಾರ‍್ಮೋನಿಯಮ್‌ನ್ನು ಕುಂಯ್ಯ ಕುಂಯ್ಯಾ ಎನಿಸಿ ಜೊತೆ ತಬಲಾ ಸಾಥಿ ಟಕಟಣ ಟಕಠಣ ಎನಿಸಿ ಎಲ್ಲಾ ಮುಚ್ಚಿ ಹಾಕಿ ಸಗಣಿ ಸಾರಿಸಿಬಿಡುತ್ತಾರೆ. ಅಲ್ಲಿಗೆ ಪರದೆ ಸರಿದು ಮತ್ತೊಂದು ಅಂಕ ಶುರು.. ಶುರೂಕರ್. ಪಾತ್ರ ಹಂಚುವಾಗ ನಾಟಕದ ಮಾಸ್ತರ್ ಎಲ್ಲ ಕೇರಿಗೊಂದು ಪಾತ್ರ (ಎಂಥದ್ದಾದರೂ ಆಗಿರಲಿ) ಹಂಚಿಕೆಯಾಗುವಂತೆ ಮತ್ತು ಹ್ಯಾಂಡ್ಬಿಲ್ಲಿನಲ್ಲಿ ಪೋಷ್ಟರ್ನಲ್ಲಿ ಎಲ್ಲ ಜಾತಿಯ ಪ್ರಮುಖರ ಹೆಸರು ಇರುವಂತೆ ನೋಡಿಕೊಳ್ಳುತ್ತಾನೆ. ಎಲ್ಲರೂ ನಾಟಕ ನೋಡಲು ಬರಬೇಕಲ್ಲವೇ? ನಾಯಕನಿಗೆ ಇಬ್ಬರೂ ಮಿತ್ರರು. ಹಾಗೆ ಕೇಡಿಗೆ ಹಿಂಬಾಲಕರೆಂಬ ನಾಲ್ಕು ಬಾಲಾಂಗಸಿಗಳು. ಮದುವೆ ಸೀನು ಇದ್ದರೆ ಒಬ್ಬ ಶಾಸ್ತ್ರಿ, ಅವನಿಗೊಬ್ಬ ಶಿಷ್ಯ. ಅಕ್ಷತೆ ಹಾಕಲು ಐವರು ಹೆಂಗಳೆಯರು ಮತ್ತೈವರು ಗಂಡಸರು. ಒಬ್ಬ ಪೋಟೋಗ್ರಾಫರ್. ಹಲೋ ಹಲೋ ಇಲ್ನೋಡಿ ಸ್ಮೈಲ್ ಪ್ಲೀಜ್.. ಯೆಸ್ ಓಕೆ.. ಇಷ್ಟಂದರೆ ಮುಗೀತು. ಕೊನೆ ಕ್ಲಿಕ್ ಕ್ಲಿಕ್ ಅನ್ನುವದನ್ನೂ ಅವನೇ ಅಂದು ಬಿಡುತ್ತಾನೆ.
ಇಷ್ಟು ಮಾಡಲು ಸಂಜೆ ಆರಕ್ಕೆ ಬಣಕಾರನಿಗೆ ಮುಖವೊಡ್ಡಿ ಕೂತಿರುತ್ತಾನೆ ಪಾತ್ರಧಾರಿ. ಅವನ ಪಾತ್ರ ಬರುವಷ್ಟೊತ್ತಿಗೆ ಬಣ್ಣ ಬಿರಿತು ಸೆಲೆತಿರುತ್ತದೆ. ಇನ್ನೂ ಹಿಂಬಾಲಕರು ..ಆಯ್ತು ..ಸರೀ. ಹಾಗೇಯೇ ಆಗಲಿ.. ಅಣ್ಣ ನಕುಲ ಸಹದೇವರಂತೆ ನಾವಿರಲು ನೀನಗೇತರ ಚಿಂತೆ.. ಇಂತಹ ಅರ್ದ ಸೇದಿ ಬೀಸಾಕಿದ ತುಂಡು ಬೀಡಿಯಂತಹ ಡೈಲಾಗುಗಳೆ ಅವರ ಪುಣ್ಯಪ್ರಾಪ್ತಿ. ಯಾರಾದರೂ ನಾಟಕದಾಗ ಎಷ್ಟು ಮಾತು ಅದಾವೊ .. ಎಂದು ಕೇಳಿದರೆ ಕಣ್ಮುಚ್ಚಿ ಹತ್ತು ನಿಮಿಷ ಎಣಿಸಿ ನಾಲ್ಕು ಮಾತು ಅದಾವು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.ಮತ್ತೆ ಇವರು ನಾಟಕದ ಎಲ್ಲ ಸನ್ನಿವೇಷದಲ್ಲೂ ಇರುತ್ತಾರೆ. ಹಿಂಬಾಲಕರು ಎಂಬುದಷ್ಟೇ ಹಿನ್ನಡೆ. ಇಂತಹ ಪಾತ್ರಗಳನ್ನು ನಮ್ಮ ಅಳಿಯ ಪಾತ್ರ ಮಾಡ್ಯಾನ ಅಂತಾ ನೋಡಲೆಂದು ಬರುವ ಬೀಗರ ಪಡಿಪಾಟೀಲು ಹೇಗಿರಬೇಕು ನೀವೇ ಊಹಿಸಿಕೊಳ್ಳಿ.
ಇದನ್ನೂ ಓದಿ : Theatre: ಅಂಕಪರದೆ; ನಾಳೆ ರಂಗಶಂಕರದಲ್ಲಿ ‘ಇತಿ ನಿನ್ನ ಅಮೃತಾ’ ಬರುತ್ತೀರಲ್ಲ?
ಇನ್ನು ನಾಟಕಕೊಬ್ಬ ಸೂತ್ರಧಾರ ಬೇಕು.. ಪಾತ್ರ ಪರಿಚಯ ಮಾಡಲೊಬ್ಬ. ರಂಗದಲ್ಲಿ ಬಿದ್ದ ವಸ್ತುಗಳನ್ನು ಎತ್ತಿಡಲು.. ಟೇಬಲ್ಲು ಕುರ್ಚಿ ಅದಲು ಬದಲು ಮಾಡಲು.. ಹೀಗೆ ಅನೇಕ ಅನಧಿಕೃತ ಪಾತ್ರಗಳು ಹಲವಾರು. ಆಗಾಗ ಆಯರ ಮಾಡಲೆಂದು ನಡುನಡುವೆ ಎದ್ದು ಬರುವ ಅನೇಕ ಅಪಾತ್ರರು. ಮೈಕು ಸರಿ ಮಾಡುವವನದ್ದೊಂದು ಅಕಳಂಕ ಪಾತ್ರ. ಅಂಕಪರದೆ ಎಳೆಯುವವನೂ ಮುಖ ತೋರಿಸಿಯೇ ಹೋಗುತ್ತಾನೆ. ನಾಟಕ ಆಗುವಲ್ಲಿ ತಮ್ಮದೂ ಒಂದು ಪಾತ್ರವಿದೆ ಎಂಬುದನ್ನು ಸಾರಲು ಆಗಾಗ್ಗೆ ರಂಗವನ್ನು ಅತಿಕ್ರಮಿಸುವ ಅನೇಕಾನೇಕರು. ನಾಟಕವೆಂಬ ಆಡುಂಬೊಲದಲ್ಲಿ ಎಲ್ಲ ಅಕ್ರಮಗಳೂ ಸಕ್ರಮವೇ.
ಇನ್ನು ನಾಟಕದ ಪ್ರಚಾರ ಮಾಡಲು ಒಬ್ಬ. ಲೌಡ್ ಸ್ಪೀಕರ್ ಮೈಕು ಹಿಡಿದು, ಪ್ರಿಯ ಕಲಾಭಿಮಾನಿ ಕಲಾಪೋಷಕರೇ ಕಲಾ ಬಂಧುಗಳೆ ..ಮಾನ್ಯರೇ ಮಹನೀಯರೆ ಬಂಧುಗಳೆ ಭಗಿನಿಯರೇ.. ಅಣ್ಣತಮ್ಮಂದಿರೆ ಅಕ್ಕತಂಗಿಯರೇ.. ಮಾವ ಕಾಕಾ ಚಿಗವ್ವಗಳೆ. ನಿಮ್ಮೂರಿನ ಬಸವೇಶ್ವರ ಯುವ ನಾಟ್ಯ ಸಂಘ ಇವರ ಪ್ರಾಯೋಜಿತ ಸುಂದರ ಸಾಮಾಜಿಕ ಕೌಟುಂಬಿಕ ನಾಟಕ.. ಕೆರಳಿದ ಕರೀ ಕಾಳಿಂಗ ಸರ್ಪ. ಇಂದೇ ನೋಡಿ,ಇವ್ವತ್ತೇ ನೋಡಿ.. ನೋಡಲು ಮರೆಯದಿರಿ, ಮ್ಮರೆತ್ಥೂ.. ರ‍್ರೂಗ್ಗದೀ..ರಿ ರ‍್ರೇ..ಥೂ ನರ‍್ರಾರ‍್ರಾಗದಿರಿ.. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುವ.. ಮಗದೊಮ್ಮೆ ನೋಡಬೇಕೆನಿಸುವ.. ಮತ್ತೆ ಮತ್ತೆ ನೋಡಬೇಕೆನಿಸುವ ಸುಂದರ ಸಾಮಾಜಿಕ ಕೌಟುಂಬಿಕ ರೌದ್ರಮಯ ನಾಟಕ! – ಹೀಗೆ ಅನೌನ್ಸ್ ಮಾಡುವವ ಸುತ್ತ ಊರುಗಳಲ್ಲಿ ಒಬ್ಬ ಇದ್ದೇ ಇರುತ್ತಾನೆ. ಅವನ ಅನೌನ್ಸ್ಮೆಂಟಿಗೆ ಮಕಾಡೆ ಬಿದ್ದು ಹೋದ ಅನೇಕ ಲವ್ ಡವ್ ಪ್ರಸಂಗಗಳು ಆಗಿ ಹೋಗಿವೆ. ನಾಟಕ ನಾಟಕದ ತಿರುಳು ಮರೆತುಹೋದರು.. ಈ ಅನೌನ್ಸಮೆಂಟು ಮಾತ್ರ ಸದಾ ರಿಂಗಣಿಸುತ್ತಿತ್ತು. ಇದು ಎಂದೂ ಮರೆಯದ ಪಾತ್ರ. ಹೀಗೆ ಪಾತ್ರಕ್ಕಿಂತ ಪಾತ್ರವಲ್ಲದ ಪಾತ್ರಗಳೆ ಅಧಿಕ. ಹಾಗಂತ ಅವರನ್ನು ಅಪಾತ್ರರು ಎನ್ನಲಾದೀತೆ? ಹೀಗೆ ನಾಟಕ ಎಂಬುದು ತನಗೆ ಬೇಕಾದಂತೆ ಬೇಕಾದಷ್ಟು ಪಾತ್ರಗಳನ್ನು ಸೃಷ್ಟಿಸಿಕೊಳ್ಳಬಲ್ಲ ಗಾವಿಲ ಮಹಾಭಾರತವೇ ಸೈ.
ಈ ವರ್ಷ ಜಾತ್ರೆಗೆ ನಾಟಕ ಹಚ್ಚೋಣ.. ಎಂಬ ಚರ್ಚೆಯನ್ನು ಯಾವನೋ ಅಂದಕಾಲೀನ ಪಾರ್ಟು ಮಾಡಿದವ ಹುಟ್ಟುಹಾಕುತ್ತಾನೆ. ಅದು ಹುತ್ತದಂತೆ ಬೆಳೆದು ನಿಲ್ಲುತ್ತದೆ. ಪಂಚಾಯತಿ ಚುನಾವಣೆ ಇನ್ನೂ ವರ್ಷ ಇರುವಾಗಲೆ ಉಮೇದುವಾರರು ಹುಟ್ಟಿಕೊಳ್ಳುವಂತೆ ಪಾರ್ಟು ಮಾಡಬೇಕೆನ್ನುವವರು ಹುಟ್ಟಿಕೊಳ್ಳುತ್ತಾರೆ. ಈಗ ಹಳ್ಳಿಗಳಲ್ಲಿ ನಾಟಕಗಳಿಲ್ಲ. ಪಂಚಾಯತಿ ಇದೆ. ರಂಗಪ್ರವೇಶದ ಬದಲಿಗೆ ಪಂಚಾಯತಿ ಪ್ರವೇಶ.ಅದೇನು ಸಾಮಾನ್ಯ ನಾಟಕವೇ?
ಇದನ್ನೂ ಓದಿ : Theatre: ಅಂಕಪರದೆ; ವೈಚಾರಿಕನು ಭಾವುಕನೊಳಗೆ, ಭಾವುಕನು ವೈಚಾರಿಕನೊಳಗೆ ಕುಳಿತು ತಳಮಳಿಸುವ ಹೊತ್ತಿನಲ್ಲಿ
ಜಾತ್ರೆಗೆ ಊರೂರುಗಳಿಂದ ಅಳಿಯ ಆಗುವವನು ಪಾರ್ಟು ಮಾಡಿದ್ದಾನೆಂದು ನೋಡಲು ಬೀಗರು ಬರುತ್ತಾರೆ. ತನ್ನವನಾಗುವವನ ಶೋಧ ಪರಿಶೋಧದಲ್ಲಿರುವ ಸುಕುಮಾರಿಯರು ನಾಟಕ ನೋಡಿ ಮಾ(ರಿ)ರು ಹೋಗಲು ಬರುತ್ತಾರೆ. ಅದೇ ಊರಿನ ಯಾವಳೋ ಲಚ್ಚೀ ರಾಧೀ ರುಕ್ಕೂ ಸಕ್ಕೂ .. ನಮ್ಹುಡ್ಗ ಕೇಡಿ ಪಾರ್ಟು ಮಾಡ್ಯಾನ.. ಹೆಗಲಮ್ಯಾಲ ಪಾರಿವಾಳ ಕೂಡಿಸ್ಕೊಂಡು ಕುದುರಿ ಮ್ಯಾಲ ರ‍್ತಾನಂತ.. ಎಂದು ಹಮ್ಮಿನಿಂದ ಮಾತನಾಡುತ್ತಿರುತ್ತಾರೆ. ಉಬ್ಬುವ ಹರೆಯಕ್ಕೆ ಹಬ್ಬ ಮಾಡಲು ಇಷ್ಟು ಸಾಕಲ್ಲವೆ. ಇನ್ನೂ ನಾಟಕದ ಪೋಸ್ಟರ್ಗಳನ್ನು ಬೀಡಾ ಅಂಗಡಿ ಚಹಾ ಅಂಗಡಿ ಸಲೂನ್ ಹಾಗೂ ಬಸ್ಸಿನ ಹಿಂಬಾಗ ಅಂಟಿಸುತ್ತಿದ್ದರು. ನಾವೂ ಪೋಷ್ಟರ್‌ನ್ನು ಕಾಡಿ ಬೇಡಿ ತೆಗೆದುಕೊಂಡು ಬಂದು ಮನೆಯ ಒಳಗೆ ಅಂಟಿಸಿಕೊಳ್ಳುತ್ತಿದ್ದೆವು.ಸುಸ್ವಾಗತ ಕೋರುವ ಮಾಲಾಶ್ರೀ, ಸುಹಾಸಿನಿಯರ ಕಲರ ಪೋಸ್ಟರ್ ನಂತೆ ಅದನ್ನು ಮನೆ ಜತನವಾಗಿ ಮುಂದಿನ ನಾಟಕದ ಪೋಸ್ಟರ್ ಬರುವವರೆಗೆ ಕಾದಿರಿಸಿಕೊಳ್ಳುತ್ತಿತ್ತು.ಅದರಲ್ಲಿನ ಒಂದು ಅಕ್ಷರ ಬಿಡದಂತೆ ನಿತ್ಯವೂ ಓದುತ್ತಿದ್ದೇವು.ಅದರಲ್ಲಿ ನಮ್ಮ ಕೇರಿಯ ಹಿರಿಯರ ಹೆಸರು ಕಂಡು ಪುಳಕಗೊಳ್ಳುತ್ತಿದ್ದೆವು. ಪೋಸ್ಟರ್‌ನ ಕೊನೆಯಲ್ಲಿನ ವಿಶೇಷ ಸೂಚನೆ : ಧಾಂದಲೆ ವಗೈರೆ ಮಾಡಿದವರನ್ನು ಪೊಲೀಸರ ತಾಬಾ ಕೊಡಲಾಗುವದು ಎಂಬುದನ್ನು ಎಷ್ಟು ಬಾರಿ ಓದಿದರು ಮತ್ತೆ ಓದಬೇಕೆನಿಸುತ್ತಿತ್ತು.ಅದೊಂಥರ ಪುಕ್ಕಟೆ ಸಿಗುವ ನಿಂಬೆಹುಳಿ ಪೆಪ್ಪರ್‌ಮೆಂಟು ಆಗಿತ್ತು. ಬಾಲ್ಯದಲ್ಲಿ ಅಷ್ಟು ಖುಷಿ ಕೊಟ್ಟ ಈ ಧಾಂದಲೆ ವಗೈರೆಗಳಿಗೆ ನಮೋನಮಃ.
ನಾಟಕದ ಆಯ್ಕೆ ಅದರ ವಸ್ತುವಿಗಿಂತ ಹೆಚ್ಚಾಗಿ ಅದರ ಹೆಸರಿನಿಂದಲೆ ಆಯ್ಕೆಯಾಗುತ್ತಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ತರಗಿ ಕಂಪನಿಯೆ ನಮ್ಮ ಪಾಲಿಗೆ ವಜ್ರೇಶ್ವರಿ ಸಿನಿ ಕಂಬೈನ್ಸ್. ಧುತ್ತರಗಿ ಮಾಸ್ತರೇ ಪುಟ್ಟಣ್ಣ ಕಣಗಾಲ್. ನಾಟಕದ ದೊಡ್ಡ ಪೋಸ್ಟರ್‌ನ ನಾಟಕದ ಹೆಸರಿನ ಮೇಲೆ ‘ಧುತ್ತರಗಿ ವಿರಚಿತ’ ಎಂದಿದ್ದರೆ ಮುಗಿಯಿತು.
ಹೀಗೆ ಪಾರ್ಟುದಾರರಿಗೆ ಧುತ್ತರಗಿ ಮಾಸ್ತರ್ ನಾಟಕಗಳೇ ಆಗಬೇಕು. ಇಲ್ಲದಿದ್ದರೆ ಹೆಸರಿನಲ್ಲಿ ಸರ್ಪ.. ದರ್ಪ.. ಘಟಸರ್ಪ ಸವಾಲು.. ಸೇಡು .. ಕಿಡಿ.. ಇವು ಟೈಟಲುಗಳಾದರೆ ಮಾತ್ರ ಅದು ನಾಟಕ. ಟೈಟಲ್ ಫೈಸಲಾ ಆದ ನಂತರ ಶುರುವಾಗುವುದೆ ಹೆಣ್ಣಿನ ಚಿಂತೆ. ಈ ಚಿಂತೆ ತೀರಿದರೆ ಅರ್ಧ ನಾಟಕ ಮುಗಿದಂತೆಯೆ. ಈ ಹೆಣ್ಣುಮಕ್ಕಳ ಪಾತ್ರಧಾರಿಗಳನ್ನು ಕೊಡಲು ಊರಿನ ಕೆಲ ಪ್ರಮುಖರು ಮುಂದಾಗುತ್ತಿದ್ದರು. ಆ ಹೆಣ್ಣುಮಕ್ಕಳ ಖರ್ಚು ವೆಚ್ಚ ಅವರ ಮೆಂಟೇನನ್ಸ್ ಅವರ ಸುಪರ್ದಿಗೆ. ಅವರನ್ನು ಎಲ್ಲ ರೀತಿಯಿಂದ ನೋಡಿಕೊಳ್ಳಬೇಕಾದ್ದು ಅವರ ಹೊಣೆಗಾರಿಕೆ. ಅದನ್ನು ಎದೆಗಾರಿಕೆ ಅನ್ನಲೂಬಹುದು. ನಾಟಕಕ್ಕೆ ಸೇರಿದ ಹೆಣ್ಣುಮಕ್ಕಳನ್ನು ಸಂಭಾಳಿಸುವದು ಅಂತಿಂಥವರ ಕುವ್ವತ್ತೇ?
ನಾಟಕದ ಮುನ್ನವೇ ಮೂರು ದಿನ ಮುಂಚೆ ತಾಲೀಮಿಗೆಂದು ಬಂದು ನಾಟಕ ಮುಗಿದು ನಂತರವೂ ಮೂರು ವಾರ ಠಿಕಾಣಿ ಹೂಡಿ ಮರಳಿ ಗೂಡಿಗೆ ಹೋಗುವ ಈ ಹೆಣ್ಣುಗಳನ್ನು ಹೀಗೆ ಸಂಭಾಳಿಸುತ್ತ ಸಂಭಾಳಿಸುತ್ತ ಸೆರಗು ಚುಂಗಿನಾಸರೆ ಹಿಡಿದು ಸ್ವರ್ಗದ ಬಾಗಿಲು ತಟ್ಟಿದವರೆ ಅಧಿಕ. ಇದರಿಂದ ಹೊಲ ಮನೆ ಮಾರಿ ದಿವಾಳಿ ಕಂಪನಿ ಆದ ಅನೇಕರು ಹಳ್ಳಿಗಳಲ್ಲಿ ಕಾಣಸಿಗುತ್ತಾರೆ. ಈ ಹೆಣ್ಣುಗಳೊ ಹಾವೇರಿಯ ಶಿವಾಜಿ ನಗರದವಳೋ ಹುಬ್ಬಳ್ಳಿಯ ಗಿರಣಿ ಚಾಳದವಳೋ ಆಗಿದ್ದರೂ ಪೋಸ್ಟರ್ನಲ್ಲಿ ‘ಮಾಲಾಶ್ರೀ ಡಾವಣಗೆರೆ’ ‘ವೈಜಯಂತಿಮಾಲಾ ಬೆಂಗಳೂರು’ ಎಂದೂ ಮತ್ತೆ ಕೆಲವರು ಜ್ಯೂ. ಸುಧಾರಾಣಿ, ಜ್ಯೂ.ಮಾಲಾಶ್ರೀ ಎಂದು ಬರೆಸಿಕೊಳ್ಳುತ್ತಿದ್ದರು. ಮತ್ತೆ ತಮ್ಮ ಹೆಸರಿನ ಕೆಳಗೆ ಸಿನೇಮಾ ನಟಿ ಎಂದೂ ಹಾಕಿಸಿಕೊಳ್ಳುವದು ವಾಡಿಕೆ. ಯಾವ ಸಿನೇಮಾ ಎಂಥ ಪಾತ್ರ ಎಂಬುದು ಬೇರೆ ಮಾತು. ಹೀಗೆ ಹೆಣ್ಣಿನ ಖರ್ಚು ನೋಡಿಕೊಳ್ಳುವವರು ನಾಟಕದ ಮ್ಯಾನೇಜರ್.. ಮಾಲೀಕರು ನಿರ್ದೇಶಕರು ಎಂದು ಪೋಟೋ ಸಮೇತ ಹಾಕಿಸಿಕೊಳ್ಳುವ ಸೌ(ದೌ)ಭಾಗ್ಯಕ್ಕೆ ಈಡಾಗುತ್ತಿದ್ದರು. ಇಂತಹ ಕಲಾಪೋಷಣೆಯ ಕಾರಣಕ್ಕಾಗಿಯೆ ಇವರು ಇನ್ನಷ್ಟು ಗಣ್ಯರು ಎನಿಸಿಕೊಳ್ಳುತ್ತಿದ್ದರು. ಅವರ ಮಡದಿಯವರು ಈ ಕುರಿತು ಓರಗೆಯವರ ಹತ್ತಿರ ಹೆಮ್ಮೆಪಟ್ಟುಕೊಂಡಿದ್ದುಂಟು.
ಇದನ್ನೂ ಓದಿ : Theatre: ಅಂಕಪರದೆ: ‘ನಡುರಾತ್ರಿಯ ಪುಳಕ’ ನೋಡಲು ಜೂನ್ 1ಕ್ಕೆ ರಂಗಶಂಕರಕ್ಕೆ ಬನ್ನಿ
ಈ ಹೆಣ್ಣುಮಕ್ಕಳು ನಾಟಕದ ಮಾಸ್ತರ್ ರನ್ನು ಅಪ್ಪಾಜೀ ಎಂದು ಸಂಬೋಧಿಸುತ್ತಿದ್ದುದು. ಅವನ ಪಕ್ಕ ತೊಡೆಗೆ ತೊಡೆ ಹಚ್ಚಿಕೊಂಡು ಕೂಡುತ್ತಿದ್ದುದು, ನಾವು ಅವರನ್ನು ದೇವಲೋಕದ ಪಾರಿಜಾತದಂತೆ ನೋಡುತಿದ್ದರೆ ಮಾಸ್ತರ್ ಅವರನ್ನು ತಾಲೀಮು ಸಂದರ್ಭದಲ್ಲಿ ಮಾತು ನಟನೆ ತಿದ್ದಲು ಕತ್ತೆ.. ರಂಡೆ ಮುಂಡೆ ಎಂದು ಬಯ್ಯುವದು ಅವರು ಸ್ಸಾರೀ ಅಪ್ಪಾಜೀ.. ಎನ್ನುವುದು ನಾವುಗಳು ಬಾಯಿ ತೆರೆದು ನೋಡುವ ಅಚ್ಚರಿಗಳಾಗಿದ್ದವು. ಮಾಸ್ತರ್ ನಮಗೆ ಒಂದು ರಿಂಗ್ ಮಾಸ್ಟರ್ ನಂತೆ ಕಂಡು ಅವನ ಬಗ್ಗೆ ಭಯ ಗೌರವ ಉಂಟಾಗುತಿದ್ದವು. ಒಂದು ರೀತಿಯ ಕನ್ನಡ ಶಾಲೆಯ ಮಾಸ್ತರ್ ರಂತೆ ಅವನೂ ತೋರುತ್ತಿದ್ದ. ಅವನನ್ನು ಕಂಡರೆ ಗೋಲಿ ಆಡುವ ನಾವು ಬೈದಾನೂ ಎಂದು ಓಡಿ ಹೋಗುತಿದ್ದೆವು. ಹೋಟೆಲಿಗೆ ಬಂದರೆ ಸಣ್ಣವರು ಹೊರಗೆ ಹೋಗುತಿದ್ದರು. ದಾರಿಯಲಿ ಕಂಡರೆ ಉಳಿದವರು ಕೈಮುಗಿಯುತಿದ್ದರು. ಊರಲ್ಲಿ ಜಗಳ ಆದರೆ ಪಂಚಾಯತಿ ಮಾಡಲು ಕರೆಯುತ್ತಿದ್ದರು. ಇನ್ನೂ ನಾಟಕದಲ್ಲಿ ಪಾತ್ರ ಮಾಡಿದ ಅನೇಕರು ಅವರನ್ನು ಅಜೀವಪರ್ಯಂತ ಮೇಷ್ಟ್ರ ಥರವೇ ಕಾಣುತ್ತಿದ್ದರು.
ಈ ಮೇಷ್ಟ್ರು ನಾಟಕದ ಪೋಸ್ಟರ್ ನಲ್ಲಿ ದೊಡ್ಡದಾಗಿ ಹಾರ್ಮೋನಿಯಂ ಸಮೇತ ಕಾಣಿಸಿಕೊಳ್ಳುತ್ತಿದ್ದರು. ಅವರು ಸಾವಿರಾರು ನಾಟಕವಾಡಿಸಿದವರೆಂದು, ಸುತ್ತ ಹತ್ತು ಊರುಗಳಲ್ಲಿ ಪ್ರಸಿದ್ಧರೆಂದು, ಹಿಂದೊಮ್ಮೆ ಸಿನೆಮಾ ನಟಿಯೊಬ್ಬಳು ಅವರನ್ನು ಮದುವೆಯಾಗುವಂತೆ ದುಂಬಾಲು ಬಿದ್ದಿದ್ದಳೆಂದು, ಒಂದೊಮ್ಮೆ ಅವರಿಗೆ ಸಿನೇಮಾ ನಿರ್ದೇಶಿಸಲು ಅವಕಾಶ ಬಂದಿತ್ತೆಂದು. ಅದನ್ನವರು ದರ್ಪದಿಂದ ನಿರಾಕರಿಸಿದರೆಂದು, ಅದವರ ನಾಟಕದ ಮೇಲಿನ ಆತ್ಮಸಮರ್ಪಣೆ ಎಂದು.. ಜನರು ಮಾತನಾಡಿಕೊಳ್ಳುತ್ತಿದ್ದರು.
ಬರುಬರುತ್ತ ನಾಟಕಗಳು ಕಡಿಮೆಯಾದವು. ಹೊಸ ಕಾಲದ ಹುಡುಗರು ಅವರಿಗೆ ಅಂಜದಿರುವದನು ಕಂಡು ಅವರು ಕರುಬುತಿದ್ದರು. ಮೈಲಾರ ಜಾತ್ರೆಗೆ, ಬನಶಂಕರಿ ಜಾತ್ರೆಗೆ ನಾಟಕಗಳನ್ನು ಆಡಿಸಲು ನನಗೆ ಈಗ ಕರೆ ಬರುತ್ತಿವೆ ಎಂದು ಅವರು ಹೇಳಿಕೊಂಡು ತಿರುಗತೊಡಗಿದ್ದರು. ತಮ್ಮ ಕಳೆದುಹೋದ ಚಾರ್ಮು ಪುನರ್ ಸ್ಥಾಪಿಸಲು ಅವರು ಹೆಣಗಾಡುತ್ತಿದ್ದ ಪರಿ ಪ್ರಹಸನದಂತೆ ಕಾಣುತ್ತಿತ್ತು. ಕೆರಳಿದ ಘಟಸರ್ಪ.. ಸಿಡಿದೆದ್ದ ಶಿವನಾಗ.. ಸಿಂಧೂರ ಲಕ್ಷ್ಮಣ, ದುಡ್ಡಿನ ದರ್ಪ, ರಕ್ತ ಸಿಂಧೂರ, ಗರ್ಜಿಸಿದ ಗಜವೀರ, ಗರುಡ ಮರ್ದನ, ಸಂಪತ್ತಿಗೆ ಸವಾಲ್, ಬಡವನ ಸಿಟ್ಟು ಗೌಡನ ಸೊಕ್ಕು.. ಇಂತಹ ನಾಟಕಗಳನ್ನು ಆಡಿಸಿದ್ದ ಮಾಸ್ತರ್ ಈಗ ಬರಿಗೈ ಆಗಿದ್ದರು. ಈಗಿನವರು ಹೆಣ್ಣಿಗೆ ಹಟ ಗಂಡಿಗೆ ಚಟ, ತಂಗಿ ಸೂಪರ್ ಅಕ್ಕ ಪಾಪರ್, ಎಂಬಂಥ ಟೈಟಲ್ ಹಿಡಿದು ಬರುತ್ತಿದ್ದರು. ಖೇತ್ ಗಯೀಲ್ ಬಾಬಾ ಬಾಜಾರ್ ಗಯೀಲ್ ಮಾ.. ಕೋಯೀ ನಹೀ ಘರ್ ಮೇ ತೂ ಆಜಾ ಲಮಾ..’ ಇಂತಹ ಹಾಡುಗಳನ್ನು ಬಯಸುತ್ತಿದ್ದರು. ಅಂತವರನ್ನು ಗದರಿಸಿ ಕಳುಹಿಸುತಿದ್ದ ಮಾಸ್ತರು ಅವರು ಕಣ್ಮರೆಯಾಗುವವರೆಗೂ ಅನುಕಂಪದಿಂದ ನೋಡುತಿದ್ದರು. ಅದು ಅವರ ಕುರಿತಾದ ಮರುಕವೂ ಆಗಿತ್ತು.
ಈಗ ನಾಟಕದ ಬದಲಿಗೆ ಸವಾಲ್ ಜವಾಬ್ ಭಜನೆ ಎಂಬ ಕುರೂಪವೂ ಹಳ್ಳಿಗಳನ್ನು ವಕ್ಕರಿಸಿದೆ.
ಈಗೀಗ ನಾಟಕದ ಉದ್ಘಾಟನೆಗೆ ಊರಹಿರಿಯರ ಬದಲಿಗೆ ಎಮ್ಮೆಲ್ಲೇ ಬಂದು ಕೂತಿದ್ದಾನೆ. ನಾಟಕ ಶುರುವಾಗುವುದನ್ನೇ ಚಾಪೆ ಹಾಸಿಕೊಂಡು ಕಾಯುತ್ತಿದ್ದ ಜನ ದೀಪ (ಬೆಂಕಿ) ಹಚ್ಚಲು ಬರುವ ಎಮ್ಮೆಲ್ಲೆಗಾಗಿ ತಡರಾತ್ರಿವರೆಗೆ ಕಾಯುವ ಸೈರಣೆ ಗಳಿಸಿಕೊಂಡಿದ್ದಾರೆ. ಊರ ಜಾತ್ರೆಗೀಗ ಎರಡೆರಡು ನಾಟಕಗಳು. ಎರಡು ಪಾರ್ಟಿಗಳಲ್ಲಿ ಪ್ರೇಕ್ಷಕ ಹಂಚಿಹೋಗಿದ್ದಾನೆ. ಈಗ ಅವರವರ ಪಾರ್ಟಿಯವರು ಅವರವರ ನಟನೆಗೆ ಮಾತ್ರ ಚಪ್ಪಾಳೆ ಹೊಡೆಯುತ್ತಾರೆ. ಅವರ ಪಾರ್ಟಿಯವನಿಗೆ ಮಾತ್ರ ಆಯರ ಮಾಡುತ್ತಾರೆ. ಆ ಪಾರ್ಟಿಯವರು ಹೀರೋಗೆ ಐನೂರು ಆಯರ ಮಾಡಿದರೆ ಈ ಪಾರ್ಟಿಯವರು ಕೇಡಿ ಪಾರ್ಟು ಮಾಡಿದವನಿಗೆ ಸಾವಿರ. ವೋಟಿಗೆ ನೋಟು ಹಂಚುವ ಪರಿಪಾಠ ಇಲ್ಲೂ ಪ್ರತಿಪಲಿಸಿದೆ. ಅವರ ಅಭ್ಯರ್ಥಿ ಯಾರು ಎಂಬುದನ್ನು ನೋಡಿಕೊಂಡು ಅನೌನ್ಸ್ ಮಾಡಿದ ನಂತರ ಇವರ ಅಭ್ಯರ್ಥಿಯನ್ನು ಅನೌನ್ಸ್ ಮಾಡುವ ಹಾಗೆ ಅವರ ನಾಟಕದ ಟೈಟಲ್ ನೋಡಿಕೊಂಡು ಇವರು ಸ್ಟ್ರಾಂಗ್ ಟೈಟಲ್ ಹುಡುಕುತ್ತಾರೆ. ಇಲ್ಲವೆ ಅಂಥದ್ದೊಂದು ನಾಟಕ ಬರೆಯಿಸಿ ತಮಗೆ ಬೇಕಾದ ಡೈಲಾಗು ಬರೆಯಿಸಿ ಆಡುವ ಹೊಸ ಪಾಠ ಶುರುವಾಗಿದೆ. ಚುನಾವಣೆ ಸಂದರ್ಭದಲ್ಲಿ ಅದಕ್ಕಂತಲೆ ತಯಾರಿಸಲಾಗಿರುವ ತೆಲುಗು ಹಿಂದಿ ಸಿನೇಮಾಗಳಂತೆ ತಮಗೆ ಆಗದವರನ್ನು ಅಪರೋಕ್ಷವಾಗಿ ಹೀಗಳೆಯಲು ಹಣಿಯಲು ನವ ಅಸ್ತ್ರಗಳಂತೆ ನಾಟಕಗಳು ಬಳಕೆಯಾಗುತ್ತಿವೆ. ಹೀಗೆ ಕಾಯುತ್ತಿದೆ ಹಳ್ಳಿ.
ಒಂದೊಮ್ಮೆ ಎಲ್ಲ ಜನರನ್ನೂ ಬೆಸೆಯುತ್ತಿದ್ದ ನಾಟಕಗಳು ಇಂದು ಚಹರೆ ಬದಲಿಸಿಕೊಂಡು ಬೇರೆಯೆ ಕೆಲಸದಲ್ಲಿ ತೊಡಗಿಸಿಕೊಂಡಿವೆ. ಅವನ್ನು ನಾಟಕಗಳು ಅನ್ನಲಾದೀತೆ. ಈಗೇನೂ ನಿತ್ಯವೂ ನಾಟಕ ಜರುಗುತ್ತಲೆ ಇರುತ್ತದೆ. ಎಲ್ಲವೂ ಬಟಾಬಯಲು. ಎಲ್ಲರೂ ಬೀದಿಗೆ ಬಂದಿದ್ದೇವೆ. ಇನ್ನೆಲ್ಲಿಯ ನಾಟಕ?
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 2:30 pm, Sat, 18 June 22