Column: ಅನುಸಂಧಾನ; ಮರಿಯಾನೊ ಸಿಗ್ಮನ್​ನ ‘ಮನಸ್ಸಿನ ಹೆಜ್ಜೆ ಗುರುತು’

| Updated By: ಗಂಗಾಧರ​ ಬ. ಸಾಬೋಜಿ

Updated on: Jun 12, 2022 | 7:22 AM

Mariano Sigman : ಓಶೋ, ‘ನಿನ್ನ ಪ್ರತಿಯೊಂದು ಯೋಚನೆಗೆ ಕೂಡಾ ಒಂದು ತರಂಗಾಂತರವಿದೆ, ಅದರ ಪರಿಣಾಮ ನಿನ್ನ ಸುತ್ತಮುತ್ತಲಿನ ಪರಿಸರದಲ್ಲಿ ಆಗುತ್ತಿರುತ್ತದೆ, ಎಚ್ಚರ’ ಎಂದಿದ್ದರು. ಇಲ್ಲೀಗ ಸಿಗ್ಮನ್ ಇನ್ನೂ ಹೆಚ್ಚಿನ ಭಯ ಹುಟ್ಟುವಂಥ ಕೆಲವು ಮಾತುಗಳನ್ನಾಡಿದ್ದಾರೆ!

Column: ಅನುಸಂಧಾನ; ಮರಿಯಾನೊ ಸಿಗ್ಮನ್​ನ ‘ಮನಸ್ಸಿನ ಹೆಜ್ಜೆ ಗುರುತು’
ಮರಿಯಾನೋ ಸಿಗ್ಮನ್
Follow us on

ಅನುಸಂಧಾನ | Anusandhana : ಮನಸ್ಸಿನ ಬಗ್ಗೆ, ಮೆದುಳಿನ ಬಗ್ಗೆ ತುಂಬ ಓದಲು ಒಂಥರಾ ಆಗುತ್ತದೆ. ಅಂದರೆ ಅದನ್ನು ಓದುವಾಗಲೇ ಇದನ್ನು ಓದುತ್ತಿರುವುದು ಅದೇ ಮೆದುಳಲ್ಲವೆ, ಅದು ಸ್ವತಃ ಅದರ ಬಗ್ಗೆಯೇ ಓದುತ್ತ ತನ್ನ ಗುಟ್ಟುಗಳನ್ನೆಲ್ಲ ಈ ಮನುಷ್ಯ ಅರಿತುಕೊಳ್ಳುತ್ತಿದ್ದಾನಲ್ಲ ಎಂದು ನನ್ನ ವಿರುದ್ಧ ಮಸಲತ್ತು ನಡೆಸಿದರೆ ಎಂಬ ಭಯದ್ದಂಥದ್ದೇನೋ ಶುರುವಾಗುತ್ತದೆ. ಹೇಳಲು ಹೊರಟಿದ್ದು ಈ ಮರಿಯಾನೊ ಸಿಗ್ಮನ್ ಎಂಬ ನ್ಯೂರೋ ಸೈಂಟಿಸ್ಟ್ ಟೆಡ್ ಟಾಕ್‌ನಲ್ಲಿ ಆಡಿದ ಕೆಲವು ಮಾತುಗಳ ಬಗ್ಗೆ. ಈತನ ಪುಸ್ತಕ ‘ದ ಸೀಕ್ರೇಟ್ ಲೈಫ್ ಆಫ್ ದ ಮೈಂಡ್’ ಬಗ್ಗೆ ನಿಮಗೆ ಗೊತ್ತಿರಬಹುದು. ಮರಿಯಾನೊ ಸಿಗ್ಮನ್ ಕಲಿತಿದ್ದು ಭೌತಶಾಸ್ತ್ರ. ಇವತ್ತು ಜಗತ್ಪ್ರಸಿದ್ಧ ನ್ಯೂರೋ ಸೈಂಟಿಸ್ಟ್. ಕಾಗ್ನಿಟಿವ್ ನ್ಯೂರೋ ಸೈನ್ಸ್‌ನಲ್ಲಿ ಕಲಿಕೆ ಮತ್ತು ನಿರ್ಧಾರ ಕೈಗೊಳ್ಳುವಿಕೆ ಇವರ ಪ್ರಧಾನ ಕ್ಷೇತ್ರ. ಹ್ಯೂಮನ್ ಫ್ರಾಂಟಿಯರ್ಸ್ ಕರಿಯರ್ ಡೆವಲಪ್‌ಮೆಂಟ್ ಅವಾರ್ಡ್, ಭೌತಶಾಸ್ತ್ರದ ರಾಷ್ಟ್ರೀಯ ಪುರಸ್ಕಾರ, ಕಾಲೇಜ್ -ದೆ ಫ್ರಾನ್ಸ್‌ನ ಯುವ ಸಂಶೋಧಕ ಪುರಸ್ಕಾರ, IBMನ ಸ್ಕೇಲಬಲ್ ಡಾಟಾ ಅನಲಿಟಿಕಲ್ ಅವಾರ್ಡ್ ಮುಂತಾದ ಹತ್ತು ಹಲವು ಪ್ರತಿಷ್ಠಿತ ಪುರಸ್ಕಾರಗಳನ್ನು ಪಡೆದಿರುವ ಸಿಗ್ಮನ್ ಜೇಮ್ಸ್ ಎಸ್ ಮ್ಯಾಕ್‌ಡೊನೆಲ್ ಫೌಂಡೇಶನ್ನಿನ ವಿದ್ವಾಂಸ.
ನರೇಂದ್ರ ಪೈ, ಲೇಖಕ, ಅನುವಾದಕ (Narendra Pai) 

‘ನಾವು ನಮ್ಮನ್ನು ಅರ್ಥ ಮಾಡಿಕೊಳ್ಳಬೇಕು ಹೇಗೆ ಮತ್ತು ನಮ್ಮ ಸಹವರ್ತಿಗಳನ್ನು ಹೆಚ್ಚು ಆಳವಾಗಿ ಅರ್ಥ ಮಾಡಿಕೊಳ್ಳುವುದು ಹೇಗೆ ಎನ್ನುವುದು ಇದರ ತಿರುಳು. ನಮ್ಮ ಬದುಕಿನ ಆರಂಭಿಕ ದಿನಗಳಿಂದ ತೊಡಗಿ ನಾವು ಯೋಜಿಸುವ, ನಮ್ಮದೆಂದು ಹೇಳುವ ಐಡಿಯಾಗಳು ಆಕೃತಿ ತಳೆಯುವ ಪ್ರಕ್ರಿಯೆ ಹೇಗಿರುತ್ತದೆ? ನಮ್ಮ ಮೂಲಭೂತ ಯೋಚನೆಯೊಂದನ್ನು ಅರ್ಥಪೂರ್ಣ ಯೋಜನೆಯನ್ನಾಗಿ ರೂಪಿಸುವಲ್ಲಿ ನಮ್ಮ ವ್ಯಕ್ತಿತ್ವದ ಯಾವ್ಯಾವ ಅಂಶಗಳು ಕೊಡುಗೆ ನೀಡುತ್ತಿರುತ್ತವೆ? ನಮ್ಮ ಕನಸು, ಕಲ್ಪನೆಗಳ ಹಂದರ ಹೇಗಿರುತ್ತವೆ ಮತ್ತು ಏಕೆ, ನಾವೇಕೆ ಒಂದು ನಿರ್ದಿಷ್ಟ ಸಂದರ್ಭ, ಪರಿಸರ, ಅನುಭವಕ್ಕೆ ಪ್ರತಿಯಾಗಿ ಕೆಲವು ನಿರ್ದಿಷ್ಟ ಭಾವನೆಗಳನ್ನು ವ್ಯಕ್ತಪಡಿಸುತ್ತೇವೆ, ನಮ್ಮ ಮೆದುಳು ಹೇಗೆ ಕೆಲಸ ಮಾಡುತ್ತದೆ ಮತ್ತು ಅದರೊಂದಿಗೆ ನಮ್ಮ ವ್ಯಕ್ತಿತ್ವ ಹೇಗೆ ಮಾರ್ಪಾಡಾಗುತ್ತ ಹೋಗುತ್ತದೆ ಎನ್ನುವುದನ್ನೆಲ್ಲ ಆಳವಾಗಿ ಶೋಧಿಸುತ್ತ ಹೋಗುವ ಈ ಕೃತಿ ತನ್ನ ಅಧ್ಯಯನಕ್ಕಾಗಿ ಜೀವಶಾಸ್ತ್ರ, ಭೌತಶಾಸ್ತ್ರ, ಗಣಿತ, ಮನಶ್ಶಾಸ್ತ್ರ, ವೈದ್ಯಕೀಯ ಮಾತ್ರವಲ್ಲ, ಗ್ಯಾಸ್ಟ್ರೋನಮಿ, ಮ್ಯಾಜಿಕ್, ಮ್ಯೂಸಿಕ್, ಚೆಸ್, ಸಾಹಿತ್ಯ ಮತ್ತು ಲಲಿತಕಲೆ ಎಲ್ಲವನ್ನೂ ಪರಿಗಣನೆಗೆ ಬಳಸಿಕೊಳ್ಳುತ್ತ ಹೋಗುತ್ತದೆ. ನ್ಯೂರೋ ಸೈನ್ಸ್ ಹೇಗೆ ನಮ್ಮ ಬದುಕನ್ನು ಪೊರೆಯುತ್ತದೆ, ಹೇಗೆ ನಮ್ಮ ಮೆದುಳಿನಲ್ಲಿರುವ ಅಸಂಖ್ಯ ನ್ಯೂರಾನ್ಸ್ ನಮ್ಮ ಗ್ರಹಿಕೆ, ಕಾರ್ಯಕಾರಣ ತರ್ಕ, ಸಂವೇದನೆ, ಕನಸು ಮತ್ತು ಸಂವಹನ ಸಹಿತ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತವೆ ಎನ್ನುವುದರತ್ತ ನಮ್ಮ ಗಮನ ಸೆಳೆಯುತ್ತದೆ.’

ನಾವು ನೀವು ಸುಮ್ಮನೇ ಏನಾದರೂ ಮಾತನಾಡುತ್ತೇವೆ, ಬರೆಯುತ್ತೇವೆ. ತೀರ ಸೂಕ್ಷ್ಮ ಪ್ರಸಂಗಗಳಲ್ಲಿ ಬಿಟ್ಟರೆ ಬಳಸುವ ಶಬ್ದದ ಬಗ್ಗೆ ಅಷ್ಟೇನೂ ಅದಾ ಇದಾ ಎಂದು ಆಯ್ಕೆ ಮಾಡುತ್ತ ಕೂರುವುದಿಲ್ಲ. ಆಡಿದ್ದು, ಆಡದೇ ಉಳಿದಿದ್ದು, ಆಡಿದ ಬಳಿಕ ಬೇಡವಿತ್ತು ಅನಿಸಿದ್ದು, ಆಗಲೇ ಆಡಬೇಕಿತ್ತು ಅನಿಸಿದ್ದು ಎಲ್ಲವೂ ನಮ್ಮ ನೆಮ್ಮದಿ ಕೆಡಿಸುತ್ತ ಇರುತ್ತದೆ ಎನ್ನುವುದು ನಿಜವಾದರೂ ಒಡೆದ ಮುತ್ತುಗಳು ಮತ್ತು ಎಂದಿಗೂ ಒಡೆಯದೇ ಉಳಿದ ಚಿಪ್ಪುಗಳು ಸಾಕಷ್ಟು ಇದ್ದೇ ಇರುತ್ತವೆ. ಓಶೋ ತಮ್ಮ ಒಂದು ಉಪನ್ಯಾಸದಲ್ಲಿ ‘ನಿನ್ನ ಪ್ರತಿಯೊಂದು ಯೋಚನೆಗೆ ಕೂಡಾ ಒಂದು ತರಂಗಾಂತರವಿದೆ, ಅದರ ಪರಿಣಾಮ ನಿನ್ನ ಸುತ್ತಮುತ್ತಲಿನ ಪರಿಸರದಲ್ಲಿ ಆಗುತ್ತಿರುತ್ತದೆ, ಎಚ್ಚರ!’ ಎಂದಿದ್ದರು. ಇಲ್ಲೀಗ ಸಿಗ್ಮನ್ ಇನ್ನೂ ಹೆಚ್ಚಿನ ಭಯ ಹುಟ್ಟುವಂಥ ಕೆಲವು ಮಾತುಗಳನ್ನಾಡಿದ್ದಾರೆ!

ಇದನ್ನೂ ಓದಿ
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ

ನಮಗೆ ಗ್ರೀಕರ ನಡೆನುಡಿ, ಆಚಾರ ವಿಚಾರ, ದಿರಿಸು ಇತ್ಯಾದಿಗಳ ಬಗ್ಗೆ ಗೊತ್ತು. ಆದರೆ ಅವರು ಯೋಚಿಸುತ್ತಿದ್ದ ಕ್ರಮದ ಬಗ್ಗೆ ಏನು ಗೊತ್ತು? ಅವರು ಬಳಸುತ್ತಿದ್ದ ಭಾಷೆ, ನಿರ್ದಿಷ್ಟ ಶಬ್ದಗಳನ್ನು ಯಾವ ಫ್ರೀಕ್ವೆನ್ಸಿಯಲ್ಲಿ ಮರುಬಳಕೆ ಮಾಡುತ್ತಿದ್ದರು – ಒಂದು ವಾಕ್ಯದಲ್ಲಿ, ಒಂದು ಪರಿಚ್ಛೇದದಲ್ಲಿ, ಒಂದು ನಿರ್ದಿಷ್ಟ ಲೇಖನದಲ್ಲಿ ಎನ್ನುವುದರ ಆಧಾರದ ಮೇಲೆ ಅವರ ಯೋಚನಾಕ್ರಮವನ್ನು ಕರಾರುವಾಕ್ಕಾಗಿ ಗುರುತಿಸುವುದು ಸಾಧ್ಯವೆ? ಈ ನಿಟ್ಟಿನಲ್ಲಿ ಸಿಗ್ಮನ್ ಮಾತುಗಳು ಹರಿಯುತ್ತವೆ.

ಮರಿಯಾನೋ ಸಿಗ್ಮನ್ ಕೃತಿ

ಇದನ್ನೂ ಓದಿ : Literature: ನನಗೆ ಗೊತ್ತಿತ್ತು, ಇದೆಲ್ಲ ಕೆಟ್ಟದಾಗಿಯೇ ಮುಗಿಯುತ್ತದೆ ಅಂತ

ಇದಕ್ಕೆ ಪರಸ್ಪರ ಸಂಬಂಧ ಇರುವ ಶಬ್ದಗಳು ಮತ್ತು ಪರಸ್ಪರ ಸಂಬಂಧವೇ ಇಲ್ಲದ ಶಬ್ದಗಳ ಗುಂಪುಗಳನ್ನು ಗುರುತಿಸುವುದು ಸಾಧ್ಯವಾದಲ್ಲಿ ಅವುಗಳ ಮರುಬಳಕೆ ಯಾವ ಕ್ರಮದಲ್ಲಿ ನಡೆಯುತ್ತದೆ ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ಇಂಥ ಒಂದು ಅಧ್ಯಯನ ಕೈಗೊಂಡಾಗ ಕೆಲವು ಅಚ್ಚರಿದಾಯಕ ಸಂಗತಿಗಳು ಬೆಳಕಿಗೆ ಬಂದವು. ಇದನ್ನು ನಾವು ಒಪ್ಪಬಹುದು ಅಥವಾ ನಿರಾಕರಿಸಬಹುದು. ಆದರೆ ಚರ್ಚಾರ್ಹವಾದ ವಿದ್ಯಮಾನ ಇದು ಎನ್ನುವುದಂತೂ ನಿರ್ವಿವಾದ.

ಸರಿ ಸುಮಾರು ಒಂದೇ ಕಾಲಘಟ್ಟದಲ್ಲಿ, ಮೂರು ಸಾವಿರ ವರ್ಷಗಳ ಹಿಂದೆ, ಇಡೀ ಜಗತ್ತಿನಲ್ಲಿ ಇವತ್ತು ನಾವು ಮನೋಭ್ರಾಂತಿ ಎಂದು ಕರೆಯಬಹುದಾದ ಒಂದು ನೆಲೆಯ ಚಿಂತನೆ ಅಸ್ತಿತ್ವದಲ್ಲಿತ್ತು. ಅಂದರೆ ದೇವರು ಮನುಷ್ಯರ ಮೂಲಕ ಸಂದೇಶ ನೀಡುತ್ತಾನೆ, ಮಾತನಾಡುತ್ತಾನೆ ಅಥವಾ ಮಾತನಾಡುವುದು ಕೆಲವರಿಗೆ ಕೇಳಿಸುತ್ತದೆ ಎನ್ನುವ ನಂಬಿಕೆ ಅಥವಾ ವಿಶ್ವಾಸ ಚಾಲ್ತಿಯಲ್ಲಿತ್ತು.

‘ಇಲಿಯಡ್’, ‘ಒಡಿಸ್ಸಿ’ ಮುಂತಾದ ಕೃತಿಗಳು ಬಂದ ಕಾಲಕ್ಕೆ ಅಷ್ಟಾಗಿ ಕಂಡುಬರದ ವಿಶ್ಲೇಷಣಾ ಮನೋಧರ್ಮ ಮುಂದೆ ಪ್ಲೇಟೋ, ಅರಿಸ್ಟಾಟಲ್ ಕಾಲಕ್ಕೆ ಮಂಚೂಣಿಗೆ ಬಂತು ಎನ್ನುವುದನ್ನು ಗಮನಿಸಿ ಎನ್ನುವ ಸಿಗ್ಮನ್ ಹಳೆಯ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಗಳ ಕಾಲಮಾನದಲ್ಲೂ ಇಂಥದೇ ಚಲನೆಯನ್ನು ಮನುಷ್ಯನ ಮನೋಧರ್ಮದ ನಡೆಯಲ್ಲಿ ಗುರುತಿಸುತ್ತಾರೆ.

ಇದನ್ನೂ ಓದಿ : Column: ವೈಶಾಲಿಯಾನ; ‘ನೀವುದಯ್ಯಾ ದೇಹ ತ್ರಾಣ, ನೀನೆ ಪ್ರಾಣ, ನೀನೆ ಮಾನ, ಕಾವುದೆನ್ನ ಶೀಲ ನಿಧಾನ’

ಭೂತಕಾಲದ ಪ್ರಜ್ಞಾಪ್ರವಾಹದ ನಡೆಯನ್ನು ಹೀಗೆ ಗುರುತಿಸುವುದಕ್ಕೆ ಸಾಧ್ಯವಿದ್ದಲ್ಲಿ ಭವಿಷ್ಯತ್ತಿನ ಪ್ರಜ್ಞಾಪ್ರವಾಹವನ್ನು ಕೂಡಾ ಅದರ ಟ್ರೆಂಡ್ ಮೂಲಕ ಸ್ಥೂಲವಾಗಿ ಗುರುತಿಸುವುದಕ್ಕೆ ಸಾಧ್ಯವಾದೀತೆ ಎನ್ನುವುದು ಮುಂದಿನ ಪ್ರಶ್ನೆ. ಮುವ್ವತ್ತನಾಲ್ಕು ಮಂದಿ ಮನೋಭ್ರಾಂತಿಯ ರಿಸ್ಕ್ ಅತಿ ಹೆಚ್ಚಾಗಿದೆ ಎನಿಸಿಕೊಂಡಂಥ ಯುವಕರನ್ನು ತಮ್ಮ ಸಂಶೋಧನೆಗೆ ಆರಿಸಿಕೊಂಡು ಇದರ ಅಧ್ಯಯನ ನಡೆಸಿದ ಸಿಗ್ಮನ್‌ಗೆ ಎದುರಾಗಿದ್ದು ಸೋಲು. ಆದರೆ ನಿಯಂತ್ರಿತ ವ್ಯಕ್ತಿಗಳ ಗುಂಪಿನೊಂದಿಗೆ ಈ ಗುಂಪಿನವರ ಶಬ್ದ ಬಳಕೆ, ಅದರ ಫ್ರೀಕ್ವೆನ್ಸಿ ಮತ್ತು ಬಳಸುವ ವಿಧಾನ ಎಲ್ಲವನ್ನೂ (ಬಳಸುವುದು ಮಾತ್ರವಲ್ಲ, ಹೇಗೆ ಬಳಸುತ್ತಾರೆ, ಆಡುವಾಗ ಹೇಗೆ ಆಡುತ್ತಾರೆ, ಬರೆಯುವಾಗ ಇಡೀ ವಾಕ್ಯದಲ್ಲಿ ಎಲ್ಲಿ ಬರೆಯುತ್ತಾರೆ ಎನ್ನುವುದೂ ಸೇರಿ) ಹೋಲಿಸುತ್ತಾ ಅದನ್ನು ದಾಖಲಿಸುವ ಮಾರ್ಗ ಅನುಸರಿಸಿದಾಗ ಮಾತ್ರ ಅಚ್ಚರಿಯ ಫಲಿತಾಂಶ ಸಿಕ್ಕಿತು ಎನ್ನುತ್ತಾರೆ ಸಿಗ್ಮನ್. ಇದನ್ನು ಮಾನಸಿಕ ಆರೋಗ್ಯದ ಮುನ್ಸೂಚನೆಯಾಗಿ ಬಳಸುವ ಬಗ್ಗೆಯೂ ಅವರು ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ.

ಸೊ ಟು ಸೇ, ಭಾಷೆ ಬಳಸುವಾಗ, ಮಾತನಾಡುವಾಗ, ಬರೆಯುವಾಗ ನಾವು ನಮ್ಮ ಮನೋರೋಗದ ಗುಣಲಕ್ಷಣಗಳನ್ನೆಲ್ಲ ಬರೆಯುತ್ತಿರುತ್ತೇವೆ, ಸದ್ಯ ಅದು ಎಲ್ಲರಿಗೂ ಕಾಣಿಸುವುದಿಲ್ಲ ಎನ್ನುವುದೊಂದೇ ಉಳಿದಿರೊ ಭರವಸೆ!

(ಮುಂದಿನ ಅನುಸಂಧಾನ : 26.6.2022)

ಈ ಅಂಕಣದ ಎಲ್ಲ ಬರಹಗಳನ್ನೂ ಓದಲು ಕ್ಲಿಕ್ ಮಾಡಿ 

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 6:30 am, Sun, 12 June 22