Column: ಹಾದಿಯೇ ತೋರಿದ ಹಾದಿ; ಮತ್ತೊಂದು ತಿರುವಿನ ಹಾದಿ ಎದುರು ನೋಡುತ್ತಾ

|

Updated on: Aug 06, 2022 | 5:12 PM

Column : ತನ್ನ ಮೂರು ಮಕ್ಕಳನ್ನು ಬೆಳೆಸುತ್ತ ಪತ್ರಿಕೋದ್ಯಮದ ಕೋರ್ಸ್ ಮಾಡಿ ಅಂಕಣಕಾರ್ತಿಯಾದ ಬೆಂಗಳೂರಿನ ಜ್ಯೋತಿ ಎಸ್ ಊರು-ಕಾಡುಗಳನ್ನು ಸುತ್ತಿ 25 ಅಂಕಣಬರಹಗಳನ್ನು ಶ್ರದ್ಧೆಯಿಂದ ಬರೆಯುತ್ತ ಹೋದರು. ನೀವೆಲ್ಲ ಓದಿ ಪ್ರೋತ್ಸಾಹಿಸಿದಿರಿ.

Column: ಹಾದಿಯೇ ತೋರಿದ ಹಾದಿ; ಮತ್ತೊಂದು ತಿರುವಿನ ಹಾದಿ ಎದುರು ನೋಡುತ್ತಾ
Follow us on

ಹಾದಿಯೇ ತೋರಿದ ಹಾದಿ : ಆಗಷ್ಟೇ ಪತ್ರಿಕೋದ್ಯಮ ಕೋರ್ಸ್ ಮುಗಿಸಿ ಮುಂದೇನು ಎನ್ನುವ ಆಲೋಚನೆಯಲ್ಲಿದ್ದ ನನಗೆ ಹಾದಿಯಾಗಿ ಸಿಕ್ಕಿದ್ದು tv9 ಕನ್ನಡ ಡಿಜಿಟಲ್. ನನ್ನ ಬರೆವಣಿಗೆ ಎಂಬ ಪ್ರಯಾಣ ಶುರುವಾಗಿದ್ದೇ ‘Future Journalists’ ಎಂಬ ಅಂಕಣದ ಮೂಲಕ. ನಂತರ ಐದಾರು ಬಿಡಿಬರಹಗಳನ್ನು ಬರೆಯುತ್ತಿದ್ದಂತೆ ಹಾದಿಯೇ ತೋರಿದ ಹಾದಿ’ ಅಂಕಣ ಬರೆಯಲು ಇಲ್ಲಿ ಅವಕಾಶ ಸಿಕ್ಕಿತು. ನಿಜದಲ್ಲಿ  ನಾನು ಬರಹಗಾರ್ತಿಯಾಗಬೇಕೆಂದು ಕನಸು ಕಂಡವಳಲ್ಲ. ಆದರೆ ಈ ಅಂಕಣದ ಮೂಲಕ ಇಪ್ಪತ್ತೈದು ಅನುಭವ ಕಥನಗಳನ್ನು ಬರೆದೆ. ಆಕಸ್ಮಿಕವಾಗಿ ಶುರುವಾದ ಈ ಹಾದಿ ಇವತ್ತು ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಈ ಅಂಕಣಕ್ಕಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಾವಿರಾರು ಮೈಲಿ ಕ್ರಮಿಸಿ ಪ್ರಯಾಣಿಸಿದ್ದಿದೆ. ಒಂದೊಂದು ಹೊಸ ಮುಖ, ಸಂಸ್ಕೃತಿ, ಆಚಾರ, ವಿಚಾರ, ಕಷ್ಟ, ಸಂಕಷ್ಟ, ನೋವು, ಬೆರಗು… ಇವೆಲ್ಲವೂ ನನ್ನನ್ನು ಮತ್ತಷ್ಟು ತೆರೆದುಕೊಳ್ಳಲು ಅನುವು ಮಾಡಿಕೊಡುತ್ತ ಹೋದವು, ಹೋಗುತ್ತಲೇ ಇವೆ. ಹೋಗುವಾಗ ಅಪರಿಚಿತಳಾಗಿ ಹೋಗುತ್ತಿದ್ದೆ. ಬರುವಾಗ ಅವರ ಕುಟುಂಬದ ಸದಸ್ಯರಲ್ಲಿ ಒಬ್ಬಳಾಗಿ ಆರ್ದ್ರ ಮನಸ್ಸಿನಿಂದ ಮರಳುತ್ತಿದ್ದೆ. ಈ ಅಂಕಣದ ಮೂಲಕ ಎಲ್ಲೋ ಮೂಲೆಗುಂಪಾಗಿದ್ದ ವ್ಯಕ್ತಿಗಳು, ಸಮುದಾಯಗಳು ಮುನ್ನೆಲೆಯಲ್ಲಿ ಗುರುತಿಸಿಕೊಳ್ಳಲು, ಜೀವನ ನಡೆಸಲು ಅಷ್ಟಿಷ್ಟು ಅವಕಾಶ ಸಿಕ್ಕಿದೆ ಎಂದು ತಿಳಿಸಲು ಖುಷಿ ಎನ್ನಿಸುತ್ತದೆ.
ಜ್ಯೋತಿ ಎಸ್, ಸಿಟಿಝೆನ್ ಜರ್ನಲಿಸ್ಟ್ (Jyothi S)

ನಮ್ಮ ಮನೆಯ ಬೀದಿಗುಂಟ ಕಣ್ಣಾಗಿ ಕಿವಿಯಾಗಿ ನಿಲ್ಲುತ್ತಿದ್ದೆ. ಬರೆಯಲು ಆಲೋಚನೆಗಳು ಹೊಮ್ಮುತ್ತಿದ್ದವು. ನಿಮ್ಮೆದುರು ಹೆಜ್ಜೆ ಇಡುತ್ತ ಬಂದೆ. ಹೀಗೆ ಶುರುವಾದ ಈ ಹಾದಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರಗಳನ್ನೆಲ್ಲ ಅಲೆಸಿತು. ನಂತರ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹೀಗೆ ಅನೇಕ ಹಳ್ಳಿಪಟ್ಟಣಗಳು, ಕಾಡು ಮೇಡುಗಳಲ್ಲೆಲ್ಲ ಹೊಕ್ಕುಬರಲು ಪ್ರೇರಣೆಯಾಯಿತು. ಪ್ರತೀ ಜಾಗ, ವ್ಯಕ್ತಿಗಳ ಭೇಟಿ ನನ್ನಲ್ಲಿ ಹುರುಪು, ಭರವಸೆ ತುಂಬುತ್ತಿತ್ತು.

ಅಂಗವೈಕಲ್ಯದಿಂದ ಬಳಲುತ್ತಿದ್ದರೂ ಸ್ವಾವಲಂಬಿಯಾಗಿ ದುಡಿದು ತಿನ್ನಬೇಕು ಎನ್ನುವ ಅರಸು, ಉರಿವ ಬಿಸಿಲಿನಲ್ಲೂ ಆಟಿಕೆ ಪಿಟೀಲಿನಲ್ಲಿ ತಂಪಾದ ರಾಗ ನುಡಿಸುವ ಅಬ್ದುಲ್, ನೀರಿನಾಕ್ಕಿಳಿದು ಶವಗಳನ್ನು ತೆಗೆಯುವ ಬಾಬಾ ಅಣ್ಣು ಸಿದ್ದಿ, ನಮ್ಮ ನಾಡಿನ ಪುರಾಣ ಕಥೆಗಳನ್ನು ತಮ್ಮದೇ ವೇಷಭೂಷಣ, ಅಭಿನಯದಿಂದ ಪಾತ್ರಗಳಿಗೆ ಜೀವ ತುಂಬುವ ಹಗಲು ವೇಷದ ಕಲಾವಿದರು, ನಾಳೆಯ ಚಿಂತೆಯೇ ಇಲ್ಲದೆ ಹಣ ಮಾಡಬೇಕು, ಮನೆ ಕಟ್ಟಿಸಬೇಕು, ಆಸ್ತಿ ಮಾಡಬೇಕು ಎಂಬ ಯಾವ ಗೊಡವೆಯೂ ಇಲ್ಲದ ಪರಮ ಸುಖಿ ಸುರೇಶ್ ಕಾವೇರಿ ಸಿದ್ದಿ, ರೈಲಿಗೆ ಸಿಕ್ಕ ಶವಗಳನ್ನು ತೆಗೆದು ಸಂಸ್ಕಾರ ಮಾಡುವ ಗಟ್ಟಿಗಿತ್ತಿ ಆಶಾ, ದೊಡ್ಡ ಡಿಗ್ರಿ ದೊಡ್ಡ ಕೆಲಸದ ಮಹಿಳೆಯರಷ್ಟೇ ಆದರ್ಶವಲ್ಲ ಎನ್ನುವ ನಾಗವೇಣಿ ಇನ್ನೂ ಎಷ್ಟೋ ಜನರು. ಇವರೆಲ್ಲರ ಜೀವನ ನನಗೂ ಆದರ್ಶಪ್ರಾಯ. ಅಸಹಾಯಕರ ಜೀವನವನ್ನು ಬರಹಗಳಲ್ಲಿ ಕಟ್ಟಿಕೊಟ್ಟಾಗ ಅದೆಷ್ಟೋ ಸಹೃದಯಿ ಓದುಗರು ಅವರಿದ್ದಲ್ಲಿಗೆ ಹೋಗಿ ಸಹಾಯ ಮಾಡಿದ್ದಾರೆ. ಬರೆವಣಿಗೆಗೆ ಇಷ್ಟೊಂದು ಶಕ್ತಿ ಇದೆ ಎಂದೆನ್ನಿಸಿದ್ದು ಆಗಲೇ; ನನ್ನ ಸಣ್ಣ ಪ್ರಯತ್ನಕ್ಕೆ ಸಾರ್ಥಕ ಭಾವ.

ಇದನ್ನೂ ಓದಿ
ಹಾದಿಯೇ ತೋರಿದ ಹಾದಿ: ನಮ್ಮ ಹಾವಾಡಿಗರು ಎಲ್ಲೂ ಹೋಗಿಲ್ಲ ಇಲ್ಲೇ ಹೀಗೇ ಇದ್ದಾರೆ
ಹಾದಿಯೇ ತೋರಿದ ಹಾದಿ: ನೀರಿನಾಳಕ್ಕಿಳಿದು ಶವತೆಗೆವ ಬಾಬಾ ಅಣ್ಣು ಸಿದ್ದಿ ಸಾಹಸಗಾಥೆ
ಹಾದಿಯೇ ತೋರಿದ ಹಾದಿ: ಈ ‘ಅರಸು’ ಆಳಾಗಿ ದುಡಿಯಲು ಸಿದ್ಧನಿದ್ದಾನೆ
Nomad: ಹಾದಿಯೇ ತೋರಿದ ಹಾದಿ; ‘ನಮ್ಮ ದೇಶದ ಸ್ಥಿತಿಗತಿಯನ್ನೇ ಕಲೆಯ ಮೂಲಕ ತೋರಿಸುತ್ತ ಹೊರಟಿದ್ದೇವೆ’

ಹಾದಿ ಚಲಿಸಿದಷ್ಟೂ ತೆರೆದುಕೊಳ್ಳುತ್ತದೆ. ನಮ್ಮನ್ನು ಗಟ್ಟಿಗೊಳಿಸುತ್ತದೆ. ಪ್ರತೀ ವಾರ ಈ ಅಂಕಣವನ್ನು ಓದಿ ಪ್ರತಿಕ್ರಿಯಿಸಿದ ನಿಮ್ಮೆಲ್ಲರಿಗೂ ಧನ್ಯವಾದ.

(ಇಲ್ಲಿಗೆ ಈ ಅಂಕಣ ಮುಕ್ತಾಯವಾಯಿತು)

ಈ ಅಂಕಣದ ಎಲ್ಲಾ ಬರಹಗಳನ್ನು ಓದಲು ಕ್ಲಿಕ್ ಮಾಡಿ

ಪ್ರತಿಕ್ರಿಯೆಗಾಗಿ : tv9kannadadigital@gmail.com 

Published On - 5:04 pm, Sat, 6 August 22