Padma Bhushana Award 2022 : Usthad Rashid Khan ; ಸಿದ್ಧ ವಿನ್ಯಾಸಗಳಿಗೆ ಜೋತು ಬೀಳುವ ಜಾಯಮಾನ ಅವರದಲ್ಲ. ಇಂತಹ ತೆರೆದ ಮನಸು ಮತ್ತು ಹೊಸತಿನ ತುಡಿತವಿದ್ದರೂ ಮತ್ತೊಂದು ಹಂತದಲ್ಲಿ ರಶೀದರು ಹಲವು ಬಗೆಗಳಲ್ಲಿ ಶುದ್ಧ ಪರಂಪರಿಗರು. ಇಂತಹ ಹೊತ್ತಿನಲ್ಲಿ ಇಂತಹುದೇ ರಾಗ ಹಾಡಬೇಕೆಂಬ ಸಿದ್ಧಾಂತವನ್ನು ಗಾಢವಾಗಿ ನಂಬುವವರು. ನಿರ್ದಿಷ್ಠ ರಾಗವೊಂದನ್ನು ಅವೇಳೆಯಲ್ಲಿ ಎಂದಿಗೂ ಹಾಡರು. ಈಗಾಗಲೇ ಸ್ಥಾಪಿತವಾಗಿರುವ ಕಛೇರಿ ರೂಪ ತನ್ನದೇ ಅದ ಗುಣಗಳನ್ನು ಹೊಂದಿದ್ದು, ಅದನ್ನು ಬದಲಾಯಿಸಬೇಕಿದ್ದರೆ ಮಹತ್ತರ ಕಾರಣದ ಸಮರ್ಥನೆ ಅತ್ಯಗತ್ಯ ಎನ್ತುತ್ತಾರೆ. ಅವರೇ ರಚಿಸಿರುವ ಬಂದಿಶ್ಗಳ (ಖಯಾಲ್) ಕುರಿತು ಹೆಚ್ಚು ಹೇಳಿಕೊಳ್ಳಲು ಇಷ್ಟಪಡದ ಅವರು, ಈ ಬಂದಿಶ್ ಅನ್ನು ನಾನು ಮಾಡಿದೆನೆಂದು ಹೇಳಲು ಸಂಕೋಚವೆನ್ನಿಸುತ್ತದೆ ಎನ್ನುತ್ತಾರೆ. ನಮ್ಮ ಹಿರಿಯರು ಸೃಷ್ಟಿಸಿದ್ದೇ ಬೆಟ್ಟದಷ್ಟಿದೆ. ಅವರ ಮುಂದೆ ನಾನೆಷ್ಟರವನು ಎಂದು ನಮ್ರಭಾವ ವ್ಯಕ್ತಪಡಿಸುತ್ತಾರೆ.
ಶೈಲಜಾ ಖನ್ನಾ, ನ್ಯೂಸ್ ನೈನ್ (Shailaja Khanna, News Nine)
*
ರಾಂಪುರ್ ಸಹಸವಾನ್ ಘರಾಣೆಯ ದೀಪಧಾರಿ ಉಸ್ತಾದ್ ರಶೀದ್ ಖಾನ್. ಅತ್ಯಂತ ಕಿರಿಯ ವಯಸ್ಸಿನಲ್ಲೇ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದವರು. ಆಗ (2006) ಅವರ ವಯಸ್ಸು ಕೇವಲ 38. ಇತ್ತೀಚೆಗೆ ಪದ್ಮಭೂಷಣ ಗೌರವದ ಗರಿ ಅವರ ಮುಡಿಗೇರಿತು. ಪದವಿ ಪ್ರಶಸ್ತಿಗಳು, ಸಮ್ಮಾನಗಳು ಅವರಿಗೆ ಹೊಕ್ಕುಬಳಕೆಯಾಗಿರುವ ಸಂಗತಿಗಳು; ‘ಸರ್ಕಾರವು ಸರಿಯಾಗಿ ಮೌಲ್ಯಮಾಪನ ಮಾಡಿ ಅಳೆದು ಗುರುತಿಸಿ ಯೋಗ್ಯ ಕಲಾವಿದರಿಗಷ್ಟೇ ಪ್ರಶಸ್ತಿಗಳನ್ನು ನೀಡಬೇಕು. ಇದು ದೇಶ ಮಾಡುವ ಸನ್ಮಾನ. ಅರ್ಹರಿಗಷ್ಟೇ ಸಲ್ಲಬೇಕು. ಬೇಕೆಂದವರಿಗೆಲ್ಲ ನೀಡತಕ್ಕದ್ದಲ್ಲ. ಯಾರು ಸಂಗೀತಕ್ಕೆ ಏನು ಕೊಡುಗೆ ಸಲ್ಲಿಸಿದ್ದಾರೆಂಬ ಖಚಿತ ಅರಿವು ಅಂದಾಜು ಆಯ್ಕೆಗಾರರಿಗೆ ಇರಲೇಬೇಕು’ ಎಂದು ಹೇಳುತ್ತಲೇ ಮಾತಿಗಿಳಿದರು ಖ್ಯಾತ ಶಾಸ್ತ್ರೀಯ ಸಂಗೀತ ಕಲಾವಿದ ಉಸ್ತಾದ್ ರಶೀದ್ ಖಾನ್.
ರಾಂಪುರ್ ಸಹಸವಾನ್ ಘರಾಣಾ ದಿಗ್ಗಜ ಉಸ್ತಾದ್ ಮುಶ್ತಾಖ್ ಹುಸೇನ್ ಖಾನ್ 1957ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದ ಮೊದಲ ಉತ್ತರಭಾರತೀಯ ಶಾಸ್ತ್ರೀಯ ಸಂಗೀತಗಾರರು. ಅವರ ನಂತರ ಉಸ್ತಾದ್ ನಿಸಾರ್ ಹುಸೇನ್ ಖಾನ್, ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ (ಪದ್ಮವಿಭೂಷಣ) ಹಾಗೂ ಉಸ್ತಾದ್ ಹಾಫೀಝ್ ಖಾನ್ ಪದ್ಮಪ್ರಶಸ್ತಿಗೆ ಪಾತ್ರರಾಗಿದ್ದರು. ಈ ಪರಂಪರೆಯ ಮುರಿಯದ ಕೊಂಡಿಯಲ್ಲಿ ಹತ್ತನೆಯ ಹಾಡುಗಾರರು ರಶೀದ್ ಖಾನ್. ಎಂಟು ವರ್ಷದ ಬಾಲಕನಾಗಿದ್ದಾಗಲೇ ಬರೇಲಿಯ ಕಮೀಷನರ್ ಮನೆಯಲ್ಲಿ ಯಮನ್ ರಾಗ ಹಾಡಿ ಮೊದಲ ಕಛೇರಿ ನೀಡಿ ಸೈ ಎನ್ನಿಸಿಕೊಂಡಿದ್ದ ಅವರಿಗೆ, ಸಂಗೀತಯಾನ ಅಷ್ಟೊಂದು ಸಲೀಸಾಗಿರಲಿಲ್ಲ. ಏಕೆಂದರೆ, ಎಳೆಯ ರಶೀದರಿಗೆ ‘ರಿಯಾಝ್’ (ಮಾಡಿದ್ದನ್ನೇ ಮಾಡು) ತಲೆಬೇಸರದ ಸಂಗತಿಯಾಗಿತ್ತು. ಈ ವಿಷಯವನ್ನು ನೆನಪಿಸಿಕೊಳ್ಳುತ್ತ ನಗುತ್ತಾರೆ ಅವರು.
ತಮ್ಮ ಸಂಗೀತಯಾನದ ಆರಂಭಿಕ ಹಂತದಲ್ಲಿ ಬದಾಯುಂವಿನ (ಉತ್ತರಪ್ರದೇಶ) ತಮ್ಮ ಬಂಧು ಪದ್ಮಭೂಷಣ ಉಸ್ತಾದ್ ನಿಸಾರ್ ಹುಸೇನ್ ಖಾನ್ ಅವರ ಬಳಿ ಮೂರು ನಾಲ್ಕು ವರ್ಷಗಳ ಕಾಲ ಕಠಿಣ ತರಬೇತಿ ಪಡೆದರು. ಅವರೊಂದಿಗೆ ಕೊಲ್ಕತ್ತಾದ ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಗೆ ತೆರಳಿ ಅವರು ಮರಣಿಸುವ ತನಕವೂ ಅವರ ಬಳಿಯೇ ಕಲಿತರು. ತಾವೂ ಅತ್ಯುತ್ತಮವಾಗಿ ಹಾಡಬೇಕೆಂಬ ತುಡಿತ ಹುಟ್ಟಿದ್ದು ಇಪ್ಪತ್ತು-ಮೂವತ್ತರ ನಡುವಣ ಹರೆಯದಲ್ಲೇ. ಈ ಹಂತದಲ್ಲಿಯೇ ತಾರಾಪಟ್ಟ ಗಳಿಸಿದ ಪ್ರತಿಭಾರಾಶಿ ರಶೀದ್.
ಬಡೇ ಗುಲಾಮ್ ಅಲಿ ಖಾನ್, ಪಂಡಿತ್ ರವಿಶಂಕರ್, ಉಸ್ತಾದ್ ಆಮಿರ್ ಖಾನ್, ಭೀಮಸೇನ್ ಜೀ, ಪಂಡಿತ್ ಜಸರಾಜ್ ಈ ಎಲ್ಲರೆಲ್ಲರ ಸಂಗೀತವನ್ನು ಆಲಿಸಿದ್ದಕ್ಕೇ ನಾನು ಇಂತಹ ಹಾಡುಗಾರನಾಗಿ ರೂಪುಗೊಂಡಿದ್ದೇನೆ. ತಾಲೀಮು, ರಿಯಾಝ್ ಹಾಗೂ ಪ್ರತಿಭೆಯ ಜೊತೆಗೆ ಎಲ್ಲರಿಂದ ಪಡೆದ ಆಶೀರ್ವಾದಗಳು ಹರಕೆಗಳು ನನ್ನ ಯಶಸ್ತಿಗೆ ಅಪಾರ ಕಾಣಿಕೆ ನೀಡಿವೆ.
ಜುಗಲಬಂದಿಗಳೊಂದಿಗೆ ಪ್ರಯೋಗ ನಡೆಸಿ ಆಟವಾಡುವುದೆಂದರೆ ರಶೀದರಿಗೆ ಸಂಭ್ರಮ. ಪಂಡಿತ ಭೀಮಸೇನ ಜೋಶಿ, ಉಸ್ತಾದ್ ಶಾಹೀದ್ ಪರ್ವೇಝ್ ಖಾನ್, ಪೂರ್ಬಯಾನ್ ಚಟರ್ಜಿ, ಕೌಶಿಕಿ ಚಕ್ರವರ್ತಿ ಮುಂತಾದವರೊಂದಿಗೆ ಜುಗಲಬಂದಿಗಳನ್ನು ಮಾಡಿರುವುದುಂಟು. ಆದರೆ ಉತ್ತರಭಾರತದ ಜುಗಲಬಂದಿಗಳಿಗೇ ತಮ್ಮನ್ನು ಕಟ್ಟಿ ಹಾಕಿಕೊಂಡವರಲ್ಲ ಅವರು. ಶಂಕರ ಮಹಾದೇವನ್, ತಲತ್ ಅಝೀಜ್, ರಾಹತ್ ಫತೇ ಆಲಿ ಖಾನ್ ಮುಂತಾದವರೊಂದಿಗೆ ಮಾತ್ರವಲ್ಲದೆ, ಟಿ.ಎಂ.ಕೃಷ್ಣ, ಹರಿಹರನ್, ಬಾಂಬೆ ಜಯಶ್ರೀ ಅವರೊಂದಿಗೆ ಕೋಕ್ ಸ್ಟುಡಿಯೋ ಪ್ರಸ್ತುತಿಯೂ ಅವರ ಸ್ಮರಣೀಯ ಜುಗಲಬಂದೀ ಹಾಡುಗಾರಿಕೆಗಳ ಸಾಲಿಗೆ ಸೇರುತ್ತವೆ.
ಎಲ್ಲ ಸಂಗೀತವೂ ಚೆನ್ನವೇ. ಜುಗಲಬಂದಿಗಳೆಂದರೆ ನನಗೆ ಬಹಳ ಖುಶಿ. ಒಮ್ಮೆ ಹರಿಹರನ್ ಅವರೊಂದಿಗೆ ಹಾಡುತ್ತಿದ್ದೆ. ಕರ್ನಾಟಕ ಶೈಲಿಯಲ್ಲಿ ಕ್ರಮಿಸಿದೆ. ಅರೆ ವ್ಹಾ! ಇದನ್ನೂ ಹಾಡ್ತೀಯಾ ನೀನು ಎಂದು ಉದ್ಗರಿಸಿದ್ದರು ಹರಿಹರನ್. ಹೊಸ ಸಂಗತಿಗಳನ್ನು ಕಲಿಯುವುದೆಂದರೆ ನನಗೆ ಬಹಳ ಇಷ್ಟ.
ಕೇಳುಗರೇನು ಬಲ್ಲರು ಮಹಾ ಎಂಬ ಉಡಾಫೆಯ ಧೋರಣೆ ಉಸ್ತಾದ್ ರಶೀದ್ ಖಾನ್ ಅವರಿಗಿಲ್ಲ. ಪ್ರಸ್ತುತಿಯ ಮೂಲಕ ಪ್ರತಿಯೊಬ್ಬ ರಸಿಕನ ಮನಮುಟ್ಟಿ ಮೀಟಲು ಶ್ರಮಿಸುತ್ತಾರೆ. ಅದು ಅವರ ಹಾಡುಗಾರಿಕೆಯ ಹೆಗ್ಗುರುತು; ಕೆಲ ರಸಿಕರಿಗೆ ಸಂಗೀತ ಅರ್ಥವಾಗುತ್ತದೆ, ಕೆಲವರು ಸುಮ್ಮನೆ ಆಸ್ವಾದಿಸುತ್ತಾರೆ, ಈ ಇಬ್ಬರಿಗಾಗಿಯೂ ಹಾಡುತ್ತೇನೆ ನಾನು. ಅದದನ್ನು ಅದೇ ರೀತಿ ಯಾವಾಗಲೂ ಹಾಡಲಾಗದು. ಗುಣಪ್ರಮಾಣದ ಪ್ರಜ್ಞೆ ಇರಬೇಕು. ಕೇಳುಗರ ಸಹನೆ ಕರಗುತ್ತಿದೆಯೆಂಬುದರ ಅರಿವು ಇರಬೇಕು. ಚಲನಚಿತ್ರಗಳಿಗೆ ಹಾಡಿದ ಕಾರಣ ನನ್ನ ಶಾಸ್ತ್ರೀಯ ಸಂಗೀತ ಕೇಳಲು ಭಿನ್ನ ಬಗೆಯ ಕೇಳುಗರು ಬರತೊಡಗಿದ್ದಾರೆ ಎನಿಸುತ್ತಿದೆ. ಅವರನ್ನು ಆಕರ್ಷಿಸುವ ಪ್ರಯತ್ನವನ್ನೂ ಮಾಡುತ್ತೇನೆ. ಅತ್ಯುತ್ತಮ ಪಕ್ಕವಾದ್ಯ ಕಲಾವಿದರೇ ತಮ್ಮೊಂದಿಗೆ ವೇದಿಕೆ ಹಂಚಿಕೊಳ್ಳಬೇಕೆಂದು ರಶೀದ್ ಖಾನ್ ತಾಕೀತು ಮಾಡುತ್ತಾರೆ. ಕೇವಲ ನಾನು ಹಾಡುವುದೇ ಮುಖ್ಯವಲ್ಲ, ಪಕ್ಕವಾದ್ಯ ಸಂಗೀತ ಕೂಡ ಉತ್ಕೃಷ್ಟವಾಗಿರಬೇಕು, ತಬಲಾ, ಸಾರಂಗಿ, ಹಾರ್ಮೋನಿಯಂ ನನಗೆ ಸ್ಫೂರ್ತಿ ತುಂಬುವಂತೆ ನುಡಿಯಬೇಕು, ನಾನು ಹಾಡಿದ ಅದೇ ಚೀಜನ್ನು ಬಾರಿಸಕೂಡದು, ಪ್ರತಿಸ್ಪಂದನ ಭಿನ್ನವಾಗಿರಬೇಕು ಎನ್ನುವ ಖಾನ್, ಲಘುಸಂಗೀತಕ್ಕೆ ಅವರು ಗಿಟಾರ್ ಮತ್ತು ಕೀಬೋರ್ಡ್ಗಳ ಸಾಥ್ ತೆಗೆದುಕೊಳ್ಳುತ್ತಾರೆ.
ಸಿದ್ಧವಿನ್ಯಾಸಗಳಿಗೆ ಜೋತುಬೀಳುವ ಜಾಯಮಾನ ಅವರದಲ್ಲ. ಇಂತಹ ತೆರೆದ ಮನಸು ಮತ್ತು ಹೊಸತಿನ ತುಡಿತವಿದ್ದರೂ ಮತ್ತೊಂದು ಹಂತದಲ್ಲಿ ರಶೀದರು ಹಲವು ಬಗೆಗಳಲ್ಲಿ ಶುದ್ಧ ಪರಂಪರಿಗರು. ಇಂತಹ ಹೊತ್ತಿನಲ್ಲಿ ಇಂತಹುದೇ ರಾಗ ಹಾಡಬೇಕೆಂಬ ಸಿದ್ಧಾಂತವನ್ನು ಗಾಢವಾಗಿ ನಂಬುವವರು. ನಿರ್ದಿಷ್ಠ ರಾಗವೊಂದನ್ನು ಅವೇಳೆಯಲ್ಲಿ ಎಂದಿಗೂ ಹಾಡರು. ಈಗಾಗಲೇ ಸ್ಥಾಪಿತವಾಗಿರುವ ಕಛೇರಿ ರೂಪ ತನ್ನದೇ ಅದ ಗುಣಗಳನ್ನು ಹೊಂದಿದ್ದು, ಅದನ್ನು ಬದಲಾಯಿಸಬೇಕಿದ್ದರೆ ಮಹತ್ತರ ಕಾರಣದ ಸಮರ್ಥನೆ ಅತ್ಯಗತ್ಯ ಎನ್ತುತ್ತಾರೆ. ಅವರೇ ರಚಿಸಿರುವ ಬಂದಿಶ್ಗಳ (ಖಯಾಲ್) ಕುರಿತು ಹೆಚ್ಚು ಹೇಳಿಕೊಳ್ಳಲು ಇಷ್ಟಪಡದ ಅವರು, ಈ ಬಂದಿಶ್ ಅನ್ನು ನಾನು ಮಾಡಿದೆನೆಂದು ಹೇಳಲು ಸಂಕೋಚವೆನ್ನಿಸುತ್ತದೆ ಎನ್ನುತ್ತಾರೆ. ನಮ್ಮ ಹಿರಿಯರು ಸೃಷ್ಟಿಸಿದ್ದೇ ಬೆಟ್ಟದಷ್ಟಿದೆ. ಅವರ ಮುಂದೆ ನಾನೆಷ್ಟರವನು ಎಂದು ನಮ್ರಭಾವ ವ್ಯಕ್ತಪಡಿಸುತ್ತಾರೆ.
ಅವರೊಬ್ಬ ಉತ್ಕೃಷ್ಟ ಗುರು. ಬಿಡುವಿಲ್ಲದೆ ಸಕ್ರಿಯರಾಗಿದ್ದರೂ ಅಷ್ಟು ಅದ್ಭುತವಾಗಿ ಕಲಿಸುವ ಅವರಂತಹ ಸಾಧಕರು ವಿರಳ. ಕಲಿಯುವ ಮತ್ತು ತಾಲೀಮು ಮಾಡುವ ಆಕಾಂಕ್ಷೆ ಶಿಷ್ಯರೊಳಗಿಂದಲೇ ಹುಟ್ಟಬೇಕು. ಬಲವಂತವಾಗಿ ಮಾಡಿಸುವಲ್ಲಿ ನನಗೆ ನಂಬಿಕೆಯಿಲ್ಲ. ‘ಬಂಧನ’ (ನಿರ್ಬಂಧಗಳು) ಹೇರಿಕೆಯನ್ನು ದ್ವೇಷಿಸುತ್ತ ಬಂದವನು ನಾನು. ಹೀಗಾಗಿ ನನ್ನ ಶಿಷ್ಯಂದಿರಿಗೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ. ಇತರೆ ಘರಾಣಾಗಳ ಶೈಲಿಯನ್ನೂ ಆಲಿಸಿ ತಮ್ಮದೇ ಸಂಗೀತ ವ್ಯಕ್ತಿತ್ವ ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತೇನೆ ಎನ್ನುವ ರಶೀದರ ಮಗ ಅರ್ಮಾನ್ ಮತ್ತು ಪ್ರಸಾದ್ ಖಾಪರ್ಡೆ, ಕೃಷ್ಣ ಬೊಂಗಾಣೆ ಹಾಗೂ ನಾಗೇಶ್ ಅಡಗಾಂವ್ಕರ್ ತಮ್ಮ ಹೆಸರಾಂತ ಶಿಷ್ಯರುಗಳೆಂದು ಹೆಸರಿಸುತ್ತಾರೆ.
ಸರಳ ಸದಭಿರುಚಿಗಳ ರಶೀದ್ ಶಾಲೆ ಕಾಲೇಜುಗಳಿಗೆ ಹೋಗಿ ಶಿಕ್ಷಣ ಕಲಿತವರಲ್ಲ. ಬಹುಮುಖ ವ್ಯಕ್ತಿತ್ವದ ಅವರ ಒಡನಾಟ ಮುದ ನೀಡುವಂತಹುದು. ಅವರೊಂದಿಗೆ ಕಳೆವ ನಿಮಿಷ ನಿಮಿಷವೂ ರಸಘಳಿಗೆ. ನಿತ್ಯ ನಿರಂತರ ಕುತೂಹಲಿ, ಒಳಗೊಂದು ಹೊರಗೊಂದು ಇಲ್ಲದ ಸ್ಫಟಿಕಶುದ್ಧ ಮನಸು; ಟಿವಿಯಲ್ಲಿ ಫುಟ್ಬಾಲ್ ಪಂದ್ಯವೀಕ್ಷಿಸುವುದು ಅಚ್ಚುಮೆಚ್ಚು. ಕ್ರಿಕೆಟನ್ನು ದಿನವಿಡೀ ನೋಡಿದರೂ ದಣಿಯುವುದಿಲ್ಲ. ‘ನಾನು ಭೋಜನಪ್ರಿಯ. ಅಡುಗೆ ಮಾಡುತ್ತೇನೆ, (ಬಿರಿಯಾನಿ, ಪಸಂದೆ, ಕಬಾಬುಗಳು, ಗೋಷ್ಟ್…ಎಲ್ಲಾ!) ಶಾಪಿಂಗ್, (ನನ್ನ ಕಪಾಟು ಭರ್ತಿಯಾಗಿ ಹೋಗಿದೆ) ನನಗಾಗಿ ಮತ್ತು ನನ್ನ ಕುಟುಂಬಕ್ಕಾಗಿ ಶಾಪಿಂಗ್ ಮಾಡುವುದು ನನಗೆ ಬಲು ಇಷ್ಟ) ದಕ್ಷಿಣ ಭಾರತೀಯ ಸಿನೆಮಾಗಳನ್ನು ನೋಡುವುದು ಪ್ರವಾಸ ಮಾಡುವುದೂ ನನಗಿಷ್ಟ.’
ಪ್ರಾಯಶಃ ಇಂತಹ ವಿಭಿನ್ನ ಅಭಿರುಚಿಗಳೇ ಉಸ್ತಾದ್ ರಶೀದ್ ಖಾನ್ ಅವರನ್ನು ಯಾರೂ ಮೀರಿಸದ ನವನವೋನ್ಮೇಷಶಾಲಿ ಕಲಾವಿದನನ್ನಾಗಿ ರೂಪಿಸಿವೆ. ನಿರ್ವಿವಾದವಾಗಿಯೂ ಇಂದಿನ ಅತ್ಯಂತ ಜನಪ್ರಿಯ ಉತ್ತರಭಾರತೀಯ ಶಾಸ್ತ್ರೀಯ ಹಾಡುಗಾರರಾಗಿ ಸ್ವರಯಾತ್ರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
*
ಇದನ್ನೂ ಓದಿ : Music : ನಾಕುತಂತಿಯ ಮಿಡಿತ ; ‘ರಿಯಾಝಿನಲ್ಲಿ ನಮಗೇನು ಗೊತ್ತಿಲ್ಲವೋ ಅದನ್ನು ನುಡಿಸುತ್ತೇವೆ’ ರಾಜೀವ ತಾರಾನಾಥ
Published On - 7:17 pm, Sun, 30 January 22