Music: ವೈಶಾಲಿಯಾನ; ‘ಮುಸ್ಲಿಂ ಟೆಕ್ನಿಷಿಯನ್​ ಕಳಿಸಿಕೊಟ್ಟರೆ ಅಭ್ಯಂತರವಿಲ್ಲ ತಾನೆ?’

|

Updated on: Apr 16, 2022 | 8:39 AM

Hindu Muslim : ಹಿಂದೂ ಮೂಲಭೂತವಾದವನ್ನೇ ರಾಷ್ಟ್ರಪ್ರೇಮ, ದೇಶಭಕ್ತಿಯೆಂದು ಅರ್ಥೈಸಿಕೊಳ್ಳುವವರ ಕೈ ಮೇಲಾಗುತ್ತಿದೆ. ‘ಸರ್ವಜನಾಂಗದ ಶಾಂತಿಯ ತೋಟ’ವಾಗಿದ್ದ ನಮ್ಮ ರಾಜ್ಯದಲ್ಲಿ Islamophobia  ಹೌಹಾರುವಷ್ಟರ ಮಟ್ಟಿಗೆ ಉಲ್ಬಣವಾಗುತ್ತಿರುವುದು ಬಹಳ ವಿಷಾದನೀಯ.

Music: ವೈಶಾಲಿಯಾನ; ‘ಮುಸ್ಲಿಂ ಟೆಕ್ನಿಷಿಯನ್​ ಕಳಿಸಿಕೊಟ್ಟರೆ ಅಭ್ಯಂತರವಿಲ್ಲ ತಾನೆ?’
Follow us on

ವೈಶಾಲಿಯಾನ | Vaishaliyaana : ಪ್ರಾತಃಕಾಲದ ರಾಗವಾದ ಮಿಯಾ ಕಿ ತೋಡಿಯಲ್ಲಿ ರಿಯಾಜ್ ಮಾಡುತ್ತ , ಧೃತ್ ತೀನ್​ತಾಲ್​ದಲ್ಲಿ “ಅಬ ಮೋರೆ ನೈಯ್ಯ ಪಾರ ಕರೋ ತುಮ್, ಹಜರತ್ ನಿಜಾಮುದ್ದೀನ್ ಔಲಿಯಾ” ಎಂದು ಭಾವಪರವಶಳಾಗಿ ಹಾಡುತ್ತ ಕುಳಿತವಳಿಗೆ, ಕಂಪ್ಯೂಟರ್ ರಿಪೇರಿಗಾಗಿ ಯಾರನ್ನೋ ಬರಹೇಳಿದ್ದೆನೆಂಬುದು ನೆನಪಾಗಿ, ಅವರನ್ನು ಕಳುಹಿಸಿಕೊಡುತ್ತೇನೆಂದು ಹೇಳಿದ್ದ ವ್ಯಕ್ತಿಗೆ ಕರೆ ಮಾಡಿದೆ. ಆತ ನನಗೆ “ಮೇಡಂ, ನಿಮಗೆ ಮುಸ್ಲಿಮರನ್ನು ಮನೆಗೆ ಕಳುಹಿಸಿಕೊಟ್ಟರೆ ಅಭ್ಯಂತರವಿಲ್ಲ ತಾನೇ?” ಎಂದಾಗ ನಾನು ದಿಗ್ಭ್ರಾಂತಿಯಿಂದ  ಕಕ್ಕಾವಿಕ್ಕಿಯಾಗಿ ಆತನಿಗೆ, “ಯಾಕೆ ಈ ಪ್ರಶ್ನೆ ಕೇಳುತ್ತಿದ್ದೀರಿ? ಮುಸ್ಲಿಂ ಟೆಕ್ನೀ಼ಷಿಯನ್ ಮನೆಗೆ ಬಂದರೆ ನಾನೇಕೆ ತಕರಾರು ಮಾಡುತ್ತೇನೆ? ಹಾಗೆ ಯೋಚಿಸುವುದೂ ಕೂಡ ನನಗೆ ಶಕ್ಯವಿಲ್ಲ” ಎಂದೆ. ಆತ ನನಗೆ ಕೊಟ್ಟ ಉತ್ತರ, ನಿಜಕ್ಕೂ ನನ್ನನ್ನು ಕಂಗೆಡಿಸಿತು. “ಮೇಡಂ, ಸುಮ್ಮನೇ ಕೇಳಿದೆ ಅಷ್ಟೆ. ಕೆಲವರು ಮುಸಲ್ಮಾನರನ್ನು ಮನೆಗೆ ಸೇರಿಸಿಕೊಳ್ಳಲು ಇಷ್ಟ ಪಡುವುದಿಲ್ಲವಲ್ಲ, ಅದಕ್ಕೆ ಒಂದು ಬಾರಿ ನಿಮ್ಮನ್ನೇ ವಿಚಾರಿಸಿದರಾಯಿತು ಎಂದು ನನಗನಿಸಿತು” ಎಂದು ಆತ ಪ್ರತಿಕ್ರಿಯೆ ನೀಡಿದ. ಅದನ್ನು ಕೇಳಿ, ಗರ ಬಡಿದವಳಂತಾದ ನಾನು, ಈಗಿನ ವಿದ್ಯಮಾನಗಳನ್ನು ಸಾವಧಾನಿಸಿಕೊಂಡು ಮೆಲುಕು ಹಾಕತೊಡಗಿದೆ.
ಡಾ. ಕೆ. ಎಸ್. ವೈಶಾಲಿ (Dr. K. S. Vaishali)

 

(ಯಾನ 8, ಭಾಗ 1)

ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಕೋಮು ಸೌಹಾರ್ದತೆ, ಸಹ ಬಾಳ್ವೆ, ಸೌಹಾರ್ದತೆ – ಇವೇ ಮೊದಲಾದ ಮೌಲ್ಯಗಳೇ ಕಣ್ಮರೆಯಾಗಿ, ಎಲ್ಲೆಲ್ಲೂ ಜನಾಂಗೀಯ ದ್ವೇಷ, ಹಿಂಸೆಯ ದಳ್ಳುರಿ, ಅಸಹಿಷ್ಣುತೆಯ ಅಟ್ಟಹಾಸದ ರಣಕೇಕೆಯೇ ಕೇಳಿಬರುತ್ತಿದೆ. ಹಿಂದೂ ಮೂಲಭೂತವಾದವನ್ನೇ ರಾಷ್ಟ್ರಪ್ರೇಮ, ದೇಶಭಕ್ತಿಯೆಂದು ಅರ್ಥೈಸಿಕೊಳ್ಳುವವರ ಕೈ ಮೇಲಾಗುತ್ತಿದೆ. ‘ಸರ್ವಜನಾಂಗದ ಶಾಂತಿಯ ತೋಟ’ವಾಗಿದ್ದ ನಮ್ಮ ರಾಜ್ಯದಲ್ಲಿ Islamophobia  ಹೌಹಾರುವಷ್ಟರ ಮಟ್ಟಿಗೆ ಉಲ್ಬಣವಾಗುತ್ತಿರುವುದು ಬಹಳ ವಿಷಾದನೀಯ. ಈ ಕೋಮುವಾದಿ ಮತಾಂಧತೆಯ ಬಗ್ಗೆ ಯೋಚಿಸಿ ಬೇಸತ್ತಿದ್ದ ನನಗೆ, ನನ್ನ ಪರಮಾಪ್ತ ವಲಯವಾದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಪಂಚದಲ್ಲಿ, ಹೆಜ್ಜೆಹೆಜ್ಜೆಗೂ ಗೋಚರಿಸುವ ಅಪ್ಯಾಯಮಾನವಾದ ಹಿಂದೂ- ಮುಸ್ಲಿಂ ಸಾಮರಸ್ಯ, ಸಂಸ್ಕೃತಿಗಳ ಅಪೂರ್ವ ಸಂಗಮ, ಸಂಗೀತದ ಘರಾಣೆಗಳಲ್ಲಿ ಕಂಡು ಬರುವ ಹಿಂದೂ-ಮುಸ್ಲಿಂ ಬಾಂಧವ್ಯ ಅತ್ಯಂತ ಶ್ಲಾಘನೀಯವೆನಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಬಹುಶಃ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಗಮನಾರ್ಹವಾಗಿ ನಮ್ಮನ್ನು ಸೆಳೆಯುವ ಹಿಂದೂ- ಇಸ್ಲಾಂ ಧಾರ್ಮಿಕ ಸಂಸ್ಕೃತಿಗಳ ಅನುಪಮ ಸಮ್ಮಿಶ್ರಣ, ನಮ್ಮ ಸಮಸ್ತ ಭಾರತ ದೇಶಕ್ಕೇ ಮಾದರಿಯಾಗಬಲ್ಲ, ಅನುಸರಿಸಲು ಯೋಗ್ಯವಾದಂಥ ಶ್ರೇಷ್ಠ ಪದ್ಧತಿಯೆಂದರೆ ತಪ್ಪಾಗಲಾರದು. ನನ್ನ ಪ್ರಕಾರ ಯಾವ ಖ್ಯಾಲ್ ಗಾಯಕ ಅಥವಾ ಗಾಯಕಿಯಾಗಲೀ, ನಮ್ಮ ಖಯಾಲ್ ಸಂಗೀತದ ಮೂಲ ಪ್ರವರ್ತಕರಾದ ಮುಸ್ಲಿಂ ಸಂಗೀತ ರಚನಾಕಾರರು, ಸೂಫಿ ಸಂತರು, ಅನುಭಾವದ ಪಥದಲ್ಲಿ ಸಾಗಿದ ಮಹಾನ್ ಚೇತನರಾದ ಖ್ವಾಜಾ ಮೊಯಿನುದ್ದೀನ್ ಚಿಸ್ತಿ, ನಿಜಾಮುದ್ದೀನ್ ಔಲಿಯಾ, ಜಲಾಲುದ್ದೀನ್ ರೂಮಿ ಮೊದಲಾದವರನ್ನು ಸ್ಮರಿಸದೇ ಇರಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ನಮ್ಮ ಖ್ಯಾಲ್ ಸಂಗೀತದಲ್ಲಿ ಇವರೆಲ್ಲ ವಿಲೀನವಾಗಿಬಿಟ್ಟಿದ್ದಾರೆ. ದುರ್ದೈವವಶಾತ್ ಸಮಾಜದ ಬೇರೆ ವಲಯಗಳಲ್ಲಿ ತಾಂಡವವಾಡುತ್ತಿರುವ ಅನಾರೋಗ್ಯಕರವಾದ ಕೋಮುವಾದಿ ಮನಸ್ಥಿತಿ ಮತ್ತು ಮುಸಲ್ಮಾನರ ಬಗ್ಗೆ ದಿನೇ ದಿನೇ ಬೆಳೆಯುತ್ತಿರುವ ನಿರಾಧಾರವಾದ ಅನುಮಾನಗಳು ಹಾಗೂ ಅಸಹನೆ ಆತಂಕಕಾರಿ ಬೆಳವಣಿಗೆಗಳೆಂದು ಭಾರವಾದ ಹೃದಯದಿಂದಲೇ ಹೇಳಲಿಚ್ಛಿಸುತ್ತಿದ್ದೇನೆ.

ಇದನ್ನೂ ಓದಿ : Indian Woman: ವೈಶಾಲಿಯಾನ; ತರಗತಿಯಲ್ಲಿ ಬಳೆಗಳ ಶಬ್ದದಿಂದಲೇ ಆಕೆ ತನ್ನ ಹಾಜರಾತಿ ಸೂಚಿಸಬೇಕಾಗಿತ್ತು

ಈ ವಿಷಮ ಸನ್ನಿವೇಶದಲ್ಲಿ ಕಿಂಕರ್ತವ್ಯ ಮೂಢರಾಗಿಬಿಟ್ಟಿರುವ ನಾವು, ಹಿಂದೂಸ್ತಾನಿ ಸಂಗೀತ ಪ್ರಪಂಚದ ಕೆಲವು ಅಮೋಘ ಉದಾಹರಣೆಗಳನ್ನಾದರೂ ಪುನರಾವಲೋಕನ ಮಾಡುವುದು ಅತ್ಯಾವಶ್ಯಕವೇನೋ? ಶಾಸ್ತ್ರೀಯ  ಸಂಗೀತ ಪ್ರಕಾರಗಳಾದ ಧ್ರುಪದ್, ಖಯಾಲ್, ಠುಮ್ರಿಗಳಿಗೆ ಮುಸಲ್ಮಾನ ಕಲಾವಿದರ ಕೊಡುಗೆ ಅಪಾರ ಎಂಬ ಸತ್ಯವನ್ನಂತೂ ಯಾರೂ ಅಲ್ಲಗಳೆಯಲಾರರು. ವೇದ ಕಾಲದಿಂದಲೂ, ಖಯಾಲ್ ಸಂಗೀತದ ಉಗಮದ ಮನ್ನವೇ ತಲೆತಲಾಂತರದಿಂದ ಚಾಲ್ತಿಯಲ್ಲಿದ್ದಂಥ ಧ್ರುಪದ್ ಸಂಗೀತದ ದಿಗ್ಗಜರಲ್ಲಿಯೂ ಕೂಡ, ಬಹಳಷ್ಟು ಕಲಾವಿದರು ಮುಸಲ್ಮಾನರೇ ಆಗಿದ್ದರೆಂಬುದು ಗಮನಿಸಬೇಕಾದ ಅಂಶ. ಬೃಂದಾವನದಲ್ಲಿ ನೆಲೆಸಿದ್ದ ಸ್ವಾಮಿ ಹರಿದಾಸರ ಶಿಷ್ಯನಾಗಿದ್ದ ಮಿಯಾ ತಾನ್‌ಸೇನ್ ಧ್ರುಪದ್ ಗಾಯಕನಾಗಿದ್ದ. ಧ್ರುಪದ್ ಗಾಯನದಲ್ಲಿ ಹಾಡಲಾಗುವ ಆನೇಕ ದೇವ-ದೇವಿಯರ ಕುರಿತಾದ ರಚನೆಗಳನ್ನು ಡಾಗರ್ ಬಾನಿಯ ಮುಸ್ಲಿಂ ಗಾಯಕ – ಗಾಯಕಿಯರು ಭಾವಪೂರ್ಣವಾಗಿ ಮಂಡಿಸುತ್ತಾರೆ. ಧ್ರುಪದ್ ಸಾಮವೇದದಿಂದ ಹುಟ್ಟಿದಂಥ ಸಂಗೀತ ಪ್ರಕಾರವೆಂಬ ನಂಬಿಕೆಯಿದೆ. ಇಂದು ಫ್ರಾನ್ಸ್ ಹಾಗೂ ಇನ್ನಿತರ ಯುರೋಪಿಯನ್ ಹಾಗೂ ಅಮೆರಿಕಾ ರಾಷ್ಟ್ರಗಳಲ್ಲಿಯೂ ಧ್ರುಪದ್ ಗಾಯಕರು – ವಾದಕರಿದ್ದಾರೆ.

ಇನ್ನು ಖಯಾಲ್ ಸಂಗೀತದ ಬಗ್ಗೆ ಹೇಳುವುದಾದರೆ , ಈ ಸಂಗೀತ ಪ್ರಕಾರ ಬೆಳೆದು ಬಂದ ರೀತಿಯೇ ತುಂಬಾ ಸ್ವಾರಸ್ಯಕರವಾಗಿದೆ. ಇಂದು ಪ್ರಚಲಿತವಿರುವ ಈ ಶಾಸ್ತ್ರೀಯ ಸಂಗೀತ ಪ್ರಕಾರ ನಿಸ್ಸಂದೇಹವಾಗಿಯೂ ಹಿಂದೂ-ಮುಸ್ಲಿಂ ಜೋಡಣೆಯ ಕಲ್ಪನಾ ಲಹರಿಗಳ ಕುಲುಮೆಯಿಂದ ಹೊರಹೊಮ್ಮಿದ ಸೋಜಿಗದ, ಸುಂದರ ಸೃಷ್ಟಿಯೆನ್ನಬಹುದೇನೋ ! ಎರಡು ಸಂಸ್ಕೃತಿಗಳನ್ನು ಸಮನ್ವಯಗೊಳಿಸಿದ , ಅಗಾಧವಾದ ಹರಹನ್ನು ಹೊಂದಿದ , ವೈವಿಧ್ಯಮಯತೆಯನ್ನು ಪ್ರತಿನಿಧಿಸುವ ಈ ಬಗೆಯ ಶಾಸ್ತ್ರೀಯ ಸಂಗೀತ ಪ್ರಕಾರ ಬಹುಶಃ ಇಡೀ ವಿಶ್ವದಲ್ಲಿಯೇ ಏಕೈಕ ಪ್ರಕಾರವೆಂದರೆ ಉತ್ಪ್ರೇಕ್ಷೆಯಾಗಲಾರದು. ಇದರ ಉಗಮವೇ ಅನೇಕ ಕಥೆಗಳು-ವದಂತಿಗಳು- ಊಹಾಪೋಹಗಳ ಮಹಾಪೂರದಲ್ಲಿ ನಿಗೂಢವಾಗಿ ಉಳಿದು ಹೋಗಿದೆ. ಖಯಾಲ್ ಎಂಬ ಶಬ್ದವೇ ಪರ್ಷಿಯನ್ ಭಾಷೆಯಿಂದ ಬಂದಿದ್ದು ಇದು ‘ಕಲ್ಪನೆ’ ಎಂಬ ಅರ್ಥವನ್ನು ಹೊಂದಿದೆ. 12-13ನೇ ಶತಮಾನದ ಕಾಲಘಟ್ಟದಿಂದ ಉತ್ತರ ಭಾರತದಲ್ಲಿ ಆದ ಬದಲಾವಣೆಗಳು, ಇಸ್ಲಾಂ ಧರ್ಮದ ಪ್ರವೇಶ, ತಮ್ಮ ಸಂಗೀತ ಕಲೆಯ ಆಶ್ರಯದಾತರ ಹೊಸ ಬೇಡಿಕೆಗಳಿಗೆ ಸ್ಪಂದಿಸಿ ಸಂಗೀತ ಕಲಾವಿದರು ನಡೆಸಿದ ಅವಿಷ್ಕಾರಗಳು, ಹೊಸ ಪ್ರಯೋಗಗಳು, ರಾಗಗಳು ಮತ್ತು ಸಂಗೀತ ರಚನೆಗಳು ಪರ್ಷಿಯನ್, ಅರೇಬಿಕ್ ಮತ್ತು ಟರ್ಕಿಷ್ ಶೈಲಿಗಳಿಂದ ಪ್ರಭಾವಿತಗೊಂಡು ಕಾಲಾಂತರದಲ್ಲಿ ಖಯಾಲ್ ಸಂಗಿತದ ಜನನವಾಯಿತು ಎಂದು ಹೇಳಲಾಗುತ್ತದೆ.

ಭಾಗ 2 : Music: ವೈಶಾಲಿಯಾನ; ‘ಕರೀಮ ನಾಮ ತೇರೋ, ತೂ ಸಾಹೇಬ’ ಕಿಶೋರಿತಾಯಿ ಧ್ಯಾನಸ್ಥರಾಗಿ ಹಾಡುವಾಗ

ಹಿಂದಿನ ಯಾನ : Child Marriage: ವೈಶಾಲಿಯಾನ; ಇದು ಶಿಶುಕಾಮ ದೃಷ್ಟಿಕೋನದ ತಣ್ಣನೆಯ ಕ್ರೌರ್ಯದರ್ಶನ

ಈ ಅಂಕಣದ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/ks-vaishali

Published On - 7:36 am, Sat, 16 April 22