Shantinath Desai’s Birthday : ಮಂದಾಕಿನಿ ನಳಿನಿ ಶಾರದಾಬಾಯಿ ಬಂದಿದ್ದಾರೆ

|

Updated on: Jul 22, 2021 | 10:21 AM

Kannada Literature : ‘ಭಾರತೀಯ ನಾರಿಯರು ತಮಗೆ ಕವಿದಿರುವ ಅಂಧಕಾರದಿಂದ ಮುಕ್ತರಾಗಬೇಕಾದ ಅಗತ್ಯವನ್ನು ಕಂಡುಕೊಳ್ಳುವ ಮತ್ತು ಹಾಗೆ ಕಂಡುಕೊಳ್ಳುವುದರ ಮೂಲಕವಾಗಿಯೇ ಆವಿರ್ಭವಿಸುವ ಹೊಸಮಹಿಳೆಯ (New woman) ಹೊಸದಿಗಂತವನ್ನು ಅತ್ಯಂತ ಗಾಢವಾಗಿ ಶಾಂತಿನಾಥ ದೇಸಾಯಿಯವರು ತಮ್ಮ ಕಥೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ.’ ಡಾ. ಗಿರಿಜಾ ಶಾಸ್ತ್ರಿ

Shantinath Desai’s Birthday : ಮಂದಾಕಿನಿ ನಳಿನಿ ಶಾರದಾಬಾಯಿ ಬಂದಿದ್ದಾರೆ
ಡಾ. ಶಾಂತಿನಾಥ ದೇಸಾಯಿ
Follow us on

Shantinath Desai’s Birthday : ಡಾ. ಶಾಂತಿನಾಥ ದೇಸಾಯಿ (1927-1998) ನವ್ಯ ಕಾದಂಬರಿಕಾರರು, ಕಥೆಗಾರರು ಮತ್ತು ವಿಮರ್ಶಕರು. ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ. ವಿದ್ಯಾಭ್ಯಾಸ ಧಾರವಾಡ ಮತ್ತು ಮುಂಬೈನಲ್ಲಿ. ಕರ್ನಾಟಕ ವಿಶ್ವವಿದ್ಯಾಲಯ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ನಂತರ 1988ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ, ಜ್ಞಾನಪೀಠ ಪ್ರಶಸ್ತಿ ಸಲಹಾ ಸಮಿತಿಯ ಸಲಹೆಗಾರರಾಗಿಯೂ ಜವಾಬ್ದಾರಿ ನಿರ್ವಹಿಸಿದರು. ಮಂಜುಗಡ್ಡೆ, ಕ್ಷಿತಿಜ, ರಾಕ್ಷಸ, ಪರಿವರ್ತನೆ, ಕೂರ್ಮಾವತಾರ ಕಥಾ ಸಂಕಲನಗಳು. ಮುಕ್ತಿ, ವಿಕ್ಷೇಪ, ಸೃಷ್ಟಿ, ಬೀಜ, ಸಂಬಂಧ, ಅಂತರಾಳ, ಓಂಣಮೋ ಪ್ರಸಿದ್ಧ ಕಾದಂಬರಿಗಳು. ಮುಕ್ತಿ ಭಾರತದ ಎಲ್ಲಾ ಭಾಷೆಗಳಿಗೂ ಅನುವಾದಗೊಂಡಿದೆ. ವಿಮರ್ಶಾಕೃತಿಗಳು-ಸಾಹಿತ್ಯ ಮತ್ತು ಭಾಷೆ, ನವ್ಯ ಸಾಹಿತ್ಯ ದರ್ಶನ, ಗಂಗಾಧರ ಚಿತ್ತಾಲರ ಕಾವ್ಯ ಸೃಷ್ಟಿ, ಕನ್ನಡ ಕಾದಂಬರಿ ನಡೆದು ಬಂದ ರೀತಿ, ಎಂ.ಎನ್.ರಾಯ್. ಕೆಲ ಇಂಗ್ಲಿಷ್‌ ಕೃತಿಗಳನ್ನೂ ತಂದಿದ್ದಾರೆ. ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿದವುಗಳಲ್ಲಿ ಯು. ಆರ್. ಅನಂತಮೂರ್ತಿಯವರ ಅವಸ್ಥೆ, ಪಿ. ಲಂಕೇಶರ ಕ್ರಾಂತಿ ಬಂತು ಕ್ರಾಂತಿ ಪ್ರಮುಖವಾದವು.

*

ಶಾಂತಿನಾಥರು ಇಂಗ್ಲೆಂಡಿಗೆ ಹಡಗಿನಲ್ಲಿ ಪ್ರಯಾಣಿಸುವಾಗ ಹುಟ್ಟಿಕೊಂಡ ಕಥೆ ‘ಕ್ಷಿತಿಜ’. ಇದು ಅವರಿಗೆ ಸಾಕಷ್ಟು ಜಪ್ರಿಯತೆ ತಂದುಕೊಟ್ಟಿತು. ಹಿರಿಯ ಲೇಖಕಿ ಡಾ. ಗಿರಿಜಾ ಶಾಸ್ತ್ರಿ, ಅವರ ಇತರೇ ಕಥೆಗಳಲ್ಲಿ ಬರುವ ಮೂರು ನಾಯಕಿಯರನ್ನು ಇಲ್ಲಿ ಮುಖಾಮುಖಿಯಾಗಿಸಿದ್ದಾರೆ.

ಹೊಸಮಹಿಳೆ:

ಭಾರತೀಯ ನಾರಿಯರು ತಮಗೆ ಕವಿದಿರುವ ಅಂಧಕಾರದಿಂದ ಮುಕ್ತರಾಗಬೇಕಾದ ಅಗತ್ಯವನ್ನು ಕಂಡುಕೊಳ್ಳುವ ಮತ್ತು ಹಾಗೆ ಕಂಡುಕೊಳ್ಳುವುದರ ಮೂಲಕವಾಗಿಯೇ ಆವಿರ್ಭವಿಸುವ ಹೊಸಮಹಿಳೆಯ (New woman) ಹೊಸದಿಗಂತವನ್ನು ಅತ್ಯಂತ ಗಾಢವಾಗಿ ಶಾಂತಿನಾಥ ದೇಸಾಯಿಯವರು ತಮ್ಮ ಕಥೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರ “ಕ್ಷಿತಿಜ” ಕಥೆ ಇದಕ್ಕೆ ಒಂದು ಉತ್ತಮ ಉದಾಹರಣೆ. ಈ ಕಥೆಯಲ್ಲಿ ಲೇಖಕ ಮಧ್ಯಮ ವರ್ಗದ ಸುಶಿಕ್ಷಿತಳಾದ ಮಂದಾಕಿನಿ ಎಂಬ ನಾಯಕಿಯನ್ನು ತಮ್ಮ ಹೊಸ ಕ್ಷಿತಿಜದ ಶೋಧನೆಗೆ ತೊಡಗಿಸಿಕೊಳ್ಳುತ್ತಾರೆ. ಅವಳು ತನ್ನನ್ನು ಅಂಟಿಕೊಂಡ ಸಂಪ್ರದಾಯದ ಪೊರೆಗಳನ್ನು ಕಳಚಿಕೊಂಡು ಹೊಸ ವ್ಯಕ್ತಿತ್ವವನ್ನೇ ಪಡೆಯುತ್ತಾಳೆ. ಅದಕ್ಕೆ ಲೇಖಕರು ಚಿತ್ರಿಸಿರುವ ಹಡಗಿನ ಪ್ರಯಾಣ ಪರಿಣಾಮಕಾರಿಯಾಗಿದೆ.

ತನ್ನ ಸಾಂಪ್ರದಾಯಿಕ ನೆಲೆಗಳಿಂದ ಮುಕ್ತಳಾಗಿ ಹೊಸ ಕ್ಷಿತಿಜವನ್ನು ಅರಸುತ್ತಾ ನಡೆಯುವ ಹೊಸಹೆಣ್ಣಿನ ಯಶಸ್ಸನ್ನು ಇದು ಸಂಕೇತಿಸುತ್ತದೆ. ಮಂದಾಕಿನಿ ಇಲ್ಲಿ ಮುಖಾಮುಖಿಯಾಗುವುದು ಕೇವಲ ಪಾಶ್ಚಾತ್ಯ ಸಂಸ್ಕೃತಿಗೆ ಮಾತ್ರವಲ್ಲ, ತನ್ನ ವ್ಯಕ್ತಿತ್ವದಲ್ಲೇ ಅಡಗಿದ್ದ ಸಂಕೋಚ, ಮಡಿವಂತಿಕೆ ಮುಂತಾದ ಸಾಂಪ್ರದಾಯಕ ಭೂತಗಳಿಗೆ. ಅವುಗಳಿಂದ ಬಿಡುಗಡೆ ಹೊಂದುವುದಕ್ಕೆ ಅವಳು ಪಡೆದ ಪಾಶ್ಚಾತ್ಯ ಸಂಪರ್ಕ ಒಂದು ಸಾಧನವಾಗುತ್ತದೆ. ಆ ಮೂಲಕ ಅವಳು ತನ್ನ ಮುಂದೆ ಎದುರಾಗುವ ಹೊಸ ಬದುಕನ್ನು ಜೀವನೋತ್ಸಾಹದಿಂದ ಸ್ವೀಕರಿಸಲು ಸಿದ್ಧಳಾಗುತ್ತಾಳೆ. ‘ಒಂದು ಸಂಸ್ಕೃತಿಯ ಸಂಕೋಚಗಳು ಸೆಟೆದುಕೊಳ್ಳುವ ಮತ್ತು ಕಳಚಿಕೊಳ್ಳುವ ಬಗೆಯನ್ನು ಒಂದು ವಿಶಿಷ್ಟ ವ್ಯಕ್ತಿ ಮತ್ತು ಆವರಣದ ಸಂದರ್ಭದಲ್ಲಿ ಆತುರವಿಲ್ಲದೆಯೇ ಈ ಕಥೆಯಲ್ಲಿ ಶೋಧಿಸಲಾಗಿದೆ’ ಎಂದು ತಮ್ಮ ‘ಸಮಕಾಲೀನ’ ಕೃತಿಯಲ್ಲಿ ಜಿ.ಎಚ್. ನಾಯಕ್ ಅವರು ಅಭಿಪ್ರಾಯ ಪಟ್ಟಿರುವುದು ಈ ಕಥೆಯ ಇತ್ಯಾತ್ಮಕ ಧೋರಣೆಯನ್ನು ತೋರಿಸುತ್ತದೆ. ಭಾರತೀಯ ಹೆಣ್ಣು ತನಗೆ ಕವಿದಿರುವ ಅನೇಕ ಸಾಂಸ್ಕೃತಿಕ ‌ಶೃಂಖಲೆಗಳಿಂದ ಮುಕ್ತಗೊಂಡಾಗ ಮಾತ್ರ ಹೊಸ ಭಾರತೀಯ ನಾರಿಯ ಆವಿರ್ಭಾವವಾಗಲು ಸಾಧ್ಯ ಎಂಬ ನಿಲುವನ್ನು ದೇಸಾಯಿಯವರು ಈ ಮೂಲಕ ವ್ಯಕ್ತಪಡಿಸುತ್ತಾರೆ.

ಶಾಂತಿನಾಥರ ಕೃತಿಗಳು

ಲೈಂಗಿಕ ಅಸಮಾನತೆ: 
ಮೇಲೆ ಸೂಚಿಸಲಾದ ಸಾಂಸ್ಕೃತಿಕ ಶೃಂಖಲೆಗಳಲ್ಲಿ ಲೈಂಗಿಕ ಅಸಮಾನತೆಯೂ ಒಂದು. ಅದನ್ನು ಮೀರಲು ಪ್ರಯತ್ನಿಸುವ ಮಹಿಳೆಯರ ಅಂತರಂಗದ ತಲ್ಲಣಗಳನ್ನು ಅವರ ‘ರಾಕ್ಷಸ’ ಕಥಾಸಂಕಲನದ ಅದೇ ಹೆಸರಿನ ಕಥೆ ಹಾಗೂ ‘ಯಥಾ ಕಾಷ್ಟಂಚ ಕಾಷ್ಟಂಚ’ ಎಂಬ ಕಥೆಗಳಲ್ಲಿ ಕಾಣಬಹುದಾಗಿದೆ. ಎರಡೂ ಕಥೆಗಳಲ್ಲಿ ವಸ್ತು ಒಂದೇ. ಇಲ್ಲಿ ವಿವಾಹ ಬಾಹಿರ ಕಾಮ, ಕಥೆಯ ಬೆಳವಣಿಗೆಯ ಸಾಧನವಾಗಿ ಬಂದಿದೆ. ‘ರಾಕ್ಷಸ’ ಕಥೆಯಲ್ಲಿ ಬರುವ ನಳಿನಿ ಮಧ್ಯಮ ವಯಸ್ಸಿನ ಗೃಹಿಣಿಯಾದರೆ, ‘ಯಥಾ ಕಾಷ್ಟಂಚ ಕಾಷ್ಟಂಚ’ ಕಥೆಯಲ್ಲಿ ಬರುವ ಶಾರದಾಬಾಯಿ ಮಧ್ಯ ವಯಸ್ಸಿನ ವಿಧವೆ. ಈ ಇಬ್ಬರೂ ಮಹಿಳೆಯರು ಒಲಿಯುವುದು ವಯಸ್ಸಿನಲ್ಲಿ ತಮಗಿಂತ ಕಿರಿಯರಾದ ಸುಂದರ ತರುಣರನ್ನು. ಈ ತರುಣರ ಅವಿವಾಹಿತ ಬದುಕಿನ ಲೈಂಗಿಕ ಕನಸುಗಳಿಗೆ ಈ ಮಹಿಳೆಯರು ಪ್ರಯೋಗವಾಗುತ್ತಾರೆ. ‘ರಾಕ್ಷಸ’ ಕಥೆಯಲ್ಲಿನ ನಳಿನಿಗೆ ವಿವಾಹ ಬಾಹಿರವಾದ ಕಾಮ, ಮೋಹದ ಹೊಸತನ ರಾಕ್ಷಸನಂತೆ ಬೆಳೆದು ಆವರಿಸಿದಾಗ, ಅವಳ ಆಕರ್ಷಣೆ ತೀರುವವರೆಗೆ ಅವಳನ್ನು ಪೂರ್ತಿ ಸೂರೆ ಹೊಡೆಯುವ ಕಮಲಸರ ನಾಯಕ, ಅವಳ ಲೈಂಗಿಕ ಹಸಿವನ್ನು ಮೀರಿ ಬೆಳೆದ ರಾಕ್ಷಸನಾಗುತ್ತಾನೆ. ಅವಳಿಂದ ವಿಮುಖವಾಗುವ ನಾಯಕನ ಹೇಡಿತನವನ್ನು ಅವಳು ಅನಿವಾರ್ಯ ವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಅವನಿಗೆ ಬೇಕಾದದ್ದು ಅವಳ ಜೊತೆಗಿನ ಗುಪ್ತ ವ್ಯವಹಾರವೇ ಹೊರತು ರಾಜಾ ರೋಷವಾದ ಸಾಮಾಜಿಕ ಬದುಕಲ್ಲ: ಜವಾಬ್ದಾರಿಯಲ್ಲ.ಈ ಕಥೆಯಲ್ಲಿ ಅವನ ಪೊಳ್ಳು ಮೌಲ್ಯಗಳು ಲಂಪಟತನಗಳು ಬಯಲಾಗುತ್ತವೆ.

ಎರಡನೆಯ ‘ಯಥಾ ಕಾಷ್ಟಂಚ ಕಾಷ್ಟಂಚ’ ಕಥೆಯಲ್ಲಿ ಕಾಲೇಜಿನ ಪ್ರಿನ್ಸಿಪಾಲಳಾದ ಶಾರದಾಬಾಯಿ ಕಾಲೇಜಿಗೆ ಮುಖ್ಯ ಅತಿಥಿಯಾಗಿ ಬಂದ ಕೃಷ್ಣಕುಮಾರನ ಆಕರ್ಷಕ ವ್ಯಕ್ತಿತ್ವಕ್ಕೆ ಮಾರುಹೋಗುತ್ತಾಳೆ. ವೈಧವ್ಯ ತಂದ ಅಂತರಂಗದ ಬದುಕಿನ ಕೊರತೆಯನ್ನು ಅವನಲ್ಲಿ ತುಂಬಿಕೊಳ್ಳಲು ಪ್ರಯತ್ನಿಸುತ್ತಾಳೆ. ಇಬ್ಬರೂ ಓಡಿಹೋಗಲು ಅವನಿಗೆ ಕರೆಕೊಡುವವಳು ಅವಳೇ ಆಗಿರುತ್ತಾಳೆ.‌ಆದರೆ ಅವಳ ಜೊತೆ ಸಂಬಂಧ ಇಟ್ಟುಕೊಂಡರೂ ನಾಯಕ ಅಂತಹ ನಿರ್ಧಾರದಿಂದ ಹಿಂದೆಗೆಯುತ್ತಾನೆ. ಇಲ್ಲಿ ಕೂಡ ಶಾರದಾಬಾಯಿಗೆ ಬೇಕಾಗಿರುವುದು ಗುಪ್ತ ವ್ಯವಹಾರವಲ್ಲ. ಈ ಸಂಬಂಧವನ್ನು ಇಟ್ಟುಕೊಂಡು ಸಮಾಜದಲ್ಲಿ ಧೈರ್ಯದಿಂದ ಓಡಾಡುವ ಹಸನಾದ ಬದುಕು.

ಈ ಎರಡೂ ಕಥೆಗಳಲ್ಲಿ ಬರುವ ನಾಯಕರು ಸಾಮಾಜಿಕ ವ್ಯವಸ್ಥೆಯ ಹಿಂದೆ ಕತ್ತಲೆಯಲ್ಲಿ ರಹಸ್ಯವಾಗಿ ತಮ್ಮ ಲೈಂಗಿಕ ಪಿಪಾಸೆಯನ್ನ ತೀರಿಸಿಕೊಳ್ಳಲು ಬಯಸುತ್ತಾರೆ. ಅವಿವಾಹಿತರಾದ ಇಬ್ಬರೂ ಆರಿಸಿಕೊಳ್ಳುವುದು ತಮಗಿಂತ ವಯಸ್ಸಿನಲ್ಲಿ ಹಿರಿಯರಾದ ಮಧ್ಯಮ ವಯಸ್ಸಿನ ಮಹಿಳೆಯರನ್ನು. ಇವರ ವಯಸ್ಸೂ ಕೂಡ ನಾಯಕರ ಉದ್ದೇಶಕ್ಕೆ‌ ಸಹಕಾರಿಯಾಗಿಯೇ ಬಂದಿದೆ. ಅವರು ಈ ಮೊದಲೇ ಮದುವೆಯ ವ್ಯವಸ್ಥೆಗೆ ಒಳಗಾಗಿರುವುದು, ನಾಯಕನಿಗೆ ಒಂದು ರೀತಿಯ ರಕ್ಷಣೆಯನ್ನು ಒದಗಿಸಿದೆ. ಆದರೆ ಈ ಹೆಂಗಸರ ತುಯ್ದಾಟಗಳು ಈ ಸಾಮಾಜಿ ಕೃತೆಕತೆಯನ್ನು ಮೀರಿದ ‌ಪ್ರಾಕೃತಿಕ ತುಡಿತ , ಸಾಮಾಜಿಕವಾಗಿ ಯಾವ ಮುಖವಾಡವನ್ನೂ ಧರಿಸಿ ಹೊರಟದ್ದಲ್ಲ. ಆದರೆ ಅದನ್ನ ತೀರಿಸಲೆಂಬಂತೆ, ಪ್ರೀತಿಯ ಮುಖವಾಡ ಧರಿಸಿ ಬಂದ ನಾಯಕರ ಉದ್ದೇಶಮಾತ್ರ ಲಂಪಟತನದ್ದು.

ಹೀಗೆ ಶಾಂತಿನಾಥ ದೇಸಾಯಿಯವರು ತಮ್ಮ ಕಥೆಗಳಲ್ಲಿ ಬರುವ ಸ್ತ್ರೀಯರ ಸಾಂಪ್ರದಾಯಿಕ ಮತ್ತು ಆಧುನಿಕ, ಪ್ರಾಕೃತಿಕ ಹಾಗೂ ನಾಗರಿಕ ತಲ್ಲಣಗಳನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸಿದ್ದಾರೆ.

*

ಲೇಖಕಿ ಡಾ. ಗಿರಿಜಾ ಶಾಸ್ತ್ರಿ

ಪರಿಚಯ: ಮುಂಬೈಯಲ್ಲಿ ವಾಸಿಸುತ್ತಿರುವ ಡಾ. ಗಿರಿಜಾ ಶಾಸ್ತ್ರೀ ಕನ್ನಡದಲ್ಲಿ ಪಿಎಚ್.ಡಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಎಂ.ಎ. ಪದವಿಗಳನ್ನು ಪಡೆದಿದ್ದಾರೆ.  ಹೆಣ್ಣೊಬ್ಬಳ ದನಿ, ಕಥಾಮಾನಸಿ, ಕಥಾಸಾಹಿತ್ಯ ಒಂದು ಸ್ತ್ರೀವಾದಿ ಅಧ್ಯಯನ, ಪುಸ್ತಕ ಮತ್ತು ನವಿಲುಗರಿ, ಮಾನಸಿಯ ಲೋಕ, ತಾಯಮುಖ ಕಾಣದಲ್ಲಾ, ಸೆರಗ ಬಿಡೊ ಮರುಳೇ. ಸಂಜೀವನ- ಬೆಂಗಳೂರಿನ ಜೈವಿಕ ವನದ ನಿರ್ಮಾತೃ ಡಾ. ಲಲಿತಮ್ಮನವರ ಸಾಹಸ ಗಾಥೆ ಪುಸ್ತಕಗಳು ಪ್ರಕಟಗೊಂಡಿವೆ. ಸಾವಿತ್ರಿ: ಪುರುಷೋತ್ತಮ ರೇಗೆಯವರ ಮರಾಠಿ ಕಾದಂಬರಿ ಇವರ ಅನುವಾದ ಕೃತಿ. ಇವರು ಮುಂಬೆಳಕು ಕನ್ನಡ ಬಳಗ ಮತ್ತು  ಸೃಜನಾ: ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಘಟಕಿ ಕೂಡ.

ಇದನ್ನೂ ಓದಿ : Gangubai Hangal‘s Death Anniversary : ‘ಕಲಾವಿದೆಯರು ಧೃತಿಗೆಡ

ಬೇಕಿಲ್ಲ, ಸೋಲಿನ ಪ್ರಜ್ಞೆಯಲ್ಲಿ ಬದುಕಬೇಕಿಲ್ಲ’

Published On - 10:16 am, Thu, 22 July 21