Shantinath Desai‘s Birthday : ಸಾಹಿತ್ಯಪ್ರಿಯರಿಗೆ ಇಂದೇ ‘ದೇಸಾಯಿ ಕಥನ’ ಉಡುಗೊರೆ

|

Updated on: Jul 22, 2021 | 2:48 PM

Short Stories : ‘ಈ ಎಲ್ಲ ಕತೆಗಳನ್ನು ನಾನು ‘ಆಧುನಿಕ ಕತೆ’ಗಳೆಂದು ಕರೆದಿದ್ದೇನೆ. ‘ಆಧುನಿಕ’ವೆಂದರೇನು ಎಂದು ಸ್ಪಷ್ಟಪಡಿಸುವ ಹೊಣೆ ನನ್ನ ಮೇಲಿದೆ. ಬಾಹ್ಯ ಘಟನೆಗಳಿಗಿಂತ ಹೆಚ್ಚಾಗಿ ಮನಸ್ಸಿನ ‘ಘಟನೆ’ಗಳನ್ನು ಚಿತ್ರಿಸುವುದರಲ್ಲಿ ಆಧುನಿಕತೆ ಇದೆ ಎಂದು ನನ್ನ ನಂಬಿಗೆ. ನನ್ನ ಆರೂ ಕತೆಗಳಲ್ಲಿ ನಾನು ಮನಶ್ಚಿತ್ರಣಕ್ಕೇ ಪ್ರಾಧಾನ್ಯತೆ ಕೊಡಲು ಯತ್ನಿಸಿದ್ದೇನೆ. ಆದುದರಿಂದ ಕೆಲವು ಕಡೆ ಕಥಾಂಶ ಕಡಿಮೆಯೆಂದು ಕೆಲವರಿಗೆ ತೋರಬಹುದು. ಮನಸ್ಸಿನ ಈ ಸೂಕ್ಷ್ಮ ವಿಶ್ಲೇಷಣೆಗೆ ಅವಶ್ಯವಾದ ತಂತ್ರದಲ್ಲಿಯೂ ನಾವೀನ್ಯತೆ ಬರುವದು ಸಹಜ.’ ಡಾ. ಶಾಂತಿನಾಥ ದೇಸಾಯಿ

Shantinath Desai‘s Birthday : ಸಾಹಿತ್ಯಪ್ರಿಯರಿಗೆ ಇಂದೇ ‘ದೇಸಾಯಿ ಕಥನ’ ಉಡುಗೊರೆ
ಹಿರಿಯ ವಿಮರ್ಶಕ ಟಿ.ಪಿ. ಅಶೋಕ
Follow us on

‘ಗಾಂಧಿಯುಗದಲ್ಲಿ ಬರೆದ ರೀತಿಯಲ್ಲೆ ಇನ್ನೂ ಬರೆದರೆ ಬಹುಶಃ ಅದು ಕಾವ್ಯಾಭಾಸವಾಗುತ್ತದೆ. ಇಲ್ಲವೇ ಸತ್ವಹೀನ ಕಾವ್ಯವಾಗುತ್ತದೆ; ಚರ್ವಿತಚರ್ವಣವಾಗುತ್ತದೆ. ಆಗ ಭಾವವನ್ನು ಕೊಲ್ಲುವ ಮಾತು ಬೇತಾಳದಂತೆ ನಮ್ಮ ಬೆನ್ನುಹತ್ತಿ, ಸಮಾಜದ ಬೆಳವಣಿಗೆಗೆ ಮಾರಕವಾಗುತ್ತದೆಂದು ನನಗೆ ತೋರುತ್ತದೆ. ಆದಕಾರಣ ಈಗ ಕಾಣುತ್ತಿರುವ ಹೊಸ ಮನೋಧರ್ಮವನ್ನು ವ್ಯಕ್ತಪಡಿಸಲು ಹೊಸ ನಾಲಗೆ, ಹೊಸ ನುಡಿಕಟ್ಟು ರೂಪುಗೊಳ್ಳಬೇಕಾಗಿದೆ. ಈಗ ಬರೆಯುತ್ತಿರುವ ಕವಿಗಳೆಲ್ಲ ಈ ಕುರಿತು ಯೋಚನೆ ಮಾಡಬೇಕಾದದ್ದು ಅನಿವಾರ್ಯ. ಹೊಸಹೊಸತಾಗಿ ಬರೆಯುತ್ತಿರುವ ತರುಣ ಕವಿಗಳಂತೂ ಈ ಸಮಸ್ಯೆಯನ್ನು ಎದುರಿಸದೆ ಗತ್ಯಂತರವಿಲ್ಲ. ನಮ್ಮ ಹಿರಿಯ ಕವಿಗಳ ದಾರಿಯಲ್ಲಿ ನಡೆಯುವುದರಿಂದಲೂ ಅಷ್ಟು ಕವಿತೆ ಬಂದೀತು; ಆದರೆ ಅದಕ್ಕೆ ಜೀವಕೊಡುವ ಸತ್ವವಾಗಲೀ ಹೊಸ ಸಮಾಜದ ವಾಣಿಯಾಗುವ ಸಾಮರ್ಥ್ಯವಾಗಲೀ ಖಂಡಿತ ಬರಲಾರದು’

*

ಕೃತಿ : ದೇಸಾಯಿ ಕಥನ (ಡಾ. ಶಾಂತಿನಾಥ ದೇಸಾಯಿ ಅವರ ಸಮಗ್ರ ಸಾಹಿತ್ಯ ಅಧ್ಯಯನ)
ಲೇ : ಟಿ.ಪಿ. ಅಶೋಕ
ಬೆಲೆ : ರೂ. 125
ಪುಟ : 124
ಮುಖಪುಟ ವಿನ್ಯಾಸ : ಜಿ. ಅರುಣಕುಮಾರ

ಪ್ರಕಾಶನ: ಅಭಿನವ, ಬೆಂಗಳೂರು

ಕನ್ನಡದ ಹಿರಿಯ ವಿಮರ್ಶಕ, ಅನುವಾದಕ ಟಿ.ಪಿ. ಅಶೋಕ ಅವರ ಹೊಸ ಕೃತಿ ‘ದೇಸಾಯಿ ಕಥನ’ ಇಂದಿನಿಂದಲೇ ಓದುಗರಿಗೆ ಲಭ್ಯ. ಅದರ ಆಯ್ದ ಭಾಗ ಇಲ್ಲಿದೆ.

*

ಶಾಂತಿನಾಥ ದೇಸಾಯಿ (1927-1998) ಅವರು ಸಣ್ಣಕತೆಗಳನ್ನು ಬರೆಯಲು ಪ್ರಾರಂಭಿಸಿದಾಗ ಆಧುನಿಕ ಕನ್ನಡ ಸಾಹಿತ್ಯವು ಒಂದು ಮಹತ್ತರ ತಿರುವನ್ನು ಎದುರು ನೋಡುತ್ತಿತ್ತು.

ನಡೆದು ಬಂದ ದಾರಿಕಡೆಗೆ
ತಿರುಗಿಸಬೇಡ
ಕಣ್ಣ
ಹೊರಳಿಸಬೇಡ

ಎಂದು ಗೋಪಾಲಕೃಷ್ಣ ಅಡಿಗರು ಸ್ವಯಂ ತಮಗೆ ಮತ್ತು ತಮ್ಮ ತರುಣ ಸಮಕಾಲೀನರಿಗೆ ಒಟ್ಟೊಟ್ಟಿಗೇ ಹೇಳಲಾರಂಭಿಸಿದ್ದರು. ತಮ್ಮ ಮೂರನೆಯ ಕವನ ಸಂಕಲನ ‘ನಡೆದು ಬಂದ ದಾರಿ’(1952)ಗೆ ಬರೆದ ಮುನ್ನುಡಿಯಲ್ಲಿ ಅವರು ಈ ಸಂಕಲನಕ್ಕೆ ಆ ಶೀರ್ಷಿಕೆ ಕೊಡಲು ಒಂದು ಕಾರಣ ‘ಈವರೆಗೆ ನಾನು ಕವನ ರಚನೆ ಮಾಡಿದ ರೀತಿಯಲ್ಲಿ ಬಹುಶಃ ಇನ್ನು ಮುಂದೆ ಮಾಡಲಾರೆ ಎಂಬುದರ ಸೂಚನೆ’ ಎಂದು ಹೇಳಿಕೊಂಡಿರುವುದು ಇಂದು ಚಾರಿತ್ರಿಕವಾಗಿ ಬಹುಮುಖ್ಯವಾಗಿ ಕಂಡುಬರುತ್ತದೆ. ಅಷ್ಟೇ ಅಲ್ಲ, ‘ಆಧುನಿಕ ಕನ್ನಡ ಕಾವ್ಯದಲ್ಲಿ ಒಂದು ಘಟ್ಟ ಕಳೆದು ಈಗ ಇನ್ನೊಂದು ಘಟ್ಟ ಮೊದಲಾಗುತ್ತಿದೆ’ ಎಂದು ಅದೇ ಮುನ್ನುಡಿಯಲ್ಲಿ ಅವರು ಉದ್ಘೋಷಿಸಿದ್ದು ಮುಂದೆ ಕಾವ್ಯ ಮಾತ್ರವಲ್ಲ; ಸಣ್ಣಕತೆ, ಕಾದಂಬರಿ, ನಾಟಕ, ವಿಮರ್ಶೆಗಳ ವಿಚಾರದಲ್ಲೂ ಕ್ರಮೇಣ ನಿಜವಾಗಿದ್ದು ಇತಿಹಾಸವಾಗಿದೆ. ಅಡಿಗರ ಮುನ್ನುಡಿ ಸಮಕಾಲೀನ ವಾಸ್ತವಿಕ ಪರಿಸ್ಥಿತಿಗೆ ಹಿಡಿದ ಕನ್ನಡಿ ಮಾತ್ರವಲ್ಲ; ಮುಂದಿನ ಬೆಳವಣಿಗೆಗಳನ್ನು ಸೂಚಿಸುವ ಕಾಲಜ್ಞಾನವೆಂಬಂತೆಯೂ ಭಾಸವಾಗುತ್ತದೆ:

‘ಕಾವ್ಯರೂಪದಲ್ಲಿ ಬದಲಾವಣೆ ಆಗಬೇಕಾದ ಕಾಲ ಆಗಲೇ ಬಂದುಬಿಟ್ಟಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವತನಕ ಇದ್ದ ವಾತಾವರಣ ಈಗ ಸಮೂಲ ಪರಿವರ್ತನೆಗೊಂಡಿದೆ. ಸ್ವಾತಂತ್ರ್ಯ ಸಂಗ್ರಾಮದ ಉತ್ಸಾಹ ಉದ್ವೇಗ ಆದರ್ಶಪರವಶತೆಯ ಹಾರಾಟ ಮುಗಿದು ಈಗ ನಮ್ಮ ಮನಸ್ಸು ಮತ್ತೆ ನೆಲಕ್ಕಿಳಿದಿದೆ. ಮೋಡವಾಗಿ ಮೇಲೇರಿದ ಮನಸ್ಸು ಮಳೆಯಾಗಿ ಬಿದ್ದು ಮತ್ತೆ ಹಳ್ಳಕೊಳ್ಳಗಳಲ್ಲಿ ತುಂಬಿಕೊಂಡಿದೆ. ತಳದಲ್ಲಿ ಕೂತಿದ್ದ ಕೊಳೆ ಕಸ ರಾಡಿಯೆಲ್ಲ ಮೇಲೆದ್ದು ಬಂದು ಕನ್ನಡಿಯಂಥ ನೀರು ಕಲಕಿದೆ. ಹೊಸ ಆದರ್ಶಕ್ಕಾಗಿ ಹೊಸ ಕಣಸಿಗಾಗಿ ದೇಶದ ಮನಸ್ಸು ಹಸಿದು ಕಾಯುತ್ತಿದೆ. ಇಂಥ ವಾತಾವರಣ ಸುತ್ತಮುತ್ತಲೂ ಇರುವಾಗ ಜೀವನಾವಲಂಬಿಯಾದ ಕಾವ್ಯವೂ ಪರಿವರ್ತನೆಗೊಳ್ಳುವುದು ಸಹಜ. ಗಾಂಧಿಯುಗದಲ್ಲಿ ಬರೆದ ರೀತಿಯಲ್ಲೆ ಇನ್ನೂ ಬರೆದರೆ ಬಹುಶಃ ಅದು ಕಾವ್ಯಾಭಾಸವಾಗುತ್ತದೆ. ಇಲ್ಲವೇ ಸತ್ವಹೀನ ಕಾವ್ಯವಾಗುತ್ತದೆ; ಚರ್ವಿತಚರ್ವಣವಾಗುತ್ತದೆ. ಆಗ ಭಾವವನ್ನು ಕೊಲ್ಲುವ ಮಾತು ಬೇತಾಳದಂತೆ ನಮ್ಮ ಬೆನ್ನುಹತ್ತಿ, ಸಮಾಜದ ಬೆಳವಣಿಗೆಗೆ ಮಾರಕವಾಗುತ್ತದೆಂದು ನನಗೆ ತೋರುತ್ತದೆ. ಆದಕಾರಣ ಈಗ ಕಾಣುತ್ತಿರುವ ಹೊಸ ಮನೋಧರ್ಮವನ್ನು ವ್ಯಕ್ತಪಡಿಸಲು ಹೊಸ ನಾಲಗೆ, ಹೊಸ ನುಡಿಕಟ್ಟು ರೂಪುಗೊಳ್ಳಬೇಕಾಗಿದೆ. ಈಗ ಬರೆಯುತ್ತಿರುವ ಕವಿಗಳೆಲ್ಲ ಈ ಕುರಿತು ಯೋಚನೆ ಮಾಡಬೇಕಾದದ್ದು ಅನಿವಾರ್ಯ. ಹೊಸಹೊಸತಾಗಿ ಬರೆಯುತ್ತಿರುವ ತರುಣ ಕವಿಗಳಂತೂ ಈ ಸಮಸ್ಯೆಯನ್ನು ಎದುರಿಸದೆ ಗತ್ಯಂತರವಿಲ್ಲ. ನಮ್ಮ ಹಿರಿಯ ಕವಿಗಳ ದಾರಿಯಲ್ಲಿ ನಡೆಯುವುದರಿಂದಲೂ ಅಷ್ಟು ಕವಿತೆ ಬಂದೀತು; ಆದರೆ ಅದಕ್ಕೆ ಜೀವಕೊಡುವ ಸತ್ವವಾಗಲೀ ಹೊಸ ಸಮಾಜದ ವಾಣಿಯಾಗುವ ಸಾಮರ್ಥ್ರಯವಾಗಲೀ ಖಂಡಿತ ಬರಲಾರದು’ (ಸಮಗ್ರ ಕಾವ್ಯ, 1987, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು).

ಮುಂದೆ ಅಡಿಗರ ‘ಚಂಡೆ ಮದ್ದಳೆ’ (1954) ಮತ್ತು ‘ಭೂಮಿಗೀತ’ (1959) ಕವನ ಸಂಕಲನಗಳು ಪ್ರಕಟವಾಗಿ ಆಧುನಿಕ ಕನ್ನಡ ಕಾವ್ಯ ಹೊಸತೊಂದು ಮಜಲನ್ನು ನಿಶ್ಚಿತವಾಗಿ ಮುಟ್ಟಿತ್ತು. ಅಷ್ಟೇ ಅಲ್ಲ; 50ರ ದಶಕದ ಪ್ರಾರಂಭದಲ್ಲಿ ಸಣ್ಣಕತೆಯ ರಚನೆಯಲ್ಲಿಯೂ ಹೊಸ ಒಲವುಗಳು ಕಾಣಲಾರಂಭಿಸಿದ್ದವು. ಯಶವಂತ ಚಿತ್ತಾಲ, ಯು. ಆರ್. ಅನಂತಮೂರ್ತಿ, ಶಾಂತಿನಾಥ ದೇಸಾಯಿ, ರಾಜಲಕ್ಷ್ಮಿ ಎನ್. ರಾವ್ ಮುಂತಾದವರ ಮೊದಲ ಕತೆಗಳು ರಚನೆಯಾಗತೊಡಗಿದ್ದು ಅವು ಹಿಂದಿನ ತಲೆಮಾರಿನವರ ಕತೆಗಳಿಗಿಂತ ತುಂಬಾ ಭಿನ್ನವಾಗಿ ಗೋಚರಿಸುತ್ತಿದ್ದವು. 1967ರಲ್ಲಿ ಬರೆದ ‘ಕನ್ನಡ ಸಣ್ಣ ಕತೆಗಳಲ್ಲಿ ನವ್ಯತೆ’ ಎಂಬ ಲೇಖನದಲ್ಲಿ ಶಾಂತಿನಾಥ ದೇಸಾಯಿ ಹೇಳುತ್ತಾರೆ; ‘ಸುಮಾರು 1950ರಿಂದ ಕನ್ನಡ ಸಾಹಿತ್ಯದ ಸರ್ವ ಅಂಗಗಳಲ್ಲಿ ಪ್ರವಹಿಸಲು ಸುರುವಾದ ನವೀನ ಪ್ರಜ್ಞೆಯು ಮೊದಲು ಮೈದೋರಿದ್ದು ಮುಖ್ಯವಾಗಿ ಕಾವ್ಯ ಮತ್ತು ಸಣ್ಣಕತೆಗಳಲ್ಲಿ’ (1990, ನವ್ಯ ಸಾಹಿತ್ಯ ದರ್ಶನ, ಪರಿಸರ ಸಾಹಿತ್ಯ ಪ್ರಕಾಶನ, ಶಿವಮೊಗ್ಗ, ಪುಟ 80).

ಅನಂತಮೂರ್ತಿಯವರ ಮೊದಲ ಕೃತಿ ‘ಎಂದೆಂದೂ ಮುಗಿಯದ ಕಥೆ’ ಎಂಬ ಆರು ಕಥೆಗಳ ಸಂಕಲನ ಪ್ರಕಟವಾದದ್ದು 1955ರಲ್ಲಿ. ಈ ಸಂಕಲನದ ಮೊದಲ ಕಥೆಯ ಶೀರ್ಷಿಕೆಯೂ ‘ಎಂದೆಂದೂ ಮುಗಿಯದ ಕಥೆ’. ಈ ಸಂಕಲನಕ್ಕೆ ಮುನ್ನುಡಿ ಬರೆದ ಗೋಪಾಲಕೃಷ್ಣ ಅಡಿಗರು ಎರಡು ಮುಖ್ಯ ಸಂಗತಿಗಳನ್ನು ಸೂಚಿಸಿದ್ದಾರೆ: ‘ಇಲ್ಲಿನ ಕಥೆಗಳ ತಂತ್ರ ಹೊಚ್ಚ ಹೊಸದು; ಕನ್ನಡಕ್ಕೆ ನವ್ಯ ಎನ್ನುವಂಥದು…ಕವಿ ಮತ್ತು ಉತ್ತಮ ಕಥೆಗಾರ ಇವರ ನಡುವೆ ಯಾವ ವ್ಯತ್ಯಾಸವೂ ಇಲ್ಲ ಎಂಬ ಮಾತನ್ನು ಇಲ್ಲಿ ಈ ಕಥೆಗಳು ಸಾಧಿಸಿ ತೋರಿಸುತ್ತವೆ’.

ಕುತೂಹಲದ ಸಂಗತಿ ಎಂದರೆ ಸ್ವತಃ ಅನಂತಮೂರ್ತಿಯವರು ತಮ್ಮ ಆತ್ಮಕಥೆ ‘ಸುರಗಿ’ (2012) ಮತ್ತು ಇನ್ನೂ ಅನೇಕ ಕಡೆಗಳಲ್ಲಿ ಹೇಳಿಕೊಂಡಿರುವಂತೆ ಆ ಕಾಲದಲ್ಲಿ ಅವರು ‘ನವ್ಯ ವಿರೋಧಿ ಪ್ರಗತಿಶೀಲ ಪಂಥ’ ದವರಾಗಿದ್ದರಂತೆ: ‘ಈ ಸಮಯದಲ್ಲೆ, ನವ್ಯದ ವಿರೋಧದಲ್ಲೆ ನಾನು ಬರೆದ ಕತೆಗಳನ್ನು ತೆಗೆದುಕೊಂಡು ಹೋಗಿ ಆನಂದರಿಗೆ ಕೊಟ್ಟೆ. ಅವರು ಅದನ್ನು ಓದಿ ಒಂದು ರೆಡ್ ಪೆನ್ಸಿಲ್, ಒಂದು ಬ್ಲೂ ಪೆನ್ಸಿಲ್‍ನಲ್ಲಿ ಕೆಲವಕ್ಕೆ ರೈಟ್, ಕೆಲವಕ್ಕೆ ರಾಂಗ್ ಗುರುತು ಹಾಕಿ, ‘ನೀನು ಬರೆಯುತ್ತಿರುವುದು ನವ್ಯ ಕತೆ ಇದ್ದಂತಿದೆ. It is locked in riddles and the key is to which only the writer has ಅಂತ ಬರೆದರು’. ಅನಂತಮೂರ್ತಿಯವರು ‘ಸುರಗಿ’ಯಲ್ಲಿ ಮತ್ತೊಂದೆಡೆ ಮಾಡಿಕೊಂಡಿರುವ ಟಿಪ್ಪಣಿಯೂ ಗಮನಿಸತಕ್ಕಂತಿದೆ: ‘ಶೆಲ್ಲಿ, ಅನಕೃ, ನವೋದಯ ಬರಹದ ಮೂಡಿನಲ್ಲಿದ್ದಾಗಲೋ, ಅದರಿಂದ ಹೊರಬರುತ್ತಿದ್ದ ಕಾಲದಲ್ಲೋ ನಾನು ‘ಎಂದೆಂದೂ ಮುಗಿಯದ ಕತೆ’ ಸಂಕಲನದ ಎಲ್ಲ ಕತೆಗಳನ್ನೂ ಬರೆದದ್ದು. ನನ್ನ ಬದುಕಿನ ದೃಷ್ಟಿಕೋನವೇ ಬದಲಾಗುವಂತಹ ಕೃತಿಗಳ ಓದು ಈ ಸಮಯದಲ್ಲಿ ನನಗೆ ಸಾಧ್ಯವಾಯಿತು. ಹಾಗೆಯೇ ನನ್ನೊಳಗೆ ನಾನು ಭಾಷೆಯ ಹೊಸದೊಂದು ಹುಡುಕಾಟದಲ್ಲಿ ತೊಡಗಿಕೊಂಡಿದ್ದೆ’.

ಶಾಂತಿನಾಥ ಸಾಹಿತ್ಯ

ರಾಜಲಕ್ಷ್ಮಿ ಎನ್. ರಾವ್ ಅವರ ಕಥಾಸಂಕಲನ ‘ಸಂಗಮ’ 1954ರಲ್ಲಿ ಹೊರಬಂದಿತು. ಚಿತ್ತಾಲರ ಮೊದಲ ಕಥಾಸಂಕಲನ ‘ಸಂದರ್ಶನ’ 1957ರಲ್ಲಿಯೂ ಎರಡನೆಯ ಸಂಕಲನ ‘ಅಬೋಲೀನ’ 1960ರಲ್ಲಿಯೂ ಪ್ರಕಟವಾದವು. ಶಾಂತಿನಾಥ ದೇಸಾಯಿ ಅವರ ಪ್ರಥಮ ಸಂಕಲನ ‘ಮಂಜುಗಡ್ಡೆ’ ಪ್ರಕಟವಾದದ್ದು 1959ರಲ್ಲಿ. ಅವರ ಮೊದಲ ಕಾದಂಬರಿ ‘ಮುಕ್ತಿ’ 1961ರಲ್ಲಿ ಪ್ರಕಟವಾಯಿತು. 1969ರಲ್ಲಿ ಬರೆದ ‘ಕನ್ನಡ ಕಾದಂಬರಿಗಳಲ್ಲಿ ನವ್ಯತೆ’ ಎಂಬ ಲೇಖನದಲ್ಲಿ ಗಿರಡ್ಡಿ ಗೋವಿಂದರಾಜರು ‘ಮುಕ್ತಿ’ ಎಲ್ಲ ರೀತಿಯಿಂದಲೂ ನವ್ಯವಾದ ಮೊದಲ ಕನ್ನಡ ಕಾದಂಬರಿ ಎನ್ನಬಹುದು’ ಎಂದು ಗುರುತಿಸಿದ್ದಾರೆ. ಗಿರೀಶ ಕಾರ್ನಾಡರ ನಾಟಕಗಳು ‘ಯಯಾತಿ’ 1961ರಲ್ಲೂ, ‘ತುಘಲಖ್’ 1964ರಲ್ಲೂ ಪ್ರಕಟವಾದವು ಎಂಬುದನ್ನೂ ಇಲ್ಲಿ ನೆನೆಯಬಹುದಾಗಿದೆ.
ಅಡಿಗರ `ಭೂಮಿಗೀತ’ ಕವನ ಸಂಕಲನಕ್ಕೆ ಅನಂತಮೂರ್ತಿಯವರು ಬರೆದಿರುವ ಮುನ್ನುಡಿ (1959) ಆಧುನಿಕ ಕನ್ನಡ ಸಾಹಿತ್ಯವಿಮರ್ಶೆಯ ಒಂದು ಕ್ಲಾಸಿಕ್. ಅಡಿಗರ ಕಾವ್ಯ ವಿಮರ್ಶೆಯಲ್ಲಿ ಇಂದು ಚಾಲ್ತಿಯಲ್ಲಿರುವ ವಿಚಾರಗಳು ಅನಂತಮೂರ್ತಿಯವರು ಅಂದು ಚಿಂತಿಸಿದ್ದ ವಿಚಾರಗಳ ರೂಪಾಂತರಗಳೇ ಆಗಿವೆ.

ಆ ಮುನ್ನುಡಿ ಅಷ್ಟು ಅನನ್ಯವೂ, ಪ್ರಭಾವಶಾಲಿಯೂ ಆಗಿದೆ. ಡಾ. ಜಿ. ಎಸ್. ಶಿವರುದ್ರಪ್ಪನವರ ಪ್ರಕಾರ ಕನ್ನಡದಲ್ಲಿ ವಿಶ್ಲೇಷಣಾತ್ಮಕ ವಿಮರ್ಶೆ ಪ್ರಾರಂಭವಾದದ್ದೇ ಅನಂತಮೂರ್ತಿಯವರಿಂದ. ಶಿವರುದ್ರಪ್ಪನವರು ಈ ಹೇಳಿಕೆಯನ್ನು ಒಟ್ಟು ಕನ್ನಡ ವಿಮರ್ಶೆಯ ಸಂದರ್ಭದಲ್ಲಿ ಮಾಡಿರುವುದು ಗಮನಾರ್ಹ:
‘ಕೇವಲ ಅಭಿರುಚಿ ನಿರ್ಮಾಣಕ್ಕಷ್ಟೇ ತನ್ನನ್ನು ಮೀಸಲು ಮಾಡಿಕೊಂಡು ಬಹುಮಟ್ಟಿಗೆ ಪರಿಚಯಾತ್ಮಕವಾಗಿಯೂ, ಪ್ರಶಂಸಾಪರವೂ ಆಗಿ ಕೂತಿದ್ದ ಕನ್ನಡ ವಿಮರ್ಶೆ ನಿರ್ದಿಷ್ಟ ತತ್ವಗಳಿಂದ ಕೂಡಿದ ಒಂದು ಶಾಸ್ತ್ರೀಯ ಪದ್ಧತಿಯಮಟ್ಟಕ್ಕೆ ಏರಿದ್ದೇ ತೀರ ಈಚೆಗೆ. ಒಂದು ಕೃತಿಯ ನಿರ್ದಿಷ್ಟ ವಿಮರ್ಶೆ ಸಾಧ್ಯವಾಗಬೇಕಾದರೆ ಕೃತಿಯ ಎಲ್ಲ ವಿವರಗಳನ್ನೂ ಅದರ ಒಟ್ಟು ಹಿನ್ನೆಲೆಗೆ ಸಂಬಂಧಿಸಿ ತೂಗಬಲ್ಲ ತಿಳುವಳಿಕೆ ಅಗತ್ಯವೆಂಬ ಅರಿವು ಈಗ ಹೆಚ್ಚಾಗಿ ಬೆಳೆಯುತ್ತಿದೆ… ನವ್ಯಕಾವ್ಯದ ಪ್ರಮುಖ ಕೊಡುಗೆ ಎಂದರೆ, ಕವಿಗಳಲ್ಲಿ ಹಾಗೂ ಓದುಗರಲ್ಲಿ ವಿಮರ್ಶಕ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದು. ಪ್ರಾಯೋಗಿಕ ವಿಮರ್ಶೆಯ ಪದ್ಧತಿ ಕೂಡ ಇದೇ ಕಾಲದಲ್ಲೂ ಹೆಚ್ಚಾಗಿ ಬಳಕೆಗೆ ಬಂದಿತು. ಆ ಮುಂಚೆ ಕೂಡಾ ಸ್ಥೂಲವಾಗಿ ಪ್ರಾಯೋಗಿಕ ವಿಮರ್ಶೆ ಎನ್ನಬಹುದಾದ ಕೆಲವು ಬರಹಗಳು ಅಲ್ಲಲ್ಲಿ ಕಾಣಿಸಿಕೊಂಡಿದ್ದವು. ಟಿ. ಎಸ್. ವೆಂಕಣ್ಣಯ್ಯನವರು ಪಂಪ ಭಾರತದ ಪದ್ಯವೊಂದಕ್ಕೆ ಮಾಡಿದ ವ್ಯಾಖ್ಯಾನ, ಕುವೆಂಪು ಅವರು ಆಚ್ಫೋದ ಸರೋವರದ ವರ್ಣನೆ ಕುರಿತ ಪದ್ಯವೊಂದನ್ನು ವಿಶ್ಲೇಷಿಸಿರುವುದು ಇಂಥ ಒಂದೆರಡು ಉದಾಹರಣೆಗಳು. ಇಷ್ಟಾದರೂ ಒಂದು ಕೃತಿಯ ಸಮಗ್ರ ವಿಶ್ಲೇಷಣೆ ಹೊರಬರಲಿಲ್ಲ. ಮಾತ್ರವಲ್ಲ, ಸಾಹಿತ್ಯ ವಿಮರ್ಶೆಯ ಹೆಸರಿನಲ್ಲಿ ಹೊರಬಂದ ಅನೇಕ ಲೇಖನಗಳು, ಗ್ರಂಥಗಳು ಕೂಡ ಇಂಥ ವೈಜ್ಞಾನಿಕ ದೃಷ್ಟಿಗೆ ಹೊರತಾಗಿಬಿಟ್ಟವು. ಕನ್ನಡದಲ್ಲಿ ಹೊರಬರುವ ಮೊಟ್ಟಮೊದಲ ಸಮರ್ಥ ವಿಶ್ಲೇಷಣೆಯೆಂದರೆ ಅಡಿಗರ ‘ಭೂತ’ ಕವನವನ್ನು ಕುರಿತು ಯು. ಆರ್. ಅನಂತಮೂರ್ತಿ ಅವರು ಮಾಡಿದ ವಿಶ್ಲೇಷಣೆ’ (1983, ಕಾವ್ಯಾರ್ಥ ಚಿಂತನೆ).
ಅಂದರೆ ನವ್ಯ ವಿಮರ್ಶೆ ಎಂದು ಹೇಳಬಹುದಾದ ಹೊಸ ವಿಮರ್ಶಾ ವಿಧಾನವೂ 1950ರ ದಶಕದಲ್ಲಿ ಆರಂಭವಾಯಿತು ಎಂಬುದು ಚಾರಿತ್ರಿಕವಾಗಿ ಮಹತ್ವದ ಸಂಗತಿಯಾಗಿದೆ.

2
ತಮ್ಮ ಮೊದಲ ಸಂಕಲನ ‘ಮಂಜುಗಡ್ಡೆ’ಯ ಲೇಖಕರ ಮಾತುಗಳಲ್ಲಿ (1959) ಶಾಂತಿನಾಥರು ‘ಆಧುನಿಕತೆ’, ‘ನವ್ಯತೆ’ ಇವುಗಳ ಸ್ವರೂಪ ಮತ್ತು ಸಾಧ್ಯತೆಗಳ ಬಗ್ಗೆ ನೀಡಿರುವ ಸೂಚನೆಗಳನ್ನು ಅಗತ್ಯ ಗಮನಿಸಬೇಕು. ಕನ್ನಡದಲ್ಲಿ ಸಣ್ಣಕತೆಗಳನ್ನು ಬರೆದ ಮೊದಲಿಗರಲ್ಲಿ ಒಬ್ಬರಾದ ಮಾಸ್ತಿಯವರು ತಮ್ಮ ಮೊದಲ ಸಂಕಲನ (1920)ದ ಮುನ್ನುಡಿಯಲ್ಲಿ ಹೊಸಗನ್ನಡ ಸಾಹಿತ್ಯದ ಈ ಹೊಸಪ್ರಕಾರ ಕುರಿತು ತಮ್ಮ ಓದುಗರಿಗೆ ಒಂದು ಬಗೆಯ ಕಥಾ ಸಹೃದಯತೆಯ ಶಿಕ್ಷಣ ಕೊಡುವಂಥ ಮಾತುಗಳನ್ನು ಬರೆದಿರುವಂತೆ, ಇಲ್ಲಿ ತಮ್ಮ ಮೊದಲ ಸಂಕಲನದ ಮುನ್ನುಡಿಯಲ್ಲಿ 50ರ ದಶಕದಲ್ಲಿ ಕಾಣಿಸಿಕೊಂಡ ಹೊಸಬಗೆಯ ಕತೆಗಳನ್ನು ಅನುಲಕ್ಷಿಸಿ ಅವುಗಳಿಗೆ ಓದುಗರನ್ನು ಸಜ್ಜುಗೊಳಿಸುವಂಥ ರೀತಿಯಲ್ಲಿ ಹೀಗೆ ಹೇಳುತ್ತಾರೆ:

‘ಈ ಎಲ್ಲ ಕತೆಗಳನ್ನು ನಾನು ‘ಆಧುನಿಕ ಕತೆ’ಗಳೆಂದು ಕರೆದಿದ್ದೇನೆ. ‘ಆಧುನಿಕ’ವೆಂದರೇನು ಎಂದು ಸ್ಪಷ್ಟಪಡಿಸುವ ಹೊಣೆ ನನ್ನ ಮೇಲಿದೆ. ಬಾಹ್ಯ ಘಟನೆಗಳಿಗಿಂತ ಹೆಚ್ಚಾಗಿ ಮನಸ್ಸಿನ ‘ಘಟನೆ’ಗಳನ್ನು ಚಿತ್ರಿಸುವುದರಲ್ಲಿ ಆಧುನಿಕತೆ ಇದೆ ಎಂದು ನನ್ನ ನಂಬಿಗೆ. ನನ್ನ ಆರೂ ಕತೆಗಳಲ್ಲಿ ನಾನು ಮನಶ್ಚಿತ್ರಣಕ್ಕೇ ಪ್ರಾಧಾನ್ಯತೆ ಕೊಡಲು ಯತ್ನಿಸಿದ್ದೇನೆ. ಆದುದರಿಂದ ಕೆಲವು ಕಡೆ ಕಥಾಂಶ ಕಡಿಮೆಯೆಂದು ಕೆಲವರಿಗೆ ತೋರಬಹುದು. ಮನಸ್ಸಿನ ಈ ಸೂಕ್ಷ್ಮ ವಿಶ್ಲೇಷಣೆಗೆ ಅವಶ್ಯವಾದ ತಂತ್ರದಲ್ಲಿಯೂ ನಾವೀನ್ಯತೆ ಬರುವದು ಸಹಜ. ಒಂದೇ ಸನ್ನಿವೇಶ ತೆಗೆದುಕೊಂಡು, ಒಂದೇ ಪಾತ್ರಕ್ಕೆ ಪ್ರಾಧಾನ್ಯತೆ ಕೊಟ್ಟು, ಆ ಪಾತ್ರದ ಮನಸ್ಸಿನ ಆಗುಹೋಗುಗಳ ಮೇಲೆ ತೀಕ್ಷ್ಣಪ್ರಕಾಶ ಚೆಲ್ಲುವದು ಅವಶ್ಯವಾಗುವದು. ಸಂಜ್ಞಾಪ್ರವಾಹದ ಶೈಲಿಯೇ ಮನಶ್ಚಿತ್ರಣಕ್ಕೆ ಅನುಕೂಲವಾದ ಸಾಧನವೆಂದು ನನ್ನ ನಂಬಿಗೆ. ಸಣ್ಣಕತೆಗಳಲ್ಲಿ ಈ ಶೈಲಿಯನ್ನು ಹೆಚ್ಚು ಸಂಯಮದಿಂದಲೂ ಜಾಗರೂಕತೆಯಿಂದಲೂ ಬಳಸಬೇಕಾಗುತ್ತದೆ. ಈ ಶೈಲಿಯನ್ನು ಕೌಶಲ್ಯದಿಂದ ಉಪಯೋಗಿಸಿದರೆ ಎರಡು ಕಾರ್ಯಗಳನ್ನು ಒಮ್ಮೆಲೇ ಸಾಧಿಸಬಹುದು: ಪಾತ್ರದ ಪ್ರಕೃತ ಅನುಭವದ ಯಥಾರ್ಥ ಸ್ವರೂಪವನ್ನು ರೂಪಿಸಬಹುದು. ಅದೇ ಕಾಲಕ್ಕೆ ಪಾತ್ರದ ಪೂರ್ವ ಇತಿಹಾಸವನ್ನೂ ಭಾವೀ ಲಕ್ಷಣವನ್ನೂ ಸೂಚಿಸಬಹುದು. ಹೀಗೆ ಮನಸ್ಸಿನ ಆಗುಹೋಗುಗಳನ್ನು ಚಿತ್ರಿಸುವ ಪದ್ಧತಿಯೇ ಕತೆ ಹೇಳುವ ಹೊಸ ತಂತ್ರವಾಗಿ ಪರಿಣಮಿಸುತ್ತದೆ. ಹಳೆಯ ನೇರ ಪದ್ಧತಿಯಿಂದ ಕತೆಗೆ ಹರಹು ಬರಬಹುದು. ಆದರೆ ಈ ಸೂಕ್ಷ್ಮವಾದ ನವ್ಯತಂತ್ರದಿಂದ, ವ್ಯಕ್ತಿಯ ಜಾಗೃತ ಮತ್ತು ಸುಪ್ತ ಚಿತ್ರಗಳ ಮೇಲೆ ಬೆಳಕು ಬಿದ್ದು, ಕತೆಗೆ ಆಳ ಉಂಟಾಗುವದು; ಪಾತ್ರಗಳು ಹೆಚ್ಚು ಸಜೀವವಾಗುವವು. ಸಣ್ಣಕತೆಗಳಲ್ಲಿ, ಸ್ವಲ್ಪದರಲ್ಲಿಯೇ ಬಹಳವಾದುದನ್ನು ಸೂಚಿಸ-ಬೇಕಾಗಿರುವುದರಿಂದ, ಕಾವ್ಯದಲ್ಲಿಯಂತೆ ಸಂಕೇತಗಳ ಉಪಯೋಗ ಅನಿವಾರ್ಯ. ಆಧುನಿಕತೆಗೂ ವಾಸ್ತವಿಕತೆಗೂ ನಿಕಟ ಸಂಬಂಧವಿರುವುದರಿಂದ ಈ ಸಂಕೇತಗಳು ವಾಸ್ತವಿಕವಾಗಿರಬೇಕಾಗುವದು. ಹಾಗೂ ಕತೆಯ ಹಾಸಿನಲ್ಲಿ ಈ ಸಂಕೇತಗಳು ಸೇಂದ್ರೀಯವಾಗಿ ಹೆಣೆಯಲ್ಪಡಬೇಕು. ‘ಆಧುನಿಕತೆ’ಯ ಮೂಲ ಜೀವನದೃಷ್ಟಿಯಲ್ಲಿದೆ. ಲೇಖಕನ ದೃಷ್ಟಿಕೋನದಲ್ಲಿ ಆಧುನಿಕತೆ ಇರದ ಹೊರತು ವಸ್ತು-ಶೈಲಿಗಳಲ್ಲಿ ನಾವೀನ್ಯ ಸ್ಫುಟವಾಗಿ ಮೂಡುವದು ಶಕ್ಯವಿಲ್ಲ. ದೃಷ್ಟಿಕೋನದಲ್ಲಿ ಆಧುನಿಕತೆಯೆಂದರೇನು? ಮನಸ್ಸೇ ಜೀವನಾನುಭವದ ಮುಖ್ಯ ಕೇಂದ್ರವು; ಮಾನಸಿಕ ಘಟನೆಗಳೂ ಘಟನೆಗಳೇ; ಬಾಹ್ಯಕೃತಿಗಳಿಗಿಂತ ಅಂತರ್ಮನಸ್ಸಿನ ಪ್ರವರ್ತಕ ಶಕ್ತಿಗಳೇ ಹೆಚ್ಚು ಮೌಲಿಕವಾದವುಗಳು-ಎಂಬ ದೃಢವಿಶ್ವಾಸ; ಸತ್ಯದ ವೈಯಕ್ತಿಕ ಅನ್ವೇಷಣೆ ಮತ್ತು ದರ್ಶನ’.

‘ಮಂಜುಗಡ್ಡೆ’ ಸಂಕಲನದ ಅವರ ಆರಂಭದ ಕಥೆಗಳೂ ಪ್ರಬುದ್ಧತೆಯ ದಿಕ್ಕಿನಲ್ಲಿವೆ. ವಸ್ತು ಹಾಗೂ ವಿಧಾನಗಳೆರಡರಲ್ಲೂ ಈ ಕಥೆಗಳು ಹೊಸ ರೀತಿಯವು. ಕನ್ನಡ ಸಣ್ಣಕತೆಯಲ್ಲಿ ನವ್ಯತೆ ಇನ್ನೂ ಒಂದು ಸಂಪ್ರದಾಯವಾಗುವ ಪೂರ್ವದಲ್ಲೇ ಅವರು ಇಂಥ ಕಥೆಗಳನ್ನು ಬರೆದರೆನ್ನುವುದು ಐತಿಹಾಸಿಕವಾಗಿ ಮಹತ್ವದ ಸಂಗತಿಯಾಗಿದೆ. ಬಹುಶಃ ಆ ಕಾಲದ ಮರಾಠಿ ಕತೆಗಳಿಂದ ಅವರು ಸ್ಫೂರ್ತಿ ಪಡೆದಿರಬೇಕು. ಅದರ ಜೊತೆಯಲ್ಲೇ ಅವರು ಸ್ವೀಕರಿಸಿದ ಪ್ರಭಾವಗಳು ಹೆಚ್ಚಾಗಿ ಇಂಗ್ಲೀಷಿನಿಂದ ಬಂದವುಗಳು. ಅದರಲ್ಲೂ ಡಿ. ಎಚ್. ಲಾರೆನ್ಸ್‍ನ ಸ್ಪಷ್ಟವಾದ ಮೆಲುದನಿಗಳನ್ನು ಅವರ ಬರವಣಿಗೆಯಲ್ಲಿ ಕೇಳಬಹುದು’ (ಸಮಗ್ರ ವಿಮರ್ಶೆ, ಪುಟ 385). ಗಿರಡ್ಡಿಯವರು 1965ರಲ್ಲಿಯೇ ‘ಸಣ್ಣಕತೆಯ ಹೊಸ ಒಲವುಗಳು’ ಎಂಬ ದೀರ್ಘವಾದ ಪ್ರಬಂಧವೊಂದನ್ನು ಬರೆದು ಕನ್ನಡ ನವ್ಯಕತೆಗಳ ಶಕ್ತಿ ಮತ್ತು ಮಿತಿಗಳನ್ನು ಸಮರ್ಥವಾಗಿ ತೋರಿರುವುದು ನವ್ಯವಿಮರ್ಶೆ ರೂಢಿಸಿಕೊಳ್ಳುತ್ತಿದ್ದ ಪ್ರಬುದ್ಧತೆಗೂ ಒಂದು ಜ್ವಲಂತ ನಿದರ್ಶನವಾಗಿದೆ.

ಕನ್ನಡ ಗದ್ಯ ಸಾಹಿತ್ಯದಲ್ಲಿ ನವ್ಯ ಪ್ರಜ್ಞೆ ಮೂಡಿದ್ದು ಸಾಂಪ್ರದಾಯಕ ನೈತಿಕ ಕ್ಷಿತಿಜವನ್ನು ವಿಶಾಲಗೊಳಿಸುವ, ಅದಕ್ಕೊಂದು ಹೊಸ ಆಯಾಮ ಕೊಡುವ ಪ್ರಯತ್ನ ನಡೆದಾಗ ಎನ್ನುವ ಚ. ಸರ್ವಮಂಗಳಾ ಅವರು ‘ಈ ಪ್ರಯತ್ನದಲ್ಲಿ ಖಚಿತ ಧೋರಣೆ-ಯಿಂದ ಬರವಣಿಗೆಯಲ್ಲಿ ತೊಡಗಿದವರು ಮೊದಲಿಗೆ ಶಾಂತಿನಾಥ ದೇಸಾಯರು…ಆ ಕಾಲದಲ್ಲಿಯೇ ಬರೆಯಲಾರಂಭಿಸಿದ ಅನಂತಮೂರ್ತಿ, ಸದಾಶಿವರಿಗಿಂತಲೂ ದೇಸಾಯರು ಆಧುನಿಕತೆಯ ಬಗ್ಗೆ, ನವ್ಯ ಪ್ರಜ್ಞೆಯ ಬಗ್ಗೆ… ಹೆಚ್ಚು ನಿರ್ದಿಷ್ಟರಾಗಿದ್ದರು… ಏಕೆಂದರೆ ಅನಂತಮೂರ್ತಿ, ಸದಾಶಿವರ ಪ್ರಾರಂಭದ ಕಥೆಗಳು ಭಾವನಾತ್ಮಕ ನೆಲೆಯಲ್ಲಿಯೇ ಹೆಚ್ಚಾಗಿ ಪ್ರವರ್ತಿಸುತ್ತವೆ’ ಎಂದು ಗುರುತಿಸಿದ್ದಾರೆ. (1981, ದೇಸಾಯರ ಕಥಾ ಪ್ರಪಂಚ, ರುಜುವಾತು-4, ಸಂ. ಯು. ಆರ್. ಅನಂತಮೂರ್ತಿ, ಪುಟ 474). ಅನಂತಮೂರ್ತಿ, ಲಂಕೇಶ್ , ಚಿತ್ತಾಲ ಇವರಿಗಿದ್ದಂತೆ ಪರಂಪರೆಯ, ಜಾತಿ-ಭಾಷೆ-ಸಂಸ್ಕೃತಿಗಳ ಹಿನ್ನೆಲೆಗಳ ಸವಲತ್ತು-ಸವಾಲುಗಳು, ಒತ್ತಡ, ದೇಸಾಯಿ ಅವರಿಗೆ ಇರಲಿಲ್ಲವೆಂದೂ ಸದ್ಯದ ವರ್ತಮಾನವೇ ಅವರ ಮುಂದೆ ಇದ್ದುದು ಎಂದೂ ಸರ್ವಮಂಗಳಾ ಹೇಳುತ್ತಾರೆ.

ಅನುವಾದಿತ ಕೃತಿಗಳು

ಆಲ್ಬರ್ಟ್ ಕಮೂನ ‘ದ ರೆಬೆಲ್’ ಕೃತಿಯಲ್ಲಿ ಪ್ರಸ್ತಾಪಿತವಾಗುವ ‘ಡ್ಯಾಂಡಿ’ಗಳ ಕುರಿತಾದ ಚರ್ಚೆಯ ತಾತ್ವಿಕ ಹಿನ್ನೆಲೆಯಲ್ಲಿ ದೇಸಾಯರ ಪಾತ್ರಗಳನ್ನು ಅವಲೋಕಿಸುವ ಸರ್ವಮಂಗಳಾ ‘ಮಂಜುಗಡ್ಡೆ’ಯ ಚಂಚಲ ಮನೋಧರ್ಮದ ಹೀರೋ ಗೌರೀಶನಲ್ಲಿ, ಮುಖ್ಯವಾಗಿ ಪುರುಷ ಪಾತ್ರಗಳಲ್ಲಿ, ದೇಸಾಯಿ ಅವರು ಒಟ್ಟಾರೆಯಾಗಿ ಸೃಷ್ಟಿಸಿದ ಹೆಚ್ಚಿನ ಪಾತ್ರಗಳ ಮೂಲಬೀಜಗಳನ್ನು ಗುರುತಿಸುತ್ತಾರೆ. ಸಂಚಾರಿಯೇ ದೇಸಾಯಿ ಪಾತ್ರಗಳ ಸ್ಥಾಯೀಭಾವವೆಂದು ಗುರುತಿಸುವ ಸರ್ವಮಂಗಳಾ ಆ ಕಾರಣದಿಂದಲೇ ದೇಸಾಯಿ ಅವರ ಭಾಷೆ ‘ಹಗುರ’ವೂ, ಲವಲವಿಕೆಯುಳ್ಳದ್ದೂ ಆಗಿರುತ್ತದೆ ಎಂಬ ಅಂಶವನ್ನು ನಮ್ಮ ಗಮನಕ್ಕೆ ತರುತ್ತಾರೆ. ದೇಸಾಯಿ ಸಾಹಿತ್ಯವನ್ನು ಅಭ್ಯಾಸ ಮಾಡಬಯಸುವವರಿಗೆ ಸರ್ವಮಂಗಳಾ ಅವರ ಲೇಖನ ಮೌಲಿಕವಾದ ಭೂಮಿಕೆಯೊಂದನ್ನು ಒದಗಿಸಿ ಕೊಟ್ಟಿದೆ. ಇಲ್ಲಿಯೇ ಸೇರಿಸಬಹುದಾದ ಒಂದು ಮಾತೆಂದರೆ ಮುಂದೆ ವೀಣಾ ಶಾಂತೇಶ್ವರ, ವೈದೇಹಿ ಮುಂತಾದ ಲೇಖಕಿಯರು ಸೃಷ್ಟಿಸಿದ ಹಲವಾರು ಪಾತ್ರಗಳ ಪರಂಪರೆಯಲ್ಲಿ ದೇಸಾಯಿಯರ ನಾಯಕಿಯರೂ ಸೇರುತ್ತಾರೆ. ದೇಸಾಯಿ ಅವರ ಬಹಳಷ್ಟು ಸ್ತ್ರೀ ಪಾತ್ರಗಳು ವೀಣಾ ಮತ್ತು ವೈದೇಹಿಯವರ ಅನೇಕ ಪಾತ್ರಗಳನ್ನು ಮುನ್ನೋಡುತ್ತವೆ.

ದೇಸಾಯಿ ಅವರದ್ದು ಅಪ್ಪಟ ನವ್ಯ ಮನೋಧರ್ಮ ಎಂದು ಹೇಳುವ ಆಮೂರ್, ‘ಅಡಿಗ, ಅನಂತಮೂರ್ತಿ, ತೇಜಸ್ವಿ, ಲಂಕೇಶ, ಚಿತ್ತಾಲರಂಥವರಲ್ಲಿ ನವ್ಯತೆ ಒಂದು ಹಂತಕ್ಕೆ ಮಾತ್ರ ಸೀಮಿತವಾಗಿದ್ದರೆ ದೇಸಾಯಿ ಅವರಲ್ಲಿ ಅದು ಸ್ಥಾಯಿ ರೂಪದಲ್ಲಿದೆ’ ಎಂದು ಅಭಿಪ್ರಾಯಪಡುತ್ತಾರೆ. ಅವರ ಉತ್ತರಾರ್ಧದ ಕೃತಿಗಳು ಕೂಡ ಕೆಲ ಸ್ಥಿತ್ಯಂತರಗಳೊಡನೆ ನವ್ಯತೆಯನ್ನೇ ಪುರಸ್ಕರಿಸಿದವು ಎಂದು ವಿಶ್ಲೇಷಿಸುವ ಆಮೂರ್ ‘ನವ್ಯದ ಮೊದಲಿನ ನವೋದಯ (ದೇಸಾಯಿ ಅವರ ವಿವರಣೆಯಲ್ಲಿ ರಸ ಸಂಪ್ರದಾಯ)ಕ್ಕಾಗಲೀ ನವ್ಯದ ನಂತರ ಬಂದ ಬಂಡಾಯ-ದಲಿತಕ್ಕಾಗಲೀ ಅವರ ಪ್ರತಿಕ್ರಿಯೆ ಅಷ್ಟೊಂದು ಸಹಾನುಭೂತಿಯದಾಗಲೀ, ತಿಳಿವಳಿಕೆಯದ್ದಾಗಲೀ ಆಗಿರಲಿಲ್ಲ’ ಎಂಬ ತೀರ್ಮಾನಕ್ಕೆ ಬರುತ್ತಾರೆ. (ಶಾಂತಿನಾಥ ದೇಸಾಯಿ ಅವರ ಸಾಹಿತ್ಯ: ಸಂ. ಗಿರಡ್ಡಿ ಗೋವಿಂದರಾಜ, ಪುಟ 2)

ಈ ಪುಸ್ತಕ ಖರೀದಿಸಲು : https://www.instamojo.com/abhinavabook

*

ಪರಿಚಯ : ಅನುವಾದಕ, ವಿಮರ್ಶಕ ಟಿ. ಪಿ. ಅಶೋಕ ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ಅಧ್ಯಯನಗಳು, ಸಾಹಿತ್ಯ ಸಂಬಂಧ, ಅನುವಾದ : ಫಾದರ್ ಸೆರ್ಗಿಯಸ್, ರಿಕ್ತರಂಗಭೂಮಿ, ಓವರ್‌ಕೋಟ್. ಸಂಪಾದನೆ: ಸಾಹಿತ್ಯ ವಿಮರ್ಶೆ, ಕಾರಂತ ಮಂಥನ, ವೈದೇಹಿ ವಾಚಿಕೆ, ಅರೆಶತಮಾನದ ಅಲೆಬರಹಗಳು, ಶ್ರೀರಂಗ ಸಂಪುಟ-೧, ಕೆ.ವಿ.ಸುಬ್ಬಣ್ಣನವರ ಆಯ್ದ ಬರಹಗಳು, ಎ. ಕೆ. ರಾಮಾನುಜನ್ ನೆನಪಿನ ಸಂಪುಟ, ಆರ್ಕೆಸ್ಟ್ರಾ ಮತ್ತು ತಂಬೂರಿ ಇವು ಪ್ರಮುಖ ಕೃತಿಗಳು.

ಇದನ್ನೂ ಓದಿ : Shantinath Desai’s Birthday : ಮಂದಾಕಿನಿ ನಳಿನಿ ಶಾರದಾಬಾಯಿ ಬಂದಿದ್ದಾರೆ