M. Balamuralikrishna Birthday : ಕಲ್ಲು ಕರಗುವ ಸಮಯ ಬೇಕಿಲ್ಲ ಉಳಿಯೇಟು…

Art And Music : ‘ಪೊಲ್ಯಾಕನ ಚಿತ್ರಗಳಲ್ಲಿ ಬಣ್ಣಗಳು ಬಿಂದುಗಳಾಗಿ, ಬಿಂದುಗಳು ಗೆರೆಗಳಾಗಿ, ಗೆರೆಗಳು ತಮ್ಮ ಚಲನೆಯಿಂದಲೇ ಅಮೂರ್ತ ಅನುಭವವೊಂದನ್ನು ನೇಯುವ ಸಾಧನಗಳಾಗಿ ಕಣ್ಣು ಕುಕ್ಕುತ್ತವೆ. ಬಾಲಮುರಳಿಯವರ ಕಲ್ಪನಾ ಸ್ವರಗಳು ಕೂಡ ಹಾಗೆಯೇ. ಇಬ್ಬರದೂ ದೇಶಕಾಲಗಳಲ್ಲಿ ನಡೆಯುವ ಕಲಾಸೃಷ್ಟಿ.‘ ಎಸ್. ದಿವಾಕರ

M. Balamuralikrishna Birthday : ಕಲ್ಲು ಕರಗುವ ಸಮಯ ಬೇಕಿಲ್ಲ ಉಳಿಯೇಟು...
ಸಂಗೀತ ದಿಗ್ಗಜ ಡಾ. ಎಂ ಬಾಲಮುರಳೀಕೃಷ್ಣ ಮತ್ತು ಚಿತ್ರಕಲಾವಿದ ಜ್ಯಾಕ್ಸನ್ ಪೊಲ್ಲೊಕ್
Follow us
ಶ್ರೀದೇವಿ ಕಳಸದ
|

Updated on:Jul 07, 2021 | 8:59 AM

‘ಕಲಾವಿದ ಯಾವತ್ತೂ ಸಾಂಪ್ರದಾಯಿಕ ಚೌಕಟ್ಟನ್ನು ಭೇದಿಸುವತ್ತಲೇ ಸದಾ ಯೋಚಿಸುತ್ತಿರುತ್ತಾನೆ. ವಿಮರ್ಶಕರು ಯಾವಾಗಲೂ ಅಪಸ್ವರಗಳ ಹುಡುಕಾಟದಲ್ಲೇ ಇರುತ್ತಾರೆ. ಇದರ ಮಧ್ಯೆಯೇ ಸಂಗೀತ ಅಥವಾ ಇನ್ನಿತರೇ ಕಲೆಗಳು ಅರಳುತ್ತ ಹೋಗುತ್ತವೆ. ನನ್ನದು ಹಿಂದೂಸ್ತಾನಿಯೂ ಅಲ್ಲ, ಕರ್ನಾಟಕ ಸಂಗೀತವೂ ಅಲ್ಲ. ಅದು ಕೇವಲ ನನ್ನ ಸಂಗೀತ. ಬಾಲಮುರಳಿ ಸಂಗೀತ. ನನ್ನ ಕೇಳುಗರಿಗಾಗಿ ನಾನು ಹಾಡುವಂಥ ಸಂಗೀತ.’ ಮಾಂತ್ರಿಕ ಸಂಗೀತದೊಂದಿಗೆ ಇಂಥ ನಿಚ್ಚಳದ ನಿರ್ಭಿಡೆಯ ಹೇಳಿಕೆಗಳಿಂದ ಜನಮನಸೂರೆಗೊಂಡಿದ್ದ ಡಾ. ಎಂ. ಬಾಲಮುರಳೀಕೃಷ್ಣ ಅವರ 86ನೇ ಹುಟ್ಟುಹಬ್ಬ ಈ ದಿನ. ಹನ್ನೆರಡು ವರ್ಷಗಳ ಹಿಂದೆ ಪತ್ರಿಕಾಗೋಷ್ಠಿ ಮುಗಿಸಿದ ನಂತರ ಈ ಮಾತುಗಳನ್ನು ಹೇಳುತ್ತ ಹೆಜ್ಜೆ ಹಾಕುತ್ತಿರುವಾಗ ನೆತ್ತಿಮೇಲೆ ರಣಬಿಸಿಲಿತ್ತು. ಆಕಾಶದೆಡೆ ಕೈಮಾಡುತ್ತ ಇನ್ನೊಂದು ಶಾಮಿಯಾನದಡಿ ಕರೆದೊಯ್ದರು. ಬಹಳೇನಿಲ್ಲ ಮಾತಿಗೆ ಸಿಕ್ಕಿದ್ದು ಕೇವಲ ನಾಲ್ಕಾರು ನಿಮಿಷ. ‘ಆನಂದ ಭೈರವ’ದ ಗುಂಗಿನಲ್ಲಿದ್ದೇನೆ ಎನ್ನುತ್ತ ಆ ಗೌಜಿಯಲ್ಲೇ ರಾಗಾಲಾಪನೆ ಮಾಡುತ್ತ, ಇಷ್ಟವಾಯಿತಾ? ಎಂದರು.  ಆಯೋಜಕರ ಕರೆಗೆ ಆ ರಾಗವೇನೋ ಅಂದು ತುಂಡರಿಸಿತು ನಿಜ. ಆದರೆ ಅದರಿಂದ ವಿಸ್ತರಿಸುವ ಅಲೆಗಳಿಗೆ ಕಾಲದ ಹಂಗುಂಟೆ?; ಹಿರಿಯ ಕಥೆಗಾರ ಎಸ್. ದಿವಾಕರ ಅವರು ಬಾಲಮುರಳೀಕೃಷ್ಣ ಅವರ ಸಂಗೀತ ಮತ್ತು ಅಮೆರಿಕದ ಮಾರ್ಗಪ್ರವರ್ತಕ ಕಲಾವಿದ ಜ್ಯಾಕ್ಸನ್ ಪೊಲ್ಯಾಕ್ ಅವರ ಸೃಜನಶೀಲ ತರಂಗಗಳೊಳನ್ನು ಅನುಸಂಧಾನಗೈಯ್ಯುತ್ತ ‘ಬಾಲಮುರಳೀಗಾನ’ ಪ್ರಸ್ತುತಪಡಿಸಿದ್ದಾರೆ.    

*

ನಮ್ಮ ಶಾಸ್ತ್ರೀಯ ಸಂಗೀತದ ಎರಡು ಮೂಲದ್ರವ್ಯಗಳೆಂದರೆ ನಾದ ಮತ್ತು ಕಾಲ. ಒಂದು ಶ್ರುತಿಶುದ್ಧವಾದದ್ದು, ಇನ್ನೊಂದು ಲಯಬದ್ಧವಾದದ್ದು. ಇವೆರಡನ್ನು ಸಾಧಿಸುವುದಕ್ಕೆ ಕಂಪಿತವೆಂಬ ಗಮಕವೂ ಸೂಕ್ಷ್ಮಸ್ವರಗಳ  ಪ್ರಸ್ತುತಿಯೂ ಅತ್ಯಗತ್ಯ. ಸ್ವರವೆಂದಾಗ ಕರ್ನಾಟಕ ಸಂಗೀತದ ಒಂದು ಮುಖ್ಯ ಭಾಗವಾಗಿರುವ ಕಲ್ಪನಾಸ್ವರಗಳ ಪ್ರಸ್ತಾಪ ತೀರ ಸಹಜ. ಕಲ್ಪನಾಸ್ವರವೆಂದರೆ ಗಮಕಗಳನ್ನು ಸೂಕ್ತ ರೀತಿಯಲ್ಲಿ ಸಂಯೋಜಿಸಿ ಪ್ರಕಟಪಡಿಸುವ ರಾಗವಿಶೇಷ. ಕರ್ನಾಟಕ ಸಂಗೀತ ಕಛೇರಿಯಲ್ಲಿ ರಾಗ ತಾನ ಪಲ್ಲವಿ ಹಾಡುವಾಗ ಗಾಯಕನಾದವನು ಕೃತಿಯ ಪಲ್ಲವಿಯಲ್ಲೋ ಚರಣದಲ್ಲೋ ತನಗೆ ಸೂಕ್ತವೆನಿಸಿದ ಒಂದು ಜಾಗವನ್ನು ಆಯ್ಕೆಮಾಡಿಕೊಂಡು ಕಲ್ಪನಾಸ್ವರಗಳನ್ನು ನಿರೂಪಿಸುತ್ತಾನೆ. ಇವು ಹ್ರಸ್ವವಾದ, ಸರಳವಾದ ಸ್ವರಗಳಿಂದ ಪ್ರಾರಂಭವಾಗಿ ನಂತರ ದೀರ್ಘವಾದ, ಹೆಚ್ಚು ಸಂಕೀರ್ಣವಾದ ಸ್ವರಗಳಿಂದ ಕೊನೆಗೊಳ್ಳುತ್ತವೆ. ಮೊದಲು ನಿಧಾನಗತಿಯಲ್ಲಿ ಪ್ರಾರಂಭವಾಗಿ ನಂತರ ಧೃತ್​ಗತಿಯಲ್ಲಿ ಮುಂದುವರೆಯುತ್ತವೆ. ಮೃದಂಗದ ನಡೆಗಳಿಗೆ ಅನುಗುಣವಾಗಿ ಸ್ವರಗಳನ್ನು ಜೋಡಿಸಿ ಪ್ರಸ್ತುತಪಡಿಸುವ ಕಲ್ಪನಾ ಸ್ವರಗಳು ಒಂದು ಕೃತಿಯ ಒಟ್ಟು ಭಾವವನ್ನು ಹೊಮ್ಮಿಸಬಲ್ಲವು. ಕೆಲವು ಸಂದರ್ಭಗಳಲ್ಲಿ ಕೃತಿಗೆ ಪೂರಕವಾಗಿದ್ದೂ ಒಂದು ಸ್ವತಂತ್ರ ನೆಲೆಯಲ್ಲಿ ವಿಜೃಂಭಿಸಬಲ್ಲವು. ವಿಳಂಬಕಾಲದಲ್ಲೋ ಮಧ್ಯಮಕಾಲದಲ್ಲೋ ಹಾಡಿದಾಗ ಒಂದು ಬಗೆಯ ಶಾಂತಿ ಸಮಾಧಾನಗಳನ್ನು ನೀಡಬಲ್ಲವು. ಬಾಲಮುರಳೀಕೃಷ್ಣರಂಥ ಸಂಗೀತಗಾರರು ತಾರಕದಲ್ಲಿ ಮತ್ತು ಮೂರನೆಯ ಕಾಲದಲ್ಲಿ ಹಾಡಿದಾಗ ನಟ್ಟಿರುಳ ಆಕಾಶದ ನಕ್ಷತ್ರಗಳಂತೆ ಅಪೂರ್ವ ಕಾಂತಿಯನ್ನು ಚೆಲ್ಲಬಲ್ಲವು.

ತಾಳತಪ್ಪಿತೆ? ಆದಿತಾಳ ಶಾರೀರಕ್ಕೆ ರೂಪಕದ ಚಿತ್ತಲಯ ಬಂತು ಹೇಗೆ? ಶಿಖರದ ಬುಡಕ್ಕೆ ಖಂಡಿತ ಸ್ವರ ಪ್ರಸ್ತಾರ. ಅದರಾಚೆ ಅವನವನ ಸ್ವಚ್ಛಂದ ಛಂದಸ್ಸಿಗೆ

ಗೋಪಾಲಕೃಷ್ಣ ಅಡಿಗರ ಕವನವೊಂದರ ಈ ಸಾಲುಗಳು ಬಾಲಮುರಳಿಯವರ ಸ್ವರಪ್ರಸ್ತಾರದ ವಿಶಿಷ್ಟ ಬಾನಿಯನ್ನೇ ಸೂಚಿಸುವಂತಿವೆ. ನಮ್ಮ ಸಂಗೀತದಲ್ಲಿ ಅವರು ಸಿದ್ಧ ನಿಮಯಗಳನ್ನು ಮುರಿಯುವುದಕ್ಕೆ, ಪರಂಪರೆಯನ್ನು ತಲೆಕೆಳಗು ಮಾಡುವುದಕ್ಕೆ ಹೆಸರಾದವರು. ರಾಗದ ಸ್ವರೂಪವನ್ನೂ ಸೌಂದರ್ಯವನ್ನೂ ಹೆಚ್ಚಿಸಿ ಅದರ ವೈಶಿಷ್ಟ್ಯವನ್ನು ತೋರಿಸುವಂತೆ ಸ್ವರಗಳನ್ನು ಬಳಸಿ ಹಾಡುವುದರಲ್ಲಿ ಅವರನ್ನು ಮೀರಿಸುವವರು ಅಪರೂಪ. ಅವರ ಸ್ವರಪ್ರಸ್ತಾರದಲ್ಲಿ ಸರಳವಾದದ್ದು ಸಂಕೀರ್ಣವೂ ಸಂಕೀರ್ಣವಾದದ್ದು ಸರಳವೂ ಆಗಿಬಿಡುತ್ತದೆ. ಅವರು ನಿರಾಯಾಸವಾಗಿ ನಿರೂಪಿಸುವ ಸ್ವರಪ್ರಸ್ತಾರ ಸರಳ ರಚನೆಯ ಹಾಗೆ ಭಾಸವಾಗಬಹುದು. ಆದರೆ ವಿವಿಧ ಸ್ಥಾಯಿಗಳ ಮೂಲಕ ಜಿಗಿಯುವ, ಕುಣಿಯುವ, ಮಿಂಚುವ ಪದಗುಚ್ಛಗಳು, ಅವುಗಳ ಉಪಾಂಗ ಸ್ವರಗಳು ಹೇಗೆ ತಾನೆ ಸರಳವಾಗಿರಲು ಸಾಧ್ಯ? ಅವು ಪಕ್ಕವಾದ್ಯದವರ ಪರಿಣತಿಯನ್ನೂ ಸತ್ವವನ್ನೂ ಪರೀಕ್ಷೆಗೊಡ್ಡದೆ ಬಿಡಲಾರವು.

ಬಾಲಮುರಳಿ ರಾಗ ತಾನ ಪಲ್ಲವಿ ಹಾಡುವಾಗ ನೆರವಲಿಗಾಗಿ ಕೃತಿಯಲ್ಲಿ ಹಿಂದೆ ಯಾವ ಗಾಯಕರೂ ಆರಿಸಿಕೊಂಡಿರದ ಎಡುಪನ್ನು ಆಯ್ಕೆಮಾಡಿಕೊಂಡು ಅದರ ಸಾಹಿತ್ಯವಿನ್ಯಾಸವನ್ನು ಸ್ವರವಿನ್ಯಾಸವಾಗಿ ಮಾರ್ಪಡಿಸುವುದುಂಟು. ಎಡುಪುವಿಗೆ ಸಂಬಂಧಿಸಿದಂತೆ ಹೇಳುವುದಾದರೆ ಅವರು ಬಹುಮಟ್ಟಿಗೆ ತಮ್ಮ ಸ್ವರಾಭಿವ್ಯಕ್ತಿಗಾಗಿ ಕೃತಿಯ ಪರಿಚಿತ ಭಾಗವನ್ನು ಆರಿಸಿಕೊಳ್ಳದೆ ಅಪರಿಚಿತ ಭಾಗವನ್ನೇ ಆರಿಸಿಕೊಳ್ಳುತ್ತಾರೆ. ಉದಾಹರಣೆಗೆ ಜಗನ್ಮೋಹಿನಿ ರಾಗದ ‘ಶೋಬಿಲ್ಲು ಸಪ್ತಸ್ವರ’ ಕೃತಿಯನ್ನು ನೋಡಬಹುದು. ಸಾಮಾನ್ಯವಾಗಿ ಸಂಗೀತಗಾರರು ‘ಶೋಬಿಲ್ಲು’ವನ್ನೋ ‘ಸಪ್ತಸ್ವರ’ವನ್ನೋ ಆಯ್ಕೆಮಾಡಿಕೊಂಡರೆ ಬಾಲಮುರಳಿಯವರು ಚರಣ ಭಾಗದಲ್ಲಿರುವ ‘ದರು ಋಕ್ ಸಾಮ ದು ಲ ಲೋ’ ವನ್ನು ಆಯ್ದುಕೊಂಡು ಅದನ್ನು ವಿಸ್ತರಿಸುತ್ತಾರೆ. ಹೀಗೆ ಮಾಡುವ ಮೂಲಕ ಅವರು ಕೃತಿಯ ಸಾಹಿತ್ಯ ಭಾಗವನ್ನು ‘ಸಾ ಮಾ’ ಎಂಬ ಸ್ವರವಿನ್ಯಾಸವಾಗಿ ಪರಿವರ್ತಿಸುವುದನ್ನು ಗಮನಿಸಬೇಕು. ಅದು ಶ್ರೋತೃಗಳ ಮೇಲೆ ಬೀರುವ ಪ್ರಭಾವ ಅಪಾರ.

ರಾಗಾಲಾಪನೆ, ತಾನ, ಸ್ವರಕಲ್ಪನೆ, ಇತ್ಯಾದಿ ಸಂಗೀತದ ಪ್ರಧಾನಾಂಗಗಳಲ್ಲಿ ನಾವು ಆಡುವ ಭಾಷೆಗೆ ಯಾವ ಕೆಲಸವೂ ಇಲ್ಲ. ವಿದ್ವಾಂಸ ರಾಳ್ಲಪಲ್ಲಿ ಅನಂತ ಕೃಷ್ಣ ಶರ್ಮ ಅವರು ಬರೆದಿರುವಂತೆ ‘ಸಾಹಿತ್ಯ ಅಕ್ಷರ ಭಾಷೆ; ಸಂಗೀತ ನಾದಭಾಷೆ. ಸಂಕೇತಸಿದ್ಧವಾದ ಅರ್ಥಾನುಭವ ಸಾಹಿತ್ಯದಲ್ಲಿ; ಸಂಕೇತವೇ ಇಲ್ಲದ ಭಾವಾನುಭವ ಸಂಗೀತದಲ್ಲಿ. ಆದ್ದರಿಂದ ಒಂದು ಮತ್ತೊಂದಕ್ಕೆ ನಿರ್ವಚನವಾಗಲಾರದು.’ ಆದರೆ ಸ್ವತಃ ವಾಗ್ಗೇಯಕಾರರಾಗಿರುವ ಬಾಲಮುರಳೀ ಕೃಷ್ಣ ತೆಲುಗು ಭಾಷೆಯಲ್ಲಿ, ತೋಡಿ ರಾಗದಲ್ಲಿ ರಚಿಸಿರುವ ‘ಮಾ ಮಾನಿನಿ’ ಎಂಬ ಕೃತಿಯನ್ನು ನೋಡಿ. ಇದರಲ್ಲಿ ‘ಮಾ ಮಾನಿನೀ ನೀ ಧಮಗನೀ ನೀಧಾ ಸರಿನೀಗದಾ’ ಎನ್ನುವುದು ಸಾಹಿತ್ಯ ಭಾಗ. ಇದಕ್ಕೆ ತೆಲುಗು ಭಾಷೆಯಲ್ಲಿ ನಿರ್ದಿಷ್ಟ ಅರ್ಥವಿದೆ. ಆದರೆ ಇಲ್ಲಿನ ಪ್ರತಿಯೊಂದು ಅಕ್ಷರವೂ ಒಂದೊಂದು ಸ್ವರವಾಗಿರುವುದನ್ನು ಗಮನಿಸಬೇಕು. ಹಾಡಿದಾಗ ಇಲ್ಲಿನ ಅಕ್ಷರಭಾಷೆ ಯಾವುದು, ನಾದಭಾಷೆ ಯಾವುದು ಎಂದು ಪ್ರತ್ಯೇಕಿಸುವುದೇ ಸಾಧ್ಯವಿಲ್ಲ.

ಬಾಲಮುರಳಿಯವರ ಕಲ್ಪನಾಸ್ವರಗಳ ಮೆರವಣಿಗೆಯನ್ನು, ಅವುಗಳ ಸಂಭ್ರಮ, ವೈಭವಗಳನ್ನು ಆಲಿಸುತ್ತಿರುವಾಗ ನಮ್ಮ ಮನಸ್ಸಿನಲ್ಲಿ ಬಗೆಬಗೆಯ ಚಿತ್ರಗಳು ಮೂಡಬಹುದು. ಅಮೂರ್ತವಾಗಿಯೇ ಇರಬಹುದಾದ ಆ ಚಿತ್ರಗಳಲ್ಲಿ ಕೆಲವು ಕಲಾವಿದ ಜಾಕ್ಸನ್ ಪೊಲ್ಯಾಕನ ‘ಆಕ್ಷನ್ ಪೇಂಟಿಣಗ್’ಗಳಂತೆ ಭಾಸವಾದರೆ ಆಶ್ಚರ್ಯವಿಲ್ಲ. ನಿದರ್ಶನಕ್ಕಾಗಿ ಅವನ ‘ಕಾನ್‌ವರ್ಜೆನ್ಸ್’ ಎಂಬ ಈ ಚಿತ್ರವನ್ನು ನೋಡಬಹುದು.

ಅಮೆರಿಕದಲ್ಲಿ 1940 ರಿಂದ 1960ರವರೆಗೆ ಸುಪ್ರಸಿದ್ಧವಾಗಿದ್ದ ಒಂದು ಕಲಾ ಪಂಥದ ಹೆಸರು ‘ಅಮೂರ್ತ ಅಭಿವ್ಯಕ್ತಿವಾದ’. ಅದಕ್ಕೆ ‘ಆಕ್ಷನ್ ಪೇಂಟಿಂಗ್’ ಎಂಬ ಹೆಸರು ಕೊಟ್ಟವನು ಅಮೆರಿಕದ ಕಲಾ ವಿಮರ್ಶಕ ಹೆರಾಲ್ಡ್ ರೋಸೆನ್‌ಬರ್ಗ್. ಅವನ ದೃಷ್ಟಿಯಲ್ಲಿ ಕ್ಯಾನ್‌ವಾಸ್ ಎನ್ನುವುದು ಕ್ರಿಯಾಶೀಲತೆಗೊಂದು ಅಖಾಡ. ಅಂದರೆ ಸುಮಾರು ಇಪ್ಪತ್ತು ವರ್ಷ ಅಮೆರಿಕನ್ ಕಲಾವಿದರಿಗೆ ಕ್ಯಾನ್‌ವಾಸೆನ್ನುವುದು ನಿಜವಾದ ಅಥವಾ ಕಲ್ಪಿತ ಚಿತ್ರವೊಂದನ್ನು ರಚಿಸುವ, ಅದನ್ನು ಪುನರ್‌ವಿನ್ಯಾಸಗೊಳಿಸುವ ಮತ್ತು ‘ಅಭಿವ್ಯಕ್ತಿಸುವ’ ಸ್ಪೇಸ್ ಆಗದೆ ಒಂದು ಅಖಾಡದಂತಾಗಿತ್ತು. ಕಲಾವಿದ ಕ್ಯಾನ್‌ವಾಸಿಗೆ ಮುಖಾಮುಖಿಯಾಗುತ್ತಿದ್ದದ್ದು ತನ್ನ ಮನಸ್ಸಿನಲ್ಲಿದ್ದುದನ್ನು ಚಿತ್ರಿಸುವುದಕ್ಕಲ್ಲ; ತನ್ನ ಬಳಿಯಿದ್ದ ವಸ್ತುಗಳಿಂದ (ಉದಾ. ಬಣ್ಣ, ಚಾಕು, ಕರಣೆ, ಇತ್ಯಾದಿ) ಬೇರೇನನ್ನೋ ಸೃಷ್ಟಿಸುವುದಕ್ಕಾಗಿ.

jackson pollock

ಜ್ಯಾಕ್ಸನ್ ಪೊಲ್ಯಾಕ್ ಡ್ರಿಪ್ ಪೇಂಟಿಂಗ್​ನಲ್ಲಿ…

ಈ ಪಂಥದ ಪ್ರಸಿದ್ಧ ಕಲಾವಿದ ಜಾಕ್ಸನ್ ಪೊಲ್ಯಾಕ್ (೧೯೧೨-೧೯೫೬). ಈತ ಆಧುನಿಕ ಕಲಾ ಇತಿಹಾಸದಲ್ಲಿ ಕಲಾನಿಯಮಗಳನ್ನು ಬುಡಮೇಲುಗೊಳಿಸುವಂಥ ಅಮೂರ್ತ ಶೈಲಿಯೊಂದನ್ನು ಆವಿಷ್ಕರಿಸಿದವನು; ಬಣ್ಣದಿಂದ ರೇಖೆಯನ್ನು ಬೇರ್ಪಡಿಸುವ ಮೂಲಕ ಡ್ರಾಯಿಂಗ್ ಮತ್ತು ಪೇಂಟಿಂಗ್ ವಿಭಾಗಗಳನ್ನು ಪುನರ್‌ವ್ಯಾಖ್ಯಾನಕ್ಕೆ ಗುರುಪಡಿಸಿದವನು. ಮೆಕ್ಸಿಕನ್ ಭಿತ್ತಿಚಿತ್ರಕಾರ ಡೀಗೊ ರಿವೇರನಿಂದ, ರ‍್ರಿಯಲಿಸಂನ ಕೆಲವು ಅಂಶಗಳಿಂದ, ೧೯೩೯ರಲ್ಲಿ ನ್ಯೂಯಾರ್ಕಿನಲ್ಲಿ ನಡೆದ ಪಿಕಾಸೊ ಚಿತ್ರಗಳ ಒಂದು ಪ್ರದರ್ಶನದಿಂದ ಪ್ರಭಾವಿತನಾದ ಈತ ‘ಪೇಂಟಿಂಗಿಗೆ ಅದರದೇ ಆದ ಜೀವನವಿದೆ. ನಾನು ಆ ಜೀವನವನ್ನು ಅರಳಿಸಲು ಪ್ರಯತ್ನಿಸುತ್ತೇನೆ’ ಎಂದೊಮ್ಮೆ ಹೇಳಿದ್ದುಂಟು.

1940ರ ಹೊತ್ತಿಗೆ ತನ್ನ ‘ಹನಿ ಚಿತ್ರಗಳಿಗೆ’ (ಡ್ರಿಪ್ ಪೇಂಟಿಂಗ್ಸ್) ಹೆಸರಾಗಿದ್ದ ಜಾಕ್ಸನ್ ಪೊಲ್ಯಾಕ್ 20ನೇ ಶತಮಾನದ ಅತ್ಯಂತ ಸ್ವೋಪಜ್ಞ ಕಲಾ ಶೈಲಿಯೊಂದನ್ನು ಆವಿಷ್ಕರಿಸಿದ ಮಾರ್ಗಪ್ರವರ್ತಕ. ಚಿತ್ರಗಳನ್ನು ರಚಿಸಬೇಕಾದಾಗ ಅವನು ತನ್ನ ಕ್ಯಾನ್‌ವಾಸುಗಳನ್ನು ಗೋಡೆಗೆ ನಿಲ್ಲಿಸುವುದೋ ಈಸೆಲ್ಲಿಗೆ ಬಂಧಿಸುವುದೋ ಮಾಡದೆ ನೆಲದ ಮೇಲೆ ಮಲಗಿಸುತ್ತಿದ್ದ. ಆಮೇಲೆ ಬಣ್ಣದ ಕ್ಯಾನಿನ ಬಣ್ಣ ಕ್ಯಾನ್‌ವಾಸಿನ ಮೇಲೆ ಹನಿಹನಿಯಾಗಿ ಸುರಿಯುವಂತೆ ಮಾಡುತ್ತಿದ್ದ; ಕುಂಚವನ್ನು ಕೈಬಿಟ್ಟು ಚಾಕುಗಳನ್ನು, ಕಡ್ಡಿಗಳನ್ನು, ಕರಣೆಗಳನ್ನು ಉಪಯೋಗಿಸಿ ತನ್ನ ಅಮೂರ್ತ ಪ್ರತಿಮೆಗಳಿಗೆ ಹೊಸ ಆಯಾಮ ಕಲ್ಪಿಸುತ್ತಿದ್ದ. ಅವನ ಆ ಬಗೆಯ ಚಿತ್ರಗಳಲ್ಲಿ ಕಲಾವಿದನ ಒಂದು ನಿರ್ದಿಷ್ಟ ಮನಃಸ್ಥಿತಿಯ ನೇರ ಅಭಿವ್ಯಕ್ತಿಯುಂಟು.

ಕಲೆಗೆ ಸಂಬಂಧಿಸಿದಂತೆ ಅವನು ತೆಗೆದುಕೊಂಡ ನಿಲುವುಗಳು, ಅನುಸರಿಸಿದ ಸೃಜನಶೀಲ ವಿಧಾನಗಳು ಬಾಲಮುರಳೀ ಕೃಷ್ಣರ ಸಂಗೀತದಂತೆ ನವನವೋನ್ಮೇಶಶಾಲಿಯಾಗಿದ್ದವು. ಸ್ಪೇಸ್, ಪಿಗ್ಮೆಂಟ್, ಅಂಚು ಮತ್ತು ಡ್ರಾಯಿಂಗುಗಳ ನಡುವೆ ಬಗೆಬಗೆಯ ಸಂಬಂಧಗಳ ಹೊಸದೊಂದು ವಿನ್ಯಾಸವನ್ನು ರೂಪಿಸಿದ ಹೆಗ್ಗಳಿಕೆ ಅವನದು.

ಪೊಲ್ಯಾಕ್ ತನ್ನ ಪೇಂಟಿಂಗುಗಳನ್ನು ರಚಿಸಿದ್ದು ಒಂದು ರೀತಿಯಲ್ಲಿ ಅನುಕ್ರಮವಾಗಿ. ಅಂದರೆ ಮೊದಲೊಂದು ಬಣ್ಣ, ನಂತರ ಇನ್ನೊಂದು, ಆಮೇಲೆ ಮತ್ತೊಂದು, ಹೀಗೆ. ಬಾಲಮುರಳೀಕೃಷ್ಣರ ಕಲ್ಪನಾ ಸ್ವರಗಳು ರೂಪುಗೊಳ್ಳುವುದು ಕೂಡ ಅನುಕ್ರಮವಾಗಿಯೇ. ಅಂದರೆ ಮೊದಲು ವಿಳಂಬ ಕಾಲದಲ್ಲಿ, ನಂತರ ಮಧ್ಯಮ ಕಾಲದಲ್ಲಿ, ಕೊನೆಗೆ ತಾರದಲ್ಲಿ. ಪೊಲ್ಯಾಕನ ಚಿತ್ರಗಳಲ್ಲಿ ಬಣ್ಣಗಳು ಬಿಂದುಗಳಾಗಿ, ಬಿಂದುಗಳು ಗೆರೆಗಳಾಗಿ, ಗೆರೆಗಳು ತಮ್ಮ ಚಲನೆಯಿಂದಲೇ ಅಮೂರ್ತ ಅನುಭವವೊಂದನ್ನು ನೇಯುವ ಸಾಧನಗಳಾಗಿ ಕಣ್ಣು ಕುಕ್ಕುತ್ತವೆ. ಬಾಲಮುರಳಿಯವರ ಕಲ್ಪನಾ ಸ್ವರಗಳು ಕೂಡ ಹಾಗೆಯೇ. ಇಬ್ಬರದೂ ದೇಶಕಾಲಗಳಲ್ಲಿ ನಡೆಯುವ ಕಲಾಸೃಷ್ಟಿ. ರಾಗವೆಂದರೆ ಬಣ್ಣವೆಂಬ ಅರ್ಥವೂ ಇದೆಯಷ್ಟೆ. ಒಂದು ಕಾಲದಲ್ಲಿ ಬಾಲಮುರಳಿಯವರು ಕೂಡ ಕುಂಚವನ್ನು ಬಣ್ಣಗಳಲ್ಲಿ ಅದ್ದಿ ಚಿತ್ರಗಳನ್ನು ರಚಿಸುತ್ತಿದ್ದ ಕಲಾವಿದರಾಗಿದ್ದವರು.

ಬಾಲಮುರಳೀಗಾನ

ನೀನಿರುವುದೆಲ್ಲಿ? ಭಾಷೆ ಭಾಷೆಗಳೆಲ್ಲ ಕೊನೆಯಾಗುವಲ್ಲ? ಕೇಳಿಸುತ್ತಿದೆಯೀಗ ಪ್ರತಿಮೆಗಳ ಉಸಿರಾಟ, ಚಿತ್ರಪಟಗಳ ಮೌನ ಬೇಸಿಗೆಯ ಸಂಜೆಗಳ ನೀರವದ ಎಲೆಯುದುರು ಬಿಸಿಲು ಹಳ್ಳೆಂದೊಡೆದ ಗಾಜು.

ಕೆರೆಯಂಚಿನ ಗಿಡದ ಹಕ್ಕಿಗಳೆಲ್ಲ ಹಾರಿ ಮರೆಯಾದವು ದೂರ ದೂರ ನೀರ ಕನ್ನಡಿಯಲ್ಲಿ ಮೂಡುತ್ತಿದೆಯೊಂದು ಅಲೆ; ಇನ್ನೇನು ಬೀಸಿಬಿಡಬಹುದೊಂದು ಚಂಡಮಾರುತ.

ಕಲ್ಲು ಕರಗುವ ಸಮಯ ಬೇಕಿಲ್ಲ ಉಳಿಯೇಟು ನೋಡುನೋಡುತ್ತ ಪುಡಿಯಾಗಿ ಕುಡಿಯೊಡೆಯುವ ಕಲ್ಲೇ ಬಳ್ಳಿಮಾಡಗಳಾಗಿ ಹೂತಳೆದು ವರ್ಣಮಯ ಚಿಟ್ಟೆಗಳ ಬಳಿ ಕರೆದು ವಿರಹಿ ರಾಧೆಯ ಕೈಯ ಹಿಡಿದು ಕರೆತಂದಂತೆ ಶ್ರೀಕೃಷ್ಣ ಸನ್ನಿಧಿಗೆ

ಮಟಮಟ ಮಧ್ಯಾಹ್ನ ಸಮುದ್ರಕ್ಕೆ ಸ್ನಾನ ಮಾಡಿಸಿದಂತೆ ಗೊಂಡಾರಣ್ಯವೇ ಕೈತೋಟಕ್ಕೆ ಬಂದುಬಿಟ್ಟಂತೆ ಇಳಿಸಂಜೆ ಸೀಗೆಮಳೆಯಲ್ಲಿ ನುಸುಳಿದ ಹಾವು ಸರಸರನೆ ತನ್ನದೇ ಪೊರೆಯ ಸುಲಿದಂತೆ ಆಕಾಶದಿಂದ ಅಂಗಳಕ್ಕಿಳಿದ ಚಂದ್ರ ಕಂದಮ್ಮಗಳ ಕಣ್ಣ ನೀರೊರೆಸಿದಂತೆ

ರಾಗವೇ? ಅಲ್ಲಲ್ಲ ಚರಾಚರದ ರೂಪಾಂತರ

ಕತ್ತಲು ತುಯ್ಯುವ ರಾತ್ರಿ ಉಯ್ಯಲಾಡುವ ನಕ್ಷತ್ರಗಳ ಹಾಡಿಂದ ಉದುರುತ್ತಿದೆ ಸ್ವರ-ಸೇಬು

ಹೋ ಬನ್ನಿ ಓಡೋಡಿ, ಎರಡೂ ಕೈಚಾಚಿ ಹಿಡಿದು ಸವಿಯಿರಿ

ಸಂತೋಷವೆನ್ನುವುದು ನೆಲದಲ್ಲಿಲ್ಲ ನೆಲಕ್ಕಿಂತ ತುಸು ಮೇಲೆ

-ಎಸ್. ದಿವಾಕರ (‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಕವನ ಸಂಕಲನದಿಂದ)

balamuralikrishna s diwakar

ಹಿರಿಯ ಲೇಖಕ, ವಿಮರ್ಶನ ಎಸ್. ದಿವಾಕರ

ಪರಿಚಯ : ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿ ಎಸ್. ದಿವಾಕರ ಅವರ ಹುಟ್ಟೂರು. ಹಿರಿಯ ಕಥೆಗಾರರು, ಅನುವಾದಕರು ಮತ್ತು ವಿಮರ್ಶಕರಾದ ಇವರು ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿದ್ದ ಇವರು ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ, ಆತ್ಮಚರಿತ್ರೆಯ ಕೊನೆಯ ಪುಟ, ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ, ಪ್ರಪಂಚ ಪುಸ್ತಕ, ಪಂಡಿತ ಭೀಮಸೇನ ಜೋಶಿ, ಕಥಾಜಗತ್ತು, ಜಗತ್ತಿನ ಅತಿಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು, ಹಾರಿಕೊಂಡು ಹೋದವನು, ವೆನಿಸ್ಸಿನಲ್ಲಿ ಸಾವು, ಹಳ್ಳಿ, ಪೋಸ್ಟ್ ಮ್ಯಾನ್, ಮಾಸ್ಟರ್ ಬಿಲ್ಡರ್, ಶತಮಾನದ ಸಣ್ಣಕತೆಗಳು, ಸಣ್ಣಕತೆ 1983, ಕನ್ನಡ ಅತಿ ಸಣ್ಣಕತೆಗಳು, ನಾದದ ನವನೀತ, ಬೆಸ್ಟ್ ಆಫ್ ಕೇಫ ಇವುಗಳು ಇವರ ಪ್ರಮುಖ ಕೃತಿಗಳು.

ಇದನ್ನೂ ಓದಿ : ಆನ್‌ಲೈನ್ ರಂಗಭೂಮಿ ತರಬೇತಿ; ರಂಗ ಚಟುವಟಿಕೆ ಆರಂಭಕ್ಕೆ ಮೈಸೂರಿನಲ್ಲಿ ಚಾಲನೆ ನೀಡಿದ ನಟ ಮಂಡ್ಯ ರಮೇಶ್

Published On - 1:31 pm, Tue, 6 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ