Dharwad: ಮಾನವ ಜಾತಿ ತಾನೊಂದೆ ವಲಂ; ಹೇ ರಾಮ್! ಪ್ರೀತಿ ಬೆರೆತ ಅನ್ನಧರ್ಮದ ಅಮಲೇರಿಸು

|

Updated on: Apr 12, 2022 | 1:13 PM

Jyothi Bommanahalli : ‘ಬಿತ್ತಿದ್ದ ಬೀಜ ಎಮ್ಮಿಕೆರಿಯ ಕೊನೆಯ ಓಣಿಯ ರಾಮನ ಹೊಲದ್ದೇ, ಒಡಲ ಬಿರಿದು ಕಲ್ಲಂಗಡಿ  ಚೂರು ಚೂರಾಗಿದ್ದು ಮಾತ್ರ ರಹೀಮನ ಹೆಸರಿನಲ್ಲಿ.’

Dharwad: ಮಾನವ ಜಾತಿ ತಾನೊಂದೆ ವಲಂ; ಹೇ ರಾಮ್! ಪ್ರೀತಿ ಬೆರೆತ ಅನ್ನಧರ್ಮದ ಅಮಲೇರಿಸು
ಜ್ಯೋತಿ ಬೊಮ್ಮನಹಳ್ಳಿ
Follow us on

Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.

 

ಬೆಂಗಳೂರಿನಲ್ಲಿ ವಾಸಿಸುತ್ತಿರುವ ಲೇಖಕಿ, ಪತ್ರಕರ್ತೆ ಜ್ಯೋತಿ ಬೊಮ್ಮನಹಳ್ಳಿ ಕವಿತೆ.

ಅಂದು  ರಾಮನವಮಿಯಂದೇ
ಅಮಿನಾಬಿ ಕಟ್ಟಿದ ಗುಲಾಬೀ  ಬಣ್ಣದ ಬಾಬೀ ರಿಬ್ಬನ್
ಜಡೆಯಲ್ಲಿ  ಮಲ್ಲಿಗೆ ಮುಡಿಸಿದ ಚಾಂದಬೀಬಿ
ನಾಜೂಕಾಗಿ  ಕೈಗೆ  ಬಳೆ ತೊಡಿಸಿದ ಬಳೆ ಸಾಬಣ್ಣ
ಹುರಿದ ಹುರಿಗಡಲೆ ಪೊಟ್ಟಣ  ಹಿಡಿಸಿದ ಅಬುಕಾಕಾ
ಕೆರೆಯು ಏರಿ ಮೇಲೆ ಸಾಗುತ್ತಿದ್ದ ಗೆಳೆತಿಯರ ನಗೆ…
ಹನುಮಾನ್ ದೇವರಿಗೊಂದು
ಸಲಾಂ…
ಮೈದುಂಬಿ ನುಡಿಸುತ್ತಿದ್ದ ಖಾನ್ ಸಾಹೇಬರ  ಬೆರಳು
ಅಲ್ಲಾ ತೇರೋ ನಾಮ್
ಈಶ್ವರ ತೇರೋ ನಾಮ್
ಸಬ್ ಕೊ ಸನ್ಮತಿ ದೇ ಭಗವಾನ್
ಮರೆತೇನಂದ್ರ ಮರೆಯಲಿ ಹ್ಯಾಂಗ…

ಇಂದು…
ಬಿತ್ತಿದ್ದ ಬೀಜ ಎಮ್ಮಿಕೆರಿಯ ಕೊನೆಯ ಓಣಿಯ
ರಾಮನ ಹೊಲದ್ದೇ
ಒಡಲ ಬಿರಿದು ಕಲ್ಲಂಗಡಿ ಚೂರುಚೂರಾಗಿದ್ದು
ಮಾತ್ರ ರಹೀಮನ ಹೆಸರಿನಲ್ಲಿ,
ಹೇ ರಾಮ್
ಪ್ರೀತಿ ಬೆರೆತ
ಅನ್ನಧರ್ಮದ
ಅಮಲೇರಿಸು.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಸಾಲುಘಟನೆಗಳ ಹಿಂದೆ ವ್ಯವಸ್ಥಿತ ಕಾರ್ಯಸೂಚಿಯಿದೆ, ಎಚ್ಚೆತ್ತುಕೊಳ್ಳಿ!

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೇ ವಲಂ: ‘ವ್ಯವಹಾರಕ್ಕೂ ಧರ್ಮಕ್ಕೂ ತಳಕು ಹಾಕಬಾರದು’ ಗುರುಲಿಂಗ ಕಾಪಸೆ

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೇ ವಲಂ; ‘ಸಾಕ ನಿಲ್ಲಸ್ರೀ ಆರ್ತನಾದ, ಬುದ್ಧಿವಂತಿಕೆಯಿಂದ ಬಲಿಷ್ಠ ‘ನಾದ’ ಹೊಮ್ಮಿಸ್ರೀ’