ಭಾರತೀಯ ಕಲಾಪ್ರಪಂಚವು ಶೃಂಗಾರ, ಕಾಮ ಮತ್ತು ಲೈಂಗಿಕತೆಯಂಥ ಸಹಜ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಅಗಾಧ ಅಡಿಪಾಯ ಮತ್ತು ಪರಂಪರೆಯನ್ನು ಹೊಂದಿದೆ. ರಂಗಭೂಮಿ, ಸಿನೆಮಾ, ಸಾಹಿತ್ಯ ಮುಂತಾದ ಲಲಿತ ಕಲೆಗಳ ಮೂಲಕ ಪ್ರಕೃತಿ ಪುರುಷನಲ್ಲಿ ಅಂತರ್ಗತವಾಗಿರುವ ವಿವಿಧ ಮುಖಗಳನ್ನು ಸೃಜನಶೀಲವಾಗಿ ಅನಾವರಣಗೊಳಿಸುವ ನಿರಂತರ ಶೋಧನೆ ಈ ಕ್ಷಣದವರೆಗೂ ನಡೆಯುತ್ತಲೇ ಇದೆ. ತಕ್ಕಂತೆ ವಿವಿಧ ಅಭಿರುಚಿಯ ರಸಿಕಸಮೂಹವೂ ರಸಾಸ್ವಾದಕ್ಕಾಗಿ ಸದಾಸಿದ್ಧವೇ. ಆದರೆ ಈ ಎಲ್ಲ ಪ್ರಕ್ರಿಯೆಗಳ ನಡುವೆಯೇ ಕೆಲವೊಮ್ಮೆ ಅನ್ನದೊಳಗೆ ಕಲ್ಲಿನಹರಳು ಸಿಕ್ಕಂಥ ಪ್ರಸಂಗಗಗಳು ರಸಾಭಾಸ ಉಂಟುಮಾಡಿಬಿಡುತ್ತವೆ. ಇದಕ್ಕೆ ತಾಜಾ ಉದಾಹರಣೆ ರಾಜ್ ಕುಂದ್ರಾ ಪ್ರಕರಣ (Raj Kundra and Shilpa Shetty) ಮತ್ತು ನಟಿ ಶಿಲ್ಪಾ ಶೆಟ್ಟಿಯ ಹೇಳಿಕೆ. ‘ನನ್ನ ಗಂಡ ನಿರ್ಮಿಸಿರುವುದು ಕಾಮೋದ್ರೇಕದ ಸಿನೆಮಾಗಳನ್ನೇ ಹೊರತು ಅಶ್ಲೀಲ ಸಿನೆಮಾಗಳನ್ನಲ್ಲ’ ಎಂದಿದ್ದಾರೆ ಶಿಲ್ಪಾ. ಹೀಗಿರುವಾಗ ಶೃಂಗಾರ, ಕಾಮ, ಅಶ್ಲೀಲ ಅಭಿವ್ಯಕ್ತಿಗಳ ಮಧ್ಯೆ ಇರುವ ತೆಳುಗೆರೆಗಳ ಸುತ್ತ ಪ್ರಶ್ನೆಗಳೇಳುವುದು ಸಹಜ. ಈ ವಿಚಾರವಾಗಿ ಇಂದಿನಿಂದ ಶುರುವಾಗಲಿದೆ ‘ಟಿವಿ 9 ಕನ್ನಡ ಡಿಜಿಟಲ್ – ಮನೋರಂಜನ ವೃತ್ತಾಂತ’ ಹೊಸ ಸರಣಿ. ಇದರಲ್ಲಿ ಹಿರಿಯ ಪತ್ರಕರ್ತರು, ಬರಹಗಾರರು, ಕಲಾವಿಮರ್ಶಕರು ಕಲೆಯ ಸಾಧ್ಯತೆ, ಪ್ರಯೋಗ ಸೂಕ್ಷ್ಮತೆ ಮತ್ತು ಪರಿಣಾಮಗಳ ಕುರಿತು ಚರ್ಚಿಸುತ್ತಾರೆ.
*
ಧಾರವಾಡದಲ್ಲಿ ವಾಸಿಸುತ್ತಿರುವ ಸುಧೀಂದ್ರ ದೇಶಪಾಂಡೆ ಅವರು ನಿವೃತ್ತ ಎಂಜಿನಿಯರ್. ಸುಮಾರು ಹದಿಮೂರು ವರ್ಷಗಳ ಹಿಂದೆ ಸುನಾಥ ಕಾವ್ಯನಾಮದಲ್ಲಿ ಸಲ್ಲಾಪ ಬ್ಲಾಗ್ ಮೂಲಕ ಎಳೆಯರಿಗೆ ಬೇಂದ್ರೆ ಕಾವ್ಯದ ರುಚಿ ಹಚ್ಚಿಸಿದರು, ಹೆಚ್ಚಿಸಿದರು. ‘ಕರ್ನಾಟಕದ ಸ್ಥಳನಾಮಗಳು’ ಮತ್ತು ‘ಬೇಂದ್ರೆ ಶರೀಫರ ಕಾವ್ಯಯಾನ’ ಇವರ ಪ್ರಕಟಿತ ಪುಸ್ತಕಗಳು. ಅವರಿಲ್ಲಿ ಕಾಮ ಮತ್ತು ಶೃಂಗಾರದ ಕುರಿತು ತಮ್ಮ ವಿಚಾರಗಳನ್ನು ವ್ಯಕ್ತಪಡಿಸುತ್ತ ಒಳ್ಳೆಯ ಮತ್ತು ಕೆಟ್ಟ ಸಾಹಿತ್ಯ-ಸಿನೆಮಾ ಎಂದು ಗುರುತಿಸುವುದು ಹೇಗೆ ಎಂದು ತಿಳಿಸಿದ್ದಾರೆ.
*
ಒಬ್ಬಂಟಿಯಾಗಿ ಬದುಕುತ್ತಿದ್ದ ದೇವನಿಗೆ ಯಾಕೋ ಬಹಳ ಬೇಜಾರಾಯಿತಂತೆ : ‘ತನಹಾ, ತನಹಾ ಯಹಾಂಪೆ ಜೀನಾ, ಏ ಕೋಯಿ ಬಾತ ಹೈ’ ಎಂದು ಹಾಡುತ್ತ ದೇವನು ಎರಡಾಗಲು ಬಯಸಿದನಂತೆ. ಆದರೆ ಆ ಸಮಯದಲ್ಲಿ ಅವನಿಗೆ ಸಂಗಾತಿ ಇರಲಿಲ್ಲವಲ್ಲ. ಆದುದರಿಂದ ತನ್ನನ್ನು ತಾನೇ ವಿಭಜಿಸಿಕೊಂಡು ಎರಡಾದನಂತೆ. ಇದು ಪ್ರಜೋತ್ಪತ್ತಿಯ ಮೊಟ್ಟ ಮೊದಲ ವಿಧಾನ. ಸಂಗಾತಿಯ ಅವಶ್ಯಕತೆ ಇಲ್ಲದೆ, ತನ್ನ ದೇಹವನ್ನೇ ವಿಭಜಿಸಿಕೊಂಡು ಎರಡಾಗುವ ವಿಧಾನ. ಬೆಕ್ಟೀರಿಯಾ, ವೈರಸ್ ಇವೆಲ್ಲ ಇದೇ ವಿಧಾನದಲ್ಲಿ ಉತ್ಪತ್ತಿಯನ್ನು ಮಾಡುತ್ತಿವೆ. ಇದೀಗ ಎರಡಾದ ಬಳಿಕ ಮತ್ತೇಕೆ ತಡ? ಈ ಜೀವಕೋಶಗಳು ಜೊತೆಯಾಗುವುದನ್ನು ಕಲಿತವು. ಇದರ ಪರಿಣಾಮವಾಗಿ ಇಂದು ಜಗತ್ತಿನ ಮಾನವ ಜನಸಂಖ್ಯೆ ೭೦೦ ಕೋಟಿಯಾಗಿದೆ. ಇದಕ್ಕೆಲ್ಲ ದೇವನ ಕಾಮ ಅಂದರೆ ದೇವನ ಬಯಕೆ—ಸೃಷ್ಟಿಸುವ ಬಯಕೆಯೇ-ಕಾರಣವಾಗಿದೆ. ಬೇಂದ್ರೆಯವರು ಇದನ್ನು ‘ದೇವಕಾಮವೇ ಕಾಮದೇವನಾಗಿ’ ಎಂದು ಕವನಿಸಿದ್ದಾರೆ.
ಮನುಷ್ಯನು ನಾಗರಿಕನಾಗತೊಡಗಿದಂತೆ ಕಾಡಿನಲ್ಲಿ ಸಹಜವಾಗಿ ಜರಗುತ್ತಿರುವ ಸಂತಾನಕ್ರಿಯೆಗೆ ಮುಸುಕು ಬೀಳತೊಡಗಿತು. ಸಮಾಜವು ಅನೇಕ ನಿಯಂತ್ರಣಗಳನ್ನು ಹೇರಲಾರಂಭಿಸಿತು. ಮನುಷ್ಯನು ತನ್ನ ಬಯಕೆಗಳನ್ನು ಅದುಮಿ ಇಡಬೇಕಾಯಿತು. ಆಗ ಬೇಕಾಯಿತು ಈ ಮುಚ್ಚಿಡುವ ಕಾಮಕ್ಕೊಂದು ಅಭಿವ್ಯಕ್ತಿ ಪ್ರಕಾರ; ಅದೇ ಶೃಂಗಾರರಸ.
ಸಂಸ್ಕೃತ ಸಾಹಿತಿಗಳಿಗೆ ಶೃಂಗಾರವು ಪ್ರಿಯವಾದ ರಸವಾಗಿದೆ. ದೇವರನ್ನು ಪ್ರಾರ್ಥಿಸುವಾಗ ಸಹ ಅವರು ಶೃಂಗಾರರಸದಲ್ಲಿ ವಿಜೃಂಭಿಸುತ್ತಾರೆ. ಸರ್ವವಿಘ್ನಗಳನ್ನು ನಿವಾರಿಸುವ ಗಣೇಶನನ್ನು ಮೊದಲಿಗೆ ಪ್ರಾರ್ಥಿಸುವುದು ವಾಡಿಕೆಯಷ್ಟೆ. ಇಲ್ಲಿಯೂ ಸಹ ಒಬ್ಬ ಭಕ್ತಸಾಹಿತಿಯ ಕಿಲಾಡಿತನವು ಹೀಗಿದೆ:
ಶಿವ ಹಾಗೂ ಪಾರ್ವತಿಯರ ನಡುವೆ ಗಣೇಶ ಕುಳಿತುಕೊಂಡಿದ್ದಾನೆ. ಅವರೀರ್ವರು ಗಣೇಶನನ್ನು ಮುದ್ದಿಸಲು ಹೊರಟಾಗ, ಗಣೇಶನು ಥಟ್ಟನೆ ಹಿಂದೆ ಸರಿದುಕೊಳ್ಳುತ್ತಾನೆ. ಇದರಿಂದಾಗಿ ಶಿವಪಾರ್ವತಿಯರ ನಡುವೆ ಅವರಿಗರಿವಿಲ್ಲದೆ ಚುಂಬನದ ವಿನಿಮಯವಾಗುತ್ತದೆ. “ಇಂತಹ ತುಂಟ ಗಣೇಶನಿಗೆ ನಮಸ್ಕಾರಗಳು. ಅವನು ನಮ್ಮೆಲ್ಲರ ಎಲ್ಲ ವಿಘ್ನಗಳನ್ನು ನಿವಾರಿಸಲಿ” ಎಂದು ಈ ಭಕ್ತಸಾಹಿತಿಯು ಬೇಡಿಕೊಳ್ಳುತ್ತಾನೆ. ಈ ವಿಘ್ನಗಳು ಯಾವ ತರಹದ ವಿಘ್ನಗಳು ಎನ್ನುವುದನ್ನು ಆತನು ಸ್ಪಷ್ಟಪಡಿಸಿಲ್ಲ!
ಗಣೇಶನ ಪಾಳಿ ಮುಗಿಯಿತು. ಇದೀಗ ತ್ರಿಮೂರ್ತಿಗಳ ಪಾಳಿ. ಆದರೆ ಇವರು ಕಾಮದೇವನಿಗೆ ಮೊದಲೇ ಶರಣಾಗತರಾದ ತ್ರಿಮೂರ್ತಿಗಳು. ಸಂಸ್ಕೃತದ ಮಹಾಕವಿಯಾದ ಭರ್ತೃಹರಿಯು ತನ್ನ ಶೃಂಗಾರಶತಕದಲ್ಲಿ ಇವರನ್ನು ವರ್ಣಿಸುವುದು ಹೀಗೆ:
ಶಂಭುಸ್ವಯಂಭುಹರಯೋ ಹರಿಣೇಕ್ಷಣಾನಾಮ್
ಯೇನಾಕ್ರಿಯಂತ ಸತತಮ್ ಗೃಹಕರ್ಮದಾಸಾ:
ವಾಚಾಮಗೋಚರ ಚರಿತ್ರವಿಚಿತ್ರತಾಯ
ತಸ್ಮೈ ನಮೋ ಭಗವತೇ ಕುಸುಮಾಯುಧಾಯ!
ನೋಡಿದಿರಾ, ಕಾಮದೇವನ ಮಹಿಮೆಯನ್ನು? ಯಾವ ದೇವತೆಗಳ ವರ್ಣನೆಯನ್ನು ಮಾಡುವುದು ಅಸಾಧ್ಯವೋ ಅಂತಹ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರನ್ನು ಕಾಮದೇವನು ಕಾಮಿನಿಯರ ಮನೆಗಳಲ್ಲಿ ಕೆಲಸ ಮಾಡುವ ದಾಸರನ್ನಾಗಿ ಮಾಡಿದ್ದಾನೆ. ಇದು ಕಾಮದ ಆಧಿಕ್ಯವನ್ನು ವರ್ಣಿಸುವ ಪ್ರಸಂಗ. ಆದರೆ ನಮ್ಮ ಸಾಹಿತ್ಯವು ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿದೆ. ಕಾಮಕ್ಕಿಂತ ಪ್ರಣಯಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿದೆ. ಜಾನಪದ ಸಾಹಿತ್ಯದಲ್ಲಿ ಬರುವ ಮ್ಹಾಳಸಾ-ಮಾರ್ತಾಂಡರ ಕಥೆಯು ಇದನ್ನು ಸ್ಪಷ್ಟಪಡಿಸುತ್ತದೆ.ಬೇಟೆಗೆ ಹೊರಟ ಶಿವನು ಮ್ಹಾಳಸಾಳ ಜೊತೆಗೆ ಪ್ರಣಯದಾಟವನ್ನು ಆಡಿ, ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಂಡು ತನ್ನ ಮನೆಗೆ ಮರಳುತ್ತಾನೆ. ಅಲ್ಲಿ ಅವನೀಗ ಪಾರ್ವತಿಯನ್ನು ಎದುರಿಸಬೇಕು! ಮೊದಲೇ ಗಂಗೆಯೊಡನೆ ಗಂಡನನ್ನು ಹಂಚಿಕೊಂಡ ಪಾರ್ವತಿಯು ಇದೀಗ ಮತ್ತೂ ಒಬ್ಬಳಿಗೆ ಅವನನ್ನು ಒಪ್ಪಿಸಬೇಕು. ಶಿವಪಾರ್ವತಿಯರ ಮುನಿಸು ಹಾಗು ಶೃಂಗಾರವು ಕನ್ನಡ ಚಲಚಿತ್ರವೊಂದರಲ್ಲಿ ಸೊಗಸಾಗಿ ಚಿತ್ರಿತವಾಗಿದೆ.
ಕನ್ನಡ ಕವಿಗಳು ಸಹ ಶೃಂಗಾರವರ್ಣನೆಯಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಕನ್ನಡಿಗರ ಶೃಂಗಾರವರ್ಣನೆಯು ಸಂಸ್ಕೃತಸಾಹಿತಿಗಳ ವರ್ಣನೆಗಿಂತ ಹೆಚ್ಚು ನಯವಾಗಿದೆ. ರತ್ನಾಕರ ವರ್ಣಿಯು ರಚಿಸಿದ ‘ಭರತೇಶ ವೈಭವ’ದ ಪ್ರಣಯಪ್ರಸಂಗಗಳು ಹೂವಿನ ಪರಿಮಳದಂತೆ ಓದುಗರ ಮನದಲ್ಲಿ ನವಿರಾಗಿ ಹರಡುತ್ತವೆ.
ಇನ್ನು ನಮ್ಮ ಜನಪದ ಕವಿಗಳ ಪ್ರಣಯಭಾವವನ್ನು ಗಮನಿಸಿರಿ: ಹೊಸದಾಗಿ ಮದುವೆಯಾದ ತರುಣಿಯು ನಾಗರಪಂಚಮಿ ಹಬ್ಬಕ್ಕೆ ಮೊದಲಬಾರಿಗೆ ತವರುಮನೆಗೆ ಹೋಗಬೇಕಾಗಿದೆ. ಆದರೆ ತನ್ನ ನಲ್ಲನನ್ನು ಬಿಟ್ಟು ಹೋಗಲು ಅವಳಿಗೆ ಮನಸ್ಸಿಲ್ಲ. ಅವಳು ತನ್ನ ತಾಯಿಗೆ ಹೇಳುವುದು ಹೀಗೆ:
ಹಚ್ಚಡದಾಗಿನ ಅಚ್ಚಮಲ್ಲಿಗೆ ಹೂವು
ಬಿಚ್ಚಿ ನನ್ನ ಮ್ಯಾಲ ಒಗೆವಂಥ ರಾಯರನ
ಬಿಟ್ಹ್ಯಾಂಗ ಬರಲೆ ಹಡೆದವ್ವ?
ಈ ಎಲ್ಲ ಪ್ರಣಯಪ್ರಸಂಗಗಳು ಸ್ವಲ್ಪವಾದರೂ ದೈಹಿಕ ಸಾಮೀಪ್ಯವನ್ನು ಸೂಚಿಸುತ್ತವೆ. ಆದರೆ ನವೋದಯದ ಪ್ರಾರಂಭದ ಕವಿಯಾದ ಮುದ್ದಣನ ‘ರಾಮಾಶ್ವಮೇಧದಲ್ಲಿ’ ಬರುವ ಮುದ್ದಣ-ಮನೋರಮೆಯವರ ಸರಸಸಲ್ಲಾಪವು ಭೌತಿಕ ಸಾಮೀಪ್ಯವಿಲ್ಲದೇ ಇರುವ, ನಲ್ಲನಲ್ಲೆಯರ ಆತ್ಮೀಯ ಪ್ರಣಯದ ದ್ಯೋತಕವಾಗಿದೆ. ನವೋದಯದ ಉತ್ತುಂಗ ಸಮಯದಲ್ಲಿ ಕುವೆಂಪು, ಬೇಂದ್ರೆ, ಕೆ.ಎಸ್. ನರಸಿಂಹಮೂರ್ತಿಯವರು ಪ್ರಣಯಸಾಹಿತ್ಯದ ಅನೇಕ ಕವನಗಳನ್ನು ನೀಡಿದರು. ‘ಚಂದ್ರಮಂಚಕೆ ಬಾ ಚಕೋರಿ’ ಎನ್ನುವುದು ಕುವೆಂಪುರವರು ತಮ್ಮ ನಲ್ಲೆಗೆ ನೀಡಿದ ನೇರವಾದ ಪ್ರಣಯದ ಆಹ್ವಾನವಾಗಿದ್ದರೆ, ಬೇಂದ್ರೆಯವರ ‘ಗಮಗಮಾ ಗಮಾಡಸ್ತಾವ ಮಲ್ಲಿಗೆ’ ಎನ್ನುವುದು ನಲ್ಲೆಯ ವಿಪ್ರಲಂಭ ಶೃಂಗಾರದ ಕವನವಾಗಿದೆ.
ಇಂತಹ ಶ್ರೇಷ್ಠ ಪರಂಪರೆಯುಳ್ಳ ಕನ್ನಡದ ಸಾಮಾಜಿಕ ಸಂಸ್ಕೃತಿ ಈಗ ಹೇಗಿದೆ? ಮೊದಲು ಗಂಗೆಯಂತಿದ್ದ ನದಿಯು ಈಗ ಕೊಳೆತು ನಾರುವ ಚರಂಡಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಮೊದಲು ಸ್ಕೂಲ್ ಮಾಸ್ಟರ್, ನಾಂದಿ, ಉಯ್ಯಾಲೆಯಂತಹ ಸದಭಿರುಚಿಯ ಕನ್ನಡ ಚಲನಚಿತ್ರಗಳನ್ನು ಹಾಗೂ ‘ಜಾಗೃತಿ, ಸುಜಾತಾದಂತಹ ಶ್ರೇಷ್ಠ ಹಿಂದೀ ಚಲನಚಿತ್ರಗಳನ್ನು ನೋಡುತ್ತಿದ್ದ ನಾವು ಇದೀಗ ‘ಹೊಡಿ, ಬಡಿ, ರೇಪ್’ ನಂತಹ ಕೀಳು ಅಭಿರುಚಿಯ ಚಿತ್ರಗಳನ್ನು ನೋಡುತ್ತಿದ್ದೇವೆ. ಹಾಸ್ಯ ಎಂದು ಕರೆಯಿಸಿಕೊಳ್ಳುವ ಚಿತ್ರಗಳಲ್ಲಿ ವಿಚಿತ್ರ ವೇಷಗಳನ್ನು ಧರಿಸಿದ ತರುಣರು ಹುಡುಗಿಯರನ್ನು ಚುಡಾಯಿಸುವ ದೃಶ್ಯಗಳೇ ತುಂಬಿಕೊಂಡಿವೆ. ಇದು ನಮ್ಮ ಸಾಂಸ್ಕೃತಿಕ ಬದಲಾವಣೆಯ ದುರಂತ. ಇದರಿಂದ ನಮ್ಮ ಎಳೆ ವಯಸ್ಸಿನ ತರುಣರ ಮನಸ್ಸು ಗಲಿಚ್ಛವಾಗುತ್ತದೆ ಎಂದು ಹೇಳಿದರೆ; ಜನರು ಬಯಸುವ ಚಲನಚಿತ್ರಗಳನ್ನೇ ನಾವು ಕೊಡುತ್ತೇವೆ ಎಂಬುದು ನಮ್ಮ ನಿರ್ಮಾಪಕರ ಸಮಜಾಯಿಶಿ.
ಇಷ್ಟೇ ಅಲ್ಲ, ಪೋರ್ನೊಗ್ರಾಫಿಕ್ ವಿಡಿಯೋಗಳನ್ನು ಜಾಲತಾಣಗಳಲ್ಲಿ ಎಗ್ಗಿಲ್ಲದೇ ನೋಡಬಹುದು. ಇವೆಲ್ಲವುಗಳಿಗೆ ನ್ಯಾಯಾಲಯವು ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಉದಾರ ಧೋರಣೆಯನ್ನು ಪ್ರದರ್ಶಿಸುತ್ತಿದೆ.
ಹಾಗಿದ್ದರೆ, ಒಳ್ಳೆಯ ಹಾಗೂ ಕೆಟ್ಟ ಚಿತ್ರಗಳನ್ನು ಹೇಗೆ ಗುರುತಿಸಬೇಕು? ಯಾವ ಚಿತ್ರಗಳನ್ನು ನೋಡುವುದರಿಂದ ಅಥವಾ ಯಾವ ಸಾಹಿತ್ಯವನ್ನು ಓದುವುದರಿಂದ ಮನಸ್ಸು ಸಮಾಜಘಾತುಕ ಕ್ರಿಯೆಗಳಿಗೆ ಒಲಿಯುತ್ತದೆಯೊ, ದೇಶದ್ರೋಹಕ್ಕೆ ಒಲಿಯುತ್ತದೆಯೋ ಹೆಣ್ಣುಮಕ್ಕಳ ಬಗೆಗೆ ಕೀಳು ಭಾವನೆಯನ್ನು ಬೆಳೆಯಿಸುವುದೋ ಮತ್ತು ಹಿಂಸೆಯನ್ನು ಪ್ರಚೋದಿಸುವುದೋ ಅಂತಹ ಚಲನಚಿತ್ರ ಹಾಗೂ ಅಂತಹ ಸಾಹಿತ್ಯಗಳನ್ನು ಕೀಳುಮಟ್ಟದ ಅಭಿರುಚಿ ಎಂದು ಗುರುತಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅವುಗಳಿಗೆ ವಿನಾಯತಿಯನ್ನು ಕೊಡುವುದು ನಾವೇ ನಮ್ಮ ಮಕ್ಕಳನ್ನು ಅಪರಾಧಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ. ವ್ಯಕ್ತಿಸ್ವಾತಂತ್ರ್ಯದ ನೆಪದಲ್ಲಿ ವಿಷವನ್ನು ಕುಡಿಯುವುದು ಅಥವಾ ಕುಡಿಸುವುದು ಮಹಾ ಅಪರಾಧ.
ಇದನ್ನೂ ಓದಿ : Art and Entertainment : ‘ಮನೋರಂಜನೆ’ ಮೊಗ್ಗ ಚಿವುಟಿ ಸಂಭ್ರಮಿಸುವ ಮಾದಕತೆಯನ್ನು ವೈಭವೀಕರಿಸುವ ವಿಟರ ಕೂಟವಲ್ಲ
Published On - 3:15 pm, Tue, 3 August 21