ಬೆಂಗಳೂರು :
ನರಹಳ್ಳಿ ಪ್ರತಿಷ್ಠಾನದ 2021ನೇ ಸಾಲಿನ ನರಹಳ್ಳಿ ಪ್ರಶಸ್ತಿಗೆ ಉಡುಪಿ ಮೂಲದ ವಿಮರ್ಶಕರೂ, ಸಂಶೋಧಕರೂ ಆದ ಜಿ. ಎನ್. ಉಪಾಧ್ಯ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿಗಳ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ. ಡಾ. ಎಚ್. ಎಸ್ ವೆಂಕಟೇಶಮೂರ್ತಿ, ಬಿ. ಆರ್. ಲಕ್ಷ್ಮಣರಾವ್, ಲಕ್ಷ್ಮಣ ಕೊಡಸೆ, ರಜನಿ ನರಹಳ್ಳಿ, ಆನಂದರಾಮ ಉಪಾಧ್ಯ, ನ. ರವಿಕುಮಾರ್, ಸಿ. ಕೆ. ರಾಮೇಗೌಡ ಅವರನ್ನೊಳಗೊಂಡ ಸಮಿತಿಯು ಈ ಪ್ರಶಸ್ತಿಗೆ ಜಿ ಎನ್ ಉಪಾಧ್ಯ ಅವರನ್ನು ಆಯ್ಕೆ ಮಾಡಿದೆ.
ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಜಿ. ಎನ್. ಉಪಾಧ್ಯ ಅವರು ಮೂಲತಃ ಉಡುಪಿ ತಾಲೂಕಿನ ಕೋಟದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ, ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕ ಹಾಗೂ ಮೊದಲ ರ್ಯಾಂಕ್‍ನೊಂದಿಗೆ ಗಳಿಸಿಕೊಂಡರು. ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಅವರ ಪಿಎಚ್.ಡಿ. ಮಹಾಪ್ರಬಂಧ. ಸಾಂಸ್ಕೃತಿಕ ಅಧ್ಯಯನ, ವಿಮರ್ಶೆ, ಭಾಷಾ ವಿಜ್ಞಾನ ಮತ್ತು ಪತ್ರಿಕೋದ್ಯಮ ಅವರ ಆಸಕ್ತಿಯ ಕ್ಷೇತ್ರಗಳು. ಸೊಲ್ಲಾಪುರ ಒಂದು ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರದ ಕನ್ನಡ ಶಾಸನಗಳ ವರ್ಣಾನಾತ್ಮಕ ಸೂಚಿ, ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು, ಮಹಾರಾಷ್ಟ್ರ ಕರ್ನಾಟಕ ಸಾಂಸ್ಕೃತಿಕ ಬಾಂಧವ್ಯ ಮೊದಲಾದ ಸಂಶೋಧನ ಯೋಜನೆಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಚಿತ್ರದುರ್ಗದ ಮುರುಘಾಮಠ ಅವರಿಗೆ ‘ಶಿಕ್ಷಣ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದೆ. ಉಪಾಧ್ಯ ಅವರ ಕೃತಿಗೆ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ಶಾಂತಿಲಾಲ್ ಪ್ರಶಸ್ತಿ’ ದೊರಕಿದೆ. ಇತ್ತೀಚೆಗೆ ಅವರ ‘ಮಹಾರಾಷ್ಟ್ರ ಕರ್ನಾಟಕ ಆದಾನ ಪ್ರದಾನ’ ಕೃತಿಗೆ ಗದ್ಯ ವಿಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ‘ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಬಹುಮಾನ’ ಲಭಿಸಿದೆ. ಬಿಲ್ಲವರ ಅಸೋಸಿಯೇಷನ್ ಕೊಡ ಮಾಡುವ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ ಅವರಿಗೆ ಸಂದಿದೆ. ಕೆಲಕಾಲ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಪುಸ್ತಕ ಅವಲೋಕನದ ವಿಮರ್ಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಹೊರನಾಡಾದ ಮುಂಬೈಯಲ್ಲಿ ಅಭಿಜಿತ್ ಪ್ರಕಾಶನವನ್ನು ಆರಂಭಿಸಿ ಬೇರೆ ಬೇರೆ ಲೇಖಕರ ನೂರಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. ಈವರೆಗೆ ಡಾ. ಉಪಾಧ್ಯ ಅವರ ಎಪ್ಪತ್ತು ಕೃತಿಗಳು ಬೆಳಕು ಕಂಡಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 70 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ.
ಹಿರಿಯ ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ತಮಗೆ ಬಂದ ಪ್ರಶಸ್ತಿ ಮತ್ತು ಗೌರವಗಳ ಮೊತ್ತವನ್ನು‘ಕೆರೆಯ ನೀರನು ಕೆರೆಗೆ ಚೆಲ್ಲು’ ಎನ್ನುವಂತೆ ಇಡಿಗಂಟಾಗಿಸಿ ಅದರಿಂದ ಬರುವ ಬಡ್ಡಿಯಿಂದ ಪ್ರತಿವರ್ಷ ಪ್ರತಿಭಾನ್ವಿತ ಬರಹಗಾರರಿಗೆ ಕೊಡಲು ಅನುವು ಮಾಡಿಕೊಟ್ಟಿದ್ದಾರೆ. ಹಿರಿಯ ಕವಿಗಳಾದ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರ ಸಮರ್ಥ ಅಧ್ಯಕ್ಷತೆಯಲ್ಲಿ ಕಳೆದ ಆರು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ 2014ನೆಯ ಸಾಲಿನಲ್ಲಿ ಟಿ. ಯಲ್ಲಪ್ಪ ಅವರಿಗೆ, 2015ರಲ್ಲಿ ಪಿ. ಚಂದ್ರಿಕಾ ಅವರಿಗೆ 2016ರಲ್ಲಿ ಎಂ. ಆರ್. ದತ್ತಾತ್ರಿ ಅವರಿಗೆ, 2017ರಲ್ಲಿ ವಿನಯಾ ಅವರಿಗೆ, 2018ರಲ್ಲಿ ರಾಜೇಂದ್ರ ಪ್ರಸಾದ್ ಅವರಿಗೆ, 2019ರಲ್ಲಿ ವೆಂಕಟಗಿರಿದಳವಾಯಿ ಅವರಿಗೆ, 2020ರಲ್ಲಿ ಚಿದಾನಂದ ಸಾಲಿ ಅವರಿಗೆ ಪ್ರಶಸ್ತಿಗಳನ್ನು ನೀಡಲಾಗಿತ್ತು.
ಇದನ್ನೂ ಓದಿ : TOTO Award 2022 : ಕನ್ನಡದ ಸೃಜನಶೀಲ ಯುವಬರಹಗಾರರಿಗೊಂದು ಸಂತಸದ ಸುದ್ದಿ
Published On - 9:29 am, Wed, 4 August 21