Award : ನಾಗರಾಜ ಕೋರಿಗೆ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ

| Updated By: ಶ್ರೀದೇವಿ ಕಳಸದ

Updated on: May 25, 2022 | 9:07 AM

Story : ‘ಸಹಜವಾಗಿ ಮತ್ತು ಆಕಸ್ಮಿಕವಾಗಿ ನಡೆವ ಘಟನೆಗಳು ಉದ್ದಿಶ್ಯಪೂರ್ವಕ ಪ್ರತಿರೋಧವನ್ನು ಅಣಕಿಸುವಂತೆ ಸಹಜತೆಯಲ್ಲಿ ಮೂಡಿವೆ. ಕತೆಯಂತೂ ‘ಹೌದಲ್ಲ’ ಎನಿಸುತ್ತಿದೆ. ಇಡೀ ಕಥೆಯ ಅಂತಃಪ್ರವಾಹವಾಗಿ ಅಕ್ಕಮಹಾದೇವಿ ಸಾಂಕೇತಿಕ ಧ್ವನಿಯಾಗಿದ್ದಾಳೆ.’

Award : ನಾಗರಾಜ ಕೋರಿಗೆ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ
ಲೇಖಕ ನಾಗರಾಜ ಕೋರಿ
Follow us on

Award : 2022ನೇ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಪ್ರಶಸ್ತಿಯು ನಾಗರಾಜ ಕೋರಿ ಅವರ ‘ಕಳವಳದ ದೀಗಿ ಕುಣಿದಿತ್ತವ್ವ’ ಎಂಬ ಕಥೆಯ ಹಸ್ತಪ್ರತಿಗೆ ದೊರೆತಿದೆ. ಈ ಪುರಸ್ಕಾರವು ರೂ. 5,000  ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನಾಗರಾಜ, ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ, ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬನ್ನಿಗನೂರು ಎಂಬ ಗ್ರಾಮದವರು. ‘ಬುದ್ದಗಿತ್ತಿಯ ನೆನಪು’ ಎಂಬ ಕವನ ಸಂಕಲನ ಮತ್ತು ‘ತನುಬಿಂದಿಗೆ’ ಎಂಬ ಕಥಾ ಸಂಕಲನ ಈಗಾಗಲೇ ಪ್ರಕಟಗೊಂಡಿವೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಶಸ್ತಿ, ಮೋಹನ ಕುರಡಗಿ ಕಾವ್ಯ ಪ್ರಶಸ್ತಿ, ಮುಂಗಾರು ಕಥಾ ಬಹುಮಾನ ಮತ್ತು ಅಕ್ಷರ ಸಂಗಾತ ಕಥಾ ಬಹುಮಾನಗಳು ದೊರೆತಿವೆ. ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ ವಿಜಯಾ ಅಗಸನಕಟ್ಟೆ ಸಹಯೋಗದಲ್ಲಿ ನಡೆಯುತ್ತಿರುವ ಸತತ ಐದನೇ ವರ್ಷದ ಸ್ಪರ್ಧೆಯಿದಾಗಿದ್ದು, ಪ್ರಸ್ತುತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬರುವ ಜೂನ್​ನಲ್ಲಿ ನೆರವೇರಿಸಲಾಗುವುದು ಎಂದು ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದೆ.

ತೀರ್ಪುಗಾರರ ಅಭಿಪ್ರಾಯ : ‘ಅರ್ಧ ಕನಸಿನ ಬದುಕು, ಅರೆ ಸತ್ತ ಬದುಕು ತನ್ನನ್ನು ಆವರಿಸಿದ್ದರೂ ಕತೆಯಲ್ಲಿ ಬರುವ ಸನ್ನಿವೇಶಗಳು, ವಿವರಗಳು ಸರಳವೆನಿಸಿದರೂ ಸಮಸ್ಯೆಗಳು ಅಷ್ಟೇ ಸಂಕೀರ್ಣವಾಗಿವೆ. ಪುರುಷಾಧಿತ್ಯದ ತೀವ್ರತೆ. ಎಲ್ಲದಕ್ಕೂ ಏನಿದ್ದರೂ ಸ್ತ್ರೀಯರನ್ನೇ ಸಿಲುಕಿಸಿ ಸಲೀಸಾಗಿ ಪಾರಾಗುವ ಗಂಡಸರು ಸಮಾನವಾಗಿ ಜವಾಬ್ದಾರಿ ನಿಭಾಯಿಸುವಲ್ಲಿಯೂ ಕೇವಲ ಕೇವಲವೇ. ಈ ಎಲ್ಲ ದಟ್ಟೈಸುವಿಕೆಯ ನಡುವೆಯೂ ಕನಸಿದೆ ಬದುಕಿದೆಯೆಂಬುದನ್ನು ಸಂಚಾರಿ ವ್ಯಾಪಾರಿಯ ಮೂಲಕ, ಅವನನ್ನು ಕನಸಿಸುವ ಮುಖಾಂತರ ಕಥೆಯಲ್ಲಿಯ ಪ್ರತಿಮಾ ವಿಧಾನ ಸಶಕ್ತವಾಗಿದೆ.’

‘ಸಹಜವಾಗಿ ಮತ್ತು ಆಕಸ್ಮಿಕವಾಗಿ ನಡೆವ ಘಟನೆಗಳು ಉದ್ದಿಶ್ಯಪೂರ್ವಕ ಪ್ರತಿರೋಧವನ್ನು ಅಣಕಿಸುವಂತೆ ಸಹಜತೆಯಲ್ಲಿ ಮೂಡಿವೆ. ಕತೆಯಂತೂ ‘ಹೌದಲ್ಲ’ ಎನಿಸುತ್ತಿದೆ. ಇಡೀ ಕಥೆಯ ಅಂತಃಪ್ರವಾಹವಾಗಿ ಅಕ್ಕಮಹಾದೇವಿ ಸಾಂಕೇತಿಕ ಧ್ವನಿಯಾಗಿದ್ದಾಳೆ. ಜಾತ್ರೆಯಲ್ಲಿ ಹರಕೆಯ ಕೇಶಮುಂಡನ ಮುಂತಾದಕ್ಕೂ ನಾಯಕಿ ಒಟ್ಟೊಟ್ಟಾಗಿ ಮನಸ್ಸಿಲ್ಲದಿದ್ದರೂ ಒಪ್ಪಬೇಕಾದ ಅನಿವಾರ್ಯತೆ ಕಥೆಯನ್ನು ಸ್ಫೋಟಕದ ತುದಿಗೇರಿಸಿದೆ. ನಮಗೆ ಬಂದ ಮೂರು ಕಥೆಗಳನ್ನು ಓದಿ ಚರ್ಚಿಸಿದಾಗ ಈ ‘ಕವಳದ ದೀಗಿ ಕುಣಿದಿತ್ತವ್ವ’ ಇಂತಹ ಹಲವಾರು ಅಂಶಗಳನ್ನು ಹೊಂದಿರುವ ಕಾರಣದಿಂದ ಡಾ.ಪ್ರಹ್ಲಾದ ಅಗಸನಕಟ್ಟೆ ಕಥಾಸ್ಪರ್ಧೆಗೆ ಅರ್ಹವೆಂದು ಭಾವಿಸಿದ್ದೇವೆ.’

ಇದನ್ನೂ ಓದಿ
Girish Karnad Birth Anniversary : ಯಾಹೂ ಚಾಟ್​ರೂಮಿನ ‘ಯವಕ್ರಿ’ ಇಂದು ಮಾತಿಗೆ ಸಿಕ್ಕಾಗ
ಮಮತಾ ಬ್ಯಾನರ್ಜಿಗೆ ಸಾಹಿತ್ಯ ಪುರಸ್ಕಾರ: ಪ್ರಶಸ್ತಿ ಮರಳಿಸಿದ ಬೆಂಗಾಲಿ ಸಾಹಿತಿ
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ
Toto Awards 2022 : ‘ಕವಿತೆ ಒಳಗಿಳಿಸಿಕೊಳ್ಳಬೇಕಿತ್ತು, ಓದನ್ನು ಅರ್ಧಕ್ಕೇ ನಿಲ್ಲಿಸಿದೆ’ ಟೊಟೊ ಪುರಸ್ಕೃತ ಕೃಷ್ಣ ದೇವಾಂಗಮಠ

ಎಂ.ಬಿ. ಅಡ್ನೂರ ಮತ್ತು ಡಾ. ಚಿದಾನಂದ ಕಮ್ಮಾರ, ತೀರ್ಪುಗಾರರು

ಇದನ್ನೂ ಓದಿ : PEN Literary Award: ಮೇ 23ರಂದು ಲೇಖಕಿ ಜೇದಿ ಸ್ಮಿತ್​ಗೆ ‘ಪೆನ್ ಸಾಹಿತ್ಯ ಸೇವಾ ಪುರಸ್ಕಾರ’ ಪ್ರದಾನ

‘ಕಳವಳದ ದೀಗಿ ಕುಣಿದಿತ್ತವ್ವ’ ಕಥೆಯ ಆಯ್ದ ಭಾಗ 

ಉರುಕುಂದಿ ಈರಣ್ಣನ ಜಾತ್ರಿ ಸುತ್ತ ಹೆಸರಾಗಿದ್ದರಿಂದ ತುಂಬಿ ತುಳುಕುತಿತ್ತು. ಅದ್ರಾಗ ಹೆಂಗ್ಸುಗಂಡ್ಸು ತಲೆ ಬೋಳಿಸಿಕೊಳ್ಳುವುದರಲ್ಲಿ ಬಿಸಿಯಾಗಿತ್ತು. ಎಲ್ಲಿ ನೋಡಿದ್ರು ಕರಿ, ಕೆಂಪನ ಬೋಳುತಲಿನೇ ಇದ್ವು. ಎಲ್ಲಿಬೇಕಲ್ಲಿ ಬಂಡಾರ, ಕುಂಕುಮ ಬಡಕಂದು ದೆವ್ವದಂಗ ಎದಿರಾಗುತಿದ್ವು. ಅದ್ರಾಗ ತಲಿ ಬೋಳಿಸಿಕೊಂಡ ಹೆಂಗಸರ ಮೆತ್ತನ ಬೋಳುತಲಿಗಳು ಮಿಣಿಮಿಣಿ ಮಿಂಚುತಿದ್ವು. ಅಲ್ಲಿಲ್ಲಿ ತಲೆಬೋಳಿಸಿಕೊಂಡ ಗಂಡಸ್ರನ್ನ ನೋಡಿ, ನನ್ ಗಂಡ ಕೂಡ ಬೋಳುಗುಂಡ ಆಗ್ತಾನಂತ ಮುಸುಮುಸು ನಕ್ಕು ಅಭಿನ ಗಲ್ಲಹಿಂಡಿ ‘ನಿಮ್ಮಪ್ಪ ಬೋಳುಗುಂಡ.. ಬೋಳುಗುಂಡ..’ ಅಂತ ಛೇಡಿಸಿ ಮುದ್ದುಕೊಟ್ಟೆ, ಹಾಲುಗಲ್ಲದ ಅಭಿ ಅದೇನು ಕಂಡಿತೋ.. ದವಡಿ ಉಬ್ಬಿಸಿ ಕುಚುಕುಚು ನಕ್ಕಿತು. ಇದೆ ಖುಷಿಲೆ ಬಂಗಾರದ ಗುಂಡಂತ ಇನ್ನೊಂದು ಮುದ್ದು ಲಚಕ್ಕನ ಕೊಟ್ಟು ಗಿಲಿಗಿಂಚಿ ಕೊಡಿಸಿದೆ. ಆಗ ಸುಮ್ಮನಾತು. ಗುಡಿಗೆ ಕರಕೊಂಡೋಗಿ ಕಾಯಿ, ಕರ‍್ಪೂರ, ಹೆಡೆ ಅರ್ಪಿಸಿ ಡೋಲು, ಡಮಾರಿನಿಂದ ತೇರು ಎಳೆಟೈಮಿನ್ಯಾಗ ಹೊಳೆಗೆ ಕರಕೊಂಡು ಬಂದ. ತೇರು ನೋಡಬೇಕನಿಸಿ ಗುಡಿಕಡೆ ಮುಖಮಾಡಿದೆ.

ತೇರಿನಮುಂದ ಎಷ್ಟುಮಂದಿ ಇದ್ರೋ.. ಅಷ್ಟೇಮಂದಿ ಹೊಳೆದಂಡಿಗೆ ತಲೆಬೋಳಿಸಿಕೊಂಡು ತಣ್ಣೀರಿನ್ಯಾಗ ‘ಈರಣ್ಣ..ಈರಣ್ಣ..’ಅಂತ ಮುಳುಗುತಿದ್ರು. ಹೊಳೆದಂಡಿ ತುಂಬ ಕೂದಲು ಗುಡ್ಡೆನೇ ಬಿದ್ದಿತ್ತು. ‘ಬೋಳುಗುಂಡ ಈಗ ಆಗ್ತಾನ.. ಆಗ ಆಗ್ತಾನ..’ ಅಂತ ಗಂಡನ ದಿಟ್ಟಿಸಿ ನೋಡುತ್ತ ಅಭಿನ ಎತ್ತಿಕೊಂಡು ಹೊಳೆದಂಡಿಮ್ಯಾಲೆ ತೇರಿನ ಕಡೆನೆ ಮುಖಮಾಡಿ ನಿಂತಿದ್ದೆ. ಯಾರೋ ಸಣ್ಣಪೆಟಾರಿ ಹಿಡಿದು ಗಂಡನ ಬದಿಗೆಬಂದು ಏನೆನೋ ಮಾತಾಡುತ್ತ ನಿಂತ. ಗಂಡ ಒಮ್ಮೆಲೆ ‘ಏ..ಅಭಿನ ತಾ.. ಎಂದ. ಯಾಕಂದೆ. ‘ಉರುಕುಂದಿ ಈರಣ್ಣಗ ತಲೆಮುಂಡೆ ಚೊಚ್ಚಲ ಹಡ್ದ ಹೆಣ್ತಿನೇ ಕೊಡಬೇಕಂಥ.. ನನಗ ಕೊಡಾಕ ಬರಲ್ಲ..’ ಅಂತ ಅಭಿನ ಕಸಕೊಂಡ. ಒಮ್ಮಿಗೆ ಜೀವ ಝಲ್ಲೆಂತು. ತಲಿಮುಂಡೆ ಕೊಡಲ್ಲ.. ಬೇಕಾದ್ರ ನೀನೇ ಕೊಡು.. ನೀನೆ ಬೇಡಿಕೊಂಡಿದ್ದೆಲ್ಲಾ.. ಒಲ್ಲಒಲ್ಲೆಂತ ಎದಿಮ್ಯಾಗಿದ್ದ ಅಭಿನ ಕಿತ್ತಿಕೊಳ್ಳಾಕ ಕೊಸರಾಡಿದೆ. ಅಭಿನ ಬಿಡಲಿಲ್ಲ. ಗಟ್ಟಿಗೆ ಎತ್ತಿಕೊಂಡಿದ್ದ. ಇಬ್ಬರ ಗಲಾಟೆಗೆ ಅಭಿ ಬೋರಾಡಿ ಅತ್ತ. ಅಲ್ಲಿದ್ದ ಹೆಂಗ್ಸರೆಲ್ಲರೂ ನಮ್ ಗಲಾಟೆಗೆ ‘ಚೊಚ್ಚಲ ಗಂಡುಮಗಾದ್ರ ಹೆಣ್ತಿನೆ ತಲೆಮುಂಡೆ ಕೊಡಬೇಕನ್ನೋದು ಈರಣ್ಣನ ಪದ್ಧತಿ ಐತೆವ್ವಾ ಕೊಟ್ರ ಒಳ್ಳೆದಾಗುತ್ತ..’ ಅಂತ ಏನೆನೋ ತತ್ವಹೇಳಿ ರಮಿಸಿ ಸಣ್ಣ ಪೆಟಾರಿಯವನ ಮುಂದ ಕೂರಿಸಿದ್ರು.

ಇದನ್ನೂ ಓದಿ : Music Award : ಖ್ಯಾತ ತಬಲಾವಾದಕ ಪಂ. ಅನಿಂದೋ ಚಟರ್ಜಿ ಅವರಿಗೆ ‘ಕಲಾ ಶೃಂಗ’ ಪ್ರಶಸ್ತಿ

ಸಣ್ಣ ಪೆಟಾರಿ ಹಿಡಿದವ ತಲೆಬಗ್ಗಿಸಿ ಕರಕರಂತ ಕೂದಲು ಬೋಳುಸಾಕ ಮುಂದಾದ. ತಲೆ ಕರಕರ ಅಂದಷ್ಟು ಹಲ್ಲುಕಡಿದು ಎದಿರಿಗೆ ನಿಲುಗಂಬಾಗಿ ನಿಂತಿದ್ದ ಗಂಡನ ಎಗಿರಿ ಒದಿಬೇಕನಿಸ್ತು. ಆದ್ರ ತಲೆ ಬೋಳಿಸುವಾತ ಕತ್ರಿಗಾಲಲಿ ಕುರಿಯಂಗ ತಲೆ ಸಿಕ್ಕಿಸಿಕೊಂಡಿದ್ದ. ತಲೆ ಎತ್ತಲೂ ಆಗಲಿಲ್ಲ. ಕಣ್ಣೀರೊಂದೆ ದಳದಳ ಇಳಿತಿದ್ವು. ಏಟು ಕೊಸರಾಡಿದ್ರೂ ಕೊನಿಗೆ ಬೋಳ್ಯಾದೆ. ನಡ ಹೊಳ್ಯಾಗ ನಿಲ್ಲಿಸಿ ತಣ್ಣೀರಿನ್ಯಾಗ ಐದುಬ್ಯಾರೆ ಮುಳುಗಿಸಿದಾಗ ಚಿಟ್ಟಿಮೀನು, ಏಡಿ ಒಂದಕ್ಕೊಂದು ಕಲ್ಲುಪಡಿಕಿನ್ಯಾಗ ಬಿದ್ದಿದ್ದ ಅನ್ನ, ಹೋಳಿಗಿ, ಉಂಡಿ, ಪ್ರಸಾದ ಕ್ಕುಕ್ಕಿ ತಿಂದಾಡುತಿದ್ವು. ‘ಇವ್ನು ಹೆಣ್ತ್ಯಾಗಿ ಹುಟ್ಟುವುದಕ್ಕಿಂತ ಈ ಮೀನ, ಏಡಿ, ಕಸ ಕಡ್ಡ್ಯಾಗಿ ಹುಟ್ಟಿದ್ರ ಎಷ್ಟೋ ಬೇಸಿತ್ತು..’ ಅಂತ ಮುಳುಗಿದಾಗೊಮ್ಮೆ ಅತ್ತೆ. ಹೊಳೆಮಾತ್ರ ತನ್ನ ಪಾಡಿಗೆ ತಾನು ಸೆವ್ವಂತ ದನ ಓಡಿದಂಗ ಓಡುತಿತ್ತು. ನಡ ಹೊಳ್ಯಾಗ ಕಲ್ಲಾಗಿ ನಿಂತವಳು ತೇರು ನೋಡಾಕ ಮನಸ್ಸು ಆಗಲಿಲ್ಲ. ಗಂಡನಂಬೋದು ತೇರು ನೋಡಿ ಪಳಾರ, ಈಭೂತಿ, ಬಂಡಾರ, ಕುಂಕುಮ, ಬಳೆ ಮತ್ತು ಹುಲಿಮ್ಯಾಲೆ ಕೂತ ಈರಣ್ಣನ ಪೋಟನೂ ತಗಂದು ಬಂದ.