Girish Karnad Birth Anniversary : ಯಾಹೂ ಚಾಟ್​ರೂಮಿನ ‘ಯವಕ್ರಿ’ ಇಂದು ಮಾತಿಗೆ ಸಿಕ್ಕಾಗ

Girish Karnad Birth Anniversary : ಯಾಹೂ ಚಾಟ್​ರೂಮಿನ ‘ಯವಕ್ರಿ’ ಇಂದು ಮಾತಿಗೆ ಸಿಕ್ಕಾಗ
ಗಿರೀಶ ಕಾರ್ನಾಡರೊಂದಿಗೆ ನಿರ್ದೇಶಕ ಕೆ. ಎಂ. ಚೈತನ್ಯ

K.M.Chaitanya : ‘ಅಬ್ಬಬ್ಬಾ’ ಸಿನೆಮಾ ಡಿಟಿಎಚ್​ ಹಂತದಲ್ಲಿದೆ. ಆ ಕೆಲಸದೊತ್ತಡದ ಮಧ್ಯೆಯೇ ನಿರ್ದೇಶಕ ಕೆ. ಎಂ. ಚೈತನ್ಯ ತಮ್ಮ ಗುರು ಗಿರೀಶ ಕಾರ್ನಾಡರು ತೋರಿದ ದಾರಿ ಮತ್ತು ನೆನಪುಗಳನ್ನು ಆಪ್ತವಾಗಿ ಬಿಚ್ಚಿಟ್ಟಿದ್ದಾರೆ.

ಶ್ರೀದೇವಿ ಕಳಸದ | Shridevi Kalasad

|

May 19, 2022 | 2:21 PM

Girish Karnad Birth Anniversary : ಗಿರೀಶ ಕಾರ್ನಾಡರ ಒಡನಾಟ 1996ರಿಂದ ಶುರುವಾಯಿತು. ನನ್ನ ತಂದೆಯ (ಡಾ. ಕೆ. ಮರುಳಸಿದ್ದಪ್ಪ) ಸ್ನೇಹಿತರಾಗಿದ್ದರೂ ಅವರೊಂದಿಗೆ ಮಾತನಾಡಲು ಹೆದರಿಕೊಳ್ಳುತ್ತಿದ್ದೆ. ಅಂತಹ ಮೇಧಾವಿತನ, ಶಿಸ್ತು. ನಾನು ಆಗಷ್ಟೇ ಹೈದರಾಬಾದಿನಲ್ಲಿ ವಿಶುವಲ್ ಕಮ್ಯೂನಿಕೇಷನ್​ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದೆ. ಮುಂಬೈನಲ್ಲಿ ಕೆಲಸವೂ ಸಿಕ್ಕಿತ್ತು. ಹೋಗುವ ಮೊದಲು ಕಾರ್ನಾಡರನ್ನು ಭೇಟಿಯಾಗು, ಉಳಿದುಕೊಳ್ಳುವ ವ್ಯವಸ್ಥೆ ಬಗ್ಗೆ ಮಾಹಿತಿ ಸಿಗಬಹುದು ಎಂದರು. ಆ ಪ್ರಕಾರ ಬೆಂಗಳೂರಿನಲ್ಲಿರುವ ಅವರ ಮನೆಗೆ ಹೋದೆ. ಒಂಬತ್ತು ಗಂಟೆಯೆಂದರೆ ಸರಿಯಾಗಿ ಒಂಬತ್ತಕ್ಕೇ ಹೋದೆ. ಅವರು ಸಮಯದ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಮೊದಲ ಸಲ ಅವರೆದುರು ಪೂರ್ತಿಯಾಗಿ ಕುಳಿತುಕೊಂಡು ಮಾತನಾಡಲಾರಂಭಿಸಿದೆ. ನನ್ನ ಬಗ್ಗೆ ಎಲ್ಲವನ್ನೂ ಕೇಳಿಸಿಕೊಂಡರು. ‘ನೀನು ಮುಂಬೈಗೆ ಹೋಗಲೇಬೇಕು ಅಂತ ನಿರ್ಧಾರಿಸಿದ್ದೀಯಾ, ಸ್ವಲ್ಪ ಮನಸು ಬದಲಾಯಿಸಬಹುದಾ?’ ಎಂದರು. ಅಚ್ಚರಿ ಎನ್ನಿಸಿ ಮುಖ ನೋಡಿದೆ.  ‘ಕಾನೂರು ಹೆಗ್ಗಡತಿ ಸಿನೆಮಾ ಮಾಡ್ತಿದೀನಿ. ನನಗೆ ಸಹಾಯಕನಾಗಿ ಇರುತ್ತೀಯಾ?’ ಎಂದರು. ನನಗಾಗ 21 ವಯಸ್ಸು. ಕೆ. ಎಂ. ಚೈತನ್ಯ, ಸಿನೆಮಾ ನಿರ್ದೇಶಕ

ನಾನು ಬೆಳೆದಿದ್ದು ಕುವೆಂಪು, ಕಾರಂತರ ಓದಿನೊಂದಿಗೆ ಮತ್ತು ನನ್ನ ತಾತ ಜಿ. ಎಸ್. ಶಿವರುದ್ರಪ್ಪನವರ ಒಡನಾಟದೊಂದಿಗೆ. 1999ರಲ್ಲಿ ಕಾನೂರು ಹೆಗ್ಗಡತಿ ಚಿತ್ರೀಕರಣ ಆರಂಭವಾಯಿತು. ಈ ಮಧ್ಯದಲ್ಲಿಯೇ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿತು. ಒಂದು ವಾರ ಅವರು ನಮ್ಮೊಂದಿಗೆ ಇರಲಿಲ್ಲ. ಸುಮಾರು 90ಜನರ ತಂಡವನ್ನು ಕಟ್ಟಿಕೊಂಡು ಚಿತ್ರೀಕರಣ ಪ್ರಾರಂಭಿಸಿದ್ದೆವು. ಹಿಂದಿಯಲ್ಲಿ ಧಾರವಾಹಿ, ಕನ್ನಡದಲ್ಲಿ ಸಿನೆಮಾ ಏಕಕಾಲಕ್ಕೇ ಚಿತ್ರೀಕರಣಗೊಳ್ಳುತ್ತಿದ್ದವು. ಛಾಯಾಗ್ರಾಹಕರಾಗಿ ಎಸ್. ರಾಮಚಂದ್ರ ಇದ್ದರು. ಬಹುಶಃ ರಾಮಚಂದ್ರ ಅವರೇ ಈ ಒಂದು ವಾರ ಎಲ್ಲವನ್ನೂ ನಿರ್ದೇಶಿಸಿ ನಿರ್ವಹಿಸುತ್ತಾರೆ ಎಂಬುದು ನನ್ನ ಊಹೆಯಾಗಿತ್ತು. ಆದರೆ ಇಡೀ ತಂಡದೆದುರು, ‘ಚೈತನ್ಯನೇ ನಿರ್ದೇಶನ ಮಾಡುತ್ತಾನೆ’ ಎಂದುಬಿಟ್ಟರು. ನಾನು ಅನನುಭವಿ ಎಂದೆ. ‘ಇಷ್ಟು ದಿನ ಕೆಲಸ ಮಾಡಿದ ಅನುಭವ ಇದೆಯಲ್ಲ. ಆತ್ಮವಿಶ್ವಾಸ ಒಂದಿಲ್ಲ ಅಷ್ಟೇ. ಕೆಲಸ ಮಾಡುತ್ತಾ ಹೋಗು ತಾನಾಗೇ ಬರುತ್ತದೆ’ ಎಂದು ಹೇಳಿ ಹೋಗಿಬಿಟ್ಟರು. ನಂತರ ವಾಪಾಸು ಬಂದು ನಿರ್ದೇಶಿಸಿದ್ದನ್ನೆಲ್ಲ ನೋಡಿದರು. ಹಿಂದಿ ಸೀರಿಯಲ್ ನೀನೇ ಸಂಪೂರ್ಣವಾಗಿ ನಿರ್ದೇಶಿಸು ಜೊತೆಗೆ ಕನ್ನಡದ ಸಿನೆಮಾದಲ್ಲಿ ನನ್ನ ಸೀನ್​ಗಳನ್ನೂ ಎಂದರು.

ಮುಂದೆ ಲಂಡನ್​ನಲ್ಲಿರುವ ನೆಹರೂ ಸೆಂಟರ್​ಗೆ ಅವರು ನಿರ್ದೇಶಕರಾಗಿ ನೇಮಕಗೊಂಡರು. ಆಗ ನಾನು ಬಿಬಿಸಿಗಾಗಿ ಕೆಲಸ ಮಾಡುತ್ತಿದ್ದೆ. ಲಂಡನ್​ನಲ್ಲಿ ಒಂದು ಉಪನ್ಯಾಸಕ್ಕಾಗಿ ನನ್ನನ್ನು ಆಹ್ವಾನಿಸಿದರು. ಅದೇ ಹೊತ್ತಿಗೆ ಲಂಡನ್​ನ ಸಂಸ್ಥೆಯೊಂದು ಕ್ಯಾನ್ಸರ್ ಬಗ್ಗೆ ಡಾಕ್ಯುಮೆಂಟರಿ ನಿರ್ದೇಶಿಸಲು ಅರ್ಜಿ ಆಹ್ವಾನಿಸಿತ್ತು. ನಾನೂ ಅಪ್ಲೈ ಮಾಡಿದೆ. ಆ ಅವಕಾಶ ಒದಗಿತು. ಸುಮಾರು ಆರು ತಿಂಗಳುಗಳ ತನಕ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡು ಇದ್ದೆ. ಒಂದು ದಿನ ‘ಹೌಸ್ ಆಫ್ ಲಾರ್ಡ್ಸ್’ನಲ್ಲಿ ಚಾರಿಟಿ ಡಿನ್ನರ್​ಗಾಗಿ ಆಹ್ವಾನಿಸಿದರು. ಕಾರ್ನಾಡರಿಗೆ ವಿಷಯ ತಿಳಿಸಿದಾಗ, ಬಹಳ ಖುಷಿಪಟ್ಟರು. ‘ನಿನಗೆ ಫೋರ್ಕ್, ನೈಫ್​ನೊಂದಿಗೆ ಊಟ ಮಾಡುವುದು ಗೊತ್ತಾ?’ ಎಂದರು. ಇಲ್ಲ ಎಂದಿದ್ದಕ್ಕೆ, ಅರ್ಧಗಂಟೆತನಕ ಪ್ರಾಯೋಗಿಕವಾಗಿ ಟೇಬಲ್ ಮ್ಯಾನರ್ಸ್ ಬಗ್ಗೆ ತಿಳಿಸಿಕೊಟ್ಟರು. ಸೂಟ್ ಹೊಲಿಸಲು ಇಟ್ಯಾಲಿಯನ್ ಟೇಲರ್ ಬಳಿ ಕರೆದುಕೊಂಡು ಹೋದರು. ನಮ್ಮೆಲ್ಲಾ ಈ ಪ್ರಯಾಣಗಳು ಸಾಮಾನ್ಯವಾಗಿ ನಡಿಗೆಯಲ್ಲೇ ಸಾಗುತ್ತಿದ್ದವು. ನಡೆಯುತ್ತಲೇ ಆರ್ಟ್​ ಗ್ಯಾಲರಿ, ಮ್ಯೂಸಿಯಂ ನೋಡುವುದು ಹೀಗೆ…

Girish Karnad Birth Anniversary Kannada Film Director KM Chaitanya shared his memories

ಶೂಟಿಂಗ್ ಸೆಟ್​ನಲ್ಲಿ ಗಿರೀಶ ಮತ್ತು ಚೈತನ್ಯ

ಕೆಲ ವರ್ಷಗಳ ನಂತರ ದೂರದರ್ಶನಕ್ಕೆ ಮೂರು ಕಾದಂಬರಿಗಳನ್ನು ನಿರ್ಮಾಣ ಮಾಡಿ ನಿರ್ದೇಶಿಸಿ ಕೊಡಬೇಕೆಂಬ ಆಹ್ವಾನ ಅವರಿಗೆ ಬಂದಿತು. ಅವರು ಚಿದಂಬರ ರಹಸ್ಯ ನಿರ್ದೇಶಿಸಿದರು. ನಾನು ಕುಸುಮಬಾಲೆ, ಓಂ ಣಮೋ ನಿರ್ದೇಶಿಸಿದೆ. ಇದು ನನಗೆ ಸಾಕಷ್ಟು ಮನ್ನಣೆ ತಂದುಕೊಟ್ಟಿತು.

ನಂತರ 20 ವರ್ಷಗಳ ನಂತರ ಅವರು ಮತ್ತೆ ನಿರ್ದೇಶಿಸಿದ್ದು ‘ಒಡಕಲು ಬಿಂಬ’. ತಾಂತ್ರಿಕ ಸಹಾಯಕ್ಕೆ ನಾನಿದ್ದೆ. ರೆಕಾರ್ಡೆಡ್​ ಇಮೇಜ್ ಮತ್ತು ಅರುಂಧತಿ ಮಧ್ಯೆ ಸಂವಾದ ಸಾಧ್ಯವಾಗಬೇಕೆಂದರೆ ಟಿವಿಗಳು ಬೇಕಿದ್ದವು.  ಅರ್ಧವೃತ್ತಾಕಾರದ ರಂಗಸ್ಥಳದ ಮೇಲೆ ಪ್ರೇಕ್ಷಕರಿಗೆ ಅದು ಸೂಕ್ತವಾಗಿ ಕಾಣಬೇಕೆಂದರೆ ಅದನ್ನು ಹೇಗೆ ಸಾಧ್ಯವಾಗಿಸಬೇಕು? ಮತ್ತು ಅರುಂಧತಿ ಮತ್ತು ರೆಕಾರ್ಡೆಡ್ ಇಮೇಜ್ ಮಧ್ಯೆ ಸೃಷ್ಟಿಸುವ ಸ್ಪೇಸ್ ಗೆ ತಕ್ಕಂತೆ ಯಾವ ಹೈಟ್​ನಲ್ಲಿ ಶೂಟ್ ಮಾಡಬೇಕು ಎಂಬೆಲ್ಲಾ ಯೋಚಿಸುತ್ತಾ ಕೊನೆಗೆ ಪ್ಲಾಸ್ಮಾ ಟಿವಿ ಆಯ್ಕೆ ಮಾಡಿಕೊಳ್ಳಬೇಕಾಯಿತು. ‘ಒಡಕಲು ಬಿಂಬ’ ಪೋಸ್ಟರ್​ ಬಂದಾಗ ನನಗೆ ಸರ್​ಪ್ರೈಝ್! ನಿರ್ದೇಶನ : ಗಿರೀಶ ಕಾರ್ನಾಡ ಮತ್ತು ಕೆ.ಎಂ. ಚೈತನ್ಯ.

ಇದನ್ನೂ ಓದಿ : Girish Karnad Birth Anniversary : ‘ಕಾರ್ನಾಡರ ‘ಒಡಕಲು ಬಿಂಬ’ದಿಂದಲೇ ಇಡೀ ಭಾರತವನ್ನು ನೋಡಿದೆ’ ಗಾಯತ್ರಿ ಕೃಷ್ಣ

ಸಾಮಾನ್ಯವಾಗಿ ಗುರುವಾದವನಿಗೆ ಶಿಷ್ಯನ ಕುರಿತು ಯಾವತ್ತೂ ಅಭದ್ರತೆ ಇರುತ್ತದೆ. ಆದರೆ ಕಾರ್ನಾಡರಿಗೆ ಅದಿರಲೇ ಇಲ್ಲ. ಪ್ರತಿಭಾವಂತರನ್ನು ಯಾವತ್ತೂ ಪ್ರೋತ್ಸಾಹಿಸುತ್ತ ಬಂದರು. ಅವರ ವ್ಯಕ್ತಿಗತ ಸಾಧನೆ ಒಂದೆಡೆಯಾದರೆ, ಉಳಿದಂತೆ ಅನೇಕರನ್ನು ಮುನ್ನೆಲೆಗೆ ತಂದರು; ಶಂಕರನಾಗ್, ವಿಷ್ಣುವರ್ಧನ್, ಸೊನಾಲಿ ಕುಕಲಕರ್ಣಿ, ಓಂಪುರಿ, ಅಂಬರೀಶ ಪುರಿ ಮುಂತಾದವರು.

ತಮ್ಮ ಆರೋಗ್ಯದ ವಾಸ್ತವ ಆಲೋಚನೆಯುಳ್ಳವರಾಗಿದ್ದರು. ಅವರು ಬೆಂಗಳೂರಿನ ಜೆ. ಪಿ. ನಗರದಲ್ಲಿ ಬಹಳ ಆಸೆಪಟ್ಟು ಮನೆ ಕಟ್ಟಿಸಿದರು. ಕಾರಣ ಆ ಮನೆ ಎದುರು ದೊಡ್ಡದೊಡ್ಡ ಮರಗಳಿವೆ ಶಾಂತ ಪರಿಸರವಿದೆ ಎಂಬ ಕಾರಣಕ್ಕೆ. ಆದರೆ ಮುಂದೆ ಅಂಡರ್ ಪಾಸ್ ಕಾಮಗಾರಿ ಶುರುವಾಯಿತು. ಮರಗಳುರುಳಿದವು. ಈ ಎಲ್ಲ ಬೆಳವಣಿಗೆಯಿಂದ ಮನನೊಂದಿತು. ಮನೆ ಮಾರಿದರು. ಧಾರವಾಡದ ಮನೆಯನ್ನೂ ಮಾರಿದರು. ಆಗ ಮನೆಗೆ ಬಂದಾಗ ಹೇಳಿದರು, ‘ನನ್ನ ಲೆಕ್ಕವನ್ನೆಲ್ಲಾ ಚುಕ್ತಾ ಮಾಡಿ ಮಕ್ಕಳಿಗೆ ವಹಿಸುತ್ತೇನೆ. ನನ್ನ ಆರೋಗ್ಯ ಕ್ಷೀಣಿಸುತ್ತಿದೆ’ ಎಂದರು. ನಿಮ್ಮ ಕಣ್ಣಮುಂದೆ ‘ಬೆಂದಕಾಳು ಆನ್ ಟೋಸ್ಟ್​’ ಬಂದಿರಲು ಸಾಕು.

ಇನ್ನೂ ಒಂದು ಪ್ರಸಂಗ ನೆನಪಾಗುತ್ತಿದೆ. ಯಾಹೂ ಚಾಟ್ ಕಾಲ. ಯುವಕರೆಲ್ಲಾ ಚಾಟ್ ರೂಮುಗಳಲ್ಲಿ ಬಿಝಿಯಾಗಿರುತ್ತಿದ್ದರು. ಕಾರಣ, ಸುಳ್ಳು ಹೆಸರಿನಲ್ಲಿ ಐಡಿ ಸೃಷ್ಟಿಸಿ ಜಗತ್ತಿನ ಯಾರೊಂದಿಗೂ ಚಾಟ್ ಮಾಡಬಹುದಾಗಿತ್ತು. ಅಲ್ಲಿ ರೊಮ್ಯಾನ್ಸ್​ನಿಂದ ಹಿಡಿದು ಯಾವ ವಿಷಯವನ್ನೂ ಚರ್ಚಿಸಬಹುದಾಗಿತ್ತು. ನಾನು ಅದರಲ್ಲಿ ಯವಕ್ರೀ ಎಂಬ ಹೆಸರಲ್ಲಿ ಐಡಿ ಸೃಷ್ಟಿಸಿದ್ದೆ. ಕಾರ್ನಾಡರಿಗೆ ಒಂದು ಮೇಲ್ ಕಳಿಸಬೇಕಿತ್ತು. ಮರೆತು, ಯವಕ್ರಿ ಐಡಿಯಿಂದ ಕಳಿಸಿಬಿಟ್ಟೆ. ಅದನ್ನು ಗಮನಿಸಿದ್ದೇ ಆ ಬಗ್ಗೆ ಕೇಳಿದರು. ಕ್ಷಮಿಸಿ ಎಂದೆ. ಅದಕ್ಕವರು ಬಹಳ ಕುತೂಹಲದಿಂದ ‘ಯಾಹೂ ಚಾಟ್’ ಎಂದರೆ ಏನು? ಅಂತೆಲ್ಲ ಕೇಳಿದರು. ವಿವರಿಸಿದೆ. ‘ಮದುವೆ ಆಲ್ಬಂ’ ಚಾಟ್ ಸೀನ್ ನೆನಪಿಸಿಕೊಳ್ಳಿ. ಇದನ್ನು ಬರೆಯುವಾಗ ಅವರಿಗೆ ಸುಮಾರು 72 ವರ್ಷ. ಚಾಟ್ ಮಾಡದೆ ಅಂಥ ಸೀನ್ ಬರೆಯಲು ಸಾಧ್ಯವೆ? ಎಂದೆನ್ನಿಸಿದ್ದು ಸುಳ್ಳಲ್ಲ. ವಯಸ್ಸಾದವರಿಗಿಂತ ಕಿರಿಯರೊಂದಿಗೆ ಹೆಚ್ಚು ಬೆರೆಯುವ ಸ್ವಭಾವ ಅವರದಾಗಿತ್ತು. ಕ್ಯಾಮೆರಾಮೆನ್​ನಿಂದ ಹಿಡಿದು ಸಣ್ಣಪುಟ್ಟ ಪಾತ್ರಧಾರಿಗಳ ಸಲಹೆಯನ್ನೂ ಸ್ವೀಕರಿಸುತ್ತಿದ್ದರು ಹಾಗಾಗಿ ತಪ್ಪು ಸರಿಯನ್ನು ಯಾರೂ ಮುಕ್ತವಾಗಿ ಹಂಚಿಕೊಳ್ಳಬಹುದಿತ್ತು. ವಿವರಿಸಿದಾಗ ವಿನಯದಿಂದ ಒಪ್ಪಿಕೊಳ್ಳುತ್ತಿದ್ದರು. ಇದು ಕಲೆಕ್ಟಿವ್ ಕ್ರಿಯೇಷನ್​ಗೆ ದಾರಿ ಮಾಡಿಕೊಡುತ್ತಿತ್ತು. ಇಲ್ಲವಾದಲ್ಲಿ  ನಿರ್ದೇಶಕನೊಬ್ಬ ಡಿಕ್ಟೇಟರ್ ಆದಂತೆ!

ಇದನ್ನೂ ಓದಿ : ಗಿರೀಶ್​ ಕಾರ್ನಾಡ್​ ಜನ್ಮದಿನ: ವಿಷ್ಣುವರ್ಧನ್​, ಶಂಕರ್​ನಾಗ್​ಗೆ ಮೊದಲು ಆ್ಯಕ್ಷನ್​-ಕಟ್​ ಹೇಳಿದ್ದೇ ಗಿರೀಶ್​ ಕಾರ್ನಾಡ್​

ಅವರು ನಿಧನರಾಗುವ ಒಂದು ತಿಂಗಳ ಮೊದಲು ‘ಅಮರ್ ಉಜಾಲಾ’ ಪುರಸ್ಕಾರ ಬಂದಿತು. ರಾಷ್ಟ್ರಪತಿ ಪ್ರಣವ ಮುಖರ್ಜಿ ಅದನ್ನು ಪ್ರದಾನ ಮಾಡಬೇಕಿತ್ತು. ಆದರೆ ಇವರು ಆಕ್ಸಿಜನ್ ಕಿಟ್ ಮೇಲೆ ಅವಲಂಬಿತರಾಗಿದ್ದರಿಂದ ಪ್ರಯಾಣ ಕಷ್ಟವಿತ್ತು. ತಮ್ಮ ಬದಲಾಗಿ ಮಗನನ್ನು ಕಳಿಸಲು ನಿರ್ಧರಿಸಿದರು. ಅದಕ್ಕಾಗಿ ಒಂದು ಭಾಷಣವನ್ನು ನೀನು ಶೂಟ್ ಮಾಡಬೇಕು ಎಂದರು. ಒಂದೇ ಟೇಕಿಗೆ ಮುಗಿಸೋಣ, ಆಯಾಸವಾಗುತ್ತದೆ ಎಂದೆ. ಕೇಳಲೇ ಇಲ್ಲ. ಎಂಟು ಟೇಕ್​ ತೆಗೆದುಕೊಂಡು ಅಚ್ಚುಕಟ್ಟಾಗಿಸಿದರು. ‘ನೋಡು ಇದೇ ಕೊನೇ, ನಾನು ಕ್ಯಾಮೆರಾ ಫೇಸ್ ಮಾಡ್ತಾ ಇರೋದು. ಅದು ನಿನ್ನೊಂದಿಗೇ ಮುಗಿಯತ್ತೆ. ನನ್ನದು ಮುಗೀತು. ನಾನು ಹೇಳಬೇಕಾದುದನ್ನು ಹೇಳಬೇಕು ಎನ್ನಿಸಿದಾಗ ಹೇಳಿದೆ. ಮಾಡಬೇಕಾದ ಕೆಲಸ ಮಾಡಿದೆ. ಅಂದುಕೊಂಡಂತೆ ಬದುಕಿದೆ ನನಗೆ ಯಾವ ಪಶ್ಚಾತ್ತಾಪವೂ ಇಲ್ಲ. ಜಗತ್ತಿನೊಂದಿಗೆ ಪ್ರಾಮಾಣಿಕವಾಗಿ ಇದ್ದೆನೆಂಬ ತೃಪ್ತಿ ಇದೆ. ಇನ್ನೊಂದು ತಿಂಗಳಷ್ಟೇ ನಾನಿರುವುದು’ ಎಂದರು. ಹಾಗೆಯೇ ಆಯಿತು. ನಾಟಕಗಳನ್ನು ಅದೆಷ್ಟು ಕರಾರುವಕ್ಕಾಗಿ ಸ್ಕ್ರಿಪ್ಟ್ ಮಾಡುತ್ತಿದ್ದರೋ ತಮ್ಮ ಬದುಕನ್ನೂ ಹಾಗೇ…

ಇದನ್ನೂ ಓದಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

Follow us on

Most Read Stories

Click on your DTH Provider to Add TV9 Kannada