Literature; ನೆರೆನಾಡ ನುಡಿಯೊಳಗಾಡಿ; ತಮಿಳು ಲೇಖಕಿ ಅ. ವೆನ್ನಿಲಾ ಬರೆದ ಕಥೆ ‘ಇಂದ್ರನೀಲ’

|

Updated on: Mar 18, 2022 | 10:22 AM

Indraneela Story by A. Vennila : ಮನಸ್ಸು ನಿಧಾನ ಸಣ್ಣಅಲೆಯನ್ನು ಹಿಂಬಾಲಿಸಿತು. ಅಂಗಾಲಿನಿಂದ ತಲೆಯ ತುದಿಯವರೆಗೊಮ್ಮೆ, ಮೊಲೆಗಳ ನಡುವೆಯೊಮ್ಮೆ, ಎದೆಯ ಆಳದಲ್ಲೊಮ್ಮೆ, ಬೇರೆಬೇರೆ ಜಾಗಗಳಲ್ಲಿ ಪ್ರಾರಂಭವಾದ ಅಲೆಗಳು ದೇಹದೊಳಗೆ ಅಡ್ಡನರಗಳಂತೆ ಹರಿದಾಡುತ್ತಿದ್ದವು.

Literature; ನೆರೆನಾಡ ನುಡಿಯೊಳಗಾಡಿ; ತಮಿಳು ಲೇಖಕಿ ಅ. ವೆನ್ನಿಲಾ ಬರೆದ ಕಥೆ ‘ಇಂದ್ರನೀಲ’
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ
Follow us on

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಅ. ವೆನ್ನಿಲಾ (A. Vennila) ತಿರುವಣ್ಣಾಮಲೈ ಜಿಲ್ಲೆಯ ವಂದವಾಸಿ ಎಂಬಲ್ಲಿ ಹುಟ್ಟಿದವರು. ಮನಃಶಾಸ್ತ್ರ, ಗಣಿತದಲ್ಲಿ ಉನ್ನತಿ ಪದವಿ ಪಡೆದವರು. ಶಿಕ್ಷಣ ಶಾಸ್ತ್ರದಲ್ಲಿ ‘ದೇವದಾಸಿಯರ ಕಲಾ ಸಾಮರ್ಥ್ಯವೂ ವ್ಯಕ್ತಿತ್ವವೂ’ ಎಂಬ ಶೀರ್ಷಿಕೆಯಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ್ ಪದವಿ ಪಡೆದುಕೊಂಡವರು. ಇಲ್ಲಿಯವರೆಗೆ ಆರು ಕವಿತಾ ಸಂಕಲನ, ಎರಡು ಸಣ್ಣ ಕಥೆಗಳ ಸಂಕಲನ, ಒಂದು ಪತ್ರ ಸಂಕಲನ, ಐದು ಪ್ರಬಂಧ ಸಂಕಲನ, ‘ಗಂಗಾಪುರಂ’ ಎಂಬ ಕಾದಂಬರಿ ಪ್ರಕಟಿಸಿದ್ದಾರೆ. ಇವರ ಕೃತಿಗಳು ಸಹಮಾನವರ ಮೇಲಿನ ಪ್ರೀತಿ, ಅಕ್ಕರೆ ಪ್ರವಹಿಸುತ್ತವೆ. ಮಧ್ಯಮ ವರ್ಗದವರ ಮಾನಸಿಕ ಸಮಸ್ಯೆಗಳನ್ನು ನಾಜೂಕಾಗಿ ತೆರೆದು ತೋರಿಸುತ್ತವೆ. ಈಗಾಗಲೇ ಇವರ ಕೃತಿಗಳು ಹಿಂದಿ, ಮಲಯಾಳ, ತೆಲುಗು, ಇಂಗ್ಲಿಷ್ ಮುಂತಾದ ಭಾಷೆಗಳಿಗೆ ಅನುವಾದವಾಗಿವೆ. ‘ಇಂದ್ರನೀಲ’ ಇದೇ ಇವರ ಮೊದಲ ಕಥೆ ಕನ್ನಡದಲ್ಲಿ ಅನುವಾದವಾಗುತ್ತಿದೆ. ಹೆಣ್ಣಿನ ಮಾನಸಿಕ, ದೈಹಿಕ ಸಂವೇದನೆಗಳನ್ನು ಅತಿ ಸೂಕ್ಷ್ಮವಾಗಿ ಬಿಚ್ಚಿಡುವ  ಸುಂದರ ನೀಳ್ಗತೆ. ಓದಿದ ಕೂಡಲೇ ಅನುವಾದಿಸಬೇಕೆಂಬ ಆಸೆಯನ್ನುಂಟುಮಾಡಿದ ಕಥೆ ಎನ್ನುತ್ತಾರೆ ಅನುವಾದಕರು.

 

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 1)

ಬೆಳಗ್ಗೆಯಿಂದ ನಿಧಾನ ತಪ್ಪಿದೆ. ದೇಹಕ್ಕೆ ಏನಾಯಿತೆಂದು ತಿಳಿಯಲಾಗಲಿಲ್ಲ. ಜ್ವರ ಇದೆಯೇ ಎಂದು ಮುಟ್ಟಿ ನೋಡಿಕೊಂಡೆ. ದೇಹ ತಣ್ಣಗಿತ್ತು. ಒಳೊಳಗೆ ಕುದಿಯುತ್ತಿತ್ತು. ತಲೆ ನೋವಿಲ್ಲ. ಮೈಕೈ ನೋಯುತ್ತಿರಲಿಲ್ಲ. ನೆಗಡಿಗಾದ ಯಾವ ಲಕ್ಷಣಗಳು ಕಾಣಿಸಲಿಲ್ಲ. ಮುಟ್ಟಾಗಿ ಒಂದು ವಾರವಾಯಿತು. ದೇಹ ಸದಾ ಹೀಗೆಯೇ. ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳುವುದಕ್ಕೂ ಬಿಡುವುದಿಲ್ಲ. ನಾನೂ ಅರ್ಥಮಾಡಿಕೊಳ್ಳದೆ ಇದ್ದೇನೆ. ಸಹಜವಾಗಿಲ್ಲ ಎಂಬುದು ಮಾತ್ರ ತಿಳಿಯುತ್ತಿದೆ. ಸಣ್ಣ ಬೆಂಕಿಯಲ್ಲಿ ಹುರಿದಂತೆ ತವಕವಾಗಿದೆ. ಇದೇ ಆಗುತ್ತಿದೆ ಎಂದು ತಿಳಿದರೆ ಪರವಾಗಿಲ್ಲ. ದೇಹ ತನ್ನನ್ನು ಸಂಪೂರ್ಣವಾಗಿ ಪ್ರಕಟಿಸುಕೊಳ್ಳುವುದಿಲ್ಲ. ಅಥವಾ ನನ್ನಿಂದ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲವೇ?

ಮೊಲೆಗಳು ಭಾರವಾಗಿದ್ದವು. ಮುಟ್ಟಾಗುವುದಕ್ಕೆ ಒಂದು ವಾರ ಮೊದಲು ದೇಹ ಹೀಗೆ ಬಿಗಿಯಾಗುತ್ತದೆ. ಕಣ್ಣಲ್ಲಿ ಬಿಸಿ ಕಾಣುತ್ತದೆ. ತೊಡೆ ಭಾರವಾಗುತ್ತದೆ. ಕಾಲೆರಡೂ ಸೊರಗಿ ಬೀಳುತ್ತವೆ. ದೇಹವನ್ನು ಹೊರುವುದು ಕಷ್ಟ ಎಂಬುದನ್ನು ಆ ದಿನಗಳು ಹೇಳುತ್ತವೆ. ಇತ್ತೀಚೆಗೆ ಎಲ್ಲ ಸಮಯದಲ್ಲೂ ಹೀಗೆ ಇರುವುದಕ್ಕೆ ಕಾರಣವೇನು?
ಅಲಕ್ಷ್ಯ ಮಾಡಬೇಕು ಎಂದು ನಿರ್ಧಾರ ಮಾಡಿ ಕೆಲಸದಲ್ಲಿ ಮನಸ್ಸನ್ನು ತೊಡಗಿಸಿದೆ. ಮನಸ್ಸನ್ನು ನಿಯಂತ್ರಿಸುವುದೇ ಕಠಿಣ. ದೇಹ ಚೆನ್ನಾಗಿದ್ದರೆ, ಮನಸ್ಸನ್ನು ಪಕ್ಕಕ್ಕೆ ಸರಿಸಿಟ್ಟು ಸಹಜವಾಗಿರಬಹುದು. ದೇಹ ಸ್ವಲ್ಪ ತಕರಾರು ಮಾಡಿದರೂ ಸಹ, ಮನಸ್ಸೂ ಸೊರಗಿಹೋಗಿ ಬಂಡಿ ಎಲ್ಲಾದರೂ ನಿಂತು ಹೋಗುತ್ತದೆ. ಮೊದಲೇ ಮನೆಯಲ್ಲಿ ಟಯರ್ ಬಂಡಿ ಎಂಬ ಹೆಸರು ಬೇರೆ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ‘ಏನೋ ಬಾಳೂ ಇವೇನು ಪಾರಿವಾಳಾನೋ ಅಥವಾ ಬೋಳು ತಲೆ ಹೆಂಗಸರೋ?’ 

ದೇಹದಲ್ಲಿ ಎಲ್ಲೂ ನೋವಿಲ್ಲ. ದೇಹದ ಯಾವ ಭಾಗದಲ್ಲೂ ಅಸಾದರಣವಾಗಿ ಏನೂ ಇಲ್ಲ. ಹೊಸ ಕಾಯಿಲೆ ಏನಾದರೂ ಇರಬಹುದೇ? ಮನಸ್ಸನ್ನು ದಿಟ ಮಾಡಿಕೊಂಡು ಕೆಲಸಗಳಲ್ಲಿ ಮನಸ್ಸನ್ನು ತೊಡಗಿಸಿದೆ. ಕೆಲಸಗಳ ಮಧ್ಯೆ ದೇಹವನ್ನು ಸಂಪೂರ್ಣವಾಗಿ ಮರೆತುಬಿಟ್ಟೆ ಎಂದು ಹೇಳಲು ಸಾಧ್ಯವಿಲ್ಲ. ಚಿಕ್ಕವಯಸ್ಸಿನಲ್ಲಿ ಹೊಸ ಪೊರಕೆಯಿಂದ ಮನೆಯನ್ನು ಗುಡಿಸುವಾಗ, ಅದರಲ್ಲಿರುವ ಊಬು ಬಟ್ಟೆಗಳೊಳಗೆ ಎಲ್ಲಾದರೂ ಅಂಟಿಕೊಳ್ಳುತ್ತದೆ. ಎಲ್ಲಿರುತ್ತದೆ ಎಂದು ತಿಳಿಯುವುದಿಲ್ಲ. ನಡೆಯುವಾಗ, ಕೂರುವಾಗ ಊಬು ದೇಹವನ್ನು ಚುಚ್ಚುತ್ತಲೇ ಇರುತ್ತದೆ. ದೇಹದೊಳಗೆ ಊಬನ್ನಿಟ್ಟು ಹೊಲಿದಂತೆ ಇರುತ್ತದೆ. ಹೇಗೆ ಕಂಡುಹಿಡಿದು ತೆಗೆದು ಹಾಕುವುದು? ಇದಕ್ಕೆ Scan ಸೌಕರ್ಯ ಇದೆಯೇ?

ದಿನಪೂರ್ತಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರೂ, ಒಳೊಳಗೆ ಸಣ್ಣ ಮಿಂಚು, ಅಲೆಯಂತೆ ನುಲಿಯುತ್ತಿದೆ. ಮನಸ್ಸು ನಿಧಾನವಾಗಿ ಸಣ್ಣ ಅಲೆಯನ್ನು ಹಿಂಬಾಲಿಸಿತು. ಅಂಗಾಲಿನಿಂದ ತಲೆಯ ತುದಿಯವರೆಗೆ ಒಮ್ಮೆ, ಮೊಲೆಗಳ ನಡುವೆ ಒಮ್ಮೆ, ಎದೆಯ ಆಳದಲ್ಲಿ ಒಮ್ಮೆ, ಬೇರೆ ಬೇರೆ ಜಾಗಗಳಲ್ಲಿ ಪ್ರಾರಂಭವಾದ ಅಲೆಗಳು ದೇಹದೊಳಗೆ ಅಡ್ಡ ನರಗಳಂತೆ ಹರಿದಾಡುತ್ತಿದ್ದವು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ‘ಹೌದು, ಚಂದ್ರಾವಳಿಯೆಂದರ ಸರದಾರೀ ಪಾರಿವಾಳ ಇದ್ದಾಳ’ 

Published On - 10:06 am, Fri, 18 March 22