Literature: ನೆರೆನಾಡ ನುಡಿಯೊಳಗಾಡಿ; ’ಮಾರ್ಫಾ, ಓ ಮಾರ್ಫಾ ಯಾರ ಜೊತೆ ನೀ ಚುಂಬನ ಚೆಲ್ಲಾಟ ನಡೆಸಿದ್ದೀ?’

|

Updated on: Feb 18, 2022 | 12:24 PM

Anton Chekhov‘s Story; A Slander: “ಹೌದು, ನನ್ನ ಬಗ್ಗೆಯೇ ಮಾತಾಡುತ್ತಿದ್ದಾನೆ. ನಾಶವಾಗಿ ಹೋಗಲಿ ಇಂವ. ಮತ್ತೇ ಅವಳದನ್ನೆಲ್ಲಾ ನಂಬುತ್ತಿದ್ದಾಳೆ... ಅವಳು ನಂಬುತ್ತಾಳೆ. ನಂಬಿದ್ದಕ್ಕೆ ಹೀಗೆ ನಗ್ತಿದ್ದಾಳೆ. ಓ ದೇವರೇ! ನನ್ನ ಕಾಪಾಡು, ಕಾಪಾಡು.. ಇಲ್ಲ, ಇದು ಹೀಗೆ ಹರಡಲು ನಾನು ಬಿಡೋದಿಲ್ಲ. ಬಿಡಬಾರದು.

Literature: ನೆರೆನಾಡ ನುಡಿಯೊಳಗಾಡಿ; ’ಮಾರ್ಫಾ, ಓ ಮಾರ್ಫಾ ಯಾರ ಜೊತೆ ನೀ ಚುಂಬನ ಚೆಲ್ಲಾಟ ನಡೆಸಿದ್ದೀ?’
ಆ್ಯಂಟನ್ ಚೆಕಾವ್ ಮತ್ತು ನಾಗರೇಖಾ ಗಾಂವಕರ್
Follow us on

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi:  ಅಲ್ಲೇ ಬೆಂಚೊಂದಿತ್ತು. ಮಾರ್ಫಾ ಅದರ ಹತ್ತಿರ ಹೋಗಿ ಬಹಳ ಎಚ್ಚರಿಕೆಯಿಂದ ಎಣ್ಣೆಜಿಡ್ಡು ತಾಗಿದ ನ್ಯೂಸ್ ಪೇಪರ ತುಂಡನ್ನು ಎತ್ತಿದಳು. ಆ ಪೇಪರಿನ ಕೆಳಗಡೆ ಜೆಲ್ಲಿ ಸವರಿಟ್ಟ ಕ್ಯಾರೆಟ್‌ಗಳು ಒಲಿವ್‌ಗಳು, ಕೇಪರ್ ಇವೆಲ್ಲದರಿಂದ ಅಲಂಕೃತಗೊಂಡ ದೊಡ್ಡದೊಂದು ಸ್ಟರ್ಜಿಯನ್ ಮೀನನ ಬೃಹತ್ ಖಾದ್ಯವಿತ್ತು. ಅಹಿನಿವ್ ಸ್ಟರ್ಜಿಯನ್‌ನತ್ತ ನೋಡಿ, ಉಸಿರು ಬಿಗಿಹಿಡಿದರು. ಅವರ ಮುಖ ಹೊಳಿಲಿಕ್ಕೆ ಶುರುವಾಯ್ತು. ಕಣ್ಣುಗಳ ಗುಡ್ಡೆಗಳನ್ನು ಮೇಲೆ ಕೆಳಗೆ ಅತ್ತಿತ್ತ ತಿರುಗಿಸಿದರು. ಅಷ್ಟೇ ಅಲ್ಲ.. ಎಣ್ಣೆ ಕಾಣದ ಗಾಲಿಗಳು ಮಾಡೋ ಒಂದು ರೀತಿಯ ಸದ್ದನ್ನು ತನ್ನ ಬಾಯಿಂದ ಹೊರಡಿಸಿದ್ರು. ಒಂದರೆಗಳಿಗೆ ಅಲ್ಲಿ ನಿಂತ ನಂತರ ಖುಷಿ ಹೆಚ್ಚಾಗಿ ಬೆರಳಿಂದ ಚಿಟಿಕೆ ಬಾರಿಸಿದರು. ಮತ್ತೊಮ್ಮೆ ಬಾಯಿ ಚಪ್ಪರಿಸ್ಕೊಂಡ್ರು.

ಕಥೆ: ಅಪನಿಂದೆ (A Slander) | ಮೂಲ : ಆ್ಯಂಟನ್ ಚೆಕಾವ್ | ಕನ್ನಡಕ್ಕೆ : ಪ್ರೊ. ನಾಗರೇಖಾ ಗಾಂವಕರ

(ಭಾಗ 2)

ಆಹ್! ಆಹ್! ಉನ್ಮತ್ತ ಚುಂಬನದ ಸದ್ದು. “ಮಾರ್ಫಾ, ಮಾರ್ಫಾ ಯಾರ ಜೊತೆ ಚುಂಬನ ಚೆಲ್ಲಾಟ ನಡೆಸಿದ್ದೀ?” ಪಕ್ಕದ ಕೋಣೆಯಿಂದ ದನಿ ಬಂದಿತು. ಬಾಗಿಲಲ್ಲಿ ನೋಡಿದ್ರೆ ಸಹಾಯಕ ದ್ವಾರಪಾಲಕ ವ್ಯಾನ್ಕಿನ್​ನ ಕ್ರಾಪ್ ಮಾಡಿದ ತಲೆ. “ಯಾರದು? ಆಹ್! ಭೇಟಿಯಿಂದ ಖುಷಿಯಾಯ್ತು. ಸೆರ್ಜಿ ಕ್ಯಾಪಿಟೊನಿಚ್! ನೀವು ನಿಜಕ್ಕೂ ತುಂಬಾ ಒಳ್ಳೆಯ ತಾತ!’’

“ನಾನು ಚುಂಬಿಸುತ್ತಿರಲಿಲ್ಲ” ಗೊಂದಲದಲ್ಲೇ ಅಹಿನಿವ್ ಉತ್ತರಿಸಿದ್ರು. ‘‘ನಿನಗ್ಯಾರು ಹೇಳಿದ್ದು, ಮೂರ್ಖ ಶಿಖಾಮಣಿ? ನಾನು.. ಬಾಯಿ ಚಪ್ಪರಿಸುತ್ತಿದ್ದೆ… ಮೀನು ನೋಡಿ. ಖುಷಿಯಾಗಿ ಅದನ್ನು ತೋರ್ಪಡಿಸಲು ಹೀಗೆ’’
“ಅದನ್ನೆಲ್ಲಾ ಹೋಗಿ ಮೀನುಗಳಿಗೆ ಹೇಳಿ” ಎನ್ನುತ್ತಾ ದೊಡ್ಡದಾಗಿ ಹಲ್ಲುಗಿಂಜುತ್ತಾ ಕರೆಯದೇ ಇದ್ದರೂ ಒಳಬಂದವ ಈಗ ಹೊರಹೋದ.

ಅಹಿನಿವ್‌ರಿಗೆ ಕೋಪದಿಂದ ಮುಖ ಕೆಂಪೇರಿತು.

ಹಾಳಾಗಿ ಹೋಗಲಿ ಎಂದು ಗೊಣಗಿಕೊಳ್ಳುತ್ತಾ, ‘‘ಈ ಪ್ರಾಣಿ ಹೋಗಿ ಈಗ ಅಲ್ಲಸಲ್ಲದನ್ನು ಬೇಡದ್ದನ್ನು ಹೇಳ್ತಾನೆ. ಇಡೀ ಪಟ್ಟಣದಲ್ಲಿ ನನ್ನ ಮರ್ಯಾದೆ ಕಳೀತಾನೆ ಖದೀಮ” ಎಂದುಕೊಂಡರು ಅಹಿನಿವ್.

ಆದರೂ ಒಂದು ರೀತಿಯ ಅಂಜಿಕೆಯಿಂದಲೆ ಡ್ರಾಯಿಂಗ್ ಕೋಣೆಗೆ ಬಂದರು. ವ್ಯಾನ್ಕಿನ್ ಕಾಣ್ತಾನಾ ಎಲ್ಲಾದ್ರೂ ಅಂತಾ ಸುತ್ತಲೂ ಕದ್ದೇ ನೋಡಿದ್ರು. ವ್ಯಾನ್ಕಿನ್ ಪಿಯಾನೋ ಪಕ್ಕ ನಿಂತಿದ್ದ. ಬಾಗಿ ನಿಂತು ಉಲ್ಲಾಸದಿಂದಲೆ ಇನ್ಸಪೆಕ್ಟರ್‌ನ ನಾದಿನಿಯ ಕಿವಿಯಲ್ಲಿ ಏನೋ ಪಿಸುಗುಡುತ್ತಿದ್ದ. ಆಕೆ ಅದಕ್ಕೆ ಜೋರಾಗಿ ನಗ್ತಿದ್ದಳು.

ಇದನ್ನೂ ಓದಿ: ನಾಗರೇಖಾ ಬರಹ; ಮಳೆ ಬಂತು ಮಳೆ : ನಾ ಹೋತೆ ಒಡೆಯಾ, ಕಮಲೀನಾ ನಾ ಕರಕಂಡೇ ಬತ್ತೆ

“ನಂದೇ ಮಾತಾಡುತ್ತಿದ್ದಾನೆ..” ಅಹಿನಿವ್ ಅಂದುಕೊಂಡ್ರು; “ಹೌದು ನನ್ನ ಬಗ್ಗೆಯೇ!, ನಾಶವಾಗಿ ಹೋಗಲಿ ಇಂವ. ಮತ್ತೇ ಅವಳದನ್ನೆಲ್ಲಾ ನಂಬುತ್ತಿದ್ದಾಳೆ… ಅವಳು ನಂಬುತ್ತಾಳೆ. ನಂಬಿದ್ದಕ್ಕೆ ಹೀಗೆ ನಗ್ತಿದ್ದಾಳೆ. ಓ ದೇವರೇ! ನನ್ನ ಕಾಪಾಡು, ಕಾಪಾಡು.. ಇಲ್ಲ, ಇದು ಹೀಗೆ ಹರಡಲು ನಾನು ಬಿಡೋದಿಲ್ಲ. ಬಿಡಬಾರದು. ಅವನು ಹೇಳಿದ್ದನ್ನು ಅವರೆಲ್ಲ ನಂಬದಂತೆ ಮಾಡಲು ನಾನೇನಾದರೂ ಮಾಡಲೇಬೇಕು. ನಾನು ಅವರೆಲ್ಲರ ಜೊತೆ ಮಾತಾಡುತ್ತೇನೆ. ಅವನೊಬ್ಬ ಪೆದ್ದ, ದಡ್ಡ ಶಿಖಾಮಣಿ, ಬರೇ ಗಾಳಿಸುದ್ದಿ ಹಬ್ಬಿಸುವವ ಅನ್ನೋದನ್ನ ತೋರಿಸಿಕೊಡ್ತೇನೆ.’’

ಅಹಿನಿವ್ ತನ್ನ ತಲೆ ಕೆರೆದುಕೊಂಡರು. ಇನ್ನೂ ಮುಜುಗರದಿಂದ ಹೊರ ಬರೋಕಾಗ್ತಿಲ್ಲ ಅವರಿಗೆ. ಅಲ್ಲೇ ಸಮೀಪ ಫ್ರೆಂಚ್ ಕಲಿಸುವ ಟೀಚರ್ ನಿಂತಿದ್ದರು. ಹತ್ತಿರ ಹೋಗಿ ಹೇಳತೊಡಗಿದರು, “ ಈಗಷ್ಟೇ ನಾನು ಅಡುಗೆ ಕೋಣೆಗೆ ಹೋಗಿದ್ದೆ. ಊಟದ ತಯಾರಿ ಹೇಗೆ ಮಾಡ್ತಿದ್ದಾರೆ ಅಂತಾ ನೋಡ್ಕೊಂಡ ಬರೋಕೆ. ನನಗೆ ಗೊತ್ತಿತ್ತು ನಿಮಗೆ ಮೀನು ಅಂದ್ರೆ ಇಷ್ಟ ಅಂತಾ. ಅದಕ್ಕೆಂದೇ ನಾನು ಸ್ಟರ್ಜಿಯನ್ ತಂದಿದ್ದೀನಿ ಗೆಳೆಯಾ, ಹೇಗಿದೆ ಗೊತ್ತಾ? ಒಂದೂವರೆ ಯಾರ್ಡ ಉದ್ದ ಇದೆ! ಹ್ಹಾ ಹ್ಹಾ ಹ್ಹಾ. ಅದೇನೆಂದರೆ… ಹೇಳೋಕೆ ಬಂದದ್ದನ್ನೆ ಮರೆತೆ ನೋಡಿ. ನಾನು ಈಗಷ್ಟೇ ಅಡುಗೆ ಕೋಣೆಗೆ ಹೋಗಿದ್ದೆ ಅಂದ್ನಲ್ಲಾ, ರಾತ್ರಿ ಊಟಕ್ಕೆ ಏನೆಲ್ಲಾ ಇದೆ ಅಂತಾ ನೋಡೋಕೆ ಹೋಗಿದ್ದೆ. ಅಲ್ಲಿ ಸ್ಟರ್ಜಿಯನ್ ಮೀನಿತ್ತು. ನೋಡ್ತಾ ಬಾಯಲ್ಲಿ ನೀರುಕ್ಕಿ ಬಂತು. ಹಂಗೇ ಬಾಯಿ ಚಪ್ಪರಿಸ್ಕೊಂಡೆ. ಆಸೆ ಹೆಚ್ಚಾಗಿ ಎಂಜಲು ನುಂಗಿದೆ. ನನ್ನ ತುಟಿಗಳನ್ನ ಹಾಗೇ ನೆಕ್ಕಿದೆ. ಆ ಹೊತ್ತಿಗೆ ಆ ಮೂರ್ಖ ವ್ಯಾನ್ಕಿನ್ ಅಲ್ಲಿಗೆ ಬಂದ ನೋಡಿ ಮತ್ತವನು ಏನ್ ಹೇಳಿದ ಗೊತ್ತಾ?’’

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 1 : Literature: ನೆರೆನಾಡ ನುಡಿಯೊಳಗಾಡಿ; ರಷ್ಯಾದ ಪ್ರಸಿದ್ಧ ಕಥೆಗಾರ ಆ್ಯಂಟನ್ ಚೆಕಾವ್​ 128 ವರ್ಷಗಳ ಹಿಂದೆ ಬರೆದ ಕಥೆ

 

Published On - 10:44 am, Fri, 18 February 22