ಪುನೀತ್​ ರಾಜ್​ಕುಮಾರ್ ಕುರಿತು ಬಯೋಗ್ರಫಿ; ಈ ಪುಸ್ತಕದಲ್ಲಿ ಏನೆಲ್ಲ ಮಾಹಿತಿ ಇರಲಿದೆ?

ಪುನೀತ್ ರಾಜ್​ಕುಮಾರ್ ಕುರಿತಾಗಿ ಬರುತ್ತಿರುವ ಮೊದಲ ಬಯೋಗ್ರಫಿ ಇದು. ಇದರಲ್ಲಿ ಪುನೀತ್ ಜೀವನ ಕುರಿತಾದ ವಿಷಯಗಳು ಮಾತ್ರ ಇಲ್ಲ. ಅವರ ವೃತ್ತಿ ಮತ್ತು ಖಾಸಗಿ ಜೀವನ ಕುರಿತಾದ ಅಪರೂಪದ ವಿಷಯಗಳನ್ನು ಮತ್ತು ಛಾಯಾಚಿತ್ರಗಳನ್ನು ಈ ಪುಸ್ತಕ ಒಳಗೊಂಡಿದೆ.

ಪುನೀತ್​ ರಾಜ್​ಕುಮಾರ್ ಕುರಿತು ಬಯೋಗ್ರಫಿ; ಈ ಪುಸ್ತಕದಲ್ಲಿ ಏನೆಲ್ಲ ಮಾಹಿತಿ ಇರಲಿದೆ?
ಪುನೀತ್
Follow us
| Updated By: ರಾಜೇಶ್ ದುಗ್ಗುಮನೆ

Updated on: Feb 17, 2022 | 2:50 PM

ಪುನೀತ್​ ರಾಜ್​ಕುಮಾರ್ (Puneeth Rajkumar) ಇಲ್ಲ ಎಂಬ ನೋವನ್ನು ಅರಗಿಸಿಕೊಳ್ಳೋಕೆ ಇನ್ನೂ ಸಾಧ್ಯವಾಗುತ್ತಿಲ್ಲ. ಅವರನ್ನು ಕಳೆದುಕೊಂಡು ನಾಲ್ಕು ತಿಂಗಳಾಗುತ್ತಾ ಬಂದಿದೆ. ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ನಾನಾ ರೀತಿಯಲ್ಲಿ ನೆನೆಯಲಾಗುತ್ತಿದೆ. ಪುನೀತ್​ ಅವರು ಹಲವರ ಜತೆ ಒಳ್ಳೆಯ ಒಡನಾಟ ಹೊಂದಿದ್ದರು. ಸಿನಿಮಾ ಪತ್ರಕರ್ತರ ಜತೆಗೂ ಅವರ ನಂಟು ಉತ್ತಮವಾಗಿತ್ತು. ಈಗ ಪುನೀತ್​ ಅವರ ಜೀವನ ಕಥನದ ಕೃತಿ (Puneeth Rajkumar) Biography) ಹೊರ ಬರುತ್ತಿದೆ. ಸಿನಿಮಾ ಪತ್ರಕರ್ತ ಡಾ. ಶರಣು ಹುಲ್ಲೂರು ಅವರು ಈ ಕೃತಿಯನ್ನು ಹೊರ ತರುತ್ತಿದ್ದಾರೆ. ಈ ವಿಚಾರ ಕೇಳಿ ಪುನೀತ್​ ಅಭಿಮಾನಿಗಳು ಖುಷಿಪಟ್ಟಿದ್ದಾರೆ.  

ಪುನೀತ್​ ರಾಜ್​ಕುಮಾರ್​ ಅವರನ್ನು ಶರಣು ಹುಲ್ಲೂರು ಅವರು ಹತ್ತಿರದಿಂದ ಕಂಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಶರಣು, ‘ಪುನೀತ್​ ಅವರು ಯಾವತ್ತೂ ವರದಿಗಾರರ ಮೇಲೆ ಮುನಿಸಿಕೊಂಡವರು ಅಲ್ಲ. ಫೋನಿಗೆ ಸಿಗದೇ ಸತಾಯಿಸಿದವರೂ ಅಲ್ಲ. ಮಿಸ್ಡ್ ಕಾಲ್ ಇದ್ದರೆ ತಿರುಗಿ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಒಂದು ರೀತಿಯಲ್ಲಿ ಅವರು ನಮ್ಮವರೇ ಆಗಿದ್ದರು. ಆ ಪ್ರೀತಿ ಮತ್ತೆಂದೂ ಸಿಗದು. ಹಾಗಾಗಿ, ಅವರ ಜತೆಗಿನ ಒಡನಾಟವನ್ನು ದಾಖಲಿಸಬೇಕು ಮತ್ತು ಈ ಮೂಲಕ ಅವರ ಜೀವನವನ್ನು ಅಕ್ಷರ ರೂಪಕ್ಕೆ ಇಳಿಸಬೇಕು ಎನ್ನುವ ಉದ್ದೇಶದಿಂದ ‘ನಾನೇ ರಾಜಕುಮಾರ’ ಹೆಸರಿನಲ್ಲಿ ಅಪ್ಪು ಅವರ ಬಯೋಗ್ರಫಿ ಬರೆಯಬೇಕಾಯಿತು. ಇದೊಂದು ರೀತಿಯಲ್ಲಿ ಸಿನಿಮಾ ಪತ್ರಕರ್ತರ ಪರವಾಗಿ ನಾನು ಸಲ್ಲಿಸುತ್ತಿರುವ ಪುಸ್ತಕದ ಗೌರವವಿದು’ ಎಂದು ಬರೆದುಕೊಂಡಿದ್ದಾರೆ.

ಈ ಪುಸ್ತಕ ಬರೆಯೋಕೆ ಕಾರಣವಾದ ಘಟನೆಯನ್ನು ಶರಣು ನೆನಪಿಸಿಕೊಂಡಿದ್ದಾರೆ. ‘ಇಂಥದ್ದೊಂದು ಪುಸ್ತಕ ಬರೆಯಲು ಕಾರಣವಾಗಿದ್ದು 2 ಸೆಪ್ಟೆಂಬರ್ 2020. ನಾನು ಸುದೀಪ್ ಅವರ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕ ಬರೆದಾಗ ಅದನ್ನು ಪ್ರೀತಿಯಿಂದ ಬಿಡುಗಡೆ ಮಾಡಿದ್ದು ಪುನೀತ್ ರಾಜ್​ಕುಮಾರ್ ಅವರು. ಸುದೀಪ್ ಅವರ ಹುಟ್ಟುಹಬ್ಬದಂದು ಅವರು ಪುಸ್ತಕ ಬಿಡುಗಡೆ ಮಾಡಿದಾಗ ಖ್ಯಾತ ನಿರ್ಮಾಪಕರಾದ ಜಾಕ್ ಮಂಜು ಅವರು ‘ಮುಂದಿನ ಪುಸ್ತಕವನ್ನು ಅಪ್ಪು ಅವರದ್ದೇ’ ಮಾಡಿ ಎಂದರು. ಅಂದು ವೀರಕಪುತ್ರ ಶ್ರೀನಿವಾಸ್ ಅವರು ಕೂಡ ಇದ್ದರು. ‘ಅಯ್ಯೋ ನನ್ನ ಪುಸ್ತಕವಾ ಬೇಡ’ ಎಂದವರು, ಎಲ್ಲರ ಒತ್ತಾಯಕ್ಕೆ ಮಣಿದು ಅಪ್ಪು ಸರ್ ಒಪ್ಪಿಕೊಂಡರು. ಅಲ್ಲಿಂದ ನನ್ನ ಕೆಲಸವನ್ನು ಶುರು ಮಾಡಿದೆ’ ಎಂದಿದ್ದಾರೆ ಶರಣು ಹುಲ್ಲೂರು.

‘ಪುನೀತ್​ ಅವರನ್ನು ಭೇಟಿ ಮಾಡಲು ಹಲವು ಬಾರಿ ಕರೆ ಮಾಡಿದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆರು ತಿಂಗಳ ನಂತರ ಶೆರ್ಟನ್ ಹೋಟೆಲ್​​ನಲ್ಲಿ ನಮ್ಮಿಬ್ಬರ ಭೇಟಿ ಆಯಿತು. ‘ನಾನು ಬೇಕು ಅಂತಾನೇ ನಿಮ್ಮ ಕರೆ ಸ್ವೀಕರಿಸಲಿಲ್ಲ. ನಾನೇನು ಸಾಧನೆ ಮಾಡಿಲ್ಲ. ಅಪ್ಪಾಜಿ ಮತ್ತು ಅಮ್ಮನ ಪುಸ್ತಕದ ಜತೆ ನನ್ನ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ. ಒಂದು ಸಲ ನೀವೇ ಯೋಚ್ನೆ ಮಾಡಿ’ ಎಂದು ನಿರಾಸೆ ಮಾಡಿಬಿಟ್ಟರು. ಆದರೂ, ನಾನು ನನ್ನ ಹಠ ಬಿಡಲಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಲೇ ಇದ್ದೆ. ದಿಢೀರ್ ಆಗಿ ಅಪ್ಪು ಹೊರಟೇ ಬಿಟ್ಟರು’ ಎಂದು ಅಕ್ಟೋಬರ್ 29ರ ಕಹಿ ಘಟನೆ ನೆನಪಿಸಿಕೊಂಡಿದ್ದಾರೆ ಶರಣು ಹುಲ್ಲೂರು.

‘ಪುನೀತ್ ರಾಜ್​ಕುಮಾರ್ ಅವರ ನಿಧನದ ನಂತರ ಅವರ ಸಾಧನೆಗಳ ಪಟ್ಟಿ ಒಂದೊಂದೇ ಬರ ತೊಡಗಿದವು. ನಾಡೇ ಕಣ್ಣೀರಿಟ್ಟಿತು. ಆಗ ಮತ್ತೆ ನನಗೆ ನೆನಪಾಗಿದ್ದು ಅಪ್ಪು ಹೇಳಿದ ಮಾತು, ‘ಅಪ್ಪಾಜಿ ಮತ್ತು ಅಮ್ಮನ ಜತೆ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ’ ಎನ್ನುವುದು. ಅವರ ಈ ಮಾತನ್ನು ಅಭಿಮಾನಿಗಳು ಸುಳ್ಳು ಮಾಡಿದರು. ಅಪ್ಪ-ಅಮ್ಮನಷ್ಟೇ ಸಾಧನೆಯ ಹಾದಿಯಲ್ಲಿದ್ದಿರಿ ಎಂದು ತೋರಿಸಿದರು. ಮತ್ತೆ ನನ್ನ ಕನಸಿಗೆ ಮರುಜೀವ ಬಂತು. ಅಷ್ಟರಲ್ಲಿ ಕನ್ನಡದ ಖ್ಯಾತ ಪ್ರಕಾಶನ ಸಂಸ್ಥೆ ಜಮೀಲ್ ಸಾವಣ್ಣ ಅವರು ಪುಸ್ತಕದ ಬಗ್ಗೆ ವಿಚಾರಿಸಿದರು. ಮತ್ತೆ ಎಲ್ಲ ಸಂಗತಿಗಳನ್ನು ಒಟ್ಟಾಗಿಸಿ ಪುಸ್ತಕ ಮಾಡಿದೆ’ ಎಂದಿದ್ದಾರೆ ಶರಣು ಹುಲ್ಲೂರು.

ಈ ಮೊದಲು ಶರಣು ಹುಲ್ಲೂರು ಬರೆದ ‘ಅಂಬರೀಶ್’ ಪುಸ್ತಕವನ್ನು ಪ್ರಕಟಿಸಿದ್ದ ಸಾವಣ್ಣ ಪ್ರಕಾಶನವೇ ‘ನಾನೇ ರಾಜಕುಮಾರ’ ಪುಸ್ತಕವನ್ನು ಪ್ರಕಟಿಸಿದೆ. ಖ್ಯಾತ ಬರಹಗಾರ ಜೋಗಿ ಅವರು ಈ ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ.  ಡಾ.ಅಂಬರೀಶ್, ಡಾ.ವಿಷ್ಣುವಧರ್ನ್, ಕಿಚ್ಚ ಸುದೀಪ್ ಹಾಗೂ ಸಂಚಾರಿ ವಿಜಯ್ ಅವರ ಪುಸ್ತಕದ ನಂತರ ಸಿನಿಮಾ ರಂಗದವರ ಕುರಿತಾಗಿ ಶರಣು ಹುಲ್ಲೂರು ಬರೆದ ಮತ್ತೊಂದು ಪುಸ್ತಕ ಇದಾಗಿದೆ.

ಪುಸ್ತಕದಲ್ಲಿ ಏನಿದೆ?

ಪುನೀತ್ ರಾಜ್​ಕುಮಾರ್ ಕುರಿತಾಗಿ ಬರುತ್ತಿರುವ ಮೊದಲ ಬಯೋಗ್ರಫಿ ಇದು. ಇದರಲ್ಲಿ ಪುನೀತ್ ಜೀವನ ಕುರಿತಾದ ವಿಷಯಗಳು ಮಾತ್ರ ಇಲ್ಲ. ಅವರ ವೃತ್ತಿ ಮತ್ತು ಖಾಸಗಿ ಜೀವನ ಕುರಿತಾದ ಅಪರೂಪದ ವಿಷಯಗಳನ್ನು ಮತ್ತು ಛಾಯಾಚಿತ್ರಗಳನ್ನು ಈ ಪುಸ್ತಕ ಒಳಗೊಂಡಿದೆ. ಪುನೀತ್​ ಬಾಲ್ಯ, ಬಾಲ್ಯದಲ್ಲಿ ನಟಿಸಿದ ಸಿನಿಮಾಗಳು ಮತ್ತು ಅರಸು ಚಿತ್ರದಿಂದ ಜೇಮ್ಸ್ ಚಿತ್ರದವರೆಗಿನ ಸಮಗ್ರ ನೋಟ ಈ ಸಿನಿಮಾದಲ್ಲಿದೆ. 264 ಪುಟಗಳನ್ನು ಈ ಪುಸ್ತಕ ಹೊಂದಿದ್ದು, ಒಟ್ಟು 34 ಅಧ್ಯಾಯಗಳನ್ನು ಇದು ಒಳಗೊಂಡಿದೆ. ಅತೀ ಶೀಘ್ರದಲ್ಲೇ ಪುಸ್ತಕ ಬಿಡುಗಡೆ ಆಗಲಿದೆ.

ಇದನ್ನೂ ಓದಿ:  Family Pack Movie Review: ‘ಫ್ಯಾಮಿಲಿ ಪ್ಯಾಕ್’ ತುಂಬ ಮನರಂಜನೆ, ಸ್ವಲ್ಪ ಎಮೋಷನ್ಸ್, ಒಂದಷ್ಟು ಫ್ಯಾಂಟಸಿ

ಪಾಟರಿಟೌನ್ ಮೆಟ್ರೊ ನಿಲ್ದಾಣಕ್ಕೆ ಪುನೀತ್ ರಾಜ್​ಕುಮಾರ್ ಹೆಸರು ಇರಿಸಲು ಮನವಿ: ಪ್ರಧಾನಿ ಕಚೇರಿ ಸ್ಪಂದನೆ