Qatar Mail: ಇಲ್ಲಿರುವ ಜನ ನೀರಿಲ್ಲದೆ ಬೇಕಿದ್ದರೆ ಇದ್ದಾರು, ಆದರೆ ಟಿಶ್ಯೂ ಪೇಪರ್ ಇಲ್ಲದೆ ಒಂದು ದಿನವೂ ಇರಲಾರರು

Tissue Paper : ‘ತಕ್ಷಣವೇ 5-6 ಟಿಶ್ಯುಗಳನ್ನು ಪರಪರನೆ ಮೇಲೆಳೆದು ತನ್ನ ಕೈ ಬಾಯನ್ನೊಮ್ಮೆ ಒರೆಸಿಕೊಂಡ ಬಾಲಕಿ, ಪ್ಲೇಟಿನಲ್ಲಿದ್ದ ಒಂದೊಂದು ಬಾಳೆಕಾಯಿ ಚಿಪ್ಸ್ ಬಾಯಿಗೆ ಹಾಕಿದಾಗಲೂ, ಅದನ್ನೇ ಮುಂದುವರೆಸಿದಳು. ಆಕೆಯ ಪೋಷಕರೂ ಅದನ್ನೇ ಮಾಡಿದಾಗ, ನನಗೆ ವಿಚಿತ್ರವೆನಿಸಿತು. ಅವರೆದ್ದು ಹೋದಾಗ ಮುಕ್ಕಾಲು ಡಬ್ಬ ಟಿಶ್ಯೂ ಖಾಲಿಯಾಗಿತ್ತು!’ ಚೈತ್ರಾ ಅರ್ಜುನಪುರಿ

Qatar Mail: ಇಲ್ಲಿರುವ ಜನ ನೀರಿಲ್ಲದೆ ಬೇಕಿದ್ದರೆ ಇದ್ದಾರು, ಆದರೆ ಟಿಶ್ಯೂ ಪೇಪರ್ ಇಲ್ಲದೆ ಒಂದು ದಿನವೂ ಇರಲಾರರು
Follow us
ಶ್ರೀದೇವಿ ಕಳಸದ
|

Updated on:Feb 18, 2022 | 5:02 PM

ಕತಾರ್ ಮೇಲ್ | Qatar Mail : ನಾನು ಕತಾರಿಗೆ ಬಂದ ಹೊಸದರಲ್ಲಿ ಮನೆಗೆ ಬಂದಿದ್ದ ಗೆಳೆಯನೊಬ್ಬನ ಐದು ವರ್ಷದ ಮಗಳು ಬಂದ ಐದು ನಿಮಿಷಗಳಲ್ಲೇ ಏನನ್ನೋ ಹುಡುಕಲಾರಂಭಿಸಿದಳು. ತನ್ನ ತಂದೆಯ ಕಿವಿಯಲ್ಲೊಮ್ಮೆ, ತಾಯಿಯ ಕಿವಿಯಲ್ಲೊಮ್ಮೆ ಏನನ್ನೋ ಹೇಳತೊಡಗಿದಳು. ನನಗೆ ಅದೇನೆಂದು ತಿಳಿದುಕೊಳ್ಳುವ ಕೌತುಕ. ಆಗ ಆ ಪೋಷಕರು ಟಿಶ್ಯು ಪ್ಯಾಕ್ ಇದೆಯೇ ಎಂದರು. ನಾನು ಹೌದೆಂದು ತಲೆಯಾಡಿಸಿದಾಗ, ಆ ಮೂವರಿಗೂ ಕಣ್ಣಲ್ಲಿ ಸಮಾಧಾನ ಮಿಂಚಿ ಮಾಯವಾದಂತೆ ನನಗನಿಸಿತು. ಕೊನೆಗೆ ಟಿಶ್ಯು ಡಬ್ಬ ತಂದು ಮೇಜಿನ ಮೇಲಿರಿಸಿದಾಗ, ಪುಟ್ಟ ಪೋರಿಗೆ ಸಂತಸ. ತಕ್ಷಣವೇ 5-6 ಟಿಶ್ಯುಗಳನ್ನು ಪರಪರನೆ ಮೇಲೆಳೆದು ತನ್ನ ಕೈ ಬಾಯನ್ನೊಮ್ಮೆ ಒರೆಸಿಕೊಂಡ ಬಾಲಕಿ, ಪ್ಲೇಟಿನಲ್ಲಿದ್ದ ಒಂದೊಂದು ಬಾಳೆಕಾಯಿ ಚಿಪ್ಸ್ ಬಾಯಿಗೆ ಹಾಕಿದಾಗಲೂ, ಅದನ್ನೇ ಮುಂದುವರೆಸಿದಳು. ನನ್ನ ತಾಳ್ಮೆ ಪರೀಕ್ಷೆ ಮಾಡಲೆಂಬಂತೆ ಆಕೆಯ ಪೋಷಕರೂ ಅದನ್ನೇ ಮಾಡಿದಾಗ, ನನಗೆ ವಿಚಿತ್ರವೆನಿಸಿತು. ಅವರೆದ್ದು ಹೋದಾಗ ಮುಕ್ಕಾಲು ಡಬ್ಬ ಟಿಶ್ಯೂ ಖಾಲಿಯಾಗಿತ್ತು! ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ಛಾಯಾಗ್ರಾಹಕಿ (Chaithra Arjunpuri

*

(ಪತ್ರ 4)

ನಾನು ಕತಾರ್​ನ ರಾಜಧಾನಿ ದೋಹಾಕ್ಕೆ ಬಂದು ಒಂದು ತಿಂಗಳೊಳಗೆ ನಮ್ಮ ಮನೆಯಲ್ಲಿ ಹತ್ತು ಟಿಶ್ಯು ಪ್ಯಾಕ್  ಖಾಲಿಯಾಗಿದ್ದವು. ಪ್ರತಿಯೊಂದು ಪ್ಯಾಕ್​ನಲ್ಲಿ  200ರ ಎರಡು ಮಡಿಕೆಗಳಿದ್ದ ಟಿಶ್ಯುಗಳು, ಅಂದರೆ ಒಟ್ಟು 2,000 ಟಿಶ್ಯುಗಳನ್ನು ನಾವು ಒಂದು ತಿಂಗಳಿನಲ್ಲಿ ಮುಗಿಸಿದ್ದೆವು! ಈಗ ಅದರ ಬಳಕೆ ಕಡಿಮೆಯಾಗಿದೆಯೆಂದಲ್ಲ, ಬದಲಾಗಿ ಅದರ ಲೆಕ್ಕ ಇಡುವುದನ್ನೇ ಬಿಟ್ಟುಬಿಟ್ಟಿದ್ದೇನೆ. ಭಾರತದಲ್ಲಿದ್ದಿದ್ದರೆ ನಾವು ಇಷ್ಟು ಟಿಶ್ಯುಗಳನ್ನು ಬಳಸುತ್ತಿದ್ದೆವಾ ಎಂದು ಹಲವು ಸಲ ಅಂದುಕೊಂಡಿದ್ದಿದೆ.

ಇಲ್ಲಿ ಇನ್ನೊಂದು ವಿಷಯವನ್ನೂ ಹೇಳಿಬಿಡುತ್ತೇನೆ. ಎಲ್ಲರೂ ತಿಳಿದಿರುವಂತೆ ಅರಬ್ ರಾಷ್ಟ್ರಗಳಲ್ಲಿ ತೈಲೋತ್ಪನ್ನ ಹೆಚ್ಚು. ಹಾಗೆಂದ ಮಾತ್ರಕ್ಕೆ, ಈ ರಾಷ್ಟ್ರಗಳಲ್ಲಿ ನೀರು ದೊರೆಯುವುದಿಲ್ಲವೆಂದಲ್ಲ. ಇಲ್ಲಿ ನಮ್ಮ ಭಾರತದಲ್ಲಿ ದೊರಕುವಂತೆಯೇ ಯಥೇಚ್ಛವಾಗಿ ದೊರಕುತ್ತದೆ. ಬಹುಶಃ ಭಾರತದಲ್ಲಿ ಕೆಲವೊಮ್ಮೆ ಕೆಲ ಭಾಗಗಳಲ್ಲಿ ನೀರಿಗಾಗಿ ಹಾಹಾಕಾರವೇಳುವಂತೆ ಇಲ್ಲಿ ಆಗುವುದಿಲ್ಲವೇನೋ, ಕಾರಣ ತೈಲೋತ್ಪನ್ನ. ಅದರಿಂದಾಗಿ ಹರಿಯುವ ಹಣದ ಹೊಳೆ! ಹಾಗಾಗಿ ಇಲ್ಲಿ ನೀರಿಗಾಗಲಿ, ಗಾಳಿಗಾಗಲಿ ಯಾವುದೇ ಕೊರತೆಯಿಲ್ಲ, ಕಾಸು ಕೊಡಬೇಕಷ್ಟೆ. ಕಾಸಿದ್ರೆ ಕೈಲಾಸ!

ನೇರ ವಿಷಯಕ್ಕೆ ಬರುತ್ತೇನೆ. ನೆಗಡಿಯಾದಾಗ ಮೂಗನ್ನು ಒರೆಸಲೋ, ಇಲ್ಲ ಕೆಂಡದಂಥಾ ಬಿಸಿಲಿನಲ್ಲಿ ಒಸರುವ ಬೆವರನ್ನು ಒರೆಸಲೋ ಈ ಟಿಶ್ಯು ನೆರವಿಗೆ ಬರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಷ್ಟೊಂದು ಟಿಶ್ಯು  ಬಳಕೆ ಹೇಗೆ ಆಗುತ್ತದೆ? ಭಾರತದಲ್ಲಿ ಇದನ್ನು ಕೇಳಿದರೆ ಜನ ನಗಬಹುದು. ಎಲ್ಲ ಸಮಯದಲ್ಲೂ, ಎಲ್ಲ ಕೆಲಸ ಕಾರ್ಯಗಳಿಗೂ ಟಿಶ್ಯುವನ್ನು ಅಗತ್ಯವಾಗಿ ಬಳಸಲಾಗುತ್ತದೆ.

ಸಾಮಾನ್ಯವಾಗಿ ದೋಹಾದಲ್ಲಿ ಒಬ್ಬ ವ್ಯಕ್ತಿ ಕಡಿಮೆಯೆಂದರೂ 10 ಟಿಶ್ಯುಗಳನ್ನು ಒಂದು ದಿನಕ್ಕೆ ಬಳಸುತ್ತಾನೆ ಎಂದುಕೊಳ್ಳೋಣ. ಅಂದರೆ ಸುಮಾರು 1,೦೦೦,೦೦೦ ಜನ ಸರಿ ಸುಮಾರು 1೦,೦೦೦,೦೦೦ ಟಿಶ್ಯುಗಳನ್ನು ಒಂದು ದಿನಕ್ಕೆ ವ್ಯಯ ಮಾಡುತ್ತಾರೆಂದಾಯ್ತು. 3೦೦,೦೦೦,೦೦೦ ಟಿಶ್ಯುಗಳು ಒಂದು ತಿಂಗಳಿಗೆ, ಹಾಗಾದರೆ ಒಂದು ವರ್ಷಕ್ಕೆ? ಕ್ಷಮಿಸಿ, ಗಣಿತದಲ್ಲಿ ನಾನು ಸ್ವಲ್ಪ ವೀಕು! ಇದು ಇಷ್ಟಕ್ಕೆ ಮುಗಿಯಲಿಲ್ಲ, ಸ್ವಲ್ಪ ತಾಳಿ, ಇದರಿಂದ ಎಷ್ಟು ಹಣ ಪೋಲಾಗುತ್ತಿದೆ ಎನ್ನುವುದನ್ನೂ ಒಂದು ಅಂದಾಜಿನ ಮೇಲೆ ಹೇಳಿಬಿಡುತ್ತೇನೆ. ಪ್ರತಿಯೊಂದು ಟಿಶ್ಯು ಪ್ಯಾಕ್ ನ ಬೆಲೆ 5ರಿಂದ 10 ರಿಯಾಲ್ (ಇದನ್ನು ನನ್ನಂತೆ ರೂಪಾಯಿಗೆ ಬದಲಾಯಿಸಿ ಲೆಕ್ಕ ಹಾಕಬೇಡಿ. ಕತಾರಿಗೆ ಬಂದ ಮೊದಲ ಆರು ತಿಂಗಳು ಪ್ರತಿಯೊಂದು ವಸ್ತುವನ್ನೂ ರೂಪಾಯಿಗೆ ಲೆಕ್ಕ ಹಾಕಿ ನಾನು ಹಲವು ಬಾರಿ ಮಾಲ್​ಗಳಲ್ಲಿ ಗರಬಡೆದ ಹಾಗೆ ನಿಂತಿದ್ದೂ ಇದೆ)!

ಪತ್ರ 2 : Qatar Mail : ಕತಾರ್ ಮೇಲ್ ; ಏಯ್, ನಮ್ಮ ಮನೆಯಲ್ಲಿರೋದು ಲ್ಯಾಂಡ್ ಕ್ರೂಸರ್, ನಿಮ್ಮ ಕಾರು ಯಾವುದೋ?

Qatar Mail Kannada Writer Chaitra Arjunpuri discussed Tissue Paper Culture

ಪ್ರಾತಿನಿಧಿಕ ಚಿತ್ರ

ಒಂದು ಕರವಸ್ತ್ರ ಅಥವಾ ಒಂದು ತುಂಡು ಬಟ್ಟೆ ಹಲವು ತಿಂಗಳು ಅಥವಾ ತಿಂಗಳುಗಳೇ ಬಾಳಿಕೆ ಬರುವಾಗ ಹೀಗೆ ಟಿಶ್ಯುಗಳನ್ನು ವ್ಯರ್ಥ ಮಾಡುವುದು ಎಷ್ಟರ ಮಟ್ಟಿಗೆ ಸರಿಯೋ ಗೊತ್ತಿಲ್ಲ. ಕರವಸ್ತ್ರವನ್ನು ಒಗೆಯಲು ಎಷ್ಟು ಹೊತ್ತು ಹಿಡಿದೀತು, ಅಬ್ಬಬ್ಬಾ ಎಂದರೆ ಐದು ನಿಮಿಷ? ಇರಲಿ ಬಿಡಿ. ಇಲ್ಲಿನ ಜನ ಪ್ರಾಯಶಃ ನೀರಿಲ್ಲದಿದ್ದರೂ ಬದುಕಿಬಿಟ್ಟಾರು, ಆದರೆ ಟಿಶ್ಯುಗಳಿಲ್ಲದೆ ಒಂದು ದಿನವೂ ಇರಲಾರರು. ಭಾರತದಿಂದ ಕೆಲಸಕ್ಕಾಗಿ ವಲಸೆ ಬಂದ ಜನರೂ ಈ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಾವು ಚಿಕ್ಕಮಕ್ಕಳಿದ್ದಾಗ ನಮ್ಮ ಸ್ಕೂಲ್ ಯೂನಿಫಾರ್ಮ್​ಗೆ ಒಂದು ಪುಟ್ಟ ಕರವಸ್ತ್ರವನ್ನು ಪಿನ್ ಮಾಡಿ ಕಳಿಸುತ್ತಿದ್ದರು. ದಿನವೂ ಒಂದೊಂದು ಬಣ್ಣದ, ಬಗೆಯ ಕರವಸ್ತ್ರವನ್ನು ಬಟ್ಟೆಗೆ ಧರಿಸುತ್ತಿದ್ದ ನಮ್ಮ ಕಾಲದಲ್ಲಿ ನಮಗೆ ಅದೇ ಒಂದು ಹೆಮ್ಮೆಯ ವಿಷಯವಾಗಿತ್ತು. ಗೊಂಬೆಯ ಚಿತ್ರಗಳು, ಹೂವಿನ ಚಿತ್ರಗಳು, ಹಣ್ಣಿನ ಚಿತ್ರಗಳು, ಕೆಲವೊಮ್ಮೆ ಚಿತ್ರವಿಚಿತ್ರವಾದ, ಆದರೂ ಸುಂದರವಾದ ಬಳ್ಳಿಗಳು, ಹೀಗೆ ಅನೇಕ ರೀತಿಯಲ್ಲಿ ಇದ್ದ ಕರವಸ್ತ್ರಗಳು ನಮ್ಮ ಬಟ್ಟೆಯನ್ನೇರುತ್ತಿದ್ದವು. ನಮ್ಮ ಗೆಳತಿಯರಿಗೆ ಆ ಕರವಸ್ತ್ರಗಳನ್ನು ತೋರಿಸಿ, ಅವರ ಕರವಸ್ತ್ರಗಳನ್ನು ನೋಡುವುದೇ ನಮ್ಮ ಬಿಡುವಿನ ವೇಳೆಯಲ್ಲಿ ಒಂದು ಮಜ ತರುವ ವಿಷಯವಾಗಿತ್ತು. ಬಹುಶಃ ದೋಹಾದಲ್ಲಿ ಮಕ್ಕಳು ಬಿಡುವಿನ ವೇಳೆಯಲ್ಲಿ ತಮ್ಮ ಟಿಶ್ಯುಗಳ ಬಗ್ಗೆ ಚರ್ಚೆ ಮಾಡುತ್ತಾರೆನೋ, ಯಾರಿಗೆ ಗೊತ್ತು!

ದೋಹಾಕ್ಕೆ ನಾನು ಬಂದ ಎರಡನೇ ದಿನವೇ ಶಾಪಿಂಗ್​ಗೆ ಹೋದಾಗ ಅಲ್ಲಿನ ಮಾಲ್​ಗಳು ಟಿಶ್ಯು ಪ್ಯಾಕ್ ಗಳಿಗಾಗಿಯೇ ಪ್ರತ್ಯೇಕ ವಿಭಾಗಗಳನ್ನಿರಿಸಿರುವುದನ್ನು ಕಂಡು ದಂಗಾಗಿ ಹೋಗಿದ್ದೆ. ಹಲವಾರು ಜನ ಒಟ್ಟೊಟ್ಟಿಗೆ 5-6 ಟಿಶ್ಯು ಪ್ಯಾಕ್​ಗಳನ್ನು ಕೊಂಡುಕೊಳ್ಳುತ್ತಿರುವುದು ನೋಡಿ ಅಚ್ಚರಿಗೊಂಡಿದ್ದೆ. ಮಾತ್ರವಲ್ಲ, ನಮ್ಮ ಟ್ರಾಲಿಯಲ್ಲೂ ಐದಾರು ಟಿಶ್ಯು ಪ್ಯಾಕ್​ಗಳಿರುವುದನ್ನು ಕಂಡು, ನಮಗೆ ಅಷ್ಟೊಂದು ಟಿಶ್ಯು ಪ್ಯಾಕ್​ಗಳ ಅವಶ್ಯಕತೆ ಇದೆಯೇ ಎಂದು ಗಂಡನನ್ನು ಕೇಳಲು ಬಾಯಿ ತೆರೆಯುವ ಮುನ್ನವೇ ಆತ, “ನನ್ನನ್ನು ಹೀಗೇಕೆ ಎಂದು ಕೇಳಬೇಡ. ಇಲ್ಲಿನ ಜನ ನನ್ನ ಮೇಲೆ ಬಲವಂತವಾಗಿ ಹೇರಿರುವ ಅಭ್ಯಾಸ ಇದು. ದಿನ ಕಳೆದಂತೆ ನಿನಗೂ ಇದರ ಅಭ್ಯಾಸ ಆಗುತ್ತದೆ!” ಎಂದಿದ್ದ. ಇದನ್ನು ಕೇಳಿ ಒಂದು ಕ್ಷಣ ತಬ್ಬಿಬ್ಬಾದ ನಾನು, ಈ ಮನುಷ್ಯ ನನ್ನನ್ನು ಕರ್ಚಿಫ್ ಬಳಸಲು, ಅಡುಗೆಮನೆಯಲ್ಲಿ ಬಿಸಿ ಪಾತ್ರೆಗಳನ್ನು ಹಿಡಿಯಲು ಬಟ್ಟೆ ಬಳಸಲು ಬಿಡುತ್ತಾನೋ ಇಲ್ಲವೋ ಎಂದು ಆತಂಕ ಪಟ್ಟುಕೊಂಡಿದ್ದೆ. ಸದ್ಯ! ಈಗಲೂ ನಾನು ಅಡುಗೆಮನೆಯಲ್ಲಿ ಬಟ್ಟೆಯನ್ನೇ ಬಳಸುವುದು, ಇದೂ ನಮ್ಮ ಸಂಸ್ಕೃತಿಯ ಭಾಗ ಎಂದುಕೊಂಡು.

ಪತ್ರ 1 : Qatar Mail : ‘ನೀನು ನಮ್ಮಿಬ್ಬರ ವಿಡಿಯೋ ತೆಗೆದಿದ್ದೀಯಾ, ಮೊದಲು ಡಿಲೀಟ್ ಮಾಡು’ ಹೀಗೆಂದು ಆಕೆ ಗುಡುಗಿದಳು

Qatar Mail Kannada Writer Chaitra Arjunpuri discussed Tissue Paper Culture

ಪ್ರಾತಿನಿಧಿಕ ಚಿತ್ರ

ಒಂದು ರಾತ್ರಿ ಊಟಕ್ಕೆಂದು ಹೊರಗೆ ಹೋದಾಗ ರೆಸ್ಟೋರೆಂಟ್​ನಲ್ಲಿ ಪ್ರತಿಯೊಂದು ಟೇಬಲ್ ಮೇಲೆಯೂ ಒಂದೊಂದು ಟಿಶ್ಯು ಪ್ಯಾಕ್​ಗಳಿದ್ದವು. ಭಾರತದಲ್ಲಿ ಹೋಟೆಲಿಗೆ ಅಥವಾ ರೆಸ್ಟೋರೆಂಟ್​ಗೆ ಹೋದ ಜನ ಮೊದಲು ಕುಡಿಯುವ ನೀರನ್ನು ಕೇಳಿದರೆ, ಇಲ್ಲಿ ಟಿಶ್ಯು ಪ್ಯಾಕ್ ಕೇಳುತ್ತಾರೆ. ಅದು ಸರಿ, ಇಲ್ಲಿನ ಹೋಟೆಲ್​ಗಳೇಕೆ ಟವೆಲ್ ಬಳಸಬಾರದು, ಏಕೆ ಟಿಶ್ಯು ಬಳಸಬೇಕು, ಶುಚಿತ್ವದ ದೃಷ್ಟಿಯಿಂದಲೇ? ಇದ್ದರೂ ಇರಬಹುದು, ಆದರೆ ಅದರ ನಿಜವಾದ ಕಾರಣ ಅದು ಟವೆಲ್ ಗಿಂತ ಅಗ್ಗ ಎನ್ನುವ ಕಾರಣಕ್ಕೆ, ಜನ ಟಿಶ್ಯು ಪ್ಯಾಕ್​ಗಳನ್ನೇ ಹೆಚ್ಚು ಇಷ್ಟಪಡುತ್ತಾರೆ ಎನ್ನುವ ಕಾರಣಕ್ಕೆ. ಒಂದು ಸಾಧಾರಣ ಟವೆಲ್​ನ ಬೆಲೆ ಏನಿಲ್ಲವೆಂದರೂ 15ರಿಂದ 20 ರಿಯಾಲ್ ಗಳು, ಅದೇ ಒಂದು ಪ್ಯಾಕ್ ಟಿಶ್ಯು ಬೆಲೆ 4ರಿಂದ 10 ರಿಯಾಲ್​ಗಳು.

ಹೊರಗೆ ಸರಿ, ಮನೆಗಳಲ್ಲಿ ಒಂದು ರೀತಿಯಲ್ಲಿ ಪ್ರತಿಷ್ಠೆಯ ಸಂಕೇತ. ಟಿಶ್ಯು ಪ್ಯಾಕ್​ಗಳನ್ನು ಒಮ್ಮೆ ಸರಿಯಾಗಿ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಕೆಲವು ಟಿಶ್ಯು ಪ್ಯಾಕ್ ಗಳ ಬೆಲೆ 10 ರಿಯಾಲ್​ಗೂ ಮೇಲ್ಪಟ್ಟು. ಬಹುಶಃ ಸುಗಂಧಭರಿತ ಟಿಶ್ಯುಗಳು ಒಂದು ಪ್ಯಾಕ್​ಗೆ 10-15 ರಿಯಾಲ್​ಗೂ ಮೇಲ್ಪಟ್ಟು ಇರುತ್ತವೆ. ಬಳಸುವುದು ಅವರ ಆರ್ಥಿಕತೆಯ ಮಟ್ಟವನ್ನೂ, ಪ್ರತಿಷ್ಠೆಯನ್ನೂ ಜಗತ್ತಿಗೆ ತೋರುತ್ತದೆಂಬ ಹುಚ್ಚು ನಂಬಿಕೆ. ಈ ಸುಗಂಧಭರಿತ ಹಾಗು ಬ್ಲೀಚ್ ಮಾಡಿದ ಟಿಶ್ಯುಗಳಲ್ಲಿರುವ ಕ್ಲೋರಿನ್ ಪರಿಸರಕ್ಕೆ ಯಾವ ರೀತಿಯ ಕೆಟ್ಟ ಪರಿಣಾಮವನ್ನು ಬೀರಬಹುದು? ಟಿಶ್ಯು ಇರಲಿ, ಅವುಗಳ ಪ್ಯಾಕ್​ಗಳ ಕಥೆ? ಅವು ಸಂಪೂರ್ಣವಾಗಿ ಕೊಳೆಯುತ್ತವೆಯೇ? ನನ್ನ ಪ್ರಶ್ನೆಗಳೂ ಮುಗಿಯುವುದಿಲ್ಲ.

ಸೂಕ್ಷ್ಮಾಣುಗಳು, ಬ್ಯಾಕ್ಟೀರಿಯಾ, ವೈರಸ್​ಗಳು ಮತ್ತು ರೋಗಗಳ ಹರಡುವಿಕೆಯನ್ನು ತಡೆಯಲು ಟಿಶ್ಯೂ ಸಹಾಯ ಮಾಡುತ್ತವೆ, ಶುಚಿತ್ವ ಹಾಗೂ ನೈರ್ಮಲ್ಯವನ್ನು ಅದ್ಭುತವಾಗಿ ಕಾಪಾಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಅವುಗಳಿಂದ ಪರಿಸರ ಹಾಗೂ ಆರೋಗ್ಯದ ಮೇಲಾಗುತ್ತಿರುವ ಅಪಾಯವನ್ನು ಕಡೆಗಣಿಸುವ ಹಾಗಿಲ್ಲ. ಅವುಗಳಲ್ಲಿ ಅಡಗಿ ಕುಳಿತಿರುವ ಕ್ಲೋರಿನ್ ಬ್ಲೀಚ್, ಡೈಗಳು, ಫಾರ್ಮಲ್ ಡೀಹೈಡ್, ಬಿಪಿಎ ಹಾಗೂ ಕೃತಕ ಸುಗಂಧ ದ್ರವ್ಯಗಳು ಚರ್ಮ ತುರಿಕೆ ಮಾತ್ರವಲ್ಲದೆ ಯೀಸ್ಟ್ ಸೋಂಕು ಮತ್ತು ಕ್ಯಾನ್ಸರ್ ಗೂ ಕಾರಣವಾಗಿರುವ ವಿಷಯ ಹೊಸದೇನಲ್ಲ.

ರಿಸೈಕಲ್ ಮಾಡಿದ ಪೇಪರ್​ನಿಂದ ಮೃದುವಾದ ಟಿಶ್ಯೂಗಳು ಸಿಗುವುದಿಲ್ಲ, ಹಾಗಾಗಿ ಇವುಗಳನ್ನು ತಯಾರಿಸಲು ಪ್ರತಿ ದಿನ ವಿಶ್ವಾದ್ಯಂತ ಸಾವಿರಾರು ಮರಗಳು ಬಲಿಯಾಗುತ್ತವೆ. ನಮ್ಮ ಚರ್ಮವನ್ನು ನುಣುಪಾಗಿ ಹತ್ತಿಯಂತೆ ಮುತ್ತಿಕ್ಕುವ ಆ ಟಿಶ್ಯೂ ತಯಾರಿಸಲು ಜೀವಂತ ಮರಗಳಿಂದ ತೆಗೆದ ನಾರು ಕಾರಣ. ಸುಮಾರು 45 ಕೆಜಿ ಟಿಶ್ಯೂ ಪೇಪರ್ ತಯಾರಿಸಲು ಒಂದು ಮರ ಬೇಕಾಗುತ್ತದೆ. ಟಾಯ್ಲೆಟ್ ಟಿಶ್ಯೂಗಳನ್ನೂ ದಿನನಿತ್ಯದ ಬಳಕೆಯ ಟಿಶ್ಯೂ ನ್ಯಾಪ್ಕಿನ್​ಗಳ ಜೊತೆಯಲ್ಲಿ ಸೇರಿಸಿಕೊಂಡರೆ ನಾಲ್ಕು ಸದಸ್ಯರಿರುವ ಒಂದು ಕುಟುಂಬ, ವರ್ಷಕ್ಕೆ ಎರಡು ಮರಗಳ ಸಾವಿಗೆ ಕಾರಣವಾಗುತ್ತದೆ ಎನ್ನುವುದು ಅಚ್ಚರಿಯಾದರೂ ನಂಬಲೇಬೇಕಾದ ಕಟುಸತ್ಯ.

ಅದು ಸಾಲದೆಂಬಂತೆ, ನಾಡಿನವರಿಗಾಗಿ ಕಾಡನ್ನು ಮರೆಮಾಡುತ್ತಿರುವ ಇದರ ಉದ್ಯಮ ಹೊರ ಹಾಕುವ ಡಯಾಕ್ಸಿನ್ ಮತ್ತಿತರ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳು ವಾಯು ಮತ್ತು ಜಲಮಾಲಿನ್ಯಕ್ಕೂ ಕಾರಣವಾಗಿವೆ. ಜಾಗತಿಕ ತಾಪಮಾನದ ಅನಿಲಗಳ ಹೊರಸೂಸುವಿಕೆಯಲ್ಲಿ ಇದು ಮೂರನೆಯ ಅತಿ ದೊಡ್ಡ ಕೈಗಾರಿಕೆ ಎನ್ನುವುದನ್ನೂ ಮರೆಯುವ ಹಾಗಿಲ್ಲ.

(ಮುಂದಿನ ಪತ್ರ : 4.3.2022)

*

ಹಿಂದಿನ ಪತ್ರ : Qatar Mail: ಅಷ್ಟಕ್ಕೂ ನಾವು ದೇಶ ಬಿಟ್ಟವರು, ಫಾರಿನ್​ನಲ್ಲಿ ಮಜವಾಗಿರುವವರು!

Published On - 4:49 pm, Fri, 18 February 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್