Transgender World : “ನಿಮ್‌ ಹತ್ರ 20 ನಿಮಿಷ ಮಾತಾಡ್ತೀನಿ, ನೀವು ಸಲಿಂಗಕಾಮಿಯೋ ಇಲ್ಲ ಹೆಂಗಸೋ ಆಗಿಬಿಡ್ತೀರಾ?’’

|

Updated on: Nov 09, 2021 | 4:53 PM

Never try to change : ‘ಈ ದೇಶದಲ್ಲಿ ‘ಹಿಂದೂ ಖತ್ರೆ ಮೇ ಹೈ’ ಎಂದು ಹೇಳುವ ಹಾಗೆ ಪರಲಿಂಗ ಕಾಮ, ಅಂದ್ರೆ ಈ ಸೀದಾ ಇರುವವರು ಅಷ್ಟು ಖತ್ರೆಯಲ್ಲಿ ಇದ್ದಾರ? ನಮ್ಮನ್ನು ನಾವು ಎಷ್ಟು ಬದಲಿಸಲು ಸಾಧ್ಯವಿಲ್ಲ ಅಂತ ಹೇಳ್ತೀವೋ ಹಾಗೆ ಈ ಸೀದಾ ಇರೋ ಜನಾನ ಸೊಟ್ಟಕ್ಕೆ ಮಾಡಕ್ಕೆ ಆಗಲ್ಲ.’ ರೂಮಿ ಹರೀಶ್

Transgender World : “ನಿಮ್‌ ಹತ್ರ 20 ನಿಮಿಷ ಮಾತಾಡ್ತೀನಿ, ನೀವು ಸಲಿಂಗಕಾಮಿಯೋ ಇಲ್ಲ ಹೆಂಗಸೋ ಆಗಿಬಿಡ್ತೀರಾ?’’
Follow us on

Rumi Column : ರೂಮಿ ಕಾಲಂ – ಈ ಮಾಮೂಲಿಗಿಂತ ಬೇರೆ ರೀತಿ ಇರೋವ್ರು ತಮಗೆ ಆದಷ್ಟು ಮಾಮೂಲಿನಂತೇ ಇರಲು ಮೊದಲು ಟ್ರೈ ಮಾಡ್ತಾರೆ. ಯಾವಾಗ ಉಸಿರು ಕಟ್ಟಕ್ಕೆ ಶುರು ಆಗುತ್ತೋ ಆಗಲೇ “ನಾನು ಹೀಗೇ” ಅಂತ ಹೇಳಿಕೊಳ್ಳಕ್ಕೆ ಶುರು ಮಾಡ್ತಾರೆ. ಹೇಳಿದ್ರೆ ಏನಾಗುತ್ತೆ? ನಂ ಕಂಕು ಥರ ಇರೋವ್ರು ಏನಕ್ಕೂ ಕೇರ್‌ ಮಾಡ್ದೆ ಹೇಳ್ತಾರೆ, “ಸರಿ, ಏನಿಗ?”, ಹಾಗಾಗಿ ನಾನ್‌ ಬಚಾವ್.‌ ಆದ್ರೆ ಬೇರೆ ಕುಟುಂಬಗಳಲ್ಲಿ ಹಾಗಿಲ್ಲ. ಹುಟ್ಟಿನಲ್ಲಿ ಹೆಣ್ಣು ಎಂದು ಗುರುತಿಸಲ್ಪಡುವ ಜನರಿಗೆ ತಮ್ಮ ಲೈಂಗಿಕ ಕಾಮನೆಯಾಗಲಿ, ತಮ್ಮ ಜೆಂಡರ್‌ ವೈವಿಧ್ಯತೆಯನ್ನಾಗಲಿ ಮುಕ್ತವಾಗಿ ಹೇಳಿಕೊಳ್ಳೋಕ್ಕೆ ಸ್ಪೇಸೇ ಇಲ್ಲ. ಹೀಗಿರಲೂ ಸಾಧ್ಯಾನಾ ಅಂತ ಅವರ ಮೇಲೇ ಡೌಟ್‌ ಮಾಡ್ಕೊಳ್ಳೋಷ್ಟು ತಮ್ಮದಲ್ಲದ ಜೆಂಡರ್‌ ಜೊತೆ ಲೈಂಗಿಕ ಕಾಮನೆಯನ್ನ ಮಾಮೂಲು ಮಾಡಿಬಿಟ್ಟಿದ್ದಾರೆ. ಅಲ್ಲಿಂದ ಶುರು– ಹಿಂಸೆ, ಮಾನಸಿಕ ಹಿಂಸೆ, ಲೈಂಗಿಕ ಹಿಂಸೆ, ಬಲವಂತದ ಮದುವೆ, ಕೆಲವರು ತುಂಬಾ ಬುದ್ಧಿ ಉಪಯೋಗಿಸಿ ಚಿಕಿತ್ಸೆ ಮಾಡಲು ಟ್ರೈ ಮಾಡ್ತಾರೆ ಒಂದು ಇನ್ನೊಂದು ಲೆವೆಲ್‌ ಹಿಂಸೆ. ಯೆಡಗೈನಲ್ಲಿ ಬರೆಯೋವ್ರಿಗೆ ಬಲವಂತ ಮಾಡಿ ಬಲಗೈ ಯೂಸ್‌ ಮಾಡಲು ಹೇಳಿದ್ರೆ ಹೇಗಿರುತ್ತೋ ಅದಕ್ಕಿಂತ ಅಧ್ವಾನವಾಗೋಗುತ್ತೆ ಜೀವನ.
ರೂಮಿ ಹರೀಶ್

ಅಲೆ – 3

ಕ್ವಿಯರ್‌ ಅಂದರೆ ಇಂಗ್ಲೀಶ್‌ನಲ್ಲಿ ಸೀದಾ ಇಲ್ಲದಿರುವುದು. ಅಂದ್ರೆ ನಾಟ್‌ ಸ್ಟ್ರೇಟ್.‌ ಸೋ ಪರಲಿಂಗ ಕಾಮ. ಈ ಪದ ಕನ್ನಡದಲ್ಲಿ ಹೆಚ್ಚು ಅರ್ಥ ಆಗಲ್ಲ. ಸ್ಟ್ರೇಟ್ ಅಥವಾ ಪರಲಿಂಗ ಕಾಮ ಅಂದರೆ– ಗಂಡು ಮತ್ತು ಹೆಣ್ಣಿನ ನಡುವೆ ಇರುವ ಲೈಂಗಿಕ ಪ್ರೇಮ ಪ್ರೀತಿ. ಇತ್ಯಾದಿ. ಸುಲಭವಾಗಿ ಹೇಳುವುದಾದರೆ ಲೈಂಗಿಕ ಕಾಮನೆ. ಸಂಸ್ಕೃತಿ ಅನ್ನೋ ವಿಚಾರಕ್ಕೆ ಬರುವಾಗ, ಯಾವ ಸಂಸ್ಕೃತಿ ಏನು ತೀರ್ಮಾನ ಮಾಡುತ್ತೆ ಅನ್ನೋದು ಮುಖ್ಯ. ಯಾಕಂದ್ರೆ ಭಾರತದ ಸಂಸ್ಕೃತಿ ಒಂದಲ್ಲ, ಜಾತಿ ಜಾತಿಗೂ, ಧರ್ಮ ಧರ್ಮಕ್ಕೂ, ಬುಡಕಟ್ಟು ಜನಾಂಗ ಮತ್ತು ಬೇರೆಬೇರೆ ವರ್ಗಗಳಲ್ಲಿ ಬೇರೆಬೇರೆಯಾಗಿಯೇ ಇದೆ. ಆದರೂ ಸೀದಾ ಅಲ್ಲದ ನನ್ನ ಥರದವರ ಲೈಂಗಿಕ ಕಾಮನೆಯಾಗಲೀ, ಜೆಂಡರ್‌ ಆಯ್ಕೆಯಾಗಲೀ ಯಾವುದೂ ಸುಲಭವಾಗಿ ಒಪ್ಪಿಗೆಯಾಗುತ್ತಿರಲಿಲ್ಲ. ಅದಕ್ಕೆ ಕಾರಣ ಬ್ರಿಟೀಷರು ಎನ್ನುವುದನ್ನೂ ನಾನು ಒಪ್ಪುವುದಿಲ್ಲ. ಹಿಂದೂ ಧರ್ಮದಲ್ಲಿ ಒಪ್ಪಿಗೆ ಇತ್ತು ಅದಕ್ಕೆ ದೇವಸ್ಥಾನಗಳಲ್ಲಿ ಇಂತಹ ಶಿಲ್ಪಗಳು ಇವೆ ಅಂತಾರೆ ಕೆಲವರು. ಆದ್ರೆ ಮನುಸ್ಮೃತಿಗಿಂತ ಬೇಕೆ? ಹೆಣ್ಣಿಗೆ ತನ್ನ ಲೈಂಗಿಕ ಕಾಮನೆ ಮತ್ತೊಂದು ಹೆಣ್ಣಿನ ಮೇಲೆ ಇದ್ದರೆ ಅಂಥಾ ಹೆಣ್ಣಿಗೆ ಶಿಕ್ಷೆ ಎಂದು ಹೇಳುತ್ತದೆ. ಇದು ಒಪ್ಪಿಗೆಯಾ? ಅಲ್ಲ ನಾನು ಹೇಳಲು ಬಂದಿದ್ದು ಏನಂದ್ರೆ ಹೆಣ್ಣು ಗಂಡಿನ ನಡುವೆ ಇರುವ ಲೈಂಗಿಕ ಕಾಮನೆಯನ್ನು ಸೀದಾ, ಸಹಜ, ಪ್ರಕೃತಿ ಪುರುಷ, ಅಂತೆಲ್ಲಾ ಹೇಳ್ತಾರೆ. ಫೈನ್‌, ನಾವು ಸೀದಾ ಇಲ್ಲ. ನಾನು ನನ್ನಂಥವರು ಕ್ವಿಯರ್‌ ಅಂತ ಹೇಳ್ಕೊಳಕ್ಕೆ ನನಗೆ ಯಾವತ್ತೂ ನಾಚಿಕೆ ಇರಲಿಲ್ಲ.

ಸಲಿಂಗ ಕಾಮ ಅಪರಾಧವಲ್ಲ ಅಂತ ಸುಪ್ರೀಮ್‌ ಕೋರ್ಟ್‌ 2018ರಲ್ಲಿ ತೀರ್ಪು ಕೊಡಕ್ಕೆ ಮುಂಚೆನೂ ನಾವೆಲ್ಲಾ ಬದುಕಿದ್ವಿ ಮತ್ತೆ ನಾವು ಅದಕ್ಕಾಗಿ ಹೋರಾಡಿದ್ವಿ. ಆದ್ರೆ ನಾನು ಹೇಳಕ್ಕೆ ಹೊರಟಿದ್ದು ಏನಂದ್ರೆ, ವೆಸ್ಟರ್ನ್​ ದೇಶಗಳಲ್ಲಿ ನಾನು ಹೀಗೆ ಅಂತ ಕುಟುಂಬದವರಿಗೆ, ಫ್ರೆಂಡ್ಸ್‌ಗೆ, ಎಲ್ಲರಿಗೂ ಹೇಳಿದರೆ ನಮ್ಮನ್ನ ನೋಡ್ಕೊಂಡು ಬೇರೆಯವರೂ ಧೈರ್ಯ ತಗೊಂಡು ಹೊರಬರ್ತಾರೆ ಅಂತ ಒಂದು ನಂಬಿಕೆ ಮತ್ತೆ ಅದನ್ನು ಆಚರಣೆ ಥರ ಮಾಡಿಕೊಂಡಿದ್ದೂ ಉಂಟು. ಒಬ್ಬರು ತಾವು ಸೀದಾ ಇಲ್ಲ ಅಂತ ಹೇಳೋದ್ರಿಂದ ಇನ್ನೊಬ್ಬರಿಗೆ ಧೈರ್ಯ ಬರುತ್ತೆ ಅಂತ ಇಲ್ಲ. ನಮ್ಮ ಸಮಾಜದಲ್ಲಿ ಮಾಮೂಲಲ್ಲದೇ ನಮಗೆ ಬೇರೆ ಥರ ಏನಾದರೂ ಅನಿಸಿದರೆ ಅದನ್ನು ಫೀಲ್‌ ಮಾಡಕ್ಕೆ ಅವಕಾಶನೇ ಇಲ್ಲ. ಮಾಮೂಲಲ್ಲದ ಎಲ್ಲಾ ಪಾಪ, ಅನೈತಿಕ, ಅಸಹಜ, ಇನ್ನೂ ಏನೇನು ಸೇರಿಸಬೇಕೋ ಎಲ್ಲದನ್ನೂ ಸೇರಿಸುತ್ತೆ.

ಈ ಮಾಮೂಲಿಗಿಂತ ಬೇರೆ ರೀತಿ ಇರೋವ್ರು ತಮಗೆ ಆದಷ್ಟು ಮಾಮೂಲಿನಂತೇ ಇರಲು ಮೊದಲು ಟ್ರೈ ಮಾಡ್ತಾರೆ. ಯಾವಾಗ ಉಸಿರು ಕಟ್ಟಕ್ಕೆ ಶುರು ಆಗುತ್ತೋ ಆಗಲೇ “ನಾನು ಹೀಗೇ” ಅಂತ ಹೇಳಿಕೊಳ್ಳಕ್ಕೆ ಶುರು ಮಾಡ್ತಾರೆ. ಹೇಳಿದ್ರೆ ಏನಾಗುತ್ತೆ? ನಂ ಕಂಕು ಥರ ಇರೋವ್ರು ಏನಕ್ಕೂ ಕೇರ್‌ ಮಾಡ್ದೆ ಹೇಳ್ತಾರೆ, “ಸರಿ, ಏನಿಗ?”, ಹಾಗಾಗಿ ನಾನ್‌ ಬಚಾವ್.‌ ಆದ್ರೆ ಬೇರೆ ಕುಟುಂಬಗಳಲ್ಲಿ ಹಾಗಿಲ್ಲ. ಹುಟ್ಟಿನಲ್ಲಿ ಹೆಣ್ಣು ಎಂದು ಗುರುತಿಸಲ್ಪಡುವ ಜನರಿಗೆ ತಮ್ಮ ಲೈಂಗಿಕ ಕಾಮನೆಯಾಗಲಿ, ತಮ್ಮ ಜೆಂಡರ್‌ ವೈವಿಧ್ಯತೆಯನ್ನಾಗಲಿ ಮುಕ್ತವಾಗಿ ಹೇಳಿಕೊಳ್ಳೋಕ್ಕೆ ಸ್ಪೇಸೇ ಇಲ್ಲ. ಹೀಗಿರಲೂ ಸಾಧ್ಯಾನಾ ಅಂತ ಅವರ ಮೇಲೇ ಡೌಟ್‌ ಮಾಡ್ಕೊಳ್ಳೋಷ್ಟು ತಮ್ಮದಲ್ಲದ ಜೆಂಡರ್‌ ಜೊತೆ ಲೈಂಗಿಕ ಕಾಮನೆಯನ್ನ ಮಾಮೂಲು ಮಾಡಿಬಿಟ್ಟಿದ್ದಾರೆ. ಅಲ್ಲಿಂದ ಶುರು– ಹಿಂಸೆ, ಮಾನಸಿಕ ಹಿಂಸೆ, ಲೈಂಗಿಕ ಹಿಂಸೆ, ಬಲವಂತದ ಮದುವೆ, ಕೆಲವರು ತುಂಬಾ ಬುದ್ಧಿ ಉಪಯೋಗಿಸಿ ಚಿಕಿತ್ಸೆ ಮಾಡಲು ಟ್ರೈ ಮಾಡ್ತಾರೆ ಒಂದು ಇನ್ನೊಂದು ಲೆವೆಲ್‌ ಹಿಂಸೆ. ಯೆಡಗೈನಲ್ಲಿ ಬರೆಯೋವ್ರಿಗೆ ಬಲವಂತ ಮಾಡಿ ಬಲಗೈ ಯೂಸ್‌ ಮಾಡಲು ಹೇಳಿದ್ರೆ ಹೇಗಿರುತ್ತೋ ಅದಕ್ಕಿಂತ ಅಧ್ವಾನವಾಗೋಗುತ್ತೆ ಜೀವನ.

ಸೌಜನ್ಯ : ಅಂತರ್ಜಾಲ

ನಿಜವಾಗಿ ನೋಡೋದಾದ್ರೆ ಇಲ್ಲಿ ಹುಟ್ಟಿನಲ್ಲಿ ಹೆಣ್ಣೆಂದು ಗುರುತಿಸಲ್ಪಡುವವರಿಗಿಂತ ಅವರನ್ನು ಮದುವೆಯಿಂದ ಸರೀ ಮಾಡಬಹುದು ಅಂತ ಯೋಚನೆ ಮಾಡೋ ಆ ಗಂಡಸರು ಯೋಚಿಸಬೇಕು, ಅವರು ಪ್ರತೀನಿತ್ಯ ರೇಪ್‌ ಮಾಡ್ತಿರ್ತಾರೆ. ಇನ್ನೊಂದ್‌ ಕಡೆ ಗಂಡು ಎಂದು ಹುಟ್ಟಿನಲ್ಲಿ ಗುರುತಿಸಲ್ಪಡುವ ಜನರ ಲೈಂಗಿಕ ಕಾಮನೆ ಮತ್ತು ಜೆಂಡರ್‌ ವೈವಿಧ್ಯತೆ ಮಾಮೂಲಿನಂತಿಲ್ಲದಿರುವವರು ಅನುಭವಿಸುವುದು ಇನ್ನೊಂಥರ ಹಿಂಸೆ. ಮನೆಯಿಂದ ಆಚೆ ಹಾಕ್ತಾರೆ, ಇಲ್ಲ ಬಲವಂತದ ಮದುವೆಯಲ್ಲಿ ತಮ್ಮ ಪಾರ್ಟನರ್​ಗೆ ಕೂಡ ಲೈಂಗಿಕ ಜೀವನ ತೃಪ್ತಿ ಕೊಡದೆ ಅದಿನ್ನೊಂದು ಹಿಂಸೆ ಆಗುತ್ತದೆ.

ಸೋ, ಈ ಮಾಮೂಲನ್ನು ಕಾಪಾಡಲು ನಮ್ಮಂಥವರು ಆಚೆ ಹೇಳಬೇಕಾಗುತ್ತೆ “ನಾವು ಸೀದಾ ಇಲ್ಲ”. ಕುಟುಂಬದವರು, ಸ್ನೇಹಿತರು ಮತ್ತು ಜಗತ್ತಿಗೆ ಹೇಳಿದರೂ ಈ ಮಾಮೂಲಿನಿಂದಾಗಿ ಅಂದ್ರೆ ಗಂಡು ಹೆಣ್ಣು ಮಾತ್ರ ಲೈಂಗಿಕ ಕಾಮನೆ ಇರಬೇಕು, ಹುಟ್ಟಿನಲ್ಲಿ ಹೆಣ್ಣೆಂದೋ, ಗಂಡೆಂದೋ ಗುರುತಿಸಲ್ಪಡುವರು ತಮ್ಮ ಜೀವನ ಪೂರ್ತಿ ಹಾಗೆ ಬದುಕಬೇಕು ಎಂದೇ ಹೇಳ್ತಾರೆ ಹೊರತು “ಇಲ್ಲ ನಿಂಗೆ ಹೇಗೆ ಅನಿಸುತ್ತದೋ ಹಾಗೆ ಇರು” ಅನ್ನೋವ್ರು ತೀರಾ ಕಡಿಮೆ. ಅಂದ್ರೆ ಆಲ್ಮೋಸ್ಟ್‌ ಇಲ್ವೇ ಇಲ್ಲ. ಇನ್ನು ಪೊಲೀಸ್ ಸ್ಟೇಷನ್‌ದು ಕಥೆನೇ ಬೇರೆ. ಒಂದ್‌ ಸರ್ತಿ ಬಯಂಕರ ಕಾಮಿಡಿ ಆಯ್ತು. ಹೀಗೇ ಒಬ್ಳು ಹುಡುಗಿ ತನ್ನ ಪ್ರೇಮಿ (ಮತ್ತೊಬ್ಬಳು ಹುಡುಗಿಯ) ಜೊತೆ ಬದುಕಲು ಡಿಸೈಡ್‌ ಮಾಡಿದಾಗ, ಅವಳ ಮನೆಯವರು ಪೊಲೀಸ್ ಸ್ಟೇಷನ್​ಗೆ ಕರ್ಕೊಂಡು ಹೋಗಿ, ಅವಳು ಮೈನರ್‌ (ಅವಳು ಮೈನರ ಆಗಿರಲಿಲ್ಲ), ಅವಳಿಗೆ ಚಿಕಿತ್ಸೆ ಕೊಡಿಸಬೇಕು ಅಂತ ಹಾರಾಡ್ತಾ ಇದ್ರು. ಆಗ ಆ ಪೊಲೀಸ್ ಸ್ಟೇಷನ್ನಲ್ಲಿ ಒಬ್ಬ ಎಸ್‌ಐ ಸುನಿಲ್‌ ಹತ್ರ, “ನಾನು ಹತ್‌ ನಿಮಿಷ ಇಂಥವ್ರ ಹತ್ರ ಮಾತಾಡಿ ಅವರನ್ನ ಸರಿ ಮಾಡ್ಬಿಡ್ತೀನಿ” ಅಂದ್ರು. ಆಗ ಸುನಿಲ್‌ ಹೇಳಿದ, “ಸರಿ ಸರ್‌, ನಾನು ನಿಮ್‌ ಹತ್ರ 20 ನಿಮಿಷ ಮಾತಾಡ್ತೀನಿ, ನೀವು ಸಲಿಂಗ ಕಾಮಿಯೋ ಇಲ್ಲ ಹೆಂಗಸಾಗಿ ಬಿಡ್ತೀರಾ?’’ ಆಗ ಆ ಪೊಲೀಸ್ ನಮ್ಮನ್ನೆಲ್ಲಾ ಗುರ್‌ ಅಂತ ನೋಡಿ ಸ್ಟೇಷನ್ನಲ್ಲಿ ಕೂಗಾಡಿದ, “ಇಂಥವರನ್ನೆಲ್ಲಾ ಯಾಕೆ ಸ್ಟೇಷನ್​ಗೆ ಬಿಟ್ಕೋತೀರ?’’ ಅಂತ. ಮತ್ತೊಬ್ಬಳು ನನ್‌ ಫ್ರೆಂಡ್‌ ತನ್ನ ಪಾರ್ಟನರ್‌ ಜೊತೆ ಒಂದು ಐಸ್ಕ್ರೀಮ್‌ ಅಂಗಡಿಯಲ್ಲಿ ತಿಂತಾ ನಿಂತಿರಬೇಕಾದ್ರೆ ಅವಳನ್ನ ಅವಳ ಪಾರ್ಟನರ್‌ನ ಪೊಲೀಸ್ ಅರೆಸ್ಟ್‌ ಮಾಡಿ ಕರ್ಕೊಂಡ್‌ ಹೋಗಿ ಅವಳ ಬಟ್ಟೆ ಎಲ್ಲಾ ಹರ್ದಹಾಕಿ ಉಲ್ಟ ಲಟಕಾಯ್ಸಿ ಅವಳ ದೇಹ ಗಂಡಿನದೋ ಹೆಣ್ಣಿನದೋ ಎಂದು ಪೊಲೀಸ್ ಸ್ಟೇಷನ್ನಲ್ಲಿ ತಪಾಸಣೆ ಮಾಡಿದರು. ಇದಕ್ಕಿಂತ ಬೇಕಾ ಮಾನವ ಹಕ್ಕುಗಳ ಉಲ್ಲಂಘನೆ?

ಅಲ್ಟಿಮೇಟ್ಲಿ, ಈ ಮಾಮೂಲಿನ ಮಹತ್ವಕ್ಕೆ ನಮಂಥವರು ಬಗ್ಗಬೇಕಾ. ಈ ಮಾಮೂಲನ್ನು ಸೃಷ್ಟಿಸಿದವರು ಯಾರು, ಈ ಮಾಮೂಲನ್ನು ನೈಸರ್ಗಿಕ, ಸಹಜ, ಅದೇ ಸಮಾಜದ ಹಿತವನ್ನು ಕಾಪಾಡುವುದು, ಇಲ್ಲಾಂದ್ರೆ ಮಕ್ಳೇ ಇಲ್ಲ ಅಂತ ಆದ್ರೆ ಮುಂದೆ ಮಾನವ ಜಂತುಗಳು ಹೇಗೆ ಮುಂದುವರೆಯಬೇಕು… ಹೀಗೆಲ್ಲಾ ಕೇಳುತ್ತಾರೆ ಜನ. ಈ ದೇಶದಲ್ಲಿ ‘ಹಿಂದೂ ಖತ್ರೆ ಮೇ ಹೈ’ ಎಂದು ಹೇಳುವ ಹಾಗೆ ಪರಲಿಂಗ ಕಾಮ ಅಂದ್ರೆ ಈ ಸೀದಾ ಇರುವವರು ಅಷ್ಟು ಖತ್ರೆಯಲ್ಲಿ ಇದ್ದಾರ? ನಮ್ಮನ್ನು ನಾವು ಎಷ್ಟು ಬದಲಿಸಲು ಸಾಧ್ಯವಿಲ್ಲ ಅಂತ ಹೇಳ್ತೀವೋ ಹಾಗೆ ಈ ಸೀದಾ ಇರೋ ಜನಾನ ಸೊಟ್ಟಕ್ಕೆ ಮಾಡಕ್ಕೆ ಆಗಲ್ಲ. ಈ ಮಾಮೂಲು ಸೃಷ್ಟಿಸಿರುವುದು ಬೈನರಿ ಅಂದ್ರೆ ಎರಡು ಸಿಸ್ಟಂ. ಈ ಎರಡು ಸಿಸ್ಟಂ ಮಧ್ಯ ಇರುವ ಅನೇಕ ಶೇಡ್ಸ್‌ಗಳಿಗೆ ಯಾವ ಮೌಲ್ಯನೂ ಇಲ್ಲ ಯಾವ ಘನತೆಯೂ ಇಲ್ಲ. ಎಲ್ಲಾ ಈ ಎರಡು ಸಿಸ್ಟಂ ಅಂದ್ರೆ ಮುಸ್ಲಿಂ ಹಿಂದು, ದಲಿತರು ಬ್ರಾಮಣರು, ಮೇಲ್ಜಾತಿ – ಕೆಳಜಾತಿ, ನೈತಿಕ ಕೆಲಸ ಅನೈತಿಕ ಕೆಲಸ, ಗಂಡು ಹೆಣ್ಣು, ಈ ಲಿಸ್ಟ್‌ ತುಂಬಾ ಉದ್ದಕ್ಕೆ ಇದೆ. ಇದಿಷ್ಟೇ ಆಯ್ಕೆ. ಇದರ ಪದರಗಳಲ್ಲಿ ನಮಗೆ ಅಸ್ತಿತ್ವ ಇಲ್ಲ.

ಇಂತಹ ಸಿಸ್ಟಂ, ಇಂತಹ ಆಯ್ಕೆ ಇಲ್ಲದಿರುವ ಜೀವನ, ಇಂತಹ ಬೈನರಿ ಮತ್ತು ಇಂತಹ ಮಾಮೂಲು ನಮಗೆ ಬೇಕಾ? ಜೀವನದ ವಿಶಾಲತೆಗೆ ಅರ್ಥ ಇಲ್ವ?

*

ವಿ.ಸೂ : ಲೇಖಕರ ಆಶಯದಂತೆ ಅವರ ಭಾಷಾಭಿವ್ಯಕ್ತಿಯ ವಿಧಾನವನ್ನು ಅವರಿಚ್ಛೆಯಂತೆಯೇ ಪ್ರಕಟಿಸಲಾಗುವುದು. ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುವ ಈ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯ, ಆಶಯ, ಪ್ರತಿಕ್ರಿಯೆಗಳಿಗಾಗಿ ಸ್ವಾಗತ : tv9kannadadigital@gmail.com

ಹಿಂದಿನ ಅಲೆ : Transgender World : ಒಳಹೊರಗಣ ಅಂತರಗಳಲ್ಲಿ ಬೆಂದ ಜೀವಗಳ ಲೆಕ್ಕ ಶೂನ್ಯ

Published On - 4:35 pm, Tue, 9 November 21