New Book : ಅಚ್ಚಿಗೂ ಮೊದಲು ; ಹಜಾರೀಪ್ರಸಾದ ದ್ವಿವೇದಿಯವರ ‘ಅನಾಮದಾಸನ ಕಡತ’ವನ್ನು ಇಂದು ನಿಮಗೊಪ್ಪಿಸಲಿದೆ ‘ಬಹುವಚನ’

|

Updated on: Nov 10, 2021 | 9:50 AM

Literature : ಬ್ರಾಹ್ಮಣ ರೈಕ್ವ ಶೂದ್ರ ರಾಜಕುಮಾರಿಯನ್ನು ಮದುವೆಯಾಗುತ್ತಾನೆ, ಅವನು ತನ್ನ ಪ್ರಿಯೆ ರಾಜಕುಮಾರಿ ಜಾಬಾಲಾಳ ನೆನಪಿನಲ್ಲಿ ತನ್ನ ಬೆನ್ನು ಕೆರೆದುಕೊಳ್ಳುತಿರುತ್ತಾನೆ; ಒಮ್ಮೆ ವಿನೋದದಿಂದಾದರೆ, ಮತ್ತೊಮ್ಮೆ ಅರ್ಧಸಾಧನಾವಸ್ಥೆಯಲ್ಲಿ. ಇಂಥ ಪಾತ್ರದೊಂದಿಗೆ ಓದುಗ ವಿಚಿತ್ರವಾದ ತನ್ಮಯತೆಯನ್ನು ಅನುಭವಿಸುತ್ತಾನೆ. ಇಡೀ ಕಾದಂಬರಿಯಲ್ಲಿ ಒಂದು ಅಂತರ್ಗೀತೆಯಿರುವಂತೆ ಕಾಣುತ್ತದೆ, ರೈಕ್ವನ ಈ ಕಡಿತ, ಕೆರೆತ ಅದರ ಶ್ರುತಿ.

New Book : ಅಚ್ಚಿಗೂ ಮೊದಲು ; ಹಜಾರೀಪ್ರಸಾದ ದ್ವಿವೇದಿಯವರ ‘ಅನಾಮದಾಸನ ಕಡತ’ವನ್ನು ಇಂದು ನಿಮಗೊಪ್ಪಿಸಲಿದೆ ‘ಬಹುವಚನ’
ಹಜಾರೀಪ್ರಸಾದ ದ್ವಿವೇದಿ ಮತ್ತು ಮ.ಸು. ಕೃಷ್ಣಮೂರ್ತಿ
Follow us on

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಅನಾಮದಾಸನ ಕಡತ (ಕಾದಂಬರಿ)
ಮೂಲ : ಡಾ. ಹಜಾರೀಪ್ರಸಾದ ದ್ವಿವೇದಿ
ಕನ್ನಡಕ್ಕೆ : ಮ. ಸು. ಕೃಷ್ಣಮೂರ್ತಿ
ಪುಟ : 225
ಬೆಲೆ : ರೂ. 450
ಮುಖಪುಟ ವಿನ್ಯಾಸ : ಮಹಾಂತೇಶ
ಪ್ರಕಾಶನ : ಬಹುವಚನ ಪ್ರಕಾಶನ, ಬೆಂಗಳೂರು

ಆಧುನಿಕ ಹಿಂದೀ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರಾದ ಡಾ. ಹಜಾರೀಪ್ರಸಾದ ದ್ವಿವೇದಿಯವರು ಬಹುಮುಖೀ ಪ್ರತಿಭಾಸಂಪನ್ನರು. ಭಾರತೀಯ ಸಂಸ್ಕೃತಿಯ ಜೀವಂತ ಪ್ರತಿಮೆಯೆಂದು ಖ್ಯಾತರಾಗಿದ್ದ ಅವರು ಹಿಂದಿಯ ರಸವಾದೀ ವಿಮರ್ಶಕರಾಗಿ, ಕಾದಂಬರಿಕಾರರಾಗಿ, ಪ್ರಬಂಧಕಾರರಾಗಿ, ಗಂಭೀರ ಸಂಶೋಧಕರಾಗಿ, ಮಾನವತಾವಾದೀ ಇತಿಹಾಸಕಾರರಾಗಿ, ಎಲ್ಲಕ್ಕೂ ಮಿಗಿಲಾಗಿ ಸ್ವಾಧೀನ ಚಿಂತಕರಾಗಿ ಹಿಂದೀ ಸಾಹಿತ್ಯಕ್ಕೆ ಒಂದು ಹೊಸ ಆಯಾಮವನ್ನು ನೀಡಿದವರು. ಪ್ರಸ್ತುತ ಅನುವಾದಿತ ಕೃತಿಯು ಇಂದಿನಿಂದ ಲಭ್ಯವಾಗಲಿದ್ದು, ಕಾದಂಬರಿಯ ಮೊದಲ ಅಧ್ಯಾಯ ಇಲ್ಲಿದೆ.

*

ಹಜಾರೀಪ್ರಸಾದ ದ್ವಿವೇದಿಯವರು ಬರೆದ ನಾಲ್ಕು ಕಾದಂಬರಿಗಳಲ್ಲಿ ‘ಬಾಣ ಭಟ್ಟನ ಆತ್ಮಕಥೆ’ ಹರ್ಷಕಾಲದ ಭಾರತದ ರಸಚಿತ್ರಣವಾದರೆ, ‘ಚಾರು ಚಂದ್ರಲೇಖ’ ತಂತ್ರಯುಗವನ್ನು ಚಿತ್ರಿಸುತ್ತದೆ. ‘ಪುನರ್ನವಾ’ ಗುಪ್ತಸಾಮ್ರಾಜ್ಯ ಕಾಲದ ಕಾದಂಬರಿಯಾದರೆ ರೈಕ್ವ ಮುನಿಯ ಕಥೆ ‘ಅನಾಮದಾಸ ಕಾ ಪೋಥಾ’ ಉಪನಿಷತ್ಕಾಲೀನ ಭಾರತದ ರತ್ನದರ್ಪಣ. ಆ ಕಾಲದ ಹಳ್ಳಿಗಳು, ಅರಣ್ಯಗಳು ಮತ್ತು ಆಶ್ರಮಗಳ ನಡುವೆ ವೈದಿಕ ಕರ್ಮಕಾಂಡಗಳು ಹಾಗೂ ಸ್ವತಂತ್ರ ವಿಚಾರಕರ ದ್ವಂದ್ವ ಹಾಗೂ ಮೇಳವನ್ನು ಇನ್ನಿಲ್ಲದಂತೆ ಇಲ್ಲಿ ಚಿತ್ರಿಸಲಾಗಿದೆ. ಈ ಕಾದಂಬರಿಯಲ್ಲಿ ಇತರ ಕಾದಂಬರಿಗಳಂತೆ ದ್ವಿವೇದಿಯವರು ಮಿಥಕಗಳನ್ನು ಆಶ್ರಯಿಸಿದ್ದಾರೆ. ಬಾಣ ಭಟ್ಟನ ಆತ್ಮಕಥೆಯಿಂದ ಹಿಡಿದು ರೈಕ್ವ ಆಖ್ಯಾನದವರೆಗೆ, ವೇದಶಾಸ್ತ್ರಗಳಿಂದ ಹಿಡಿದು ಮಿಥಕಗಳ ವ್ಯಾಖ್ಯೆಯವರೆಗೆ ಎಲ್ಲದರಲ್ಲಿಯೂ ಪರಮ ಹಾಗೂ ಚರಮವನ್ನು ಪಡೆಯುವ ಹಂಬಲವಿದೆ. ಅದಕ್ಕಾಗಿಯೇ ಕಥೆಯ ಹಾಸು ಹೊಕ್ಕು.

ಬ್ರಾಹ್ಮಣ ರೈಕ್ವ ಶೂದ್ರ ರಾಜಕುಮಾರಿಯನ್ನು ಮದುವೆಯಾಗುತ್ತಾನೆ, ಅವನು ತನ್ನ ಪ್ರಿಯೆ ರಾಜಕುಮಾರಿ ಜಾಬಾಲಾಳ ನೆನಪಿನಲ್ಲಿ ತನ್ನ ಬೆನ್ನು ಕೆರೆದುಕೊಳ್ಳುತಿರುತ್ತಾನೆ; ಒಮ್ಮೆ ವಿನೋದದಿಂದಾದರೆ, ಮತ್ತೊಮ್ಮೆ ಅರ್ಧಸಾಧನಾವಸ್ಥೆಯಲ್ಲಿ. ಇಂಥ ಪಾತ್ರದೊಂದಿಗೆ ಓದುಗ ವಿಚಿತ್ರವಾದ ತನ್ಮಯತೆಯನ್ನು ಅನುಭವಿಸುತ್ತಾನೆ. ಇಡೀ ಕಾದಂಬರಿಯಲ್ಲಿ ಒಂದು ಅಂತರ್ಗೀತೆಯಿರುವಂತೆ ಕಾಣುತ್ತದೆ, ರೈಕ್ವನ ಈ ಕಡಿತ, ಕೆರೆತ ಅದರ ಶ್ರುತಿ. ಉಪನಿಷತ್ಕಾಲೀನ ಜೀವನದ ಈ ಸರಳ ಸುಂದರ ಚಿತ್ರಣದಲ್ಲಿ ಧರ್ಮವಿದೆ, ದರ್ಶನವಿದೆ, ಕಲೆಯಿದೆ. ಆದರೆ ಎಲ್ಲೂ ಅವು ಹೊರೆಯಾಗಿಲ್ಲ. ಹಿಂದೀ ಸಾಹಿತ್ಯದಲ್ಲಿ ಈ ಮೂವತ್ತು ವರ್ಷಗಳಲ್ಲಿ ಬಂದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದೆಂದು ‘ಅನಾಮದಾಸನ ಕಡತ’ ಪರಿಗಣಿತವಾಗಿದೆ. ಈ ಕಾದಂಬರಿಯನ್ನು ಕನ್ನಡಕ್ಕೆ ಅದ್ಭುತವಾಗಿ ಅನುವಾದಿಸಿದವರು ಮ. ಸು. ಕೃಷ್ಣಮೂರ್ತಿಯವರು.
ಬಹುವಚನ 

*

ಕುಣಿದೆ ನಾನೀಗ ಬಹಳ ಗೋಪಾಲ!

ಕೆಲ ವರ್ಷಗಳ ಹಿಂದೆ ಅಪರಿಚಿತ ಮಿತ್ರರು ಬಂದಿದ್ದರು. ಅವರು ಏನನ್ನೋ ಬರೆಯುವ ಹಂಚಿಕೆ ಹಾಕಿಕೊಂಡಿದ್ದರು. ನನ್ನಲ್ಲಿ ಕೊಂಚ ಪರಾಮರ್ಶೆ ಮಾಡಬೇಕೆಂದಿದ್ದರು. ಕೊಂಚ ಹೊತ್ತಿನ ಮಾತಿನಲ್ಲೇ ನನಗೆ ಗೊತ್ತಾಗಿಹೋಯಿತು, ಅವರು ಪರಾಮರ್ಶೆಗಿಂತ ನನ್ನ ಒಪ್ಪಿಗೆಗಾಗಿ ಬಂದಿದ್ದಾರೆಂದು. ಅವರು ಹೇಳಿದ್ದರು, ಬ್ರಹ್ಮ ಮನುಷ್ಯನಿಗೆ ಮಾತ್ರ ನೂರು ವರ್ಷ ಆಯುಷ್ಯವನ್ನು ಕೊಟ್ಟಿದ್ದಾನೆ, ಕೆಲವರು ಪೂರ್ವಜನ್ಮದ ಪಾಪದ ಫಲವಾಗಿ ಮುಂಚೆಯೇ ಕಣ್ಣು ಮುಚ್ಚಿಕೊಳ್ಳುತ್ತಾರೆ, ಮತ್ತೆ ಕೆಲವರು ಈ ಜನ್ಮದ ಪುಣ್ಯದಿಂದಾಗಿ ಬಹಳ ಕಾಲ ಬದುಕುತ್ತಾರೆ, 66-67 ವರ್ಷಗಳವರೆಗೆ ಬದುಕುವ ಜನರ ಪೂರ್ವಜನ್ಮದ ಪಾಪ ಅಷ್ಟೊಂದು ಪ್ರಚಂಡವಾಗಿದ್ದಿರಲಾರದು. ಶಾಸ್ತ್ರದ ಪ್ರಕಾರ ಅವರು ಮಧ್ಯಮ ಆಯುಷ್ಯವನ್ನು ಭೋಗಿಸಿ ದೀರ್ಘಾಯುಷ್ಯವನ್ನು ಪ್ರವೇಶಿಸುತ್ತಾರೆ. ಆ ದಿನ ನನ್ನ ಮಿತ್ರರು ತಾವು ದೀರ್ಘಾಯುಷ್ಯವನ್ನು ಪ್ರವೇಶಿಸಿದ್ದಾಯಿತೆಂದೋ ಇಲ್ಲವೆ ಪ್ರವೇಶಿಸಲು ಅಣಿ ಮಾಡಿಕೊಳ್ಳುತ್ತಿದ್ದಾರೆಂದೋ ಹೇಳಿದರು. ಕರಾರುವಾಕ್ಕಾಗಿ ಏಕೆ ಹೇಳುವುದಿಲ್ಲ ಎಂದು ಕೇಳಿದಾಗ ಅವರು ಹತ್ತು ದಿನಗಳ ತರುವಾಯವೇ ಹಾಗೆ ಹೇಳುವುದು ಸಾಧ್ಯ ಎಂದರು.

ಕಾರಣವೆಂದರೆ ಅವರು ಚಾಂದ್ರಮಾನದ ಪ್ರಕಾರ ದೀರ್ಘಾಯುಷ್ಯದ ಕಕ್ಷೆಯನ್ನು ಪ್ರವೇಶಿಸಿದ್ದಾರಂತೆ, ಸೌರಮಾನದ ಪ್ರಕಾರ ಇನ್ನೂ ಹತ್ತು ದಿನ ಉಳಿಕೆ ಇದೆ. ಅವರು ಗಂಭೀರ ಮುಖಮುದ್ರೆಯಿಂದ ಹೇಳಿದ್ದರು – ಜವರಾಯನ ಕಾರ್ಯಾಲಯದಲ್ಲಿ ಚಾಂದ್ರಮಾನ ನಡೆಯುತ್ತದಂತೆ, ಆದರೆ ಬ್ರಹ್ಮನ ಕಚೇರಿಯಲ್ಲಿ ಸೌರಮಾನದಂತೆ ಕೆಲಸ ನಡೆಯುತ್ತದೆ. ಜವರಾಯ ಪಿತೃಯಾನ ಪರಂಪರೆಯನ್ನು ಅನುಸರಿಸುತ್ತಾನೆ, ಬ್ರಹ್ಮ ದೇವಯಾನ ಪರಂಪರೆಯನ್ನು. ಕೆಲವೊಮ್ಮೆ ಎರಡೂ ಕಚೇರಿಗಳ ಗಣನೆಗಳಲ್ಲಿ ಘರ್ಷಣೆಯಾಗುವುದುಂಟು, ಕೊನೆಯ ತೀರ್ಮಾನ ಬ್ರಹ್ಮನ ಇಂಗಿತದಂತೆ. ಆದರೆ ಈ ಎರಡರ ನಡುವಣ ಅಂತರದಲ್ಲಿ ಸಾಯುವವರ ಕೋಟಲೆ ಹೇಳತೀರದು. ಅಂತಕನ ದೂತರಿಗೆ ಅವರನ್ನು ಎಳೆದುಕೊಂಡು ಹೋಗುವ ತವಕ. ಆದರೆ ಬ್ರಹ್ಮನ ಅಪ್ಪಣೆ ದೊರೆಯದೇ ಇರುವುದರಿಂದ ಮರಣಶಯ್ಯೆಯಲ್ಲಿ ಮಲಗಿರುವ ರೋಗಿಯ ಪ್ರಾಣ ಹೋಗಲೊಲ್ಲದು. ಈ ಎಳೆದಾಟದಲ್ಲಿ ಆ ಬಡಪಾಯಿಯ ಪಾಡು ಬೇಡ! ಈ ಕಾರಣದಿಂದ ನನ್ನ ಗೆಳೆಯರು ಸಂದಿಗ್ಧ ಭಾಷೆಯಲ್ಲಿ ಮಾತನಾಡುತ್ತಿದ್ದರು. ಆದರೆ ಹತ್ತು ದಿನಗಳ ಅಂತರ ಅಂಥ ವಿಶೇಷವೇನೂ ಅಲ್ಲ. ಮುಂದಿನ ಹತ್ತು ದಿನಗಳೂ ನಿರ್ವಿಘ್ನವಾಗಿ ಕಳೆದಾವು ಎಂಬ ನಂಬಿಕೆ ಅವರಿಗಿತ್ತು. ಏಕೆಂದರೆ ಅವರ ಪೂರ್ವ ಪಾಪಗಳ ಕ್ಷೀಣತೆಯಂತೂ ಸಿದ್ಧವಾಗಿ ಹೋಗಿದೆಯಲ್ಲ. ಪ್ರತಿಯೊಬ್ಬ ಆಸ್ತಿಕ ಹಿಂದೂವಿನಂತೆ ಅವರೂ ಕೂಡ ಲೆಕ್ಕಾಚಾರದವರಾಗಿದ್ದರೆಂಬುದು ಬೇರೆ ವಿಷಯ. ತಮ್ಮ ಮಾತನ್ನು ಮುಗಿಸುತ್ತ ಅವರು ಕೈ ತಿರುಗಿಸಿ, ಮುಖ ಸಿಂಡರಿಸಿಕೊಂಡು ಇಷ್ಟಂತೂ ಹೇಳಿದ್ದರು, ‘ಆದರೆ ಯಾರು ಬಲ್ಲರು? ಕ್ಷಣಮೂರ್ಧ್ವಂ ನ ಜಾನಾಮಿ ವಿಧಾತಾ ಕಿಂ ಕರಿಷ್ಯತಿ!’

ಈ ಅಪರಿಚಿತ ಮಿತ್ರನ ಮಾತು ನನಗೆ ಆಕರ್ಷಕವಾಗಿ ಕಾಣಿಸಿತು. ನನಗಂತೂ ಖಾತರಿಯಾಗಿತ್ತು ಅಥವಾ ನಾನು ಮನದಲ್ಲೇ ಹಾರೈಸಿದೆ, ಅವರು ದೀರ್ಘಾಯುಷ್ಯವನ್ನು ಪ್ರವೇಶಿಸುವುದೇ ಅಲ್ಲ, ಅದನ್ನು ಪೂರ್ಣವಾಗಿ ಭೋಗಿಸಲಿ ಎಂದು.

ಅವರು ನಿಜವಾಗಿಯೂ ದೀರ್ಘಾಯುಷ್ಯದ ಕಕ್ಷೆಯನ್ನು ಮುಟ್ಟಿದ್ದಾರೆನ್ನುವುದಕ್ಕೆ ಪ್ರಮಾಣ ದೊರೆತಿದೆ.

ಇದು ಅವರು ಏನನ್ನೋ ಬರೆಯಲು ಸಂಕಲ್ಪ ಮಾಡಿ, ಅದನ್ನು ನನಗೆ ಅರ್ಪಿಸಲು ಅನುಮತಿ ಬೇಡಿ ಹೋದ ದಿನದ ಸಂಗತಿ. ಈಗ ಅವರು ಸೌರಮಾನದ ಪ್ರಕಾರ ಕೂಡ ದೀರ್ಘಾಯುಷ್ಯವನ್ನು ಹೊಕ್ಕಿದ್ದಾರೆ. ಅವರ ಕಡತವೂ ಬಂದಿದೆ.

ಬದುಕಿನಲ್ಲಿ ಕೆಲವೊಮ್ಮೆ ಯಾವುದನ್ನು ವಿಮರ್ಶಕರು ‘ನಾಟಕೀಯ’ವೆಂದು ಕರೆದು ಉಪೇಕ್ಷಿಸುತ್ತಾರೋ ಅಂಥ ಘಟನೆಗಳೂ ಘಟಿಸುತ್ತವೆ. ಎಂದರೆ ಬದುಕಿನಲ್ಲಿ ಅವು ಘಟಿಸುವುದಿಲ್ಲ, ಬಲಾತ್ಕಾರದಿಂದ ಘಟಿಸುವಂತೆ ಮಾಡಲಾಗುತ್ತವೆ. ಅರ್ಥಾತ್ ನಾಟಕಕಾರ ಕಥೆಯನ್ನು ತನಗೆ ಬೇಕಾದ ದಿಕ್ಕಿಗೆ ತಿರುಗಿಸಿಕೊಳ್ಳುವಂತೆ ಇಂಥ ಸಂಗತಿಗಳನ್ನೂ ಕಲ್ಪಿಸಿಕೊಳ್ಳಲಾಗುತ್ತದೆ. ವಿಮರ್ಶಕರಿಗೆ ಹೆದರದಿರುವುದು ಜಾಣತನವೇನೂ ಅಲ್ಲ. ಆದರೆ ಭಯದಿಂದ ನಿಜವನ್ನು ಹೇಳದಿರುವುದೂ ಒಳ್ಳೆಯದೇನಲ್ಲ. ಬದುಕಿನಲ್ಲಿ ಇಂಥ ಘಟನೆಗಳು ಖಂಡಿತ ಘಟಿಸುತ್ತವೆ. ಅವುಗಳು ನಾಟಕೀಯ ಎಂದು ಹೇಳುವುದರ ಅರ್ಥವೆಂದರೆ ಜೀವನವೂ ಒಂದು ನಾಟಕವೇ. ಪ್ರಾಮಾಣಿಕವಾದ ಸಂಗತಿ ಇಷ್ಟೆ – ಜೀವನ ನಿಜಕ್ಕೂ ಒಂದು ನಾಟಕವೇ, ನನ್ನ ಮಿತ್ರರೂ ಹೀಗೇ ನಂಬುತ್ತಾರೆ. ಇಲ್ಲಿ ತಾತ್ಪರ್ಯ ಇಷ್ಟೆ. ನನ್ನ ಮಿತ್ರರು ತಮ್ಮ ವಿಷಯ ಹೇಳುತ್ತಿದ್ದಾಗ ನಾನು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಿದ್ದೆ. ನಾನೂ 66 2/3 ವರ್ಷ ದಾಟುತ್ತಿದ್ದುದು ಒಂದು ವಿಚಿತ್ರ ಸಂಯೋಗವೇ ಸರಿ. ಆದರೆ ನನ್ನ ಗೆಳೆಯರು ನನಗೆ ಇನ್ನೂ ಹೆಚ್ಚು ವಯಸ್ಸಾಗಿದೆ ಎಂದುಕೊಂಡಿದ್ದರು. ಏಕೆಂದರೆ ಅವರು ಶ್ರದ್ಧೆಯಿಂದ ಹೇಳುತ್ತಿದ್ದರು – ‘ತಾವಂತೂ ಈಗ ದೇವತೆಗಳ ಗುಂಪಿಗೆ ಸೇರಿಬಿಟ್ಟಿದ್ದೀರಿ’ ಎಂದು. ಅವರ ಮಾತು ನನಗೆ ಅರ್ಥವಾಗುತ್ತಿತ್ತು. ಆದರೆ ನನಗೆ ಪ್ರತಿವಾದ ಮಾಡುವ ಅಗತ್ಯ ಕಂಡುಬರಲಿಲ್ಲ. ಮಹಾಭಾರತದಲ್ಲಿ ಎಲ್ಲೋ ಒಂದು ಕಡೆ ಬರೆದಿದೆ, ಎಪ್ಪತ್ತೇಳು ವರ್ಷ ಏಳು ತಿಂಗಳು ಮತ್ತು ಏಳು ದಿನ ಬದುಕುವಾತ ದೇವತೆಯಾಗಿಬಿಡುತ್ತಾನೆ – ಎಂದು. ಆದ್ದರಿಂದ ಅವರ ದೃಷ್ಟಿಯಲ್ಲಿ ನಾನು ಈ ಗಡಿ ದಾಟಿಬಿಟ್ಟಿದ್ದೆ. ಪ್ರತಿವಾದಿಸಿದ್ದರೆ ವ್ಯರ್ಥವಾಗಿ ಮಾತು ಮುಂದುವರೆಯುತ್ತಿತ್ತು. ಅಷ್ಟಾಗಿ ಅಂತರ ತಾನೆ ಎಷ್ಟು? ಕೇವಲ ಹನ್ನೊಂದು ವರ್ಷ ವ್ಯತ್ಯಾಸ ಅಷ್ಟೆ! ಹನ್ನೊಂದು ವರ್ಷಗಳಿಗಾಗಿ ಒಂದು ಗಂಟೆ ತಲೆ ಚಚ್ಚಿಕೊಳ್ಳುವುದು ಬುದ್ಧಿವಂತಿಕೆ ಎಂದೆನಿಸಲಿಲ್ಲ. ಸರಿ, ಅವರು ಹೇಳುತ್ತಾ ಹೋದರು, ನಾನು ಕೇಳುತ್ತಾ ಹೋದೆ.

‘ಅನಾಮದಾಸ ಕಾ ಪೋಥಾ’

ನನ್ನ ಈ ಮಿತ್ರರಂಥ ಕಲ್ಪನಾಶೀಲ ವ್ಯಕ್ತಿಗಳು ತುಂಬ ವಿರಳ. ಅವರು ತಮ್ಮ ಕಲ್ಪನೆಗಳೇ ಪ್ರಾಮಾಣಿಕ ಇತಿಹಾಸವೆಂದು ನಂಬುತ್ತಿದ್ದರು, ಅದರಲ್ಲೇ ಮುಳುಗಿಬಿಡುತ್ತಿದ್ದರು. ಪ್ರತಿವಾದ ಇಲ್ಲವೆ ಅಡೆತಡೆಗಳಿಂದ ತುಂಬ ನೊಂದುಕೊಳ್ಳುತ್ತಿದ್ದರು, ಕಂಬನಿ ತುಂಬಿದ ಕಣ್ಣಿನಿಂದ ನೋಡತೊಡಗುತ್ತಿದ್ದರು. ಅದರ ಅರ್ಥ ‘ನೀವೂ ಹೀಗೆ ಹೇಳುವಿರಾ?’ – ಎಂದು. ಇಂಥ ಪ್ರಸಂಗಗಳಲ್ಲಿ ಅವರ ಪ್ರಾಮಾಣಿಕತೆಯನ್ನು ಶಂಕಿಸುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ಅವರಿಗೆ ತಿಳಿಯಹೇಳುವುದರಲ್ಲಿ ಸಾಕಷ್ಟು ಹೊತ್ತು ಕಳೆಯುತ್ತಿತ್ತು. ಉದ್ದೇಶ ಮಾತ್ರ ಅದೇ – ಇಂಥ ಸುಳ್ಳಿನಲ್ಲಿ ತಪ್ಪೇನೂ ಇಲ್ಲವಂತೆ. ಏಕೆಂದರೆ ಸುಳ್ಳು ಸುಳ್ಳೆ! ಇದರಿಂದ ತಪ್ಪಿಸಿಕೊಳ್ಳುವ ಶಿಷ್ಟಮಾರ್ಗವೆಂದರೆ ಮೌನ, ಹೇಳುವವನಿಗೆ ಕೇಳುವನ ಮನದಲ್ಲಿ ಏನು ಪ್ರತಿಕ್ರಿಯೆಯಾಗುತ್ತಿದೆ ಎಂಬುದರ ಸುಳಿವು ಕೊಡದ ಮೌನ. ಇದೂ ಕೂಡ ನಾಟಕದಂತೆಯೇ. ಇಂಥ ನಾಟಕ ನಾನು ಬಹಳ ಆಡಿದ್ದೇನೆ, ಆದ್ದರಿಂದ ನನಗೆ ಇದರಲ್ಲಿ ಅಂಥ ವಿಶೇಷ ಕೋಟಲೆಯಾಗಲಿಲ್ಲ.

ನನ್ನ ಮಿತ್ರರು ಹೇಳಿದ್ದರು. ಸೂರದಾಸರು ಈ ಘಟ್ಟವನ್ನು ಮುಟ್ಟಿದ್ದಾಗ ‘ಈಗ ನಾನು ಕುಣಿದೆ ಬಹಳ ಗೋಪಾಲ’ ಎಂಬ ಪ್ರಸಿದ್ಧ ಪದವನ್ನು ಬರೆದಿದ್ದರು. ಪ್ರಮಾಣ? ಪ್ರಮಾಣವೆಂದರೆ ಸರಿಯಾಗಿ ಇಂದೇ ಚಾಂದ್ರಮಾನದ ಪ್ರಕಾರ 66 2/3 ಮುಗಿಸಿದಾಗ ಅವರ ಮನಸ್ಸಿನಲ್ಲೂ ಇಂಥವೇ ಭಾವಗಳು ಮೂಡಿವೆ. ನನ್ನ ಮನಸ್ಸು ಗಾಬರಿಗೊಂಡಿತ್ತು, ಏಕೆಂದರೆ ನಾನೂ ಕೂಡ ಇಂದು ಬೆಳಿಗ್ಗೆಯಿಂದ ಈ ಪದವನ್ನು ಹೇಳುತ್ತಿದ್ದೆ. ಹಾಗಾದರೆ ಸೂರದಾಸರು 66 2/3 ವರ್ಷದವರಾಗಿದ್ದಾಗ ಅವರ ಮನಸ್ಸಿನಲ್ಲಿ ಇಂಥ ಪಶ್ಚಾತ್ತಾಪವಾಯಿತು ಎಂದು ಒಪ್ಪಿಕೊಳ್ಳೋಣವೇ? ಸೂರದಾಸರು ಬಹಳ ದೊಡ್ಡ ಸಂತರು, ಇದು ಅವರ ದೈನ್ಯೋಕ್ತಿಯೆಂದೇ ಹೇಳಬೇಕು. ಆದರೆ ನನ್ನ ಮನದಲ್ಲಿ ಮತ್ತು ನನ್ನೆದುರಿಗೆ ಕುಳಿತಿರುವ ಅಪರಿಚಿತ ಮಿತ್ರರ ಮನದಲ್ಲಿ ಈ ಭಾವ ಇಂದೇ ಏಕೆ ಮೂಡಿತು? ಇಬ್ಬರ ಮನದಲ್ಲಿ ಮೂಡಿದ್ದರೆ ಮೂರನೆಯ, ನಾಲ್ಕನೆಯವರ ಮನದಲ್ಲೂ ಮೂಡುತ್ತಿರಬಹುದು. ಅಂತೂ 66 2/3 ಮಹತ್ವಪೂರ್ಣವೆನ್ನಿಸುತ್ತದೆ.

ನನ್ನ ಮಿತ್ರರೇನೋ ಆಶ್ವಾಸನೆಗೊಂಡು ಹೊರಟುಹೋದರು. ಆದರೆ ನನ್ನ ಮನದಲ್ಲಿ ಒಂದು ವಿಚಿತ್ರವಾದ ತಳಮಳವನ್ನುಂಟುಮಾಡಿ ಹೋಗಿದ್ದರು.

(ಈ ಕಾದಂಬರಿಯ ಖರೀದಿಗೆ ಸಂಪರ್ಕಿಸಿ : 6362588659)

*

ಪರಿಚಯ : ಮ.ಸು.ಕೃಷ್ಣಮೂರ್ತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಮಂದಗೆರೆಯವರು. ಮೈಸೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗ ಮುಖ್ಯಸ್ಥರಾಗಿದ್ದರು. ಕನ್ನಡ, ಸಂಸ್ಕೃತ ಮತ್ತು ಹಿಂದಿ ಭಾಷೆಯಲ್ಲಿ ಬೋಧನೆ ಮಾಡಿದ ವೈಶಿಷ್ಟ್ಯ ಇವರದು. ಕೃತಿಗಳು: ಫಲ್ಗುಣಿ, ರಥಚಕ್ರ, ಕಸ್ತೂರಿ ಮೃಗ, ನಾದ ಸೇತು, ಹಡಗಿನ ಹಕ್ಕಿ, ಕುರಿ ಸಾಕಿದ ತೋಳ, ಪರಶುರಾಮನ ತಂಗಿಯರು, ಚತುರ್ಮುಖ, ರಥ ಚಕ್ರ, ಒಂಟಿ ಸಲಗ ಸೇರಿದಂತೆ 60ಕ್ಕೂ ಅಧಿಕ ಕಾದಂಬರಿಗಳನ್ನು ಮತ್ತು ಯುಗಾಂತ, ರತ್ನಕಂಕಣ, ರಂಗಸಪ್ತಕ, ನಾಟ್ಯ ಪಂಚಕ ಹೀಗೆ ಒಟ್ಟು 27 ನಾಟಕಗಳನ್ನು ರಚಿಸಿದರು.

ವ್ಯೋಮಕೇಶನ ವಚನಗಳು (ಆಧುನಿಕ ವಚನಗಳು), ಸಮುದ್ರ ಸಂಗಮ (ಕಾಲ್ಪನಿಕ ಸಂದರ್ಶನ), ಬಿತ್ತಭಿತ್ತಿಯ ಚಿತ್ರಗಳು, ಗೋಪುರದ ದೀಪ, ಚಿತ್ರಕೂಟ (ರೇಖಾಚಿತ್ರ ಸಂಗ್ರಹ), ಗಂಧ ಮಾಧವ, ಏಕಾಂತ ಸಂಗೀತ, ಹಾದಿ ಪುರಾಣ, ಚಂಕ್ರಮಣ (ಪ್ರಬಂಧ), ಸಿದ್ಧ ಸಾಹಿತ್ಯ, ಹಿಂದಿ ಸಾಹಿತ್ಯ, ಉತ್ತರದ ಸಂತ ಪರಂಪರೆ, ಸೂಫಿ ಪ್ರೇಮ ಕಾವ್ಯ, ಮುಸಲ್ಮಾನ ಭಾಗವತರು, ಬಸವರಾಜ ಮಾರ್ಗ (ಸಂಶೋಧನೆಗಳು), ಕೋಗಿಲೆಯ ಚಿಕ್ಕವ್ವ, ಚಂದಮಾಮನ ಅಳಿಯ, ಚೈತ್ರ ಪಲ್ಲವಿ, ಮೀರಾಬಾಯಿ, ಮೆಣಸಿನಕಾಯಿ ಸಾಹಸ, ಸಂತ ರೈದಾಸ, ಮಹರ್ಷಿ ಕರ್ವೆ, ಕಿತ್ತೂರ ರಾಣಿ ಚೆನ್ನಮ್ಮ, ಕಾಲುಗಳ ಜಗಳ, ಗೋರಾ ಬಾದಲ್‌, ಚೈತ್ರ ಪಲ್ಲವ, ವೈಶಾಖ ಪ್ರಭ(ಅಪ್ರಕಟಿತ), ಆಷಾಢ ಸೋನೆ(ಅಪ್ರಕಟಿತ), ಮಕ್ಕಳ ಅಕ್ಕ(ಅಪ್ರಕಟಿತ). ಬಾಣಭಟ್ಟನ ಆತ್ಮಕಥೆ, ಅನಾಮದಾಸನ ಕಡತ, ಮೇಘದೂತ ಒಂದು ಕಳೆಯ ಕಥೆ, ಮೃಗನಯನಿ, ಜೈ ಸೋಮನಾಥ, ಕಬೀರ ಪದಾವಲೀ, ಮೀರಾ ಪದಾವಲೀ, ರಾಮಚರಿತ ಮಾನಸ, ವಿನಯ ಪತ್ರಿಕಾ, ಮೇಘದೂತ, ಕೋಮಲ ಗಂಗಾಧರ, ಬಿಹಾರೀ ಸಪ್ತಶತೀ, ಸೂರ್ಯನ ಏಳನೇ ಕುದುರೆ, ಚಿದಂಬರಾ ಸಂಚಯನ (ಹಿಂದಿಯಿಂದ ಕನ್ನಡಕ್ಕೆ ಅನುವಾದಿತ) ರಾಗಕಾನಡಾ, ಅಪರಾಜಿತ, ಜ್ಯೋತಿ, ಕಲಶ್, (ಹಿಂದಿ ಕಾದಂಬರಿಗಳು), ಅರಣ್ಯಕ, ಬೆಟ್ಟಕ್ಕೆ ಚಳಿಯಾದಡೆ, ಪುನರಾಗಮನ (ಕಥಾ ಸಂಕಲನ), ಸಂಪಾದನೆ : ನಳ ಚಂಪೂ ಸಂಗ್ರಹ. ಸಂವಾದ ಸಾಹಿತ್ಯ: ಸಮುದ್ರ ಸಂಗಮ.

ಇದನ್ನೂ ಓದಿ : New Publication : ಭಾರತದ ಬಹುಭಾಷಾ ಸಾಹಿತ್ಯಕನ್ನಡಿ ‘ಬಹುವಚನ’; ಕನ್ನಡಕ್ಕೊಂದು ಹೊಸ ಪ್ರಕಾಶನ

Published On - 9:41 am, Wed, 10 November 21