ಋತುವಿಲಾಸಿನಿ | Rutuvilaasini : ತನು, ಬೆಂಗಳೂರು ಎಸಿ ಅಳವಡಿಸಿಕೊಂಡಿದೆಯಂತೆ. ಅಣ್ಣ ಫೋನ್ ಮಾಡಿದಾಗ ಓಷನ್ ಡಿಪ್ರೆಶನ್ ಇಫೆಕ್ಟು ಇದು ಅಂತಿದ್ದ. ನಂಗೆ ಬರೀ ಡಿಪ್ರೆಶನ್ ಕೇಳ್ತು ಅಣಾ ಅಂದರೆ ಜೋರು ನಗ್ತಾನೆ ನೋಡು. ‘ಓಷನ್ ಡಿಪ್ರೆಷನ್’ ಈ ಪದ ಹೇಳುವಾಗೆಲ್ಲ ಒಂಥರ ಚೆನ್ನಾಗಿದೆ ಅನಿಸ್ತದೆ ಅಲ್ವಾ? ಮೇ ತಿಂಗಳ ಮೊದಲ ವಾರದಲ್ಲಿದ್ದ ನನ್ನೂರಿನ ಧಗೆ ಈ ಓಷನ್ ಡಿಪ್ರೆಷನ್ ಕಾರಣದಿಂದ ತಂಪುತಂಪಾಗಿ ಬದಲಾಗಿದೆ. ನಾಲ್ಕಾರು ದಿನದಿಂದ ಸೂರ್ಯನ ಹಾಜರಾತಿ ಕಾಣ್ತಿಲ್ಲ. ಸಣ್ಣಗೆ ಸೋಗರೆವ ಮಳೆ ಗಿಡಮರಗಳಿಗೆ ಖುಷಿ ನೀಡಿದರೂ ಮಣ್ಣಿಗೆ ಕೆಸರು ಕಚ್ಚಿಕೊಂಡಿದೆ. ಹೀಗೆ ಸೋಗರೆದ ಮಳೆ ಮೂರನೇ ದಿನಕ್ಕೆ ಸುರಿಯುವ ಉಮೇದಿಗೆ ಬಿದ್ದಂತೆ ಊರೂರ ಮೇಲೇ ಪೈಪೋಟಿ ಇಟ್ಟಂತೆ ಸುರಿಯಲು ಆರಂಭವಾಗಿದೆ. ಇದು ಅಕಾಲದಮಳೆ ಅಂತ ಬಯಲು ಸೀಮೆಯವರು ಅಲವತ್ತುಕೊಂಡರೆ ನಾವು ಕಾಫಿನಾಡಿನವರು ಸದ್ಯ ಅಂತ ಉಸಿರು ಬಿಡ್ತಿವಿ. ಸುರಿಯುತ್ತಿರುವ ಧಾರಕಾರ ಮಳೆಗೆ ಬೆಂಗಳೂರು ಬಲಿ ಕೇಳುತ್ತದೆ. ಎಷ್ಟೆಷ್ಟೋ ಬದುಕು ತೇಲಿಹೋಗುತ್ತವೆ. ಇದು ಅಕಾಲದ ಮಳೆ ಅಂತಿದ್ದಾರೆ ಒಂದಿಷ್ಟು ಮಂದಿ.
ನಂದಿನಿ ಹೆದ್ದುರ್ಗ, ಕವಿ, ಲೇಖಕಿ (Nandini Heddurga)
(ಋತು 8)
ಕಾಲಕ್ಕೆ ಅಕಾಲವೆಂಬುದೇ ಇಲ್ಲ ಅಂತನಿಸ್ತದೆ ತನು. ಬದಲಾಗುತ್ತಿರುವ ಈ ಕಾಲಮಾನದಲ್ಲಿ ಋತುವಿನನ್ವಯ ಎನ್ನುವ ಮಾತಿಗೆ ಅರ್ಥ ಕಳೆದುಹೋಗಿದೆ. ಋತುವಿಗನುಸಾರ ವಾತವರಣ,ಋತುವಿಗೆ ದೊರಕುವ ಹಣ್ಣು ತರಕಾರಿ, ಋತುವಾಧರಿಸಿ ಮಾಡುವ ಕೃಷಿ ಎಲ್ಲವೂ ತಲೆಕೆಳಗಾದ ಹಾಗಿದೆ ಅನಿಸಲ್ವಾ? ನೋಡು ಒಮ್ಮೆ. ಎಲ್ಲ ಕಾಲದಲ್ಲೂ ಎಲ್ಲ ಹಣ್ಣೂ ದೊರೆಯುತ್ತಿವೆ.ಎಲ್ಲ ಊರುಗಳೂ ಎಲ್ಲ ಕೃಷಿಯನ್ನೂ ಮಾಡುತ್ತಿವೆ. ಕಾಯಿಲೆಗಳು ಮಾತ್ರ ವಾತಾವರಣಕ್ಕೆ ತಕ್ಕಂತೆ ವರಸೆ ಬದಲಾಯಿಸ್ತಾವೆ.
ಮೊನ್ನೆ ಒಂದು ಮಾವಿನ ಮರ ನೋಡಿದೆ. ಒಂದು ಹರೆ ಗೊಂಚಲುಗೊಂಚಲು ಹೂಗರೆದಿದ್ದರೆ ಇನ್ನೊಂದು ಹರೆ ಯಲ್ಲಿ ಮಿಡಿಗಾಯಿ. ಮತ್ತೊಂದು ಹರೆಯ ತುಂಬಾ ಇನ್ನೇನು ಕಡುಗೆಂಪಿಗೆ ತಿರುಗಿ ‘ನಾನು ಬಲಿತಾಯ್ತು, ಕಿತ್ತು ಹಣ್ಣಿಗೆ ಹಾಕ್ಕೊಳಿ’ ಅಂತಿರುವ ಬೊಗಸೆ ಗಾತ್ರದ ಮಾವಿನ ಬಲಿತ ಕಾಯಿಗಳು. ಕಾಲಕ್ಕೆ ಸೆಡ್ಡು ಹೊಡೆದಂತೆ ನಿಂತಿದ್ದ ಆ ಮರ ಒಂದು ದೊಡ್ಡ ಆಸ್ಪತ್ರೆಯ ಎದುರಿಗಿತ್ತು. ವಿಚಿತ್ರ ನೋಡು, ಅಲ್ಲೇ ನಿಂತು ನೋಡುತ್ತಿದ್ದವಳಿಗೆ ಮತ್ತೊಂದು ಸಂಗತಿ ಹೃದಯ ಹಿಂಡಿತು. ಎಳೆಯ ಪ್ರಾಯದ ರೋಗಿಗಳು ಮತ್ತು ಅವರನ್ನು ಕೈ ಹಿಡಿದು ಆಸ್ಪತ್ರೆಗೆ ಕರೆತರುತ್ತಿರುವ ಹಿರಿಯ ಜೀವಗಳು! ಕಾಲ ಅಕಾಲದ ಕಾನ್ಸೆಪ್ಟೇ ಹೋಗಿದೆ ಅಂತ ನಂಗೆ ತೀವ್ರವಾಗಿ ಅನಿಸಿದ್ದು ಅಲ್ಲೇ ನೋಡು.
ತನು, ಕಾಲ ಓಡುತ್ತಲೇ ಇದೆ ಯಾರ ಮುಲಾಜಿಗೂ ಒಳಗಾಗದೆ. ಮತ್ತೊಂದು ವಸಂತವನ್ನು ಹಚ್ಚಿಕೊಂಡೆ ತನು ನನ್ನ ರೆಕ್ಕೆಗಳಿಗೆ. ಅರ್ಧ ಶತಕಕ್ಕೆ ಹತ್ತಿರಾಗ್ತಿದ್ದೀನಿ ಎನ್ನುವಾಗೆಲ್ಲ ಸಣ್ಣಗೆ ಪುಳಕ ನಂಗೆ. ಕನ್ನಡಿಯ ಹತ್ತಿರಹತ್ತಿರಕ್ಕೆ ಹೋಗಿ ಬೈತಲೆಯ ಬೆಳ್ಳಿಗೂದಲನ್ನು ಕಿತ್ತು ಎಳೆಯುವುದು ಹೆಚ್ಚಿನ ಸಮಯ ಕೇಳ್ತಿದೆ ಈಗೀಗ. ವಯಸ್ಸೇ ಆಗಿಲ್ಲ ಅಂತ ನನಗನಿಸ್ತಿದ್ರೂ ಕಾಲ ತನ್ನ ಪಾಡಿಗೆ ತಾನು ತನ್ನ ಕೆಲಸ ತೋರಿಸ್ತಿದೆ. ಬೈತಲೆಯ ಬೆಳ್ಳಿಗೆರೆಗಳಿಗೆ ಬಣ್ಣ ಹಚ್ಚುವ, ಕಣ್ಣ ಕೆಳಗಿನ ಸಣ್ಣ ಗೆರೆಗಳಿಗೆ ಮದ್ದು ಮಾಡುವ ಗೋಜಿಗೆ ಹೋಗಿಲ್ಲ. ಜೀವದಲ್ಲಿ ತೇವ ಝರಿಯಂತೆ ಹರಿಯುತ್ತಿರುವಾಗ, ಎದೆಯೊಳಗಿನ್ನೂ ನವುರುತನ ಹಚ್ಚಗೆ ಚಕ್ಕಲುಮಕ್ಕಲು ಹಾಕಿ ಕುಳಿತಿರುವಾಗ, ನನ್ನ ಮೆದುಳೆಂದೂ ನೀ ಇಷ್ಟು ದೊಡ್ಡವಳಾಗಿದ್ದೀ ಎಂಬುದನ್ನು ಒಪ್ಪಿಕೊಳ್ಳಲು ತಯಾರಿಲ್ಲದಾಗ ಮತ್ತೆಮತ್ತೆ ಮತ್ತೊಂದು ವರ್ಷ ನನ್ನ ನೆನಪುಗಳ ತೆಕ್ಕೆಗೆ ಸೇರಿಕೊಳ್ಳುತ್ತಲೇ ಇದೆ.
ಅದು ಹೇಗೆ ಈ ಪಾಟಿ ವಯಸ್ಸಾಯ್ತು ನಂಗೆ. ಸ್ಕೂಲಿನ ಆ ರನ್ನಿಂಗ್ ರೇಸಿನಲ್ಲಿ ಸೋಲ್ತೀನಿ ಅಂತ ಗೊತ್ತಾದ ಕೂಡಲೆ ಕಾಲಿಗೆ ಮುಳ್ಳು ಚುಚ್ಚಿದ ನೆಪವೊಡ್ಡಿ ಕುಸಿದು ಕುಳಿತಿದ್ದು ಮೊನ್ನೆಯಷ್ಟೇ ನಡೆದಂತಿದೆ. ಅಣ್ಣನ ಮೇಲೆ ಅಪ್ಪಾಜಿ ಹತ್ರ ಸುಳ್ಳೇ ಚಾಡಿ ಹೇಳಿ ಹೊಡೆಸಿ ವಾಪಸು ಹೊಡೆಸಿಕೊಂಡ ನೋವು ಇನ್ನೂ ಬೆನ್ನ ಮೇಲೆ ಉಳಿದೇ ಇದೆ. ರಾತ್ರಿ ಬಚ್ಚಲುಮನೆಗೆ ಹೋಗಲಿಕ್ಕೆ ಹೆದರಿಕೊಂಡು ಅಣ್ಣನನ್ನು ದಮ್ಮಯ್ಯ ಗುಡ್ಡೆ ಹಾಕಿ ಬಾರದೇ ಹೋದಾಗ ಅತ್ತ ಉಪ್ಪು ಕಲೆ ಕೆನ್ನೆ ಮೇಲೇ ಇದೆ.
ಇದನ್ನೂ ಓದಿ : Women Empowerment; ನಾನೆಂಬ ಪರಿಮಳದ ಹಾದಿಯಲಿ: ಇದು ನಾನಲ್ಲ ಇನ್ನೇನೋ ಆಗುವುದಿದೆ ಆಗಬೇಕಿದೆ
ವರ್ಷಗಳು ಯಾಕಾಗಿ ಇಷ್ಟು ಬೇಗಬೇಗ ಓಡಿದವು? ಈಗಲೂ ಅಮ್ಮನ ಜೊತೆಗೆ ತಾರಾಮಾರ ಜಗಳಾಡುವ, ಮಗಳ ಡಿಸೈನರ್ ಟಾಪ್ನ್ನು ಎಗರಿಸಿ ನಂಗೊತ್ತೇ ಇಲ್ಲ ಎನ್ನುವಂತೆ ಮಂಗ ಮಾಡುವ, ಮಗ ಮಗಳ ಬಳಿ ಒಂದಿಷ್ಟಾದರೂ ಅಮ್ಮನ ಥರ ಇರೋದು ಕಲಿಯಮ್ಮಾ ಅಂತ ಬೈಸಿಕೊಳ್ಳುವ, ರುಚಿ ನೋಡ್ತಾನೋಡ್ತಾ ಅಡುಗೆಯನ್ನು ಉಪ್ಪೇ ಮಾಡಿಬಿಡುವ ಎಡಬಿಡಂಗಿ ಪ್ರೌಢ ವಯಸ್ಕಳು ನಾನು.
ತನು, ಮೊನ್ನೆ ಮಾತಾಡ್ತಾ ಹಣ್ಣಾಗಿದ್ದೇನೆ ಎಂದೆನಲ್ವಾ. ಹಾಗಂದರೆ ಬಳಲಿದ್ದೇನೆ ಅಂತಲ್ಲ ಕಣೆ. ಮಾಗಿದ್ದೇನೆ. ಬೆಳಗಿದ್ದೇನೆ, ಬೆಳೆದಿದ್ದೇನೆ ಅಂತ ಹೇಳಲು ಬಳಸುವ ಮತ್ತೊಂದು ಪದ ಅದು. ನಿಂಗೊತ್ತಾ? ಹೀಗೆ ಮಾಗಿದ್ದೇನೆ ಎನ್ನುವುದೂ ನಂಗೊತ್ತಾಗಿರಲಿಲ್ಲ.
ಅವನು ಜೀವದೊಳಗೆ ಬಂದ!
ಆಗಿನಿಂದ ನಾನೂ ಪ್ರೌಢಳಾಗಿದ್ದೇನೆ ಅನಿಸ್ತಿದೆ. ಆದರೆ ಅವನ ಗಮನ ತುಸುವೇ ಗೈರಾದರೂ ಆರು ವರ್ಷದ ಕೂಸಿನಂತೆ ಅತ್ತು ಕರೆದು ಮಾಡ್ತೀನಿ. ನನ್ನ ಈ ಎರಡೂ ಪಾತ್ರಗಳೂ ಅವನಿಗೆ ಮೆಚ್ಚು. ಎರಡನ್ನೂ ಮುದ್ದಿಸ್ತಾನೆ. ಅವನು ಮುದ್ದಿಸಲಿ ಅಂತಲೇ ನಾನು ಮತ್ತೂ ಏನೋ ಆಗ್ತಿನಿ ನೋಡು. ಅವನೂ ನಾನೂ ಅಕಾಲದಲ್ಲೇ ಭೆಟ್ಟಿಯಾಗಿದ್ದು ತನು. ಹೀಗೊಂದು ತೀವ್ರ ಪ್ರೇಮದಲ್ಲಿ ಬೀಳುವ ವಯಸ್ಸನ್ನು ಇಬ್ಬರೂ ದಾಟಿ ಬಂದಿದ್ದೆವು. ವಿಧಿ ಚಿತ್ತ ಅಚ್ಚರಿ ಅನಿಸ್ತದೆ ನೋಡು. ಸಾಹಿತ್ಯದ ಸಮಾನ ಆಸಕ್ತಿ ಹೊರತುಪಡಿಸಿದರೆ ನಾವು ಕಟ್ಟಾ ವಿರುದ್ಧ ಪದಗಳು. ‘ಇವನೇ ಯಾಕೆ’ ಅಂತ ಯಾರಾದರೂ ಕೇಳಿದರೆ ಏನು ಹೇಳ್ತಿಯಾ ಮುದ್ದೂ ಅಂತ ಕೇಳಿದ ಮೊನ್ನೆ. ಏನು ಹೇಳಬಹುದು? ಅಥವಾ ಏನಾದರೂ ಹೇಳುವಂಥ ಕಾರಣವೇ ಇರಬೇಕಾ?
ಉಹು..
ಅರ್ಥ ಹುಡುಕಲಾರೆ. ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಬಾಯಿಕಟ್ಟಿ ಇಡಲಾಗಿರುತ್ತದೆ. ಹುಕಿ ಬಂದಾಗ ಮೆತ್ತಗೆ ನೇವರಿಸಿ ಜಾಡಿಯನ್ನು ಬೀರುವಿನಲ್ಲಿರಿಸುವುದೇ ಸುಖ. ವಿಚಿತ್ರ ನೋಡು, ಅವನು ಲೋಕ ನೋಡಿದವನು. ಬೆಡಗಿಯರ ಜೊತೆಗೇ ಒಡನಾಡಿ, ಲೆಕ್ಕವಿಲ್ಲದಷ್ಟು ಪ್ರೇಮ ನಿಭಾಯಿಸಿ ಪಳಗಿ, ಬಂಧ ಮುಗಿದ ಸಾಂಗತ್ಯಕ್ಕೆ ನಗುನಗುತ್ತಲೇ ವಿದಾಯ ಹೇಳಿ ಸಹಜವಾಗಿದ್ದವನು. ಒಂದು ಸುಖದ ದಿನದಂದು ನಾವು ಒಬ್ಬರೊಬ್ಬರ ನೋಡಿಕೊಂಡೆವು. ಹತ್ತರಲ್ಲಿ ಮತ್ತೊಬ್ಬಳು ಅಂದುಕೊಂಡೇ ನನ್ನ ನೋಡಿದನಂತೆ. ಎಂದೋ ಮುಗಿದಿದ್ದ ಒಂದು ಪ್ರೇಮದ ನೋವನ್ನು ಮರೆಯಲಾರದೆ ನೇವರಿಸಿದರೂ ನಲುಗುವ ಭಾವದಲ್ಲಿದ್ದವಳು ನಾನು. ಹೇಗಾಯಿತು ಇದೆಲ್ಲವೂ ಎಂದರೆ ತಿಳಿಯುತ್ತಿಲ್ಲ. ಈಗಿವನು ನನ್ನ ಪ್ರೇಮದ ಪ್ರಭಾವಳಿಯಲ್ಲಿ ಸುಖವಾಗಿ ಬಂಧಿಯಾಗಿದ್ದಾನೆ ನೋಡು.
ನಾನೀಗ ಪ್ರೇಮಿಗಳ ಪಾಲಿಗೆ ಗುರು. ಈಗಷ್ಟೇ ಪ್ರೇಮದಲಿ ಬಿದ್ದ ಎಳೆಯ ಪ್ರೇಮಿಗಳು, ನಡುವಯಸ್ಸಿನಲ್ಲಿ ಪ್ರೇಮದ ಸುಳಿಯೊಳಗೆ ಸಿಕ್ಕಿ ಬಳಲುತ್ತಿರುವವರು, ಅಚಾನಕ್ಕು ಪ್ರೀತಿಯ ಕರೆಂಟು ಹೊಡಿಸಿಕೊಂಡು ಹದವಾಗಿ ನಲುಗುತ್ತಿರುವ ಅರೆಮರೆ ಮಾಗಿದವರು, ಪ್ರೇಮ ಮೋಸ ಮಾಡಿತೆಂದು ಹಲುಬುತ್ತಿರುವ ಸಂಕಟಜೀವಿಗಳು, ಹಾಯಾಗಿ ಒಲವ ಹಾಯಿದೋಣಿಯಲ್ಲಿ ವಿಹರಿಸುತ್ತಿರುವ ಎಲ್ಲರಿಗೂ ನನ್ನ ಸಲಹೆ ಬೇಕಾಗಿದೆ.
‘ಗುರೂ.. ಏನ್ ಧೈರ್ಯನಮ್ಮ ನಿಂದು’ ಅಂತ ನನ್ನ ಅರ್ಧ ಪ್ರಾಯಕ್ಕೂ ಕಡಿಮೆ ಇರುವವರು ಕೇಳುವಾಗ, ಪುಟ್ಟ ಹುಡುಗ ಹುಡುಗಿಯರು ನನ್ನ ಹೆಸರನ್ನು ಸಲೀಸು ತುಂಡರಿಸಿ ರಾಗವಾಗಿ ಕರೆದು ‘ಹೀಗ್ ಹೀಗಾಗಿದೆ, ಏನ್ ಮಾಡೋದೇಮಾ’ ಎನ್ನುವಾಗ ಏನಾಗ್ತಿದೆ ಇಲ್ಲಿ ಅಂತ ಅಚ್ಚರಿ ಆಗ್ತದೆ ತನು.
‘ಮಮ ಹೃದಯೇಷು ಪ್ರೇಮರೂಪೇಣಾ ಸಂಸ್ಥಿತಾಃ’
ಹೀಗೆ ಜೀವದೊಳಗೆ ಬೆಚ್ಚಗೆ ಕೂತವನ ಮುಚ್ಚಟೆ ಮಾಡುತ್ತ, ದಿನಗಳು ಓಡುವ ವೇಗಕ್ಕೆ ಬೆರಗಾಗುತ್ತ, ಕೊರಳಮೇಲೆ ಅವನು ಬಿಡಿಸುವ ಅರ್ಧಚಂದ್ರ ನೆನಪಿಸಿಕೊಳ್ತೀನಿ ತನು. ಅವನ ಗುಂಗಿಗಿಳಿಯಲೇ ಬಾರದು ಎಂದುಕೊಂಡೇ ಗಮನ ಬೇರೆಡೆಗೆ ತಿರುಗಿಸಿದರೂ ಟೆಕ್ನಾಲಜಿ ತಪ್ಪಿ ಮತ್ತೆ ಅಲ್ಲಿಗೇ ಹೋಗಿ ಕನೆಕ್ಟ್ ಆಗಿಬಿಡ್ತದೆ. ಅವನೆಂತ ಕಳ್ಳಬೆಕ್ಕಿನಂತವನು ನೋಡು. ನನ್ನ ಸುತ್ತಿಗೊಂದು ಕುತೂಹಲದ ಪರದೆ ಇಳಿಬಿಟ್ಟು ತಾನು ಮಾತ್ರ ಸುಖಿಸಂಸಾರದ ಹೊರೆಯನ್ನು ಸುಖವಾಗಿ ಹೊತ್ತು ದೂರದ ಊರಲ್ಲಿ ಕೂತಿದ್ದಾನೆ. ಇಳಿಸಂಜೆಗೆ ಕರೆ ಹಚ್ಚಿ ಸುತ್ತಿನ ಕತ್ತಲಿಗೆ ಬಣ್ಣದ ಕನಸು ಚುಚ್ಚಿ ಮೆಲ್ಲಗೆ ಮಾತು ಮುಗಿಸುತ್ತಾನೆ. ನನ್ನ ಮಾತಿನ ಉಮೇದಿನ್ನೂ ಆರಂಭವೇ ಆಗಿರುವುದಿಲ್ಲ. ಅವನು ಮುಗಿಸಲು ಚಡಪಡಿಸುತಿರ್ತಾನೆ. ಪ್ರೇಮದ ಮಾತುಗಳಿಗಾಗಿ ನಾನು ಹಂಬಲಿಸುವಾಗ ಅವನದ್ದು ಪೊಳ್ಳು ಲೋಕಭಿರಾಮದ ವಿಚಾರ. ಹುಚ್ಚು ಕೋಪ ಹತ್ತಿ ಮಳ್ಳನಂತೆ ಆಡಬೇಡ ಎಂದರೆ ಅಲ್ಲಿಂದಲೇ ಕರಡಿಮುದ್ದು.
ಇವನ ಸಾವಾಸವೇ ಬೇಕಿಲ್ಲ ಇನ್ನು ಅಂತ ಈ ಕ್ಷಣ ಅನ್ಕೊಂಡು ಒಳಗೊಂದು ಮಂಜುಗತ್ತಿ ರೂಪುಗೊಳ್ಳುವಾಗಲೇ ಕಲಿತ ಹಳೆಯ ವರಸೆ ಶುರುಮಾಡ್ತಾನೆ.
‘ನನ್ ಮುದ್ದು ಅಲ್ವಾ, ನನ್ ಚಿನ್ನ ಅಲ್ವಾ… ಹೀಗೆ ಹಠ ಹಿಡಿಬಾರದು ಪುಟ್ಟಾ’
ಅವನು ಹಾಗೆ ಮೂಲ ಹಿಡಿದು ಮುದ್ದುಗರೆಯುವಾಗ ನನ್ನ ಮುನಿಸಿನ ತಾಯಿಬೇರೇ ಅಲುಗಾಡಿ ಹೋಗ್ತದೆ. ಮತ್ತೊಂದು ವಸಂತ ಮುಗಿದೇ ಹೋಯಿತು ನಿನ್ನ ಈ ಬೊಂಬೆಗೆ ನೋಡು ಅಂತ ಅಳುಕುವಾಗೆಲ್ಲ ಅವನದೊಂದು ಫೋಟೋ ಕಳಿಸ್ತಾನೆ. ನಂಗಿಂತ ಅಷ್ಟು ವರ್ಷ ಹಿರೀಕ ಅವನು. ನನಗಾಗಿ ತನ್ನ ವಯಸ್ಸನ್ನು ನಿಲ್ಲಿಸಿಕೊಂಡು ಕಾಯ್ತಿರುವವನಂತೆ ಕಾಣ್ತಾನೆ. ಮುದ್ದುಕ್ಕಿದರೂ ಮತ್ತೇನೂ ಮಾಡಲಾಗದ ಅಸಹಾಯಕತೆ. ರಹಸ್ಯ ಕೀಲಿ ಇಟ್ಟು ಭದ್ರ ಮಾಡಿದ ಕೋಣೆಯಲ್ಲಿ ಕಾದಿರಿಸುತ್ತೇನೆ ಆ ಫೋಟೊವನ್ನು.
ತನು, ಒಂದು ಮಾತು. ಸತ್ಯ ಹೇಳು. ಇಷ್ಟು ಪ್ರೀತಿಸಬಾರದಾ ಅವನನ್ನು ನಾನು? ಯಾರನ್ನಾದರೂ ಬಹಳ ಪ್ರೀತಿಸುವುದಾದರೆ ಅವರಿಂದ ದೂರವೇ ಉಳಿಯಬೇಕಂತೆ. ಹೀಗಂತ ಎಲ್ಲೋ ಓದಿದ ನೆನಪು. ಕಳೆದುಕೊಳ್ಳಬಾರದೆಂದರೆ ದೂರವೇ ಉಳಿಯಬೇಕು.ಇದು ಸಾಧ್ಯವಾ, ಸಾಧುವಾ ಹೀಗಿರುವುದು?
ನಾವು ವಾಸ್ತವದಲ್ಲಿ ಹತ್ತಿರವಿಲ್ಲ ನಿಜ.
ಆದರೆ ಈ ದೂರಕ್ಕೂ ಅರ್ಥವಿಲ್ಲ. ನಮ್ಮ ಪರಿಚಯದಿಂದ ಇಲ್ಲಿಯವರೆಗೆ ಒಂದೇ ಒಂದು ನಿಮಿಷ ಅವನಿಂದ ದೂರವಿದ್ದ ನೆನಪಾಗುತ್ತಿಲ್ಲ ನನಗೆ. ಈ ಇಷ್ಟು ವರ್ಷದಲ್ಲಿ ನಮ್ಮದು ಬೆರಳೆಣಿಕೆಯ ಭೆಟ್ಟಿ. ಅದೂ ಅವಸರದ್ದು. ಹೀಗೆ ಸಿಕ್ಕಿ ಹಾಗೆ ಹೊರಡುವ ಅವನೆಂದೂ ನನ್ನ ಪಾಲಿಗೆ ಕಲ್ಪಿತ ಪಾತ್ರ. ಹೀಗೊಂದು ಪ್ರೇಮವಿದೆ ಅವನೊಳಗೂ ಅಂತ ನನಗೆ ಅಚಲ ನಂಬಿಕೆ ಇದ್ದಾಗ ಮಾತ್ರ ಈ ಪ್ರೇಮಕ್ಕೆ ಅರ್ಥ. ಹಾಗೆ ನೋಡಿದರೆ ಪ್ರೇಮವೆಂಬ ಸಂಗತಿಯೇ ಕಲ್ಪಿತ ತಾನೇ?
ನಾಕೂವರೆ ದಶಕದಿಂದ ಜೀವ ಆಳುವ ಒಬ್ಬೇ ಒಬ್ಬ ರಾಜಕುಮಾರನಿಗಾಗಿ ನಿರಂತರ ಕಾಯುತ್ತಿದ್ದವಳು ನಾನು. ಈ ಕಲ್ಪಿತ ಪಾತ್ರವನ್ನು ತೀವ್ರವಾಗಿ ಮೋಹಿಸುತ್ತಿರುವಾಗ ಕೆಲವೊಮ್ಮೆ ಅಚ್ಚರಿಯಾಗ್ತದೆ. ಎಷ್ಟು ಕಾಲ ಈ ವಾಸ್ತವಕ್ಕೆ ಒದಗದ ಮೋಹ ನನ್ನ ಪ್ರೇಮವನ್ನು ಬಾಳಿಸಬಹುದು. ಎಷ್ಟು ಕಾಲದವರೆಗೂ ನನ್ನ ಈ ಹುಚ್ಚು ಕಾಯುವಿಕೆ ಜೀವವನ್ನು ಹಚ್ಚಗೇ ಇರಿಸಬಹುದು. ನೋಟವಿಲ್ಲ ಭೇಟಿಯಿಲ್ಲ, ಸ್ಪರ್ಶವಿಲ್ಲ, ಮಿಲನವಿಲ್ಲದ ಪ್ರೇಮ ಇದು. ಆದರೆ ಭಾವವಿದೆ ನೋವೂ ಕಾವೂ ಇದೆ ಮೋಹ ಇದೆ ದಾಹ ತಹತಹ, ಉತ್ಕರ್ಷ ಹರ್ಷ ಎಲ್ಲವೂ ಇದೆ ನೋಡು ಇದಕ್ಕೆ.
ಹೊತ್ತುಹೊತ್ತಿಗೂ ಕಳೆದುಕೊಳ್ಳುವ ಭಯ ನನಗೆ. ನನ್ನ ಹಳೆಯ ಪ್ರೇಮಪದ್ಯಗಳನ್ನೆಲ್ಲ ಹರವಿಕೊಂಡು ಕೂತಿದ್ದೇನೆ ಈ ರಾತ್ರಿ. ದಶಕಗಳ ನಂತರ ಮತ್ತೆ ಓದುವಾಗ ಗೊಂದಲವಾಗ್ತದೆ ನನಗೆ. ತುಸು ದಿಗಿಲೂ..
ಯಾವ ಪದ್ಯದಲ್ಲಿರುವುದು ಯಾರ ಬೆವರ ಗಂಧ?
ಯಾವ ಸಾಲು ಯಾರ ಆ ಕ್ಷಣದ ತುರ್ತು?
ಸಾಲುಸಾಲು ಪ್ರೇಮಗಳಲ್ಲಿ ಬಾಳಿಸಿಕೊಳ್ಳಬೇಕೆನಿಸಿದ್ದು ಇದೊಂದೇನಾ?
ಒಂದಂತೂ ಖಚಿತವಾಗಿ ಹೇಳಬಲ್ಲೆ ತನು.
ಪ್ರತಿ ಹೆಣ್ಣೂ ತನಗಿಂತ ಹೆಚ್ಚು ಬುದ್ದಿವಂತನಾದ ಸಂಗಾತಿಯೆಡೆಗೆ ಒಲಿಯುತ್ತಾಳೆ ನಿಜ. ಆದರೆ ತನಗೇ ಎಲ್ಲಾ ತಿಳಿದಿದೆ ಎನ್ನುವ ಜೀವಕ್ಕಿಂತಲೂ ನೀನೂ ಈ ವಿಷಯದಲ್ಲಿ ಮಾತಾಡು ಎನ್ನುವ ಗಂಡುಹೆಣ್ಣಿಗೆ ಹೆಚ್ಚು ಪ್ರೇಮಮಯಿ ಎನಿಸ್ತಾನೆ. ಅವನೊಂದಿಗಿನ ಪ್ರೇಮವನ್ನು ಶಾಶ್ವತಗೊಳಿಸಿಕೊಳ್ಳಬಯಸುತ್ತಾಳೆ ಅವಳು.
ಇನ್ನೂ ನಾಲ್ಕು ತುತ್ತು ಉಣ್ಣಬಹುದು ಎನ್ನುವಾಗಲೇ ಊಟ ನಿಲ್ಲಿಸಬೇಕಂತೆ. ಇನ್ನೆರಡು ಗುಟುಕು ನೀರು ಕುಡಿಯಬೇಕು ಎನ್ನುವಾಗ ಸುಮ್ಮನಾಗಬೇಕಂತೆ. ಇನ್ನೂ ಹುಡುಕಿದ್ದರೆ ಒಳ್ಳೆಯದೇ ಸಿಕ್ತಿತ್ತು ಅನ್ನುವುದೆಲ್ಲ ಸುಳ್ಳಲ್ಲವೇ. ತನು.. ಈ ಪ್ರೇಮವನ್ನು ಮುಗಿಸಿಕೊಳ್ತಿದ್ದೀನಿ! ಈ ತೀವ್ರ ಪ್ರೇಮ… ಇದಿಲ್ಲದಿದ್ದರೆ ನಾನು ಬದುಕುಳಿಯಲಾರೆ ಎನಿಸುವ ಈ ಪ್ರೇಮವನ್ನು … ಹೌದು ಇದೇ ಪ್ರೇಮವನ್ನು ಕಳಿಸುತ್ತಿದ್ದೇನೆ. ಬೀಳ್ಕೊಡುತ್ತಿದ್ದೇನೆ. ನನ್ನ ಹೃದಯದಿಂದ ನೆತ್ತರಿಂದ ಜೀವಕೋಶದಿಂದಾಚೆಗೆ ಕಳಿಸುತ್ತಿದ್ದೇನೆ.
ಉಹು.. ನೀ ಯೋಚಿಸಿದಂತೆ ಇಲ್ಲಿ ಯಾವ ಜಗಳ ಮುನಿಸೂ ವಂಚನೆ ಇಲ್ಲ. ಅದೇ ಜೀವ ಬಿಗಿಯುವ ತುಂಬು ಪ್ರೇಮ. ಮೊದಲ ದಿನದಷ್ಟೇ ಹಸಿಯಾದ ತಾಜಾ ಪ್ರೇಮವೇ ನಮ್ಮ ನಡುವಿದೆ. ಆದರೂ ಮುಗಿಸಿಕೊಳ್ತಿದ್ದೀನಿ. ವಿಧಿಯೊಂದು ನನ್ನ ಪಕ್ಕವೇ ಸರಿದು ಹೋದ ಆ ದಿನ ನನ್ನ ಆತ್ಮ ಕೂಗಿ ಕರೆದಿತ್ತು. ನನ್ನ ಹೊರತಾಗಿ ಅವನೂ ಅವನ ಹೊರತಾಗಿ ನಾನೂ ಇಲ್ಲವೇ ಇಲ್ಲ ಎಂಬುವುದನ್ನು ನಂಬಿಸಿಕೊಂಡಿದ್ದೇನೆ ಹೃದಯಕ್ಕೆ. ನಿನ್ನ ಬಗ್ಗೆ ಏನಾದರೂ ಹೇಳು ಎಂದರೆ ಅವನಿಂದಲೇ ಆರಂಭವಾಗುತ್ತದೆ ನನ್ನ ಮಾತು.ಅವನು ಬರುವ ಮುಂಚೆ ನಾನು ಬದುಕಿದ್ದೇ ಸುಳ್ಳೆಂಬಂತೆ ಪ್ರವರ ತೆಗೆಯುವ ಚಟ ನನ್ನದು.
ಇದನ್ನೂ ಓದಿ : ಅಮಾರೈಟ್ : ‘ಎಲ್ಲವನ್ನೂ ನಿನ್ನಲ್ಲೇ ಗಿರವಿ ಇಟ್ಟಿರುವಾಗ ಏನನ್ನ ಮಾರಿಕೊಂಡರೆ ಈ ‘ಪುರುಸೊತ್ತುʼ ಖರೀದಿಸಬಹುದು’
ಆದರೆ… ಈ ಪ್ರೇಮ ಹೀಗೆ ತೀವ್ರವಾಗಿದ್ದಾಗಲೇ ನಾನು ವಿದಾಯ ಹೇಳುತ್ತಿದ್ದೇನೆ. ಈ ಕೋಟೆಯ ಒಂದು ಮರಳಿನ ಕಣದ ಜವಾಬ್ದಾರಿಯೂ ನಿಂದೇ, ಒಂದಿಷ್ಟು ಆಚೀಚೆ ಸರಿದರೂ ಗೋಡೆ ಸಡಿಲಾಗಬಹುದು, ಜೋಪಾನ ಕಾಪಾಡಿಕೊ ನನ್ನ ಎನ್ನುತ್ತಿದ್ದವನಿಂದ ಬಿಡುಗಡೆ ಪಡೆದಿದ್ದೇನೆ. ಹೀಗೇ ಕಳಚಿಕೊಂಡರೆ ಮಾತ್ರ ಅವನನ್ನು ಕೊನೆಯವರೆಗೂ ಉಳಿಸಿಕೊಳ್ಳಬಲ್ಲೆ ಅಂತ ಇತ್ತೀಚೆಗಷ್ಟೇ ಅನಿಸುತ್ತಿದೆ.
ಪರಿಧಿಗೊಳಪಡದ ಒಲುಮೆ ಇದು.
ಎಂದಾದರೊಂದು ದಿನ ಮುಗಿಯುವುದೇ.
ಸುಖದ ವಿದಾಯದಿಂದಲೇ ಮುಗಿಸೋಣವೆಂದೆ.
ಮೊದಮೊದಲು ವಿರೋಧ ಮಾಡಿದ, ಒಪ್ಪುವುದಿಲ್ಲ ಎಂದ, ಕೆಟ್ಟ ಕೋಪ ಕಟುಮಾತೂ ಆಡಿದ. ಕೊನೆಯಲ್ಲಿ ಬೇಡಿದ ಅಸಹಾಯಕನಾದ. ಅವನನ್ನು ಎದೆಯೊಳಗೆ ಬೆಚ್ಚಗೆ ಕೂರಿಸಿಕೊಂಡೇ ನನ್ನ ನಿಲುವಿಗೆ ನಾನು ಗಟ್ಟಿಯಾಗಿ ನಿಂತೆ. ಇನ್ನೂ ಮುಂದುವರೆದರೆ ಆಗುವ ಸಾಧ್ಯಾಸಾಧ್ಯತೆಗಳನ್ನು ಸೂಕ್ಷ್ಮವಾಗಿ ಹೇಳಿದೆ. ಒಂದಿಷ್ಟು ಅರ್ಥವಾದವನಂತೆ ಕಾಣಿಸಿದ. ನನ್ನ ಬದುಕಿರುವವರೆಗೂ ನೀನು ನನಗಾಗಿ ಇರಬೇಕು ಎಂದೆ. ಮಾತು ಕೊಟ್ಟ.
ಹೊರಟಿದ್ದೇನೆ. ಮರಳಿ ನೋಡಲೇಬೇಕೆಂಬ ಮರುಳನ್ನು ತಡೆದಿದ್ದೇನೆ. ನನಗೆ ಗೊತ್ತಿದೆ ಅವನು ಮಂಜು ನೋಟದಲ್ಲಿ ಹೊರಳಿಹೊರಳಿ ನೋಡುತ್ತಲೇ ಅತ್ತ ನಡೆದಿದ್ದಾನೆ ಅಂತ. ಜೀವದ ತುಂಬಾ ಸಿಹಿ ನೆನಪುಗಳ ಬಂಡಿ ಹೊತ್ತೇ ನಡೆಯುತ್ತಾನೆ ಇನ್ನು ಮುಂದೆ ಎಂಬ ಖಾತರಿ ಉಳಿಯಿತು ನೋಡಿನ್ನು.
ಇಲ್ಲಿ ಮತ್ತೆ ಮೋಡ ಒಗ್ಗೂಡುತ್ತಿದೆ. ಎಷ್ಟು ನೋವು ಒಳಗಿಟ್ಟುಕೊಂಡಿದೆಯೋ ಏನೋ. ಹೀಗೆ ಧಾರೆಧಾರೆಯಾಗಿ ಸುರಿಯಲಿಕ್ಕೆ.
ಎಸ್! ಓಷನ್ ಈಸ್ ಇನ್ ಡಿಪ್ರೆಶನ್.
ತನು,
ಅವನನ್ನೇ ಬೀಳ್ಕೊಟ್ಟಾದ ಮೇಲೆ ಮತ್ತೂ ಅವನ ಕುರಿತು ಬರೆಯುವುದಕ್ಕೆ ಅರ್ಥವಿಲ್ಲ ಎನಿಸ್ತಿದೆ. ಆದರೆ, ಅವನ ತಾಕುವ ಬೆಳಗಿನ ಕಿರಣಗಳಲ್ಲಿ ನಾನು ಕಳೆದ ರಾತ್ರಿ ಕಂಡ ಬಣ್ಣದ ಕನಸುಗಳು ವಕ್ರೀಭವನಗೊಂಡಿವೆ ಎನ್ನುವುದಷ್ಟೇ ನನಗೆ ಗೊತ್ತಿರುವುದು ತನು.
ಮುಗಿಸುತ್ತೇನೆ.
(ಈ ಅಂಕಣ ಇಲ್ಲಿಗೆ ಮುಗಿಯಿತು)
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 8:58 am, Tue, 24 May 22