S.P. Balasubrahmanyam Birth Anniversary: 2000 ರ ಸಮಯ. ನಾನಾಗ ಕೋರಸ್ ಸಿಂಗರ್ ಆಗಿದ್ದೆ. ಒಮ್ಮೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ನಡೆದಿತ್ತು. ವಿ. ಮನೋಹರ್ ಅವರ ನಿರ್ದೇಶನದ ಚಿತ್ರ. ಎಸ್.ಪಿ ಸರ್ ಈಗ ಬರುತ್ತಾರೆ. ಅವರ ರೆಕಾರ್ಡಿಂಗ್ ಮುಗಿದ ಮೇಲೆ ನೀವು ನಿಮ್ಮ ಹಾಡನ್ನು ಮುಂದುವರೆಸಬಹುದು ಎಂದರು. ನನಗೊಂಥರಾ ಅದೃಷ್ಟ ಅನ್ನಿಸಿತು. ಅವರನ್ನು ಅಷ್ಟು ಹತ್ತಿರದಿಂದ ಮಾತನಾಡಿಸುವುದು, ಅವರು ಹಾಡುವುದನ್ನು ಕೇಳುವುದು. ರೆಕಾರ್ಡಿಂಗ್ ಮುಗಿದ ಮೇಲೆ ಅವರೊಂದಿಗೆ ಕಾಫಿ ಬಿಸ್ಕೆಟ್. ನಂತರ ಅವರು ಹಾಡುವ ವಿಷಯವಾಗಿ ಕೆಲ ಸಲಹೆಗಳನ್ನೂ ಕೊಟ್ಟರು. ಇಂದಿಗೂ ಆ ಮೊದಲ ಭೇಟಿ ಮೈನವಿರೇಳಿಸುತ್ತದೆ. ಎರಡನೇ ಬಾರಿ ಈ ಟಿವಿಯ ‘ಎದೆತುಂಬಿ ಹಾಡುವೆನು’ ಕಾರ್ಯಕ್ರಮ. ಒಂದು ಎಪಿಸೋಡ್ ಪೂರ್ತಿ ಶಾಸ್ತ್ರೀಯ ಸಂಗೀತ ಆಧಾರಿತ ಇತ್ತು. ನನ್ನ ಗುರು ಪರಮೇಶ್ವರ ಹೆಗಡೆ ತೀರ್ಪುಗಾರರಾಗಿದ್ದರು. ಜಯಂತ ಕಾಯ್ಕಿಣಿಯವರ ಗೀತೆಗೆ ಹೆಗಡೆಯವರು ಸ್ವರಸಂಯೋಜನೆ ಮಾಡಿದ್ದರು. ನಾನು ಮತ್ತು ಅವರ ಮಗಳು ವಾಣಿ ಹೆಗಡೆ ಆ ಹಾಡನ್ನು ಹಾಡಿದ್ದೆವು. ಈ ಎರಡೂ ಘಟನೆಗಳು ಜೀವನದಲ್ಲಿ ನನಗೆ ದೊಡ್ಡ ಸ್ಪೂರ್ತಿ.
ಬಿ.ಜೆ. ಭರತ್, ಸಂಗೀತ ನಿರ್ದೇಶಕ
ಎಸ್ಪಿ ಸರ್ ಅಷ್ಟೊಂದು ಭಾಷೆಗಳಲ್ಲಿ ಅಷ್ಟು ಲೀಲಾಜಾಲವಾಗಿ ಹಾಡುತ್ತಿದ್ದರಲ್ಲ ಅದು ಎಂದೆಂದಿಗೂ ಅಚ್ಚರಿ. ಭಾರತದ ಐಕಾನಿಕ್ ಸಿಂಗರ್. ಅವರ ಬಗ್ಗೆ ಏನು ಹೇಳಿದರೂ ಕಡಿಮೆಯೇ. ನಾನು ಕೇಳ್ಪಟ್ಟ ಹಾಗೆ, ಎಸ್ಪಿಬಿಯವರು ಸಿನೆಮಾದ ಬಜೆಟ್ಗೆ ತಕ್ಕಂತೆ ತಮ್ಮ ಸಂಭಾವನೆಯಲ್ಲಿ ಮೊದಲಿನಿಂದಲೂ ಹೊಂದಾಣಿಕೆ ಮಾಡಿಕೊಳ್ಳುತ್ತ ಬಂದಿದ್ದರು. ಆದರೆ ನಮ್ಮ ನಿರ್ಮಾಪಕರು ಲಕ್ಷಗಟ್ಟಲೆ ಕೊಟ್ಟು ಮುಂಬೈ ಗಾಯಕರನ್ನು ಕರೆಸಲು ಆರಂಭಿಸಿದರೋ ಆಗ ಈ ತಾರತಮ್ಯ ಧೋರಣೆಯಿಂದ ಮನನೊಂದರು. ಅಷ್ಟು ವರ್ಷ ಹಾಡಿದ ಕಲಾವಿದರು ಅವರಾಗಿಯೇ ತಮ್ಮ ಸಂಭಾವನೆಯ ಬಗ್ಗೆ ಮಾತನಾಡಬೇಕಾ? ಇಂಥ ಸೂಕ್ಷ್ಮಗಳು ನಮ್ಮ ನಿರ್ಮಾಪಕರಿಗೆ ಯಾಕೆ ಅರ್ಥವಾಗುವುದಿಲ್ಲ?
ಇದನ್ನೂ ಓದಿ : S.P. Balasubrahmanyam Birth Anniversary: ‘ಅಮೃತಧಾರೆ’ಯ ನಂತರ ಎಷ್ಟು ಸಿನೆಮಾ ಹಾಡು ಹಾಡಿದಿರಿ’ ಎಸ್ಪಿಬಿ ಸುಪ್ರಿಯಾಗೆ ಕೇಳಿದಾಗ
ಏನೇ ಆದರೂ ಹೋದರೂ ಎಸ್ಪಿ ಸರ್ ಹೀಗೆ ಇನ್ನೂ ನೂರಾರು ವರ್ಷಗಳ ಕಾಲ ಹಾಡುಗಳ ಮೂಲಕ, ಗುಣಸ್ವಭಾವದ ಮೂಲಕ ನಮ್ಮೊಂದಿಗೆ ಜೀವಂತವಾಗಿಯೇ ಇರ್ತಾರೆ. ನಿಜವಾದ ಕಲಾವಿದ ಅಳಿದ ಮೇಲೂ ಬದುಕುವುದೆಂದರೆ ಹೀಗೇ ಇರಬಹುದು.
Published On - 1:49 pm, Sat, 4 June 22