ಶೆಲ್ಫಿಗೇರುವ ಮುನ್ನ | Shelfigeruva Munna : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್ನಿಂದ ಒಂದು ಪ್ರತಿಯನ್ನು ಇಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಗಮನಿಸಿ, ಪ್ರಕಾಶಕರು ಮತ್ತು ಬರಹಗಾರರು ಬಿಡುಗಡೆಗೂ ಮುನ್ನ ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್ ನಂಬರ್ ಕಳುಹಿಸಬಹುದು. ಇ ಮೇಲ್ : tv9kannadadigital@gmail.com
ಕೃತಿ: ಪುನೀತ್ ರಾಜಕುಮಾರ್ – ಮುಗ್ಧ ನಗುವೊಂದರ ಕಣ್ಮರೆ
ಸಂಪಾದಕ: ಡಾ. ಎ. ಎಸ್. ಪ್ರಭಾಕರ
ಪುಟ: 180
ಬೆಲೆ: ರೂ. 150
ಮುಖಪುಟ ವಿನ್ಯಾಸ : ಗಿರೀಶ ತಾಳಿಕೋಟಿ
ಪ್ರಕಾಶನ : ಗೌರಿ ಮೀಡಿಯಾ ಟ್ರಸ್ಟ್, ಬೆಂಗಳೂರು
ಪುನೀತ್ ಸಾವಿನ ನಂತರ ಅನೇಕ ಜನರಿಗೆ ಬದುಕಿನ ನಶ್ವರತೆಯ ಕುರಿತು ಒಂದು ಅಂದಾಜು ಸಿಕ್ಕಂತಿದೆ. ಅನೇಕರು ತಮ್ಮಗಳ ನಡುವಿನ ಮನಸ್ಥಾಪಗಳನ್ನು ಮರೆತು ಒಂದಾಗಲು ಪ್ರಯತ್ನಿಸುತ್ತಿದ್ದಾರೆ. ಯಾರನ್ನೂ ದ್ವೇಷಿಸದ ನಿರುಮ್ಮಳ ಮನಸ್ಸು ತಮಗಿರಬೇಕು ಎಂದು ಹಂಬಲಿಸುತ್ತಿದ್ದಾರೆ. ಯಾವಾಗ ನಮ್ಮ ಬದುಕು ಕೊನೆಗೊಳ್ಳುವುದೋ ಎಂಬ ಧಾವಂತದಲ್ಲಿ ಉಪಯುಕ್ತ ಕೆಲಸಗಳಲ್ಲಿ ತೊಡಗಿಕೊಳ್ಳಲು ಮುಂದಾಗುತ್ತಿದ್ದಾರೆ. ಪುನೀತ್ ಅವರ ಅನಿರೀಕ್ಷಿತ ಸಾವು ಇಂತಹ ಎಚ್ಚರಗಳನ್ನು ನಮ್ಮಲ್ಲಿ ಹುಟ್ಟುಹಾಕಿದೆ. ಪುನೀತ್ ತಾವು ಇನ್ನಿಲ್ಲವಾದ ಮೇಲೂ ನಮ್ಮನ್ನು ಅಗೋಚರವಾಗಿ ನಿಯಂತ್ರಿಸುತ್ತಿದ್ದಾರೆ. ಇಂತಹ ಒಬ್ಬ ವ್ಯಕ್ತಿಯ ಅಲ್ಪಾಯುಷ್ಯದ ಬದುಕು ಅತ್ಯಂತ ಕಡಿಮೆ ಅವಧಿಯಲ್ಲಿ ಒಂದು ನಾಡಿನ ಜನರನ್ನು ಪ್ರಭಾವಿಸಿದ್ದು ನನ್ನಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಈ ಕಾರಣಕ್ಕಾಗಿ ಪುನೀತ್ ಅವರದು ಒಂದು ಸಾರ್ಥಕ ಬದುಕು.
ಡಾ. ಎ. ಎಸ್. ಪ್ರಭಾಕರ, ಕನ್ನಡ ವಿಶ್ವವಿದ್ಯಾಲಯ ಹಂಪಿ
*
ನಾಗತಿಹಳ್ಳಿ ಚಂದ್ರಶೇಖರ ನೆನಪಿನಾಳದಿಂದ ಪುನೀತ್
ನಾನು ಯುವರತ್ನ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದಾಗ ಅವರಲ್ಲಿ ‘ನಾನೊಂದು ಸಿನಿಮಾವನ್ನು ಮಾಡುತ್ತಿದ್ದೇನೆ ಅದರ ಹಾಡನ್ನು ನೀವೇ ಬಿಡುಗಡೆ ಮಾಡಿಕೊಡಬೇಕು, ಮತ್ತೆ ನಮ್ಮ ಸಿನಿಮಾಕ್ಕೆ ಹಿನ್ನಲೆ ಧ್ವನಿ ಕೊಡಬೇಕೆಂದು’ ಕೇಳಿದೆ. ತಕ್ಷಣವೇ ಒಪ್ಪಿಕೊಂಡು ನಮ್ಮ ಸಿನೇಮಾದ ಹಾಡನ್ನು ಬಿಡುಗಡೆ ಮಾಡಿದರು. ಆ ಸಂದರ್ಭದಲ್ಲಿ ವಸಿಷ್ಠ ಸಿಂಹ, ನಾವೆಲ್ಲ ಇದ್ದೆವು. ಹಿಂದೆ ಹೂಮಳೆ ಸಿನಿಮಾಕ್ಕೆ ರಾಜ್‌ಕುಮಾರ್ ಶೀರ್ಷಿಕೆ ಗೀತೆಯನ್ನು ಹಾಡಿದ್ದರು. ಅದು ವಿಧವಾ ವಿವಾಹ ಕುರಿತಾದ ಚಿತ್ರ ಆಗಿದ್ದರಿಂದ ಅದಕ್ಕೆ ಸಂಭಾವನೆ ತೆಗೆದುಕೊಳ್ಳದೆ ಅವರು ಹಾಡಿದ್ದರು.
ಈಗ ಪುನೀತ್ ಅವರನ್ನು ಕೇಳಿದೆ ‘ಯಾವತ್ತೂ ಬರಬೇಕು’ ಎಂದರು. ಸ್ಟುಡಿಯೊ ಹೆಸರು ಹೇಳಿದೆ, ರೇಣುಕಾಂಬ ಸ್ಟುಡಿಯೋದ ಮೇಲೆ ಕೆ.ಕೆ. ಅವರ ಸ್ಟುಡಿಯೋದಲ್ಲಿ ಹಿನ್ನೆಲೆ ಧ್ವನಿಗೆ ವ್ಯವಸ್ಥೆ ಮಾಡಿದ್ದೆವು. ನಿಗದಿ ಮಾಡಿದ ದಿನ ಬೆಳಗ್ಗೆ ಬಂದೇಬಿಟ್ಟರು. ಇಡೀ ದಿನ ಇದ್ದು ಹಿನ್ನೆಲೆ ಧ್ವನಿ ನೀಡಿದರು. ಅದರಲ್ಲಿ ದೇಶಭಕ್ತಿ ಕುರಿತಂತೆ ಕೆಲವು ಮಾತುಗಳಿವೆ. ಜಲಿಯನ್ ವಾಲಾಭಾಗ್ ಬಗ್ಗೆ, ವಿದುರಾಶ್ವತ್ಥದ ಬಗ್ಗೆ, ದೇಶದ ಸ್ವಾತಂತ್ರ್ಯ ಹೋರಾಟದ ಬಗ್ಗೆ, ಬಲಿದಾನದ ಬಗ್ಗೆ, ಸಂವಿಧಾನದ ಬಗ್ಗೆ ರಾಷ್ಟ್ರಪ್ರೇಮದ ಕುರಿತು ಹೇಳುವ ಸಾಲುಗಳಿವೆ. ಅದು ಸಿನಿಮಾದ ಆಶಯವೂ ಕೂಡ ಎಂದು ಹೇಳಬಹುದು. ಅದಕ್ಕೆ ನನಗೆ ಪುನೀತ್ ರಾಜ್‌ಕುಮಾರ್ ಬೇಕು ಎನ್ನಿಸಿತ್ತು, ಕೇಳಿಕೊಂಡೆ, ಬಂದರು ಹಿನ್ನೆಲೆ ಧ್ವನಿ ನೀಡಿದರು.
ಈ ಹಿನ್ನೆಲೆ ಧ್ವನಿ ನೀಡಿದ್ದಕ್ಕಾಗಿ ಅವರಿಗೆ ನಾನು ಗೌರವ ಸಂಭಾವನೆ ನೀಡಬೇಕಿತ್ತು. ಸಂಭಾವನೆ ನೀಡಲು ನಾನು ಯಾರನ್ನು ಕೇಳಬೇಕು ಎಂದು ಗೊತ್ತಿಲ್ಲದೆ ಅವರಿಗೆ ‘ನೀವು ಎಷ್ಟು ಸಂಭಾವನೆ ಅಪೇಕ್ಷಿಸುತ್ತೀರಿ’ ಎಂದು ಕೇಳಿದೆ. ಅವರು ‘ಒಂದಷ್ಟು ಕನ್ನಡ ಪುಸ್ತಕಗಳನ್ನು ಕೊಡಿ’ ಎಂದರು. ಒಬ್ಬ ನಟ, ದೊಡ್ಡ ನಟರ ಮಗ, ಕನ್ನಡ ಪುಸ್ತಕ ಕೇಳುತ್ತಾರಲ್ಲ ಎಂದು ನನಗೆ ಬಹಳ ಸಂತೋಷವಾಯಿತು. ನಾನು ತೇಜಸ್ವಿ, ಮಾಸ್ತಿ, ಕುವೆಂಪು ಅವರ ಒಂದಿಷ್ಟು ಪುಸ್ತಕಗಳು, ಸರಳವಾದ ಕನ್ನಡ ವ್ಯಾಕರಣ ಗ್ರಂಥಗಳನ್ನು ಕೊಟ್ಟೆ.
ಇದನ್ನೂ ಓದಿ : Travelogue: ಶೆಲ್ಫಿಗೇರುವ ಮುನ್ನ; ‘ಹಲವು ನಾಡು ಹೆಜ್ಜೆ ಹಾಡು’ ಜಯಶ್ರೀ ದೇಶಪಾಂಡೆ ಪ್ರವಾಸ ಕಥನ ಸದ್ಯದಲ್ಲೇ
*
ಯೂತ್ ಐಕಾನ್ ಪುನೀತ್; ಡಾ. ಬರಗೂರು ರಾಮಚಂದ್ರಪ್ಪ
ಮುನಿಕುಮಾರ್ ಸುಮಾರು ಅರವತ್ತು ವರ್ಷಗಳಿಂದ ಡಾ. ರಾಜಕುಮಾರ್ ಅವರ ವೇಷ ಧರಿಸಿ ಸಾವಿರಾರು ಪ್ರದರ್ಶನ ನೀಡಿ ಜ್ಯೂನಿಯರ್ ರಾಜಕುಮಾರ್ ಎಂದು ಕರೆಸಿಕೊಂಡವರು. ಅವರಿಗೀಗ ಎಂಬತ್ತು ವರ್ಷಗಳು ಮೀರಿದ ವಯಸ್ಸು. ಈಗಲೂ ರಾಜಕುಮಾರ್ ಅವರ ಪಾತ್ರ ಪ್ರದರ್ಶನಗಳನ್ನು ಮಾಡುತ್ತಲೇ ಇದ್ದಾರೆ. ಅಶಕ್ತ ಕಲಾವಿದರಿಗಾಗಿ ಕುಂಬಳಗೋಡು ಬಳಿ ಜಮೀನಿನಲ್ಲಿ ಅವರು ಒಂದು ‘ಆಶ್ರಯಧಾಮ’ ಕಟ್ಟಿಸುತ್ತಿದ್ದಾರೆ.
ನನ್ನ ನಿರ್ದೇಶನದ ‘ತಾಯಿ ಕಸ್ತೂರ್ ಗಾಂಧಿ’ ಸಿನಿಮಾಕ್ಕೆ ಇವರ ಆಶ್ರಯಧಾಮದ ಆವರಣದಲ್ಲಿ ‘ವಾರ್ಧಾ ಆಶ್ರಮ’ದ ಸೆಟ್ ಹಾಕಿದ್ದೆವು. ಮುನಿಕುಮಾರ್ ಅವರಿಗೆ ಈ ಸಂಬಂಧ ಗೌರವ ಸಂಭಾವನೆ ಕೊಡಲು ಹೋದಾಗ, ‘ನನಗೆ ಯಾವ ಹಣವೂ ಬೇಡ. ದಯವಿಟ್ಟು ಪುನೀತ್ ರಾಜಕುಮಾರ್ ಅವರನ್ನ ಭೇಟಿಯಾಗಲು ಒಮ್ಮೆ ಅವಕಾಶ ಕಲ್ಪಿಸಿ. ನನ್ನ ಜೀವಮಾನದಲ್ಲಿ ಪುನೀತ್ ಅವರನ್ನು ಒಂದು ಸಾರಿ ಹತ್ತಿರದಿಂದ ನೋಡುವ ಆಸೆ ಅಷ್ಟೇ. ಅವರಿಂದ ಕೂಡ ನಾನು ಏನೂ ಸಹಾಯ ಕೇಳುವುದಿಲ್ಲ’ ಎಂದರು. ಹದಿನೈದು ದಿನಗಳ ಹಿಂದೆ ಪುನೀತ್ ಅವರಿಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದೆ. ಅವರು ‘ಒಂದು ದಿನಾಂಕ ಹೇಳ್ತೇನೆ ಅಣ್ಣ ಅವರು ಮನೆಗೆ ಬರಲಿ ಸತ್ಕಾರ ಮಾಡಿ ಕಳಿಸುತ್ತೇನೆ’ ಎಂದರು. ಆದರೆ ಆ ದಿನಾಂಕ ನಿಗದಿಯಾಗುವುದಕ್ಕೆ ಮುಂಚೆಯೇ ಸಾವೆಂಬ ಸರದಾರ ದಿನಾಂಕವನ್ನು ನಿಗದಿ ಮಾಡಿಬಿಟ್ಟ! ಇಲ್ಲಿ ಗಮನಿಸಬೇಕು, ‘ಯೂತ್ ಐಕಾನ್’ ಎನ್ನಿಸಿಕೊಂಡ ಪುನೀತ್ ಅವರನ್ನು ನೋಡುವ ಹಂಬಲ ಎಂಬತ್ತು ಮೀರಿದ ಹಿರಿಯರಿಗೂ ಯಾಕಿತ್ತು?
(ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : 9353666821)
ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಅನುವಾದಿತ ಕೃತಿ ಇಂದಿನಿಂದ ಲಭ್ಯ
Published On - 1:44 pm, Wed, 16 March 22