The Kashmir Files: ಮೀಟುಗೋಲು; ಕಾಶ್ಮೀರಿ ಶಾಲು ನೇಯುವ ಅವನನ್ನು ಭಯೋತ್ಪಾದಕರು ಯಾಕೆ ಹೊತ್ತೊಯ್ದಿದ್ದರು?

India Pakistan : ಪಾಕಿಸ್ತಾನ ಗೆದ್ದರೆ ಅಲಿಯ ಸ್ನೇಹಿತರು ಅವನ ಮನೆ ಎದುರು ಪಟಾಕಿ ಹಚ್ಚುತ್ತಿದ್ದರು. ಭಾರತ ಗೆದ್ದರೆ ಅವನು ಅವರ ಮನೆಯ ಎದುರು ಪಟಾಕಿ ಹಚ್ಚುತ್ತಿದ್ದ. ಹಾಗೆಂದು ಅವರ ಸ್ನೇಹಕ್ಕೆ ಯಾವ ರೀತಿಯಲ್ಲೂ ಧಕ್ಕೆಯಾಗಿರಲಿಲ್ಲ.

The Kashmir Files: ಮೀಟುಗೋಲು; ಕಾಶ್ಮೀರಿ ಶಾಲು ನೇಯುವ ಅವನನ್ನು ಭಯೋತ್ಪಾದಕರು ಯಾಕೆ ಹೊತ್ತೊಯ್ದಿದ್ದರು?
ಲೇಖಕಿ ನೂತನ ದೋಶೆಟ್ಟಿ
Follow us
ಶ್ರೀದೇವಿ ಕಳಸದ
|

Updated on:Mar 16, 2022 | 10:52 AM

ಮೀಟುಗೋಲು | Meetugoluಒಂದು ವಾರದ ಕಾಶ್ಮೀರ ಪ್ರವಾಸದಲ್ಲಿ ನಮ್ಮ ಟ್ಯಾಕ್ಸಿ ಚಾಲಕ ಅಲಿ. ಅವನ ಚಿಕ್ಕಪ್ಪ ಒಬ್ಬ ಕೇಂದ್ರ ಸರ್ಕಾರದ ಅಧಿಕಾರಿಯಾಗಿದ್ದರು. ಅವರಂತೆಯೇ ತಾನೂ ‘ದರೋಗಾ’ ಆಗಬೇಕೆಂದು ಕನಸು ಕಾಣುತ್ತಿದ್ದ ಅಲಿ ಒಂಭತ್ತನೇ ತರಗತಿಯಲ್ಲಿರುವಾಗ ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ತೀವೃವಾಗಿತ್ತು. ಬೆಳಿಗ್ಗೆ ಶಾಲೆಗೆ ಹೋದ ಮಕ್ಕಳು ಸಂಜೆ ಮನೆಗೆ ಹಿಂದಿರುಗುತ್ತಿರಲಿಲ್ಲ. ಅವರು ಏನಾದರು ಎಂದೂ ತಿಳಿಯುತ್ತಿರಲಿಲ್ಲ. ಹಾಗಾಗಿ ಅವನ ಅಮ್ಮ ಅವನನ್ನು ಹಾಗೂ ಅವನ ತಮ್ಮನನ್ನು ಶಾಲೆ ಬಿಡಿಸಿ ಮನೆಯಲ್ಲಿ ಇರಿಸಿಕೊಂಡಿದ್ದರು. ತನಗೆ ವಿದ್ಯೆ ಇಲ್ಲದ ಕಾರಣ ನಾನು ಈ ಕೆಲಸ ಮಾಡಬೇಕಾಗಿದೆ ಎಂದು ಅಲಿ ಕಣ್ಣೀರಾಗಿದ್ದ. ಅವನ ಒಬ್ಬ ಚಿಕ್ಕಪ್ಪ ಕಾಶ್ಮೀರಿ ನೇಯ್ಗೆ ಕಲೆಯಲ್ಲಿ ಸಿದ್ಧ ಹಸ್ತರು. ಆ ಕಾಲಕ್ಕೇ ಕಾಶ್ಮೀರಿ ಶಾಲಿನ ಕಸೂತಿಗೆ ಒಂದು ಲಕ್ಷ ಪಡೆಯುತ್ತಿದ್ದರಂತೆ! ಅದಕ್ಕಾಗಿ ಅವರ ಹತ್ತಿರ ಹಣವಿರಬಹುದೆಂದು ಭಯೋತ್ಪಾದಕರು ಅವರನ್ನು ಹೊತ್ತೊಯ್ದು ಹಣಕ್ಕೆ ಆಗ್ರಹಿಸಿದ್ದರು. ಅಲಿ ಹೇಳುವಂತೆ ಆ ಕಾಲದಲ್ಲಿ ಜನರ ಬಳಿ ನೂರು ರೂಪಾಯಿಯೂ ಇರುತ್ತಿರಲಿಲ್ಲ.

ಸಿನೆಮಾ : ದಿ ಕಾಶ್ಮೀರ ಫೈಲ್ಸ್ (The Kashmir Files) | ಲೇಖಕಿ : ನೂತನ ದೋಶೆಟ್ಟಿ (Nutan Doshetty

(ಭಾಗ 3)

ಊರಿನವರೆಲ್ಲ ಅವನ ಚಿಕ್ಕಪ್ಪನ ಮೇಲಿನ ಗೌರವದಿಂದಾಗಿ ಹಣ ಸಂಗ್ರಹಿಸಿ ಹತ್ತು ಸಾವಿರವನ್ನು ಕೊಟ್ಟು ಅವರನ್ನು ಬಿಡಿಸಿಕೊಂಡು ಬಂದಿದ್ದರು. ಅಲಿಯ ಬಹುತೇಕ ಓರಗೆಯ ಸಂಬಂಧಿಗಳು, ಸ್ನೇಹಿತರು ಟ್ಯಾಕ್ಸಿ ಚಾಲಕರಾಗಿಯೇ ಸಂಪಾದನೆ ಮಾಡುತ್ತಿದ್ದರು.

ಅಲಿ ಹೇಳಿದ ಒಂದು ಸಂಗತಿ ಬಹಳ ವಿಶೇಷವಾದದ್ದು. ಭಯೋತ್ಪಾದನೆಯ ನಂತರದ ದಿನಗಳಲ್ಲಿ ಕಾಶ್ಮೀರದ ಯುವಜನರಲ್ಲಿ ಭಾರತಪರ ಹಾಗೂ ಭಾರತ ವಿರೋಧಿ ಬಣಗಳಾದವು. ಇದು ಭಾರತ- ಪಾಕಿಸ್ತಾನ ಕ್ರಿಕೆಟ್ ಮ್ಯಾಚಿನ ಹೊತ್ತಿಗೆ ಉಗ್ರವಾಗಿ ಗೋಚರವಾಗುತ್ತಿತ್ತು. ಪಾಕಿಸ್ತಾನ ಗೆದ್ದರೆ ಅಲಿಯ ಸ್ನೇಹಿತರು ಅವನ ಮನೆ ಎದುರು ಪಟಾಕಿ ಹಚ್ಚುತ್ತಿದ್ದರು. ಭಾರತ ಗೆದ್ದರೆ ಅವನು ಅವರ ಮನೆಯ ಎದುರು ಪಟಾಕಿ ಹಚ್ಚುತ್ತಿದ್ದ. ಹಾಗೆಂದು ಅವರ ಸ್ನೇಹಕ್ಕೆ ಯಾವ ರೀತಿಯಲ್ಲೂ ಧಕ್ಕೆಯಾಗಿರಲಿಲ್ಲ.

ಭಾಗ 1 : The Kashmir Files: ಮೀಟುಗೋಲು; ಈಗ ವಿವಾದಗಳು ತಾವಾಗಿಯೇ ಹುಟ್ಟುವುದಿಲ್ಲ, ಹುಟ್ಟಿಸಲಾಗುತ್ತದೆ

ಪ್ರವಾಸದುದ್ದಕ್ಕೂ ತನ್ನ ಬದುಕಿನ ಕಥೆಯನ್ನು ನಮ್ಮೆದುರು ಬಿಚ್ಚಿಟ್ಟ ಅಲಿಯ ಕೋಪವೆಲ್ಲ ಅಲ್ಲಿನ ರಾಜಕಾರಣಿಗಳ ಮೇಲೆಯೇ. ಫಾರೂಕ್ ಅಬ್ದುಲ್ಲಾ ಹಾಗೂ ಅವರ ಮಗನ ಸುಖಕ್ಕೆ ನಾವು ತ್ಯಾಗ ಮಾಡಬೇಕಾಗಿದೆ ಎಂಬುದು ಅಲಿಯ ಅಳಲು. ಅವರು ಮತ್ತು ಕಾಶ್ಮೀರದ ಬೇರೆ ಬೇರೆ ಉಗ್ರಗಾಮಿ ಸಂಘಟನೆಗಳು ತಮ್ಮ ಸ್ವಾರ್ಥಕ್ಕೆ ಜನರನ್ನು ಬಲಿ ಕೊಡುತ್ತಿದ್ದಾರೆ ಎಂದು ತಿರಸ್ಕಾರ ಬೆರೆತ ಕೋಪದಿಂದ ಅಲಿ ಹೇಳುತ್ತಿದ್ದ. ಇಡಿಯ ಕಾಶ್ಮೀರ ಹೊತ್ತಿ ಉರಿದರೂ ಇವರ ಮನೆಗಳಿಗಾಗಲೀ ಇವರಿಗಾಗಲೀ ಏನೂ ಆಗಲಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಸೋನ್ಮಾರ್ಗನಲ್ಲಿ ಕುದುರೆ ಸವಾರಿಗೆ ಹೋಗುವಾಗ ಅಲ್ಲಿನ ಯುವಕರು ಮುಗಿಬೀಳುವುದನ್ನು ನೋಡಬೇಕು. ಎಲ್ಲಿ ಅಂದಿನ ಸವಾರಿ ತಪ್ಪಿ ಹೋಗುವುದೋ ಎಂಬ ಧಾವಂತ ಅವರಲ್ಲಿ ಮನೆ ಮಾಡಿರುತ್ತದೆ. ನಮ್ಮೊಂದಿಗೆ ಕುದುರೆ ಸವಾರಿಗೆ ಬಂದಿದ್ದು ತಂದೆ ಮಗನ ಜೋಡಿ. ಮುಂದಿನ ಬಾರಿ ಬಂದಾಗ ನನಗೆ ನೀನು ತೆಗೆದು ನಮ್ಮ ಫೋಟೋ ಕೊಡು ಎಂದ ಆ ವಯೋವೃದ್ಧರ ಕಣ್ಢೀರು ಅವರ ಹತಾಶ ಬದುಕಿನ ರೂಪಕ. ನಾಲ್ಕಾರು ತಿಂಗಳಲ್ಲಿ ವರ್ಷಕ್ಕೆ ಸಾಕಾಗುವಷ್ಟನ್ನು ದುಡಿಯಬೇಕಾದ ನೈಸರ್ಗಿಕ ಅಡೆತಡೆಯ ಕಾಶ್ಮೀರದ ಬದುಕನ್ನು ನಾವು ಊಹಿಸಲಾರೆವು. ಇದು ನನಗೆ ಕಂಡಿದ್ದ ಕಾಶ್ಮೀರದ ಒಂದು ಮುಖ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 2 : The Kashmir Files: ಮೀಟುಗೋಲು; ಸುಟ್ಟ ಮನೆಗಳು, ಅರೆಬಿದ್ದ ಮನೆಗಳಿಗೆ ಆಗ ತಾನೇ ಸರ್ಕಾರ ಮರಮ್ಮತ್ತು ಮಾಡಿತ್ತು

ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/meetugolu

Published On - 10:27 am, Wed, 16 March 22