ಬಾಕ್ಸ್ ಆಫೀಸ್ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸುನಾಮಿ: 5ನೇ ದಿನಕ್ಕೆ ಅತಿ ಹೆಚ್ಚು ಕಲೆಕ್ಷನ್; ಒಟ್ಟು ಗಳಿಕೆ ಎಷ್ಟು?
The Kashmir Files 5th Day Collection: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ 5ನೇ ದಿನ ಆಗಿರುವ ಗಳಿಕೆಯನ್ನು ‘ಸುನಾಮಿ’ ಎಂದು ಟ್ರೇಡ್ ಅನಾಲಿಸಿಸ್ಟ್ ತರಣ್ ಆದರ್ಶ್ ಅವರು ಬಣ್ಣಿಸಿದ್ದಾರೆ. ಈ ಸಿನಿಮಾದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ..
ದಿನದಿಂದ ದಿನಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾದ ಕಲೆಕ್ಷನ್ ಹೆಚ್ಚುತ್ತಲೇ ಇದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯನ್ನು ಆಧರಿಸಿ ತಯಾರಾದ ಈ ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶಿಸಿದ್ದಾರೆ. ಮೊದಲ ದಿನ ಕೇವಲ 3.5 ಕೋಟಿ ರೂ. ಗಳಿಸಿದ್ದ ಸಿನಿಮಾ ಈಗ ಬರೋಬ್ಬರಿ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗುತ್ತಿದೆ. ಈ ಸಾಧನೆ ಆಗಿರುವುದು ಕೇವಲ 5 ದಿನದಲ್ಲಿ! ದಿನದಿಂದ ದಿನಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಬಾಕ್ಸ್ ಆಫೀಸ್ ಕಲೆಕ್ಷನ್ (The Kashmir Files box office collection) ಹೆಚ್ಚುತ್ತಿದೆ. ಈ ಚಿತ್ರಕ್ಕೆ ಜನರು ಅಭೂತಪೂರ್ವ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ಸಿನಿಮಾಗಳ ಬಿಸ್ನೆಸ್ ಸೂತ್ರಗಳನ್ನೆಲ್ಲ ಈ ಸಿನಿಮಾ ಮುರಿದು ಹಾಕಿದೆ. ಈ ಹಿಂದೆ ಅಬ್ಬರಿಸಿದ್ದ ಅನೇಕ ಸ್ಟಾರ್ ನಟರ ಚಿತ್ರಗಳ ದಾಖಲೆಯಲ್ಲೂ ಮೀರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಮುನ್ನುಗ್ಗುತ್ತಿದೆ. ದೇಶಾದ್ಯಂತ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ ಈ ಚಿತ್ರಕ್ಕೆ ಐದನೇ ದಿನ ಬರೋಬ್ಬರಿ 18 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಶೀಘ್ರಲ್ಲೇ ಸೆಂಚುರಿ ಬಾರಿಸಲಿದೆ.
ಅನುಪಮ್ ಖೇರ್, ಪಲ್ಲವಿ ಜೋಶಿ, ವಿಥುನ್ ಚರ್ಕವರ್ತಿ, ಪುನೀತ್ ಇಸ್ಸಾರ್, ದರ್ಶನ್ ಕುಮಾರ್ ಮುಂತಾದವರು ನಟಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ಚಿತ್ರಕ್ಕೆ ಹೊಸ ಉತ್ತೇಜನ ಸಿಕ್ಕಿತು. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಹರಿದುಬರುತ್ತಿದ್ದಾರೆ. ಹಾಗಾಗಿ ದಿನದಿಂದ ದಿನಕ್ಕೆ ಇದರ ಕಲೆಕ್ಷನ್ ಹೆಚ್ಚಿದೆ.
5ನೇ ದಿನದ ಗಳಿಕೆಯನ್ನು ‘ಸುನಾಮಿ’ ಎಂದು ಟ್ರೇಡ್ ಅನಾಲಿಸಿಸ್ಟ್ ತರಣ್ ಆದರ್ಶ್ ಅವರು ಬಣ್ಣಿಸಿದ್ದಾರೆ. ಯಾಕೆಂದರೆ ಯಾವುದೇ ಸಿನಿಮಾ ಈ ರೀತಿ 5ನೇ ದಿನಕ್ಕೆ ಅತಿ ಹೆಚ್ಚು ಕಲೆಕ್ಷನ್ ಮಾಡುವುದು ತೀರಾ ವಿರಳ. ಮೊದಲ ದಿನ 3.55 ಕೋಟಿ ರೂಪಾಯಿ, ಎರಡನೇ ದಿನ 8.50 ಕೋಟಿ ರೂಪಾಯಿ, ಮೂರನೇ ದಿನ 15.10 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ 15.05 ಕೋಟಿ ರೂಪಾಯಿ ಗಳಿಕೆ ಆಗಿತ್ತು. ಅದೆಲ್ಲವನ್ನೂ ಮೀರಿಸಿ 5ನೇ ದಿನ ಅತಿ ಹೆಚ್ಚು, ಅಂದರೆ 18 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಆ ಬೆಳವಣಿಗೆ ಕಂಡು ಅನೇಕರು ಹುಬ್ಬೇರಿಸಿದ್ದಾರೆ.
#TheKashmirFiles is a TSUNAMI at the #BO… FANTASTIC TRENDING, as footfalls, occupancy, numbers continue to soar… Day 5 higher than *all* previous days… BLOCKBUSTER… Fri 3.55 cr, Sat 8.50 cr, Sun 15.10 cr, Mon 15.05 cr, Tue 18 cr. Total: ₹ 60.20 cr. #India biz. pic.twitter.com/uaDH3ooVsO
— taran adarsh (@taran_adarsh) March 16, 2022
ಅಕ್ಷಯ್ ಕುಮಾರ್, ಕಂಗನಾ ರಣಾವತ್ ಸೇರಿದಂತೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಹಾಡಿ ಹೊಗಳಿಸಿದ್ದಾರೆ. ಕರ್ನಾಟಕ, ಹರಿಯಾಣ ಸೇರಿ ಅನೇಕ ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಕರ್ನಾಟಕದ ಸಚಿವರು ಮತ್ತು ಶಾಸಕರಿಗೆ ಮಂಗಳವಾರ (ಮಾ.15) ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಎಲ್ಲ ಕಾರಣದಿಂದಾಗಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಹೈಪ್ ಪಡೆದುಕೊಂಡಿದೆ.
ಖುದ್ದು ಪ್ರಧಾನಿ ಮೋದಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಬಹಿರಂಗವಾಗಿ ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ. ದೆಹಲಿಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಅವರು ಮಾತನಾಡುತ್ತಾ, ‘ದಿ ಕಾಶ್ಮೀರ್ ಫೈಲ್ಸ್’ ಉತ್ತಮ ಚಿತ್ರ. ಅಂತಹ ಸಿನಿಮಾಗಳು ನಿರ್ಮಾಣವಾಗಬೇಕು ಎಂದು ಹೇಳಿದ್ದಾರೆ. ಜತೆಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಲು ಬಿಜೆಪಿ ಸಂಸದರಿಗೆ ಪ್ರಧಾನಿ ಸಲಹೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ:
ವಿವೇಕ್ ಅಗ್ನಿಹೋತ್ರಿ ಹಿನ್ನೆಲೆ ಏನು? ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕರ ಬಗ್ಗೆ ಇಲ್ಲಿದೆ ಮಾಹಿತಿ..
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಯಶಸ್ಸು: ‘ಏನ್ ಬೇಕಾದ್ರೂ ಆಗಬಹುದು’ ಅಂತ ಮತ್ತೆ ಹೇಳಿದ ಅನುಪಮ್ ಖೇರ್