Woman: ಹಾದಿಯೇ ತೋರಿದ ಹಾದಿ; ಹೆಣ್ಣುಮಗು ಬೇಕು ಎಂದು ಗಂಡ ಆಪರೇಷನ್ ಮಾಡಿಸಲಿಲ್ಲ

Divorce Threat : ‘ಪೊಲೀಸ್ ಠಾಣೆಗೆ ದೂರು ಕೊಟ್ಟಾಗ ಗಂಡನಿಗೆ ಬೈದು ಬುದ್ಧಿ ಹೇಳಿದರು. ಆದರೂ ಕೊಡಲಿಯಿಂದ ಕಡಿಯುತ್ತೇನೆ ಎಂದು ಏರಿ ಬಂದಾಗ ಡಿವೋರ್ಸ್ ಕೊಡುತ್ತೇನೆ ಎಂದೆ. ಆಗ ನಡೆವಳಿಕೆ ಬದಲಾಯಿಸಿಕೊಂಡರು.’ ನಾಗವೇಣಿ

Woman: ಹಾದಿಯೇ ತೋರಿದ ಹಾದಿ; ಹೆಣ್ಣುಮಗು ಬೇಕು ಎಂದು ಗಂಡ ಆಪರೇಷನ್ ಮಾಡಿಸಲಿಲ್ಲ
ನಾಗವೇಣಿ ತನ್ನ ಮಕ್ಕಳೊಂದಿಗೆ
Follow us
ಶ್ರೀದೇವಿ ಕಳಸದ
|

Updated on:Mar 17, 2022 | 12:08 PM

ಹಾದಿಯೇ ತೋರಿದ ಹಾದಿ | Haadiye Torida Haadi : ‘ಯಾವ ಹಬ್ಬಕ್ಕೂ ನಮಗೊಂದು ಜೊತೆ ಒಳ್ಳೆಯ ಬಟ್ಟೆಗಳಿರುತ್ತಿರಲಿಲ್ಲ. ಯಾರಾದರೂ ಕೊಟ್ಟದ್ದನ್ನೇ ತುಂಬಾ ಇಷ್ಟಪಟ್ಟು ಹಾಕಿಕೊಳ್ಳುತ್ತಿದ್ದೆವು. ಹೀಗಿರುವಾಗ, ಮದುವೆಯಾದರೆ ನನ್ನ ಗಂಡ ನನ್ನನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂಬ ಆಸೆಯಿಂದ ಒಪ್ಪಿಕೊಂಡೆ. ಆದರೆ, ಮದುವೆಯ ನಂತರ ಮೇಕೆ ಮೇಯಿಸುವುದು, ಹಸುವಿಗೆ ಹುಲ್ಲು ಕೊಯ್ದು ತಲೆಯ ಮೇಲೆ ಹೊತ್ತುಕೊಂಡು ಬರಬೇಕಿತ್ತು. ಆರು ಜನ ಗಂಡುಮಕ್ಕಳು, ಇಬ್ಬರು ಹೆಣ್ಣುಮಕ್ಕಳ ಕೂಡು ಕುಟುಂಬವದು. ಎಲ್ಲರಿಗೂ ಅಡುಗೆ ಮಾಡಬೇಕಿತ್ತು. ಅರ್ಧ ದಿನವಾದರೂ ರೊಟ್ಟಿ ತಟ್ಟಿ, ಕಾಯಿಪಲ್ಯ ಮಾಡುವುದು ಮುಗಿಯುತ್ತಿರಲಿಲ್ಲ. ಅಷ್ಟೂ ಜನರ ಬಟ್ಟೆಗಳನ್ನು ಕಾಲುವೆ ನೀರಿನಲ್ಲಿ ಒಗೆದು ತರಬೇಕಿತ್ತು. ಒಂದು ದಿನ ಅಡುಗೆ ಮಾಡಿಲ್ಲವೆಂದರೆ ಗಂಡ ಕುಡಿದು ಮನಸ್ಸೋ ಇಚ್ಛೆ ಹೊಡೆಯುತ್ತಿದ್ದರು. ಸಗಣಿಮನೆ, ಎರಡು ದಿನಕ್ಕೊಮ್ಮೆ ಸಾರಿಸಬೇಕಿತ್ತು. ಕುಡಿಯುವ ನೀರಿಗೆ ಒಂದು ಕಿ.ಮೀ. ಕಾಲ್ನಡಿಗೆ. ತಲೆಯಮೇಲೊಂದು ಕಂಕುಳಲ್ಲೊಂದು ಕೊಡ. ದಿನಕ್ಕೆ ಬಳಸುವ, ಕುಡಿಯುವ ನೀರು ಸೇರಿ ಮೂವತ್ತು ಕೊಡ ಹೊರಬೇಕಿತ್ತು’ ಎನ್ನುತ್ತಾರೆ ನಾಗವೇಣಿ. ಜ್ಯೋತಿ ಎಸ್, ಸಿಟೆಝೆನ್ ಜರ್ನಲಿಸ್ಟ್ (Jyothi S)

(ಹಾದಿ 10, ಭಾಗ 2)

ಹೀಗೆ ಎರಡೂವರೆ ವರ್ಷಗಳು ಕಳೆದವು. ಅಷ್ಟುಹೊತ್ತಿಗೆ ನನಗೆ ನಾಲ್ಕು ಸಲ ಗರ್ಭಪಾತವಾಗಿತ್ತು. ಒಂದೇ ಬಿಂದಿಗೆ ಹೊತ್ತುಕೊಂಡುಬಂದರೆ ಬಯ್ಯುತ್ತಿದ್ದರು. ಅದೆಷ್ಟು ಸಲ ಓಡಾಡುತ್ತೀ? ನೀನೇನು ನಾಟಕ ಮಾಡಲು ಬಂದಿದ್ದೀಯಾ, ಸಂಸಾರ ಮಾಡಲು? ನೀರಿದ್ದರೆ ತಾನೆ ಮನೆಗೆಲಸ? ಅಂತೆಲ್ಲ. ಕಷ್ಟ ಸಹಿಸಲಾರದೇ ಒಂದು ದಿನ ನನ್ನ ಗಂಡನಿಗೆ ಹೇಳಿ ಅತ್ತುಕೊಂಡೆ. ನಮ್ಮ ಅಮ್ಮನ ಮನೆಯಲ್ಲೂ ಸುಖವಿಲ್ಲ, ಇಲ್ಲಿಯೂ ಈ ಕಷ್ಟ. ನಾನು ಬದುಕಲ್ಲ ಸತ್ತು ಹೋಗಬೇಕು ಅನ್ನಿಸಿದೆ ಅಂದಾಗ, ನನ್ನ ಗಂಡ ಮಾವನ ಹತ್ತಿರ ಮಾತಾಡಿ ನಾವು ಹೈದರಾಬಾದಿಗೆ ಹೋಗುತ್ತೇವೆ ಎಂದರು. ಹಣ ಸಂಪಾದನೆಯ ಆಸೆಯಿಂದ ನನ್ನ ಗಂಡ ಅಲ್ಲಿಯೂ ಸಹ ಬಂಡೆ ಕೆಲಸಕ್ಕೆ ಕರೆದುಕೊಂಡು ಹೋದರು. ಒಂದು ಟ್ರಿಪ್ ಬಂಡೆಕಲ್ಲು ಹೊಡೆದರೆ 450ರೂಪಾಯಿ ಸಿಗುತ್ತಿತ್ತು.

ಹೈದರಾಬಾದಿನ ಹನುಮಂತನಗರದಲ್ಲಿ ಒಂದು ವರ್ಷ ಹೀಗೆ ಕಷ್ಟಪಟ್ಟೆ. ಒಂದು ವರ್ಷ ಕಳೆಯುವಷ್ಟರಲ್ಲಿ ಮತ್ತೆ ಗರ್ಭಿಣಿಯಾದೆ. ಹಾಗಿದ್ದರೂ ಏಳು ತಿಂಗಳವರೆಗೂ ದುಡಿದೆ. ನಂತರ ಅಮ್ಮನಮನೆಗೆ ಬಿಟ್ಟುಹೋದರು. ಡೆಲಿವರಿ ಆಗಿ ಒಂದು ತಿಂಗಳ ನಂತರ, ಗಂಡುಮಗು ಹುಟ್ಟಿದೆ ಎಂಬ ಕಾರಣಕ್ಕೆ ಗಂಡನಮನೆಯವರು ನೋಡಲು ಬಂದರು. ಎರಡು ತಿಂಗಳ ಬಾಣಂತಿ, ಏನೂ ಕೆಲಸ ಮಾಡುವುದು ಬೇಡ ಅಡುಗೆ ಮಾಡಿಕೊಂಡು ಮನೆಯಲ್ಲಿದ್ದರೆ ಸಾಕು ಎಂದು ಅಮ್ಮನನ್ನು ಒಪ್ಪಿಸಿ ಮತ್ತೆ ಗಂಡನಮನೆಗೆ ಕರೆದೊಯ್ದರು. ಯಾವ ಪಥ್ಯಕ್ಕೂ ಬಿಡದೆ ಮತ್ತೆ ಕೆಲಸಕ್ಕೆ ದೂಡಿಯೇಬಿಟ್ಟರು. ಮತ್ತದೇ ಕುಡಿತ ಹೊಡೆತ ಮುಂದುವರೆಯುತ್ತಲೇ ಇತ್ತು. ಆಗ ಹತ್ತು ತಿಂಗಳ ಮಗುವನ್ನು ಕರೆದುಕೊಂಡು ಹೋಟೆಲ್ಲಿನಲ್ಲಿ ಪಾತ್ರೆ ತೊಳೆಯಲು ಹೋಗುತ್ತಿದ್ದೆ.

ಇದನ್ನೂ ಓದಿ : ಹಾದಿಯೇ ತೋರಿದ ಹಾದಿ; ‘ನನ್ನ ಕೈಗಳಿಲ್ಲದ್ದನ್ನು ಅಮ್ಮನಿಗೆ ಹೇಳಬೇಡಿ’ ಹನ್ನೆರಡರ ಶುಭಜಿತ್ ವೈದ್ಯರಿಗೇ ಸಲಹೆ ನೀಡಿದ್ದ!

ಮಗುವಿಗೆ ವರ್ಷ ತುಂಬುವ ಹೊತ್ತಿಗೆ ಮತ್ತೆ ಜಗಳ, ಕುಡಿತ, ಹೊಡೆತ, ಇಸ್ಪೀಟು. ಸೋತುಬಂದ ಕೋಪವನ್ನು ನನ್ನ ಮೇಲೆ ತೋರಿಸುವುದು ಹೆಚ್ಚಿತು. ಹಿಂಸೆ ತಡೆಯಲಾಗದೆ ಮಗುವನ್ನು ಎತ್ತಿಕೊಂಡು ಅಮ್ಮನ ಮನೆಗೆ ಬಂದುಬಿಟ್ಟೆ. ನನಗೆ ಗಂಡ ಬೇಡಮ್ಮ ಮಗುವನ್ನು ಸಾಕಿಕೊಂಡು ಬದುಕುತ್ತೇನೆ, ನಾನಿನ್ನು ಅಲ್ಲಿಗೆ ಹೋಗಲ್ಲ ಅಂದಾಗ ಅಮ್ಮನೂ ವಿಧಿಯಿಲ್ಲದೆ ಮಗಳು ಕಣ್ಮುಂದೆ ಚೆನ್ನಾಗಿರಲಿ ಎಂದು ಸುಮ್ಮನಾದಳು. ಒಂದು ವರ್ಷ ಅಮ್ಮನ ಮನೆಯಲ್ಲೇ ಇದ್ದೆ, ಆಮೇಲೆ ಬುದ್ಧಿಹೇಳಿ, ಮತ್ತೆ ಗಂಡನ ಮನೆಗೆ ಕಳುಹಿಸಿದಳು. ಮತ್ತದೇ ತೊಂದರೆ ಮುಂದುವರೆದಾಗ ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಟ್ಟುಬಂದೆ. ಗಂಡನಿಗೆ ಬೈದು ಬುದ್ಧಿ ಹೇಳಿದರು. ಆದರೂ ಕೊಡಲಿಯಿಂದ ಕಡಿಯುತ್ತೇನೆ ಎಂದು ಏರಿ ಬರುತ್ತಿದ್ದರು. ಡಿವೋರ್ಸ್ ಕೊಡುತ್ತೇನೆ ಅಂದಾಗ, ಇಲ್ಲ ಇನ್ನು ಹೊಡೆಯುವುದಿಲ್ಲ, ನನಗೆ ಹೆಂಡತಿ ಮಗು ಬೇಕು ಎಂದು ನಡೆವಳಿಕೆ ಬದಲಾಯಿಸಿಕೊಂಡರು. ಎರಡನೇ ಮಗ ಹುಟ್ಟಿದ. ಹೆಣ್ಣುಮಗು ಬೇಕು ಅಂತ ಹಠ ಮಾಡಿ ಆಪರೇಷನ್ ಮಾಡಿಸಲಿಲ್ಲ. ಹೆಣ್ಣುಮಗುವೂ ಹುಟ್ಟಿತು. ಎಂಟು ತಿಂಗಳ ಹೆಣ್ಣುಮಗುವನ್ನು ಎತ್ತಿಕೊಂಡು ಕುಟುಂಬ ಸಮೇತ ಬೆಂಗಳೂರಿಗೆ ಬಂದೆವು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 1 : Woman: ಹಾದಿಯೇ ತೋರಿದ ಹಾದಿ; ಕುರಗೋಡಿನ ನಾಗವೇಣಿ ಬೆಂಗಳೂರಿಗೆ ಬಂದಿದ್ದು ಹೀಗೆ

ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/haadiye-torida-haadi

Published On - 10:43 am, Thu, 17 March 22