The Dark Night : ದಿನಗಣ ಹಗಳಿರುಳುಗಳ ತೂಗುಯ್ಯಾಲೆಯಲ್ಲಿ ತೂಗಿ, ಕಾಲಚಕ್ರದಡಿ ಸಿಲುಕಿ ಉರುಳಿ ಹೋಗುತ್ತವೆ. ಮತ್ತೆಂದೂ ಮರಳಲಾಗದ ಗತವಾಗಿ ಹಿಂದೆ ಸರಿಯುತ್ತವೆ. ಇಂದಿಗೂ ಅಚ್ಚಹಸಿರಾಗಿದೆ ಎಲ್ಲಾ, ಅಳಿಸಬಹುದೇನು ಮೈಯ ಮೇಲಿನ ಮಚ್ಚೆಯನು? ಮನದ ಪುಟಗಳ ಮೇಲೆ ನೆನಪುಗಳ ಚಿಟ್ಟೆಗಳ ಹಚ್ಚೆಯನು? “ಮರೆವು ಎಂಬುದು ಎಂದಾದರೂ ಮಗುಚಿ ಬೀಳುವ ಆಗರವಾದರೆ, ಈ ನೆನಪು ಎಂಬುದು ಅದೆಂದಿಗೂ ಅಲೆಅಲೆಯಾಗಿ ತಾಕೊ ಸಾಗರ”. ಅಂತಹ ಅವೆಷ್ಟೋ ಕ್ಷಣ, ದಿನ, ವರ್ಷಗಳು ಅಚ್ಚಳಿಯದ ನೆನಪುಗಳಾಗಿ, ಅಕ್ಷರಗಳಾಗಿ ನನ್ನ ಡೈರಿಯ ಬದುಕಿನ ಪುಟಗಳಲ್ಲಿ ಜೀವ ಕಳೆದುಕೊಳ್ಳದೆ ಉಸಿರಾಡುತ್ತಿವೆ! ಮತ್ತೆ ನೆನಪು ಕಾಡಿ ಪುಟಗಳನ್ನು ತೆರೆದಾಗ, ಇಂದಿಗಾಗಿ ಅಂದೆಂದೋ ನನಗೆ ನಾನೇ ಬರೆದುಕೊಂಡ ಸುದೀರ್ಘ ಪತ್ರವೊಂದನ್ನು ಓದಿಕೊಂಡ ಅನುಭವವಾಗುತ್ತದೆ. ಮತ್ತೆ ಗತವನ್ನು ವರ್ತಮಾನದಲ್ಲಿ ಬದುಕಿದ ಭಾವ ಮೊದಲಾಗುತ್ತದೆ. ಅಂತಹದ್ದೊಂದು ಕಳೆದ ಇರುಳೊಂದರ ಅನುಭವ ಅಂದಿನ ನನ್ನೆಲ್ಲ ಹುಚ್ಚುತನಕ್ಕೆ ಕನ್ನಡಿ ಹಿಡಿದಾಗ…
ಜಬೀವುಲ್ಲಾ ಎಮ್. ಅಸದ್, ಮೊಳಕಾಲ್ಮೂರು
(ಭಾಗ 1)
ಬಳ್ಳಾರಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳು. ಅಂದಿನ ರಾತ್ರಿ ನನಗಿನ್ನೂ ನೆನಪಿದೆ. ಸುಮಾರು ಹನ್ನೆರಡು ಗಂಟೆಯ ಸಮಯ. ಎಂದಿನಂತೆ ಊಟ ಮುಗಿಸಿ, ಹರಟಿ ತಾರಸಿಯ ಮೇಲೆ ಗೆಳೆಯರೆಲ್ಲ ಮಲಗಿದ್ದರು. ಚಳಿ ಇದ್ದ ಕಾರಣ ಸ್ವೆಟರ್ ಹಾಕಿ, ಆಕಳಿಸುತ್ತ ಆಗತಾನೆ ಹಾಸಿಗೆಗೆ ಮೈ ಚೆಲ್ಲಿದ್ದೆ. ಕಣ್ಣುಗಳಿಗಿನ್ನು ನಿದಿರೆ ಸುಳಿದಿರಲಿಲ್ಲ. ಆದರೆ ಮನಸ್ಸು ಮಾತ್ರ ಚಿಂತನೆಯ ಚಕ್ರತೀರ್ಥದಲ್ಲಿ ಸುತ್ತುತ್ತಿತ್ತು. ಆಗಸದ ಹಕ್ಕಿಯಂತಾಗಿ ಗಿರಕಿ ಹೊಡೆಯುತ್ತಲೇ ಇತ್ತು. ಇದ್ದಕ್ಕಿದ್ದಂತೆ ಅಚಾನಕ್ಕಾಗಿ ನನ್ನೊಳಗಿನಿಂದ ಪ್ರಶ್ನೆಯೊಂದು ಎದ್ದು ನಿಂತಿತು! ನಾನಿನ್ನು ಮಲಗಿಯೇ ಇದ್ದೆ.
“ಈ ಬದುಕಿನಿಂದ ನಿನಗೇನು ಬೇಕು?” ಎಂದು. ಅರೆ… ಇದು ತುಂಬಾ ಸರಳ ಪ್ರಶ್ನೆ, ಚಲೋ… ಉತ್ತರಿಸಿಯೇ ಬಿಡೋಣವೆಂದು ಹೊರಟ ನನಗೆ, ಬದುಕು ಒಂದು ಹೋರಾಟ ಅನ್ನಿಸಲಿಕ್ಕೆ ಶುರುವಾಯಿತು. ಹೌದೇನು? ಬದುಕೆಂದರೆ ಹೋರಾಟವೇನು? ಬದುಕಲಿಕ್ಕೆ ಹೋರಾಡಲೇ ಬೇಕೇ? ಹಾಗಾದರೆ ಸೋಲು ಗೆಲುವಿನ ನಡುವೆ ಹೆಣಗಾಡ ಬೇಕೆ? ಅಸಲು ಹೋರಾಟ ಏತಕ್ಕೆ? ಯಾರೊಂದಿಗೆ? ಯಾವುದರ ಸಲುವಾಗಿ? ಇರುವ ಅಸ್ತಿತ್ವಕ್ಕಾಗಿಯೋ ಅಥವಾ ಇಲ್ಲದ ಅಸ್ತಿತ್ವಕ್ಕಾಗಿಯೋ? ಹೀಗೆ ಒಂದರ ಹಿಂದೊಂದರಂತೆ ಹಿಂಡು ಹಿಂಡಾಗಿ ಶಿಸ್ತಿನ ಸೈನಿಕರಂತೆ ಪ್ರಶ್ನೆಗಳು ಕೋವಿ ಹಿಡಿದು ತಲೆ ಎತ್ತಿ ನಿಂತವು! ಈ ತನಕ, ನನ್ನ ಪ್ರಕಾರ ” ಬದುಕೆಂದರೆ – ಕೋಟಿ ಕೋಟಿ ಅಚ್ಚರಿಗಳು ತುಂಬಿ ತುಳುಕುವ ಈ ಜಗತ್ತೆಂಬ ವಾಸ್ತವದ ನೆಲೆಗಟ್ಟಿನ ಮೇಲೆ, ನಮ್ಮೆಲ್ಲ ಬೇಕು ಬೇಡಗಳ ನಡುವೆ, ನಮಗರಿವಿಲ್ಲದೆಯೇ ಕರ ಹಿಡಿದು ನಡೆಸುವಂತಹ ಒಂದು ಅಪ್ಯಾಯಮಾನವಾದ ಸುಂದರ ಕನಸು” ಎಂದು ನಂಬಿಕೊಂಡಿದ್ದ ನನಗೀಗ, ‘ಬದುಕು ಒಂದು ಹೋರಾಟ’ ಎಂದು ನಂಬಲಿಕ್ಕೆ ಸಾಧ್ಯವಾಗಲಿಲ್ಲ.
ಇದನ್ನೂ ಓದಿ : Awards : ‘ಈ ಹೊತ್ತಿಗೆ’ಯಿಂದ ಕೆ ಶರೀಫಾಗೆ ಕಥಾ ಪ್ರಶಸ್ತಿ, ಮಧುರಾಣಿಗೆ ಕಾವ್ಯ ಪ್ರಶಸ್ತಿ
ಏನೊಂದೂ ತೋಚದೆ ಎದ್ದು ಹೊರನಡೆದೆ. ತಾರಸಿಯ ಅಡಿಗಡಿಗೆ ಕೂತು, ನಿಂತು, ತಡವರಿಸುತ ನಡೆದಾಡಿದೆ, ಎಡವುತಲಿ ಅಲೆದಾಡಿದೆ, ಒಬ್ಬನೆ ಬಡಬಡಿಸಿದೆ. ನನ್ನೊಳಗೆ ಅದು ಯಾರೋ ಚೀರಿಟ್ಟಂತಾಯಿತು. ತಮದೊಳು ನಿಶಾಂತಗೀತೆ ಕೇಳಿದಂತಾಯಿತು. ಅಂಗೈ ಮುಂದೆ ಚಾಚಿದೆ, ಏನೋ ಬೇಕೆನ್ನುವಂತೆ, ಏನನ್ನೋ ಹಿಡಿಯುವವನಂತೆ, ಮತ್ತೇನೋ ಅಂಗೈ ಬೆರಳುಗಳಿಗೆ ಸಿಕ್ಕಿಹಾಕಿಕೊಂಡಂತೆ, ಇನ್ನೇನೋ ಹಿಡಿ ಬಿಡಿಸಿ ಹಾರಿಹೋದಂತೆ… ಹಪಹಪಿಸಿದೆ, ತಲ್ಲಣಿಸಿದೆ, ಹುಡುಕಾಡಿದೆ, ಹಾಗೇ ಗೋಡೆಗೊರಗಿದೆ, ಕುಸಿದು ಬಿದ್ದೆ, ನರಳಿದೆ.
“ಈ ಬದುಕಿನಿಂದ ನನಗೇನು ಬೇಕು?” ಮತ್ತದೆ ಪ್ರಶ್ನೆ ಎದುರಲಿ ನಿಂತು ನಗುತ್ತಿರುವ ಹಾಗಿತ್ತು! ಒಂದು ಕ್ಷಣ ನನಗೂ ನಗಬೇಕನಿಸಿತು, ಕೊನೆಗೂ ಯಾರಿಗೂ ಕೇಳಿಸದಂತೆ ನಕ್ಕು ಬಿಟ್ಟೆ; ಬಹುಶಃ ನನಗೂ ಕೇಳಿಸದಂತೆ!
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಇದನ್ನೂ ಓದಿ : Dr. Veena Shanteshwar‘s Birthday: ಅಪೂರ್ಣಗೊಂಡ ಮಾನವಾನುಭವವನ್ನು ವೀಣಾ ಪೂರ್ಣಗೊಳಿಸಿದ್ದಾರೆ
Published On - 1:01 pm, Wed, 23 February 22