Pandita Ramabai : Vaishaliyaana : ಅತ್ತ ಪುರೋಹಿತಶಾಹಿಗಳ ಇತ್ತ ಪಾದ್ರಿಗಳ ಅಡಿಯಾಳಾಗದ ರಮಾಬಾಯಿ ಇಂದಿಗೂ ಪ್ರಸ್ತುತ

|

Updated on: Jan 22, 2022 | 7:14 AM

Anti Conversion Bill : ‘ಮತಾಂತರವನ್ನು ನಿಷೇಧಿಸುವ ವಿಧೇಯಕಗಳ ಬಗ್ಗೆ ಆವೇಶದಿಂದ ಚರ್ಚೆ ಮಾಡುವಾಗ ನಮಗೇಕೆ ರಮಾಬಾಯಿಯವರು ನೆನಪಾಗುವುದಿಲ್ಲ? ಮಹಿಳಾ ವಿಮೋಚನೆಯ ಪ್ರಶ್ನೆಯೇ ತನಗೆ ಮುಖ್ಯ ಹೊರತು ಹಿಂದೂ ಅಥವಾ ಕ್ರೈಸ್ತ ಧರ್ಮದ ಕುರುತಾದ ಶುಷ್ಕ ಜಿಜ್ಞಾಸೆಯಲ್ಲ ಎಂದು ನಿರ್ಭಿಡೆಯಿಂದ ಸಾರಿದ ಅವರು ನಮಗೇಕೆ ಆದರ್ಶಪ್ರಾಯರಾಗುವುದಿಲ್ಲ?’ ಡಾ. ಕೆ. ಎಸ್. ವೈಶಾಲಿ

Pandita Ramabai : Vaishaliyaana : ಅತ್ತ ಪುರೋಹಿತಶಾಹಿಗಳ ಇತ್ತ ಪಾದ್ರಿಗಳ ಅಡಿಯಾಳಾಗದ ರಮಾಬಾಯಿ ಇಂದಿಗೂ ಪ್ರಸ್ತುತ
Follow us on

ವೈಶಾಲಿಯಾನ | Vaishaliyaana : ರಮಾಬಾಯಿಯವರ ಮತಾಂತರ ಒಂದು ಬಿರುಗಾಳಿಯನ್ನೇ ಎಬ್ಬಿಸಿತ್ತು. ಹಿಂದೂ ಸಂಪ್ರದಾಯವಾದಿಗಳು ಕೆಂಡಾಮಂಡಲರಾಗಿದ್ದರು. ಆಕೆಯ ಬೆಂಬಲಿಗರಾಗಿದ್ದ ಕೆಲವರಿಗೆ ಇದು ಧರ್ಮದ್ರೋಹವೆಂದನಿಸಿತ್ತು. ಮತ್ತೊಂದು ಕಡೆ, ಕ್ರೈಸ್ತ ಧರ್ಮ ಪ್ರಚಾರಕರು ಈ ಬ್ರಾಹ್ಮಣ ಜಾತಿಯ, ಸುಶಿಕ್ಷಿತ, ಸುಸಂಸ್ಕೃತ ಮಹಿಳೆ ಕ್ರೈಸ್ತ ಧರ್ಮ ಸ್ವೀಕರಿಸಿದ್ದರ ಬಗ್ಗೆ ಪುಳಕಿತಗೊಂಡಿದ್ದರು. ಅವರಿಗೆ ಇದೊಂದು ಯಶಸ್ಸಿನ ಮೈಲಿಗಲ್ಲಾಗಿತ್ತು. ಆದರೆ ಬಹಳ ಸ್ವಾರಸ್ಯಕರವಾದ ಸಂಗತಿಯೆಂದರೆ ರಮಾಬಾಯಿಯವರು ತಮ್ಮ ಕ್ರೈಸ್ತ ಧರ್ಮ ಗುರುಗಳು, ಮಾರ್ಗದರ್ಶಕರೊಡನೆ ನಡೆಸಿದ ಪತ್ರಮುಖೇನ ಸಂವಾದಗಳಲ್ಲಿ ಸ್ಪಷ್ಟವಾಗಿ ತಮ್ಮ ನಿಲುವುಗಳನ್ನು ದಾಖಲಿಸಿದ್ದರು. ಹಿಂದೂ ಧರ್ಮದ ಪುರೋಹಿತಶಾಹಿಯ ನೊಗದಿಂದ ಕಳಚಿಕೊಂಡು ಕ್ರೈಸ್ತ ಧರ್ಮ ಸ್ವೀಕರಿಸಿದ ತಾನು ಈಗ ಮತ್ತೆ ಈ ಧರ್ಮದ ಪಾದ್ರಿಗಳು- ಬಿಷಪ್‌ಗಳ ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸಿ ಅವರ ಅಡಿಯಾಳಾಗುವ ಮನಸ್ಥಿತಿಯನ್ನು ಹೊಂದಿಲ್ಲವೆಂದು ಸ್ಪಷ್ಟಪಡಿಸಿದ್ದರು.

ಡಾ. ಕೆ. ಎಸ್. ವೈಶಾಲಿ (Dr. K. S. Vaishali), ಪ್ರಾಧ್ಯಾಪಕಿ, ಹಿಂದೂಸ್ತಾನಿ ಗಾಯಕಿ

*

(ಯಾನ – 2)

‘ಕೋವಿಡ್’ ಸಾಂಕ್ರಾಮಿಕ ಪಿಡುಗಿನ ಬಗ್ಗೆ ಆತಂಕಗೊಂಡು ಸಕಾಲದಲ್ಲಿ ಎರಡು ಬಾರಿ ರೋಗ ನಿರೋಧಕ ಚುಚ್ಚುಮದ್ದನ್ನು ಹಾಕಿಸಿಕೊಂಡಿದ್ದ ನಾನು ಎಲ್ಲ ಮುಂಜಾಗ್ರತೆಗಳನ್ನು ಕರಾರುವಾಕ್ಕಾಗಿ ಪಾಲಿಸಿಯೂ ಕೋವಿಡ್ ಸೋಂಕಿತಳಾದೆ. ರಕ್ತ ಪರೀಕ್ಷೆಯಲ್ಲಿ ನನಗೆ ಕೋವಿಡ್ ಸೋಂಕು ತಗುಲಿದೆಯೆಂದು ದೃಢಪಟ್ಟಾಗ ಬಹಳ ತಳಮಳಗೊಂಡಿದ್ದು ನಿಜವಾದರೂ, ತಕ್ಷಣವೇ ಸಾವರಿಸಿಕೊಂಡು ಚಿಕಿತ್ಸಾ ಕ್ರಮಗಳತ್ತ ನನ್ನ ಧ್ಯಾನ ಹರಿಸಿದೆ. ಇಷ್ಟೆಲ್ಲ ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ವಿಸ್ಮಯಕಾರಿ ಆವಿಷ್ಕಾರಗಳು, ಲಸಿಕೆಗಳು- ಹೀಗೆ ಅನೇಕ ಸೌಲಭ್ಯಗಳು ನಮಗೆ ಇಂದು ದೊರಕಿದ್ದರೂ ಸಹ, ಪೈಪೋಟಿಯಿಂದ ಒಂದರ ಮೇಲೆ ಮತ್ತೊಂದರಂತೆ ಸಾಂಕ್ರಾಮಿಕ ರೋಗಗಳು ನಮ್ಮನ್ನು ಮುತ್ತಿಗೆ ಹಾಕುತ್ತಲೇ ಇವೆ.

ನಮ್ಮ ನಾಗರಿಕತೆಗಳ ಪ್ರಾರಂಭದ ಕಾಲದಿಂದಲೇ ಸಾಂಕ್ರಾಮಿಕ ರೋಗಗಳು ಇಡೀ ಸಮುದಾಯಗಳನ್ನೇ ನಿರ್ನಾಮ ಮಾಡಿದ ಸಂಗತಿಗಳು ನಮಗೆ ಚರಿತ್ರೆಯ ಪುಟಗಳಲ್ಲಿ ಕಂಡುಬರುತ್ತವೆ. ಇವುಗಳನ್ನು ಅತ್ಯಂತ ಧೀಮಂತಿಕೆಯಿಂದ, ಕೆಚ್ಚು, ಅಸಾಮಾನ್ಯ ಧೈರ್ಯ-ವಿವೇಕ- ಮುಂಜಾಗ್ರತಾ ಕ್ರಮಗಳಿಂದ ಎದುರಿಸಿದ ಅನೇಕರ ಉದಾಹರಣೆಗಳೂ ನಮಗೆ ಲಭ್ಯ. ಜ್ವರ, ವಾಕರಿಕೆ, ವಾಂತಿ, ಮೈ-ಕೈ ನೋವು, ತಲೆನೋವಿನಿಂದ ನಾನು ನಿತ್ರಾಣಗೊಂಡಿದ್ದರೂ ಈ ಕೆಲವು ಯೋಚನೆಗಳು ನನ್ನನ್ನು ಕಾಡುತ್ತಲೇ ಇದ್ದವು. ಅಕ್ರಮ ಮತಾಂತರಗಳ ನಿಷೇಧದ ಕುರಿತಾದ ವಿಧೇಯಕದ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನೂ ನಾನು ಗಮನಿಸುತ್ತಿದ್ದೆ. ಹೀಗೆ ನನ್ನ ಆಲೋಚನಾ ಲಹರಿ ಸಾಗುತ್ತಿದ್ದಂತೆಯೇ, ಇವೆರಡಕ್ಕೂ ತಳುಕಿ ಹಾಕಿಕೊಂಡಂತೆ, ನನಗೆ ಪಂಡಿತಾ ರಮಾಬಾಯಿ ಸರಸ್ವತಿಯವರ (1858-1922) ಜೀವನದಲ್ಲಿ ನಡೆದ ಪ್ರಮುಖ ಘಟನೆಗಳ ನೆನಪು ಮರುಕಳಿಸಿತು.

ರಮಾಬಾಯಿಯವರ ಕೃತಿಗಳು

ನಮ್ಮ ವಸಾಹತುಶಾಹಿ ಭಾರತದಲ್ಲಿ, ಮಹಿಳಾ ಸಬಲೀಕರಣ-ವಿಮೋಚನೆಯ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಳೆಯರ ಅಗ್ರಪಂಕ್ತಿಯಲ್ಲಿ ಪಂಡಿತಾ ರಮಾಬಾಯಿ ಸರಸ್ವತಿಯವರ ಹೆಸರು ಚಿರಸ್ಥಾಯಿಯಾಗಿದೆ. ಇದನ್ನು ಅತಿಶಯೋಕ್ತಿಯೆಂದು ಯಾರೂ ಪರಿಗಣಿಸದಿದ್ದರೂ, ಸಮಕಾಲೀನ ಸಂದರ್ಭದಲ್ಲಿ ಪಂಡಿತಾ ರಮಾಬಾಯಿ ಸರಸ್ವತಿಯವರ ಸಾಧನೆ-ಕೊಡುಗೆಗಳ ಬಗ್ಗೆ ಅರಿವಿರುವವರು ವಿರಳವೇ ಎನ್ನುವುದು ವಿಷಾದಕರ ಸಂಗತಿ. ಹತ್ತಾರು ಬಾರಿ ಮರುಮುದ್ರಣಗೊಂಡಿರುವ ಅವರ ಹೃದಯಸ್ಪರ್ಶಿಯಾದ ಅಮೋಘ ಆತ್ಮಚರಿತ್ರೆಯನ್ನು ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಬರೆದ ಪುಸ್ತಕವೆಂದು ಬಿಂಬಿಸಿ, ಅದನ್ನು ಕಡೆಗಣಿಸಿರುವುದು ನಿಜವಾಗಿಯೂ ದುರದೃಷ್ಟಕರ. ಇಂಗ್ಲಿಷ್ ಭಾಷೆಯಲ್ಲಿ ರಮಾಬಾಯಿಯವರು ರಚಿಸಿದ ಕೃತಿ, ಅವರ ಆತ್ಮ ವೃತ್ತಾಂತ (My Testimony) 1907 ರಲ್ಲಿ ಪ್ರಕಟಗೊಂಡಿದ್ದು, ಆಕೆ ತನ್ನ ಜೀವಿತಾವಧಿಯಲ್ಲಿಯೇ ದಂತಕತೆಯಾಗಿ ಹೋಗಿದ್ದರು.

ಈ ಆತ್ಮಚರಿತ್ರೆ ಮರಾಠಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅವರ ಕುರಿತಾದ ಅನೇಕ ಅಧ್ಯಯನಗಳಿಗೆ ಪ್ರೇರಣೆಯಾಗಿತ್ತು. 1880 ಹಾಗೂ 1890ರ ದಶಕಗಳಲ್ಲಿ ದೇಶಾದ್ಯಂತ ಅನೇಕ ವೃತ್ತಪತ್ರಿಕೆಗಳು ಆಕೆಯ ಅನುಪಮ ಸಾಧನೆ, ಪುಣೆಯಲ್ಲಿ ಆಕೆ ಸ್ಥಾಪಿಸಿದ್ದ ವಿಧವಾ ಆಶ್ರಯ ಧಾಮ ‘ಶಾರದಾ ಸದನ’ದ ಸುತ್ತ ಹಬ್ಬಿಕೊಂಡ ವಿವಾದಗಳ ಬಗ್ಗೆ ಸವಿಸ್ತಾರವಾದ ಸಂಪಾದಕೀಯಗಳನ್ನು ಬರೆದಿದ್ದವು. ತನ್ನ ಕೃತಿ ಸ್ತ್ರೀಧರ್ಮ ನೀತಿಯ ಮಾರಾಟದಿಂದ ಬಂದ ಹಣದಿಂದ ರಮಾಬಾಯಿ ಇಂಗ್ಲೆಂಡಿಗೆ ಹೋಗಲು ಟಿಕೆಟ್ಟನ್ನು ಖರೀದಿಸಿದ್ದರು. ಅಮೇರಿಕಾಗೆ 1889ರಲ್ಲಿ ತೆರಳುವ ಮುನ್ನ, ತನ್ನ High Caste Hindu Woman (1888) ಪುಸ್ತಕದ ಮೊದಲ ಮುದ್ರಣದ ಹತ್ತು ಸಾವಿರ ಪ್ರತಿಗಳು ಮಾರಾಟವಾಗಿ ಸಂದಾಯವಾದ ಗೌರವ ಧನದಿಂದ ರಮಾಬಾಯಿ ಅಮೆರಿಕಾ ಪ್ರವಾಸದ ಖರ್ಚನ್ನು ಭರಿಸಿದ್ದರು.

ಮೈಸೂರು ರಾಜರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದ ಅನಂತ ಶಾಸ್ತ್ರಿ ಡೋಂಗ್ರೆಯವರ ಪುತ್ರಿಯಾಗಿ ಜನಿಸಿದ ರಮಾಬಾಯಿ ತಂದೆ- ತಾಯಿ, ಸಹೋದರ- ಸಹೋದರಿಯರೊಡನೆ ದೇಶದಾದ್ಯಂತ ಸಂಚರಿಸಿದರು. ತಂದೆ-ತಾಯಿಯರಿಂದ ಶಿಕ್ಷಣವನ್ನು ಪಡೆದ ರಮಾಬಾಯಿ ಭೀಕರ ಕ್ಷಾಮದಲ್ಲಿ ಅವರನ್ನು ಹಾಗೂ ಅಕ್ಕನನ್ನು ಕಳೆದುಕೊಂಡ ಮೇಲೆ ಸಹೋದರನೊಂದಿಗೆ ಕಲ್ಕತ್ತೆಗೆ ತೆರಳಿದರು. ರಮಾಬಾಯಿಯವರ ತಂದೆ ಸ್ತ್ರೀಯರಿಗೆ ವೇದ- ಉಪನಿಷತ್ತುಗಳ ಅಧ್ಯಯನ ನಿಷಿದ್ಧವಲ್ಲವೆಂಬ ಅಭಿಮತದವರಾಗಿದ್ದರಿಂದ ರಮಾಬಾಯಿ ತಂದೆ- ತಾಯಿಯರಿಂದಲೇ ತರಬೇತಿ ಪಡೆದು, ಬಹಳ ವಿದ್ವತ್ಪೂರ್ಣವಾದ ಉಪನ್ಯಾಸಗಳನ್ನು ನೀಡುವುದರಲ್ಲಿ ಸಿದ್ಧಹಸ್ತರಾಗಿದ್ದರು. ವಿದ್ವಜ್ಜನರ ಅಪಾರ ಮನ್ನಣೆಗೆ ಪಾತ್ರರಾದ ರಮಾಬಾಯಿಯವರಿಗೆ ‘ಪಂಡಿತಾ’ ಎಂಬ ಬಿರುದು- ಪುರಸ್ಕಾರಗಳೂ ಲಭಿಸಿದ್ದವು.

ಮಗಳು ಮನೋರಮಾ ಅವರೊಂದಿಗೆ ರಮಾಬಾಯಿ

ಬಿಪಿನ್ ಬಿಹಾರಿ ದಾಸ್ ಎಂಬ ಯುವಕನನ್ನು ಮದುವೆಯಾದ ರಮಾಬಾಯಿ 1881ರಲ್ಲಿ ಮನೋರಮಾ ಎಂಬ ಹೆಣ್ಣುಮಗುವಿನ ತಾಯಿಯಾದರು. 1882 ರಲ್ಲಿ ರಮಾಬಾಯಿಯ ಪತಿ ಕಾಲರಾ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿ ಅಸುನೀಗಿದರು. ಪುಟ್ಟ ಮಗುವಿನೊಡನೆ ಪುಣೆಗೆ ಮರಳಿದ ರಮಾಬಾಯಿ ವಿಧವೆಯರಿಗಾಗಿ ಒಂದು ಆಶ್ರಯಧಾಮವನ್ನು ನಿರ್ಮಿಸಲು ಬಯಸಿದರು. ಹಿಂದೂ ಸನಾತನಿಗಳ ಮಹಿಳಾ ವಿರೋಧಿ, ಕಂದಾಚಾರದ ಧೋರಣೆಯಿಂದ ರೋಸಿಹೋಗಿದ್ದ ರಮಾಬಾಯಿ 1883ರಲ್ಲಿ ಇಂಗ್ಲೆಂಡಿಗೆ ಹೋದವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಇಲ್ಲಿ ನಾನು ಇದನ್ನು ಏಕೆ ಪ್ರಸ್ತಾಪ ಮಾಡುತ್ತಿದ್ದೇನೆಂದರೆ ರಮಾಬಾಯಿಯವರು ಮತಾಂತರದ ಮೂಲಕ ಒಂದು ಸಂದೇಶವನ್ನು ಸಮುದಾಯಕ್ಕೆ ರವಾನಿಸಿದ್ದರು. ಅದು ನಮ್ಮ ವರ್ತಮಾನದ ಕಾಲಕ್ಕೆ ತುಂಬಾ ಪ್ರಸ್ತುತತೆಯನ್ನು ಹೊಂದಿದೆ.

ಅದು ಹಾಗಿರಲಿ, ರಮಾಬಾಯಿಯವರ ವಿಷಯಕ್ಕೆ ಮತ್ತೆ ಬರುವುದಾದರೆ, ಅವರ ಮತಾಂತರ ಒಂದು ಬಿರುಗಾಳಿಯನ್ನೇ ಎಬ್ಬಿಸಿತ್ತು. ಹಿಂದೂ ಸಂಪ್ರದಾಯವಾದಿಗಳು ಕೆಂಡಾಮಂಡಲರಾಗಿದ್ದರು. ಆಕೆಯ ಬೆಂಬಲಿಗರಾಗಿದ್ದ ಕೆಲವರಿಗೆ ಇದು ಧರ್ಮದ್ರೋಹವೆಂದನಿಸಿತ್ತು. ಮತ್ತೊಂದು ಕಡೆ, ಕ್ರೈಸ್ತ ಧರ್ಮ ಪ್ರಚಾರಕರು ಈ ಬ್ರಾಹ್ಮಣ ಜಾತಿಯ, ಸುಶಿಕ್ಷಿತ, ಸುಸಂಸ್ಕೃತ ಮಹಿಳೆ ಕ್ರೈಸ್ತ ಧರ್ಮ ಸ್ವೀಕರಿಸಿದ್ದರ ಬಗ್ಗೆ ಪುಳಕಿತಗೊಂಡಿದ್ದರು. ಅವರಿಗೆ ಇದೊಂದು ಯಶಸ್ಸಿನ ಮೈಲಿಗಲ್ಲಾಗಿತ್ತು. ಆದರೆ ಬಹಳ ಸ್ವಾರಸ್ಯಕರವಾದ ಸಂಗತಿಯೆಂದರೆ ರಮಾಬಾಯಿಯವರು ತಮ್ಮ ಕ್ರೈಸ್ತ ಧರ್ಮ ಗುರುಗಳು, ಮಾರ್ಗದರ್ಶಕರೊಡನೆ ನಡೆಸಿದ ಪತ್ರಮುಖೇನ ಸಂವಾದಗಳಲ್ಲಿ ಸ್ಪಷ್ಟವಾಗಿ ತಮ್ಮ ನಿಲುವುಗಳನ್ನು ದಾಖಲಿಸಿದ್ದರು. ಹಿಂದೂ ಧರ್ಮದ ಪುರೋಹಿತಶಾಹಿಯ ನೊಗದಿಂದ ಕಳಚಿಕೊಂಡು ಕ್ರೈಸ್ತ ಧರ್ಮ ಸ್ವೀಕರಿಸಿದ ತಾನು ಈಗ ಮತ್ತೆ ಈ ಧರ್ಮದ ಪಾದ್ರಿಗಳು- ಬಿಷಪ್‌ಗಳ ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸಿ ಅವರ ಅಡಿಯಾಳಾಗುವ ಮನಸ್ಥಿತಿಯನ್ನು ಹೊಂದಿಲ್ಲವೆಂದು ಸ್ಪಷ್ಟಪಡಿಸಿದ್ದರು.

ಲೋಕಮಾನ್ಯ ಬಾಲಗಂಗಾಧರ ತಿಲಕ್‌ರಂಥಾ ರಾಷ್ಟ್ರೀಯ ನಾಯಕರ ಟೀಕಾಪ್ರಹಾರವನ್ನೇ ಧೃತಿಗೆಡದೆ ಎದುರಿಸಿದ ರಮಾಬಾಯಿ ಅನೇಕ ಹುರುಳಿಲ್ಲದ ಆರೋಪಗಳನ್ನು- ದೂಷಣೆಗಳನ್ನು ಎದುರಿಸಬೇಕಾಯಿತು. ಮಹಿಳಾ ವಿಮೋಚನೆಯ ಕನಸನ್ನು ಕಂಡಿದ್ದ ರಮಾಬಾಯಿ ತಮ್ಮ ಅಮೆರಿಕ ಪ್ರವಾಸದ ಸಮಯದಲ್ಲಿ ಭಾರತದ ಪ್ರಪ್ರಥಮ ವೈದ್ಯೆಯಾದ ತನ್ನ ಸೋದರ ಸಂಬಂಧಿ ಆನಂದಿಬಾಯಿ ಜೋಷಿಯ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬಾಲ್ಯವಿವಾಹವನ್ನು ಅಸಿಂಧುವೆಂದು ಪರಿಗಣಿಸಬೇಕೆಂದು ರಾಣಿ ವಿಕ್ಟೋರಿಯಾಳಿಗೆ ಬಹಿರಂಗ ಪತ್ರ ಬರೆದು ವೈದ್ಯಕೀಯ ವ್ಯಾಸಂಗವನ್ನೂ ಪೂರೈಸಿದ ಮತ್ತೋರ್ವ ಅಸಾಮಾನ್ಯ ಮಹಿಳೆ ರುಕ್ಮಾಬಾಯಿಯವರನ್ನು ದಿಟ್ಟತನದಿಂದ ಬೆಂಬಲಿಸಿದ್ದರು. ಇದಕ್ಕಾಗಿ ಆಕೆ ತಿಲಕರಿಂದ ಹಿಡಿದು ಹಲವಾರು ರಾಷ್ಟ್ರೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಸಾವಿರಾರು ಬಾಲವಿಧವೆಯರು, ಮಕ್ಕಳ ಉನ್ನತಿಗಾಗಿ ಶ್ರಮಿಸಿದ ರಮಾಬಾಯಿ 

ಲಿಂಗ ಸಮಾನತೆ ಮತ್ತು ಮಹಿಳಾ ಸ್ವಾತಂತ್ರ್ಯದ ಬಗ್ಗೆ ಅಪಾರ ನಿಷ್ಠೆ ಹೊಂದಿದ್ದ ರಮಾಬಾಯಿ ಸನಾತನ ಹಿಂದೂ ಸಂಪ್ರದಾಯವಾದಿಗಳು ಹಾಗೂ ಕ್ರೈಸ್ತ ಧರ್ಮ ಪ್ರಚಾರಕರು – ಹೀಗೆ ಎರಡೂ ಬಣಗಳ ಪುರುಷ ಪ್ರಧಾನ ಧೋರಣೆಯಿಂದ ಬೇಸತ್ತಿದ್ದರು. ತಾವು ನಿರ್ಮಿಸಿದ ‘ಶಾರದಾ ಸದನ’ವನ್ನು ತಿಲಕರು ಮಿಷನರಿ ಶಾಲೆಗಳ ಮಾದರಿಯ ಕೆಟ್ಟ ಶಾಲೆಯೆಂದು ಖಂಡಿಸಿ ಕಿಡಿ ಕಾರಿದಾಗ , ರಮಾಬಾಯಿ ಕಂಗೆಡದೆ ಬಹಳ ಸಂಯಮದಿಂದ ತಮ್ಮ ಘನತೆಯನ್ನು ಕಾಪಾಡಿಕೊಂಡಿದ್ದರು. “ಕ್ರೈಸ್ತ ಧರ್ಮ ಪ್ರಚಾರಕರಿಗೆ ನನ್ನ ಧರ್ಮ ನಿರಪೇಕ್ಷಿತ ನಿಲುವುಗಳಿಗೆ ಬದ್ಧವಾದ ಶಿಕ್ಷಣದ ವೈಖರಿ ರುಚಿಸುವುದಿಲ್ಲ. ಹಿಂದೂ ಸಂಪ್ರದಾಯವಾದಿಗಳಿಗೆ, ಧರ್ಮ ಭ್ರಷ್ಟಳಾಗಿ ಕ್ರೈಸ್ತ  ಧರ್ಮಕ್ಕೆ ಶರಣುಹೋದ ಮಹಿಳೆಯೊಬ್ಬಳು ಅವರ ಹೆಣ್ಣುಮಕ್ಕಳ ಶಿಕ್ಷಕಿಯಾಗುವುದು ಇಷ್ಟವಿಲ್ಲ” ಎಂದು ತಮ್ಮ ‘ಅತ್ತ ದರಿ ಇತ್ತ ಪುಲಿ’ ಎಂಬ ಸಂಕಟವನ್ನು ಬಹಿರಂಗವಾಗಿ ತೋಡಿಕೊಂಡಿದ್ದರು.

ಮತಾಂತರವನ್ನು ನಿಷೇಧಿಸುವ ವಿಧೇಯಕಗಳ ಬಗ್ಗೆ ಆವೇಶದಿಂದ ಚರ್ಚೆ ಮಾಡುವಾಗ ನಮಗೇಕೆ ಪಂಡಿತಾ ರಮಾಬಾಯಿಯವರು ನೆನಪಾಗುವುದಿಲ್ಲ? ಮಹಿಳಾ ವಿಮೋಚನೆಯ ಪ್ರಶ್ನೆಯೇ ತನಗೆ ಮುಖ್ಯವೇ ಹೊರತು ಹಿಂದೂ ಅಥವಾ ಕ್ರೈಸ್ತ ಧರ್ಮದ ಕುರುತಾದ ಶುಷ್ಕ ಜಿಜ್ಞಾಸೆಯಲ್ಲ ಎಂದು ನಿರ್ಭಿಡೆಯಿಂದ ಸಾರಿದ ರಮಾಬಾಯಿ ನಮಗೇಕೆ ಆದರ್ಶಪ್ರಾಯರಾಗುವುದಿಲ್ಲ? ಅವರ ಆತ್ಮಕಥೆಯನ್ನು ಓದಿದಾಗ ಅನೇಕ ಸೂಕ್ಷ್ಮವಾದ ಒಳನೋಟಗಳು ನಮಗೆ ಮತಾಂತರದ ಬಗ್ಗೆ ಲಭಿಸಬಹುದಲ್ಲವೇ ? ಇವುಗಳೊಡನೆ ಮುಖಾಮುಖಿಯಾಗಬಲ್ಲ ವಿವೇಚನೆಯನ್ನು ನಾವೇಕೆ ಕಳೆದುಕೊಳ್ಳುತ್ತಿದ್ದೇವೆ ?

ಈಗ ನಾನು ಮೊದಲು ಪ್ರಸ್ತಾಪಿಸಿದ ಸಾಂಕ್ರಾಮಿಕ ಪಿಡುಗುಗಳ ಬಗ್ಗೆಯೂ ತುಸು ಹೇಳುವುದಿದೆ. ಇಲ್ಲೂ ಪಂಡಿತಾ ರಮಾಬಾಯಿಯವರ ಉದಾಹರಣೆ ಬಹಳ ಪಸ್ತುತವೆನಿಸುತ್ತದೆ. ಪ್ರಸಿದ್ಧ ಸ್ತ್ರೀವಾದಿ ಚಿಂತಕಿ ಸೂಸಿ ಥಾರುರವರು ಈ ಸಂವಾದವನ್ನು ತಮ್ಮ Women Writing In India : 600 B.C to the Present ಎಂಬ ಪುಸ್ತಕದಲ್ಲಿ ಮನೋಜ್ಞವಾಗಿ ವಿವರಿಸಿದ್ದಾರೆ. ಆಗಿನ ಮುಂಬೈ ಪ್ರೆಸಿಡೆನ್ಸಿಯ ಗವರ್ನರ್ ಆಗಿದ್ದ ಬ್ರಿಟಿಷ್ ಅಧಿಕಾರಿ ಲಾರ್ಡ್ ಸ್ಯಾಂಡ್‌ಹರ್ಸ್ಟ್ ಹಾಗೂ ರಮಾಬಾಯಿಯವರ ನಡುವೆ ಒಂದು ಸ್ವಾರಸ್ಯಕರವಾದ ಸಂವಾದ ನಡೆಯಿತು. ಆದರೆ ಅದು ನಡೆದದ್ದು ಒಂದು ದಿನಪತ್ರಿಕೆಯ ಅಂಕಣದಲ್ಲಿ. 1897ರಲ್ಲಿ ಪುಣೆ ನಗರದಲ್ಲಿ ಪ್ಲೇಗ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿತ್ತು. ಪ್ಲೇಗ್ ಭೀಕರ ಸಾಂಕ್ರಾಮಿಕ ಪಿಡುಗಾಗಿದ್ದು ಜನರು ಭಯಭೀತರಾಗಿದ್ದರು. ಚಿಕಿತ್ಸೆ ನೀಡುವ ಸಲುವಾಗಿ ಒಂದಷ್ಟು ಭಾರತೀಯ ಮಹಿಳೆಯರನ್ನು ಊರ ಹೊರಗೆ ಪ್ರತ್ಯೇಕವಾಗಿ ಬ್ರಿಟಿಷ್ ಸರ್ಕಾರದ ವತಿಯಿಂದ ಸ್ಥಾಪಿಸಲಾಗಿದ್ದ ಚಿಕಿತ್ಸಾ ಶಿಬಿರದಲ್ಲಿ ಇರಿಸಲಾಗಿತ್ತು. ಆ ಮಹಿಳೆಯರಿಗೆ ಪುರುಷ ವೈದ್ಯರು ತಪಾಸಣೆ ಮಾಡಿದ ರೀತಿಯನ್ನು ಖಂಡಿಸಿ, ರಮಾಬಾಯಿಯವರು ‘ಬಾಂಬೆ ಗಾರ್ಡಿಯನ್’ ಪತ್ರಿಕೆಯ ಸಂಪಾದಕರಿಗೆ ಸುದೀರ್ಘವಾದ ಪತ್ರವನ್ನು ಬರೆದರು. ಅವರು ತಮ್ಮ ಪತ್ರದಲ್ಲಿ “ಪ್ಲೇಗ್ ಕಮಿಟಿ ಹಾಗೂ ಬ್ರಿಟಿಷ್ ಸರ್ಕಾರ ಭಾರತೀಯ ಮಹಿಳೆಯರೊಡನೆಯೂ ಬ್ರಿಟಿಷ್ ಮಹಿಳೆಯರೊಡನೆ ನಡೆದುಕೊಳ್ಳುವಂತೆ ಸಭ್ಯತೆಯಿಂದ, ಗೌರವದಿಂದ ನಡೆದುಕೊಳ್ಳಬೇಕಾಗಿತ್ತು. ಭಾರತೀಯ ಮಹಿಳೆಯರೊಡನೆ ಸೌಜನ್ಯರಹಿತ, ಪಕ್ಷಪಾತದಿಂದ ಕೂಡಿದ ನಡವಳಿಕೆ ಏಕೆ? ಅವರು ಅದಕ್ಕೆ ಅರ್ಹರಲ್ಲವೇ?” ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದರು.

ಕ್ರೈಸ್ತ ಮಿಷನರಿಯೊಂದರ ಸದಸ್ಯರೊಂದಿಗೆ ರಮಾಬಾಯಿ

ಇದರ ಬಗ್ಗೆ ಬ್ರಿಟಿಷ್ ಸಂಸತ್ತಿನಲ್ಲಿ ಕೂಡ ಚರ್ಚೆಯಾಗಿತ್ತು. ಆಗ ಲಾರ್ಡ್ ಸ್ಯಾಂಡ್‌ಹರ್ಸ್ಟ್ ರಮಾಬಾಯಿಯವರ ಆರೋಪಗಳೆಲ್ಲ ನಿರಾಧಾರವಾದ, ಹುರುಳಿಲ್ಲದ ಆಕ್ಷೇಪಣೆಗಳೆಂದು ಅವುಗಳನ್ನು ಅಲ್ಲಗಳೆದಿದ್ದರು. ಇದಕ್ಕೆ ರಮಾಬಾಯಿವರೇನೂ ಮೌನವಾಗಿ ಬಿಡಲಿಲ್ಲ. ಬದಲಿಗೆ ಅವರು ‘ಬಾಂಬೆ ಗಾರ್ಡಿಯನ್’ ಪತ್ರಿಕೆಗೆ ಮತ್ತೊಂದು ಖಾರವಾದ ಪತ್ರವನ್ನು ಬರೆದರು. ತಮ್ಮ ಪತ್ರದಲ್ಲಿ ಅವರು “ನಿರಾಧಾರವಾದ ಹೇಳಿಕೆಗಳನ್ನು ಪೌರ್ವಾತ್ಯ ದೇಶಗಳ ಜನಗಳೇ ನೀಡುತ್ತಾರೆಂಬುದು ಒಂದು ತಪ್ಪು ತಿಳಿವಳಿಕೆ. ಪಾಶ್ಚಿಮಾತ್ಯರೂ ಉದಾಹರಣೆಗೆ ಲಾರ್ಡ್ ಸ್ಯಾಂಡ್‌ಹರ್ಸ್ಟ್​ ಅವರೂ ಇಂಥಾ ಹುರುಳಿಲ್ಲದ ಹೇಳಿಕೆಯನ್ನು ನನ್ನ ಬಗ್ಗೆ ನೀಡಿದ್ದಾರೆ. ಆತ್ಮಸಾಕ್ಷಿಯುಳ್ಳ ಕ್ರೈಸ್ತ ಸಮುದಾಯ ಅವರ ಹೇಳಿಕೆಯನ್ನೂ ಪರಾಂಬರಿಸಿ ನೋಡಲಿ” ಎಂದು ಪ್ರತಿಕ್ರಿಯೆ ನೀಡಿದ್ದರು. ಇದರಿಂದ ಸಿಸ್ಟರ್ ಜೆರಾಲ್ಡಿನ್ ಮತ್ತು ಕೆಲವು ಕ್ರೈಸ್ತ ಸನ್ಯಾಸಿನಿಯರು ತಮ್ಮ ಬಗ್ಗೆ ಕ್ಷುದ್ರರಾದ ಬಗ್ಗೆ ರಮಾಬಾಯಿಯವರೇನೂ ತಲೆ ಕೆಡಿಸಿಕೊಳ್ಳಲಿಲ್ಲ.

ಪಂಡಿತಾ ರಮಾಬಾಯಿಯವರಿಗಿದ್ದ ಪ್ರಾಮಾಣಿಕತೆ, ಸತ್ಯ ನಿಷ್ಠುರತೆ, ಅವರ ಪಾರದರ್ಶಕತೆ, ಧರ್ಮ ನಿರಪೇಕ್ಷಿತ, ವಸ್ತು ನಿಷ್ಠವಾದ ವಿಮರ್ಶಾತ್ಮಕ ನಿಲುವುಗಳು ನಮಗೆ ಮತಾಂತರದ ಬಗ್ಗೆ ನಡೆಯುತ್ತಿರುವ ವಾದ- ಪ್ರತಿವಾದಗಳ ಸಮಕಾಲೀನ ಸನ್ನಿವೇಶದಲ್ಲಿ ಅತ್ಯಂತ ಪ್ರಸ್ತುತವೆಂದು ನಾನು ಮನಃಪೂರ್ವಕವಾಗಿ ಹೇಳಬಯಸುತ್ತೇನೆ.

(ಮುಂದಿನ ಯಾನ : 5.2.2022)

ಹಿಂದಿನ ಯಾನ : Vaishaliyaana : ವೈಶಾಲಿಯಾನ : ಮೂರನೇ ಅಲೆಯ ಹೊತ್ತಿನಲ್ಲಿ ನೆನಪಾಗುತ್ತಿರುವ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳು

Published On - 6:00 am, Sat, 22 January 22