World Milk Day 2022 : ‘‘ಅಜ್ಜೀ, ನಮ್ಮ ಶಾಲೆಯಲ್ಲಿ ಇವೊತ್ತು ಒಂದು ಕೌ ಬಂದಿತ್ತು… ನಮಗೆ ಮಿಲ್ಕ್ ಬಗ್ಗೆ ಲೆಸನ್ ಇದೆಯಲ್ಲ… ಅದಕ್ಕೇ ತಂದಿದ್ರು. ಅದನ್ನ ನಾ ಟಚ್ ಮಾಡ್ದೆ. ಹೌ ನೈಸ್! ನಮ್ಮ ಟೀಚರ್ ಹೇಳಿದ್ರು, ಇದು ನಮಗೆ ಹಾಲು ಕೊಡ್ತದಂತೆ! ಹೌದಾ? ನಾ ಇಷ್ಟು ದಿನ ಕಾಸ್ಕೋದಲ್ಲಿ ಸಿಗ್ತದೇಂತ ತಿಳ್ಕೊಂಡಿದ್ದೆ!’’ ಆರ್ಕೇಡಿಯಾದ ಶಾಲೆಯಲ್ಲಿ ಮೊದಲನೆ ಕ್ಲಾಸಿನಲ್ಲಿದ್ದ ನನ್ನ ಪುಟ್ಟ ಮೊಮ್ಮಗಳು ಅರೆಬರೆ ಕನ್ನಡದಲ್ಲಿ ಹೇಳಿದಾಗ ನನಗೆ ನಗೆ ಉಕ್ಕಿಬಂದಿತ್ತು. ಇದೇ ತಿಳಿವಳಿಕೆಯನ್ನೇ ನಮ್ಮ ಮೆಟ್ರೋ ಸಿಟಿಗಳಲ್ಲಿ ಬೆಳೆಯುತ್ತಿರುವ ಮಕ್ಕಳಲ್ಲೂ ನಾವು ಕಾಣುತ್ತೇವೆ. ಹಾಲು ಎಲ್ಲಿಂದ ದೊರೆಯುತ್ತದೆ ಎಂದು ಕೇಳಿದರೆ ಮಕ್ಕಳು ನೇರವಾಗಿ ಹಾಲಿನ ಬೂತು ಎಂದೇ ಉತ್ತರಿಸುತ್ತಾರೆ! ‘ಇಂದು ವಿಶ್ವ ಹಾಲು ದಿನ. ಅದಕ್ಕೇ ಇವಳ ಶಾಲೆಗೆ ಹಸು ತಂದು ಪ್ರಾಕ್ಟಿಕಲ್ ಪಾಠ ಮಾಡಿದ್ದಾರೆ!’ ಎಂದು ಮಗಳು ಹೇಳಿದಾಗ ನನಗೆ ಬಾಲ್ಯದ ಆ ದಿನಗಳು ನೆನಪಾಗಿದ್ದವು.
ಮಾಲತಿ ಮುದಕವಿ (Malati Mudakavi)
“ಗಂಗೆ ಬಾರೆ ಗೌರಿ ಬಾರೆ ತುಂಗಭದ್ರೆ ನೀನು ಬಾರೆ
ಕಾಮಧೇನು ನೀನು ಬಾರೆಂದು ಪ್ರೇಮದಿಂದಲಿ ಕರೆದನು..”
ಹಾಲು ಎಂದಾಗಲೊಮ್ಮೆ ನಮಗೆ ನೆನಪಾಗುವುದು ಈ ಗೀತೆ, ಈ ಗೀತೆಯೊಂದಿಗೆ ಬೆಸೆದ ಆ ಚಿತ್ರ! ನೂರಾರು ಹಸುಗಳು… ಅವು ಮನೆಗೆ ಬರುವಾಗಿನ ಆ ಗಂಟೆಗಳ ಕೋರಸ್ ನಿನಾದ.. ಅವುಗಳ ಗೊರಸಿನಿಂದ ಮುಗಿಲು ಮುಟ್ಟುವ ಧೂಳು. ಅಂಬಾ… ಎಂಬ ಆ ಕರೆ. ತಮ್ಮ ತಮ್ಮ ಮನೆಗಳು ಬಂದುದನ್ನು ಗುರುತಿಸಿ ಅಲ್ಲಿಗೇ ನೇರವಾಗಿ ಹೋಗುವ ದೃಶ್ಶವು ಎಂಥ ಸುಂದರ! ಥೇಟು ಶಾಲೆ ಮುಗಿದ ನಂತರದ ಮಗು ಮನೆಗೆ ಬರುವ ಸಂಭ್ರಮದಂತೆಯೇ.
ಬೆಳಿಗ್ಗೆ ನಾಲ್ಕೂವರೆಗೇ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿಕೊಂಡು ಗೋಶಾಲೆಗೆ ಹೋಗಿ ಹಸುಗಳನ್ನು ಹೆಸರುಗೊಂಡು ಕರೆಯುತ್ತ ಅವುಗಳ ಗಂಗೆದೊಗಲನ್ನು ನೀವುತ್ತ ಅಚ್ಛೆ ಮಾಡಿ, ನಂತರ ಸಗಣಿ ಕಸ ಬಳೆದು, ಅವುಗಳಿಗೆ ಮೇವು ಹಾಕಿ, ನೀರು ಇಟ್ಟು, ನಂತರ ಅವುಗಳ ಕೆಚ್ಚಲು ತೊಳೆದು ಸ್ವಚ್ಛವಾಗಿ ತೊಳೆದ ಮಿರಿ ಮಿರಿ ಮಿಂಚುವ ದೊಡ್ಡ ಹಿತ್ತಾಳೆಯ ಗುಂಡಿಯಲ್ಲಿ ಹಾಲು ಹಿಂಡುವ ಸಂಭ್ರಮಕ್ಕೆ ಅಣಿಯಾಗುವ ಹೆಣ್ಣುಮಕ್ಕಳು…
ಮಾಲತಿ ಮುದಕವಿ ಬರೆದ ಇದನ್ನೂ ಓದಿ : Love : ಏಸೊಂದು ಮುದವಿತ್ತು ; ಮಾಮಾ ಮಾಮಿ ಸಕ್ಕಾಸರಿಗೀ ಹಗ್ಗಾಮುರಿಗೀ
ಮೊದಲು ಕರುವನ್ನು ಕೆಚ್ಚಲಿಗೆ ಬಿಟ್ಟು ಅವು ಕೆಲ ಗುಟುಕು ಕುಡಿದ ನಂತರವೇ ಹಾಲು ಕರೆಯುವ ಪ್ರಕ್ರಿಯೆ. ಗುಂಡಿ ತುಂಬುತ್ತ ಬಂದಂತೆ ತಾಯಿ ಹೃದಯದ ತುಡಿತದ ಅರಿವಾಗಿ ಮತ್ತೆ ತಾಯ ಮೊಲೆಗೆ ಕರುವನ್ನು ತಂದು ಬಿಟ್ಟನಂತರ ದಗದಗ ಉರಿಯುವ ಒಲೆಯಲ್ಲಿ ಹಾಲು ಕಾಯಿಸಿ, ಮನೆಯ ಮಕ್ಕಳಿಗೆಲ್ಲ ಹಾಲು ಹಂಚುವ ಸಂಭ್ರಮ. ಹಿರಿಯರೆಲ್ಲ ದೊಡ್ಡ ದೊಡ್ಡ ಹಿತ್ತಾಳೆಯ ಲೋಟದ ತುಂಬಾ ಬೆಲ್ಲದ ಚಹಾ ಕುಡಿಯುತ್ತ ಸುಪ್ರಭಾತವನ್ನು ಆಹ್ವಾನಿಸುತ್ತ ಮುಂದಿನ ಕಾಯಕಗಳಿಗೆ ಅಣಿಯಾಗುತ್ತಿದ್ದರು. ಅಂಥ ಕೂಡು ಕುಟುಂಬಗಳು ಈಗೆಲ್ಲಿ? ನಮ್ಮ ಅವ್ವನಂತೂ ಆಕಳ ಮೊಲೆಯಿಂದ ನೇರವಾಗೇ ಹಾಲು ಕುಡಿದವಳು! ನಾವು ತಂಬಿಗೆಯಿಂದ, ನಮ್ಮ ಮಕ್ಕಳು ಲೋಟದಿಂದ, ಮೊಮ್ಮಕ್ಕಳು? ಮತ್ತೆ ಹೇಳಬೇಕಿಲ್ಲ.
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 10:32 am, Wed, 1 June 22