National Paper Airplane Day 2022: ಆಟಿಕೆ ಕೊಡಿಸದ ನನ್ನಮ್ಮನೆಂಬ ‘ಮುದ್ದುರಾಕ್ಷಸಿ’ಯೇ

Poetry : ಕಾಂಪೌಂಡಿನ ಗೇಟಿನ ಹೊರಗೆ ಕಾಣುತ್ತಿದ್ದ ಕೋಳಿಯನ್ನು ನೋಡಿ, ಕೋಳಿ ಎಂದು ಬರೆದೆ. ಕೆಳಗಿನ ಸಾಲಿನಲ್ಲಿ 'ಎಂತಹ ಕೋಳಿ?' ಎಂದಳು. ನಾನು 'ನನ್ನ ಕೋಳಿ ' ಎಂದೇ. ಅದಕ್ಕೆ ಆಕೆ ನಕ್ಕು, 'ನಿನ್ನ ಕೋಳಿನೇ ಇರಲಿ, ಅದು ಎಂತಹ ಕೋಳಿ ಇರಬಹುದು?' ಎಂದಳು. 'ರೆಕ್ಕೆಯ ಕೋಳಿ' ಎಂದೆ .

National Paper Airplane Day 2022: ಆಟಿಕೆ ಕೊಡಿಸದ ನನ್ನಮ್ಮನೆಂಬ ‘ಮುದ್ದುರಾಕ್ಷಸಿ’ಯೇ
ಲೇಖಕಿ ಉಮಾರಾಣಿ ಪೂಜಾರ
ಶ್ರೀದೇವಿ ಕಳಸದ | Shridevi Kalasad

|

May 26, 2022 | 11:16 AM

National Paper Airplane Day 2022 : ಎಲ್ಲ ತಾಯಂದಿರು ಭೂಮಿಯ ಮೇಲೆ ದೇವರು ಕಳುಹಿಸಿದ ಕಿನ್ನರ ದೇವತೆಗಳು. ತಾಯಂದಿರು ಏನೇ ಮಾಡಲಿ ಅದು ಮಕ್ಕಳ ಒಳ್ಳೆಯದಕ್ಕೆ. ಆದರೆ ಎಲ್ಲ ಮಕ್ಕಳಿಗೂ ಬಾಲ್ಯದಲ್ಲಿ ಆಟದಿಂದ ಬಿಡಿಸಿ ಎಳೆದುಕೊಂಡು ಹೋದಾಗ ತಾಯಿ ರಕ್ಕಸಿಯಂತೆಯೇ ಕಾಣುತ್ತಾಳೆ. ಆಕೆಯ ತುಮುಲ, ದುಗುಡ, ಮಕ್ಕಳ ಭವಿಷ್ಯದ ಮೇಲಿನ ಕಾಳಜಿ ಬಾಲ್ಯದಲ್ಲಿ ನಮಗೆ ಅರ್ಥವಾಗುವುದೇ ಇಲ್ಲ. ನನ್ನ ತಾಯಿಯ ಕಾಳಜಿ, ವಾತ್ಸಲ್ಯವನ್ನು ಅರ್ಥ ಮಾಡಿಕೊಳ್ಳದೆ ನನ್ನ ಆಟವನ್ನು ಹಾಳುಮಾಡಿದಳೆಂದು ನಾನೂ ಕೂಡ ಅಳುತ್ತಿದ್ದುದು ನನಗೆ ಇನ್ನೂ ಹಸಿಹಸಿ ನೆನಪು. ನನ್ನಲ್ಲಿ ನಿರ್ದಿಷ್ಟವಾಗಿ ಆಟಿಕೆಗಳು ಇರುತ್ತಿರಲಿಲ್ಲ. ಹಣದ ಸಮಸ್ಯೆ ಅಲ್ಲ. ನನ್ನ ತಾಯಿ ಕೊಡಿಸುತ್ತಿರಲಿಲ್ಲ. ಹಾಗಾಗಿ ಎಷ್ಟು ರಾಶಿರಾಶಿ ಆಟಿಕೆಗಳನ್ನು ಒಟ್ಟುಗೂಡಿಸುತ್ತಿದ್ದೆನೋ ನನಗೆ ಗೊತ್ತು! ಯಾವುದೋ ದೇವರ ಜಾತ್ರೆಯಲ್ಲಿ ನನ್ನ ತಾಯಿಗೆ ತಿಳಿಯದಂತೆ, ದುಡ್ಡು ಒಟ್ಟುಗೂಡಿಸಿ ತಂದ ಚಿಕ್ಕ ಮಣ್ಣಿನ ಒಲೆ, ಚಿಕ್ಕ ಮಡಿಕೆ, ಚಿಕ್ಕ ಕುಡಿಕೆ, ರಂಗುರಂಗಿನ ಬಟ್ಟೆ ತೊಟ್ಟ ಪುಟಾಣಿ ಬಾರ್ಬಿ ಗೊಂಬೆ. ಹಾಗೂ ಆಸಾರ್ ಉರುಸಿನಲ್ಲಿ ಹಠ ಮಾಡಿ ಕೊಡಿಸಿಕೊಂಡ ಅಂಗೈ ಗಾತ್ರದ ಚಿಕ್ಕ ಮನೆ, ಚಿಕ್ಕ ತೂಗುಯ್ಯಾಲೆ ಇನ್ನೂ ಏನೇನೋ! ಉಮಾರಾಣಿ ಪೂಜಾರ

ಕೆಲವೊಮ್ಮೆ ಬಿಸಾಡಿದ ಜಂಡುಬಾಮ್ ಬಾಟಲಿ, ಕಣ್ಣಿಗೆ ಹೊಳೆಯುವಂತೆ ಕಾಣುತ್ತಿದ್ದ ಕಲ್ಲು ಕೂಡ ನನಗೆ ಆಟಿಕೆಯಾಗುತ್ತಿದ್ದವು. ಪೇಪರಿನಿಂದ ಮಾಡಿದ ರಾಕೆಟ್ಟನ್ನು ಹಾಗೂ ದೋಣಿಗಳನ್ನು ಎಷ್ಟು ಮಾಡಿದರೂ ತೃಪ್ತಿ ಇರುತ್ತಿರಲಿಲ್ಲ. ಆದರೆ ಕ್ಷಣಮಾತ್ರದಲ್ಲಿ ಅವುಗಳನ್ನೆಲ್ಲ ಕಣ್ಣಿಗೆ ಕಾಣದಂತೆ ಮಂಗಮಾಯ ಮಾಡುತ್ತಿದ್ದದ್ದು ಯಾರು? ನನ್ನ ತಾಯಿ. ನನಗೆ ಆಟವಾಡುವುದೆಂದರೆ ಎಲ್ಲಿಲ್ಲದ ಗಮ್ಮತ್ತಾಗಿತ್ತು. ನನಗೆ ಅದರಲ್ಲೇ ಸ್ವಾತಂತ್ರ್ಯ ಸಿಕ್ಕಂತೆ ಭಾಸವಾಗುತ್ತಿತ್ತು. ಏಕೆಂದರೆ ಆ ಚಿಕ್ಕಚಿಕ್ಕ ಸಾಮಾನುಗಳೆಲ್ಲ ನನ್ನವು. ಅವುಗಳನ್ನೆಲ್ಲ ಮುಂದೆ ಪೇರಿಸಿಟ್ಟುಕೊಂಡರೆ ಅದೇ ನನ್ನ ಮನೆ ಎಂಬಂತೆ. ರಜೆ ಇದ್ದಾಗ, ಹಬ್ಬ ಇದ್ದಾಗ, ಶಾಲೆಯಿಂದ ಬಂದ ನಂತರವೂ ಎಷ್ಟು ಆಟವಾಡಿದರೂ ನನಗೆ ತೃಪ್ತಿ ಇಲ್ಲ.

ನಾನು ಶಾಲೆಯಿಂದ ಬಂದ ಅರ್ಧಗಂಟೆಯ ನಂತರ ನನ್ನ ತಾಯಿ ಆಕೆಯ ಶಾಲೆಯಿಂದ ಬರುತ್ತಿದ್ದಳು. ನನಗೆ ಈಗ ಆಕೆ ಬರುತ್ತಾಳೆ ಎಂಬ ಭಯವೂ ಇಲ್ಲದಷ್ಟು ಆಟದಲ್ಲಿ ಲೀನವಾಗಿರುತ್ತಿದ್ದೆ. ಆದರೆ, ಒಪ್ಪವಾಗಿ ಪೇರಿಸಿಟ್ಟಿದ್ದ ಮಣ್ಣಿನ ಚಿಕ್ಕ ಒಲೆ ಮಡಕೆಕುಡಕೆ, ಬಾರ್ಬಿ ಗೊಂಬೆಯಾದಿಯಾಗಿ, ಚಿಕ್ಕ ತೂಗುಯ್ಯಾಲೆ ಅಂಗೈ ಗಾತ್ರದ ಚಿಕ್ಕ ಮನೆ ಎಲ್ಲವೂ ಬೆಳಿಗ್ಗೆ ಏಳುವಷ್ಟರಲ್ಲೇ ಮಂಗಮಾಯ. ಹಾಗಾಗಿ ನಾನು ನನ್ನ ಒಂದನೇ ತರಗತಿಯಲ್ಲಿ ಆಟಿಕೆಗಳನ್ನು ಜೋಡಿಸಿ ಒಂದು ದೊಡ್ಡ ಪ್ರಮಾದವೆಂದೇ ತಿಳಿದಿದ್ದೆ. ಹಾಗಾಗಿ ಕಾಂಪೌಂಡಿನಲ್ಲಿ ನಿಲ್ಲಿಸಿದ ಟ್ರ್ಯಾಕ್ಟರಿನ ಬುಡದಲ್ಲಿ, ಇಲ್ಲವೇ ಮಾಳಿಗೆಯ ಮೇಲೆ ಆಟಿಕೆಗಳನ್ನು ಜೋಡಿಸಿ ಕದ್ದುಮುಚ್ಚಿ ಆಟವಾಡುತ್ತಿದ್ದೆ. ಆದರೆ ಯಾವಾಗ ನನ್ನ ತಾಯಿ ಆಟಿಕೆ ಜೋಡಿಸಿ ಆಡುವುದರ ಬದಲಾಗಿ ಬೇರೆಯದೇ ಆಟವನ್ನು ಕಲಿಸಿದಳು ಅಂದೇ ನಾನು ಆಟಿಕೆಯಾಟ ಬಿಟ್ಟಿದ್ದೆ.

ಇದನ್ನೂ ಓದಿ : National Wine Day: ಮೈಲ್ಸ್‌ ವೈನ್‌ ಮಾಯಾ ವೈನ್‌ ಮತ್ತು ಕಾರೇಹಣ್ಣಿನ ಮಧು ವೈಎನ್

ನಾನು ಒಮ್ಮೆ ಮಾಯವಾದ ಆಟಿಕೆಗಳನ್ನು ಹುಡುಕಿ ಹುಡುಕಿ ಬೇಸತ್ತು ಸಪ್ಪೆ ಮೋರೆ ಮಾಡಿ ಕೂತಾಗ, ನನ್ನ ತಾಯಿ ನಗುತ್ತಾ ನನ್ನನ್ನು ಹತ್ತಿರ ಕರೆದು ನಿನ್ನ ಪುಸ್ತಕ ಮತ್ತು ಪೆನ್ನನ್ನು ತೆಗೆದುಕೊಂಡು ಬಾ ಎಂದಳು . ಶಬ್ದ ಬರಿ ಎಂದಳು. ನಾ ಆಗ ಒಂದನೇ ತರಗತಿಯಲ್ಲಿದ್ದೆ. ಕಾಂಪೌಂಡಿನ ಗೇಟಿನ ಹೊರಗೆ ಕಾಣುತ್ತಿದ್ದ ಕೋಳಿಯನ್ನು ನೋಡಿ, ಕೋಳಿ ಎಂದು ಬರೆದೆ. ಕೆಳಗಿನ ಸಾಲಿನಲ್ಲಿ ಬರೆ ‘ಎಂತಹ ಕೋಳಿ?’ ಎಂದಳು. ನಾನು ‘ಎಂತಹ ಕೋಳಿ?’ ಎಂದು ಬರೆದು ಕಣ್ಣು ಪಿಳುಕಿಸದೆ ಅವಳನ್ನೇ ನೋಡುತ್ತಾ ನಿಂತುಕೊಂಡೆ. ಮತ್ತೆ ಎಂತಹ ಕೋಳಿ ಇರಬಹುದು ನೀನೇ ಕಲ್ಪನೆ ಮಾಡಿಕೊಂಡು ಹೇಳು ಎಂದಳು. ನಾನು ‘ನನ್ನ ಕೋಳಿ ‘ ಎಂದೇ. ಅದಕ್ಕೆ ಆಕೆ ಮತ್ತೆ ನಕ್ಕು ‘ನಿನ್ನ ಕೋಳಿನೇ ಇರಲಿ, ಅದು ಎಂತಹ ಕೋಳಿ ಇರಬಹುದು?’ ಎಂದಳು. ನಾನು ಹೆದರಿ ಏನು ಹೇಳಬೇಕೋ ತಿಳಿಯದೆ ‘ರೆಕ್ಕೆಯ ಕೋಳಿ’ ಎಂದೆ . ಹಾಗಾದರೆ ಕೆಳಗಡೆ ಸಾಲಿನಲ್ಲಿ ಬರೇ ಎಂದಳು. ಎಂತಹ ರೆಕ್ಕೆ ಎಂದು ಅದರ ಕೆಳಗಿನ ಸಾಲಿನಲ್ಲಿ ಬರೇ ಎಂದಳು. ಮತ್ತೆ ನಾನು ಕಲ್ಪಿಸಿಕೊಂಡು ‘ಬಣ್ಣದ ರೆಕ್ಕೆ’ ಎಂದು ಬರೆದೆ. ‘ಸರಿ ನನಗೆ ತಲೆ ತುಂಬಾ ನೋಯುತ್ತಿದೆ. ಹೀಗೇ ಒಂದು ಪೇಜು ಕಲ್ಪನೆ ಮಾಡಿಕೊಂಡು ಬರೆದುಕೊಂಡು ಬಾ ನಾನು ಮಲಗಿರುತ್ತೇನೆ’ ಎಂದು ನನಗೆ ಈ ಕೆಲಸ ಕೊಟ್ಟು ಮಧ್ಯಾಹ್ನ ಮಲಗಿದಳು. ನನಗೆ ಮೊದಲು ಏನಿದು ಎನಿಸಿತ್ತು ಹಾಗೂ ನನ್ನ ಪ್ರೀತಿಯ ಆಟಿಕೆಗಳನ್ನು ಮೂಲೆಗೆ ಸರಿಸಿ ಹಾಳಾದ ಈ ಪೆನ್ನು ಮತ್ತು ಪುಸ್ತಕದಲ್ಲಿ ಆಕೆ ಹೇಳಿದ್ದನ್ನು ಬರೆಯುವುದು ನೀರಸವೆನಿಸಿತ್ತು. ಆದರೆ ಆಕೆ ಹೇಳಿದ ಆ ಆಟ ನನಗೆ ತುಂಬ ಮಜವೆನಿಸಿತು. ನಾನು ಆಕೆ ಅಷ್ಟು ಹೇಳಿ ಮಲಗುತ್ತಲೇ ಪೇಜಿನ ತುಂಬಾ

'ಎಂತಹ ಕೋಳಿ
ರೆಕ್ಕೆಯ ಕೋಳಿ
ಎಂತಹ ರೆಕ್ಕೆ
ಬಣ್ಣದ ರೆಕ್ಕೆ
ಎಂತಹ ಬಣ್ಣ
ಹಸಿರು ಬಣ್ಣ
ಎಂತಹ ಹಸಿರು
ಮರಗಳ ಹಸಿರು
ಎಂತಹ ಮರ...'

ಇದನ್ನೂ ಓದಿ : National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್

ಹೀಗೆ ಅನವರತ ಬರೆಯುತ್ತಿದ್ದೆ. ನನ್ನೆಲ್ಲಾ ಆಟಿಕೆಗಳು ನನಗೆ ತಿಳಿಯದಂತೆ ಮಂಗ ಮಾಯವಾದಾಗ ನನಗೆ ಆಟಿಕೆಗಳಾಗಿದ್ದು ಪೇಪರ್, ಪೆನ್ನು ಮತ್ತು ಚಿಕ್ಕಚಿಕ್ಕ ಕನ್ನಡದ ಪದಗಳು. ಆದರೆ ನಾನು ಏನು ಬರೆಯುತ್ತಿದ್ದೇನೆ ಎಂದು ನನಗಾಗ ತಿಳಿಯುತ್ತಿರಲಿಲ್ಲ. ನನಗೆ ಅದೊಂದು ಆಟವಾಗಿತ್ತು ಅಷ್ಟೆ. ಬರಬರುತ್ತ ನಂತರದ ದಿನಗಳಲ್ಲಿ ತಿಳಿಯಿತು; ಅರ್ಥವತ್ತಾಗಿ ಸೂಕ್ತ ಶಬ್ದಗಳನ್ನು ಹಾಕಿ ಬರೆದರೆ ಅವುಗಳು ಕವನಗಳಾಗುತ್ತವೆ ಎಂದು. ಕವಿ ಟಿ. ಎಸ್. ಎಲಿಯಟ್ Poetry is an organisation rather than inspiration. ಒಂದನೇ ತರಗತಿಯಲ್ಲೇ ಕನ್ನಡ ಪದಗಳು ನನಗೆ ಆಟಿಕೆಗಳಾಗಿ ತುಂಬ ಸಮಾಧಾನ ತಂದುಕೊಡುತ್ತಿದ್ದವು. ಈಗಲೂ ಕವನಗಳನ್ನು ಬರೆದಾಗ ನನಗೆ ಅಷ್ಟೇ ನೆಮ್ಮದಿ ಸಿಗುತ್ತದೆ. ಕುವೆಂಪು ಹೇಳುವಂತೆ ‘ಒಬ್ಬ ಸೈಕಲ್ ಸವಾರ ಸೈಕಲ್ ಸವಾರಿಯಲ್ಲಿ ಹಿಡಿತ ಸಾಧಿಸಿದ ಮೇಲೆ ಕೈಬಿಟ್ಟು ಕಾಲ್ ಬಿಟ್ಟು ಸವಾರಿ ಮಾಡುತ್ತಾನೆ. ಹಾಗೆಯೇ ಕವಿಯೂ ಕಾವ್ಯ ಬರೆಯುವಲ್ಲಿ ಹಿಡಿತ ಸಾಧಿಸಿದ ಮೇಲೆ ಛಂದಸ್ಸನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಸ್ವಾತಂತ್ರ್ಯ ಪಡೆಯುತ್ತಾನೆ’.

ಕವನ ಬರೆಯದೆ ನಾ ನೀರಿನಿಂದ ಹೊರಗೆಸೆದ ಮೀನಾಗಲಾರೆ ಎನ್ನುವಾಗಲೇ ಒಂದೊಂದೇ ತರಗತಿಗಳನ್ನು ಏರುತ್ತ ಹೋದೆ. ಏರುತ್ತ ಹೋದಂತೆ ಕಾಗದದ ಏರೋಪ್ಲೇನುಗಳು ಕ್ಲಾಸಿನೊಳಗೆ ಎಲ್ಲಿಂದಲೋ ಬಂದು ಬೀಳುತ್ತಿದ್ದವು. ಏನಿರಬಹುದು ಎಂದು ಬಿಚ್ಚಿ ನೋಡಿದರೆ ಬಿಚ್ಚಿ ನೋಡಿದರೆ ಖಾಲಿ! ಇರಲಿ. ಎಲ್ಲವೂ ಆ ಕ್ಷಣದ ಅಗತ್ಯಗಳಿಗೆ ತುಂಬಿ ತುಂಬಿ ತುಳುಕಿ ನಶ್ವರವಾಗುತ್ತಿರುವ ಈ ಜಗತ್ತಿನಲ್ಲಿ ನಾನು ಖಾಲಿಯನ್ನೇ ಪ್ರೀತಿಸುತ್ತೇನೆ, ಮತ್ತೆ ಮತ್ತೆ ಕಾವ್ಯದ ನಶೆಯಿಂದ ತುಂಬಿಕೊಳ್ಳಲು.

ಥ್ಯಾಂಕ್ಸ್ ಅಮ್ಮಾ, ಆಟಿಕೆ ಕೊಡಿಸದೇ ಇದ್ದಿದ್ದಕ್ಕೆ.

ಇದನ್ನೂ ಓದಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada