Rape : ನಿನ್ನೆ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಹಾಗೂ ಹಾಲೀ ಕಾಂಗ್ರೆಸ್ ಮುಖಂಡ ಕೆ.ಆರ್. ರಮೇಶ್ ಕುಮಾರ್ ಅತ್ಯಾಚಾರದ ಬಗ್ಗೆ ಆಡಿದ ಮಾತು ದೇಶಾದ್ಯಂತ ಚರ್ಚೆ ಆಗುತ್ತಿದೆ. ಹಾಲೀ ಸಭಾಧ್ಯಕ್ಷ, ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುತ್ತ, ಸದನ ನಡೆಸಲು ಆಗುವ ತೊಂದರೆ ವಿವರಿಸುತ್ತ, ‘ಎಲ್ಲರೂ ಮಾತನಾಡಬೇಕು, ಎಲ್ಲ ವಿಷಯ ಚರ್ಚೆ ಆಗಬೇಕು ಎನ್ನುತ್ತಾರೆ, ಈಗ ನಾನು ಯಾವ ಹಂತ ತಲುಪಿದ್ದೇನೆ ಎಂದರೆ- Let us enjoy the situation’ ಎಂದರು. ಆಗ ಎದ್ದುನಿಂತು ಮಾತನಾಡಿದ ರಮೇಶ್ ಕುಮಾರ್, ‘There is a saying. If rape is inevitable. Women should lie down and enjoy the rape’ ಎಂದು ಹೇಳದರು. ಆಗ ಪೀಠದಲ್ಲಿ ಕುಳಿತಿದ್ದ ಕಾಗೇರಿ ಅವರು ನಕ್ಕು ಸುಮ್ಮನಾದರು. ಇಂದು ಕ್ಷಮೆ ಯಾಚಿಸಿ ಈ ಅಧ್ಯಾಯಕ್ಕೆ ಕೊನೆ ಹಾಡೋಣ ಎಂದು ವಿನಂತಿಸಿದರು. ಆದರೆ, ಇದನ್ನು ಇಷ್ಟಕ್ಕೆ ಬಿಟ್ಟುಬಿಡಬೇಕೆ? ಮಹಿಳೆಯರ ಬಗ್ಗೆ ಇಂತಹ ಮನಃಸ್ಥಿತಿ ಹೊಂದಿದವರು ನಮ್ಮನ್ನು ಪ್ರತಿನಿಧಿಸಬೇಕೆ? ಇಂಥ ಮನಃಸ್ಥಿತಿಗಳ ಬದಲಾವಣೆ ಹೇಗೆ? ಇದು ಚರ್ಚಿಸಲೇಬೇಕಾದ ವಿಷಯ.
ಟಿವಿ9 ಕನ್ನಡ ಡಿಜಿಟಲ್ ಈ ಹಿನ್ನೆಲೆಯಲ್ಲಿ ‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ಹೊಸ ಸರಣಿಯನ್ನು ಪ್ರಾರಂಭಿಸಿದೆ. ನಿಮ್ಮ ಪ್ರತಿಕ್ರಿಯಾತ್ಮಕ ಬರಹಗಳನ್ನು ಸುಮಾರು 300 ಪದಗಳಲ್ಲಿ ಕಳಿಸಬಹುದು. ಜೊತೆಗೊಂದು ಭಾವಚಿತ್ರವಿರಲಿ. tv9kannadadigital@gmail.com
*
ಭದ್ರಾವತಿಯಲ್ಲಿ ವಾಸಿಸುತ್ತಿರುವ ಲೇಖಕಿ ದೀಪ್ತಿ ಭದ್ರಾವತಿ ಅವರಿಂದ ಪತ್ರ.
*
ಗೌರವಾನ್ವಿತ ರಮೇಶ್‌ಕುಮಾರ್‌ವರಿಗೆ ಹೆಣ್ಣುಮಗಳ ಅಮ್ಮನ ಪ್ರಣಾಮಗಳು,
ನಮ್ಮ ಕಡೆಯಲ್ಲಿ ಒಂದು ಗಾದೆ ಇದೆ. ನಿಮಗೂ ಗೊತ್ತಿರಬಹುದು “ಹುಟ್ಟು ಗುಣ ಸುಟ್ಟರೂ ಹೋಗಲ್ಲ” ಅಂತ. ಈ ಮಾತು ನಿನ್ನೆ ನೀವು ವಿಧಾನಸಭೆಯಲ್ಲಿ ಆಡಿದ ಮಾತುಗಳನ್ನು ಕೇಳಿಸಿಕೊಂಡ ಮೇಲೆ ಮತ್ತೆ ಮತ್ತೆ ನೆನಪಾಗುತ್ತಿದೆ. ಬಹುಶಃ ನಿಮ್ಮ ಹೊರತಾಗಿ ಮತ್ತ್ಯಾರೇ ಈ ಮಾತುಗಳನ್ನು ಆಡಿದ್ದರೆ ಅವರ ಕಲಿತು ಬಂದದ್ದೇ ಅಷ್ಟು ಎಂದು ಸುಮ್ಮನಾಗಿಬಿಡುತ್ತಿದ್ದೆನೊ ಏನೋ.
ಆದರೆ ನೀವು ನಾನು ಕಂಡ ಅತ್ಯಂತ ಸಹೃದಯಿ, ನೇರ ಮಾತಿನ ಮನುಷ್ಯ ಮತ್ತು ಈ ಮನುಷ್ಯ ಸಮಾಜದ ಮಾನವೀಯ ನೆಲೆಗಟ್ಟಿನಲ್ಲಿ ನಿಂತು ಬದುಕನ್ನು ನೋಡಬಲ್ಲ ಸಜ್ಜನ ರಾಜಕಾರಣಿ ಎನ್ನಿಸಿತ್ತು. ನೀವು ಸ್ಪೀಕರ್ ಸ್ಥಾನದಲ್ಲಿ ಕೂತು ಕಾರ್ಯಕಲಾಪ ನಡೆಸುತ್ತಿದ್ದರೆ ನಾನು ಸುಮ್ಮನೆ ಕೂತು ನಿಮ್ಮ ಖಡಕ್ ಮಾತುಗಳನ್ನು ಅದೆಷ್ಟೊ ಬಾರಿ ಕೇಳುತ್ತ ಕೂತಿರುತ್ತಿದ್ದೆ. “ಸರ್ವ ಬಣ್ಣ ಮಸಿ ನುಂಗಿತ” ಎನ್ನುವಂತೆ ನೀವು ನಿನ್ನೆ ಅತ್ಯಂತ ಅಸೂಕ್ಷ್ಮರಂತೆ ಆಡಿದ ಮಾತು ನಿಜಕ್ಕು ನನ್ನನ್ನು ಗಾಸಿಗೊಳಿಸಿದೆ.
ನಮಗೂ ಗೊತ್ತಿದೆ ಆ ಮಾತುಗಳನ್ನು ಬರೆದವರಾಗಿ, ಕಟ್ಟಿದವರಾಗಲಿ ನೀವಲ್ಲ ಯಾರೋ ಎಂದೋ ಆಡಿಬಿಟ್ಟದ್ದು ಅಂತ. ಆದರೆ ಆ ಎಳೆಗಳನ್ನು ನೀವ್ಯಾಕೆ ಹಿಡಿದು ತಂದಿರಿ. ವಿಧಾನಸಭೆಯ ಕಾರ್ಯಕಲಾಪಕ್ಕೂ ಅತ್ಯಾಚಾರವನ್ನು ಎಂಜಾಯ್ ಮಾಡುವುದಕ್ಕೂ ಏನು ಸಂಬಂಧ? ಹೆಣ್ಣೊಬ್ಬಳ ಅತಂತ್ರ, ಅಸಹಾಯಕ ಸ್ಥಿತಿ ನಿಮಗೆ ತಮಾಷೆಯ, ಉದಾಹರಣೆಯ ವಿಚಾರವಾಗಿ ಕಾಣಿಸಿತೆ, ಅಥವಾ ಅದು ಈವರೆಗೂ ನಿಮ್ಮೊಳಗೆ ನೀವು ಬೆಳೆಸಿಕೊಂಡು ಬಂದ ಮಾನಸಿಕ ಸ್ಥಿತಿಯ ಅನಾವರಣವೇ? ‘‘ಅಲ್ಲ” ಎನ್ನುವುದು ನಿಮ್ಮ ಉತ್ತರವಾದಲ್ಲಿ ಮತ್ತೆ ಆ ಮಾತು ನಿಮ್ಮಿಂದ ಹೇಗೆ ಬಂತು ಎನ್ನುವುದು ನಿಮಗೆ ನೀವೇ ಕೇಳಿಕೊಳ್ಳಬೇಕಾದ ಪ್ರಶ್ನೆ.
ನಿಮಗೆ ಗೊತ್ತೆ ಸರ್, ನಿಮ್ಮ ಮನೆಯ ಹೆಣ್ಣು ಮಕ್ಕಳು ಸೇರಿದಂತೆ ಹೆಣ್ಣುಜೀವಗಳು ಹೆಣ್ಣಿನ ರೂಪ ಹೊತ್ತು ಬಂದ ಒಂದೇ ಒಂದು ಕಾರಣಕ್ಕೆ ಇಡೀ ಜೀವನ ಭಯದಲ್ಲಿಯೇ ಬದುಕುತ್ತ ಹೋಗುತ್ತವೆ. ಕತ್ತಲಾದ ಮೇಲೆ ಜೀವ ಹೋಗುತ್ತಿದ್ದರು ಒಬ್ಬರೇ ಆಸ್ಪತ್ರೆಗೆ ಹೋಗಲಾಗದ ಅನಿವಾರ್ಯತೆಯಲ್ಲಿ ಒದ್ದಾಡುವ ಪರಿಸ್ಥಿತಿ ಎಲ್ಲೆಡೆ ಇದೆ. ಸಣ್ಣ ಪುಟ್ಟ ಊರುಗಳಲ್ಲಿ ಕೂಡ ರಾತ್ರಿ ಎಂಟಾದ ಮೇಲೆ ಬಸ್ ಸ್ಟಾಂಡುಗಳಲ್ಲಿ ಒಬ್ಬರೇ ನಿಲ್ಲುವಂತಿಲ್ಲ. ಇನ್ನು ಬೇರೆ ಮಾತು ಬಿಡಿ. ಇದೆಲ್ಲ ಯಾರ ಕಾರಣದಿಂದ ಗೊತ್ತಾ ಸರ್? ಪ್ರಾಣಿಗಳು ಎದುರು ಬಂದರೆ ಹೇಗಾದರೂ ಬದುಕಿ ಬಂದೇವು. ಅತ್ಯಾಚಾರಿಗಳು ಅದಕ್ಕಿಂತ ಹೀನ. ಪ್ರಾಣಿಗಳು ಹಸಿವಾದಾಗ ಬೇಟೆಯಾಡುತ್ತವೆ. ಗಂಡಸರು? ನಮಗೂ ತಿಳಿದೇ ಇದೆ ಪುರುಷರು ಎಲ್ಲರೂ ಅಂತವರಲ್ಲ ಎನ್ನುವುದು. ಆದರೆ ಅಂತಹವರೆಲ್ಲರೂ ಪುರುಷರು ಎನ್ನುವುದು ಕೂಡ ಸತ್ಯ. ಪರಿಸ್ಥಿತಿ ಹೀಗಿರುವಾಗ ನೀವು ಅತ್ಯಂತ ಬೇಜಾಬ್ದಾರಿತನದಲ್ಲಿ ಹೇಳಿಕೆ ಕೊಟ್ಟದ್ದು ನಿಜಕ್ಕು ಆಘಾತವನ್ನು ಉಂಟುಮಾಡಿದೆ. ಶಾಲೆ, ಮನೆ, ಆಸ್ಪತ್ರೆ, ದೊಡ್ಡ ದೊಡ್ಡ ಮಾಲ್‌ಗಳು, ಮೆಡಿಕಲ್ ಶಾಪ್ ಯಾವುದು ಸುರಕ್ಷಿತ ಹೇಳಿ. ಎಷ್ಟು ಸುರಕ್ಷಿತ ನೆಲೆಗಳನ್ನು ತಾವುಗಳನ್ನು ನಮ್ಮ ಸಲುವಾಗಿ ನಿರ್ಮಿಸಿ ಕೊಟ್ಟಿದ್ದೀರಿ? ದೈಹಿಕ ಸ್ಥಿತಿ ಹಾಳು ಬಡಿಯಲಿ ಹಾಗೆ ಗಾಸಿಗೊಂಡ ಹೆಣ್ಣು ಮಗಳ ಮಾನಸಿಕ ಸ್ಥಿತಿ ಏನಾಗಿರುತ್ತದೆ ಎನ್ನುವ ಸಣ್ಣ ಕಲ್ಪನೆ ನಿಮಗಿದೆಯೇ. ಬದುಕಿರುವಷ್ಟು ದಿನ ತಾನು ಅಲ್ಲಿಗೆ ಹೋದದ್ದೆ ತಪ್ಪು, ನಿಂತದ್ದೇ ತಪ್ಪು, ನಕ್ಕಿದ್ದೇ ತಪ್ಪು ಎಂದುಕೊಳ್ಳುತ್ತ ನರಳಿ ನರಳಿ ಸಾಯುವುದಿದೆಯಲ್ಲ ಆ ಸ್ಥಿತಿ ಎಂದಾದರೂ ಗಂಡಸಿಗೆ ಬರಲು ಸಾಧ್ಯವೇ ಸರ್?
ಅತ್ಯಾಚಾರವಾದನಂತರ ಇಡೀ ಸಮಾಜ ಅವಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ನಗುತ್ತದೆಯಲ್ಲ ಆಗ ಆಕೆಗಾಗುವ ಅವಮಾನವನ್ನು ನೀವುಗಳು ಅನುಭವಿಸಲು ಸಾಧ್ಯವೇ ಸರ್? ನಿಮಗೊಂದು ಸಣ್ಣ ಘಟನೆ ಹೇಳುತ್ತೇನೆ. ಈಗ್ಗೆ ಹಲವಾರು ವರ್ಷದ ನಮ್ಮ ಊರಿನ ಹಳ್ಳಿಯೊಂದರಲ್ಲಿ ಹಿಂದೆ ಐದೋ ಆರನೆ ತರಗತಿಯ ಬಾಲಕಿಯೊಬ್ಬಳ ಮೇಲೆ ವೃದ್ಧನೊಬ್ಬ ಅತ್ಯಾಚಾರವೆಸಗಿದ್ದ. ದೂರು ದಾಖಲಾಯಿತು. ಅಜ್ಜ ಆತ್ಮಹತ್ಯೆ ಮಾಡಿಕೊಂಡ. ಏನೆಲ್ಲ ಘಟನೆಗಳು ಆಗಿ ಹೋದವು. ಆ ಹುಡುಗಿಯನ್ನು ನಾನು ಆಕಸ್ಮಿಕ ಮಾತಾಡಿಸಿ “ಎಲ್ಲ ಮರೆತು ಬಿಡು ಏನು ಆಗಿಲ್ಲ ನಿಂಗೆ” ಎಂದಿದ್ದೆ. ಆಕೆ ಏನಂದಳು ಗೊತ್ತೆ ಸರ್, “ಸ್ಕೂಲಲ್ಲಿ ಎಲ್ಲರೂ ಅಜ್ಜ ಇವ್ಳನ್ನ ಕೆಡಿಸಿದ್ದಾನೆ ಅಂತ ನಗ್ತಾರೆ ಆಂಟಿ” ಎನ್ನುತ್ತ ತಲೆತಗ್ಗಿಸಿದಳು. ಬಹುಶಃ ಆ ಕ್ಷಣದ ಆಕೆಯ ನೋವು ಯಾರ ಅರಿವಿಗೂ ಬರಲು ಸಾಧ್ಯವಿಲ್ಲ. ಹೇಳಿ ಸರ್, ಇಂತಹ ಮಕ್ಕಳು ಈ ಸ್ಥಿತಿಯಲ್ಲಿ ಇರುವಾಗ “ಅದನ್ನು ಎಂಜಾಯ್ ಮಾಡಬೇಕಿತ್ತು” ಎಂದು ಹೇಳುವುದಾದರೂ ಹೇಗೆ. ಬಹುಶಃ ಈ ಗಾದೆ ಮಾಡಿದಾಗ ಕೇವಲ ಯುವತಿಯರ ಮೇಲೆ ಈ ರೀತಿ ಘಟನೆಗಳು ಆಗುತ್ತಿದ್ದವೋ ಏನೋ ಆದರೆ ಈಗ?
ಯಾವುದೋ ನಾಲ್ಕು ಹೆಣ್ಣುಮಕ್ಕಳು ಗಟ್ಟಿದನಿಯಲ್ಲಿ ಮಾತಾಡುತ್ತಾರೆಂದು ಕೆಂಗಣ್ಣು ಬೀರುತ್ತ “ಹೆಣ್ಣುಮಕ್ಕಳು ಭಾರಿ ಹಾರಾಡ್ತಾರೆ” ಎಂದುಕೊಳ್ಳುತ್ತ ಎಲ್ಲೆಲ್ಲೋ ಆಗುವ ಅತ್ಯಾಚಾರಗಳಲೆಲ್ಲ ಅದೇ ಕಾರಣಕ್ಕೆ ಎಂದು ಷರಾ ಬರೆಸಿಕೊಳ್ಳುವುದಿದೆಯಲ್ಲ ಅದು ಬರೆಸಿಕೊಂಡವರಿಗಷ್ಟೆ ಗೊತ್ತು ಸರ್. ಉಳ್ಳವರ ಹೆಣ್ಣುಮಕ್ಕಳು ಸುರಕ್ಷಿತವಾಗಿ ಓಡಾಡಬಹುದು. ಅದು ಒಂದು ದುರಂತ ಎನ್ನುವುದು ಬೇರೆ ಮಾತು ಬಿಡಿ. ಆ ಏನೂ ಗತಿಯಿಲ್ಲದ ರಸ್ತೆಯಲ್ಲಿ ಮಲಗಿದವರ ಹಸುಗೂಸುಗಳು ಅರ್ಧರಾತ್ರಿಯಲ್ಲಿ ಅಪರಿಚಿತ ಗಂಡಸರ ಕೈಗೆ ಸಿಕ್ಕು ಸತ್ತು ಹೋಗುವುದಿದೆಯಲ್ಲ ಅದನ್ನು ಎಂದಾದರೂ ತಾವು ಊಹಿಸಿದ್ದೀರ? ಹೇಳುವುದು ಎಲ್ಲದೂ ಸುಲಭ ಸರ್ ಆದರೆ ವಾಸ್ತವ. ಒಂದೋ ಎರಡೂ ಹೆಣ್ಣು ಮಕ್ಕಳ ಹೆತ್ತು ಜೀವನ ಪರ್ಯಂತ ಅವರನ್ನು ಕಾಯುತ್ತಲೇ ಇರಬೇಕಾದ ದೌರ್ಭಾಗ್ಯ ಇದೆಯಲ್ಲಿ. ಅದು ಯಾವುದೇ ಸ್ವಸ್ಥ ಸಮಾಜದ ಲಕ್ಷಣ ಅಲ್ಲ ಅಲ್ಲವಾ? ಯಾವುದೋ ಕ್ರಿಕೆಟಿಗ ಎಲ್ಲಿಯೋ ಆಟವಾಡಿಲ್ಲ ಎಂದ ಕಾರಣಕ್ಕೆ ಅವರ ಪುಟ್ಟ ಹೆಣ್ಣುಮಕ್ಕಳನ್ನ ಅತ್ಯಾಚಾರ ಮಾಡ್ತೀವಿ ಎಂದು ಪೋಸ್ಟ್ ಹಾಕುವ, ಯಾವುದೋ ಹುಡುಗಿ ತನ್ನ ಪ್ರೀತಿ ಒಪ್ಪಿಕೊಳ್ಳಲಿಲ್ಲ ಎಂದು ಅತ್ಯಾಚಾರ ಮಾಡುವ, ಕುಡಿದ ಮತ್ತಿನಲಿ ಯಾವುದೋ ಮಗುವನ್ನು ತಮ್ಮ ತೆವಲು ತೀರಿಸಿಕೊಂಡು ಕೊಂದು ಬಿಡುವಸಣ್ಣಪುಟ್ಟ ಕಾರಣಗಳಿಗೆ ಹೆಣ್ಣು ಒಂದು ಜೀವವೇ ಅಲ್ಲ ಎಂದುಕೊಳ್ಳುತ್ತ ಹೊಸಕಿ ಹಾಕುವ ಪರಿಸ್ಥಿತಿ ಇರುವಾಗ… ಎಲ್ಲ ಗೊತ್ತಿದ್ದೂ ನೀವು ಹೀಗೆ ಮಾತಾಡಿದ್ದು. ನಿಮ್ಮ ಮಾತಿಗೆ ಸ್ಪೀಕರ್ ನಕ್ಕಿದ್ದು ಮತ್ತು ಉಳಿದ ಎಲ್ಲ ಶಾಸಕರು ಮೌನ ವಹಿಸಿದ್ದು ಈ ಸಮಾಜದಲ್ಲಿ ಹೆಣ್ಣಿಗೆ ಇರುವ ಮನ್ನಣೆಯ ಪ್ರತಿಬಿಂಬ ಮತ್ತು ಇದು ಈ ಹೊತ್ತಿನ ದುರದೃಷ್ಟಕರ ಘಟನೆಯು ಹೌದು.
ದೀಪ್ತಿ
ಭದ್ರಾವತಿಯಿಂದ
ಇದನ್ನೂ ಓದಿ : ಜನಪ್ರತಿನಿಧಿಗಳೇ ಎಚ್ಚರವಿರಲಿ : ಪಿತೃಪ್ರಧಾನ ಸಂಸ್ಕೃತಿಯ ಕೊಚ್ಚೆಯಲ್ಲಿ ಹುಟ್ಟಿಹರಿದಾಡುತ್ತಿರುವ ಹುಳುಗಳೇ ಅದು ‘ನಾಣ್ಣುಡಿಯಲ್ಲ ಕೀಳುನುಡಿ’
Published On - 4:07 pm, Fri, 17 December 21