Rape : ನಿನ್ನೆ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಹಾಗೂ ಹಾಲೀ ಕಾಂಗ್ರೆಸ್ ಮುಖಂಡ ಕೆ.ಆರ್. ರಮೇಶ್ ಕುಮಾರ್ ಅತ್ಯಾಚಾರದ ಬಗ್ಗೆ ಆಡಿದ ಮಾತು ದೇಶಾದ್ಯಂತ ಚರ್ಚೆ ಆಗುತ್ತಿದೆ. ಹಾಲೀ ಸಭಾಧ್ಯಕ್ಷ, ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುತ್ತ, ಸದನ ನಡೆಸಲು ಆಗುವ ತೊಂದರೆ ವಿವರಿಸುತ್ತ, ‘ಎಲ್ಲರೂ ಮಾತನಾಡಬೇಕು, ಎಲ್ಲ ವಿಷಯ ಚರ್ಚೆ ಆಗಬೇಕು ಎನ್ನುತ್ತಾರೆ, ಈಗ ನಾನು ಯಾವ ಹಂತ ತಲುಪಿದ್ದೇನೆ ಎಂದರೆ- Let us enjoy the situation’ ಎಂದರು. ಆಗ ಎದ್ದುನಿಂತು ಮಾತನಾಡಿದ ರಮೇಶ್ ಕುಮಾರ್, ‘There is a saying. If rape is inevitable. Women should lie down and enjoy the rape’ ಎಂದು ಹೇಳದರು. ಆಗ ಪೀಠದಲ್ಲಿ ಕುಳಿತಿದ್ದ ಕಾಗೇರಿ ಅವರು ನಕ್ಕು ಸುಮ್ಮನಾದರು. ಇಂದು ಕ್ಷಮೆ ಯಾಚಿಸಿ ಈ ಅಧ್ಯಾಯಕ್ಕೆ ಕೊನೆ ಹಾಡೋಣ ಎಂದು ವಿನಂತಿಸಿದರು. ಆದರೆ, ಇದನ್ನು ಇಷ್ಟಕ್ಕೆ ಬಿಟ್ಟುಬಿಡಬೇಕೆ? ಮಹಿಳೆಯರ ಬಗ್ಗೆ ಇಂತಹ ಮನಃಸ್ಥಿತಿ ಹೊಂದಿದವರು ನಮ್ಮನ್ನು ಪ್ರತಿನಿಧಿಸಬೇಕೆ? ಇಂಥ ಮನಃಸ್ಥಿತಿಗಳ ಬದಲಾವಣೆ ಹೇಗೆ? ಇದು ಚರ್ಚಿಸಲೇಬೇಕಾದ ವಿಷಯ.
ಟಿವಿ9 ಕನ್ನಡ ಡಿಜಿಟಲ್ ಈ ಹಿನ್ನೆಲೆಯಲ್ಲಿ ‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ಹೊಸ ಸರಣಿಯನ್ನು ಪ್ರಾರಂಭಿಸಿದೆ. ನಿಮ್ಮ ಪ್ರತಿಕ್ರಿಯಾತ್ಮಕ ಬರಹಗಳನ್ನು ಸುಮಾರು 300 ಪದಗಳಲ್ಲಿ ಕಳಿಸಬಹುದು. ಜೊತೆಗೊಂದು ಭಾವಚಿತ್ರವಿರಲಿ. tv9kannadadigital@gmail.com
*
ಸಾಗರದ ಪುರಪ್ಪೆಮನೆಯಲ್ಲಿ ವಾಸಿಸುತ್ತಿರುವ ಲೇಖಕಿ ಕೃತಿ ಆರ್. ಅವರ ಪ್ರತಿಕ್ರಿಯೆ
*
ಅತ್ಯಾಚಾರ ಅನಿವಾರ್ಯವಾದಾಗ ಅದನ್ನು ಮಲಗಿ ಆನಂದಿಸುವುದು ಅನ್ನುವುದರಲ್ಲಿ ಏನೆಲ್ಲ ಪೂರ್ವಗ್ರಹಗಳನ್ನೊಳಗೊಂಡಿದೆ ಅಂತ ನಾವು ನೋಡಬೇಕು. ಅದನ್ನು ಸೃಷ್ಟಿಸಿದ, ಬಳಸುವ ಸಮಾಜ ಹೇಗೆ ಯೋಚಿಸುತ್ತದೆ ಅನ್ನುವುದನ್ನು ಅರ್ಥಮಾಡಿಕೊಳ್ಳದಿದ್ದರೆ ನಾವು ಮಾಡುವ ಕೆಲಸಗಳೂ ಅಸೂಕ್ಷ್ಮವಾಗಿಯೇ ಉಳಿಯುತ್ತದೆ. ನಾವು ಹ್ಯೂಮನ್ ರೈಟ್ಸ್ ಅಬ್ಯೂಸ್ ಬಗ್ಗೆ ಯೋಚಿಸುತ್ತೇವೆ. ಅಂದರೆ ನಮ್ಮ ಹಕ್ಕಿನ ಮೇಲಿನ ಅತಿಕ್ರಮಣ. ಅತ್ಯಾಚಾರವು ಹೆಣ್ಣಿನ ದೇಹದ ಮೇಲೆ ಆಗುವ ಅತಿಕ್ರಮಣ. ಮನುಷ್ಯ ತಾನು ಇನ್ನೊಬ್ಬಳಿಂದ ಬೇರೆ ಎಂದು ಕೊಳ್ಳುವಲ್ಲಿ ನಮ್ಮ ದೇಹದ ಅಸ್ಮಿತೆ ಮುಖ್ಯವಾದದ್ದು. ಅದರ ಮೂಲಕವೇ ಬರುವ ಅನುಭವ, ಸಂವೇದನೆ, ಮನಸ್ಸು. ಎಲ್ಲಕ್ಕೂ ಮೂಲ ಈ ದೇಹ. ಅದಕ್ಕೆ ಅದರ ಅತಿಕ್ರಮಣವಾಗುವುದು ಆತ್ಯಂತಿಕ ಎಂದು ನಮಗೆ ಅನ್ನಿಸುವುದು.
ಆದರೆ ಹುಚ್ಚು ನಾಯಿ ಕಡಿದರೂ ನಮ್ಮ ದೇಹಕ್ಕೇ ಪರಿಣಾಮವಾಗುವುದು. ಆದರೆ ನಮಗೆ ವ್ಯತ್ಯಾಸ ತಕ್ಷಣ ಗೊತ್ತಾಗುತ್ತದೆಯಲ್ಲವೇ? ಯಾಕೆ ಹೀಗೆ? ಯಾಕೆಂದರೆ ನಮ್ಮ ಯೋನಿಯು ನಮ್ಮ ಅಸ್ಮಿತೆಯ ಪ್ರಮುಖ ಅಂಶವೆಂದು ಗುರುತಿಸುವ ಸಮಾಜದಲ್ಲಿ ನಾವಿದ್ದೇವೆ. ಹಾಗಾಗಿಯೇ ಅತ್ಯಾಚಾರವೆಂದರೆ ಬರೀ ದೇಹಕ್ಕಲ್ಲ, ಮನಸ್ಸಿಗೂ ಆಘಾತ. ಅದರಿಂದ ಹೆಣ್ಣು ತನ್ನ ಕುಟುಂಬಕ್ಕೆ, ತನ್ನ ಜಾತಿಗೆ, ಕೊನೆಗೆ ತನ್ನ ದೇಶಕ್ಕೂ ಪರಿತ್ಯಕ್ತಳಾಗುತ್ತಾಳೆ. ಹಾಗಾಗಿಯೇ ಪ್ರತೀ ಸಲ ಅತ್ಯಾಚಾರದ ಪ್ರಕರಣ ಹೊರಗೆ ಬಂದಾಗಲೂ ಅದು ಹೆಣ್ಣಿನ ದೇಹಕ್ಕೆ, ತಕ್ಷಣಕ್ಕೆ ಅವಳ ಮನಸ್ಸಿನ ಮೇಲಾಗುವ ಪರಿಣಾಮಕ್ಕಿಂತ ಉಳಿದವುಗಳ ಬಗ್ಗೆಯೇ ಚರ್ಚೆಯಾಗುತ್ತದೆ, ಮತ್ತು ಆ ಚರ್ಚೆಗಳು ಮತ್ತೆ ನಮ್ಮನ್ನು ಆ ಯೋನಿಯ ಅಸ್ಮಿತೆಯನ್ನು ಇನ್ನಷ್ಟು ನೆಚ್ಚಿಕೊಳ್ಳುವಂತೆ ಮಾಡುತ್ತದೆ.
ನಮ್ಮ ಯೋನಿಯೇ ದೇಶಕ್ಕೂ ಅವಮಾನ ಮಾಡುವಂತದ್ದಾದಾಗ, ಅದರ ರಕ್ಷಣೆಯೆ ನಮ್ಮ ಹಿತೈಶಿಗಳ ಕೆಲಸವೂ, ಅದರ ಅತಿಕ್ರಮಣವೇ ಎಲ್ಲ ವೈರಿಗಳ ಕೆಲಸವೂ ಆಗಿಹೋಗಿರುತ್ತದೆ. ಇನ್ನು ಹೆಚ್ಚಿನ ಅತ್ಯಾಚಾರಗಳು ಮನೆಯ, ಕುಟುಂಬದ ವಾತಾವರಣದಲ್ಲೇ ನಡೆಯುವುದನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು? ಅವರು ರಕ್ಷಣೆ ಮಾಡಿದ್ದರಿಂದ ಅದನ್ನು ಬಳಸುವ ಹಕ್ಕು ಅವರದ್ದೆಂದೆ? ಹಾಗಿರುವುದರಿಂದಲೇ ‘ಮಲಗಿ ಆನಂದಿಸುವುದು’ ಹೆಂಗಸರಿಗೆ ಅನಿವಾರ್ಯವಾಗಿರುವುದು ಕುಟುಂಬದಲ್ಲೇ. ಅದರ ಅನುಭವದಲ್ಲೇ ಎಲ್ಲರೂ ಮಾತನಾಡುವುದು. ಮತ್ತು ನಾವೂ ಒಪ್ಪಿಕೊಂಡಿರುವುದು. ಅಲ್ಲಿಂದ ಬದಲಾಗದೇ, ಹೊರಗಿನ ಅತ್ಯಾಚಾರದ ಬಗ್ಗೆ ಮಾತ್ರ ಚರ್ಚೆಯಾದರೆ ಅದು ಮತ್ತೆ ವೈರಿ ಯಾರು, ಹಿತೈಶಿ ಯಾರು ಎನ್ನುವ ರಾಜಕೀಯ ಮೇಲಾಟವೇ ಹೊರತು, ಹೆಣ್ಣಿನ ದೇಹದ ಹಕ್ಕಿನ ಬಗ್ಗೆ ಮಾತಾಗುವುದಿಲ್ಲ.
ಇದನ್ನು ಅರ್ಥಮಾಡಿಕೊಳ್ಳದೇ ಎಲ್ಲಾ ರಂಗಗಳಲ್ಲೂ ಬರುವ ಇಂತಹ ಸಂವೇದನಾ ರಹಿತ ಮಾತಿಗೇನು ಪ್ರತಿಕ್ರಿಯೆ ನೀಡುವುದು?
ಇದನ್ನೂ ಓದಿ : ಜನಪ್ರತಿನಿಧಿಗಳೇ ಎಚ್ಚರವಿರಲಿ : ಶಾಸಕಿಯರೇ, ಪಕ್ಷಬೇಧ ಮರೆತು ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಬೇಕಾದ ಹೊಣೆ ನಿಮ್ಮದೇ