How to transfer PF balance: ಪ್ರಾವಿಡೆಂಟ್ ಫಂಡ್ ಬಾಕಿಯನ್ನು 6 ಹಂತಗಳಲ್ಲಿ ವರ್ಗಾವಣೆ ಮಾಡುವುದು ಹೇಗೆ?

| Updated By: Srinivas Mata

Updated on: Jan 14, 2022 | 5:57 PM

ಉದ್ಯೋಗ ಬದಲಾವಣೆ ಮಾಡುವಾಗ ಪ್ರಾವಿಡೆಂಟ್ ಫಂಡ್ ವರ್ಗಾವಣೆ ಹೇಗೆ? ಈ ಆರು ಹಂತಗಳನ್ನು ಅನುಸರಿಸಿ ಪಿಎಫ್ ವರ್ಗಾವಣೆ ಮಾಡಬಹುದು.

How to transfer PF balance: ಪ್ರಾವಿಡೆಂಟ್ ಫಂಡ್ ಬಾಕಿಯನ್ನು 6 ಹಂತಗಳಲ್ಲಿ ವರ್ಗಾವಣೆ ಮಾಡುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಒಂದು ಉದ್ಯೋಗ ಬಿಟ್ಟು, ಮತ್ತೊಂದಕ್ಕೆ ಸೇರುವುದು ಅಂದರೆ ಉದ್ಯೋಗಿಗಳ ಪಾಲಿಗೆ ಹಲವು ಬದಲಾವಣೆಗಳನ್ನು ಮಾಡಬೇಕಾದ ಸನ್ನಿವೇಶ ಎದುರಾಗುತ್ತದೆ. ಕಾಗದ- ಪತ್ರ ವ್ಯವಹಾರಗಳೇ ಬೇಕಾದಷ್ಟು ಇರುತ್ತದೆ. ಅದರಲ್ಲಿ ಬಹಳ ಮುಖ್ಯವಾದದ್ದು ಪ್ರಾವಿಡೆಂಟ್ ಫಂಡ್ ಖಾತೆಯ ಬಾಕಿಯ ವರ್ಗಾವಣೆ (How to transfer PF balance). ಈ ಹಿಂದಿನ ಉದ್ಯೋಗದಾತರಿಂದ ಸದ್ಯದ ಉದ್ಯೋಗದಾತರಿಗೆ ಅದನ್ನು ಬದಲಾಯಿಸಿಕೊಳ್ಳಬೇಕು. ಬಹಳ ಜನಕ್ಕೆ ಇದು ಹೆದರಿಕೆ ಸಂಗತಿ. ಏಕೆಂದರೆ, ಕೆಲಸ ಬದಲಾಯಿಸುತ್ತಾ ಪಿಎಫ್​ ವರ್ಗಾವಣೆ ಮಾಡಿಸುವುದನ್ನೇ ಬಿಟ್ಟವರು ಬೇಕಾದಷ್ಟು ಮಂದಿ ಕಾಣಸಿಗುತ್ತಾರೆ. ಎಲ್ಲಿ ಇಪಿಎಫ್​ಒ ಕಚೇರಿಗೆ ಅಲೆದಾಡಬೇಕಾಗುತ್ತದೆ ಎಂಬ ಆತಂಕ ಹಲವರದು. ಖಂಡಿತಾ ಈ ರೀತಿ ಅಂಜುವ ಅಗತ್ಯ ಇಲ್ಲ. ಮನೆಯಲ್ಲಿ ಕುಳಿತೇ ಪಿಎಫ್​ ವರ್ಗಾವಣೆ ಮಾಡಬಹುದು. ಸರ್ಕಾರದ ಬೆಂಬಲ ಇರುವ ಇಪಿಎಫ್​ಒ ಆನ್​ಲೈನ್​ನಲ್ಲೇ ಪಿಎಫ್​ ವರ್ಗಾವಣೆಗೆ ವ್ಯವಸ್ಥೆ ಮಾಡಿಕೊಟ್ಟಿದೆ.

ಯಾವಾಗ ಯೂನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಪರಿಚಯ ಆಯಿತೋ ಪಿಎಫ್ ಬಾಕಿಯನ್ನು ಆನ್​ಲೈನ್​ನಲ್ಲಿ ವರ್ಗಾವಣೆ ಮಾಡುವ ಪ್ರಕ್ರಿಯೆ ಸಲೀಸಾಗಿದೆ. ಯುಎಎನ್​ ಮೂಲಕವಾಗಿ ಉದ್ಯೋಗಿಯ ಎಲ್ಲ ಖಾತೆಯೂ ಒಂದೇ ಕಡೆ ಇರುತ್ತದೆ. ಹಣ ಬೇರೆ ಬೇರೆ ಖಾತೆಯಲ್ಲಿ ಇರಬಹುದು. ಆದ್ದರಿಂದ ನಿಮ್ಮ ಸದ್ಯದ ಉದ್ಯೋಗದಾತರ ಜತೆಗೆ ಯುಎಎನ್​ ಹಂಚಿಕೊಂಡರೆ ಸಾಕು. ಆ ಮೂಲಕ ಹಣವು ವರ್ಗಾವಣೆ ಆಗುತ್ತದೆ. ಇದರ ಹೊರತಾಗಿ, ಆನ್​ಲೈನ್ ಮೂಲಕ ಆರು ಹಂತಗಳಲ್ಲಿ ಪಿಎಫ್ ವರ್ಗಾವಣೆ ಹೇಗೆ ಮಾಡಬೇಕು ಎಂಬ ಬಗ್ಗೆ 2020ನೇ ಇಸವಿಯಲ್ಲಿ ಇಪಿಎಫ್​ಒ ಮಾಹಿತಿ ಹಂಚಿಕೊಂಡಿದೆ.

1] ಇಪಿಎಫ್​ಒ ​​ಸದಸ್ಯ ಪೋರ್ಟಲ್‌ನಲ್ಲಿ ಲಾಗಿನ್ ಮಾಡಬೇಕು — unifiedportal-mem.epfindia.gov.in/memberinterface/ — ಮತ್ತು UAN ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಬೇಕು;

2] ‘ಆನ್‌ಲೈನ್ ಸರ್ವೀಸಸ್​’ಗೆ ತೆರಳಿ ಮತ್ತು ‘ಒನ್ ಮೆಂಬರ್ ಒನ್ ಇಪಿಎಫ್ ಅಕೌಂಟ್(ವರ್ಗಾವಣೆ ವಿನಂತಿ)’ ಕ್ಲಿಕ್ ಮಾಡಬೇಕು;

3] ಪ್ರಸ್ತುತ ಉದ್ಯೋಗಕ್ಕಾಗಿ ‘ವೈಯಕ್ತಿಕ ಮಾಹಿತಿ’ ಮತ್ತು ‘PF ಖಾತೆ’ ದೃಢೀಕರಿಸಬೇಕು;

4] ‘ವಿವರಗಳನ್ನು ಪಡೆಯಿರಿ’ನಲ್ಲಿ ಕ್ಲಿಕ್ ಮಾಡಬೇಕು, ಹಿಂದಿನ ಉದ್ಯೋಗದ ಪಿಎಫ್​ ಖಾತೆಯ ವಿವರಗಳು ಕಾಣಿಸುತ್ತವೆ;

5] ಫಾರ್ಮ್ ಅನ್ನು ದೃಢೀಕರಿಸಲು ‘ಹಿಂದಿನ ಉದ್ಯೋಗದಾತ’ ಅಥವಾ ‘ಪ್ರಸ್ತುತ ಉದ್ಯೋಗದಾತ’ ಆಯ್ಕೆ ಮಾಡಬೇಕು;

ಮತ್ತು 6] ನಿಮ್ಮ UAN ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಸ್ವೀಕರಿಸಲು ‘OTP ಪಡೆಯಿರಿ’ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. OTP ನಮೂದಿಸಿ ಮತ್ತು ‘ಸಲ್ಲಿಸು’ (Submit) ಬಟನ್ ಕ್ಲಿಕ್ ಮಾಡಬೇಕು.

ಆಯ್ಕೆ ಮಾಡಿದ ನೇಮಕಾತಿದಾರರಿಂದ ದೃಢೀಕರಣದ ನಂತರ ಇಪಿಎಫ್​ಒದಿಂದ ಇಪಿಎಫ್​ ಖಾತೆಯನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ಇಪಿಎಫ್​ ಖಾತೆಯಲ್ಲಿ ಮಾಸಿಕ ಇಪಿಎಫ್​ ಕೊಡುಗೆಯನ್ನು ಮುಂದುವರಿಸಲು ಮತ್ತು ನಿಮ್ಮ ಹೊಸ ಖಾತೆಯನ್ನು ಸಕ್ರಿಯಗೊಳಿಸುವುದಕ್ಕೆ ಸಾಧ್ಯಗೊಳಿಸುತ್ತದೆ.

ಇದನ್ನೂ ಓದಿ: EPFO e-nomination: ಇಪಿಎಫ್​ಒ ಇ-ನಾಮಿನೇಷನ್ ಮಾಡುವುದು ಹೇಗೆ ಎಂಬ ಬಗ್ಗೆ ಹಂತಹಂತವಾದ ಮಾಹಿತಿ ಇಲ್ಲಿದೆ

Published On - 5:47 pm, Fri, 14 January 22