ತಿರುವನಂತಪುರಂ: ಕಳೆದ ವಾರ ಕೇರಳ ಸರ್ಕಾರ (Kerala government) ನಡೆಸಿದ ಪ್ರಾಥಮಿಕ ಸಾಕ್ಷರತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ 104 ವರ್ಷದ ಕುಟ್ಟಿಯಮ್ಮ(Kuttiyamma) ಅವರಿಗೆ ಅಭಿನಂದನೆ ಮತ್ತು ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಕೇರಳ ರಾಜ್ಯ ಸಾಕ್ಷರತಾ ಮಿಷನ್‌ನ (Kerala State Literacy Mission) ವಿದ್ಯಾರ್ಥಿಗಳ ಪ್ರಾಥಮಿಕ ಜ್ಞಾನವನ್ನು ಪರೀಕ್ಷಿಸುವ ಯೋಜನೆಯಾದ ‘ಮಿಗವುಲ್ಸವಂ’(Mikavulsavam) ಅಂಗವಾಗಿ ನಡೆಸಿದ ಪರೀಕ್ಷೆಯಲ್ಲಿ ಕೋಟ್ಟಯಂ ಜಿಲ್ಲೆಯ ಆಯರ್ಕುನ್ನಂ ಪಂಚಾಯತ್‌ನ ಕುಟ್ಟಿಯಮ್ಮ 100 ಅಂಕದಲ್ಲಿ 89 ಅಂಕಗಳನ್ನು ಗಳಿಸಿದ್ದಾರೆ. ಕುಟ್ಟಿಯಮ್ಮನಂತೆಯೇ ಪರೀಕ್ಷೆಯಲ್ಲಿ ತೇರ್ಗಡೆಯಾದವರು ನಾಲ್ಕನೇ ತರಗತಿಯ ಸಮಾನ ಸಾಕ್ಷರತಾ ಪರೀಕ್ಷೆಗೆ ಕುಳಿತುಕೊಳ್ಳಲು ಅರ್ಹರಾಗಿರುತ್ತಾರೆ. ಯೋಜನೆಯ ಭಾಗವಾಗಿ, ರಾಜ್ಯದ ಪ್ರತಿ ಪಂಚಾಯಿತಿಗಳಲ್ಲಿ ಇಂತಹ ಪರೀಕ್ಷೆಗಳು ನಡೆಯುತ್ತವೆ. ರಾಜ್ಯ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ (V Sivankutty) ಈ ಶತಾಯುಷಿಯ ದೃಢತೆ ಮತ್ತು ಸಂಕಲ್ಪಕ್ಕಾಗಿ ಅಭಿನಂದಿಸಿದ್ದಾರೆ. ಅಕ್ಷರ, ಪದ ಮತ್ತು ಜ್ಞಾನದ ಜಗತ್ತಿಗೆ ಪ್ರವೇಶಿಸಲು ವ್ಯಕ್ತಿಯ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಕುಟ್ಟಿಯಮ್ಮ ತೋರಿಸಿಕೊಟ್ಟರು. ಗುರಿಗಳನ್ನು ಸಾಧಿಸುವ ಮನಸ್ಸು ಇದ್ದರೆ, ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಸಚಿವರು ಹೇಳಿದ್ದಾರೆ.
ನವೆಂಬರ್ 10 ರಂದು ಫಲಿತಾಂಶ ಪ್ರಕಟವಾದ ನಂತರ ಆಯರ್ಕುನ್ನಂ ಪಂಚಾಯತ್ ಕೌನ್ಸಿಲ್ ಸದಸ್ಯರು ಕುಟ್ಟಿಯಮ್ಮ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದರು. ಆಕೆಯ ಸಾಧನೆಗೆ ಅಭಿನಂದಿಸಲು ಸಿಪಿಐ(ಎಂ) ಮತ್ತು ಬಿಜೆಪಿಯ ಜಿಲ್ಲಾ ಮುಖಂಡರು ಕೂಡ ಅವರ ಮನೆಗೆ ಭೇಟಿ ನೀಡಿದ್ದಾರೆ.
104-year-old Kuttiyamma from Kottayam has scored 89/100 in the Kerala State Literacy Mission’s test. Age is no barrier to enter the world of knowledge. With utmost respect and love, I wish Kuttiyamma and all other new learners the best. #Literacy pic.twitter.com/pB5Fj9LYd9
— V. Sivankutty (@VSivankuttyCPIM) November 12, 2021
ಓದು, ಬರವಣಿಗೆ ಮತ್ತು ಸಾಕ್ಷರತಾ ಪರೀಕ್ಷೆಯ ಇತರ ಅಂಶಗಳಲ್ಲಿ ಕುಟ್ಟಿಯಮ್ಮಗೆ ತರಬೇತಿ ನೀಡಿದ ಸಾಕ್ಷರತಾ ಪ್ರೇರಕ ರೆಹನಾ ಪ್ರಕಾರ “ಅವರಿಗೆ ಕಲಿಕೆಯಲ್ಲಿ ತುಂಬಾ ಆಸಕ್ತಿ ಇತ್ತು. ಪತ್ರಿಕೆಯನ್ನು ಸ್ವಲ್ಪ ಓದುತ್ತಿದ್ದರು. ಆಕೆ ಅಕ್ಷರಗಳನ್ನು ಜೋಡಿಸಿ ಓದಬಲ್ಲರು ಎಂದು ಆಕೆಯ ಕುಟುಂಬ ಸದಸ್ಯರು ನನಗೆ ತಿಳಿಸಿದರು. ಆದರೆ ಆಕೆಗೆ ಬರೆಯುವುದು ಹೇಗೆಂದು ತಿಳಿದಿರಲಿಲ್ಲ. ಆದ್ದರಿಂದ, ನಾನು ಅವರ ಹೆಸರು ಮತ್ತು ವಿಳಾಸವನ್ನು ಬರೆಯಲು ಕಲಿಸಿದೆ. ಅವರು ತುಂಬಾ ವೇಗವಾಗಿ ಕಲಿತುಕೊಂಡರು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಪರೀಕ್ಷೆಗೆ ಎರಡು ತಿಂಗಳ ಮೊದಲು ಕುಟ್ಟಿಯಮ್ಮ ಮತ್ತು ಇತರ ಆರು ವಿದ್ಯಾರ್ಥಿಗಳಿಗೆ ಪಾಠ ಮಾಡಿರುವುದಾಗಿ ರೆಹನಾ ಹೇಳಿದ್ದಾರೆ. ಕುಟ್ಟಿಯಮ್ಮ ತುಂಬಾ ಕ್ರಿಯಾಶೀಲಳಾಗಿದ್ದು, ಯಾರ ಸಹಾಯವೂ ಇಲ್ಲದೇ ತನ್ನಷ್ಟಕ್ಕೆ ತಾನೇ ಮನೆ ಸುತ್ತಾಡಬಲ್ಲವರಾಗಿದ್ದರು. “ಆದಾಗ್ಯೂ, ಅವರಿಗೆ ಕಿವಿ ಸ್ವಲ್ಪ ಕಡಿಮೆ ಕೇಳಿಸುತ್ತಿದ್ದು ಮತ್ತು ರಾತ್ರಿಯಲ್ಲಿ ಅವರ ದೃಷ್ಟಿ ದುರ್ಬಲವಾಗಿರುತ್ತದೆ” ಎಂದು ಅವರು ಹೇಳಿದರು.
ಗಣಿತ ಅವರ ನೆಚ್ಚಿನ ವಿಷಯ. ಯುವತಿಯಾಗಿದ್ದಾಗ ಅವರು ತರಕಾರಿಗಳನ್ನು ಮಾರಾಟ ಮಾಡುವ ಅಂಗಡಿಯನ್ನು ನಿರ್ವಹಿಸುತ್ತಿದ್ದರು, ಆದ್ದರಿಂದ ಅವರು ಸಂಖ್ಯೆಗಳು ಮತ್ತು ಲೆಕ್ಕಾಚಾರದಲ್ಲಿ ಸಾಕಷ್ಟು
ಪರಿಣಿತರಾಗಿದ್ದರು. ಗಣಿತದಲ್ಲಿ ಪೂರ್ಣ ಅಂಕ ಪಡೆದಿದ್ದಳು. ಅವಳು ಚೆನ್ನಾಗಿ ಅಂಕ ಗಳಿಸಲು ಸಾಧ್ಯವಾಗದ ಏಕೈಕ ವಿಭಾಗದಲ್ಲಿ ಅವಳ ಸ್ಥಳೀಯ ಪಂಚಾಯತ್ ಮತ್ತು ಕೇರಳ ರಾಜ್ಯದ ಬಗ್ಗೆ ಬರೆಯಲು ಕೇಳಲಾಯಿತು. ಅಷ್ಟರಲ್ಲಾಗಲೇ ಆಕೆ ಸುಸ್ತಾಗಿದ್ದಳು. ಆದರೆ ಅವರು ತಮ್ಮ ಫಲಿತಾಂಶದಿಂದ ತುಂಬಾ ಸಂತೋಷಪಟ್ಟರು ಏಕೆಂದರೆ ಅವರು ಹೆಚ್ಚು ಅಂಕಗಳನ್ನು ಗಳಿಸುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ, ”ಎಂದು ರೆಹನಾ ಹೇಳಿದ್ದಾರೆ.
ಗಣಿತ, ಮಲಯಾಳಂ ಮತ್ತು ಸಾಮಾನ್ಯ ಜ್ಞಾನ ಇವು ಸಾಕ್ಷರತಾ ಪರೀಕ್ಷೆಯಲ್ಲಿನ ವಿಷಯಗಳಾಗಿವೆ.
ಕುಟ್ಟಿಯಮ್ಮ ಅವರ ಮೊಮ್ಮಗಳು ರೆಜಿನಿ ಬಿಜು, ಶತಾಯುಷಿಯಾದ ಅವರು ತಮ್ಮ ಕುಟುಂಬದ ಐದು ತಲೆಮಾರುಗಳನ್ನು ನೋಡಿದ್ದಾರೆ. ಅವರ ವೈಯಕ್ತಿಕ ಅಭ್ಯಾಸಗಳಲ್ಲಿನ ಶಿಸ್ತಿನಿಂದಲೇ ಅವರು ದೀರ್ಘಾಯುಷಿಯಾಗಿದ್ದು ಎಂದು ಅವರು ಹೇಳಿದ್ದಾರೆ.
ಅವರು ಕಟ್ಟುನಿಟ್ಟಾದ ಆಹಾರ ಪದ್ಧತಿಯನ್ನು ಹೊಂದಿದ್ದಾರೆ. ಅವರು ಉಪಹಾರ ಮತ್ತು ರಾತ್ರಿಯ ಊಟವನ್ನು ಮಾತ್ರ ತಿನ್ನುತ್ತಾರೆ ಅದೂ ಕೂಡ ಕಡಿಮೆ ಪ್ರಮಾಣದಲ್ಲಿ. ಅವರು ಮರಗೆಣಸು ಮತ್ತು ಮೀನು ಇಷ್ಟಪಡುತ್ತಾರೆ . ಅವಳು ಹಗಲಿನಲ್ಲಿ ನಿದ್ರಿಸುವುದಿಲ್ಲ ಮತ್ತು ತನ್ನನ್ನು ತಾನು ಸಕ್ರಿಯವಾಗಿ ಮತ್ತು ತೊಡಗಿಸಿಕೊಂಡಿರುತ್ತಾಳೆ. ಅದಕ್ಕಾಗಿಯೇ ಆಕೆಗೆ ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳಿಲ್ಲ ಎಂದು ರೆಜಿನಿ ಹೇಳಿದರು.
ಕೇರಳದ ಸಾಕ್ಷರತಾ ಕಾರ್ಯಕ್ರಮವು ವಿಶೇಷವಾಗಿ ವಿವಿಧ ಕಾರಣಗಳಿಗಾಗಿ ಶಾಲೆಗೆ ಹೋಗಲು ಸಾಧ್ಯವಾಗದವರಿಗೆ ಓದುವುದು, ಬರೆಯುವುದು ಮತ್ತು ಇತರ ಶೈಕ್ಷಣಿಕ ಕೌಶಲ್ಯಗಳನ್ನು ನೀಡುವ ಗುರಿಯನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಈ ಕಾರ್ಯಕ್ರಮವು ಅಪ್ರಾಪ್ತ ವಯಸ್ಕರು ಮತ್ತು ಶತಾಯುಷಿಗಳು, ಹೆಚ್ಚಾಗಿ ಮಹಿಳೆಯರು, ಸಮಾನತೆಯ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವುದರೊಂದಿಗೆ ದೊಡ್ಡ ಸುದ್ದಿಯಾಗುತ್ತಿದೆ.
ಕಳೆದ ವರ್ಷ ಕೊಲ್ಲಂ ಜಿಲ್ಲೆಯ ನಿವಾಸಿಯಾದ ಭಾಗೀರಥಿ ಅಮ್ಮಾ ಅವರಿಗೆ ಮಹಿಳಾ ಸಬಲೀಕರಣಕ್ಕಾಗಿ ನೀಡಿದ ಕೊಡುಗೆಗಾಗಿ ಕೇಂದ್ರದ ನಾರಿ ಶಕ್ತಿ ಪುರಸ್ಕಾರವನ್ನು ನೀಡಲಾಯಿತು. 105 ನೇ ವಯಸ್ಸಿನಲ್ಲಿ, ಅವರು ರಾಜ್ಯದ ಸಾಕ್ಷರತಾ ಕಾರ್ಯಕ್ರಮದಲ್ಲಿ ಅತ್ಯಂತ ಹಿರಿಯ ಮಹಿಳೆ ಆಗಿದ್ ಅವರು ಶೇ 75 ಅಂಕಗಳೊಂದಿಗೆ IV ತರಗತಿಯ ಸಮಾನತೆಯ ಪರೀಕ್ಷೆ ಪಾಸಾಗಿದ್ದರು. ಈ ವರ್ಷದ ಭಾಗೀರಥಿ ಅಮ್ಮ(107) ಜುಲೈನಲ್ಲಿ ನಿಧನರಾದರು.
ಇದನ್ನೂ ಓದಿ: ಕೇವಲ ಮದ್ಯದ ವಾಸನೆ ಬಂದರೆ ವ್ಯಕ್ತಿ ಅಮಲೇರಿದ ಎಂದು ಅರ್ಥವಲ್ಲ: ಕೇರಳ ಹೈಕೋರ್ಟ್