ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ಹಡಗು ಮಗುಚಿ 13 ಜನ ಸಾವು, 101 ಮಂದಿಯ ರಕ್ಷಣೆ

ಪ್ಯಾಸೆಂಜರ್​ ಬೋಟ್​ಗೆ ನೌಕಾ ಸೇನೆಯ ಹಡಗು ಡಿಕ್ಕಿ ಹೊಡೆದ ಪರಿಣಾಮ 13 ಜನ ಸಾವನ್ನಪ್ಪಿದ್ದಾರೆ. ಮುಂಬೈ ಬಂದರಿನಲ್ಲಿ ಇಂಜಿನ್ ಟ್ರಯಲ್ಸ್ ನಡೆಸುತ್ತಿದ್ದಾಗ ಘಟನೆ ಸಂಭವಿಸಿದೆ. ಭಾರತೀಯ ನೌಕಾಪಡೆಯ ನೌಕೆ ನಿಯಂತ್ರಣ ಕಳೆದುಕೊಂಡು ಪ್ರಯಾಣಿಕರ ಬೋಟ್​ಗೆ ಡಿಕ್ಕಿ ಹೊಡೆದ ಕಾರಣದಿಂದ ಹಡಗು ಮಗುಚಿದೆ. ಸಮುದ್ರದಲ್ಲಿ ಮುಳುಗಿ 13 ಜನರು ಸಾವನ್ನಪ್ಪಿದ್ದು, 101 ಜನರ ರಕ್ಷಣೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ.

ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ಹಡಗು ಮಗುಚಿ 13 ಜನ ಸಾವು, 101 ಮಂದಿಯ ರಕ್ಷಣೆ
New Project 2024 12 18t210226.545
Follow us
ಸುಷ್ಮಾ ಚಕ್ರೆ
|

Updated on: Dec 18, 2024 | 9:21 PM

ಮುಂಬೈ: ಮಹಾರಾಷ್ಟ್ರದ ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗೊಂದು ಮಗುಚಿ ಬಿದ್ದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಾಹಿತಿ ಪ್ರಕಾರ, ಮೃತರಲ್ಲಿ 10 ಪ್ರಯಾಣಿಕರು ಮತ್ತು ಮೂವರು ನೌಕಾಪಡೆ ಸಿಬ್ಬಂದಿ ಸೇರಿದ್ದಾರೆ. ಗೇಟ್‌ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪಕ್ಕೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇಂದು ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ಘಟನೆಯ ನಂತರ, ಪ್ರಯಾಣಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

ಘಟನೆ ನಡೆದ ಸ್ಥಳದಲ್ಲಿ 4 ಸೇನಾ ಹೆಲಿಕಾಪ್ಟರ್‌ಗಳು, 11 ನೌಕಾ ಕ್ರಾಫ್ಟ್‌ಗಳು ಹಾಗೂ 1 ಕೋಸ್ಟ್​ಗಾರ್ಡ್ ಬೋಟ್​ಗಳು ಬೀಡುಬಿಟ್ಟಿವೆ. 3 ಮೆರೈನ್ ಪೊಲೀಸ್ ಕ್ರಾಫ್ಟ್‌ಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. 10 ಪ್ರವಾಸಿಗರು, ಮೂವರು ನೌಕಾಪಡೆ ಸಿಬ್ಬಂದಿ ದುರ್ಮರಣವನ್ನಪ್ಪಿದ್ದಾರೆ. ಪ್ರವಾಸಿಗರು ಎಲಿಫೆಂಟಾ ದ್ವೀಪಗಳಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನಾಪತ್ತೆಯಾಗಿರುವ 7-8 ಪ್ರಯಾಣಿಕರಿಗಾಗಿ ಶೋಧ ಕಾರ್ಯ ನಡೆದಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಘಟನೆಗೆ ಸಂತಾಪ ಸೂಚಿಸಿದ್ದು, ಪರಿಹಾರ ಮೊತ್ತ ಘೋಷಿಸಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಇವಿಎಂ ಮಂದಿರ ನಿರ್ಮಿಸಬೇಕು; ಶಿವಸೇನೆ ನಾಯಕ ಸಂಜಯ್ ರಾವತ್ ಲೇವಡಿ

80 ಪ್ರಯಾಣಿಕರು ಮತ್ತು 5 ಸಿಬ್ಬಂದಿ ಸೇರಿದಂತೆ 101 ಜನರು ಹಡಗಿನಲ್ಲಿದ್ದರು. ನೌಕಾಪಡೆ, ಜೆಎನ್‌ಪಿಟಿ, ಕೋಸ್ಟ್ ಗಾರ್ಡ್, ಸ್ಥಳೀಯ ಪೊಲೀಸ್ ಮತ್ತು ಸ್ಥಳೀಯ ಮೀನುಗಾರಿಕಾ ದೋಣಿಗಳ ನೆರವಿನೊಂದಿಗೆ ಪ್ರಸ್ತುತ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಈವರೆಗೆ 101 ಮಂದಿಯನ್ನು ರಕ್ಷಿಸಲಾಗಿದೆ.

ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, 11 ನೌಕಾಪಡೆಯ ದೋಣಿಗಳು ಮತ್ತು ಮರೈನ್ ಪೊಲೀಸರ ಮೂರು ಬೋಟ್‌ಗಳು ಮತ್ತು ಕೋಸ್ಟ್ ಗಾರ್ಡ್‌ನ ದೋಣಿಯನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 4 ಹೆಲಿಕಾಪ್ಟರ್‌ಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಪೊಲೀಸ್ ಸಿಬ್ಬಂದಿ, ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ ಮತ್ತು ಪ್ರದೇಶದ ಮೀನುಗಾರರು ಸಹ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ