ಪಾಟ್ನಾ: ಬಿಹಾರದಲ್ಲಿ 15 ವರ್ಷದ ವಿದ್ಯಾರ್ಥಿಯೊಬ್ಬ ಸಾರ್ವಜನಿಕವಾಗಿ ಧೂಮಪಾನ (Smoking) ಮಾಡುತ್ತಿದ್ದನ್ನು ಕಂಡ ಶಿಕ್ಷಕರೊಬ್ಬರು ಬೆಲ್ಟ್ ನಿಂದ ಅಮಾನುಷವಾಗಿ ಥಳಿಸಿದ್ದು, ಏಟು ತಿಂದ ಬಾಲಕ ಸಾವಿಗೀಡಾಗಿದ್ದಾನೆ. ಬಿಹಾರದ (Bihar) ಪೂರ್ವ ಚಂಪಾರಣ್ ಜಿಲ್ಲೆಯ ಬಜರಂಗಿ ಕುಮಾರ್ ಎಂಬ ಬಾಲಕ, ಮಧುಬನ್ ಪ್ರದೇಶದಲ್ಲಿ ತನ್ನ ತಾಯಿಯ ಮೊಬೈಲ್ ಫೋನ್ ರಿಪೇರಿ ಮಾಡಿಸಿ ಹಿಂತಿರುಗುತ್ತಿದ್ದಾಗ, ಶನಿವಾರ ಬೆಳಗ್ಗೆ 11.30ರ ಹೊತ್ತಿಗೆ ಹಾರ್ದಿಯಾ ಸೇತುವೆಯ ಕೆಳಗೆ ತನ್ನ ಸ್ನೇಹಿತರೊಂದಿಗೆ ಸಿಗರೇಟ್ ಸೇದಿದ್ದಾನೆ ಎಂದು ಮೃತ ವಿದ್ಯಾರ್ಥಿಯ ಸಂಬಂಧಿಕರು ಹೇಳಿದ್ದಾರೆ.
ಮಧುಬನ್ ರೈಸಿಂಗ್ ಸ್ಟಾರ್ ಪ್ರಿಪರೇಟರಿ ಸ್ಕೂಲ್ ಎಂಬ ಖಾಸಗಿ ವಸತಿ ಶಾಲೆಯಲ್ಲಿ ಬಜರಂಗಿ ಎಂಬ ಬಾಲಕ 10 ನೇ ತರಗತಿ ವಿದ್ಯಾರ್ಥಿಯಾಗಿದ್ದ. ಅದೇ ಶಾಲೆಯ ಅಧ್ಯಕ್ಷ ವಿಜಯ್ ಕುಮಾರ್ ಯಾದವ್ ಅವರು ಬಾಲಕ ಧೂಮಪಾನ ಮಾಡುವುದನ್ನುನೋಡಿ ಕೋಪಗೊಂಡಿದ್ದರು. ಬಾಲಕನ ಸಂಬಂಧಿಯಾಗಿರುವ ಶಾಲೆಯ ಶಿಕ್ಷಕರೊಬ್ಬರು ಸಹ ಅಧ್ಯಕ್ಷರ ಜೊತೆಯಲ್ಲಿದ್ದರು. ನಂತರ ಅಧ್ಯಕ್ಷರು ಬಾಲಕನ ತಂದೆಯನ್ನು ಕರೆ ಮಾಡಿದ್ದು, ಬಾಲಕನ್ನು ಶಾಲೆಯ ಕಾಂಪೌಂಡ್‌ಗೆ ಎಳೆದೊಯ್ದರು. ಅಲ್ಲಿ ಅವರು ಇತರ ಶಿಕ್ಷಕರೊಂದಿಗೆ ಸೇರಿ ಆತನನ್ನು ನಿರ್ದಯವಾಗಿ ಥಳಿಸಿದ್ದಾರೆ ಎಂದು ಬಜರಂಗಿ ತಾಯಿ ಮತ್ತು ಸಹೋದರಿ ಆರೋಪಿಸಿದ್ದಾರೆ. ಶಿಕ್ಷಕರು ಬಾಲಕನನ್ನು ವಿವಸ್ತ್ರಗೊಳಿಸಿ ಬೆಲ್ಟ್‌ಗಳಿಂದ ಹೊಡೆದಿದ್ದಾರೆ ಎಂದು ಅವರು ಹೇಳಿದರು.
ಬಜರಂಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಾಗ, ಅವರನ್ನು ಮಧುಬನ್‌ನಲ್ಲಿರುವ ಖಾಸಗಿ ನರ್ಸಿಂಗ್ ಹೋಮ್‌ಗೆ ಕರೆದೊಯ್ಯಲಾಯಿತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಮುಜಾಫರ್‌ಪುರಕ್ಕೆ ಕಳುಹಿಸಲಾಯಿತು. ಅಲ್ಲಿ ಚಿಕಿತ್ಸೆ ವೇಳೆ ಬಾಲಕ ಮೃತಪಟ್ಟಿದ್ದಾನೆ . ಬಜರಂಗಿಯ ಕುತ್ತಿಗೆ ಮತ್ತು ತೋಳುಗಳ ಮೇಲೆ ಆಳವಾದ ಗಾಯಗಳಾಗಿವೆ ಎಂದು ಸಂಬಂಧಿಕರು ಹೇಳುತ್ತಾರೆ. ಅವರ ಖಾಸಗಿ ಭಾಗಗಳಲ್ಲಿ ರಕ್ತಸ್ರಾವವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಶಾಲೆಯ ಅಧ್ಯಕ್ಷರು ಕುಟುಂಬದವರ ಹೇಳಿಕೆಳನ್ನು ತಿರಸ್ಕರಿಸಿದ್ದು ಹುಡುಗನಿಗೆ ಥಳಿಸಿಲ್ಲ. ಧೂಮಪಾನ ಮಾಡುತ್ತಿದ್ದ ವಿಷಯಅವನ ಕುಟುಂಬಕ್ಕೆ ತಿಳಿಯಬಹುದೆಂಬ ಭಯದಿಂದ ವಿಷ ಸೇವಿಸಿದ್ದಾನೆ ಎಂದು ಹೇಳಿದರು. ಬಾಲಕನನ್ನು ಮುಜಾಫರ್‌ಪುರಕ್ಕೆ ಕರೆದೊಯ್ಯಲಾಯಿತು, ಆದರೂ ಅವ ಬದುಕುಳಿಯಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನವದೆಹಲಿ: ಸುರಂಗದಲ್ಲಿ ಅಡ್ಡಗಟ್ಟಿ ಹಾಡಹಗಲೇ ದರೋಡೆ; ಎಲ್ಜಿ ರಾಜೀನಾಮೆ ನೀಡಬೇಕೆಂದು ಕೇಜ್ರಿವಾಲ್ ಪಟ್ಟು
ಎರಡು ತಿಂಗಳ ಹಿಂದೆ ಬಜರಂಗಿ ಶಾಲೆಯ ಹಾಸ್ಟೆಲ್‌ಗೆ ಪ್ರವೇಶ ಪಡೆದಿದ್ದು, ಬೇಸಿಗೆ ರಜೆಗಾಗಿ ಮನೆಗೆ ಮರಳಿದ್ದರು.
ಬಾಲಕನ ಸಾವಿನ ಸುದ್ದಿ ತಿಳಿದ ನಂತರ ಕುಟುಂಬ ಕಂಗಾಲಾಗಿದೆ. ಬಜರಂಗಿಯ ಅಪ್ಪ ಹರಿ ಕಿಶೋರ್ ರೈ ಐದು ದಿನಗಳ ಹಿಂದೆ ಪಂಜಾಬ್‌ಗೆ ಕೂಲಿ ಕೆಲಸಕ್ಕೆ ತೆರಳಿದ್ದರು.ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೋತಿಹಾರಿಗೆ ಕಳುಹಿಸಲಾಗಿದ್ದು, ಶಾಲೆಗೆ ಮೊಹರು ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ