ಇನ್ನೆರಡು ವಿಮಾನಗಳಲ್ಲಿ ಈ ವಾರ ಅಮೆರಿಕದಿಂದ ಅಮೃತಸರಕ್ಕೆ ಬಂದಿಳಿಯಲಿದ್ದಾರೆ ಭಾರತೀಯ ವಲಸಿಗರು

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತವು ಇತ್ತೀಚೆಗೆ 104 ಭಾರತೀಯ ವಲಸಿಗರನ್ನು ಗಡೀಪಾರು ಮಾಡಿದ ನಂತರ ದಾಖಲೆರಹಿತ ಭಾರತೀಯ ಪ್ರಜೆಗಳನ್ನು ಹೊತ್ತು ತರುವ ಎರಡು ವಿಮಾನಗಳು ಈ ವಾರ ಅಮೃತಸರಕ್ಕೆ ಆಗಮಿಸಲಿವೆ ಎಂದು ವರದಿಗಳು ತಿಳಿಸಿವೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿದ್ದು, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಅವರಿಬ್ಬರ ಭೇಟಿ ವೇಳೆ ಭಾರತೀಯರ ವಲಸಿಗರ ವಿಚಾರವೂ ಚರ್ಚೆಯಾಗಿದೆ.

ಇನ್ನೆರಡು ವಿಮಾನಗಳಲ್ಲಿ ಈ ವಾರ ಅಮೆರಿಕದಿಂದ ಅಮೃತಸರಕ್ಕೆ ಬಂದಿಳಿಯಲಿದ್ದಾರೆ ಭಾರತೀಯ ವಲಸಿಗರು
Indian Immigrants From Us

Updated on: Feb 14, 2025 | 3:28 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಮೆರಿಕದಲ್ಲಿ ಭೇಟಿಯಾಗಿದ್ದಾರೆ. ಇದರ ಮಧ್ಯೆ, ‘ಅಕ್ರಮ’ ಭಾರತೀಯ ವಲಸಿಗರನ್ನು ಗಡೀಪಾರು ಮಾಡುವ ಎರಡು ವಿಮಾನಗಳು ಈ ವಾರ ಅಮೃತಸರದಲ್ಲಿ ಇಳಿಯಲಿವೆ ಎಂದು ವರದಿಗಳು ತಿಳಿಸಿವೆ. ಈಗಾಗಲೇ 1 ವಿಮಾನದಲ್ಲಿ ಅಮೆರಿಕದಲ್ಲಿರುವ ಅಕ್ರಮ ಭಾರತೀಯ ವಲಸಿಗರನ್ನು ನಮ್ಮ ದೇಶಕ್ಕೆ ಕರೆತರಲಾಗಿದೆ. ಇದೀಗ ಇನ್ನೆರಡು ವಿಮಾನಗಳಲ್ಲಿ ಭಾರತೀಯ ವಲಸಿಗರು ತಾಯ್ನಾಡಿಗೆ ಮರಳುವ ಸಾಧ್ಯತೆಯಿದೆ.

ಇಂಡಿಯಾ ಟುಡೇ ವರದಿಯ ಪ್ರಕಾರ, ಎರಡನೇ ವಿಮಾನ ಫೆಬ್ರವರಿ 15ರ ಶನಿವಾರ ಶ್ರೀ ಗುರು ರಾಮ್ ದಾಸ್ ಜೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ನಿರೀಕ್ಷೆಯಿದೆ. ನಂತರ ಮೂರನೇ ವಿಮಾನವು ಅದಾದ ಕೆಲವು ದಿನಗಳ ನಂತರ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಡೊನಾಲ್ಡ್ ಟ್ರಂಪ್ ಸರ್ಕಾರ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಚಂಡೀಗಢಕ್ಕೆ ಸೇರಿದ 25 ಮಹಿಳೆಯರು ಮತ್ತು 12 ಅಪ್ರಾಪ್ತ ವಯಸ್ಕರು ಸೇರಿದಂತೆ 104 ದಾಖಲೆರಹಿತ ಭಾರತೀಯರನ್ನು ಗಡೀಪಾರು ಮಾಡಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.

ಇದನ್ನೂ ಓದಿ: ಭಾರತ – ಅಮೆರಿಕ ವ್ಯಾಪಾರ 5 ವರ್ಷಗಳಲ್ಲಿ ದ್ವಿಗುಣ: ಟ್ರಂಪ್, ಮೋದಿ ಸಭೆಯ ಬಳಿಕ ಘೋಷಣೆ

ಫೆಬ್ರವರಿ 6ರಂದು ಯುನೈಟೆಡ್ ಸ್ಟೇಟ್ಸ್ ಕಸ್ಟಮ್ಸ್ ಮತ್ತು ಗಡಿ ಸಂರಕ್ಷಣಾ ಮುಖ್ಯಸ್ಥ ಮೈಕೆಲ್ ಡಬ್ಲ್ಯೂ. ಬ್ಯಾಂಕ್ಸ್ ಪೋಸ್ಟ್ ಮಾಡಿದ್ದ ಕೈಕೋಳ ಹಾಕಿದ್ದ ಭಾರತೀಯ ಪ್ರಜೆಗಳ ಗಡೀಪಾರಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅಮೆರಿಕದಲ್ಲಿರುವ ಭಾರತೀಯ ವಲಸಿಗರನ್ನು ಕೋಳ ಹಾಕಿ ಕರೆತರುತ್ತಿರುವುದು ಅಮಾನವೀಯ ಎಂದು ಜನರು ಆಕ್ರೋಶ ಹೊರಹಾಕಿದ್ದರು.


ವಿವಾದದ ನಡುವೆ ಸಚಿವರೂ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದರು. ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಗಡೀಪಾರು ವಿಮಾನಗಳನ್ನು ಇಳಿಸುವ ಮೂಲಕ ಅಮೃತಸರದ ಹೆಸರು ಕೆಡಿಸಲು ಪ್ರಯತ್ನಿಸುತ್ತಿದೆ ಎಂದು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಚೀಮಾ ಆರೋಪಿಸಿದ್ದರು. “ಹರಿಯಾಣ ಅಥವಾ ಗುಜರಾತ್​ನಲ್ಲಿ ವಿಮಾನವನ್ನು ಏಕೆ ಇಳಿಸಬಾರದು? ಇದು ಸ್ಪಷ್ಟವಾಗಿ ಪಂಜಾಬ್‌ನ ಪ್ರತಿಷ್ಠೆಯನ್ನು ಹಾಳುಮಾಡಲು ಬಿಜೆಪಿಯ ಪ್ರಯತ್ನವಾಗಿದೆ. ಈ ವಿಮಾನವು ಅಹಮದಾಬಾದ್‌ನಲ್ಲಿ ಇಳಿಯಬೇಕು” ಎಂದು ಅವರು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ