ಶ್ರೀನಗರದಲ್ಲಿ ಇಬ್ಬರು ಶಿಕ್ಷಕರನ್ನು ಹತ್ಯೆಗೈದ ಭಯೋತ್ಪಾದಕರು; 3 ನಾಗರಿಕರು ಕೊಲೆಯಾದ ಎರಡೇ ದಿನದಲ್ಲಿ ಘಟನೆ
ಶಿಕ್ಷಕರಿಬ್ಬರ ಹತ್ಯೆಯನ್ನು ಬಿಜೆಪಿಯ ಜಮ್ಮು-ಕಾಶ್ಮೀರ ವಕ್ತಾರ ಅಲ್ತಫ್ ಠಾಕೂರ್ ತೀವ್ರವಾಗಿ ಖಂಡಿಸಿದ್ದಾರೆ. ಏನೇನೂ ರಾಜಕೀಯ ಮಾಡದ, ಶಿಕ್ಷಣ ವೃತ್ತಿಯಲ್ಲಿರುವ ಶಿಕ್ಷಕರನ್ನು ಕೊಂದಿದ್ದು ನಿಜಕ್ಕೂ ಅಮಾನವೀಯ ಕೃತ್ಯ ಎಂದಿದ್ದಾರೆ.
ಶ್ರೀನಗರ: ಇಲ್ಲಿನ ಸಾಫಾ ಕಡಲ್ ಪ್ರದೇಶದಲ್ಲಿರುವ ಶಾಲೆಯೊಂದರ ಪ್ರಿನ್ಸಿಪಾಲ್ ಮತ್ತು ಶಿಕ್ಷಕರೊಬ್ಬರನ್ನು ಉಗ್ರರು(Terrorists) ಹತ್ಯೆಗೈದಿದ್ದಾರೆ. ಶ್ರೀನಗರ ಮತ್ತು ಬಂಡಿಪೋರಾದಲ್ಲಿ ಎರಡು ದಿನಗಳ ಹಿಂದೆ ಒಟ್ಟು ಮೂವರು ನಾಗರಿಕರನ್ನು ಉಗ್ರರು ಗುಂಡುಹೊಡೆದು ಕೊಂದಿದ್ದರು. ಇದೀಗ ಇಬ್ಬರು ಶಿಕ್ಷಕರನ್ನು ಹತ್ಯೆಗೈದಿದ್ದಾರೆ. ಮೃತರನ್ನು ಸತೀಂದರ್ ಕೌರ್ ಮತ್ತು ದೀಪಕ್ ಚಾಂದ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಅಲೋಚಿಬಾಗ್ ನಿವಾಸಿಗಳು ಎನ್ನಲಾಗಿದೆ. ಉಗ್ರರಿಂದ ಗುಂಡೇಟು ತಿಂದು ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಕರೆದುಕೊಂಡು ಬರುವಷ್ಟರಲ್ಲಿಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಘಟನೆಯ ಬಗ್ಗೆ ಜಮ್ಮು-ಕಾಶ್ಮೀರದ ಡಿಜಿಪಿ ದಿಲ್ಬಗ್ ಸಿಂಗ್, ಹೀಗೆ ನಾಗರಿಕರನ್ನು ಹತ್ಯೆ ಮಾಡುತ್ತಿರುವುದನ್ನು ನಾವು ಸಹಿಸುವುದಿಲ್ಲ. ಕಾಶ್ಮೀರದ ಸಮುದಾಯವನ್ನು ವಿಭಜಿಸುವ ಜತೆ, ಭಯೋತ್ಪಾದಕತೆಯನ್ನು ಹರಡುವ ಯತ್ನ ಇದಾಗಿದೆ. ಈ ಪ್ರಕರಣಗಳನ್ನು ನಾವು ಕೂಲಂಕಷವಾಗಿ ತನಿಖೆ ನಡೆಸಲಿದ್ದೇವೆ. ಅಪರಾಧ ಮಾಡಿದವರನ್ನು ಶೀಘ್ರವೇ ಪತ್ತೆಹಚ್ಚುತ್ತೇವೆ. ಪಾಕಿಸ್ತಾನಿಗಳ ಅಣತಿ ಮೇರೆಗೆ, ನಮ್ಮ ಗಡಿಭಾಗಗಳಲ್ಲಿ ನಿರಂತರವಾಗಿ ಇದು ನಡೆಯುತ್ತಿದೆ ಎಂಬುದು ನಮಗೆ ಗೊತ್ತು ಎಂದೂ ಹೇಳಿದ್ದಾರೆ.
ಹಾಗೇ, ಶಿಕ್ಷಕರಿಬ್ಬರ ಹತ್ಯೆಯನ್ನು ಬಿಜೆಪಿಯ ಜಮ್ಮು-ಕಾಶ್ಮೀರ ವಕ್ತಾರ ಅಲ್ತಫ್ ಠಾಕೂರ್ ತೀವ್ರವಾಗಿ ಖಂಡಿಸಿದ್ದಾರೆ. ಏನೇನೂ ರಾಜಕೀಯ ಮಾಡದ, ಶಿಕ್ಷಣ ವೃತ್ತಿಯಲ್ಲಿರುವ ಶಿಕ್ಷಕರನ್ನು ಕೊಂದಿದ್ದು ನಿಜಕ್ಕೂ ಅಮಾನವೀಯ ಕೃತ್ಯ. ಇದು ಭಯೋತ್ಪಾದಕರ ಹತಾಶೆಯ ಪರಮಾವಧಿಯನ್ನು ತೋರಿಸುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುವ ಈ ಶಿಕ್ಷಕರು ಮಾಡಿದ ತಪ್ಪಾದರೂ ಏನು ಎಂದು ಠಾಕೂರ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: GGVV: ಬಹುನಿರೀಕ್ಷಿತ ‘ಗರುಡ ಗಮನ ವೃಷಭ ವಾಹನ’ ಚಿತ್ರ ತಂಡದಿಂದ ಹೊರಬಿತ್ತು ಮಹತ್ವದ ಅಪ್ಡೇಟ್; ಇಲ್ಲಿದೆ ಮಾಹಿತಿ
ಲಖಿಂಪುರ ಖೇರಿ ಹಿಂಸಾಚಾರದ ಸ್ಥಿತಿ ವರದಿ ನಾಳೆಯೊಳಗೆ ಸಲ್ಲಿಸುವಂತೆ ಯುಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ
Published On - 12:44 pm, Thu, 7 October 21