ಅಂತ್ಯಕ್ರಿಯೆಗೆಂದು ಬಂದವರು ಹೋಗಿದ್ದು ಆಸ್ಪತ್ರೆಗೆ, 200 ಜನರಿಗೆ ರೇಬಿಸ್ ಇಂಜೆಕ್ಷನ್, ಆಗಿದ್ದೇನು?
ಉತ್ತರ ಪ್ರದೇಶದ ಪಿಪ್ರೌಲಿ ಗ್ರಾಮದಲ್ಲಿ, ಅಂತ್ಯಕ್ರಿಯೆಯಲ್ಲಿ ನಾಯಿ ಕಚ್ಚಿ ಸತ್ತ ಎಮ್ಮೆಯ ಹಾಲಿನಿಂದ ಮಾಡಿದ ರಾಯ್ತಾ ಸೇವಿಸಿದ್ದ ಸುಮಾರು 200 ಮಂದಿಗೆ ರೇಬಿಸ್ ಚುಚ್ಚುಮದ್ದು ನೀಡಲಾಗಿದೆ. ಎಮ್ಮೆ ರೇಬಿಸ್ ಲಕ್ಷಣಗಳಿಂದ ಸತ್ತಿದ್ದರಿಂದ, ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಸಾಮೂಹಿಕ ಲಸಿಕೆ ಅಭಿಯಾನ ಹಮ್ಮಿಕೊಂಡಿತು. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾವುದೇ ರೋಗ ಹರಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಉತ್ತರ ಪ್ರದೇಶ, ಡಿಸೆಂಬರ್ 29: ಅಂತ್ಯಕ್ರಿಯೆಗೆ ಬಂದ 200ಕ್ಕೂ ಹೆಚ್ಚು ಮಂದಿ ರೇಬಿಸ್(Rabies) ಚುಚ್ಚುಮದ್ದು ಪಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಬುಡೌನ್‌ನ ಪಿಪ್ರೌಲಿ ಗ್ರಾಮದ ಸುಮಾರು 200 ನಿವಾಸಿಗಳು ಅಂತ್ಯಕ್ರಿಯೆಯೊಂದರಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ನಾಯಿ ಕಚ್ಚಿ ಸತ್ತ ಎಮ್ಮೆಯ ಹಾಲಿನಿಂದ ಮಾಡಿದ ರಾಯತಾವನ್ನು ತಿಂದಿದ್ದರು. ಬಳಿಕ 200 ಮಂದಿಗೂ ರೇಬಿಸ್ ಚುಚ್ಚುಮದ್ದು ನೀಡಲಾಗಿದೆ.
ಗ್ರಾಮಸ್ಥರ ಪ್ರಕಾರ, ಡಿ.23ರಂದು ಗ್ರಾಮದಲ್ಲಿ ಅಂತ್ಯಕ್ರಿಯೆಯೊಂದು ನಡೆದಿತ್ತು. ಅಲ್ಲಿ ಜನರು ನಾಯಿ ಕಚ್ಚಿ ಸತ್ತ ಎಮ್ಮೆಯ ಹಾಲಿನಿಂದ ಮಾಡಿದ ಮೊಸರನ್ನು ತಿಂದಿದ್ದರು. ನಂತರ, ಖಾದ್ಯ ತಯಾರಿಸಲು ಬಳಸಲಾದ ಹಾಲು ಕೆಲವು ದಿನಗಳಿಂದ ನಾಯಿ ಕಚ್ಚಿ ಸತ್ತ ಎಮ್ಮೆಯದ್ದು ಎಂಬುದು ಬೆಳಕಿಗೆ ಬಂದಿತ್ತು. ಡಿಸೆಂಬರ್ 26 ರಂದು ಎಮ್ಮೆ ಸಾವನ್ನಪ್ಪಿತು, ನಂತರ ಸೋಂಕಿನ ಭಯದಿಂದಾಗಿ ಗ್ರಾಮದಲ್ಲಿ ಭೀತಿ ಹರಡಿತ್ತು. ಗ್ರಾಮಸ್ಥರು ಉಜ್ನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಂಡರು.
ಗ್ರಾಮದಲ್ಲಿ ಒಂದು ಎಮ್ಮೆಯನ್ನು ಹುಚ್ಚು ನಾಯಿ ಕಚ್ಚಿ ರೇಬೀಸ್ ಲಕ್ಷಣಗಳಿಂದ ಸಾವನ್ನಪ್ಪಿದೆ ಎಂಬ ಮಾಹಿತಿ ಬಂದಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ರಾಮೇಶ್ವರ ಮಿಶ್ರಾ ಭಾನುವಾರ ತಿಳಿಸಿದ್ದಾರೆ. ಗ್ರಾಮಸ್ಥರು ರಾಯ್ತಾ ಸೇವಿಸಿದ್ದಾರೆ ಎಂದು ವರದಿಯಾಗಿದೆ. ಮುನ್ನೆಚ್ಚರಿಕೆಯಾಗಿ, ಎಲ್ಲರಿಗೂ ರೇಬೀಸ್ ಇಂಜೆಕ್ಷನ್ ಪಡೆಯುವಂತೆ ಸೂಚಿಸಲಾಯಿತು.
ಮತ್ತಷ್ಟು ಓದಿ: ಉತ್ತರ ಪ್ರದೇಶ: ಕೇವಲ ನಾಯಿ ನೆಕ್ಕಿದ್ದಕ್ಕೆ ರೇಬಿಸ್ನಿಂದ ಪ್ರಾಣಬಿಟ್ಟ ಬಾಲಕ
ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ. ಸಂದೇಹ ಇದ್ದ ಎಲ್ಲರಿಗೂ ರೇಬಿಸ್ ವಿರೋಧಿ ಲಸಿಕೆ ನೀಡಲಾಯಿತು. ಸಾಮಾನ್ಯವಾಗಿ, ಹಾಲನ್ನು ಕುದಿಸಿದ ನಂತರ ರೇಬೀಸ್ ಬರುವ ಅಪಾಯವಿರುವುದಿಲ್ಲ, ಆದರೆ ಯಾವುದೇ ಸಂಭಾವ್ಯ ಅಪಾಯವನ್ನು ತಡೆಗಟ್ಟಲು ಲಸಿಕೆಯನ್ನು ನೀಡಲಾಯಿತು ಎಂದು ಮಿಶ್ರಾ ಹೇಳಿದರು.
ಆರೋಗ್ಯ ಇಲಾಖೆಯ ಪ್ರಕಾರ, ಗ್ರಾಮದಲ್ಲಿ ಇಲ್ಲಿಯವರೆಗೆ ಯಾವುದೇ ರೋಗ ಹರಡಿಲ್ಲ ಮತ್ತು ಪರಿಸ್ಥಿತಿ ಸಾಮಾನ್ಯವಾಗಿದೆ. ಉಜ್ನಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೇಬಿಸ್ ನಿರೋಧಕ ಇಂಜೆಕ್ಷನ್ ಪಡೆಯಲು ಬಂದವರಿಗೆ ತಕ್ಷಣವೇ ಇಂಜೆಕ್ಷನ್ ನೀಡಲಾಗುತ್ತಿತ್ತು ಎಂದು ಸಿಎಂಒ ತಿಳಿಸಿದ್ದಾರೆ.
ಈ ಉದ್ದೇಶಕ್ಕಾಗಿ, ಪ್ರಾಥಮಿಕ ಆರೋಗ್ಯ ಕೇಂದ್ರ/ಸಮುದಾಯ ಕೇಂದ್ರವನ್ನು ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ ತೆರೆಯಲಾಗಿತ್ತು. ಯಾವುದೇ ರೀತಿಯ ವದಂತಿ ಅಥವಾ ಭೀತಿ ಹರಡದಂತೆ ಮುನ್ನೆಚ್ಚರಿಕೆಯಾಗಿ ಗ್ರಾಮವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಮತ್ತೊಬ್ಬ ಗ್ರಾಮಸ್ಥರಾದ ಧರ್ಮಪಾಲ್, ಆ ಎಮ್ಮೆಯನ್ನು ನಾಯಿ ಕಚ್ಚಿದ್ದರಿಂದ ಅದು ಅನಾರೋಗ್ಯಕ್ಕೆ ಒಳಗಾಯಿತು ಮತ್ತು ನಂತರ ಸತ್ತುಹೋಯಿತು ಎಂದು ಹೇಳಿದರು. ಅದೇ ಎಮ್ಮೆಯ ಹಾಲಿನಿಂದ ರಾಯ್ತಾ ತಯಾರಿಸಲ್ಪಟ್ಟಿದ್ದರಿಂದ ಸೋಂಕಿನ ಭಯ ಹುಟ್ಟಿಕೊಂಡಿತು, ಆದ್ದರಿಂದ ಅವರಿಗೆ ರೇಬೀಸ್ ಇಂಜೆಕ್ಷನ್ ನೀಡಲಾಯಿತು ಎಂದರು.
ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




