ದೆಹಲಿ: ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿ ಟೀನಾ ಡಾಬಿಯ (Tina Dabi) ಮೊದಲ ಮದುವೆ ಮತ್ತು ವಿಚ್ಛೇದನ ಭಾರಿ ಸುದ್ದಿಯಾಗಿತ್ತು. ಯುಪಿಎಸ್ಸಿ (UPSC) ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದ ಡಾಬಿ ಎರಡನೇ ರ್ಯಾಂಕ್ ಪಡೆದಿದ್ದ ಅಥರ್ ಅಮೀರ್ ಖಾನ್ರನ್ನು (Athar Aamir Khan)ಮದುವೆಯಾಗಿ ಸುದ್ದಿಯಾಗಿದ್ದರು. ಈ ವಿವಾಹ ಸಂಬಂಧ ಅಲ್ಪಾವಧಿಯಲ್ಲೇ ಮುರಿದು ಬಿತ್ತು. ಟೀನಾ ಮತ್ತು ಖಾನ್ ವಿವಾಹ ವಿಚ್ಛೇದನವೂ ಬಹು ಚರ್ಚಿತ ವಿಷಯವಾಗಿತ್ತು. ಅಂದಹಾಗೆ ಡಾಬಿ ಈಗ ಮತ್ತೆ ಮದುವೆಯಾಗುತ್ತಿದ್ದಾರೆ. ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ಡಾಬಿ ಇನ್ಸ್ಟಾಗ್ರಾಂನಲ್ಲಿ ಫೋಟೊ ಶೇರ್ ಮಾಡಿ ತಿಳಿಸಿದ್ದಾರೆ. ನೀ ಕೊಟ್ಟ ನಗುವನ್ನು ನಾ ತೊಟ್ಟಿರುವೆ #fiance ಎಂಬ ಶೀರ್ಷಿಕೆ ಜತೆ ನಿಶ್ಚಿತಾರ್ಥದ ಫೋಟೊವನ್ನು ಡಾಬಿ ಶೇರ್ ಮಾಡಿದ್ದಾರೆ. ಡಾಬಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಜನಪ್ರಿಯರಾಗಿದ್ದು ಅವರಿಗೆ 1.4 ಮಿಲಿಯನ್ ಫಾಲೋವರ್ಗಳಿದ್ದಾರೆ. ಈ ಚಿತ್ರದಲ್ಲಿ ತನ್ನ ಭಾವೀ ಪತಿ ಪ್ರದೀಪ್ ಗವಾಂಡೆ ಅವರನ್ನು ಡಾಬಿ ಟ್ಯಾಗ್ ಮಾಡಿದ್ದಾರೆ.ಗವಾಂಡೆ ಅವರು 2013ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ. ಗವಾಂಡೆ ಕೂಡಾ ಇನ್ ಸ್ಟಾಗ್ರಾಂನಲ್ಲಿ ಫೋಟೋಶೇರ್ ಮಾಡಿದ್ದು ನವ ಜೋಡಿಗಳು ಕೈ ಕೈ ಹಿಡಿದಿರುವ ಫೋಟೊ ಇದಾಗಿದೆ. ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಗವಾಂಡೆ ಡಾಬಿ ಅವರ ಎರಡು ಫೋಟೊ ಶೇರ್ ಮಾಡಿದ್ದಾರೆ.
2018 ರಲ್ಲಿ ವಿವಾಹವಾದ ಅಥರ್ ಅಮೀರ್ ಖಾನ್ ಅವರಿಗೆ ಕಳೆದ ವರ್ಷದ ಕೊನೆಯಲ್ಲಿ ಡಾಬಿ ವಿಚ್ಛೇದನ ನೀಡಿದ್ದರು. ಇವರ ವಿವಾಹದಲ್ಲಿ ಉನ್ನತ ರಾಜಕಾರಣಿಗಳು ಭಾಗವಹಿಸಿದ್ದರು. 2015ರಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಒಂದನೇ ರ್ಯಾಂಕ್ ಪಡೆದ ಡಾಬಿ ಎರಡನೇ ರ್ಯಾಂಕ್ ಪಡೆದ ಖಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು ಸಿನಿಮಾ ಕತೆಯಂತಿತ್ತು. ದೆಹಲಿ ಅವರ ಲೇಡಿ ಶ್ರೀ ರಾಮ್ ಕಾಲೇಜಿನ ಪದವೀಧರರಾದ ಡಾಬಿ ಅವರು ಪ್ರತಿಷ್ಠಿತ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮೊದಲ ದಲಿತರಾಗಿದ್ದರು. ಮೊದಲನೇ ಪ್ರಯತ್ನದಲ್ಲಿಯೇ ಅವರು ರ್ಯಾಂಕ್ ಪಡೆದಿದ್ದರು.
ದೆಹಲಿಯಲ್ಲಿ ತಮ್ಮ ಮದುವೆಯ ಆರತಕ್ಷತೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವರು ಲೋಕಸಭೆ ಸ್ಪೀಕರ್ ಆಗಿದ್ದ ಸುಮಿತ್ರಾ ಮಹಾಜನ್ ಭಾಗಿಯಾಗಿದ್ದರು.
ಎರಡು ಧರ್ಮಕ್ಕೆ ಸೇರಿದ ದಂಪತಿಯ ಈ ವಿವಾಹಕ್ಕೆ ಹಲವರು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮದುವೆಯನ್ನು ಲವ್ ಜಿಹಾದ್ ಎಂದು ಕರೆಯಲಾಗಿತ್ತು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಡಾಬಿ ಧಾರ್ಮಿಕ ವೈರುಧ್ಯಕ್ಕಿಂತ ಮದುವೆ ಮೇಲು ಎಂದಿದ್ದರು.
ಇದನ್ನೂ ಓದಿ: ನಾನು 4 ತಿಂಗಳ ಪ್ರಗ್ನೆಂಟ್ ಎಂದು ಅಳಲು ತೋಡಿಕೊಂಡ ಶಂಕರಣ್ಣನ ಪತ್ನಿ ಮೇಘನಾ, ಎಲ್ಲಾ ನಮ್ಮತ್ತೆಯದ್ದೇ ಹಿಕ್ಮತ್ತು ಅಂದರು
Published On - 9:32 pm, Tue, 29 March 22