ಐಎಎಸ್ ಟಾಪರ್ ಟೀನಾ ಡಾಬಿ-ಅಥರ್ ಖಾನ್ ವಿವಾಹ ವಿಚ್ಛೇದನಕ್ಕೆ ಜೈಪುರ್ ಕೌಟುಂಬಿಕ ನ್ಯಾಯಾಲಯ ಅನುಮತಿ
Tina Dabi Athar Khan Divorce: ಟೀನಾ- ಅಥರ್ ನಡುವಿನ ಸಂಬಂಧ ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿಯಲ್ಲಿ ಆರಂಭವಾಗಿತ್ತು. ನಂತರ ಅವರ ವಿವಾಹವು ಭಾರೀ ಸುದ್ದಿಯಾಗಿತ್ತು. 2015 ರಲ್ಲಿ ಡಾಬಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದು, ಖಾನ್ ಎರಡನೇ ಸ್ಥಾನ ಪಡೆದಿದ್ದರು.
ಜೈಪುರ್: ಜೈಪುರ್ ಕೌಟುಂಬಿಕ ನ್ಯಾಯಾಲಯವು ಮಂಗಳವಾರ ಐಎಎಸ್ ಅಧಿಕಾರಿಗಳಾದ ಟೀನಾ ಡಾಬಿ ಮತ್ತು ಅಥರ್ ಖಾನ್ ಅವರ ವಿವಾಹ ವಿಚ್ಛೇದನಕ್ಕೆ ಅನುಮತಿ ನೀಡಿದೆ. ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಕಳೆದ ವರ್ಷ ನವೆಂಬರ್‌ನಲ್ಲಿ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಬ್ಬರು ಮದುವೆಯಾದ ಕೇವಲ ಎರಡು ವರ್ಷಗಳ ನಂತರ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಟೀನಾ- ಅಥರ್ ನಡುವಿನ ಸಂಬಂಧ ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿಯಲ್ಲಿ ಆರಂಭವಾಗಿತ್ತು. ನಂತರ ಅವರ ವಿವಾಹವು ಭಾರೀ ಸುದ್ದಿಯಾಗಿತ್ತು. 2015 ರಲ್ಲಿ ಡಾಬಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದು, ಖಾನ್ ಎರಡನೇ ಸ್ಥಾನ ಪಡೆದಿದ್ದರು.
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಅನೇಕ ಕೇಂದ್ರ ಸಚಿವರು ದೆಹಲಿಯಲ್ಲಿ ನಡೆದ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ಅವರ ವಿವಾಹವನ್ನು ಅನೇಕ ರಾಜಕಾರಣಿಗಳು ಕೋಮು ಸೌಹಾರ್ದತೆಯ ಸಂಕೇತವೆಂದು ಕೊಂಡಾಡಿದ್ದರು.
ಡಾಬಿ ಮತ್ತು ಅಥರ್ ಇಬ್ಬರನ್ನೂ ಐಎಎಸ್‌ನ ರಾಜಸ್ಥಾನ ಕೇಡರ್‌ನಲ್ಲಿ ನಿಯೋಜಿಸಲಾಗಿತ್ತು. ಆರಂಭದಲ್ಲಿ ಇಬ್ಬರೂ ಒಂದೇ ನಗರದಲ್ಲಿದ್ದರು. ನಂತರ ಟೀನಾ ಡಾಬಿಯನ್ನು ನಂತರ ಶ್ರೀ ಗಂಗಾನಗರಕ್ಕೆ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಯಿತು. ಅಥರ್ ಅವರನ್ನು ಜೈಪುರಕ್ಕೆ ಜಿಲ್ಲಾ ಪರಿಷತ್ತಿನ ಸಿಇಒ ಆಗಿ ನೇಮಿಸಲಾಯಿತು.
ಕಳೆದ ವರ್ಷ ನವೆಂಬರ್‌ನಲ್ಲಿ ಡಾಬಿ ರಾಜಸ್ಥಾನದ ಸರ್ಕಾರದ ಜಂಟಿ ಕಾರ್ಯದರ್ಶಿಯಾಗಿ (ಹಣಕಾಸು) ಸೇರಿದರು. ಈ ಬಗ್ಗೆ ಆಕೆ ಟ್ವಿಟರ್‌ನಲ್ಲಿ ಘೋಷಿಸಿದರು.
ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಿಂದ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದ ಡಾಬಿ ಜೀಸಸ್ ಮತ್ತು ಮೇರಿಯ ಕಾನ್ವೆಂಟ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಏತನ್ಮಧ್ಯೆ, ಅಥರ್ ಅವರು ಲಕ್ನೋದಲ್ಲಿರುವ ಭಾರತೀಯ ರೈಲ್ವೇ ಇನ್‌ಸ್ಟಿಟ್ಯೂಟ್ ಆಫ್ ಟ್ರಾನ್ಸ್‌ಪೋರ್ಟ್ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ತರಬೇತಿ ಪಡೆಯುತ್ತಿದ್ದರು.
ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು ಈ ಪ್ರೇಮ ವಿವಾಹ ಐಎಎಸ್ ತರಬೇತಿ ವೇಳೆ ಟೀನಾ- ಅಥರ್ ನಡುವೆ ಪ್ರೇಮಾಂಕುರವಾಗಿತ್ತು. ಪ್ರಥಮ ಸ್ಥಾನ ಪಡೆದ ಟೀನಾ ಮತ್ತು ಎರಡನೇ ಸ್ಥಾನ ಪಡೆದ ಅಥರ್ ವಿವಾಹವಾಗುವುದಾಗಿ ಘೋಷಿಸಿದ್ದೇ ತಡ ಅಖಿಲ ಭಾರತೀಯ ಹಿಂದೂ ಮಹಾಸಭಾ ಅದನ್ನು ಲವ್ -ಜಿಹಾದ್ ಎಂದು ಕರೆಯಿತು. ಹಿಂದೂ ಮಹಾಸಭಾ ಟೀನಾ ಅವರ ಪೋಷಕರಿಗೆ ಪತ್ರ ಬರೆದು, ಆಕೆಯ ಸಾಧನೆ ಬಗ್ಗೆ ಹೆಮ್ಮೆ ಇದೆ. ಆದರೆ ಆಕೆ ಮುಸ್ಲಿಂ ಯುವಕನ್ನು ಮದುವೆಯಾಗಲು ತೀರ್ಮಾನಿಸಿರುವುದು ದುಃಖ ತಂದಿದೆ ಎಂದು ಹೇಳಿತ್ತು.
ಅಷ್ಟೇ ಅಲ್ಲದೆ ಮದುವೆಯನ್ನು ರದ್ದುಗೊಳಿಸಲು ಡಾಬಿ ಪೋಷಕರಿಗೆ ಒತ್ತಾಯಿಸಿದ ಸಂಘಟನೆ ಮದುವೆ ರದ್ದುಗೊಳಿಸಬೇಕು ಇಲ್ಲವೇ ಖಾನ್ ನ್ನು ಮತಾಂತರ ಮಾಡಲು ಒಪ್ಪಿಸಬೇಕು ಎಂದಿತ್ತು. ಅಥರ್ ಖಾನ್ ಅವರ ಘರ್ ವಾಪಸಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು.
ಹಿಂದೂ ಮಹಾಸಭಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಪತ್ರವು, ವಿದೇಶಿ ಅಂಶಗಳು ಮತ್ತು ಮುಸ್ಲಿಂ ಉಗ್ರರು ದೇಶದಲ್ಲಿ “ಲವ್ ಜಿಹಾದ್” ಅನ್ನು ಉತ್ತೇಜಿಸಲು ಕೆಲಸ ಮಾಡುತ್ತಿದ್ದಾರೆ ಮತ್ತು ಇಡೀ ದೇಶವನ್ನು ಇಸ್ಲಾಮೀಕರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿತ್ತು. ಕಾಶ್ಮೀರ ಮೂಲದವರಾಗಿದ್ದಾರೆ ಖಾನ್.
ಕಳೆದ ವರ್ಷ ಡಾಬಿ ಸಾಮಾಜಿಕ ಜಾಲತಾಣಗಳಲ್ಲಿ ‘ಖಾನ್’ ಸರ್ಸೇಮ್ ತೆಗೆದು ಹಾಕಿದ ನಂತರ ಅವರ ದಾಂಪತ್ಯದಲ್ಲಿ ಬಿರುಕು ಉಂಟಾದ ಬಗ್ಗೆ ವರದಿಯಾಗಿತ್ತು. ನಂತರ, ಖಾನ್ ಡಾಬಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅನ್ಫಾಲೋ ಮಾಡಿದ್ದರು.
ಇದನ್ನೂ ಓದಿ: ಭಯಾನಕವಾಗಿ ಹತ್ಯೆಯಾದ ಬಿಜೆಪಿ ಮುಖಂಡ; ಹೊತ್ತಿ ಉರಿದ ಕಾರು..ದೇಹ
ಇದನ್ನೂ ಓದಿ: Coronavirus cases in India: ದೇಶದಲ್ಲಿ 38,353 ಹೊಸ ಕೊವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಮುಖ
(Family court in Jaipur granted divorce to IAS officers Tina Dabi and Athar Khan)
Published On - 11:02 am, Wed, 11 August 21