AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಐಟಿ ಪ್ರಾಧ್ಯಾಪಕರನ್ನು ಗೋಮೂತ್ರ ತಜ್ಞ ಎಂದಿದ್ದ ಪ್ರಿಯಾಂಕಾ ಗಾಂಧಿ; 215ಕ್ಕೂ ಹೆಚ್ಚು ಶಿಕ್ಷಣ ತಜ್ಞರಿಂದ ತೀವ್ರ ಖಂಡನೆ

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಬಿಜೆಪಿ ನಾಯಕ ಅನುರಾಗ್ ಠಾಕೂರ್ ನಡುವೆ ನಡೆದ ತೀವ್ರ ವಾಗ್ದಾಳಿಯ ನಂತರ, ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ವಿ. ಕಾಮಕೋಟಿ ಅವರನ್ನು "ಗೋಮೂತ್ರ ತಜ್ಞ" ಎಂದು ಟೀಕಿಸಿದ ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಯನ್ನು ಹಲವು ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಕುಲಪತಿಗಳು ತೀವ್ರವಾಗಿ ಖಂಡಿಸಿದ್ದಾರೆ. ಬಹಿರಂಗ ಪತ್ರವೊಂದರಲ್ಲಿ ಈ ಹೇಳಿಕೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕುಲಪತಿಗಳು ಇದು ಶೈಕ್ಷಣಿಕ ಮತ್ತು ವೈಜ್ಞಾನಿಕ ಸಂಸ್ಥೆಗಳ ಘನತೆಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.

ಐಐಟಿ ಪ್ರಾಧ್ಯಾಪಕರನ್ನು ಗೋಮೂತ್ರ ತಜ್ಞ ಎಂದಿದ್ದ ಪ್ರಿಯಾಂಕಾ ಗಾಂಧಿ; 215ಕ್ಕೂ ಹೆಚ್ಚು ಶಿಕ್ಷಣ ತಜ್ಞರಿಂದ ತೀವ್ರ ಖಂಡನೆ
Priyanka Gandhi Image Credit source: PTI
TV9 Web
| Edited By: |

Updated on: Jul 30, 2026 | 6:30 PM

Share

ನವದೆಹಲಿ, ಜುಲೈ 30: ಕೇಂದ್ರ ಸರ್ಕಾರದಿಂದ ಪರೀಕ್ಷಾ ಸುಧಾರಣೆಗಳಿಗಾಗಿ ರಚಿಸಲಾದ ಹೊಸ ಕಾರ್ಯಪಡೆಯ ಸದಸ್ಯರೂ ಆಗಿರುವ ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ವಿ. ಕಾಮಕೋಟಿ ಕುರಿತು ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ನೀಡಿದ ಹೇಳಿಕೆಯು ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರಸಿದ್ಧ ವಿಜ್ಞಾನಿಯೊಬ್ಬರ ಶೈಕ್ಷಣಿಕ ಅರ್ಹತೆ ಮತ್ತು ಸಾಧನೆಗಳನ್ನು ಕೀಳಾಗಿ ಕಂಡಿದ್ದಕ್ಕಾಗಿ 215 ಹಾಲಿ ಮತ್ತು ಮಾಜಿ ಕುಲಪತಿಗಳು ಹಾಗೂ ಶಿಕ್ಷಣತಜ್ಞರು ಪ್ರಿಯಾಂಕಾ ಗಾಂಧಿಯವರ ವಿರುದ್ಧ ಬಹಿರಂಗ ಪತ್ರ ಬರೆದು ತೀವ್ರವಾಗಿ ಖಂಡಿಸಿದ್ದಾರೆ.

3 ಪುಟಗಳ ಪತ್ರ ಬರೆದಿರುವ ಶಿಕ್ಷಣ ತಜ್ಞರು ಪ್ರಿಯಾಂಕಾ ಗಾಂಧಿಯವರನ್ನು ತರಾಟೆಗೆ ತೆಗದುಕೊಂಡಿದ್ದಾರೆ. “ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ. ಕಾಮಕೋಟಿ ಅವರನ್ನು ‘ಗೋಮೂತ್ರ ತಜ್ಞ’ ಎಂದು ಟೀಕಿಸಿರುವ ನಿಮ್ಮ ಹೇಳಿಕೆಯ ಕುರಿತು ನಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಲು ಈ ಪತ್ರ ಬರೆಯುತ್ತಿದ್ದೇವೆ. ಇದನ್ನು ವ್ಯಂಗ್ಯಕ್ಕಾಗಿ ಹೇಳಿರಲಿ ಅಥವಾ ರಾಜಕೀಯ ಭಾಷಣಕ್ಕಾಗಿ ಹೇಳಿರಲಿ ಇಂತಹ ಹೇಳಿಕೆ ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತದೆ. ವಿಚಾರಗಳ ಸಾರಾಂಶವನ್ನು ಗ್ರಹಿಸಿ ಚರ್ಚಿಸುವ ಬದಲಿಗೆ ವಿದ್ವಾಂಸರೊಬ್ಬರ ವ್ಯಕ್ತಿತ್ವಕ್ಕೆ ಲೇಬಲ್ ಅಂಟಿಸಿ ಟೀಕಿಸುವುದು ಸರಿಯಲ್ಲ. ನಮ್ಮ ವಿಜ್ಞಾನಿಗಳು, ವಿದ್ವಾಂಸರು ಮತ್ತು ಶಿಕ್ಷಣತಜ್ಞರು ಅಪಹಾಸ್ಯದ ಲೇಬಲ್‌ಗಳಿಗೆ ತುತ್ತಾಗುವ ಭಯವಿಲ್ಲದೇ ಸಾರ್ವಜನಿಕ ಚರ್ಚೆಗಳಲ್ಲಿ ಭಾಗವಹಿಸಬಹುದು ಎಂಬ ಭರವಸೆಗೆ ಅರ್ಹರು” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪ್ರೊ. ಕಾಮಕೋಟಿ ಸಾಧನೆಗಳ ವಿವರ:

215 ವ್ಯಕ್ತಿಗಳು ಸಹಿ ಮಾಡಿರುವ ಈ ಬಹಿರಂಗ ಪತ್ರದಲ್ಲಿ ಪ್ರೊ. ಕಾಮಕೋಟಿ ಅವರ ಶೈಕ್ಷಣಿಕ ಕೊಡುಗೆಗಳನ್ನು ಎತ್ತಿಹಿಡಿಯಲಾಗಿದೆ. ಪ್ರೊ. ಕಾಮಕೋಟಿ ಭಾರತದ ಪ್ರಮುಖ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಯಾದ ಐಐಟಿ ಮದ್ರಾಸ್‌ನ ಮುಖ್ಯಸ್ಥರಾಗಿದ್ದಾರೆ. ಅವರು ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಷಯದಲ್ಲಿ ಐಐಟಿ ಮದ್ರಾಸ್‌ನಿಂದ ಎಂ.ಎಸ್ (M.S.) ಮತ್ತು ಪಿಎಚ್.ಡಿ (Ph.D.) ಪದವಿ ಪಡೆದಿದ್ದಾರೆ. ಅವರು 150ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದು, 50ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕರು ಹೇಡಿಗಳು, ನಮಗೆ ಹೆದರುತ್ತಿದ್ದಾರೆ; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ

ಕಾಮಕೋಟಿ ಅವರ ಹೆಸರಿನಲ್ಲಿ ‘ಡಿಆರ್‌ಡಿಒ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್’ ಮತ್ತು ‘ಇಂಡಿಯನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್ ಟೆಕ್ನೋ ವಿಷನರಿ ಅವಾರ್ಡ್’ ನಂತಹ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿವೆ. ಭಾರತದ ಮೊದಲ ಉದ್ಯಮ ಮಟ್ಟದ ಮೈಕ್ರೋಪ್ರೊಸೆಸರ್ ಆಗಿರುವ ಶಕ್ತಿ- SHAKTIಯನ್ನು ಅಭಿವೃದ್ಧಿಪಡಿಸುವಲ್ಲಿ ಅವರು ಪ್ರಮುಖ ಮಾರ್ಗದರ್ಶಿ ಶಕ್ತಿಯಾಗಿದ್ದಾರೆ.

“ಕಾಮಕೋಟಿ ಅವರಂತಹ ಸಾಧಕರ ಬಗ್ಗೆ ನೀಡುವ ಹೇಳಿಕೆಗಳು ಭಾರತದ ಶೈಕ್ಷಣಿಕ ಮತ್ತು ಸಂಶೋಧನಾ ಸಮುದಾಯಕ್ಕೆ ರವಾನಿಸುವ ಸಂದೇಶ ಆತಂಕಕಾರಿಯಾಗಿದೆ. ನಮ್ಮ ವಿಜ್ಞಾನಿಗಳು ಮತ್ತು ವಿದ್ವಾಂಸರು ಅಪಹಾಸ್ಯದ ಲೇಬಲ್‌ಗಳಿಗೆ ತುತ್ತಾಗುವ ಭಯವಿಲ್ಲದೆ ಸಂವಾದಗಳಲ್ಲಿ ಭಾಗವಹಿಸುವಂತಾಗಬೇಕು. ಅವರ ವಾದಗಳನ್ನು ವಿಮರ್ಶಿಸಿ, ಸಾಕ್ಷ್ಯಗಳನ್ನು ಸವಾಲು ಮಾಡಿ, ಆಧಾರಗಳನ್ನು ಕೇಳಿ. ಆದರೆ ವಿದ್ವತ್ತಿನ ಅಸ್ತಿತ್ವವನ್ನೇ ಕೀಳಾಗಿ ಕಾಣಬೇಡಿ” ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಇದನ್ನೂ ಓದಿ: ‘ಕ್ಷಮೆಯಾಚಿಸಿ ರಾಜೀನಾಮೆ ನೀಡಿ’; ಪ್ರತಿಭಟನಾಕಾರರ ಮೇಲಿನ ಹಲ್ಲೆ ಕುರಿತು ಅಮಿತ್ ಶಾ ವಿರುದ್ಧ ಖರ್ಗೆ ವಾಗ್ದಾಳಿ

ಮಂಗಳವಾರ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ರ ಮೇಲಿನ ಚರ್ಚೆಯ ವೇಳೆ ಪ್ರಿಯಾಂಕಾ ಗಾಂಧಿ ಈ ಹೇಳಿಕೆ ನೀಡಿದ್ದರು. ಅವರು ಭಾಷಣದಲ್ಲಿ ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದಿದ್ದರೂ, ಅವರ ಮಾತುಗಳು ಪ್ರೊ. ವಿ. ಕಾಮಕೋಟಿ ಅವರನ್ನು ಉದ್ದೇಶಿಸಿಯೇ ಹೇಳಿದ್ದೆಂದು ಸ್ಪಷ್ಟವಾಗಿ ತಿಳಿದುಬಂದಿತ್ತು. ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us