ಚುನಾವಣೆಗೆ ಇನ್ನೊಂದೇ ತಿಂಗಳು ಬಾಕಿ ಇರುವಾಗ ಉತ್ತರ ಪ್ರದೇಶ ಬಿಜೆಪಿಗೆ ಶಾಕ್ ಮೇಲೆ ಶಾಕ್ !- ಪಕ್ಷಕ್ಕೆ ರಾಜೀನಾಮೆ ಕೊಟ್ಟ ಮೂವರು ಶಾಸಕರು
ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವ ಉತ್ತರ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಪಕ್ಷ ತೊರೆಯುತ್ತಿರುವ ಸಚಿವರು ಮತ್ತು ಶಾಸಕರು ಬಿಜೆಪಿ ಹೈಕಮಾಂಡ್ಗೆ ತಲೆನೋವಾಗಿ ಪರಿಣಮಿಸಿದ್ದಾರೆ.
ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಕೆಲವೇ ಹೊತ್ತುಗಳ ಹಿಂದೆ ಉತ್ತರ ಪ್ರದೇಶ ಕಾರ್ಮಿಕ ಇಲಾಖೆ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿಯನ್ನು ಬಿಟ್ಟು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಅವರ ಬೆನ್ನ ಹಿಂದೆ ಮತ್ತೆ ಮೂವರು ಶಾಸಕರು ಬಿಜೆಪಿ ತೊರೆದಿದ್ದಾರೆ. ಈ ಸ್ವಾಮಿ ಪ್ರಸಾದ್ ಮೌರ್ಯ ಹಿಂದುಳಿದ ವರ್ಗಗಳ ಪ್ರಮುಖ ನಾಯಕರಾಗಿದ್ದು, ಯೋಗಿ ಸರ್ಕಾರ ದಲಿತರು, ಹಿಂದುಳಿದ ರೈತರು, ನಿರುದ್ಯೋಗಿ ಯುವಕರು ಮತ್ತು ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳ ಬಗೆಗೆ ನಿರ್ಲಕ್ಷ್ಯ ತೋರುವುದನ್ನು ನನಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಹೀಗೆ ಇವರು ಬಿಜೆಪಿ ತೊರೆದ ಬೆನ್ನಲ್ಲೇ ಶಾಸಕರಾದ ರೋಶನ್ ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ ಮತ್ತು ಭಾಗವತಿ ಸಾಗರ್ ಕೂಡ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಇವರೆಲ್ಲ ಸಮಾಜವಾದಿ ಪಕ್ಷ ಸೇರಲಿದ್ದಾರೆ ಎನ್ನಲಾಗಿದೆ.
ಸ್ವಾಮಿ ಅವರೊಂದಿಗೆ ಇನ್ನಷ್ಟು ಸಚಿವರು, ಶಾಸಕರು ಬಿಜೆಪಿ ತೊರೆಯಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು. ಇದೀಗ ಪಕ್ಷ ತೊರೆದ ಬ್ರಿಜೇಶ್ ಪ್ರಜಾಪತಿ, ಬಾಂಡಾ ಜಿಲ್ಲೆಯ ತಿಂಡ್ವಾರಿ ಶಾಸಕ, ರೋಶನ್ಲಾಲ್ ವರ್ಮಾ ತಿಲ್ಹಾರ್ ಕ್ಷೇತ್ರದ ಶಾಸಕ ಮತ್ತು ಭಗವತಿ ಸಾಗರ್ ಅವರು ಕಾನ್ಪುರ ಜಿಲ್ಲೆಯ ಬಿಲ್ಹೌರ್ನ ಎಂಎಲ್ಎ ಆಗಿದ್ದಾರೆ. ಇವರಲ್ಲಿ ರೋಶನ್ಲಾಲ್ ವರ್ಮಾ, ತಮ್ಮ ಮಾತುಗಳನ್ನು, ದೂರುಗಳನ್ನು ಪಕ್ಷದ ವರಿಷ್ಠರು ಕಿವಿಯ ಮೇಲೆ ಹಾಕಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಹೀಗೆ ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವ ಉತ್ತರ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಪಕ್ಷ ತೊರೆಯುತ್ತಿರುವ ಸಚಿವರು ಮತ್ತು ಶಾಸಕರು ಬಿಜೆಪಿ ಹೈಕಮಾಂಡ್ಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಪಕ್ಷದ ಬಗ್ಗೆ ಅಸಮಾಧಾನ, ಕೋಪಗೊಂಡಿರುವ ಬಿಜೆಪಿ ನಾಯಕರೊಂದಿಗೆ ಚರ್ಚಿಸಿ, ಅವರ ಸಮಸ್ಯೆ ಆಲಿಸಿ ಮನವೊಲಿಸುವ ಜವಾಬ್ದಾರಿಯನ್ನು ಉತ್ತರ ಪ್ರದೇಶದ ರಾಜ್ಯ ಸಂಘಟನಾ ಸಚಿವ ಸುನಿಲ್ ಬನ್ಸಾಲ್ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರಿಗೆ ನೀಡಲಾಗಿದೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಟ್ವೀಟ್ ಮಾಡಿರುವ ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಸ್ವಾಮಿ ಪ್ರಸಾದ್ ಅವರು ಪಕ್ಷವನ್ನು ಯಾಕೆ ಬಿಟ್ಟರು ಎಂದು ನನಗೆ ಗೊತ್ತಾಗಲಿಲ್ಲ. ಆದರೆ ಹೀಗೆ ಪಕ್ಷಕ್ಕೆ ರಾಜೀನಾಮೆ ನೀಡುವುದಕ್ಕೂ ಮೊದಲು ನಮ್ಮೊಂದಿಗೆ ಮಾತನಾಡಬೇಕು ಎಂದು ಹೇಳಿದ್ದಾರೆ.
आदरणीय स्वामी प्रसाद मौर्य जी ने किन कारणों से इस्तीफा दिया है मैं नहीं जानता हूँ उनसे अपील है कि बैठकर बात करें जल्दबाजी में लिये हुये फैसले अक्सर गलत साबित होते हैं
— Keshav Prasad Maurya (@kpmaurya1) January 11, 2022
ಇದನ್ನೂ ಓದಿ: ಹಿಮದಿಂದ ಆವೃತವಾದ ಶ್ರೀನಗರ ರೈಲು ನಿಲ್ದಾಣ: ಫೋಟೋ ಹಂಚಿಕೊಂಡ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್