2020ರಲ್ಲಿ ರಸ್ತೆಗುಂಡಿಗಳಿಂದ 3,500 ಅಪಘಾತಗಳು ಸಂಭವಿಸಿವೆ; ಸಂಸತ್ತಿನಲ್ಲಿ ಅಂಕಿಅಂಶ ತಿಳಿಸಿದ ಸಚಿವಾಲಯ

Accidents due to potholes: ದೇಶದಲ್ಲಿ 2020ರಲ್ಲಿ ರಸ್ತೆಗುಂಡಿಗಳಿಂದ ಎಷ್ಟು ಜನರು ಅಪಘಾತಕ್ಕೀಡಾಗಿದ್ದಾರೆ ಎನ್ನುವುದನ್ನು ಸಚಿವಾಲಯ ಸಂಸತ್ತಿನಲ್ಲಿ ತಿಳಿಸಿದೆ. ಈ ಕುರಿತ ಅಂಕಿಅಂಶ ಸಹಿತ ಮಾಹಿತಿ ಇಲ್ಲಿದೆ.

2020ರಲ್ಲಿ ರಸ್ತೆಗುಂಡಿಗಳಿಂದ 3,500 ಅಪಘಾತಗಳು ಸಂಭವಿಸಿವೆ; ಸಂಸತ್ತಿನಲ್ಲಿ ಅಂಕಿಅಂಶ ತಿಳಿಸಿದ ಸಚಿವಾಲಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Dec 17, 2021 | 1:37 PM

ಅಗತ್ಯ ಮೂಲ ಸೌಕರ್ಯವಾದ ರಸ್ತೆಗಳು ದೇಶದ ಹಲವೆಡೆ ಹದಗೆಟ್ಟಿದ್ದು, ಇದರೊಂದರಿಂದಲೇ ವರ್ಷಕ್ಕೆ ಸಾವಿರಾರು ಅಪಘಾತಗಳು ಸಂಭವಿಸುತ್ತಿವೆ. ಈ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದಿದ್ದು, ಸರ್ಕಾರ ಅಂಕಿಅಂಶಗಳನ್ನು ಹಂಚಿಕೊಂಡಿದೆ. ತೆಲುಗು ದೇಶಂ ಪಕ್ಷದ (ಟಿಡಿಪಿ) ಶಾಸಕ ಜಯದೇವ್ ಗಲ್ಲಾ (Jayadeva Galla) ಅವರು ಹೆದ್ದಾರಿಗಳ ಕಳಪೆ ನಿರ್ವಹಣೆಯಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿಅಂಶದ ಕುರಿತು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2019 ರಲ್ಲಿ ಗುಂಡಿಗಳಿಂದ 4,775 ಅಪಘಾತಗಳು ಸಂಭವಿಸಿವೆ ಮತ್ತು 2020 ರಲ್ಲಿ 3,564 ಅಂತಹ ಅಪಘಾತಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದೆ. ಸರ್ಕಾರದ ಈ ಅಂಕಿಅಂಶಗಳು ದೇಶದ ಹದಗೆಟ್ಟ ರಸ್ತೆಗಳ ಪರಿಣಾಮವನ್ನು ಪ್ರಸ್ತುತಪಡಿಸಿದೆ.

ಪ್ರಶ್ನೆಗೆ ಉತ್ತರಿಸುವಾಗ ಸಚಿವಾಲಯವು ಅಪಘಾತಗಳಿಗೆ ಕಾರಣಗಳನ್ನು ಪಟ್ಟಿಮಾಡಿದ್ದು, ಅವುಗಳಲ್ಲಿ ಚಾಲನೆ ಮಾಡುವಾಗ ಅತಿವೇಗ, ಮೊಬೈಲ್ ಫೋನ್ ಬಳಕೆ, ಕುಡಿದು ವಾಹನ ಚಾಲನೆ, ಓವರ್ ಲೋಡ್ ವಾಹನಗಳು, ದೋಷಪೂರಿತ ವಾಹನಗಳು, ಕಳಪೆ ಬೆಳಕು, ರೆಡ್ ಸಿಗ್ನಲ್ ಜಂಪ್, ಓವರ್ ಟೇಕಿಂಗ್, ಕೆಟ್ಟ ಹವಾಮಾನ, ಚಾಲಕನ ತಪ್ಪುಗಳು, ರಾಂಗ್ ವೇಯಲ್ಲಿ ವಾಹನ ಚಾಲನೆ, ದೋಷಯುಕ್ತ ರಸ್ತೆಗಳು ಸೇರಿದಂತೆ ಹಲವನ್ನು ಉಲ್ಲೇಖಿಸಿದೆ.

ರಸ್ತೆ ಸುರಕ್ಷತೆ ಉತ್ತೇಜಿಸಲು ಕ್ರಮ: ರಸ್ತೆ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರವು ‘ರಸ್ತೆ ಸುರಕ್ಷತಾ ಮಾಹಿತಿ ಡೇಟಾಬೇಸ್’ ಅಥವಾ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿ’ಯನ್ನು ಪರಿಚಯಿಸುತ್ತದೆಯೇ ಎಂದು ಸಂಸದ ಗಲ್ಲಾ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವಾಲಯವು ‘ಸಮಗ್ರ ರಸ್ತೆ ಅಪಘಾತ ಡೇಟಾಬೇಸ್’ (IRAD) ಅನ್ನು ಹೊರತರುವುದಾಗಿ ಉತ್ತರಿಸಿದೆ. ಇದು ರಸ್ತೆ ಸುರಕ್ಷತೆಯನ್ನು ಉತ್ತೇಜಿಸಲು ಮತ್ತು ಸಂಚಾರವನ್ನು ನಿಯಂತ್ರಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳಿಗೆ ಸಲಹೆ ನೀಡುತ್ತದೆ.

ಈ ವರ್ಷದ ಆರಂಭದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಇದೇ ಅಂಕಿಅಂಶಗಳನ್ನು ಉಲ್ಲೇಖಿಸಿದ್ದರು. ಅದರಲ್ಲಿ ಅವರು 2020ರಲ್ಲಿ ರಸ್ತೆ ಗುಂಡಿಗಳಿಂದ ಆದ ಅಪಘಾತಗಳ ಸಂಖ್ಯೆ ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ ಎಂದು ಒತ್ತಿ ಹೇಳಿದ್ದರು.

ಗಡ್ಕರಿ ಅವರು 2016, 2017, 2018 ಮತ್ತು 2019 ರಲ್ಲಿ ಹೊಂಡಗಳಿಂದಾಗಿ ಆದ ರಸ್ತೆ ಅಪಘಾತಗಳ ಸಂಖ್ಯೆಯನ್ನು ತಿಳಿಸಿದ್ದರು. ಅದರಂತೆ 2016ರಲ್ಲಿ 6,424, 2017ರಲ್ಲಿ 9,423, 2018ರಲ್ಲಿ 4,869 ಮತ್ತು 2019ರಲ್ಲಿ 4,775 ಪ್ರಕರಣಗಳು ದಾಖಲಾಗಿವೆ. 2020ರಲ್ಲಿ 3,564 ಪ್ರಕರಣಗಳು ದಾಖಲಾಗಿದೆ.

ಇದನ್ನೂ ಓದಿ:

Pegasus Case ಪೆಗಾಸಸ್ ಪ್ರಕರಣದ ತನಿಖೆಗೆ ಬಂಗಾಳ ಸರ್ಕಾರ ನೇಮಿಸಿದ ಲೋಕೂರ್ ಆಯೋಗದ ಎಲ್ಲಾ ಪ್ರಕ್ರಿಯೆಗಳಿಗೆ ಸುಪ್ರೀಂಕೋರ್ಟ್ ತಡೆ

Joe Biden: ಲಸಿಕೆ ಪಡೆಯದವರಿಗೆ ‘ಸಾವಿನ ಚಳಿಗಾಲ’ ಮುಂದಿದೆ; ಒಮಿಕ್ರಾನ್ ಕುರಿತು ಅಮೇರಿಕಾ ಅಧ್ಯಕ್ಷ ಬಿಡೆನ್ ಹೇಳಿಕೆ