ಕರ್ನಾಟಕದ 2 ಸೇರಿ ಭಾರತದ 58 ಎಂಜಿನಿಯರಿಂಗ್ ಕಾಲೇಜುಗಳು ಬಂದ್; ಕಾರಣ ಗೊತ್ತಾ?

ಭಾರತದಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಮೇಲಿನ ಕ್ರೇಜ್ ಅಥವಾ ಬೇಡಿಕೆ ಕೆಲವು ಕಡೆ ಕುಸಿಯುತ್ತಿರುವುದಕ್ಕೆ ಸಾಕ್ಷಿಯಾಗಿ, 2025-26ರ ಶೈಕ್ಷಣಿಕ ವರ್ಷದಲ್ಲಿ ದೇಶಾದ್ಯಂತ ಒಟ್ಟು 58 ಎಂಜಿನಿಯರಿಂಗ್ ಕಾಲೇಜುಗಳು ಅಧಿಕೃತವಾಗಿ ಮುಚ್ಚಲ್ಪಟ್ಟಿವೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ನೀಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಕರ್ನಾಟಕದ 2 ಕಾಲೇಜುಗಳು ಕೂಡ ಇದರಲ್ಲಿ ಸೇರಿವೆ. ಮುಚ್ಚಲಾದ ಬಹುತೇಕ ಕಾಲೇಜುಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಶೇ. 20ರಿಂದ 30ರಷ್ಟು ಸೀಟುಗಳು ಕೂಡ ಭರ್ತಿಯಾಗುತ್ತಿರಲಿಲ್ಲ. ವಿದ್ಯಾರ್ಥಿಗಳ ಕೊರತೆಯಿಂದಾಗಿ ಕಾಲೇಜುಗಳನ್ನು ನಡೆಸುವುದು ಆಡಳಿತ ಮಂಡಳಿಗೆ ಆರ್ಥಿಕವಾಗಿ ಹೊರೆಯಾಗಿತ್ತು.

ಕರ್ನಾಟಕದ 2 ಸೇರಿ ಭಾರತದ 58 ಎಂಜಿನಿಯರಿಂಗ್ ಕಾಲೇಜುಗಳು ಬಂದ್; ಕಾರಣ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: PTI

Updated on: Jul 07, 2026 | 6:14 PM

ನವದೆಹಲಿ, ಜುಲೈ 7: ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಭಾರಿ ಕುಸಿತ ಹಾಗೂ ನಿಗದಿತ ಶೈಕ್ಷಣಿಕ ಮತ್ತು ಮೂಲಸೌಕರ್ಯ ಮಾನದಂಡಗಳನ್ನು ಪಾಲಿಸಲು ವಿಫಲವಾದ ಹಿನ್ನೆಲೆಯಲ್ಲಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (AICTE) 2025-26ರ ಶೈಕ್ಷಣಿಕ ಸಾಲಿನಲ್ಲಿ ದೇಶಾದ್ಯಂತ ಒಟ್ಟು 58 ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆಗಳನ್ನು ಹಂತ-ಹಂತವಾಗಿ ಮುಚ್ಚಲು ಅನುಮೋದನೆ ನೀಡಿದೆ. ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದರೂ, ಪ್ರಸ್ತುತ ಈ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಕೋರ್ಸ್‌ಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಕೌನ್ಸಿಲ್ ಭರವಸೆ ನೀಡಿದೆ.

ಈ ನೂತನ ನಿಯಮಾವಳಿಯ ಅಡಿಯಲ್ಲಿ ಪಟ್ಟಿಯಲ್ಲಿರುವ ಕಾಲೇಜುಗಳು 2025-26ರ ಶೈಕ್ಷಣಿಕ ವರ್ಷದಿಂದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವಂತಿಲ್ಲ. ಆದರೆ, ಈಗಾಗಲೇ ಓದುತ್ತಿರುವ ಹಳೆಯ ಬ್ಯಾಚ್‌ಗಳ ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರಹೋಗುವವರೆಗೆ ಈ ಕಾಲೇಜುಗಳು ಕಾರ್ಯನಿರ್ವಹಿಸಲಿವೆ. ಈ ಪ್ರಕ್ರಿಯೆಯನ್ನು ‘ಪ್ರೋಗ್ರೆಸ್ಸಿವ್ ಕ್ಲೋಸರ್’ (ಹಂತ-ಹಂತವಾಗಿ ಮುಚ್ಚುವುದು) ಎಂದು ಕರೆಯಲಾಗುತ್ತದೆ ಎಂದು ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: DRDO Internship 2026: DRDO ಇಂಟರ್ನ್‌ಶಿಪ್; ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 30,000ರೂ. ಸ್ಟೈಫಂಡ್ ಪಡೆಯುವ ಸುವರ್ಣಾವಕಾಶ!

“2025-26ರ ಅವಧಿಯಲ್ಲಿ ಒಟ್ಟು 58 ಎಂಜಿನಿಯರಿಂಗ್ ಕಾಲೇಜುಗಳನ್ನು ಹಂತ-ಹಂತವಾಗಿ ಮುಚ್ಚಲಾಗಿದೆ. ಇದರರ್ಥ ಸಂಸ್ಥೆಯು ಮೊದಲ ವರ್ಷಕ್ಕೆ ಹೊಸ ಪ್ರವೇಶಾತಿಗಳನ್ನು ಮಾಡಿಕೊಳ್ಳುವಂತಿಲ್ಲ. ಆದರೆ, ಇದೀಗ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಇಲ್ಲೇ ಮುಂದುವರಿಸಲಿದ್ದಾರೆ” ಎಂದು ಹಿರಿಯ AICTE ಅಧಿಕಾರಿಯೊಬ್ಬರು ಪಿಟಿಐ (PTI) ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕಾಲೇಜುಗಳು ಮುಚ್ಚಲು ಅಸಲಿ ಕಾರಣಗಳೇನು?:

AICTE ನೀಡಿದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಭಾರತದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಪುನರ್​ ರಚನೆ ನಡೆಯುತ್ತಿದೆ. ಇದೇ ಶೈಕ್ಷಣಿಕ ವರ್ಷದಲ್ಲಿ ದೇಶಾದ್ಯಂತ 950ಕ್ಕೂ ಹೆಚ್ಚು ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ, ವಿದ್ಯಾರ್ಥಿಗಳ ಬದಲಾಗುತ್ತಿರುವ ಆಸಕ್ತಿ ಮತ್ತು ಕೆಲವು ಕೋರ್ಸ್‌ಗಳಿಗೆ ಬೇಡಿಕೆ ಕುಸಿದಿರುವುದು. ಕಾಲೇಜುಗಳಲ್ಲಿ ಪ್ರವೇಶಾತಿ ತೀರಾ ಕಡಿಮೆಯಾಗಿರುವುದು. ಅರ್ಹ ಹಾಗೂ ನುರಿತ ಉಪನ್ಯಾಸಕರ ತೀವ್ರ ಕೊರತೆ. ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರದಿರುವುದು. ಸಂಖ್ಯೆಗಿಂತ ‘ಗುಣಮಟ್ಟ’ಕ್ಕೆ ಆದ್ಯತೆ ನೀಡಬೇಕೆಂಬ ನಿಯಂತ್ರಣ ಮಂಡಳಿಯ ಕಟ್ಟುನಿಟ್ಟಿನ ನಿಲುವು.

ಇದನ್ನೂ ಓದಿ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಸತತ 2ನೇ ವರ್ಷವೂ ಶುಲ್ಕ ಏರಿಕೆ; ಪೋಷಕರ ಜೇಬಿಗೆ ಕತ್ತರಿ!

ರಾಜ್ಯವಾರು ಮುಚ್ಚಲಾದ ಕಾಲೇಜುಗಳ ಪಟ್ಟಿ:

ರಾಜ್ಯವಾರು ಪಟ್ಟಿಯಲ್ಲಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕಾಲೇಜುಗಳು ಮುಚ್ಚಲ್ಪಟ್ಟಿವೆ. ಈ ಎರಡೂ ರಾಜ್ಯಗಳಲ್ಲಿ ತಲಾ 12 ಕಾಲೇಜುಗಳು ಹಂತ-ಹಂತವಾಗಿ ಮುಚ್ಚಲು ಅನುಮತಿ ಪಡೆದಿವೆ. ಕರ್ನಾಟಕದಲ್ಲಿ 2 ಕಾಲೇಜುಗಳು ಈ ಪಟ್ಟಿಯಲ್ಲಿವೆ. ಉತ್ತರ ಪ್ರದೇಶ- 12, ಮಹಾರಾಷ್ಟ್ರ- 12, ಮಧ್ಯಪ್ರದೇಶ- 8, ತೆಲಂಗಾಣ- 4, ಪಂಜಾಬ್- 4, ಆಂಧ್ರಪ್ರದೇಶ- 3, ರಾಜಸ್ಥಾನ- 3, ಗುಜರಾತ್- 2, ಕರ್ನಾಟಕ – 2, ತಮಿಳುನಾಡು- 2, ಹರಿಯಾಣ- 2, ಒಡಿಶಾ-2, ಉತ್ತರಾಖಂಡ-2, ಪಶ್ಚಿಮ ಬಂಗಾಳ-2, ಪುದುಚೇರಿ-1 ಕಾಲೇಜುಗಳನ್ನು ಮುಚ್ಚಲಾಗಿದೆ.

ಖಾಸಗಿ ಸಂಸ್ಥೆಗಳಿಗೆ ಹೆಚ್ಚಿದ ಸವಾಲು:

ಮುಚ್ಚಲಾದ ಒಟ್ಟು 58 ಸಂಸ್ಥೆಗಳಲ್ಲಿ ಕೇವಲ 3 ಮಾತ್ರ ಸರ್ಕಾರಿ ಅನುದಾನಿತ ಕಾಲೇಜುಗಳಾಗಿದ್ದು, ಉಳಿದವೆಲ್ಲವೂ ಖಾಸಗಿ ಆಡಳಿತ ಮಂಡಳಿಗಳಿಗೆ ಸೇರಿದವಾಗಿವೆ. ವಿದ್ಯಾರ್ಥಿಗಳ ಕೊರತೆ ಮತ್ತು ಕಠಿಣ ನಿಯಮಗಳ ನಡುವೆ ಖಾಸಗಿ ಕಾಲೇಜುಗಳು ಅಸ್ತಿತ್ವ ಉಳಿಸಿಕೊಳ್ಳಲು ಎಷ್ಟು ಹೆಣಗಾಡುತ್ತಿವೆ ಎಂಬುದನ್ನು ಇದು ತೋರಿಸುತ್ತದೆ. ಭಾರತದ ತಾಂತ್ರಿಕ ಶಿಕ್ಷಣದ ಅತ್ಯುನ್ನತ ನಿಯಂತ್ರಣ ಸಂಸ್ಥೆಯಾದ AICTE, ಕಾಲೇಜುಗಳ ಬೋಧನಾ ಸಿಬ್ಬಂದಿ, ಮೂಲಸೌಕರ್ಯ, ಆಡಳಿತ ಮಂಡಳಿ ಮತ್ತು ಶೈಕ್ಷಣಿಕ ಪ್ರಗತಿಯನ್ನು ನಿಯತಕಾಲಿಕವಾಗಿ ಪರಿಶೀಲಿಸುತ್ತದೆ. ಈ ಮಾನದಂಡಗಳನ್ನು ತಲುಪಲು ಪದೇ ಪದೇ ವಿಫಲವಾಗುವ ಮತ್ತು ದೀರ್ಘಕಾಲದವರೆಗೆ ಸೀಟುಗಳು ಭರ್ತಿಯಾಗದ ಕಾಲೇಜುಗಳಿಗೆ ಮುಚ್ಚಲು ಅನುಮತಿ ನೀಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us