ಕಲುಷಿತ ನೀರು ಸೇವನೆ ಮಾಡಿ 6 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿದ ಘಟನೆ ಗುಜರಾತ್ನ ಸೂರತ್ನಲ್ಲಿರುವ ಕಾಠೋರ್ ಗ್ರಾಮದಲ್ಲಿ ನಡೆದಿದೆ. ಮೇ 30 ಮತ್ತು 31 ಎರಡು ದಿನಗಳಲ್ಲಿ ಈ ಘಟನೆ ನಡೆದಿದೆ. ಇನ್ನೇನು ಒಂದೆರಡು ದಿನಗಳಲ್ಲಿ ಸೂರತ್ ಮಹಾನಗರ ಪಾಲಿಕೆ ಸಿಬ್ಬಂದಿ ಇಲ್ಲಿಗೆ (ಕಾಠೋರ್ ಗ್ರಾಮದ ವಿವೇಕನಗರ ಕಾಲನಿ) ಆಗಮಿಸಿ, ಕ್ಲೋರಿನ್ ಔಷಧ ವಿತರಿಸಲಿದ್ದರು.
ಕಲುಷಿತ ನೀರು ಕುಡಿದ ಬಳಿಕ ಹಳ್ಳಿಗರು ವಾಂತಿ ಮತ್ತು ಭೇದಿಯಿಂದ ನರಳುತ್ತಿದ್ದಾರೆ. ಅದರಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಉಳಿದ 50 ಮಂದಿಗೆ ಸಮೀಪದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬೆನ್ನಲ್ಲೇ ಸ್ಥಳೀಯ ನಾಯಕ ದರ್ಶನ್ ನಾಯಕ್ ಸೂರತ್ ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳ್ಳಿಗಳ ಜನರಿಗೆ ಅಗತ್ಯವಾಗಿ ಬೇಕಾಗಿರುವ ಮೂಲಸೌಕರ್ಯದ ವ್ಯವಸ್ಥೆಯನ್ನೂ ಮಾಡುವುದಿಲ್ಲ ಎಂದು ಆರೋಪಿಸಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಕುಡಿಯುವ ನೀರಿನ ಪೈಪ್ ಒಡೆದು ಹೋಗಿ, ಅದು ಒಳಚರಂಡಿ ನೀರಿನೊಂದಿಗೆ ಬೆರೆತು ಹೋಗಿದ್ದು, ಸ್ಥಳ ಪರೀಕ್ಷೆ ಸಮಯದಲ್ಲಿ ಗೊತ್ತಾಗಿದೆ. ಇದೇ ನೀರು ಕುಡಿದ ಜನರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇನ್ನು ಸೂರತ್ ಮೇಯರ್ ಹೇಮಾಲಿ ವೋಘವಾಲಾ ಘಟನೆಯ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದು, ಮೃತರ ಕುಟುಂಬಗಳಿಗೆ 1 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಗ್ರಾಮದ ನೀರಿನ ವ್ಯವಸ್ಥೆ ಸರಿಯಾಗುವವರೆಗೂ ಟ್ಯಾಂಕರ್ ಮೂಲಕ ಶುದ್ಧ ನೀರು ಪೂರೈಕೆ ಮಾಡಲಾಗುವುದು. ಹಾಗೇ, ಹಳ್ಳಿಗಳಲ್ಲಿ ನೀರಿನ ಪರೀಕ್ಷೆ ಮಾಡಿಸಲು ವಾಹನವನ್ನು ಕಳಿಸಲಾಗುವುದು ಎಂದೂ ಹೇಳಿದ್ದಾರೆ.
ಇದನ್ನೂ ಓದಿ: World Bicycle Day 2021: ಇಂದು ವಿಶ್ವ ಸೈಕಲ್ ದಿನ, ತೂಕ ಇಳಿಕೆ ಸದೃಢ ಆರೋಗ್ಯಕ್ಕೆ ಸಾಥ್ ಕೊಟ್ಟ ಸಂಗಾತಿಯನ್ನು ನೆನೆಯುವ ದಿನ
Published On - 8:56 am, Thu, 3 June 21