ಮಹಾರಾಷ್ಟ್ರದ ವಾರ್ಧಾದಲ್ಲಿ ಸೋಮವಾರ ರಾತ್ರಿ 11.30ರ ಹೊತ್ತಿಗೆ ನಡೆದ ಅಪಘಾತದಲ್ಲಿ ಬಿಜೆಪಿ ಶಾಸಕನ (BJP MLA) ಪುತ್ರ ಸೇರಿ ಒಟ್ಟು ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟ ದುರ್ಘಟನೆ ನಡೆದಿದೆ. ಇವರು ಕಾರಿನಲ್ಲಿ ಸೆಲ್ಸುರಾ ಹಳ್ಳಿಯ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದರು. ಇವರ ಕಾರಿಗೆ ಅಡ್ಡವಾಗಿ ಕಾಡುಪ್ರಾಣಿಯೊಂದು ಅಡ್ಡಬಂದ ಪರಿಣಾಮ ಈ ಅಪಘಾತ ನಡೆದಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಾರ್ಧಾ ಎಸ್ಪಿ ಪ್ರಶಾಂತ್ ಹೋಲ್ಕರ್, ಕಾಡು ಪ್ರಾಣಿ ಅಡ್ಡ ಬಂದ ಹಿನ್ನೆಲೆಯಲ್ಲಿ ಕಾರಿನ ಡ್ರೈವರ್ ಅದನ್ನು ತಪ್ಪಿಸಲು ಬಲವಾಗಿ ತಿರುಗಿಸಿದ. ಪರಿಣಾಮ ಕಾರು ಅಲ್ಲಿಯೇ ಇದ್ದ ಸೇತುವೆ ಕಟ್ಟೆಗೆ ಹೊಡೆದು, ಸೇತುವೆಯ ಕೆಳಗಿನ ಮೋರಿಗೆ ಬಿದ್ದಿದೆ. ಕಾರು ಸಂಪೂರ್ಣ ಜಖಂ ಆಗಿದ್ದು, ಅದರಲ್ಲಿರುವ ವಿದ್ಯಾರ್ಥಿಗಳೆಲ್ಲ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಒಬ್ಬ ವಿದ್ಯಾರ್ಥಿಯ ಹುಟ್ಟುಹಬ್ಬ ಆಚರಿಸಲು ಇವರೆಲ್ಲ ಹೋಗಿದ್ದರು. ಪಾರ್ಟಿ ಮುಗಿಸಿ ವಾಪಸ್ ಬರುವಾಗ ಅಪಘಾತ ನಡೆದಿದೆ ಎಂದು ಹೇಳಲಾಗಿದೆ.
ಮೃತ ವೈದ್ಯಕೀಯ ವಿದ್ಯಾರ್ಥಿಗಳನ್ನು ಆವಿಷ್ಕಾರ್, ನೀರಜ್ ಚವನ್, ನಿತೇಶ್ ಸಿಂಗ್, ವಿವೇಕ್ ನಂದನ್, ಪ್ರತ್ಯುಷ್ ಸಿಂಗ್, ಶುಭಂ ಜೈಸ್ವಾಲ್, ಪವನ್ ಶಕ್ತಿ ಎಂದು ಗುರುತಿಸಲಾಗಿದೆ. ಇವರಲ್ಲಿ ಆವಿಷ್ಕಾರ್ ಬಿಜೆಪಿಯ ತಿರೋರಾ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯ್ ಭರತಲಾಲ್ ರಹಂಗ್‌ಡೇಲ್ರ ಪುತ್ರ ಎಂದು ಹೇಳಲಾಗಿದೆ. ಇವರಲ್ಲಿ 3ಮಂದಿ ಉತ್ತರ ಪ್ರದೇಶ, ಇಬ್ಬರು ಬಿಹಾರ ಮತ್ತು ಒಬ್ಬಾತ ಒಡಿಶಾದವನಾಗಿದ್ದಾನೆ.
ಇದನ್ನೂ ಓದಿ: ಸಿನಿಮಾ ಶೂಟಿಂಗ್ನಲ್ಲಿ ನಟಿ ರಮೋಲಾ ಬ್ಯುಸಿ; ವೈರಲ್ ಆಗುತ್ತಿದೆ ಸಾಂಗ್ ಶೂಟ್ ವಿಡಿಯೋ