
ಶಿಮ್ಲಾ, ನವೆಂಬರ್ 25: ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಹಿಮಾಚಲ ಪ್ರದೇಶದ ಹಿರಿಯ ಜೋಡಿಯೊಂದು ಸಾಬೀತುಪಡಿಸಿದೆ. ಕುಟುಂಬಸ್ಥರು ಮನೆಯಿಂದ ಹೊರಹಾಕಿದ್ದರಿಂದ ವೃದ್ಧಾಶ್ರಮ ಸೇರಿಕೊಂಡಿದ್ದ 75 ವರ್ಷದ ಕನ್ನಯ್ಯ ಲಾಲ್ ಮತ್ತು 63 ವರ್ಷದ ಸಬೀನಾ ವೃದ್ಧಾಶ್ರಮದಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದು, ಇದೀಗ ಸಾಂಪ್ರದಾಯಿಕವಾಗಿ ವಿವಾಹವಾಗುವ ಮೂಲಕ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
ಮಕ್ಕಳು ಹಾಗೂ ಕುಟುಂಬ ಸದಸ್ಯರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಮನೆಯಿಂದ ದೂರವಾಗಿದ್ದ 75 ವರ್ಷದ ಕನ್ನಯ್ಯ ಲಾಲ್ ಮತ್ತು 63 ವರ್ಷದ ಸಬೀನಾ, ಹಿಮಾಚಲ ಪ್ರದೇಶದ ವೃದ್ಧಾಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದರು. ಆರಂಭದಲ್ಲಿ ತಮ್ಮ ನೋವು ಮತ್ತು ಒಂಟಿತನದಿಂದ ಮಂಕಾಗಿದ್ದ ಇವರಿಬ್ಬರ ನಡುವೆ ಆಶ್ರಮದ ದೈನಂದಿನ ಒಡನಾಟದಿಂದ ಆತ್ಮೀಯ ಸ್ನೇಹ ಬೆಳೆಯಿತು. ದಿನಕಳೆದಂತೆ ಪರಸ್ಪರರ ಕಷ್ಟ-ಸುಖಗಳಿಗೆ ಹೆಗಲಾಗಿ ನಿಂತ ಇವರ ಸ್ನೇಹ ಗಾಢ ಪ್ರೀತಿಗೆ ತಿರುಗಿತು.
ಸಾಂಪ್ರದಾಯಿಕವಾಗಿ ನಡೆದ ವಿವಾಹ:
ಬದುಕಿನ ಉಳಿದ ದಿನಗಳನ್ನು ಸಂಗಾತಿಗಳಾಗಿ ಕಳೆಯಲು ನಿರ್ಧರಿಸಿದ ಈ ಜೋಡಿಯ ಆಸೆಗೆ ವೃದ್ಧಾಶ್ರಮದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಸಂಪೂರ್ಣ ಬೆಂಬಲ ನೀಡಿದರು. ಆಶ್ರಮದ ಆವರಣದಲ್ಲೇ ಹೂವುಗಳಿಂದ ಅಲಂಕರಿಸಲ್ಪಟ್ಟ ಮಂಟಪದಲ್ಲಿ, ಸ್ಥಳೀಯ ಸಂಪ್ರದಾಯದಂತೆ ವಧು-ವರರು ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ಅಪರೂಪದ ವಿವಾಹಕ್ಕೆ ವೃದ್ಧಾಶ್ರಮದ ಇತರ ಹಿರಿಯ ನಿವಾಸಿಗಳು, ಸಿಬ್ಬಂದಿ ಹಾಗೂ ಸ್ಥಳೀಯರು ಸಾಕ್ಷಿಯಾದರು. ಆಶ್ರಮದ ಸದಸ್ಯರೇ ಮನೆಯವರಂತೆ ನಿಂತು ವಿವಾಹದ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿ, ನವದಂಪತಿಗೆ ಉಡುಗೊರೆಗಳನ್ನು ನೀಡಿ ಶುಭ ಹಾರೈಸಿದರು.
ಇದನ್ನೂ ಓದಿ: ಬೇಡವಾಯ್ತು ಹೆತ್ತ ಕರುಳು: 5 ಮಕ್ಕಳಿದ್ರೂ ತಾಯಿಗೆ ಸಿಗದ ಆಸರೆ; ವೃದ್ಧಾಶ್ರಮಕ್ಕೆ ದಾಖಲು
ಕನ್ಹಯ್ಯ ಲಾಲ್ ಅವರು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಜಂಜೇಲಿ ಪ್ರದೇಶದ ಥುನಾಗ್ ಗ್ರಾಮದವರು. ಅವರಿಗೆ ಮಕ್ಕಳಿರಲಿಲ್ಲ. ಕೆಲ ವರ್ಷಗಳ ಹಿಂದೆ ಅವರ ಪತ್ನಿ ನಿಧನರಾಗಿದ್ದರು. ಪತ್ನಿಯ ಮರಣದ ನಂತರ ಒಂಟಿಯಾದ ಕನ್ಹಯ್ಯ ಲಾಲ್, ತಮ್ಮಲ್ಲಿದ್ದ ಆಸ್ತಿಯನ್ನೆಲ್ಲಾ ತಮ್ಮ ಸಹೋದರರ ಹೆಸರಿಗೆ ಬರೆದುಕೊಟ್ಟಿದ್ದರು. ಆದರೆ, ಆಸ್ತಿ ಪಡೆದ ಬಳಿಕ ಸಹೋದರರು ಅವರನ್ನು ಮನೆಯಿಂದ ಹೊರಹಾಕಿದರು. ಇರಲು ಸೂರು ಇಲ್ಲದೆ ಅನಾಥರಾದ ಕನ್ಹಯ್ಯ ಲಾಲ್, ಕೊನೆಗೆ ಗುಹೆಯೊಂದರಲ್ಲಿ ವಾಸಿಸಲು ಆರಂಭಿಸಿದರು. 2022ರಲ್ಲಿ ‘ಅಪ್ನಾ ಘರ್’ ವೃದ್ಧಾಶ್ರಮದ ತಂಡವು ಅವರನ್ನು ರಕ್ಷಿಸಿ ಆಶ್ರಮಕ್ಕೆ ಕರೆತಂದಿತು.
ಕೊಲ್ಕತ್ತಾದವರಾದ 63 ವರ್ಷದ ಸಬೀನಾ ಕೂಡ ಜೀವನದಲ್ಲಿ ಅತ್ಯಂತ ಕಠಿಣ ಹಂತವನ್ನು ಎದುರಿಸಿದ್ದರು. ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಮನೆಯಿಂದ ದಾರಿ ತಪ್ಪಿ ಅಲೆಯುತ್ತಾ ಹಿಮಾಚಲ ಪ್ರದೇಶಕ್ಕೆ ಬಂದು ತಲುಪಿದ್ದರು. ಆರಂಭದಲ್ಲಿ ಅವರನ್ನು ಶಿಮ್ಲಾದ ಮಶೋಬ್ರಾದಲ್ಲಿರುವ ಆಶ್ರಮವೊಂದರಲ್ಲಿ ಇರಿಸಲಾಗಿತ್ತು. ನಂತರ ಅವರನ್ನು ಬಿಲಾಸ್‌ಪುರದ ‘ಅಪ್ನಾ ಘರ್’ ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲಾಯಿತು. ಇಲ್ಲಿಯೇ ಅವರಿಗೆ ಕನ್ಹಯ್ಯ ಲಾಲ್ ಅವರ ಪರಿಚಯವಾಯಿತು. ಇಬ್ಬರ ನಡುವಿನ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿ, ಜೀವನದ ಉಳಿದ ದಿನಗಳನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದರು.
ಇದನ್ನೂ ಓದಿ: ಅಮರಕಂಟಕ್ ದೇವಸ್ಥಾನದಲ್ಲಿ ಆನೆಯ ಪ್ರತಿಮೆಯಡಿ ಸಿಲುಕಿದ ಭಕ್ತ, ರಕ್ಷಣೆಯ ವಿಡಿಯೋ ವೈರಲ್
ಬಿಲಾಸ್‌ಪುರ ಜಿಲ್ಲಾಧಿಕಾರಿ ಕಿರಣ್ ಭಡಾನಾ ಅವರು ವರನ ದಿಬ್ಬಣದ ಸದಸ್ಯರಾಗಿ ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ನವದಂಪತಿಗೆ ಸಾಂಪ್ರದಾಯಿಕ ಉಡುಗೊರೆ ನೀಡಿ ಅಭಿನಂದಿಸಿದ ಅವರು, “ಈ ವಿವಾಹವು ಸಮಾಜಕ್ಕೆ ಅತ್ಯಂತ ಸಕಾರಾತ್ಮಕ ಸಂದೇಶವನ್ನು ರವಾನಿಸಿದೆ. ಪ್ರತಿಯೊಬ್ಬರಿಗೂ ಸಂತೋಷದಿಂದ ಬದುಕುವ ಹಕ್ಕಿದೆ; ವಯಸ್ಸಾಯಿತು ಎಂದ ಮಾತ್ರಕ್ಕೆ ಜೀವನವನ್ನು ಆನಂದಿಸುವ ಆಸೆಯನ್ನು ಕಳೆದುಕೊಳ್ಳಬೇಕಿಲ್ಲ” ಎಂದು ಹೇಳಿದರು.
ವಿವಾಹದ ಬಳಿಕ ಕನ್ಹಯ್ಯ ಲಾಲ್ ಮತ್ತು ಸಬೀನಾ ಅವರು ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ನಾಲಾಗಢದಲ್ಲಿರುವ ಹೊಸ ವೃದ್ಧಾಶ್ರಮಕ್ಕೆ ತೆರಳಲಿದ್ದು, ಅಲ್ಲಿ ತಮ್ಮ ದಾಂಪತ್ಯ ಜೀವನವನ್ನು ಆರಂಭಿಸಲಿದ್ದಾರೆ.
ಇಳಿವಯಸ್ಸಿನಲ್ಲಿಯೂ ಪರಸ್ಪರ ಆಸರೆಯಾಗಿ ಬದುಕಲು ನಿರ್ಧರಿಸಿದ ಈ ಹಿರಿಯ ದಂಪತಿಯ ವಿವಾಹದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:11 pm, Wed, 25 November 26